ಅನುದಿನ ಚರಿತೆ | ಒಂದೇ ಧರ್ಮ, ಜಾತಿ, ಜನಾಂಗದ ಕುರುಹು ಯಾವತ್ತಿಗೂ ಅಪಾಯಕಾರಿ

karnatak

ಯಾವುದೇ ಜನಸಮೂಹದ ಅಸ್ಮಿತೆ ನೆಲೆಯಾಗಿಸಿಕೊಂಡು ಹೊರಹೊಮ್ಮುವ ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ರಂಗಭೂಮಿಗೆ ಸಂಬಂಧಿಸಿದ ವಿದ್ಯಮಾನಗಳನ್ನು ಮೂದಲಿಸುವುದು ಅಪರಾಧ. ಆನವಟ್ಟಿಯ ಪ್ರಕರಣದಲ್ಲಿ ಆಗಿದ್ದು ಇದೇ. ಒಂದು ಸಮುದಾಯದ ಸಂವೇದನೆ ಪ್ರತಿನಿಧಿಸುವ ನಾಟಕವನ್ನು ಇದು ನಮ್ಮ ಸಂಸ್ಕೃತಿಯಲ್ಲ ಎಂದು ತಿರಸ್ಕರಿಸುವುದು ಸರಿಯೇ?

ಸಂಸ್ಕೃತಿ ಎನ್ನುವ ಪರಿಕಲ್ಪನೆಯನ್ನು ಸಾರ್ವತ್ರಿಕ ಸಮ್ಮತಿಗೆ ಅನುಗುಣವಾಗಿ ವಿವರಿಸುವುದು ಅತ್ಯಂತ ದುಸ್ತರವೇ ಸರಿ. ಇದಕ್ಕೆ ಮೊಟ್ಟ ಮೊದಲ ಕಾರಣವೇನೆಂದರೆ, ಸಂಸ್ಕೃತಿ ಎಂಬ ಪರಿಕಲ್ಪನೆಯಲ್ಲಿ ಅಡಕವಾಗಿರುವ ಸಂಕೀರ್ಣತೆ ಹಾಗೂ ಅರ್ಥ ಬಾಹುಳ್ಯತೆ. ಕಾಲ ದೇಶಗಳ ಆಶಯಗಳಿಗೆ ಪೂರಕವಾಗಿ ಹಾಗೂ ಸಮೂಹಗಳ ಬದುಕಿನ ಮುನ್ನೋಟವನ್ನು ಪರಿಕಲ್ಪಿಸುವ ಬಗೆಯಾಗಿಯೂ ಸಂಸ್ಕೃತಿಯನ್ನು ವ್ಯಾಖ್ಯಾನಿಸಲಾಗಿದೆ.

ಇಷ್ಟಾಗಿಯೂ ಸಂಸ್ಕೃತಿ ಎಂದರೇನು? ಎನ್ನುವ ಪ್ರಶ್ನೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಚಿಸಲು ಸಾಧ್ಯವಾಗಿಲ್ಲ. ಸಂಸ್ಕೃತಿಯ ಚಹರೆಗಳನ್ನು ಕಲೆ, ಸಾಹಿತ್ಯ, ಚರಿತ್ರೆ, ವಾಸ್ತುಶಿಲ್ಪ, ಸಂಗೀತ ಹಾಗೂ ಸಮೂಹಗಳು ಯಥೇಚ್ಛವಾಗಿ ಅನುಸರಿಸಿಕೊಂಡು ಬಂದಿರುವ ಆಚರಣೆ, ಸಂಪ್ರದಾಯಗಳ ಮೂಲಕ ಗುರುತಿಸಲಾಗುತ್ತದೆ. ಸಂಸ್ಕೃತಿ ಎನ್ನುವುದು ನಿರಂತರವೂ ಚಲನಶೀಲವೂ ಮತ್ತು ವಿಕಸನಶೀಲವೂ ಆಗಿರುತ್ತದೆ ಎಂದು ಹೇಳಬಹುದು. ಸಂಸ್ಕೃತಿಯೊಂದು ಬೆಳೆಯುತ್ತದೆ ಎಂದರೆ ಸಮೂಹಗಳ ಬದುಕಿನ ಆಶೋತ್ತರಗಳು ವ್ಯಾಪಕಗೊಳ್ಳುತ್ತವೆ ಎಂದರ್ಥ. ಹಾಗಾಗಿ, ಸಾಮ್ರಾಜ್ಯಶಾಹಿ ಸನ್ನಿವೇಶದಲ್ಲಿ ನಿರ್ವಚಿಸಿದ ಸಂಸ್ಕೃತಿಗೂ ಮತ್ತು ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿ ವ್ಯಾಖ್ಯಾನಿಸುವ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸಗಳಿವೆ.

ಮೊದಲನೆಯದನ್ನು ಪ್ರಭುತ್ವ ಮತ್ತು ಧರ್ಮದ ಕಣ್ಣೋಟದಲ್ಲಿ ಅರ್ಥೈಸಿದರೆ, ಎರಡನೆಯದನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ನೋಡಲಾಗುತ್ತದೆ. ಹಾಗಾಗಿ ಇವುಗಳನ್ನು ವ್ಯಾಪಕವಾಗಿ ಪ್ರಭುತ್ವ ಸಂಸ್ಕೃತಿ ಹಾಗೂ ಜನಸಂಸ್ಕೃತಿ ಎಂದು ವರ್ಗೀಕರಿಸಿಬಹುದು. ಜನಸಂಸ್ಕೃತಿಯ ಚಹರೆಗಳನ್ನು ಅಲಕ್ಷ್ಯಿಸಿ, ಯಾವುದೇ ಧರ್ಮದ ಪ್ರಣಾಳಿಕೆಯನ್ನು ಸರ್ವ ಜನಾಂಗದ ಸಂಸ್ಕೃತಿಯೆಂದು ವಾದಿಸುವುದು ಹೇಗೆ ಎಲ್ಲರ ಹಿತವನ್ನು ಕಾಯುವ ಸಂಸ್ಕೃತಿ ಆಗುತ್ತದೆ. ತಾನು ಸ್ವಯಂಭು ಮತ್ತು ಶ್ರೇಷ್ಠವೆಂದು ತನ್ನಷ್ಟಕ್ಕೆ ತಾನೇ ಘೋಷಿಸಿಕೊಂಡ ಯಾವುದೇ ಸಂಸ್ಕೃತಿ ಇಲ್ಲವೇ ಧರ್ಮ ಜೀವಪರವೂ ಅಲ್ಲ ಹಾಗೂ ಶ್ರೇಷ್ಠವೂ ಅಲ್ಲ. ಅದು ಕೇವಲ ಫ್ಯಾಸಿಸ್ಟ್ ಮನಸ್ಥಿತಿಯ ಲಕ್ಷಣವಾಗಿರುತ್ತದೆ.

Image
Hindu

ಸಂಸ್ಕೃತಿಗಳ ಪ್ರಾಥಮಿಕ ಗುಣವೇ ಸಂಕರತೆ. ಸಂಕರತೆಯನ್ನು ನಿರಾಕರಿಸಿದ ಯಾವ ಭಾಷೆ ಅಥವಾ ಸಂಸ್ಕೃತಿ ಇವತ್ತು ಜೀವಂತವಾಗಿಲ್ಲ. ಸಂಸ್ಕೃತಿಗಳ ನಡುವಣ ಕೊಡುಕೊಳ್ಳುವಿಕೆ ಆಯಾ ಸಂಸ್ಕೃತಿಯ ವಿಕಸನಶೀಲತೆ ಮತ್ತು ಚೈತನ್ಯವನ್ನು ಬಿಂಬಿಸುತ್ತದೆ. ಸ್ವಯಂಭು ಎಂದು ಸಾರಿದ ಸಂಸ್ಕೃತಿಯಾಗಲೀ ಇಲ್ಲವೇ ಭಾಷೆಯೇ ಆಗಲಿ, ಇವತ್ತು ಅವುಗಳನ್ನು ಕೇವಲ ಮೃತ ಸಂಸ್ಕೃತಿ ಅಥವಾ ಮೃತ ಭಾಷೆ ಎಂದು ಕರೆಯಲಾಗುತ್ತದೆ. ಇಂತಹ ಮೃತ ಭಾಷೆ ಮತ್ತು ಸಂಸ್ಕೃತಿಯ ನಿಲುವುಗಳನ್ನೇ ಜನರ ಭಾಷಿಕ ಹಾಗೂ ಸಾಂಸ್ಕೃತಿಕ ನಿಲುವುಗಳು ಎಂದು ಒತ್ತಾಯಿಸುವುದರಿಂದ ಆ ಸಂಸ್ಕೃತಿ ಅಥವಾ ಭಾಷೆ ಜೀವಂತಿಕೆಯನ್ನು ಪಡೆದುಕೊಳ್ಳುವುದಿಲ್ಲ. ಅದು ಕೇವಲ ಹೇರಿಕೆಯ ಸಂಸ್ಕೃತಿ ಮಾತ್ರ ಆಗುತ್ತದೆ.

ರಾಜಕೀಯ ಪ್ರಾಬಲ್ಯದಿಂದ ಜನರನ್ನು ಶೋಷಿಸುವ, ಇಲ್ಲವೇ ಹಿಂಸಿಸುವ ಅಸ್ತ್ರವಾಗಿ ಮೈದಾಳುತ್ತದೆ. ಜನರಲ್ಲಿ ಸಹಬಾಳ್ವೆಯ ನಿಲುವುಗಳು ಏರ್ಪಡಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಕೋಮುದ್ವೇಷ, ಅಸಹನೆ, ಜಾತಿ ತಾರತಮ್ಯ ನಡೆಗಳು ಇನ್ನಷ್ಟು ಬಿಗಡಾಯಿಸುತ್ತವೆ. ಭಾರತ ದೇಶದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ ಹಾಗೂ ನಾಟಕ ಇಲ್ಲವೇ ರಂಗಭೂಮಿ ಪರಂಪರೆಗಳ ಚರಿತ್ರೆಯನ್ನು ನಿಗಾಯಿಟ್ಟು ನೋಡಿದರೆ, ಕೊಡುಕೊಳ್ಳುವ ಪ್ರಕ್ರಿಯೆ ಹೇಗೆ ಒಂದು ಸಾಂಸ್ಕೃತಿ ಹಿರಿಮೆ ಆಗುತ್ತದೆ ಎನ್ನುವುದು ನಮಗೆ ಮನವರಿಕೆ ಆಗುತ್ತದೆ.

