ಗ್ರಾಹಕಾಯಣ | ಜಿಲ್ಲಾಧಿಕಾರಿಗಳ ಹೆಗಲಿಗೆ ಗ್ರಾಹಕ ಸಂರಕ್ಷಣೆಯ ಅಧಿಕೃತ ಜವಾಬ್ದಾರಿ

Consumer

ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳು ಗ್ರಾಹಕ ಸಂರಕ್ಷಣೆ ವಿಷಯದಲ್ಲಿ ತಲೆ ಕೆಡಿಸಿಕೊಂಡವರಲ್ಲ. ಅದು ಅವರಿಗೆ ಮುಖ್ಯ ವಿಷಯವೂ ಆಗಿರಲಿಲ್ಲ. ಗ್ರಾಹಕರ ಹಕ್ಕುಗಳ ದಿನಾಚರಣೆಗಳಂದು ಆಗಮಿಸಿ, ದೀಪ ಬೆಳಗಿಸಿ, ಒಂದೆರಡು ನಿಮಿಷ ಮಾತನಾಡಿ ಹೋಗುವ ಸಂಪ್ರದಾಯವಿತ್ತಷ್ಟೆ. ಆದರೆ ಈಗ ಗ್ರಾಹಕ ಸಂರಕ್ಷಣೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅವರದು ಮುಖ್ಯ ಪಾತ್ರ

ನಮ್ಮ ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾಧಿಕಾರಿಗಳು (ಕೆಲವು ರಾಜ್ಯಗಳಲ್ಲಿ 'ಕಲೆಕ್ಟರ್') ಅತ್ಯಂತ ಪ್ರಮುಖ ಅಧಿಕಾರಿ. ಇಡೀ ಒಂದು ಜಿಲ್ಲೆಯ ಆಡಳಿತ ಸೂತ್ರ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸಮೀಕ್ಷೆಯೊಂದರ ಪ್ರಕಾರ, ಜಿಲ್ಲಾಧಿಕಾರಿ ಸುಮಾರು 30-35 ಸಮಿತಿಯಲ್ಲಿರುತ್ತಾರೆ. ಈಗ ಗ್ರಾಹಕ ಸಂರಕ್ಷಣೆಯ ಒಂದಿಷ್ಟು ಜವಾಬ್ದಾರಿಯೂ ಅವರ ಕೊರಳಿಗೆ ಬಿದ್ದಿದೆ. 'ಗ್ರಾಹಕ ಸಂರಕ್ಷಣಾ ಅಧಿನಿಯಮ 2019'ರಲ್ಲಿ ಅವರ ಕರ್ತವ್ಯವನ್ನು ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳು ಗ್ರಾಹಕ ಸಂರಕ್ಷಣೆ ವಿಷಯದಲ್ಲಿ ತಲೆ ಕೆಡಿಸಿಕೊಂಡವರಲ್ಲ. ಅದು ಅವರಿಗೆ ಮುಖ್ಯ ವಿಷಯವೂ ಆಗಿರಲಿಲ್ಲ. ರಾಷ್ಟ್ರೀಯ ಮತ್ತು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮಗಳಿಗೆ ಬಂದು, ದೀಪ ಬೆಳಗಿಸಿ, ಒಂದೆರಡು ನಿಮಿಷ ಗ್ರಾಹಕರ ಹಕ್ಕುಗಳ ಬಗ್ಗೆ ಮಾತನಾಡಿ ಹೋಗುವ ಸಂಪ್ರದಾಯವಿತ್ತಷ್ಟೆ. ಅನೇಕ ಜಿಲ್ಲೆಗಳಲ್ಲಿ ಅವರು ಅದನ್ನೂ ಮಾಡುತ್ತಿರಲಿಲ್ಲ. ಆದರೂ ಶಿಷ್ಟಾಚಾರಕ್ಕೆ ಜಿಲ್ಲಾಧಿಕಾರಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಸೇರಿಸಲಾಗುತ್ತಿತ್ತು. ಆದರೆ, 'ಗ್ರಾಹಕ ಸಂರಕ್ಷಣಾ ಅಧಿನಿಯಮ 2019'ರಲ್ಲಿ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಧಿಕಾರಿಗಳು ಇದರತ್ತ ಗಮನ ಹರಿಸಲೇಬೇಕಿದೆ.

