ಗ್ರಾಹಕಾಯಣ | ನಿಮಗೆ ಮೋಸವಾಗಿದೆ ಎಂದಾದಾಗ ದೂರು ಕೊಡಬೇಕಾದ್ದು ಯಾರಿಗೆ ಮತ್ತು ಹೇಗೆ?

Shopping 7

ಸರಕು ಮತ್ತು ಸೇವೆಯ ವಿಷಯದಲ್ಲಿ ಕುಂದು, ಕೊರತೆ, ನೋವು, ನಷ್ಟ ಅನುಭವಿಸಿರುವ ಗ್ರಾಹಕರು/ ಫಲಾನುಭವಿಗಳು ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸುವ ಹಕ್ಕು ಪಡೆಯುತ್ತಾರೆ. ಪರಿಹಾರದ ಮೊತ್ತ ಮತ್ತಿತರೆ ಅಂಶಗಳಿಗೆ ಅನುಗುಣವಾಗಿ ಜಿಲ್ಲೆ, ರಾಜ್ಯ ಅಥವಾ ರಾಷ್ಟ್ರೀಯ ಆಯೋಗದಲ್ಲಿ ದೂರು ಸಲ್ಲಿಸಬಹುದು. ಈ ಕುರಿತ ವಿವರ ಇಲ್ಲಿದೆ

ಗ್ರಾಹಕರ ಕುಂದು ಕೊರತೆ ಮತ್ತು ವ್ಯಾಜ್ಯಗಳನ್ನು ವಿಚಾರಣೆಗೆ ಒಳಪಡಿಸಿ, ವ್ಯಾಜ್ಯವನ್ನು ಪರಿಹರಿಸಿ, ಸೂಕ್ತವೆಂದು ತಿಳಿದಲ್ಲಿ, ಗ್ರಾಹಕರಿಗೆ ಪರಿಹಾರ ಕೊಡಿಸುವುದು ಗ್ರಾಹಕ ಸಂರಕ್ಷಣಾ ಅಧಿನಿಯಮದ ಮೂಲ ಉದ್ದೇಶ. ಈ ಉದ್ದೇಶದಿಂದ ದೇಶಾದ್ಯಂತ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಗಳನ್ನು ಸ್ಥಾಪಿಸಲಾಗಿದೆ. 1986ರ ಅಧಿನಿಯಮದಲ್ಲಿ 'ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ' ಎಂದು ಕರೆಯಲ್ಪಟ್ಟಿತ್ತು. ಈಗ 2019ರ ಅಧಿನಿಯಮದಲ್ಲಿ ವೇದಿಕೆ ಬದಲಾಗಿ ಆಯೋಗ ಎಂದು ಮರುನಾಮಕರಣ ಮಾಡಲಾಗಿದೆ.

ಸರಕು ಅಥವಾ ಸೇವೆಯ ವಿಷಯದಲ್ಲಿ ಕುಂದು, ಕೊರತೆ, ನೋವು ಅಥವಾ ನಷ್ಟ ಅನುಭವಿಸಿರುವ ಗ್ರಾಹಕರು ಅಥವಾ ಫಲಾನುಭವಿಗಳು ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸುವ ಹಕ್ಕನ್ನು ಪಡೆಯುತ್ತಾರೆ. ಪರಿಹಾರದ ಮೊತ್ತ ಮತ್ತು ಇತರೆ ಅಂಶಗಳಿಗೆ ಅನುಗುಣವಾಗಿ, ಗ್ರಾಹಕರು ಜಿಲ್ಲೆ, ರಾಜ್ಯ ಅಥವಾ ರಾಷ್ಟ್ರೀಯ ಆಯೋಗದಲ್ಲಿ ದೂರು ಸಲ್ಲಿಸಬಹುದು.

ಗ್ರಾಹಕರು ಸರಕು ಅಥವಾ ಸೇವೆಯನ್ನು ಖರೀದಿಸಲು ನೀಡಿರುವ ಪ್ರತಿಫಲದ ಮೊತ್ತಕ್ಕೆ ಅನುಸಾರವಾಗಿ ಜಿಲ್ಲೆ, ರಾಜ್ಯ ಅಥವಾ ರಾಷ್ಟ್ರೀಯ ಆಯೋಗದಲ್ಲಿ ದೂರು ಸಲ್ಲಿಸಬೇಕಾಗುತ್ತದೆ. ಅಧಿನಿಯಮದ ಪ್ರಕಾರ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಆಯೋಗದ ಮೌಲ್ಯಾಧಾರಿತ ಅಧಿಕಾರ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರು ದೂರು ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ದೂರನ್ನು ತಿರಸ್ಕರಿಸುವ ಸಾಧ್ಯತೆ ಇದೆ. 