ಕೊಡುಪಡೆ ಪ್ರಕ್ರಿಯೆಯ ಭಾಗವಾದ ಪ್ರತಿಯೊಂದು ಭಾಷೆ ಮತ್ತು ಸಂಸ್ಕೃತಿ ಚೈತನ್ಯಶೀಲವಾಗಿರುತ್ತವೆ. ಅಷ್ಟೆ ಅಲ್ಲದೇ ಜನ ಸಮೂಹಗಳ ಚಹರೆಯ ಮೂಲಧಾತು ಆಗಿರುತ್ತವೆ. ಭಿನ್ನ ಮನೋಧರ್ಮಗಳ ನಡುವಣ ಪರಸ್ಪರ ಹೊಂದಾಣಿಕೆಯನ್ನು ಸಹಬಾಳ್ವೆ/ಸಹಜೀವನ ಎಂದು ಕರೆಯಲಾಗುತ್ತದೆ. ಇದು ಸಂಸ್ಕೃತಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ. ಇಂತಹ ಹೊಂದಾಣಿಕೆಯನ್ನು ಮೈಗೂಡಿಸಿಕೊಂಡಿರುವ ಸಂಸ್ಕೃತಿಗಳು ಆದರ್ಶ ರೂಪಕಗಳಾಗಿ ಹೊರಹೊಮ್ಮಬೇಕು. ಇಂತಹ ಸಂಸ್ಕೃತಿಗಳನ್ನು ಉಪಸಂಸ್ಕೃತಿ ಎಂದೋ ಇಲ್ಲವೇ ಆಮದು ಸಂಸ್ಕೃತಿ ಎಂದೋ ಅಥವಾ ಇನ್ಯಾವುದೋ ಸಂಸ್ಕೃತಿಯ ಅಧೀನ ಸಂಸ್ಕೃತಿ ಎಂದು ಬಿಂಬಿಸಲಾಗುತ್ತದೆ.

Image
Rangabhumi

ಯಾವುದೇ ಸಾಂಸ್ಕೃತಿಕ ತಿಳಿವು ಇಲ್ಲವೇ, ಆಚರಣೆಯನ್ನು ಬೇರೊಂದು ಪರಂಪರೆಯಿಂದ ಪಡೆದುಕೊಳ್ಳುವುದರಿಂದ ನಮ್ಮ ಸಾಂಸ್ಕೃತಿಕ ಚಹರೆಗಳನ್ನು ನಿರ್ನಾಮ ಮಾಡುವುದು ಎಂದರ್ಥವಲ್ಲ. ಬದಲಾಗಿ, ಅಂತಹ ಸಾಂಸ್ಕೃತಿಕ ತಿಳಿವು ಅಥವಾ ಆಚರಣೆಗಳ ಎಲ್ಲೆಗಳನ್ನು ವಿಸ್ತರಿಸುವ ಬಗೆಯಾಗಿದೆ. ನಮ್ಮ ಕರ್ನಾಟಕದ ಸಾಹಿತ್ಯ, ಸಂಗೀತ, ನಾಟಕ ಹಾಗೂ ರಂಗಭೂಮಿಯ ಬೆಳವಣಿಗೆಗೆ ಹಲವು ಧರ್ಮ ಮತ್ತು ಪರಂಪರೆಗಳ ಕೊಡುಗೆ ಇದೆ. ಈ ಕೊಡುಗೆಯನ್ನು ಕೇವಲ ಈ ಧರ್ಮದ್ದು ಅಥವಾ ಆ ಧರ್ಮದ್ದು ಎಂದು ವರ್ಗೀಕರಿಸಿ ನೋಡುತ್ತ ಹೋದರೆ ಕನ್ನಡದ ಅಸ್ಮಿತೆಯ ನೆಲೆಗಳನ್ನು ಧ್ವಂಸಗೊಳಿಸಿದಂತೆ. ಯಾವುದೇ ಸಂಸ್ಕೃತಿಯ ಅಖಂಡ ಅಸ್ಮಿತೆಯು ಏಕಶೀಲ ಘನಾಕೃತಿಯ ಸ್ವರೂಪದ್ದಲ್ಲ. ಬದಲಾಗಿ ಹಲವು ಮನೋಧರ್ಮಗಳಿಂದ ಕೂಡಿದ ಹೂದಾನಿ (ಹೂಕುಂಡ) ಆಗಿರುತ್ತದೆ. ಈ ಹೂದಾನಿಯ ಚೆಲವು ಸರ್ವ ಜನಾಂಗದ ಅಸ್ಮಿತೆಯನ್ನು ಬಿಂಬಿಸುವ ವಿನ್ಯಾಸವಾಗುತ್ತದೆ.

