ಅರ್ಥ ಪಥ | ಬೇಕಿರುವುದು ನಿಷೇಧವಲ್ಲ, ಒಳ್ಳೆಯ ಆಹಾರ ನೀತಿ

Piyush Goyal

ಕೇಂದ್ರ ಸರ್ಕಾರವು ಇತ್ತೀಚೆಗೆ ಗೋಧಿ ರಫ್ತು ನಿಷೇಧಿಸುವ ತೀರ್ಮಾನ ಮಾಡಿದೆ. ಗೋಧಿಯಿಂದ ಈರುಳ್ಳಿಯವರೆಗೆ ಅನೇಕ ಪದಾರ್ಥಗಳ ವಿಷಯದಲ್ಲಿ ಈಗ ರಫ್ತು ನಿಷೇಧ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇದರಿಂದ ಸಮಸ್ಯೆಗೆ ಪರಿಹಾರ ಸಿಕ್ಕಿತೇ? ಸರ್ಕಾರದ ಇಂಥ ನಡೆಗಳಿಂದ ಲಾಭವಾಗಿರುವುದು ವ್ಯಾಪಾರಿಗಳಿಗೆ ಮಾತ್ರ. ರೈತರ ಪಾಲಿಗೆ ಇನ್ನಷ್ಟು ಸಂಕಟ

ಮೇ 12ರಂದು, "ಭಾರತವು ಮೊರಾಕೊ, ಟ್ಯುನಿಷಿಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಥಾಯ್ಲೆಂಡ್, ವಿಯೆಟ್ನಾಂ, ಟರ್ಕಿ, ಅಲ್ಜೀರಿಯಾ ಹಾಗೂ ಲೆಬನಾನಿಗೆ ವ್ಯಾಪಾರಿ ಪ್ರತಿನಿಧಿಗಳನ್ನು ಕಳುಹಿಸಿ, ಗೋಧಿಯ ರಫ್ತನ್ನು ಹೆಚ್ಚಿಸುವ ಸಾಧ್ಯತೆಗಳನ್ನು ತಿಳಿಯಲು ಪ್ರಯತ್ನಿಸುತ್ತಿದೆ,” ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯದ ಪ್ರಕಟಣೆ ತಿಳಿಸಿತು. ಆದರೆ, ಮೇ 13ರಂದು, "ದೇಶದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಗೋಧಿಯ ರಫ್ತನ್ನು ತಕ್ಷಣದಿಂದ ನಿಷೇಧಿಸಲಾಗಿದೆ," ಎಂದು ಸರ್ಕಾರ ಘೋಷಿಸಿತು.

ಇದಕ್ಕೆ ಸರಿಯಾಗಿ ಒಂದು ತಿಂಗಳ ಮೊದಲು, ಅಂದರೆ ಏಪ್ರಿಲ್ 13ರಂದು ಪ್ರಧಾನ ಮಂತ್ರಿಗಳು, "ಜಾಗತಿಕ ವ್ಯಾಪಾರ ಸಂಸ್ಥೆ (ಡಬ್ಲುಟಿಒ) ಅನುಮತಿ ನೀಡಿದರೆ ಇಡೀ ಜಗತ್ತಿಗೆ ನಾಳೆಯಿಂದಲೇ ಗೋಧಿಯನ್ನು ಪೂರೈಸುವುದಕ್ಕೆ ಸಿದ್ಧರಿದ್ದೇವೆ. ನಮ್ಮ ರೈತರು ಇಡೀ ಜಗತ್ತಿಗೆ ಬೇಕಾದಷ್ಟು ಗೋಧಿ ಬೆಳೆದಿದ್ದಾರೆ. ಜಗತ್ತಿಗೆ ಆಹಾರ ಸರಬರಾಜು ಮಾಡುವುದಕ್ಕೆ ಅನುಮತಿ ಬಾಕಿ,” ಎಂದು ಘೋಷಿಸಿದ್ದರು. ಇದಾದ ಒಂದೇ ತಿಂಗಳಿನಲ್ಲಿ ನಮ್ಮಲ್ಲಿ ಸಾಕಷ್ಟು ಗೋಧಿ ಇಲ್ಲ ಎಂಬ ಕಾರಣ ನೀಡಿ ರಫ್ತು ನಿಷೇಧಿಸಲಾಯಿತು.