ಮಿತಿ  ಆಯೋಗ
ಸರಕು ಅಥವಾ ಸೇವೆಯನ್ನು ಖರೀದಿಸಲು ಗ್ರಾಹಕರು ನೀಡಿರುವ ಪ್ರತಿಫಲದ ಮೊತ್ತ ಐವತ್ತು ಲಕ್ಷ ರೂಪಾಯಿಗಿಂತ ಮೀರದಿದ್ದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ
ಸರಕು ಅಥವಾ ಸೇವೆಯನ್ನು ಖರೀದಿಸಲು ಗ್ರಾಹಕರು ನೀಡಿರುವ ಪ್ರತಿಫಲದ ಮೊತ್ತ ಎರಡು ಕೋಟಿ ರೂಪಾಯಿಗಿಂತ ಹೆಚ್ಚಾಗಿದ್ದಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ
ಸರಕು ಅಥವಾ ಸೇವೆಯನ್ನು ಖರೀದಿಸಲು ಗ್ರಾಹಕರು ನೀಡಿರುವ ಪ್ರತಿಫಲದ ಮೊತ್ತ ಎರಡು ಕೋಟಿ ರೂಪಾಯಿಗಿಂತ ಹೆಚ್ಚಾಗಿದ್ದಲ್ಲಿ  ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ 

 

ಪ್ರಾದೇಶಿಕ ಅಧಿಕಾರ ವ್ಯಾಪ್ತಿ

ದೂರುಗಳನ್ನು ಯಾವ ಪ್ರದೇಶದಲ್ಲಿರುವ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ಸಲ್ಲಿಸಬೇಕು ಎಂಬುದನ್ನೂ ಅಧಿನಿಯಮದಲ್ಲಿ ಸೂಚಿಸಲಾಗಿದೆ. 1986ರ ಅಧಿನಿಯಮದಲ್ಲಿ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿದ್ದವು. ಉದಾಹರಣೆಗೆ, ಗ್ರಾಹಕರು ಎಲ್ಲಿ ವಾಸಿಸುತ್ತಾರೋ ಅಲ್ಲೇ ದೂರು ಸಲ್ಲಿಸಬೇಕೇ ಅಥವಾ ಪ್ರತಿವಾದಿಯು ಎಲ್ಲಿ ವಾಸಿಸುತ್ತಾರೋ ಅಥವಾ ಅವರ ಸಂಸ್ಥೆ ಎಲ್ಲಿದೆಯೋ ಅಲ್ಲಿ ದೂರು ಸಲ್ಲಿಸಬೇಕೇ ಇತ್ಯಾದಿ ಅನುಮಾನಗಳಿದ್ದವು. 2019ರ ಅಧಿನಿಯಮದ ಪ್ರಕಾರ, ಈಗ ಗ್ರಾಹಕರಿಗೆ ದೂರು ಸಲ್ಲಿಸುವ ವಿಷಯದಲ್ಲಿ ಈ ಆಯ್ಕೆಗಳನ್ನು ನೀಡಲಾಗಿದೆ.

ಪ್ರತಿವಾದಿಯು ಸಾಮಾನ್ಯವಾಗಿ ವಾಸ ಮಾಡುವ ಸ್ಥಳ ಅಥವಾ ಅವರು ತಮ್ಮ ವ್ಯಾಪಾರವನ್ನು ನಡೆಸುತ್ತಿರುವ ಸ್ಥಳ ಅಥವಾ ಅವರ ಸಂಸ್ಥೆಯ ಶಾಖೆ ಇರುವ ಸ್ಥಳ ಅಥವಾ ಪ್ರತಿವಾದಿಯು ತಮ್ಮ ಆದಾಯ/ ಲಾಭ ಗಳಿಸುವುದಕ್ಕೆ ಯಾವ ಸ್ಥಳದಲ್ಲಿ ನೆಲಸಿರುತ್ತಾರೋ ಆ ಪ್ರದೇಶದ ವ್ಯಾಪ್ತಿಗೆ ಒಳಪಟ್ಟ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಬಹುದು.