ಒಂದೇ ಧರ್ಮ, ಜಾತಿ, ಜನಾಂಗದ ಕುರುಹು ಯಾವತ್ತಿಗೂ ಅಪಾಯಕಾರಿಯೇ ಆಗಿರುತ್ತದೆ. ಕೂಡಿ ಬಾಳುವುದಕ್ಕೆ ಇಂತಹ ನಿಲುವುಗಳು ವಿರೋಧಿಸುತ್ತವೆ. ಈ ದೇಶದ ಯಾವುದೇ ಜನ ಸಮೂಹದ ಅಸ್ಮಿತೆಯನ್ನು ನೆಲೆಯಾಗಿಸಿಕೊಂಡು ಹೊರಹೊಮ್ಮುವ ಸಾಹಿತ್ಯ, ಸಂಗೀತ, ವಾಸ್ತುಶಿಲ್ಪ, ನಾಟಕ ಹಾಗೂ ರಂಗಭೂಮಿಗೆ ಸಂಬಂಧಿಸಿದ ವಿದ್ಯಮಾನಗಳನ್ನು ಮೂದಲಿಸುವುದು ಅಪರಾಧ. ಅಂದರೆ, ಮುಸ್ಲಿಂ ಸಮುದಾಯದ ಸಂವೇದನೆಯನ್ನು ಪ್ರತಿನಿಧಿಸುವ ನಾಟಕವನ್ನು ಇದು ನಮ್ಮ ಸಂಸ್ಕೃತಿಯಲ್ಲ, ನಮ್ಮ ಧರ್ಮವಲ್ಲ, ನಮ್ಮ ದೇಶದ ರೂಢಿಯಲ್ಲ, ಆಚರಣೆಯಲ್ಲ ಮುಂತಾಗಿ ಹಲುಬುವ ಮತ್ತು ವಿರೋಧಿಸುವ ಅಥವಾ ತಿರಸ್ಕರಿಸುವುದನ್ನು ಹೇಗೆ ನಾವು ಅದನ್ನು ಸಾಂಸ್ಕೃತಿಕ ನಿಲುವನ್ನಾಗಿ ಪರಿಗಣಿಸಲು ಸಾಧ್ಯ!

ದಿನದಿಂದ ದಿನಕ್ಕೆ ಸಾಂಸ್ಕೃತಿಕ ಪ್ರಶ್ನೆಗಳು ಬಿಗಡಾಯಿಸುತ್ತಲೇ ಹೋಗುತ್ತಿವೆ. ಈ ಪ್ರಶ್ನೆಗಳು ಬಹುತೇಕವಾಗಿ ಬದುಕಿನ ಎಲ್ಲ ವಲಯಗಳಿಗೂ ಆವರಿಸಿಕೊಂಡಿವೆ. ವಿಶೇಷವಾಗಿ ದಲಿತ, ತಳಸಮುದಾಯ, ಹಿಂದುಳಿದ, ಮಹಿಳೆ, ಅಲ್ಪಸಂಖ್ಯಾತ ಸಮೂಹಗಳನ್ನೇ ಇವುಗಳು ನಿರಂತರವಾಗಿ ಬಾಧಿಸುತ್ತಿವೆ ಎನ್ನುವುದು ಗಮನಾರ್ಹ. ಆಯಾ ಸಮುದಾಯದ ಸ್ವಂತಿಕೆಯನ್ನು ಪ್ರಕಟಿಸುವಲ್ಲಿ ಇಲ್ಲವೇ ಅಭಿವ್ಯಕ್ತಿಸುವಲ್ಲಿ ಬಿಕ್ಕಟ್ಟುಗಳು ಎದುರಾಗುತ್ತವೆ. ಸಂಸ್ಕೃತಿ ಎನ್ನುವುದು ನಮ್ಮ ಹಕ್ಕು ಬದುಕಿನ ಮಹನ್ನೋತಿಯನ್ನು ಬಯಸುವ ನಿಲುವು ಯಾವುದೇ ಮೂಲದಿಂದ ಬಂದರೂ ಅದು ನಮ್ಮ ಸಾಂಸ್ಕೃತಿಕ ಹೆಚ್ಚುಗಾರಿಕೆಯಾಗಿ ನೆಲೆ ನಿಲ್ಲಬೇಕು. ಇದೊಂದು  ಸೆಕ್ಯುಲರ್ ತತ್ವವಾಗಿ ಮಾರ್ಪಡಬೇಕು ಹಾಗೂ ಸಂವಿಧಾನಾತ್ಮಕ ನಿಲುವಾಗಿ ರೂಪುಗೊಳ್ಳಬೇಕು. ಆವಾಗ ಮಾತ್ರ ಸಂವೇದನೆ, ಅನುಭವ, ಕಲೆ ಹಾಗ ತಿಳಿವುಗಳು ಜಾತಿ, ಧರ್ಮದ ಸೋಂಕಿಗೆ ಬಲಿಯಾಗದೇ ಬಿಡುಗಡೆ ಪಡೆಯುತ್ತವೆ.