ಗೋಧಿಯ ರಫ್ತನ್ನು ನಿಷೇಧಿಸುವುದು ತಪ್ಪಲ್ಲ. ಹಲವು ದೇಶಗಳು ಈ ಕೆಲಸ ಮಾಡಿವೆ. ಒಂದು ದೇಶಕ್ಕೆ ಆ ಸ್ವಾಯತ್ತತೆ ಇರಬೇಕು. ಆದರೆ, ಹೀಗೆ ದಿಢೀರನೆ ನಿಲುವುಗಳನ್ನು ಬದಲಿಸುತ್ತ ಹೋಗುವುದು ಒಳ್ಳೆಯದಲ್ಲ. ಇದು ರೈತರಿಗೆ, ವ್ಯಾಪಾರಿಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಜೊತೆಗೆ, ಸರ್ಕಾರ ನಿಷೇಧಕ್ಕೆ ಕೊಟ್ಟ ಕಾರಣಗಳಲ್ಲಿ ಹೊಸತೇನೂ ಇಲ್ಲ. ಇವೆಲ್ಲ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು. ಬೆಲೆ ಏರಿಕೆ ಉಕ್ರೇನ್ ಯುದ್ಧಕ್ಕೂ ಮೊದಲೇ ಶುರುವಾಗಿತ್ತು. ಈ ವರ್ಷ ಉತ್ಪಾದನೆ ಕಡಿಮೆಯಾಗುತ್ತದೆ ಅನ್ನುವುದೂ ಮೊದಲೇ ಗೊತ್ತಿತ್ತು. ಗೋಧಿಯ ಸಂಗ್ರಹಣೆಯೂ ಕಡಿಮೆಯಾಗುತ್ತದೆ ಅನ್ನುವುದನ್ನು ನಿರೀಕ್ಷಿಸಬಹುದಿತ್ತು. 440 ಲಕ್ಷ ಟನ್ ಸಂಗ್ರಹಿಸಬೇಕೆನ್ನುವ ಲೆಕ್ಕಾಚಾರವಿತ್ತು. ಆದರೆ, ಸಂಗ್ರಹವಾಗಿದ್ದು ಕೇವಲ 195 ಲಕ್ಷ ಟನ್. ಹಾಗಾಗಿ, ರಫ್ತಿಗೆ ಉಳಿದಿರುವುದು ಕಡಿಮೆ ಅನ್ನುವುದು ನಿಜ. ಎಷ್ಟೋ ವರ್ಷಗಳ ನಂತರ ರೈತರಿಗೆ ಒಳ್ಳೆಯ ಬೆಲೆ ಸಿಕ್ಕಿತ್ತು ಅನ್ನುವುದನ್ನೂ ಗಮನಿಸಬೇಕು. ಅಪರೂಪಕ್ಕೆ ರೈತರಿಗೆ ಒಂದು ಟನ್‌ ಗೋಧಿಗೆ ಕನಿಷ್ಠ ಬೆಂಬಲ ಬೆಲೆಗಿಂತ 300 ರೂಪಾಯಿ ಹೆಚ್ಚು ಸಿಗುತ್ತಿತ್ತು. ಸರ್ಕಾರ ರೈತರಿಗೆ 300 ರೂಪಾಯಿ ಬೋನಸ್ ಬೆಲೆ ಕೊಟ್ಟು ಹೆಚ್ಚು ಗೋಧಿಯನ್ನು ಕೊಳ್ಳಬಹುದಿತ್ತು. ಹಾಗೆ ಮಾಡದ ಸರ್ಕಾರ, ಖಾಸಗಿ ವ್ಯಾಪಾರಿಗಳಿಗೆ ಗೋಧಿಯನ್ನು ಸಂಗ್ರಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಕೊನೆಗೆ ಸಾಕಷ್ಟು ಗೋಧಿ ಸಂಗ್ರಹವಾಗಿಲ್ಲ ಎಂದು ಗೋಧಿಯ ರಫ್ತನ್ನು ನಿಷೇಧಿಸಿತು. ಇದರಿಂದ ರೈತರ ಆದಾಯಕ್ಕೆ ಹೊಡೆತ ಬಿತ್ತು. ಭಾರತದ ಮೇಲಿನ ನಂಬಿಕೆಗೂ ಪೆಟ್ಟು ಬಿತ್ತು. ಆಹಾರ ಪದಾರ್ಥಗಳ ಬೆಲೆಯೂ ಇಳಿಯಲಿಲ್ಲ. ದಿಢೀರನೆ ರಫ್ತನ್ನು ನಿಷೇದಿಸುವ ಬದಲು, ಕೆಲವು ನಿಯಂತ್ರಣಗಳನ್ನು ಹೇರಬಹುದಿತ್ತು.