ಈ ಲೇಖನ ಓದಿದ್ದೀರಾ? ಗ್ರಾಹಕಾಯಣ | ಕ್ರಿಪ್ಟೋ ಕರೆನ್ಸಿಯಂತಹ ಅಪಾಯಕಾರಿ ಹೂಡಿಕೆ ಸುತ್ತ...

ಪ್ರತಿವಾದಿಯು ವಾಸ್ತವವಾಗಿ ಅಥವಾ ಸ್ವಪ್ರೇರಣೆಯಿಂದ ವಾಸ ಮಾಡುವ ಸ್ಥಳ ಅಥವಾ ಅವರು ತಮ್ಮ ವ್ಯಾಪಾರವನ್ನು ನಡೆಸುತ್ತಿರುವ ಸ್ಥಳ ಅಥವಾ ಅವರ ಸಂಸ್ಥೆಯ ಶಾಖೆ ಇರುವ ಸ್ಥಳ ಅಥವಾ ಪ್ರತಿವಾದಿಯು ತಮ್ಮ ಆದಾಯ/ಲಾಭ ಗಳಿಸುವುದಕ್ಕೆ ಯಾವ ಸ್ಥಳದಲ್ಲಿ ನೆಲಸಿರುತ್ತಾರೋ ಆ ಪ್ರದೇಶದ ವ್ಯಾಪ್ತಿಗೆ ಒಳಪಟ್ಟ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಬಹುದು. ಇದಕ್ಕಾಗಿ ಗ್ರಾಹಕರು ಆಯೋಗದ ಅನುಮತಿ ಪಡೆಯಬೇಕಿದೆ.

ವ್ಯಾಜ್ಯಕ್ಕೆ ಕಾರಣ ಭಾಗಶಃ ಅಥವಾ ಸಂಪೂರ್ಣವಾಗಿ ಎಲ್ಲಿ ಉದ್ಬವಿಸಿತೋ ಆ ಪ್ರದೇಶದ ವ್ಯಾಪ್ತಿಗೆ ಒಳಪಟ್ಟ ಆಯೋಗದಲ್ಲಿ ದೂರು ಸಲ್ಲಿಸಬಹುದು.

ಯಾರು ದೂರು ಸಲ್ಲಿಸಬಹುದು? [ಸೆಕ್ಷನ್ 2(5)]

ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ಯಾರು ದೂರು ಸಲ್ಲಿಸುತ್ತಾರೋ ಅವರನ್ನು ‘ದೂರುದಾರರು’ ಎಂದು ಕರೆಯಲಾಗಿದೆ. ಅಧಿನಿಯಮದ ಪ್ರಕಾರ ಕೆಳಕಂಡವರು ಆಯೋಗದಲ್ಲಿ ದೂರು ಸಲ್ಲಿಸಬಹುದು.

 • ಯಾವ ವ್ಯಕ್ತಿಗೆ ಸರಕು ಅಥವಾ ಸೇವೆಯನ್ನು ಮಾರಾಟ ಮಾಡಲಾಗಿದೆಯೋ ಅವರು ಆ ಸರಕು ಅಥವಾ ಸೇವೆಗೆ ಸಂಬಂಧಿಸಿದಂತೆ ಅನುಚಿತ ವ್ಯಾಪಾರ ಪದ್ಧತಿ ಅನುಸರಿಸಲಾಗಿದೆ ಎಂಬ ಕಾರಣಕ್ಕೆ ದೂರು ಸಲ್ಲಿಸಬಹುದು.
 • ತತ್ಸಮಯದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ನೊಂದಾಯಿಸಿರುವ ಸ್ವಯಂ ಸೇವಾ ಗ್ರಾಹಕ ಸಂಸ್ಥೆ. ದೂರುದಾರರು ಈ ಸಂಸ್ಥೆ/ಚಸಂಘದ ಸದಸ್ಯರಾಗಿರಬೇಕಾಗಿಲ್ಲ. (ಇದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು 24.07.2020ರಂದು ನಿಯಮಗಳನ್ನು ನಿಗದಿಪಡಿಸಿದೆ)
 • ಕೇಂದ್ರ ಸರ್ಕಾರ
 • ರಾಜ್ಯ ಸರ್ಕಾರ
 • ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು
 • ಒಂದೇ ರೀತಿಯ ಆಸಕ್ತಿ ಹೊಂದಿರುವ ಹಲವಾರು ಗ್ರಾಹಕರು
 • ಗ್ರಾಹಕರ ಕಾನೂನುಸಮ್ಮತ ವಾರಸುದಾರ
 • ಗ್ರಾಹಕ ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಅವರ ತಂದೆ/ತಾಯಿ ಅಥವಾ ಕಾನೂನುಸಮ್ಮತ ಪೋಷಕರು