Image
hindu-muslim

ಈ ಹೊತ್ತಿನ ಸಾಂಸ್ಕೃತಿಕ ವಿದ್ಯಮಾನಗಳನ್ನು ಯಾರು ನಿಯಂತ್ರಿಸುತ್ತಾರೆ? ಯಾಕೆ ನಿಯಂತ್ರಿಸುತ್ತಾರೆ? ಯಾವಾಗ ನಿಯಂತ್ರಿಸುತ್ತಾರೆ? ಎನ್ನುವ ಪ್ರಶ್ನೆಗಳನ್ನು ಕೇಳುವ ಜರೂರಿಲ್ಲ. ಏಕೆಂದರೆ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಲ್ಲವೂ ಢಾಳಾಗಿ ನಮ್ಮ ಕಣ್ಣಿಗೆ ರಾಚುತ್ತಿದೆ. ಏನೂ ನಡದೇ ಇಲ್ಲ ನಡೆಯುತ್ತಿರುವುದೆಲ್ಲವೂ ನಮ್ಮ ಧರ್ಮದ ಧರ್ಮಸಾರವನ್ನು ಅಭಿವ್ಯಕ್ತಿಸುತ್ತದೆ ಎನ್ನುವ ಮೂಢನಂಬಿಕೆಯನ್ನು ಧರ್ಮದ ಕನ್ನಡಕಗಳು ಬಿಂಬಿಸುತ್ತವೆ. ಸಮೂಹ ವಿರೋಧಿ ಮತ್ತು ಫ್ಯಾಸಿಸ್ಟ್ ಚಟುವಟಿಕೆಗಳು ಧರ್ಮದ ವಿನ್ಯಾಸವನ್ನು ಪಡೆಯುತ್ತಿರುವ ದುರಿತ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಧರ್ಮದ ವ್ಯಾಖ್ಯಾನಗಳನ್ನು ನಾವು ಬದಲಿಸಿಯಾಗಿದೆ ಮತ್ತು ಧರ್ಮದ ಆಶಯಗಳನ್ನು ತಿರುಚಿಯೂ ಆಗಿದೆ.

ಹಾಗಾಗಿ ಸಾಂಸ್ಕೃತಿಕ ನಿರ್ಲಿಪ್ತತೆಯನ್ನು ಹೊಂದಿರಬೇಕಾದ ಪುರಾಣ, ಐತಿಹ್ಯ, ಚರಿತ್ರೆ ಹಾಗೂ ಸಾಹಿತ್ಯದಂತಹ ಜೀವನ ಮೌಲ್ಯವನ್ನು ಬಿತ್ತರಿಸುವ ಸಾಂಸ್ಕೃತಿಕ ಸಂಪನ್ಮೂಲವನ್ನು ಕೋಮುತನದ ಗಡಿಗೆರೆಯನ್ನಾಗಿ ಮಾರ್ಪಡಿಸಲಾಗಿದೆ. ಅಂದರೆ, ಶ್ರಿರಾಮ ಎನ್ನುವ ವ್ಯಕ್ತಿಯ ವ್ಯಕ್ತಿತ್ವದ ಮೌಲ್ಯಗಳು ಮನುಷ್ಯ ಸಹಜ ಅನುಭವವಾಗಿ ಬಿಂಬಿತವಾಗದೇ, ಯಾವುದೇ ಒಂದು ಧರ್ಮದ ಸೂತ್ರಗಳನ್ನಾಗಿ ಬಿಂಬಿಸುವುದು ಎಂತಹ ಅಪಾಯಕಾರಿ ಬೆಳವಣಿಗೆ ಎನ್ನುವುದನ್ನು ನಾವು ಈಗಾಗಲೇ ಮನಗಂಡಿದ್ದೇವೆ. ಹಲವು ಬುಡಕಟ್ಟು ಸಮೂಹಗಳು, ಜನಪದರು ಶ್ರೀರಾಮನನ್ನು ಪರಿಭಾವಿಸಿದ ನಿದರ್ಶನಗಳು ನಮ್ಮೆದುರಿಗಿವೆ. ಈ ಎಲ್ಲ ರೂಪಗಳು ಶ್ರೀರಾಮನ ವ್ಯಕ್ತಿತ್ವದ ಬಾಹುಳ್ಯತೆಯನ್ನು ಸಾರುತ್ತವೆ. ಹಲವರ ಗ್ರಹಿಕೆಯಲ್ಲಿ ಒಡಮೂಡಿದ ಶ್ರೀರಾಮ ಎಲ್ಲರಿಗೂ ಪ್ರಿಯನಾದ ಶ್ರೀರಾಮನೇ ಆಗಿರುತ್ತಾನೆ ಹೊರತು ದ್ವೇಷವನ್ನು ಪ್ರಚುರಪಡಿಸುವ ಅಸ್ತ್ರವಾಗಿ ಶ್ರೀರಾಮ ಮೈದೋರುವುದಿಲ್ಲ ಆದರೆ ಶ್ರೀರಾಮ ಇವತ್ತು ಧರ್ಮದ ಲಾಂಛನವಾಗಿ ಕೋಮುದ್ವೇಷಕ್ಕೆ ಆಯುಧವಾಗಿದ್ದಾನೆ.

