ಅನುದಿನ ಚರಿತೆ | ಸಾಮರಸ್ಯ... ಹಾಗೆಂದರೇನು?

B R Ambedkar 5

ವೇದಗಳ ಕಾಲದಿಂದಲೂ ಅಸ್ಪೃಶ್ಯತೆಯನ್ನು ಪೋಷಿಸಿಕೊಂಡು ಬಂದಿರುವುದರ ಹಿಂದಿನ ಕಾರಣಗಳೇನು? ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಮಹಿಳೆಯರನ್ನು ಶೋಷಿಸುತ್ತಲೇ ಇರುವ ಆ ಸಾಮಾಜಿಕ ನ್ಯಾಯವಾದರೂ ಯಾವುದು? ದಲಿತರಿಗೆ ಮಲ ತಿನ್ನಿಸುವ, ಜೀವಂತವಾಗಿ ಸುಡುತ್ತಿರುವ ನೀಚ ಧೋರಣೆಗಳು ಮೈದಾಳಿದ್ದಾದರೂ ಹೇಗೆ?

ಸಮಾಜ ಅನ್ನುವುದು ತಾತ್ವಿಕವಾಗಿ ಒಂದು ಸುಂದರ ಕಲ್ಪನೆ. ಸಮೂಹಗಳ ನಡುವೆ ಒಗ್ಗಟ್ಟನ್ನು ಒಡಮೂಡಿಸುವ ಬಗೆ. ಇದು ಸಾಮೂಹಿಕ ಐಕ್ಯತೆಯ ಪ್ರತೀಕವೂ ಆಗಿರುತ್ತದೆ. ಪ್ರತೀ ಸಮಾಜವು ತನ್ನದೇ ಆದ ರಚನೆ, ವಿನ್ಯಾಸ, ಸೌಂದರ್ಯ ಹಾಗೂ ಮೀಮಾಂಸೆಯನ್ನು ಹೊಂದಿರುತ್ತದೆ. ಇಲ್ಲಿ ಉಲ್ಲೇಖಿಸಿದ ಯಾವುದೇ ಪರಿಕಲ್ಪನೆಯನ್ನು ಏಕಮುಖಿಯಾಗಿ ಬಣ್ಣಿಸುವುದಾಗಲೀ ಅಥವಾ ಅರ್ಥೈಸುವುದಾಗಲೀ ಸಾಧ್ಯವಿಲ್ಲ. ಕಾರಣ, ಒಂದೊಂದು ಸಂಯೋಜನೆ ಮತ್ತು ಸಂಘಟನೆ ಎಂಬುವುದು ಹಲವುತನದಿಂದ ಕೂಡಿರುತ್ತದೆ. ಹಾಗಾಗಿ, ಸಮಾಜವನ್ನು ನಿರ್ವಚಿಸುವ ವಿಧಾನಗಳನ್ನು ಈ ಹಲವುತನದ ಕಲ್ಪನೆಯನ್ನೇ ಆಧರಿಸಿ ಅನುಸರಿಸುವ ಜರೂರಿದೆ. ಈ ಎಲ್ಲ ಸಂಗತಿಗಳು ವ್ಯಕ್ತವಾಗುವುದು ಆಯಾ ಸಮಾಜದ ಜನರ ಬದುಕಿನ ನಡೆ ಮತ್ತು ನುಡಿಗಳಲ್ಲಿ. ಹೀಗೆ ಅಭಿವ್ಯಕ್ತವಾಗುವ ಇಲ್ಲವೇ ಪ್ರಚುರಗೊಳ್ಳುವ ವಿದ್ಯಮಾನಗಳನ್ನು ಒಟ್ಟಂದದಲ್ಲಿ ಸಂಸ್ಕೃತಿ ಎಂದು ಸಾಮಾನ್ಯವಾಗಿ ಪರಿಕಲ್ಪಿಸುತ್ತೇವೆ. ಆದರೆ, ಇದನ್ನೇ ಸಂಸ್ಕೃತಿಯ ಖಚಿತ ವ್ಯಾಖ್ಯಾನ ಎಂದು ಹೇಳಲು ಆಗುವುದಿಲ್ಲ. ಸಂಸ್ಕೃತಿಯ ಶೋಧವನ್ನು ಮಾಡುವ ಸನ್ನಿವೇಶದಲ್ಲಿ ಇಂತಹ ವ್ಯಾಖ್ಯಾನಗಳನ್ನು ಕುರಿತ ಜಿಜ್ಞಾಸೆಯನ್ನು ಬೆಳೆಸಬಹುದು. ಪ್ರಸ್ತುತ ಟಿಪ್ಪಣಿಯ ಆಶಯವೇ ಭಿನ್ನವಾಗಿದ್ದರಿಂದ ಇಂತಹ ಚರ್ಚೆಗಳನ್ನು ಮುಂದುವರಿಸುವುದು ಯೋಗ್ಯವಲ್ಲ. ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಾಮರಸ್ಯವನ್ನು ಅರಿಯುವ ಬಗೆಯಯೇ ನಮ್ಮ ಗುರಿಯಾಗಿದೆ.  