ದೂರು ಎಂದರೇನು ಅಥವಾ ಯಾವ ಕಾರಣಕ್ಕೆ ದೂರು ಸಲ್ಲಿಸಬಹುದು? [ಸೆಕ್ಷನ್ 2(6)]

ಗ್ರಾಹಕ ಸಂರಕ್ಷಣಾ ಅಧಿನಿಯಮವು ‘ದೂರು’ ಎಂದರೇನು ಎಂಬುದನ್ನು ವಿವರಿಸುತ್ತದೆ. ಅದರಂತೆ, ಗ್ರಾಹಕರು ಕೆಳಕಂಡ ಸಮಸ್ಯೆಗಳಿಗೆ ಒಳಗೊಂಡಂತೆ ದೂರುಗಳನ್ನು ಸಲ್ಲಿಸಬಹುದು.

 • ಮಾರಾಟಗಾರರು ಅಥವಾ ಸೇವೆ ಸರಬರಾಜು ಮಾಡುವವರು ಯಾವುದೇ ಅನುಚಿತ/ ನಿರ್ಬಂಧಿತ ವ್ಯಾಪಾರ ಪದ್ಧತಿ ಅನುಸರಿಸಿದಲ್ಲಿ ಮತ್ತು ಮಾಡುವ ಒಪ್ಪಂದ ಅನುಚಿತವಾಗಿದ್ದಲ್ಲಿ.
 • ಖರೀದಿಸಿರುವ ಅಥವಾ ಖರೀದಿಸುತ್ತೇವೆ ಎಂದು ಒಪ್ಪಿಕೊಂಡಿರುವ ಸರಕುಗಳಲ್ಲಿ ದೋಷವಿದ್ದಲ್ಲಿ.
 • ಪಡೆದಿರುವ ಅಥವಾ ಪಡೆಯುತ್ತೇವೆ ಎಂದು ಒಪ್ಪಿಕೊಂಡಿರುವ ಸೇವೆಯಲ್ಲಿ ಲೋಪವಿದ್ದಲ್ಲಿ.
 • ಮಾರಾಟಗಾರ ಯಾವುದೇ ಕಾನೂನು ವಿಧಿಸಿರುವ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ.
 • ಸರಕು ಒಳಗೊಂಡಿರುವ ಪೊಟ್ಟಣದ ಮೇಲೆ ಮುದ್ರಿಸಿರುವ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ.
 • ದರಪಟ್ಟಿಯಲ್ಲಿ ನಮೂದಿಸಿರುವ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ.
 • ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಮಾಡಿಕೊಂಡ ಒಪ್ಪಂದಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾದಲ್ಲಿ.
 • ಸರಕನ್ನು ಉಪಯೋಗಿಸಿದಲ್ಲಿ ಅದರಿಂದ ಜೀವಕ್ಕೆ ಅಪಾಯ ಉಂಟಾಗುವಂತಿದ್ದರೆ.
 • ಯಾವುದೇ ಕಾನೂನಿನ ಪ್ರಕಾರ ಸುರಕ್ಷತಾ ಕ್ರಮ ಅನುಸರಿಸದೆ ಸರಕು ಮಾರಾಟ ಮಾಡಿದಲ್ಲಿ.
 • ಸರಕು ಮಾರಾಟ ಮಾಡುವಾಗ ಅದು ಅಪಾಯಕಾರಿ ಎಂದು ಮಾರಾಟಗಾರರಿಗೆ ತಿಳಿದಿದ್ದಲ್ಲಿ.
 • ಸೇವೆಯನ್ನು ನೀಡುವಾಗ ಅದು ಅಪಾಯಕಾರಿ ಎಂದು ಮಾರಾಟಗಾರರಿಗೆ ತಿಳಿದಿದ್ದಲ್ಲಿ.
 • ಸರಕು ಬಾಧ್ಯತೆ (Product Liability) ವಿಷಯದಲ್ಲಿ.
ನಿಮಗೆ ಏನು ಅನ್ನಿಸ್ತು?
2 ವೋಟ್