Image
ಸಾಂದರ್ಭಿಕ ಚಿತ್ರ

'ಗ್ರಾಹಕ ಸಂರಕ್ಷಣಾ ಅಧಿನಿಯಮ 2019'ರ ಅನುಸಾರ, ಜಿಲ್ಲಾ ಮಟ್ಟದಲ್ಲಿ ಗ್ರಾಹಕ ಸಂರಕ್ಷಣಾ ಪರಿಷತ್ತನ್ನು ರಚಿಸಬೇಕಿದೆ. ಈಗಾಗಲೇ ಕರ್ನಾಟಕ ಸರ್ಕಾರ ಕೆಲವು ಜಿಲ್ಲಾ ಮಟ್ಟದ ಪರಿಷತ್ತನ್ನು ಸ್ಥಾಪಿಸಿದ್ದು, ಇವುಗಳ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿಕೊಡಲಾಗಿದೆ. ಪರಿಷತ್ತಿನ ಸಭೆ ನಡೆಸುವುದು, ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳುವುದು ಇತ್ಯಾದಿಗಳಿಗೆ ಜಿಲ್ಲಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ.

ಜೊತೆಗೆ, ಅಧಿನಿಯಮದಲ್ಲಿ ಸೂಚಿಸಿರುವ ಗ್ರಾಹಕರ ಆರು ಹಕ್ಕುಗಳ ರಕ್ಷಣೆಗೆ ಜಿಲ್ಲಾಧಿಕಾರಿಗಳು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಜಿಲ್ಲಾ ಗ್ರಾಹಕ ಸಂರಕ್ಷಣಾ ಪರಿಷತ್ತಿನಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಹಕ ಹಕ್ಕುಗಳ ವಿಷಯ ತಜ್ಞರು ಸದಸ್ಯರಾಗಿರುತ್ತಾರೆ. ನಿಯಮದ ಪ್ರಕಾರ, ವರ್ಷದಲ್ಲಿ ಕನಿಷ್ಠ ನಾಲ್ಕು ಸಭೆಗಳನ್ನು ನಡೆಸಬೇಕಿದೆ.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | ಇನ್ಮುಂದೆ ಹೋಟೆಲ್‍ಗಳು ಸೇವಾ ಶುಲ್ಕ ವಿಧಿಸಿದರೆ ಧಾರಾಳವಾಗಿ ದೂರು ಕೊಡಬಹುದು

ಕರ್ನಾಟಕದಲ್ಲಿ ಜಿಲ್ಲಾ ಮಟ್ಟದ ಪರಿಷತ್ತನ್ನು ಆಗಾಗ ಸ್ಥಾಪಿಸಲಾಗುತ್ತಿದ್ದರೂ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪರಿಷತ್ತನ್ನು ಸ್ಥಾಪಿಸಿರಲಿಲ್ಲ. ಪರಿಷತ್ತನ್ನು ಸ್ಥಾಪಿಸಿ ಅದಕ್ಕೆ ಸಂಬಂಧಪಟ್ಟ ಆದೇಶ ಹೊರಡಿಸಿ ಸರ್ಕಾರ ಕೈ ತೊಳೆದುಕೊಳ್ಳುತ್ತಿತ್ತು. ಸಭೆ ನಡೆದದ್ದು ಅಪರೂಪ. ಪರಿಷತ್ತಿಗೆ ಆಯ್ಕೆಯಾದ ಇತರೆ ಸದಸ್ಯರಿಗೆ ಆ ವಿಷಯ ತಿಳಿಸದಿದ್ದ ಪ್ರಸಂಗಗಳೂ ನಡೆದಿದೆ. ಗ್ರಾಹಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು, ಸುಧಾರಣೆ ಬಗ್ಗೆ ಸಲಹೆ, ಸೂಚನೆ ನೀಡುವುದು ಇತ್ಯಾದಿ ಜವಾಬ್ದಾರಿಗಳು ಪರಿಷತ್ತಿನ ಸದಸ್ಯರದ್ದು. ಆದರೆ, ಗ್ರಾಹಕರ ಹಕ್ಕು ಸಂರಕ್ಷಣೆ ಎಂದರೇನು ಎಂಬುದನ್ನೂ ತಿಳಿಯದ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಿದರೆ ಫಲವೇನು? ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಸೇರಿಸುವುದು ಇಲ್ಲಿಯೂ ನಿಂತಿಲ್ಲ. ಇದು ಎಲ್ಲ ರಾಜ್ಯಗಳಲ್ಲೂ ನಡೆದಿದೆ.

