ಜತೆಗಿರುವನೇ ಚಂದಿರ? | ಆಗಾಗ ರಕ್ಕಸನಾಗುತ್ತಿದ್ದ ಅಬ್ಬನ ಅವಾಂತರಗಳು

ಒಂದು ರಾತ್ರಿ ಕುಡಿದ ಮತ್ತಿನಲ್ಲಿ ಅಮ್ಮಿಯೊಡನೆ ಜಗಳವಾಡಿ, ಜೇಬಿನಲ್ಲಿದ್ದ ನೂರರ ಒಂದು, ಐವತ್ತರ ಮತ್ತೊಂದು ನೋಟನ್ನು ಪರ್ರನೆ ಹರಿದು, ಮನೆಯ ಪಕ್ಕದಲ್ಲೇ ಹರಿಯುತ್ತಿದ್ದ ಹಾರಂಗಿ ಕಾಲುವೆಯಲ್ಲಿ ಎಸೆದುಬಿಟ್ಟ. ಅಮ್ಮಿ ಗೋಳಾಡುತ್ತ ಹೋಗಿ ಟಾರ್ಚು ಬೆಳಕು ಬಿಟ್ಟುಕೊಂಡು, ನೋಟಿನ ಚೂರುಗಳನ್ನು ಹೆಕ್ಕಿ ತಂದು ಒಲೆಯ ಕಟ್ಟೆಯ ಮೇಲೆ ಒಣಹಾಕಿದ್ದಳು

ಅಬ್ಬ ಆಗ ಸೀಜನಲ್ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದನು. ಅಬ್ಬನ ಅಣ್ಣ ಕುಶಾಲನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಬ್ಬ ಮತ್ತು ದೊಡ್ಡಪ್ಪ ಇಬ್ಬರೂ ಸೇರಿ ಮೈಸೂರಿನಿಂದ  ಮೂಟೆಗಟ್ಟಲೆ ಹಣ್ಣುಗಳನ್ನು ಖರೀದಿಸಿ ತಂದು ಕುಶಾಲನಗರದ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಅಬ್ಬ ಆಟೋ ತುಂಬಾ ಕಿತ್ತಳೆ, ಸಪೋಟ, ಮಾವಿನಹಣ್ಣುಗಳ ಮೂಟೆಗಳನ್ನು ತುಂಬಿಸಿ ತಂದು ಮನೆಯಲ್ಲಿ ಗೋಡೆಯುದ್ದಕ್ಕೂ ಒರಗಿಸಿ ನಿಲ್ಲಿಸುತ್ತಿದ್ದನು. ಆಗೆಲ್ಲ ಆ ಪುಟ್ಟ ಮನೆಯ ತುಂಬಾ ರಾಶಿ-ರಾಶಿ ಹಣ್ಣುಗಳ ಮೂಟೆಗಳೇ ತುಂಬಿ ತುಳುಕುತ್ತಿದ್ದವು. ನಾವು ಮನಸೋ ಇಚ್ಛೆ ಆ ಹಣ್ಣುಗಳನ್ನು ತಿಂದು ತೇಗುತ್ತಿದ್ದೆವು. ಆಗ ಬೆಲ್ಲಕ್ಕೆ ಇರುವೆ ಮುತ್ತುವಂತೆ ನಮ್ಮ ಸುತ್ತಮುತ್ತಲ ಸ್ನೇಹಿತರೆಲ್ಲ ಹಣ್ಣುಗಳ ಆಸೆಗೆ ನಮ್ಮ ಸುತ್ತಲೇ ಗಿರಕಿ ಹೊಡೆಯುತ್ತಿದ್ದರು. ಅಬ್ಬನೂ ಅಷ್ಟೇ, ಆ ಹಣ್ಣುಗಳನ್ನು ಮಾರಲು ಕೊಂಡೊಯ್ಯುವ ಮೊದಲು ಮೊರಗಳಲ್ಲಿ ತುಂಬಿಸಿ-ತುಂಬಿಸಿ ಅಕ್ಕಪಕ್ಕದ ಮನೆಯ ಮಕ್ಕಳಿಗೆ ಹಂಚಿಬಿಡುತ್ತಿದ್ದನು. ಆದ್ದರಿಂದ ಭಾಗ್ಯಾಂಟಿಯ ನಾಲ್ಕು ಮಕ್ಕಳಿಗೂ ಅಬ್ಬನನ್ನು ಕಂಡರೆ ಬಹಳ ಪ್ರೀತಿ. ಆ ಮಕ್ಕಳು ಪ್ರೀತಿಯಿಂದ ಅಬ್ಬನನ್ನು 'ಅಮೀರ್ ಜಾನ್ ಮಾಮ' ಅಂತಲೇ ಕರೆಯುತ್ತಿದ್ದರು. ಭಾಗ್ಯಾಂಟಿಯ ಮೂರನೇ ಮಗಳು ಪೂರ್ಣಿಮಾ ಗುಂಡಗೆ, ಬೆಳ್ಳಗೆ, ಕುಳ್ಳಗೆ ಇದ್ದಿದ್ದರಿಂದ ಅಬ್ಬ ಅವಳನ್ನು 'ಕುಂಬ್ಳುಕಾಯಿ' ಅಂತ ಕರೆಯುತ್ತಿದ್ದನು. ಅಬ್ಬ ತಮಾಶೆಗೆ, "ಬಾರೆ ಕುಂಬ್ಳುಕಾಯ್ ಮಲ್ಕೊಳ್ಳನಾ," ಅಂತ ರೇಗಿಸಿದರೆ, ಅವಳು "ಏ... ಹೋಗಿ ಮಾಮ" ಎನ್ನುತ್ತ ನಾಚಿ ನೀರಾಗುತ್ತಿದ್ದಳು.

ಅಬ್ಬನಿಗೆ ಭಂಗಿ ಸೇದುವ ಚಟವಿತ್ತು. ಮೈಸೂರಿಗೆ ಹೋದಾಗಲೆಲ್ಲ ತಿಂಗಳಿಗೆ ಬೇಕಾಗುವಷ್ಟು ಭಂಗಿಸೊಪ್ಪನ್ನು ತಂದಿಟ್ಟುಕೊಳ್ಳುತ್ತಿದ್ದನು. ಒಣಗಿಸಿದ್ದ ಭಂಗಿಸೊಪ್ಪನ್ನು ಅದರ ಬೀಜಗಳಿಂದ ಬೇರ್ಪಡಿಸಿ, ಆ ಬೀಜಗಳನ್ನು ಯಾವುದಾದರೊಂದು ಜಾಗವನ್ನು ಗೊತ್ತು ಮಾಡಿಕೊಂಡು ಅಲ್ಲಿ ಚೆಲ್ಲಿ ಅದಕ್ಕೆ ದಿನವೂ ನೀರು ಹಾಕುತ್ತಿದ್ದನು. ದನಕರುಗಳು ತಿನ್ನದಂತೆ ಅದಕ್ಕೆ ಮುಳ್ಳಿನ ಗಿಡಗಳನ್ನು ತಂದು ಕವುಚುತ್ತಿದ್ದನು. ಅವು ಚಿಗುರಿ ಚೆಂಡುಹೂವಿನ ಗಿಡದ ಆಕಾರದಲ್ಲಿ ಬೆಳೆಯುತ್ತಿದ್ದವು. ನಾವು ಅದನ್ನು ಚೆಂಡುಹೂವಿನ ಗಿಡಗಳೆಂದೇ ಭಾವಿಸುತ್ತಿದ್ದೆವು. ಹೀಗೆ ಮೈಸೂರಿನಿಂದ ತಂದ ಸೊಪ್ಪನ್ನು ಅಂಗೈಯಲ್ಲಿ ಚೆನ್ನಾಗಿ ಹೊಸಕಿ ಪುಡಿ ಮಾಡಿ, ಬೀಡಿಯೊಳಗಿನ ಪುಡಿಯನ್ನು ಅದರೊಟ್ಟಿಗೆ ಬೆರೆಸಿ, ತೆಂಗಿನಗರಿಯಿಂದ ಕೊಳವೆ ಮಾಡಿ, ಆ ಕೊಳವೆಯಲ್ಲಿ ಅದನ್ನು ಅದುಮಿ-ಅದುಮಿ ತುಂಬಿಸುತ್ತಿದ್ದನು. ಅಬ್ಬ ಅದನ್ನು ತಯಾರಿಸಿ ಕೊಳವೆಯಲ್ಲಿ ತುಂಬಿಸಿ, ತುಟಿಯ ಮೇಲಿಟ್ಟು ಕಡ್ಡಿ ಗೀರಿ ಹೊತ್ತಿಸಿ ಸೇದಿ ಹೊಗೆಯಲ್ಲಿ ಮುಳುಗಿ ಏಳುತ್ತಿದ್ದದ್ದನ್ನು ನಾವು ಒಂದು ಕ್ರಿಯಾವಿಧಿಯೆಂಬಂತೆ ನೋಡುತ್ತ ಕೂರುತ್ತಿದ್ದೆವು. ಭಂಗಿ ಸೇದಿದಾಗ ಅಬ್ಬ ಆಶ್ಚರ್ಯವೆಂಬಂತೆ ಬದಲಾಗಿಬಿಡುತ್ತಿದ್ದ. ಅಮ್ಮಿ ಏನೇ ಬಯ್ದರೂ ಸುಮ್ಮನೆ ಮೌನವಾಗಿರುತ್ತಿದ್ದ. ಆಗ ಅಮ್ಮಿ ಇದೇ ಸೂಕ್ತ ಸಮಯವೆಂಬಂತೆ ತನ್ನೆಲ್ಲ ಕೋಪವನ್ನು ಬಯ್ದು ತೀರಿಸಿಕೊಳ್ಳುತ್ತಿದ್ದಳು. ನನ್ನನ್ನು ಕರೆದು ತಲೆಯಲ್ಲಿ ಹೇನು ಹಿಡಿಯಲು ಹೇಳುತ್ತಿದ್ದ. ಒಂದು ದೊಡ್ಡ ಹೇನು ಹಿಡಿದರೆ ಇಪ್ಪತ್ತೈದು ಪೈಸೆ, ಸಣ್ಣ ಹೇನು ಹಿಡಿದರೆ ಹತ್ತು ಪೈಸೆ, ಅದರ ಮೊಟ್ಟೆ ತೆಗೆದರೆ ಐದು ಪೈಸೆ, ತಲೆಯಲ್ಲಿ ಒಂದು ಬಿಳಿಕೂದಲು ಕಿತ್ತರೆ ಐದು ಪೈಸೆ... ಹೀಗೆ ನಾನು ಹಿಡಿದಷ್ಟು ಹೇನಿನ ಹಣವನ್ನು ಸಂಬಳವೆಂಬಂತೆ ಶಿಸ್ತಿನಿಂದ ನನಗೆ ಕೊಟ್ಟುಬಿಡುತ್ತಿದ್ದ. ನಮ್ಮ ತಿಂಡಿ ತಿನಿಸಿನ ಖರ್ಚಿಗೆ ಬೇಕಾದಷ್ಟು ಹಣವನ್ನು ನಾನು ಅಬ್ಬನಿಂದ ಹೀಗೆ ದುಡಿದುಕೊಳ್ಳುತ್ತಿದ್ದೆ. ಅಬ್ಬ ಭಂಗಿ ಹೊಡೆದಾಗ ನಾವು ಮಂಗಗಳಂತೆ ಅವನ ತಲೆಯ ಮೇಲೇರಿ ನೆಲಕ್ಕೆ ನೆಗೆಯುತ್ತಿದ್ದರೂ ಯಾವ ಪ್ರತಿಕ್ರಿಯೆಯನ್ನೂ ಕೊಡದೆ ಸುಮ್ಮನೆ ಕೂರುತ್ತಿದ್ದ. ಹಾಗಾಗಿ, ನಾವು ದಿನವೂ ಅಬ್ಬನಿಗೆ ಭಂಗಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವು.

