ಗ್ರಾಹಕಾಯಣ | ಕ್ರಿಪ್ಟೋ ಕರೆನ್ಸಿಯಂತಹ ಅಪಾಯಕಾರಿ ಹೂಡಿಕೆ ಸುತ್ತ...

ಜಾಹಿರಾತುಗಳಲ್ಲಿ ಕರೆನ್ಸಿ, ಸೆಕ್ಯೂರಿಟೀಸ್, ಕಸ್ಟೊಡಿಯನ್ ಮತ್ತು ಡೆಪಾಸಿಟರೀಸ್ ಎಂಬ ಪದಗಳನ್ನು ಬಳಸುವಂತಿಲ್ಲ. ಈ ಪದಗಳೆಲ್ಲವೂ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದೆ ಎಂಬ ಅಭಿಪ್ರಾಯ ಹೂಡಿಕೆದಾರರಲ್ಲಿದೆ. ಕ್ರಿಪ್ಟೋ ಕರೆನ್ಸಿ ಜೊತೆ ಅದನ್ನು ಸೇರಿಸಿದರೆ, ಕ್ರಿಪ್ಟೋ ಕರೆನ್ಸಿ ಸಹ ನಿಯಂತ್ರಣಕ್ಕೆ ಒಳಪಟ್ಟಿದೆ ಎಂಬ ತಪ್ಪು ಅಭಿಪ್ರಾಯ ಹೂಡಿಕೆದಾರರಲ್ಲಿ ಮೂಡಬಹುದು

ಮಾರ್ಗ ಯಾವುದಾದರೇನು, ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಹಣಗಳಿಸುವ ಗುರಿ ಹೊಂದಿರುವ ಇಂದಿನ ಜನಾಂಗ ಕ್ರಿಪ್ಟೋ ಕರೆನ್ಸಿ ಮತ್ತು ಎನ್‌ಎಫ್‌ಟಿ [ನಾನ್ ಫಂಗಿಬಲ್ ಟೋಕನ್ಸ್]ಯಲ್ಲಿ ಹಣ ತೊಡಗಿಸುತ್ತಿದ್ದಾರೆ. ಕೇವಲ ನಾಲ್ಕೈದು ವರ್ಷಗಳ ಹಿಂದೆ ಯಾರಿಗೂ ತಿಳಿಯದಿದ್ದ ಈ ಮಾದರಿ ಕರೆನ್ಸಿಗಳು, ಈಗ ಹೂಡಿಕೆದಾರರನ್ನು ಸೆಳೆದಿವೆ. ವಿಶೇಷವಾಗಿ ಯುವ ಜನಾಂಗ ಕ್ರಿಪ್ಟೋ ಕರೆನ್ಸಿಯತ್ತ ಹೊರಳಿರುವುದನ್ನು ಕಾಣಬಹುದು.

ಇದೊಂದು ಹೊಸ ರೀತಿಯ ಹೂಡಿಕೆ ವಿಧಾನವಾಗಿದ್ದು, ಗ್ರಾಹಕರಲ್ಲಿ ಇದರ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ. ಜೊತೆಗೆ ಈ ಹೊಸ ಹೂಡಿಕೆ ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲವಾದ ಕಾರಣ ಮಾರುಕಟ್ಟೆಯ ಏರಿಳಿತಗಳಿಗೆ ತಕ್ಕಂತೆ ಅದರ ಬೆಲೆ ಇರುತ್ತದೆ. ಮುಖ್ಯವಾಗಿ ಕ್ರಿಪ್ಟೋ ಕರೆನ್ಸಿ, ಏನ್‌ಎಫ್‌ಟಿ ಅಥವಾ ವಿಡಿಎಗೆ ಸಮನಾದ ಆಸ್ತಿ ಇರುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ಕ್ರಿಪ್ಟೋ ಕರೆನ್ಸಿಯ ಬಗ್ಗೆ ಗ್ರಾಹಕರು ಎಚ್ಚರದಿಂದ ಇರುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಪ್ರಕಟವಾಗುವ ಅಥವಾ ಬಿತ್ತರವಾಗುವ ಜಾಹಿರಾತುಗಳನ್ನು ನಿಯಂತ್ರಿಸುವ ಅಗತ್ಯವಿದೆ. 