ಯಾವುದೇ ನಾಡಿನ ಸಮೂಹಗಳ ಒಡಲು ಬಗೆದು ನೋಡಿದರೆ, ಜನಾಂಗೀಯ, ಧರ್ಮೀಯ ಅಥವಾ ಜಾತೀಯ ಅಸಹನೆಯ ನೆಲೆಗಳು ಮೈದೋರಿದ ಸ್ವರೂಪವನ್ನು ಅತ್ಯಂತ ನಿಚ್ಚಳವಾಗಿ ಕಾಣುತ್ತೇವೆ. ಹಾಗಂತ ಆಯಾ ಸಮೂಹಗಳ ಪ್ರತೀ ವ್ಯಕ್ತಿಯೂ ಇಂತಹದೇ ಅಸಹನೀಯ ಬದುಕನ್ನು ಬಯಸುತ್ತಾರೆ ಎಂದು ಹೇಳಲಾಗುವುದಿಲ್ಲ. ಅಂದರೇನಾಯ್ತು, ಸಮಾಜ ಅಥವಾ ಸಮೂಹಗಳು ಅಹಿಂಸೆ, ಶಾಂತಿ, ಪ್ರೀತಿ, ಸಹನೆ, ಪರಸ್ಪರ ವಿಶ್ವಾಸ ಮೊದಲಾದ ಮೌಲ್ಯಗಳನ್ನು ನೆಲೆಗೊಳಿಸಲು ಹಂಬಲಿಸುತ್ತವೆ. ದಿಟ. ಅಹಿಂಸೆಯ ಪದವನ್ನು ನಿಗಾಯಿಟ್ಟು ನೋಡಿದರೆ ಮತ್ತು ಈ ಪದವನ್ನು ನಿಷೇಧಾತ್ಮಕಗೊಳಿಸುವ ರೀತಿಯನ್ನು ಪರಿಶೀಲಿಸಿದಾಗ, ಒಂದು ಸಂಗತಿ ನಮಗೆ ನಿಚ್ಚಳವಾಗುತ್ತದೆ. ಅದೇನೆಂದರೆ, ಮನುಷ್ಯನ ಸ್ಥಾಯಿ ಭಾವವೇ ಹಿಂಸೆಯನ್ನು ಬಯಸುವಂತಹದ್ದಾಗಿದೆ. ಆದರೆ, ನಾಗರಿಕ ಮತ್ತು ಎಚ್ಚರದ ಮನಸ್ಸು ಇಂತಹ ಹಿಂಸೆಯನ್ನು ಮೀರುವ ತುಡಿತವನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ, ಅಂತಹ ಹಿಂಸಾತ್ಮಕ ಬದುಕನ್ನು ಮೀರಿ, ಅಪ್ಪಟ ಸಾಮಾಜಿಕ ಮತ್ತು ನಾಗರಿಕ ಬದುಕನ್ನು ನಡೆಸುವ ಸನ್ಮಾರ್ಗವನ್ನು ರೂಪಿಸಿದ ನಿದರ್ಶನಗಳು ನಮಗೆ ಇವತ್ತು ಸಿಗುತ್ತವೆ. ಪರಿಣಾಮವಾಗಿ, ಅಹಿಂಸೆಯ ಮಾರ್ಗಗಳನ್ನು ನಿರಂತರಗೊಳಿಸುವ ಪ್ರಯತ್ನಗಳು ಚರಿತ್ರೆಯ ಉದ್ದಕ್ಕೂ ಕಾಣುತ್ತವೆ.