ಕಲಾಕೃತಿ ಕೃಪೆ: ಫೈರ್‌ಸ್ಟೀಲ್ ಜಾಲತಾಣ

ಭಂಗಿಸೊಪ್ಪು ಖಾಲಿಯಾಗುತ್ತಿದ್ದಂತೆ ಅಬ್ಬ ನಮ್ಮೂರಿನ ಮಸೀದಿಯ ಪಕ್ಕದಲ್ಲಿದ್ದ ಸಾರಾಯಿ ಅಂಗಡಿಯಲ್ಲಿ ಠಿಕಾಣಿ ಹೂಡುತ್ತಿದ್ದ. ಭಂಗಿ ಸೇದಿದಾಗ ಪಾಪದವನಂತಿರುತ್ತಿದ್ದ ಅಬ್ಬ, ಕುಡಿದಾಗ ಮಾತ್ರ ರಾಕ್ಷಸನಂತೆ ಬದಲಾಗುತ್ತಿದ್ದ. ಅವನ ಜಗಳಕ್ಕೆ ಕಾರಣವೇ ಬೇಕಿರಲಿಲ್ಲ. ಅನ್ನದಲ್ಲಿ ಒಂದು ಸಣ್ಣ ಭತ್ತದ ಕಾಳು ಅಥವಾ ಸಣ್ಣ ನುರುಚುಗಲ್ಲು ಸಿಕ್ಕರೂ ಸಾಕು, ಜಗಳ ಶುರು ಮಾಡಿ ಅಮ್ಮಿಗೆ ರಾಕ್ಷಸನಂತೆ ಹೊಡೆಯುತ್ತಿದ್ದ. ಬೆಳಗ್ಗೆ ಎದ್ದು, "ಲೇ ಸಾವತ್ರಿ... ರಾತ್ರಿ ನಾನು ಜಗಳ ಮಾಡಿದ್ನೇನೆ? ಯಾರ್ಗಾದ್ರು ಹೊಡುದ್ನೇನೆ?" ಅಂತ ಕೇಳುತ್ತಿದ್ದ.

ಒಂದು ದಿನ ರಾತ್ರಿ ಒಂಬತ್ತು ಹತ್ತು ಗಂಟೆಯ ಸಮಯ. ಕುಡಿದ ಮತ್ತಿನಲ್ಲಿ ಅಮ್ಮಿಯೊಡನೆ ಜಗಳವಾಡಿ, ಜೇಬಿನಲ್ಲಿದ್ದ ನೂರರ ಒಂದು ನೋಟು ಮತ್ತು ಐವತ್ತರ ಮತ್ತೊಂದು ನೋಟನ್ನು ಒಟ್ಟಿಗೆ ಸೇರಿಸಿ ಪರ್ರನೆ ಹರಿದು, ಮನೆಯ ಪಕ್ಕದಲ್ಲೇ ಹರಿಯುತ್ತಿದ್ದ ಹಾರಂಗಿ ಕಾಲುವೆಯಲ್ಲಿ ಎಸೆದುಬಿಟ್ಟ. ಅಮ್ಮಿ ಗೋಳಾಡುತ್ತ ಹೋಗಿ ಟಾರ್ಚು ಬೆಳಕು ಬಿಟ್ಟುಕೊಂಡು, ತೇಲಿಹೋಗುತ್ತಿದ್ದ ನೋಟಿನ ಚೂರುಗಳನ್ನು ಹೆಕ್ಕಿ ತಂದು ಒಲೆಯ ಕಟ್ಟೆಯ ಮೇಲೆ ಒಣಹಾಕಿದ್ದಳು. ಮತ್ತೊಮ್ಮೆ ತಾನೇ ಮೈಸೂರಿನಿಂದ ತಂದು ಗೋಡೆಗೆ ಮೊಳೆ ಹೊಡೆದು ನೇತುಹಾಕಿಕೊಂಡಿದ್ದ ಟಿಪ್ಪುವಿನ ಕ್ಯಾಲೆಂಡರ್ ಜೊತೆಗೆ ಒಂದಿಷ್ಟು ಮಸೀದಿಯ ಕ್ಯಾಲೆಂಡರ್‌ಗಳು ಮತ್ತು ಮದುವೆಯಾದ ಹೊಸತರಲ್ಲಿ ತೆಗೆಸಿಕೊಂಡಿದ್ದ ಫೋಟೊ ಎಲ್ಲವನ್ನೂ ಒಡೆದು - ಹರಿದು ಹಾಕಿದ್ದನು. ಇಂತಹ ದಿನನಿತ್ಯದ ಹಲವು ಘಟನೆಗಳು ನಮ್ಮನ್ನು ಒಂದು ರೀತಿ ಅಧೈರ್ಯಗೊಳಿಸಿದ್ದವು. ಹಾಗಾಗಿ, ಅಬ್ಬ ಮನೆಗೆ ಬರುವುದು ತಡವಾದರೆ ನಮಗೆ ಜೀವ ಪುಕಪುಕನೆ ಹೊಡೆದುಕೊಳ್ಳುತ್ತಿತ್ತು. ಅಮ್ಮಿ ಬಾಗಿಲು ಬಳಿಯೇ ಕೂತಿದ್ದು, ದೂರದಿಂದ ತೂರಾಡುತ್ತ ಬರುತ್ತಿದ್ದ ಅಬ್ಬನನ್ನು ನೋಡಿ, ಓದುತ್ತ-ಬರೆಯುತ್ತ ಕೂತಿರುತ್ತಿದ್ದ ನಮ್ಮನ್ನು ಬಲವಂತದಿಂದ ಎಬ್ಬಿಸಿ ಪುಸ್ತಕಗಳನ್ನು ಮಡಿಸಿ ಬ್ಯಾಗಿನೊಳಗೆ ತುರುಕಿ ಮಲಗಿಸಿಬಿಡುತ್ತಿದ್ದಳು. ಎಷ್ಟೋ ಸಾರಿ ಓದುತ್ತ ಕುಳಿತಿರುತ್ತಿದ್ದ ನಮ್ಮ ಪುಸ್ತಕಗಳನ್ನೂ ಹರಿದು ನಮ್ಮನ್ನೂ ಹೊಡೆದಿದ್ದಿದೆ. ನಾವಿಬ್ಬರೂ ಅಬ್ಬ ಬರುವ ಸದ್ದನ್ನೇ ಕೇಳಿಸಿಕೊಳ್ಳುತ್ತ ಕಂಬಳಿಯ ಒಳಗೆ ಮಲಗಿರುತ್ತಿದ್ದೆವು. ದೇಹ ಮಾತ್ರ ಚಾಪೆಯ ಮೇಲೆ ಬಿದ್ದುಕೊಂಡಿದ್ದರೆ ಮನಸ್ಸೆಲ್ಲ ಹಾದಿಬೀದಿಯ ಮೇಲೆ ಹರಿದಾಡುತ್ತಿದ್ದ ಸದ್ದುಗಳನ್ನೇ ಆಲಿಸುತ್ತಿರುತ್ತಿತ್ತು.