ಆದರೆ, 2019ರ ಅಧಿನಿಯಮದ ವಿಶೇಷ ಏನೆಂದರೆ, ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಸ್ಥಾಪನೆ. ಈ ಪ್ರಾಧಿಕಾರವು ಜಿಲ್ಲಾಧಿಕಾರಿಗಳ ಹೆಗಲಿಗೆ ಅಧಿಕೃತವಾಗಿ ಕೆಲವು ಜವಾಬ್ದಾರಿ ಸೇರಿಸಿದೆ. ಅಧಿನಿಯಮದಲ್ಲೇ ಇದು ಉಲ್ಲೇಖ ಆಗಿರುವುದರಿಂದ ಜಿಲ್ಲಾಧಿಕಾರಿಗಳು ಅದನ್ನು ನಿರ್ವಹಿಸದೆ ಅನ್ಯಮಾರ್ಗವಿಲ್ಲ. ಅಧಿನಿಯಮದ ಪ್ರಕಾರ, ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಒದಗಿದಲ್ಲಿ ಅದರ ಬಗ್ಗೆ ದೂರುಗಳನ್ನು ಸ್ವೀಕರಿಸಬೇಕಾಗುತ್ತದೆ. ಜೊತೆಗೆ, ದೂರುಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದು ಜಿಲ್ಲಾಧಿಕಾರಿಗಳ ಜವಾಬ್ದಾರಿ.

Image
ಸಾಂದರ್ಭಿಕ ಚಿತ್ರ

ಗ್ರಾಹಕರ ಹಕ್ಕುಗಳ ಉಲ್ಲಂಘನೆ ಆಗಿದ್ದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಅಲ್ಲದೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಸೂಚನೆಯ ಮೇರೆಗೆ ಗ್ರಾಹಕರ ಹಕ್ಕುಗಳ ಉಲ್ಲಂಘನೆ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ಅಥವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕಿದೆ. ಜಿಲ್ಲಾಧಿಕಾರಿಗಳು ಗ್ರಾಹಕರ ವೈಯಕ್ತಿಕ ದೂರನ್ನು ಸ್ವೀಕರಿಸುವುದಿಲ್ಲ. ಒಂದು ಸಮುದಾಯಕ್ಕೆ ಅಥವಾ ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ತೊಂದರೆ ಆಗಿದ್ದಲ್ಲಿ ಅದನ್ನು ಮಾತ್ರ ಜಿಲ್ಲಾಧಿಕಾರಿಗಳು ಪುರಸ್ಕರಿಸುತ್ತಾರೆ.

ಗ್ರಾಹಕ ಸಂರಕ್ಷಣೆ ವಿಷಯದಲ್ಲಿ ಜಿಲ್ಲಾಧಿಕಾರಿಗಳ ಜವಾಬ್ದಾರಿ ಹೆಚ್ಚಿರುವ ಹಿನ್ನೆಲೆಯಲ್ಲಿ ಅವರು ಕೈಗೊಳ್ಳಬಹುದಾದ ಕೆಲವು ಕ್ರಮಗಳನ್ನು ನೋಡಬಹುದು. ಮೊದಲನೆಯದಾಗಿ, ಜಿಲ್ಲಾಧಿಕಾರಿಗಳು ಜಿಲ್ಲಾ ಪರಿಷತ್ತಿನ ಸಭೆಯನ್ನು ಕಾಲಕಾಲಕ್ಕೆ ನಡೆಸುತ್ತಿರಬೇಕು. ಅಗತ್ಯವಿದ್ದಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಿದರೂ ಅಭ್ಯಂತರವಿಲ್ಲ. ಪರಿಷತ್ತಿನ ಸದಸ್ಯರಿಗೆ ಗ್ರಾಹಕ ಸಂರಕ್ಷಣೆಯ ಬಗ್ಗೆ ಬುನಾದಿ ತರಬೇತಿ ನೀಡುವುದು ಅಗತ್ಯ. ಅದಕ್ಕೆ ಬೇಕಾದ ಪಠ್ಯ ಸಾಮಗ್ರಿ, ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ತರಬೇತಿ ನೀಡಬೇಕು. ಜಿಲ್ಲಾ ತರಬೇತಿ ಕೇಂದ್ರಕ್ಕೆ ಪರಿಷತ್ತಿನ ಸದಸ್ಯರನ್ನು ಕಳುಹಿಸಬಹುದು. ಗ್ರಾಹಕ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಅದನ್ನು ತನಿಖೆ ಮಾಡುವಲ್ಲಿ ಸದಸ್ಯರ ಸಲಹೆ ಪಡೆಯಬಹುದು. ಒಟ್ಟಾರೆ, ಜಿಲ್ಲಾಧಿಕಾರಿಗಳು ಒಂದಿಷ್ಟು ಸಮಯ ಒದಗಿಸಿಕೊಂಡು ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ಪಾತ್ರ ವಹಿಸಬೇಕಿದೆ.

ಮುಖ್ಯ ಚಿತ್ರ: ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
0 ವೋಟ್