ಎಲ್ಲ ಪ್ರಸಾರ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನಟ-ನಟಿಯರು, ಕ್ರೀಡಾ ಪಟುಗಳು ಮತ್ತು ಇತರೆ ಸೆಲಿಬ್ರಿಟಿಗಳು ಕ್ರಿಪ್ಟೋ ಕರೆನ್ಸಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಕ್ರಿಪ್ಟೋ ಕರೆನ್ಸಿ ಅಥವಾ ಎನ್‌ಎಫ್‌ಟಿ ಸಾಮಾನ್ಯ ಷೇರು ಅಥವಾ ಮ್ಯೂಚುವಲ್ ಫಂಡ್ ರೀತಿಯ ಹೂಡಿಕೆಯಲ್ಲ. ಇದರ ಹಿಂದೆ ಸಾಕಷ್ಟು ಅಪಾಯಗಳಿವೆ. ಹೂಡಿಕೆದಾರರ ಹಿತವನ್ನು ರಕ್ಷಿಸುವ ಸಲುವಾಗಿ ಭಾರತೀಯ ಜಾಹಿರಾತು ಮಾನಕ ಪರಿಷತ್ತು [ಎಎಸ್‌ಸಿಐ] ಕ್ರಿಪ್ಟೋ ಕರೆನ್ಸಿ ಮತ್ತು ಎನ್‌ಎಫ್‌ಟಿಗೆ ಸಂಬಂಧಿಸಿದ ಜಾಹಿರಾತುಗಳು ಹೇಗಿರಬೇಕು ಎಂಬುದರ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದೆ. 

Image
ಸಾಂಧರ್ಭಿಕ ಚಿತ್ರ

ಕ್ರಿಪ್ಟೋ ಕರೆನ್ಸಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂಬುದು ಮಾರ್ಗಸೂಚಿಯ ಮುಖ್ಯ ಉದ್ದೇಶ. ವಿಶೇಷವಾಗಿ ಈ ಮಾದರಿಯ ಕರೆನ್ಸಿಗಳ ಜೊತೆಗೆ ಅಂಟಿಕೊಂಡಿರುವ ಅಪಾಯಗಳ ಬಗ್ಗೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡುವುದು ಅಗತ್ಯವೆಂದು ಮಾರ್ಗಸೂಚಿ ಹೇಳುತ್ತದೆ. ಕ್ರಿಪ್ಟೋ ಕರೆನ್ಸಿ ಮತ್ತು ಎನ್‌ಎಫ್‌ಟಿ ಬಗ್ಗೆ 2022ರ ಏಪ್ರಿಲ್ 1ರ ನಂತರ ನೀಡುವ ಜಾಹಿರಾತುಗಳಿಗೆ ಈ ಮಾರ್ಗಸೂಚಿ ಅನ್ವಯವಾಗುತ್ತದೆ. ಎಪ್ರಿಲ್ 15ರ ನಂತರ ಕ್ರಿಪ್ಟೋ ಕರೆನ್ಸಿ ಬಗ್ಗೆ ಎಚ್ಚರಿಕೆಯ ಸಂದೇಶ ಇಲ್ಲದ ಜಾಹಿರಾತುಗಳನ್ನು ನೀಡುವಂತಿಲ್ಲ.

ಜಾಹಿರಾತುಗಳಲ್ಲಿ ಕರೆನ್ಸಿ, ಸೆಕ್ಯೂರಿಟೀಸ್, ಕಸ್ಟೊಡಿಯನ್ ಮತ್ತು ಡೆಪಾಸಿಟರೀಸ್ ಎಂಬ ಪದಗಳನ್ನು ಬಳಸುವಂತಿಲ್ಲ. ಕಾರಣ ಈ ಪದಗಳೆಲ್ಲವೂ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದೆ ಎಂಬ ಅಭಿಪ್ರಾಯ ಹೂಡಿಕೆದಾರರಲ್ಲಿದೆ. ಕ್ರಿಪ್ಟೋ ಕರೆನ್ಸಿ ಜೊತೆ ಅದನ್ನು ಸೇರಿಸಿದರೆ, ಕ್ರಿಪ್ಟೋ ಕರೆನ್ಸಿ ಸಹ ನಿಯಂತ್ರಣಕ್ಕೆ ಒಳಪಟ್ಟಿದೆ ಎಂಬ ತಪ್ಪು ಅಭಿಪ್ರಾಯ ಹೂಡಿಕೆದಾರರಲ್ಲಿ ಮೂಡಬಹುದು. ಆದ್ದರಿಂದ ಈ ಪದಗಳನ್ನು ಬಳಸುವಂತಿಲ್ಲ.