Image
Bihar
ಬಿಹಾರ ರಾಜಧಾನಿ ಪಾಟ್ನಾದಿಂದ 200 ಕಿಮೀ ದೂರದಲ್ಲಿರುವ ಮೋಹನ್‌ಪುರ್ ಹಳ್ಳಿಯಲ್ಲಿ ದಲಿತ ಬಾಲಕರ ಮೇಲಿನ ಗಂಭೀರ ಹಲ್ಲೆ ಮತ್ತು ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳನ್ನು ಖಂಡಿಸಿ ಧರಣಿ ಕುಳಿತ ಮಹಿಳೆಯರು | ಚಿತ್ರ ಕೃಪೆ: ದಿ ಗಾರ್ಡಿಯನ್

ಹಿಂಸೆಯನ್ನು ವಿಜೃಂಭಿಸುವ ಕಥನಗಳಲ್ಲಿಯೂ ಅಹಿಂಸೆಯನ್ನೇ ಬದುಕಿನ ತತ್ವಗಳನ್ನಾಗಿ ನೆಲೆಗೊಳಿಸುವ ತುಡಿತವನ್ನು ಕಾಣುತ್ತೇವೆ. ಭರತ ಮತ್ತು ಬಾಹುಬಲಿಗಳ ನಡುವಣ ಭಿನ್ನತೆ ಮತ್ತು ಸಾಮ್ಯತೆಗಳನ್ನು ಗಮನಿಸಿದಾಗ, ಹಿಂಸೆ ಮತ್ತು ಅಹಿಂಸೆಯ ಮಾರ್ಗಗಳ ಚಹರೆಗಳು ನಿಚ್ಚಳವಾಗಿ ಕಾಣುತ್ತವೆ. ಭರತ ಮತ್ತು ಬಾಹುಬಲಿ ಇವರಿಬ್ಬರೂ ಸಹೋದರರು. ಆದರೆ ಬದುಕಿನ ಸಾಫಲ್ಯವನ್ನು ಪೂರೈಸುವ ಕ್ರಮದಲ್ಲಿ ಇವರಿಬ್ಬರ ಮನೋಧರ್ಮ ಅತ್ಯಂತ ಭಿನ್ನ. ಅಹಿಂಸೆ, ಶಾಂತಿ, ಸಹನೆ ಹಾಗೂ ಪ್ರೀತಿಯ ಬೆನ್ನು ಹತ್ತಿದ ಬಾಹುಬಲಿ ಬದುಕಿನ ಸಾಮರಸ್ಯಕ್ಕೆ ರೂಪಕವಾಗಿದ್ದಾನೆ. ಬಾಹುಬಲಿ ತ್ಯಜಿಸಿದ್ದು ಮತ್ತು ತ್ಯಾಗ ಮಾಡಿದ್ದು ಹಿಂಸೆ, ಅಧರ್ಮ, ಅನ್ಯಾಯ ಹಾಗೂ ಅಸಹನೆ ಮೊದಲಾದ ಜೀವ ವಿರೋಧಿ ನಿಲುವುಗಳನ್ನು ಮಾತ್ರ. ಆದ್ದರಿಂದ ಬಾಹುಬಲಿ ಬಾಳಿನ ಬೆಳಕಾಗಿ ನೆಲೆಗೊಂಡಿದ್ದಾನೆ. ಭರತನ ದಾರಿ ಇವತ್ತಿಗೂ ಮುಂದುವರಿದಿದ್ದರೆ ಅದು ಹಿಂಸೆಯನ್ನು ಪ್ರೇರೇಪಿಸುವ ದಾರಿಯೇ ಆಗಿದೆ ಮತ್ತು ಅನ್ಯಧರ್ಮ, ಜಾತಿ, ಮತಗಳನ್ನು ದ್ವೇಷಿಸುವ ನಿಲುವೂ ಆಗಿರುತ್ತದೆ.