Image
Wheat 1

ಭಾರತ ಇತ್ತೀಚೆಗೆ ಗೋಧಿ ರಫ್ತು ಮಾಡಲು ಪ್ರಾರಂಭಿಸಿತ್ತು. ಉಕ್ರೇನ್ ಯುದ್ಧದಿಂದ ಒಂದಿಷ್ಟು ಹೆಚ್ಚು ರಫ್ತು ಮಾಡುವ ಅವಕಾಶ ಸಿಕ್ಕಿತ್ತು. ಸಕ್ಕರೆಯ ವಿಷಯದಲ್ಲೂ ಹೀಗೆಯೇ ಆಯಿತು. ಜಗತ್ತಿನಲ್ಲಿ ಒಟ್ಟಾರೆ ಸುಮಾರು 640 ಲಕ್ಷ ಟನ್ ಸಕ್ಕರೆ ರಫ್ತಾಗುತ್ತದೆ. ಭಾರತ ಕಳೆದ ವರ್ಷ 80 ಲಕ್ಷ ಟನ್ ಸಕ್ಕರೆ ರಫ್ತು ಮಾಡಿತ್ತು. ಈ ವರ್ಷ 350 ಲಕ್ಷ ಟನ್ ಉತ್ಪಾದನೆ ಆಗಬಹುದೆನ್ನುವ ನಿರೀಕ್ಷೆ ಇದೆ. ರಫ್ತು ಮಾಡಿಯಾದ ಮೇಲೂ 60 ಲಕ್ಷ ಟನ್ ಉಳಿಯುತ್ತದೆ. ಹಬ್ಬದ ಸಮಯದಲ್ಲಿ ಬೆಲೆಗಳು ಏರಬಾರದು ಅನ್ನುವ ಕಾರಣಕ್ಕೆ ರಫ್ತನ್ನು 100 ಲಕ್ಷ ಟನ್‍ಗಳಿಗೆ ಮಿತಿಗೊಳಿಸಲಾಗಿದೆ.

2016ರಲ್ಲೂ ಹೀಗಾಗಿತ್ತು. ಧಾನ್ಯಗಳಿಗೆ ಒಳ್ಳೆಯ ಬೆಲೆ ಇತ್ತು. ರೈತರಿಗೆ ಒಳ್ಳೆಯ ಬೆಲೆ ಸಿಗುತ್ತಿತ್ತು. ಆದರೆ, ಆಗ ಸರ್ಕಾರ ಮೊಜಾಂಬಿಕ್ ಮತ್ತಿತರ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡಿತು. ಅದರಿಂದ ಧಾನ್ಯಗಳ ಬೆಲೆ ಕುಸಿಯಿತು. ಆಗಿನಿಂದ ರೈತರು ಆಹಾರ ಧಾನ್ಯಗಳನ್ನು ಬೆಳೆಯಲು ಹಿಂದೇಟು ಹಾಕತೊಡಗಿದರು. ಹೀಗೇ ಮಾಡಿಕೊಂಡು 1990ರಲ್ಲಿ ಅಡುಗೆ ಎಣ್ಣೆಯ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದ ನಾವು, ಈಗ ಆಮದನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ. ಇದಕ್ಕೆ ನಮ್ಮ ಕೆಟ್ಟ ವ್ಯಾಪಾರ ನೀತಿ ಬಹುಮಟ್ಟಿಗೆ ಕಾರಣ. ಒಂದು ವರ್ಷ ರಫ್ತು ಮಾಡುತ್ತೇವೆ. ಇನ್ನೊಂದು ವರ್ಷ ನಿಷೇಧಿಸುತ್ತೇವೆ. ಇದು ಗೋಧಿಯಿಂದ ಈರುಳ್ಳಿಯವರೆಗೆ ಅನೇಕ ಪದಾರ್ಥಗಳ ವಿಷಯದಲ್ಲಿ ಆಗುತ್ತಿದೆ.