ಈ ಲೇಖನ ಓದಿದ್ದೀರಾ? ಗ್ರಾಹಕಾಯಣ | 'ಕ್ರೆಡಿಟ್ ಕಾರ್ಡ್' ಕಾಟದಿಂದ ಪಾರಾಗಬೇಕೆಂದರೆ ಈ ಸಂಗತಿಗಳು ನಿಮಗೆ ಗೊತ್ತಿರಲಿ

ಪ್ರಸ್ತುತ ಎಚ್ಚರಿಕೆಯ ಸಂದೇಶಗಳು ಕಾಣಿಸಲಾಗದಷ್ಟು ಚಿಕ್ಕ ಅಕ್ಷರಗಳಲ್ಲಿ ಮುದ್ರಿಸಲಾಗಿರುತ್ತದೆ. ವೀಡಿಯೋದಲ್ಲಿ ಅದನ್ನು ಶೀಘ್ರವಾಗಿ ಓದುವ ಪರಿಣಾಮ ಆ ಸಂದೇಶ ಯಾರಿಗೂ ಅರ್ಥವಾಗುವುದಿಲ್ಲ. ಇದನ್ನು ತಪ್ಪಿಸಲು ಮಾರ್ಗಸೂಚಿಯಲ್ಲಿ ಎಚ್ಚರಿಕೆಯ ಸಂದೇಶ ಹೇಗಿರಬೇಕೆಂದು ಸೂಚಿಸಲಾಗಿದೆ.

ಕ್ರಿಪ್ಟೋ ಕರೆನ್ಸಿ ಅಥವಾ ಎನ್‌ಎಫ್‌ಟಿಗೆ ಸಂಬಂಧಿಸಿದ ಮುದ್ರಿತ ಜಾಹಿರಾತುಗಳಲ್ಲಿನ ಎಚ್ಚರಿಕೆಯ ಸಂದೇಶಗಳು, ಹೂಡಿಕೆದಾರರು ಓದಿ ಅರ್ಥ ಮಾಡಿಕೊಳ್ಳುವಂತೆ ಸ್ಪಷ್ಟವಾಗಿರಬೇಕು. ಒಟ್ಟು ಜಾಹಿರಾತಿನ ಅಳತೆಯಲ್ಲಿ ಕನಿಷ್ಟ 1/5 ರಷ್ಟು ಸ್ಥಳ ಎಚ್ಚರಿಕೆಯ ಸಂದೇಶದಿಂದ ಕೂಡಿರಬೇಕೆಂದು ಮಾರ್ಗಸೂಚಿ ಹೇಳುತ್ತದೆ. ವೀಡಿಯೋ ಜಾಹಿರಾತಿನಲ್ಲಾದರೆ, ಎಚ್ಚರಿಕೆಯ ಸಂದೇಶವನ್ನು ಜಾಹಿರಾತಿನ ಕೊನೆಯಲ್ಲಿ ನೀಡಬೇಕು. ಆ ಸಂದೇಶವನ್ನು ಸಾವಧಾನವಾಗಿ, ಹೂಡಿಕೆದಾರರು ಅರ್ಥಮಾಡಿಕೊಳ್ಳುವಷ್ಟು ನಿಧಾನವಾಗಿ ಹೇಳಬೇಕು. 