ಇದನ್ನು ಓದಿದ್ದೀರಾ?: ಕೊಂಡಾಟ | ಶ್ರೀಲಂಕಾವನ್ನು ಪತನದ ಹೆದ್ದಾರಿಗೆ ಕೊಂಡೊಯ್ದ ಜನಾಂಗ ದ್ವೇಷ

ನಮ್ಮ ನಾಡಿನ ವಿಮೋಚನೆಗೆ ಹೋರಾಡಿದ ಗಾಂಧಿ, ಅಂಬೇಡ್ಕರ್, ವಿವೇಕಾನಂದ ಮೊದಲಾದವರು ಬಾಹುಬಲಿ ಮನೋಧರ್ಮವನ್ನು ಹೊಂದಿದವರಾದರೆ, ಇನ್ನೂ ಕೆಲವರು ಹಿಂದುತ್ವದ ಪರವಾಗಿ ಹೋರಾಡಿದವರು ಬಹುತೇಕವಾಗಿ ಭರತನ ಹಾದಿಯನ್ನು ತುಳಿದವರಷ್ಟೇ ಅಲ್ಲ, ಅದನ್ನು ಇನ್ನಷ್ಟೂ ಹದಗೆಡಿಸಿದ ಮಹಾಪುರುಷರು ಎಂದೇ ಹೇಳಬಹುದು. ಇದನ್ನು ಒಂದು ನಿದರ್ಶನದ ಮೂಲಕ ವಿವರಿಸಿ ನೋಡಬಹುದು. ಅಂಬೇಡ್ಕರ್ ಅವರು ಮಹಡ್ ಸತ್ಯಾಗ್ರಹವನ್ನು ಕೈಗೊಂಡಾಗ, ಸಾವಿರಾರು ಜನ ದಲಿತರು ಇದರಲ್ಲಿ ಪಾಲುಗೊಂಡರು. ಈ ಮಹಡ್ ಸತ್ಯಾಗ್ರಹ ಎನ್ನುವುದು, ನಿಸರ್ಗದತ್ತವಾಗಿ ಎಲ್ಲರಿಗೂ ಸಮನಾಗಿ ಕುಡಿಯುವ ನೀರು ಸಿಗಬೇಕು ಎನ್ನುವ ತತ್ವವನ್ನು ನೆಲೆಯಾಗಿಸಿಕೊಂಡು ರೂಪುಗೊಂಡಿತು. ಆದರೆ, ಬ್ರಾಹ್ಮಣರು ಈ ಚೌಡರ್ ಕೆರೆಗೆ ಈ ಸತ್ಯಾಗ್ರಹ ಬಂದಾಗ ದನಗಳ ಶಗಣೆಯನ್ನು ಹಾಕಿ ಕಲುಷಿತಗೊಳಿಸಿದರು ಮತ್ತು ಇದನ್ನೊಂದು ಅಪರಾಧವನ್ನಾಗಿ ಪರಿಗಣಿಸಿ ಅಂಬೇಡ್ಕರ್ ವಿರುದ್ಧ ಕೇಸನ್ನು ದಾಖಲಿಸಿದರು. ಈ ಕ್ರಮ ಯಾಕೆ ಒಂದು ಕ್ರೌರ್ಯವಾಗಿ ಕಾಣುತ್ತಿಲ್ಲ?

Image
Aligarh incident
ಉತ್ತರ ಪ್ರದೇಶದ ಅಲಿಗಢದಲ್ಲಿ, ಆರು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರನ್ನು ಥಳಿಸುತ್ತಿರುವ ಪೊಲೀಸರು | ಚಿತ್ರ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

ಹಿಂದೂ ಕೋಡ್ ಬಿಲ್ ಮಂಡಿಸುವ ಮೂಲಕ ಅಂಬೇಡ್ಕರ್ ಅವರು ಈ ದೇಶದ ಮಹಿಳೆಯರನ್ನು ವಿಮೋಚನೆಗೊಳಿಸುವ ಅತ್ಯಂತ ಮಹತ್ತರ ಕೆಲಸವನ್ನು ಕೈಗೊಂಡರು. ಈ ಮಸೂದೆಯು ಕೇವಲ ದಲಿತರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇಡೀ ಮಾನವ ಸಮೂಹಗಳ ನಡುವೆ ಸಾಮಾಜಿಕ ಸಾಮರಸ್ಯದ ನಂಟನ್ನು ನೆಲೆಗೊಳಿಸುವ ಬಗೆಯಾಗಿತ್ತು. ಆದರೆ, ಈ ಮಸೂದೆಯನ್ನು ಮಂಡಿಸುವಾಗ ಅಂಬೇಡ್ಕರ್ ಅವರಿಗೆ ಯಾಕೆ ಅಷ್ಟೊಂದು ವಿರೋಧಗಳು ಎದುರಾದವು? ಯಾರ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಇಂತಹ ವಿರೋಧಗಳು ತಲೆಯೆತ್ತಿದವು? ಜೀವ ವಿರೋಧಿ ಧೋರಣೆಗಳನ್ನು ಹೊಂದಿದವರಿಗೆ ಸಹಜವಾಗಿ ಸಮೂಹಗಳ ಏಳಿಗೆಯನ್ನು ಬಯಸುವವರೇ ಸಮಾಜ ವಿರೋಧಿಗಳಾಗಿ ಕಾಣುತ್ತಾರೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.