ಜನಪದರು ಮತ್ತು ನಮ್ಮ ಹಳ್ಳಿಗಳಲ್ಲಿ ತಾಯಂದಿರರು ತಮ್ಮ ಮಕ್ಕಳನ್ನು ಕೊಂಡಾಡುವುದು ಇಲ್ಲವೇ ಮುದ್ದಾಡುವುದು ರಾಮ ಮತ್ತು ಕೃಷ್ಣರಿಗೆ ಸಮೀಕರಿಸಿಯೇ ಎನ್ನುವುದು ಗಮನಾರ್ಹ. ಈ ನಿಲುವುಗಳು ಜಾತಿ, ಧರ್ಮಪ್ರೇರಿತ ನಿಲುವುಗಳಿಂದ ನಿರ್ಲಿಪ್ತವಾಗಿವಾಗಿರುತ್ತವೆ. ಹಾಗಾಗಿ ಜನಪದರಲ್ಲಿ ರಾಮ ಕೃಷ್ಣರು ಸಾರ್ವತ್ರಿಕ ರೂಪಕಗಳೇ ಹೊರತು ಯಾವುದೇ ಧರ್ಮಾಂಧತೆಯಿಂದ ಕೂಡಿದ ವ್ಯಕ್ತಿಗಳಲ್ಲ.

Image
Untouchables

ಸಾಮಾಜಿಕ ಬೆಳವಣಿಗೆ ಎನ್ನುವುದು ಸಂಸ್ಕೃತಿಯ ಚೈತನ್ಯವನ್ನು ಕಾಪಾಡುವ ಬಗೆಯಾಗಿದೆ. ಈ ಬೆಳವಣಿಗೆಯ ಲಕ್ಷಣಗಳು ಯಾವುವು ಎಂಬುದನ್ನು ಖಚಿತವಾಗಿ ವಿವರಿಸಲು ಸಾಧ್ಯವಿಲ್ಲವಾದರೂ, ಬದುಕಿನ ಮುಂಗಾಣ್ಕೆಯ ಸೂಚಕಗಳನ್ನಾಗಿ ಅವುಗಳನ್ನು ಗ್ರಹಿಸಲು ಸಾಧ್ಯವಿದೆ. ಯಾವುದೇ ಸಮೂಹದ ಹಿತವನ್ನು ಕಾಪಾಡುವ ಸಾಂಸ್ಕೃತಿಕ ಕ್ರಿಯೆ ಎಲ್ಲ ಸಮೂಹಗಳ ಹಿತವನ್ನೇ ಬಯಸುತ್ತದೆ. ಶತಮಾನಗಳಿಂದಲೂ ಕೆಲವು ಆಚರಣೆಗಳು ಒಂದೇ ಬಗೆಯಲ್ಲಿ ಮುನ್ನಡೆಯುತ್ತವೆ. ಉದಾಹರಣೆಗೆ ಅಸ್ಪೃಶ್ಯತೆ, ಲಿಂಗ ಅಸಮಾನತೆ ಹಾಗೂ ಜಾತಿ ಧರ್ಮಗಳ ನಡುವಣ ಅಸಮಾನತೆಗಳನ್ನು ಇಲ್ಲಿ ಉಲ್ಲೇಖಿಸಬಹುದು.