Image
Wheat 4

ಇನ್ನು, ಆಹಾರ ಪದಾರ್ಥಗಳ ಬೆಲೆಯ ವಿಷಯಕ್ಕೆ ಬರೋಣ. ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಪ್ರಧಾನವಾಗಿ ಉಕ್ರೇನ್ ಯುದ್ಧವನ್ನು ದೂಷಿಸಲಾಗುತ್ತದೆ. ಯುದ್ಧದಿಂದ ಪೂರೈಕೆಗೆ ತೊಂದರೆಯಾಗಿದೆ ಅನ್ನುವುದು ನಿಜ. ಆದರೆ, ಅದರಿಂದಲೇ ಬೆಲೆ ಇಷ್ಟೊಂದು ಏರಿದೆ ಅನ್ನೋದು ಸರಿಯಲ್ಲ. ಏಕೆಂದರೆ, ಒಟ್ಟಾರೆ ಗೋಧಿಯ ಉತ್ಪಾದನೆಯಲ್ಲಿ ಅಂತಹ ಇಳಿಕೆಯೇನೂ ಆಗಿಲ್ಲ. 2021ಕ್ಕೆ ಹೋಲಿಸಿದರೆ 2022ರಲ್ಲಿ ಕೇವಲ 60 ಲಕ್ಷ ಟನ್ ಕಡಿಮೆಯಾಗಿದೆ. ಅದು ಒಟ್ಟಾರೆ ಜಾಗತಿಕ ಉತ್ಪಾದನೆಯ ಶೇಕಡ ಒಂದರಷ್ಟೂ ಅಲ್ಲ. 2018ರಿಂದ 2020ರವರೆಗಿನ ಮೂರು ವರ್ಷದ ಸರಾಸರಿಗೆ ಹೋಲಿಸಿದರೆ, 2022ರಲ್ಲಿ ಉತ್ಪಾದನೆ ಶೇಕಡ 2ರಷ್ಟು ಜಾಸ್ತಿಯೇ ಆಗಿದೆ ಎಂದು ಅಂದಾಜು ಮಾಡಲಾಗಿದೆ. ಅಷ್ಟೇ ಅಲ್ಲ, ಗೋಧಿಯ ಬಳಕೆಗಿಂತ ಉತ್ಪಾದನೆಯೇ ಹೆಚ್ಚಿದೆ ಅನ್ನುವ ಅಂದಾಜು ಕೂಡ ಇದೆ.