ಸಹಸ್ರಾರು ವರುಷಗಳಿಂದ ಬದುಕು ನಡೆಸಿಕೊಂಡು ಬಂದ ಬಹುಸಂಖ್ಯಾತ/ಬಹುಜನ ಸಮೂಹಗಳಿಗೆ ಸಿಗದೇ ಇರುವ ಸಾಂಸ್ಕೃತಿಕ ಮಾನ್ಯತೆ ಯಾಕೆ ಕೆಲವೇ ಕೆಲವು ಸಮೂಹಗಳಿಗೆ ಸಿಗಲು ಸಾಧ್ಯವಾಗಿದೆ? ಇಂತಹ ಸಮೂಹಗಳ ಹಿತಾಸಕ್ತಿಯನ್ನು ಕಾಪಾಡುವ ಏಕೈಕ ಉದ್ದೇಶಕ್ಕಾಗಿ, ಯಾಕೆ ಎಲ್ಲ ಸಮುದಾಯಗಳ ಅಸ್ತಿತ್ವವನ್ನೇ ಕಣ್ಮರೆಗೊಳಿಸಿಲಾಯಿತು (ಇನ್ವಿಸಿಬಲೈಸಿಂಗ್)? ಕೆಲವೇ ಸಮೂಹಗಳ ಅಸ್ಮಿತೆಯನ್ನು ಮಾತ್ರ ಗೋಚರಿಸುವಂತೆ ಯಾಕೆ ನೋಡಿಕೊಳ್ಳಲಾಯಿತು? ನಾಗರಿಕತೆ, ಸಂಸ್ಕೃತಿ ಹಾಗೂ ಧಾರ್ಮಿಕತೆ ಕುರಿತು ಪಾಠಗಳನ್ನು ಹೇಳುತ್ತ ಬಂದಿರುವ ಸಮುದಾಯಗಳಿಗೆ ಮಾತ್ರ ಇಂತಹ ಹುನ್ನಾರ ಮಾಡಲು ಹೇಗೆ ಸಾಧ್ಯವಾಯಿತು? ವೇದಗಳ ಕಾಲದಿಂದಲೂ ಅಸ್ಪೃಶ್ಯತೆಯನ್ನು ಪೋಷಿಸಿಕೊಂಡು ಬರುವುದರ ಹಿಂದಿನ ಬಲವಾದ ಕಾರಣಗಳೇನು? ದಲಿತರನ್ನು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರನ್ನು ಸಮನಾಗಿ ಹಿಂಸಿಸುತ್ತ, ಶೋಷಣೆಗೆ ಒಳಪಡಿಸುತ್ತಲೇ ಇರುವ ಆ ಸಾಮಾಜಿಕ ನ್ಯಾಯವಾದರೂ ಯಾವುದು? ದಲಿತರಿಗೆ ಮಲ ತಿನ್ನಿಸುವ, ಅವರನ್ನು ಜೀವಂತವಾಗಿ ಸುಡುತ್ತಿರುವ ನೀಚ ಧೋರಣೆಗಳು ಮೈದಾಳಿದ್ದಾದರೂ ಹೇಗೆ? ಈ ಎಲ್ಲ ಪ್ರಶ್ನೆಗಳನ್ನು ಅತ್ಯಂತ ಸರಳಗೊಳಿಸಿ ನೋಡಲು ಆಗುವುದಿಲ್ಲ. ಏಕೆಂದರೆ, ಪುರೋಹಿತಶಾಹಿ ಮತ್ತು ಮೇಲ್ವರ್ಗಗಳು ತಮ್ಮ ಅಧಿಕಾರ ಕೇಂದ್ರಗಳು ಮತ್ತು ಹಿತಾಸಕ್ತಿಗಳನ್ನು ನಿರಂತರಗೊಳಿಸುವುದಕ್ಕೆ ಪೂರಕವಾಗಿ ಇಂತಹ ಸಂಘಟಿತ ಹಿಂಸೆಯನ್ನು ರೂಪಿಸುತ್ತಲೇ ಬಂದಿವೆ. ನೈಸರ್ಗಿಕವಾಗಿ ಬದುಕು ಮತ್ತು ಅನ್ನದ ಹಕ್ಕುಗಳಲ್ಲಿ ಯಾವುದೇ ತಾರತಮ್ಯ ಇರಬಾರದು. ಆದರೆ, ಲೋಕ ಕಲ್ಯಾಣದ ನೆಪದಲ್ಲಿ ಸಹಸ್ರಾರು ಸಮೂಹಗಳಿಗೆ ಅವಮಾನದ ಬದುಕುಗಳನ್ನು ಕಲ್ಪಿಸುತ್ತಲೇ ಬರಲಾಗಿದೆ. ಹಾಗಾದರೆ, ಇಂತಹ ಅನೈತಿಕ ಧರ್ಮ ರಾಜಕಾರಣವನ್ನು ಏನೆಂದು ಬಣ್ಣಿಸುವುದು? ಇಂತಹ ರಚನಾತ್ಮಕ ಹಿಂಸೆಯನ್ನು ರೂಪಿಸುತ್ತಿದ್ದ ಸನ್ನಿವೇಶದಲ್ಲಿಯೇ ಬಂದಂತಹ ರಾಮ, ಕೃಷ್ಣರು ಮಾತ್ರ ಹೇಗೆ ದೇವಮಾನವರಾದರು? ಇತ್ಯಾದಿ ಪ್ರಶ್ನೆಗಳನ್ನು ಕುರಿತು ಯೋಚಿಸದೆ ಇರುವುದು ಮೂರ್ಖತನವಲ್ಲವೇ? ಇಂತಹ ರಚನಾತ್ಮಕ ಹಿಂಸೆಯನ್ನು ನಿರಚನಗೊಳಿಸಿ ಎಲ್ಲರನ್ನು ಎಚ್ಚರಿಸುವ ನಿಲುವುಗಳನ್ನು ಖಂಡಿಸುವುದು ಅಥವಾ ಅವಮಾನಿಸುವುದು ಯಾವ ಸಾಂಸ್ಕೃತಿಕ ಹಿರಿಮೆಯನ್ನು ಸೂಚಿಸುತ್ತದೆ?