ಕ್ರಿಪ್ಟೋ ಕರೆನ್ಸಿ ಮತ್ತು ಎನ್‌ಎಫ್‌ಟಿ ವ್ಯಾಪಾರದಲ್ಲಿ ತೊಡಗಿರುವ ಸಂಸ್ಥೆಗಳು ತಮ್ಮ ಹಿಂದಿನ ವಹಿವಾಟು ಮತ್ತು ಲಾಭದ ಬಗ್ಗೆ ಸುಳ್ಳು ಮಾಹಿತಿ ಅಥವಾ ಭಾಗಶಃ ಮಾಹಿತಿ ನೀಡುವಂತಿಲ್ಲ. ಒಂದು ವರ್ಷಕ್ಕಿಂತ ಹಿಂದಿನ ಅಂಕಿ-ಅಂಶಗಳನ್ನು ಜಾಹಿರಾತಿನಲ್ಲಿ ಸೇರಿಸುವಂತಿಲ್ಲ. ವರ್ಚುವಲ್ ಡಿಜಿಟಲ್ ಅಸೆಟ್ [ವಿಡಿಎ] ಬಗ್ಗೆ ನೀಡುವ ಜಾಹಿರಾತುಗಳಲ್ಲಿ, ಜಾಹಿರಾತು ನೀಡುವವರ ಹೆಸರು, ದೂರವಾಣಿ ಅಥವಾ ಇಮೇಲ್ ವಿವರ ಹೊಂದಿರಬೇಕೆಂದು ಎಎಸ್‌ಸಿಐ ಮಾರ್ಗಸೂಚಿ ಹೇಳುತ್ತದೆ.

Image

ವಿಡಿಯೋ ಜಾಹಿರಾತಿನಲ್ಲಿ ಅಪ್ರಾಪ್ತರು ಅಥವಾ ಅಪ್ರಾಪ್ತರಂತೆ ತೋರುವವರನ್ನು ವಿಡಿಎ ಖರೀದಿಸುತ್ತಿರುವಂತೆ ತೋರಿಸುವಂತಿಲ್ಲ ಅಥವಾ ಪ್ರಕಟಿಸುವಂತಿಲ್ಲ. ಹಣದ ಸಮಸ್ಯೆಗಳಿಗೆ ಅಥವಾ ವೈಯಕ್ತಿಕ ಸಮಸ್ಯೆಗಳಿಗೆ ವಿಡಿಎ ಒಂದು ಪರಿಹಾರ ಎಂದು ಜಾಹಿರಾತು ನೀಡುವಂತಿಲ್ಲ. ಬಹಳ ಮುಖ್ಯವಾಗಿ, ವಿಡಿಎ ಮುಂದಿನ ದಿನಗಳಲ್ಲಿ ಲಾಭ ನೀಡುತ್ತದೆ ಎಂದು ಖಾತ್ರಿಪಡಿಸುವ ಯಾವುದೇ ಸಂದೇಶ ಇರಕೂಡದು. ವಿಡಿಎಗೆ ಅಂಟಿಕೊಂಡಿರುವ ಅಪಾಯಗಳನ್ನು ಗೌಣವಾಗಿ ಪರಿಗಣಿಸಬಾರದು ಎಂದು ಮಾರ್ಗಸೂಚಿ ಹೇಳುತ್ತದೆ. ಅದೇ ರೀತಿ ವಿಡಿಎಗಳನ್ನು ಇತರೆ ಯಾವುದೇ ನಿಯಂತ್ರಿತ ಹೂಡಿಕೆ ವಿಧಾನದ ಜೊತೆ ಹೋಲಿಕೆ ಮಾಡುವಂತಿಲ್ಲ. 

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಾವುದೇ ಹೂಡಿಕೆಗೆ ಹೋಲಿಸಿದಲ್ಲಿ ಕ್ರಿಪ್ಟೋ ಕರೆನ್ಸಿ, ಎನ್‌ಎಫ್‌ಟಿ ಹಾಗೂ ವಿಡಿಎ ಅತ್ಯಂತ ಅಪಾಯಕಾರಿ ಹೂಡಿಕೆ. ಈ ಕಾರಣಕ್ಕಾಗಿ ಈ ರೀತಿಯ ಹೊಸ ಹೂಡಿಕೆಯನ್ನು ಪ್ರೋತ್ಸಾಹಿಸುವ ಸೆಲಿಬ್ರಿಟಿಗಳು, ಕ್ರಿಕೆಟ್ ಪಟುಗಳು ಅಥವಾ ಸಿನಿಮಾ ತಾರೆಯರು ಸಾಕಷ್ಟು ಮಾಹಿತಿ ಸಂಗ್ರಹಿಸಿದ ನಂತರ ಈ ಜಾಹಿರಾತುಗಳಲ್ಲಿ ಭಾಗವಹಿಸಬೇಕೆಂದು ಎಎಸ್‌ಸಿಐ ಸಲಹೆ ಮಾಡಿದೆ. 

ನಿಮಗೆ ಏನು ಅನ್ನಿಸ್ತು?
2 ವೋಟ್