ಇದರಲ್ಲಿ ಆಶ್ಚರ್ಯವೇನೂ ಇಲ್ಲ. 2021ರಲ್ಲಿ ಜಗತ್ತಿನ ಒಟ್ಟಾರೆ ಗೋಧಿ ಉತ್ಪಾದನೆಯಲ್ಲಿ ರಷ್ಯಾ ಮತ್ತು ಉಕ್ರೇನಿನ ಪಾಲು ಶೇಕಡ 14ಕ್ಕಿಂತ ಕಡಿಮೆ. ಸಾಮಾನ್ಯವಾಗಿ ಒಂದು ಕಡೆ ಉತ್ಪಾದನೆ ಕಡಿಮೆಯಾದರೆ, ಇನ್ನೆಲ್ಲೋ ಜಾಸ್ತಿಯಾಗಿ ಒಟ್ಟಾರೆ ಉತ್ಪಾದನೆ ಸುಮಾರಾಗಿ ಅಷ್ಟೇ ಉಳಿಯುತ್ತದೆ. 2007-08ರಲ್ಲೂ ಹೀಗೆಯೇ ಆಗಿತ್ತು. ಈಗಲೂ ಒಟ್ಟಾರೆ ಗೋಧಿಯ ಪೂರೈಕೆ ಮತ್ತು ಬೇಡಿಕೆಯಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಹಾಗಾದರೆ, ಗೋಧಿಯ ಬೆಲೆ ಅಷ್ಟೊಂದು ಏರುವುದಕ್ಕೆ ಕಾರಣವೇನು?
ಉಕ್ರೇನ್ ಯುದ್ಧದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅದರಿಂದ ಬೆಲೆ ಏರಿಕೆಯಾಗುತ್ತದೆ ಅನ್ನುವುದು ಒಂದು ಸಾರ್ವಜನಿಕ ಗ್ರಹಿಕೆಯಾಗಿಬಿಟ್ಟಿದೆ. ಹಾಗಾಗಿ, ಬೆಲೆ ಏರಿಕೆಯನ್ನು ಯಾರೂ ಪ್ರಶ್ನಿಸುತ್ತಿಲ್ಲ. ಈ ಮನಸ್ಥಿತಿಯನ್ನು ಬಳಸಿಕೊಂಡು ವ್ಯಾಪಾರಿಗಳು ಆಹಾರ ಪದಾರ್ಥಗಳ ಬೆಲೆಗಳನ್ನು ವಿಪರೀತ ಏರಿಸಿದ್ದಾರೆ ಮತ್ತು ವಿಪರೀತ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದು ಕೂಡ ಬೆಲೆ ಏರಿಕೆಗೆ ಒಂದು ಮುಖ್ಯ ಕಾರಣ ಅನ್ನುವುದನ್ನು ಗಮನಿಸಬೇಕು.

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಪ್ರೀತಿ, ಸಹನೆ ನಮ್ಮ ಆರ್ಥಿಕತೆಯ ಬುನಾದಿ ಆಗದಿದ್ದರೆ ಮುಂದಿನ ಹಾದಿ ಕಠಿಣ

ಬೆಲೆ ಏರಿಕೆಗೆ ಇನ್ನೊಂದು ಕಾರಣವೆಂದರೆ, ಫ್ಯೂಚರ್ ಮಾರುಕಟ್ಟೆಯಲ್ಲಿ (ವಾಯಿದಾ ವಹಿವಾಟು) ಗೋಧಿಯ ಬೆಲೆ ವಿಪರೀತ ಏರಿರುವುದು. ಮುಂದಿನ ಒಂದು ನಿರ್ದಿಷ್ಟ ದಿನಾಂಕದಂದು, ಮೊದಲೇ ಗೊತ್ತು ಮಾಡಿದ ಬೆಲೆಗೆ ವಸ್ತುಗಳನ್ನು ಮಾರುವುದಕ್ಕೆ ಮತ್ತು ಕೊಳ್ಳುವುದಕ್ಕೆ ಮಾಡಿಕೊಂಡ ಒಪ್ಪಂದವನ್ನು ವಾಯಿದಾ ವಹಿವಾಟು ಅನ್ನುತ್ತಾರೆ. 2022ರ ಮೇ 11ರ ನಂತರ ಗೋಧಿಯ ವಾಯಿದಾ ವಹಿವಾಟಿನಲ್ಲಿ ಗೋಧಿ ಬೆಲೆ ತೀವ್ರವಾಗಿ ಏರಿರುವುದನ್ನು ಕಾಣಬಹುದು. ಸಟ್ಟಾ ವ್ಯಾಪಾರದಲ್ಲಿ ಬೆಲೆ ಏರುವುದಕ್ಕೆ ನಿಜವಾಗಿ ಗೋಧಿಯ ಬೆಲೆ ಏರಬೇಕಾಗಿಲ್ಲ. ಗೋಧಿಯ ಬೆಲೆ ಏರುತ್ತಿದೆ ಎನ್ನುವ ಸುದ್ದಿಯೇ ಸಾಕು. ಸಮೂಹ ಸನ್ನಿ ಸಟ್ಟಾ ವ್ಯಾಪಾರದ ದೊಡ್ಡ ಗುಳ್ಳೆಗಳನ್ನು ಸೃಷ್ಟಿಸಿಬಿಡುತ್ತದೆ. ವಾಸ್ತವದಲ್ಲಿ ಅದಕ್ಕೆ ಯಾವುದೇ ಆಧಾರವೂ ಇರುವುದಿಲ್ಲ. ವಾಯಿದಾ ವಹಿವಾಟಿನಲ್ಲಿ ತೊಡಗಿರುವವರಿಗೆ ಗೋಧಿಯನ್ನು ಕೊಳ್ಳುವುದರಲ್ಲಿ ಆಸಕ್ತಿ ಇಲ್ಲ. ಕೇವಲ ಲಾಭ ಮಾಡಿಕೊಳ್ಳುವುದಷ್ಟೇ ಅವರ ಉದ್ದೇಶ. ಅವರದು ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಆಹಾರ ಪದಾರ್ಥಗಳು ಕೈಗೆಟಕದಂತೆ ಮಾಡಿ ಹಸಿವಿಗೆ ತಳ್ಳುವ ಜೂಜಾಟ.