ಇಂತಹ ಅಸಮಾನತೆಗಳನ್ನೂ ಸಂಸ್ಕೃತಿಯ ಪ್ರತೀಕವೆಂದು ಬಿಂಬಿಸುವ ರಾಜಕಾರಣವು ನಡೆಯುತ್ತಿದೆ. ಕೆಲವರ ಆಚರಣೆಗಳು ಸಮೂಹ ವಿರೋಧಿಯಾಗಿದ್ದರೂ ಅವುಗಳು ಶ್ರೇಷ್ಠತೆಯ ಮನ್ನಣೆಯನ್ನು ಪಡೆದುಕೊಳ್ಳುತ್ತವೆ. ಕೆಲವರ ಆಚರಣೆಗಳು ಸಮೂಹ ಸಹಬಾಳ್ವೆಗೆ ಪೂರಕವಾಗಿದ್ದರೂ ಅವುಗಳನ್ನು ಕೀಳು ಎಂದು ಬಿಂಬಿಸಲಾಗುತ್ತದೆ. ಇಂತಹ ಸಾಂಸ್ಕೃತಿಕ ಹುನ್ನಾರಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಸಂಸ್ಕೃತಿಯಲ್ಲಿಯೇ ಸಿಗುತ್ತವೆ. ದೇವಸ್ಥಾನದ ಪೂಜೆಗೆ ಬಳಸುವ ವಾದ್ಯಗಳ ಸ್ಥಾನಮಾನವನ್ನು ಗಮನಿಸಿದರೆ, ಅಲ್ಲಿರುವ ತಾರತಮ್ಯದ ನೆಲೆಗಳು ನಿಚ್ಚಳವಾಗಿ ಗೋಚರಿಸುತ್ತವೆ. ಈ ತಾರತಮ್ಯದ ಹಿಂದಿನ ಗುಟ್ಟು ಮಾತ್ರ ವರ್ಣ ವ್ಯವಸ್ಥೆಯ ಅಮಾನುಷ ಆಚರಣೆಗಳು. ಅಂದರೆ ಕೆಲವು ವಾದ್ಯಗಳು ದೇವಸ್ಥಾನದ ಆಚೆಗೆ ಮಾತ್ರ ನುಡಿಸುವುದಕ್ಕೆ ಯೋಗ್ಯವಾದವು ಎನ್ನುವುದಕ್ಕಿಂತ ಅವುಗಳನ್ನು ನುಡಿಸುವವರ ಜಾತಿ ಇಲ್ಲಿ ಮುಖ್ಯವಾಗುತ್ತದೆ.

ಜಾತಿಗಳಲ್ಲಿ ಮೇಲು ಕೀಳು ಇರುವುದರಿಂದ ವಾದ್ಯಗಳನ್ನೂ ನುಡಿಸುವವರ ಜಾತಿಗಳಿಗೆ ಅನುಗುಣವಾಗಿ ವರ್ಗೀಕರಿಸಲಾಗಿದೆ. ಈ ನಿಲುವು ಎಲ್ಲ ಬಗೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿ ಹಾಗೂ ಕ್ರಿಯೆಗಳಲ್ಲಿ ಕಾಣುತ್ತೇವೆ. ವೈಚಿತ್ರ್ಯ ಏನೆಂದರೆ ಧಾರ್ಮಿಕ ವಿಧಿವಿಧಾನಗಳ ನೆಪದಲ್ಲಿ ಇಂತಹ ಸಾಂಸ್ಕೃತಿಕ ಅಪಚಾರಗಳು ನಡೆಯುತ್ತವೆ. ನಮ್ಮ ದೇಶದಲ್ಲಿ ವೈಚಾರಿಕ ಚೌಕಟ್ಟುಗಳು ಮತ್ತು ಸೈದ್ಧಾಂತಿಕ ನಿಲುವುಗಳನ್ನು ಕೇವಲ ಧರ್ಮ ಮತ್ತು ಜಾತಿಗಳ ಕಟ್ಟೋಣವನ್ನಾಗಿ ಬಿಂಬಿಸಲಾಗಿದೆ. ಈ ನಿಲುವುಗಳೇ ಧರ್ಮ ಸಂಘರ್ಷಕ್ಕೂ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟಿಗೂ ಕಾರಣವಾಗಿವೆ.

Image
Shivamogga

ಶೈವ, ವೈಷ್ಣವ, ಜೈನ, ಬೌದ್ಧ ಧರ್ಮಗಳ ನಡುವಣ ಸಂಘರ್ಷಕ್ಕೂ ಧರ್ಮಕೇಂದ್ರಿತ ಚಿಂತನೆಗಳು ಕಾರಣವಾದ ಹಾಗೆ ಹಿಂದೂ ಮುಸ್ಲಿಂ ಧರ್ಮಗಳ ನಡುವೆಯೂ ಇಂತಹದೇ ಧರ್ಮಕೇಂದ್ರಿತ ತಾತ್ವಿಕತೆಗಳು ಕಾರಣವಾಗಿವೆ. ಅಷ್ಟೆಯಲ್ಲದೇ ಇಸ್ಲಾಂ ದೊರೆಗಳ ರಾಜಕೀಯ ನಿಲುವುಗಳು ಇಲ್ಲಿ ಸೇರಿಕೊಂಡು ಕೋಮುದ್ವೇಷ ಮತ್ತಷ್ಟು ತೀವ್ರಗೊಂಡಿದೆ. ಚರಿತ್ರೆಯಲ್ಲಿ ಘಟಿಸಿದ ಅಪರಾಧಗಳಿಗೆ, ವರ್ತಮಾನದಲ್ಲಿ ಕ್ರಮವನ್ನು ಕೈಗೊಳ್ಳುವುದೇ? ಯಾರ ಅಪರಾಧಗಳಿಗೆ ಯಾರು ಹೊಣೆಗಾರರು? ಚರಿತ್ರೆಯಲ್ಲಿ ಅಪರಾಧ ನಡೆದಿದೆ ಎಂದು ವರ್ತಮಾನದಲ್ಲಿ ನಿರಪರಾಧಿಗೆ ಶಿಕ್ಷೆಯನ್ನು ಕೊಡುವ ಇಲ್ಲವೇ ದಂಡಿಸುವ ಹಕ್ಕು ಯಾವ ಧರ್ಮಕ್ಕೂ ಇರಲಾರದು ಮತ್ತು ಇರಕೂಡದು.