Image
Tamilnadu Farmers
ಸಾಲ ಮನ್ನಾ ಮತ್ತಿತರ ಬೇಡಿಕೆಗಳನ್ನು ಒಕ್ಕೂಟ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿ, ದಿಲ್ಲಿಯ ಸಂಸತ್ ಭವನದ ಎದುರು ಪ್ರತಿಭಟಿಸಿದ ತಮಿಳುನಾಡು ರೈತರು | ಚಿತ್ರ ಕೃಪೆ: ದಿ ಕಾರವಾನ್

ನಮ್ಮ ಮುಂದಿನ ತಲೆಮಾರುಗಳಿಗೆ ಬೇಕಾಗುವ ಆಲೋಚನಾ ಕ್ರಮಗಳನ್ನು ರೂಪಿಸುವ ವಿಧಾನ ಯಾವುದು? ಸಮೂಹಗಳ ಮೇಲಿನ ದಾಳಿಯ ಹಿಂದೆ ನಮ್ಮ  ಸಮೂಹಗಳ ಸಾಮರಸ್ಯದ ಅಸ್ತಿತ್ವವನ್ನು ನಗಣ್ಯಗೊಳಿಸುವ ಮತ್ತು ಈಗಿನ ಯುವಜನತೆ ಮುಂದಿನ ತಮ್ಮ ಸಾವಿರಾರು ತಲೆಮಾರುಗಳಿಗೆ, ಅನ್ಯಾಯ, ಅಸಮಾನತೆ, ಸಾಮಾಜಿಕ ಅಪಮಾನ, ರಾಜಕೀಯ ಮತ್ತು ಆರ್ಥಿಕ ಶೋಷಣೆಗಳ ರಾಚನಿಕ ವಿನ್ಯಾಸವನ್ನು ಅರಿಯುವ ಮಾದರಿಗಳನ್ನು ನಿರಾಕರಿಸುವ ಹುನ್ನಾರವನ್ನು ಇವತ್ತಿನ ಸಮಾಜ ವಿರೋಧಿ ಸಂಘಟನೆಗಳಲ್ಲಿ ಕಾಣುತ್ತಿದ್ದೇವೆ.

ಮುಖ್ಯಚಿತ್ರ ಕೃಪೆ | ಎಡಿನ್‌ಬರೊ ವಿಶ್ವವಿದ್ಯಾಲಯ, ಸ್ಕಾಟ್ಲೆಂಡ್
ನಿಮಗೆ ಏನು ಅನ್ನಿಸ್ತು?
0 ವೋಟ್