ಇದೆಲ್ಲ ಕಾರಣದಿಂದಾಗಿಯೇ, ಗೋಧಿಯ ರಫ್ತನ್ನು ನಿಷೇಧಿಸಿದರೂ ಅದರ ಬೆಲೆಯಲ್ಲಿ ಗಣನೀಯವಾದ ಇಳಿಕೆಯಾಗಿಲ್ಲ. ಇದನ್ನು ಸರ್ಕಾರ ಗುರುತಿಸದೆ ಹೋದರೆ, ಬೆಲೆ ಏರಿಕೆಯನ್ನು ತಡೆಯುವಲ್ಲಿ ಸರ್ಕಾರ ರೂಪಿಸುವ ಸಾರ್ವಜನಿಕ ನೀತಿ ವಿಫಲವಾಗುತ್ತದೆ. ಇದನ್ನು ಕೇವಲ ಆಮದು-ರಫ್ತಿನ ವಿಷಯವನ್ನಾಗಿ ನೋಡಬಾರದು. ಹೆಚ್ಚು ಸಮಗ್ರ, ಸಮಂಜಸ ಹಾಗೂ ಪರಿಣಾಮಕಾರಿಯಾದ ಕೃಷಿ ನೀತಿಯನ್ನು ರೂಪಿಸುವ ಕಡೆ ಸರ್ಕಾರ ಗಮನ ಕೊಡಬೇಕು. ದಿಢೀರ್ ನಿರ್ಧಾರಗಳಿಂದ ತೊಂದರೆಯೇ ಹೆಚ್ಚು.