ಕೇವಲ ಮುಸ್ಲಿಂ ಸಂಸ್ಕೃತಿ, ಸಾಹಿತ್ಯ, ಊಟ, ಉಡುಗೆ ಹಾಗೂ ಮುಸ್ಲಿಂ ಸಂವೇದನೆಯನ್ನು ಪ್ರತಿನಿಧಿಸುವ ನಾಟಕ ಎನ್ನುವ ಕಾರಣಕ್ಕಾಗಿಯೇ ವಿರೋಧಿಸುವುದು ಎಷ್ಟು ಸರಿ ಅಥವಾ ಹಿಂದೂ ಸಾಂಸ್ಕೃತಿಕ ನಿಲುವುಗಳನ್ನು ಮುಸ್ಲಿಮರು ವಿರೋಧಿಸುವುದಕ್ಕೆ ಶುರು ಮಾಡಿದರೆ ಸಮೂಹಗಳ ಬದುಕು ಏನಾಗಬಹುದು? ಮೊನ್ನೆ ಶಿವಮೊಗ್ಗದ ರಂಗಬೆಳಕು ನಾಟಕ ತಂಡದಿಂದಸೊರಬಾದಲ್ಲಿ ಏರ್ಪಾಡುಗೊಂಡ ಜಯಂತ್ ಕಾಯ್ಕಿಣಿ ರೂಪಾಂತರಿಸಿದ ಜತೆಗಿರುವನು ಚಂದಿರ ನಾಟಕದ ಪ್ರದರ್ಶನಕ್ಕೆ ವಿರೋಧವೊಡ್ಡಿ ಅರ್ಧಕ್ಕೆ ನಿಲ್ಲಿಸಲಾಯಿತು. ಈ ನಾಟಕದ ವಿರುದ್ಧ ಪ್ರತಿಭಟಿಸಲು ಯಾವುದೇ ಗಹನವಾದ ವೈಚಾರಿಕತೆ ಅಥವಾ ಸೈದ್ಧಾಂತಿಕ ನಿಲುವು ಕಾರಣವಲ್ಲ. ಬದಲಾಗಿ ಮುಸ್ಲಿಂ ಪ್ರಣೀತ ಪಾತ್ರಗಳ ಸಂವೇದನೆಯನ್ನು ಹೊಂದಿರುವುದೇ ಈ ಪ್ರತಿಭಟನೆಗೆ ಕಾರಣ. ಪ್ರಜಾಪ್ರಭುತ್ವ ಸನ್ನಿವೇಶದಲ್ಲಿ ಜನ ಸಂಸ್ಕೃತಿಗಳಿಗೆ ಮಾನ್ಯತೆ ಲಭಿಸಬೇಕು ಎನ್ನುವುದು ಸಂವಿಧಾನಾತ್ಮಕ ನಿಲುವು ಹಾಗೂ ಪ್ರತಿಯೊಂದು ಸಂಸ್ಕೃತಿಯೂ ಆಯಾ ಸಮುದಾಯದ ಹಕ್ಕು. ಹಾಗಾಗಿ ಪ್ರತಿಯೊಂದು ಸಮುದಾಯಕ್ಕೂ ಸಾಂಸ್ಕೃತಿಕ ಸ್ವಾಯತ್ತತೆ ಇದ್ದೇ ಇರುತ್ತದೆ.

ಬಸವಣ್ಣ ಹೇಳಿದಂತೆ ʼತಾಳ ಮಾನ ಸರಿಸವನರಿಯೆ, ಓಜೆಬಜಾವಣೆ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ,ʼ ಈ ವಚನ ಸಾಂಸ್ಕೃತಿಕ ಸ್ವಾಯತ್ತೆಯ ರೂಪಕದಂತಿದೆ. ಹಾಗಾಗಿ  ಅನ್ಯ ಮತ ಧರ್ಮಗಳಿಗೆ ಬಾಧಿಸಿದ ಯಾವುದೇ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ವಿರೋಧಿಸುವುದಕ್ಕೆ ಯಾವ ಧರ್ಮ, ಜಾತಿ ಅಥವಾ ಸಂಘಟನೆಗೆ ಅಧಿಕಾರವಿಲ್ಲ ಹಾಗೂ ಅದು ಇರಲು ಸಾಧ್ಯವಿಲ್ಲ ಎನ್ನುವುದೇ ನನ್ನ ಗ್ರಹಿಕೆ.

ನಿಮಗೆ ಏನು ಅನ್ನಿಸ್ತು?
0 ವೋಟ್