Image
Wheat 2

ಬೆಲೆ ನಿಯಂತ್ರಣದ ವಿಷಯಕ್ಕೆ ಬಂದಾಗ ಇನ್ನೊಂದು ವಿಷಯವನ್ನು ಗಮನಿಸಬೇಕು. ಸ್ವಾತಂತ್ರ್ಯ ಬಂದಾಗಿನಿಂದ ನಾವು ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದಕ್ಕೆ ಹೋಗಿ ರೈತರನ್ನು ಬಲಿ ಕೊಡುತ್ತಿದ್ದೇವೆ. ಈಗ ಆಗಿದ್ದೂ ಅದೇ. ಬೆಲೆ ಏರಿಕೆಯನ್ನು ನಿಯಂತ್ರಿಸಲು ರಫ್ತಿನ ಮೇಲೆ ನಿಷೇಧ ಹೇರಿದ್ದರಿಂದ ರೈತರ ಆದಾಯಕ್ಕೆ ಕೊಕ್ಕೆ ಬಿತ್ತು. ಅಡುಗೆ ಎಣ್ಣೆಯ ಉದಾಹರಣೆ ನೋಡಿ. ಅದರ ಬೆಲೆ ಏರತೊಡಗಿದ ಕೂಡಲೇ ತಾಳೆಎಣ್ಣೆಯ ಮೇಲಿನ ಆಮದು ಶುಲ್ಕ ಇಳಿಸಲಾಯಿತು. ಅದರಿಂದ ಬೆಲೆ ಒಂದಿಷ್ಟು ಇಳಿಯಿತು. ಗ್ರಾಹಕರಿಗೆ ಸ್ವಲ್ಪ ಅನುಕೂಲವಾಯಿತು. ಆದರೆ, ರೈತರಿಗೆ ಅಗ್ಗದ ಆಮದಿನ ಜೊತೆ ಪೈಪೋಟಿ ಮಾಡುವುದಕ್ಕೆ ಆಗಲಿಲ್ಲ. ನಷ್ಟ ಅನುಭವಿಸಬೇಕಾಯಿತು. ಅವರಿಗೆ ಒಳ್ಳೆಯ ಬೆಲೆ ಸಿಕ್ಕಿದ್ದರೆ ಮುಂದೆ ಎಣ್ಣೆ ಬೀಜಗಳನ್ನು ಬೆಳೆಯುತ್ತಿದ್ದರು. ಅದು ಆಹಾರ ಧಾನ್ಯಗಳಿರಲಿ, ಖಾದ್ಯ ತೈಲವಿರಲಿ, ನಮ್ಮ ನೀತಿ ಗ್ರಾಹಕರ ಪರವಾಗಿರುತ್ತದೆ. ರೈತರಿಗೆ ತೊಂದರೆ ಮಾಡುತ್ತಿರುತ್ತದೆ. ಇದರಿಂದ ಆಹಾರ ಸ್ವಾವಲಂಬನೆಗೂ ಹೊಡೆತ ಬೀಳುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ರೈತರ ಆದಾಯ ದುಪ್ಪಟ ಮಾಡುತ್ತೇವೆ ಅನ್ನುವುದು ಕೇವಲ ಘೋಷಣೆ ಆಗಿಬಿಡುತ್ತದೆ. ಸಮೀಕ್ಷೆಯೊಂದರ ಪ್ರಕಾರ, 2018-19ರಲ್ಲಿ ಕೃಷಿಯಿಂದ ರೈತರಿಗೆ ದಿನಕ್ಕೆ ಸಿಕ್ಕಿದ್ದು ಕೇವಲ 127 ರೂಪಾಯಿ ಮಾತ್ರ. ಅವರಿಗೆ ಆರೋಗ್ಯ, ಶಿಕ್ಷಣ, ಕೃಷಿಗೆ ಬೇಕಾದ ಗೊಬ್ಬರ, ಬಿತ್ತನೆ ಬೀಜ ಇತ್ಯಾದಿ ಖರ್ಚು ಇರುತ್ತದೆ. ಕನಿಷ್ಠ ಬೆಂಬಲ ಬೆಲೆಯಿಂದ ಅವರಿಗೆ ಕೃಷಿಯ ಖರ್ಚನ್ನು ಭರಿಸುವುದಕ್ಕೂ ಆಗುತ್ತಿಲ್ಲ. ಸರ್ಕಾರದ ಹೊಸ ಆರ್ಥಿಕ ನೀತಿಯಿಂದ ಮುಂದೆ ಇನ್ನೂ ಕಷ್ಟವಾಗಬಹುದು ಅನ್ನುವ ಆತಂಕದಿಂದಲೇ ರೈತರು ಅಷ್ಟೊಂದು ತೀವ್ರವಾಗಿ ಹೋರಾಡಿದ್ದು. ಸರ್ಕಾರ ಆಹಾರ ಧಾನ್ಯಗಳನ್ನು ಕೊಳ್ಳುವುದರಲ್ಲಿ ಅಷ್ಟೇನೂ ಉತ್ಸುಕವಾಗಿಲ್ಲ ಅನ್ನುವ ಆತಂಕ ರೈತರನ್ನು ಕಾಡುತ್ತಿದೆ.

Image
Wheat 3

ಇಂದು ಆಹಾರದ ಬಿಕ್ಕಟ್ಟಿನ ಆತಂಕ ಜಗತ್ತನ್ನು ಆವರಿಸಿದೆ. ಈ ಸಮಯದಲ್ಲಿ ಆಹಾರದ ಸುರಕ್ಷತೆಗೆ ಗಮನ ಕೊಡುವುದು ಅತ್ಯವಶ್ಯ. ಆಹಾರದ ಸುರಕ್ಷತೆಯನ್ನು ಆಹಾರದ ಸ್ವ್ವಾವಲಂಬನೆಯ ಮೂಲಕ ಸಾಧಿಸಬೇಕು. ಆಮದಿನ ಮೂಲಕ ಆಹಾರದ ಸುರಕ್ಷತೆಯನ್ನು ಸಾಧಿಸುವುದಕ್ಕೆ ಸಾಧ್ಯವಿಲ್ಲ. ಅದು ಒಳ್ಳೆಯ ಪ್ರವೃತಿಯಲ್ಲ. ಅದೇ ಇಂದಿನ ಬಹುತೇಕ ಸಮಸ್ಯೆಗಳಿಗೆ ಕಾರಣವಾಗಿದೆ.

ಇದರ ಜೊತೆಗೆ, ಸಾಮಾನ್ಯ ಜನರಿಗೆ ಆಹಾರ ಸಿಗುವಂತಾಗಬೇಕು. ಅದಕ್ಕಾಗಿ ಸಾರ್ವಜನಿಕ ಪಡಿತರ ಪದ್ಧತಿಯನ್ನು ಪರಿಣಾಮಕಾರಿಯಾಗಿಸಬೇಕು. ಕೋವಿಡ್ ಸಮಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಲಕ್ಷಾಂತರ ಜನರ ಜೀವ ಉಳಿಸಿದೆ. 2021-22ರಲ್ಲಿ 1,023 ಲಕ್ಷ ಟನ್ ಅಕ್ಕಿ ಮತ್ತು ಗೋಧಿಯನ್ನು ಸಂಗ್ರಹಿಸಿ ವಿವಿಧ ಯೋಜನೆಗಳ ಮೂಲಕ ವಿತರಿಸಲಾಗಿತ್ತು. ಸಾರ್ವಜನಿಕ ಪಡಿತರ ಪದ್ಧತಿ ಹಣದುಬ್ಬರ ತಡೆಯುವಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಪಡಿತರ ಪದ್ಧತಿ ಪರಿಣಾಮಕಾರಿಯಾಗಿ ಜಾರಿಯಲ್ಲಿರುವ ಕೇರಳ ಮತ್ತು ತಮಿಳುನಾಡಿನಲ್ಲಿ ಹಣದುಬ್ಬರದ ದರ ಕಡಿಮೆ ಇದೆ. ಕೇರಳದಲ್ಲಿ 2022ರ ಏಪ್ರಿಲ್‌ನಲ್ಲಿ ಅದು ಶೇಕಡ 4.82 ಮತ್ತು ತಮಿಳುನಾಡಿನಲ್ಲಿ ಶೇಕಡ 5.64 ಇತ್ತು.

ಜೊತೆಗೆ, ಜನರಿಗೆ ಪೌಷ್ಟಿಕ ಆಹಾರ ಬೇಕು. ನಮ್ಮಲ್ಲಿ ಲಕ್ಷಾಂತರ ಬಡವರಿಗೆ ಬೇಳೆಕಾಳುಗಳನ್ನಾಗಲೀ, ಮೊಟ್ಟೆ, ಮಾಂಸ ಇತ್ಯಾದಿಗಳನ್ನಾಗಲೀ ಕೊಳ್ಳಲು ಆಗುತ್ತಿಲ್ಲ. ಹಾಗಾಗಿ, ಆಹಾರ ನೀತಿ ವೈವಿಧ್ಯತೆಯ ಕಡೆಗೂ ಗಮನ ಕೊಡಬೇಕು.

ಒಟ್ಟಾರೆಯಾಗಿ ಇಂದು ರೈತರಿಗೆ ಒಳ್ಳೆಯ ಬೆಲೆಯನ್ನು ಕೊಡುವ, ಆಹಾರ ಸ್ವಾವಲಂಬನೆಯನ್ನು ಸಾಧಿಸುವ ಮೂಲಕ ಆಹಾರ ಸುರಕ್ಷತೆಯನ್ನು ಒದಗಿಸುವ ಸಮಗ್ರ ಕೃಷಿ ನೀತಿ ಬೇಕಾಗಿದೆ.

ಮುಖ್ಯ ಚಿತ್ರ: ಕೇಂದ್ರ ವಾಣಿಜ್ಯ ಸಚಿವ ಪೀಯುಷ್ ಗೋಯಲ್
ನಿಮಗೆ ಏನು ಅನ್ನಿಸ್ತು?
0 ವೋಟ್