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಇವತ್ತಿಗೂ ಕಾಡುತ್ತದೆ ಅಂದು ಗಣಿತ ಕ್ಲಾಸಿನಲ್ಲಿ ಕಳೆದುಹೋದ ಕಿವಿಯೋಲೆ

ಅವತ್ತು ಅಬ್ಬ ಮನೆಗೆ ಬರುವಷ್ಟರಲ್ಲಿ ಒಂಬತ್ತಾಗಿತ್ತು. ದಾರಿಯುದ್ದಕ್ಕೂ ಅರಚುತ್ತ ಬರುತ್ತಿದ್ದವನ ಸದ್ದು ಕೇಳಿ ನಮ್ಮಿಬ್ಬರ ನಿದ್ದೆಯೇ ಆರಿಹೋಯಿತು. ಬರುವಷ್ಟರಲ್ಲಿ ಒಂದೆರಡು ಕಡೆ ಬಿದ್ದು ಬಟ್ಟೆಯೆಲ್ಲ ಕೊಳಕಾಗಿತ್ತು. ಬಂದವನೇ ಅಮ್ಮಿಯೊಡನೆ ಜಗಳ ಶುರು ಮಾಡಿದ. ಅಮ್ಮಿಗೆ ಸಾಕಷ್ಟು ಹೊಡೆದು, "ಎಯ್... ಕತ್ತಿ ಕೊಡೇ ಮುಂ*..." ಎನ್ನುತ್ತಾ ಮನೆಯ ಮೂಲೆಯಲ್ಲೆಲ್ಲ ಕತ್ತಿಗಾಗಿ ತಡಕಾಡಿದ. ಅಬ್ಬ ಕುಡಿದು ಬಂದಾಗೆಲ್ಲ ಕತ್ತಿ ಹಿಡಿದು ಅಮ್ಮಿಯನ್ನು ಅಟ್ಟಾಡಿಸುತ್ತಿದದ್ದರಿಂದ ಕತ್ತಿ, ಕುಡುಗೋಲು, ಚಾಕುವಿನಂತ ಹರಿತವಾದ ವಸ್ತುಗಳನ್ನು ಪಕ್ಕದ ಮನೆಯಲ್ಲಿ ಇಡಲು ಕೊಡುತ್ತಿದ್ದಳು. ನಂತರ ಪರಿಸ್ಥಿತಿ ಹದಕ್ಕೆ ಬರುತ್ತಿದ್ದಂತೆ ಒಂದೊಂದೇ ಬಂದು ಮತ್ತೆ ಮನೆ ಸೇರುತ್ತಿದ್ದವು. ಅಂದು ಅಬ್ಬ ಕತ್ತಿ ಎತ್ತಿಕೊಂಡೊಡನೇ ಅಮ್ಮಿ ನಮ್ಮಿಬ್ಬರನ್ನೂ ಎಳೆದುಕೊಂಡು ಮನೆಯಿಂದ ಆಚೆ ಓಡಿಬಿಟ್ಟಳು. ಹಿಂದೆ ಕೆಲವು ಸಲ ಇಂಥದ್ದೇ ಘಟನೆ ನಡೆದಾಗ, ಕಾಫಿ ವರ್ಕ್ಸ್‌ನಲ್ಲಿ ಅಮ್ಮಿಯ ಜೊತೆ ಕೆಲಸ ಮಾಡುತ್ತಿದ್ದವರ ಮನೆಗಳಲ್ಲಿ ಆಶ್ರಯ ಪಡೆದಿದ್ದೆವು. ಆದರೆ, ಅಬ್ಬ ನಮ್ಮನ್ನು ಹುಡುಕುತ್ತ ಅಮ್ಮಿಗೆ ಪರಿಚಯವಿದ್ದವರೆಲ್ಲರ ಮನೆ ಬಾಗಿಲು ತಟ್ಟಿ, ಅವರ ಗಂಡಂದಿರೊಂದಿಗೆ ಅಮ್ಮಿಯ ಸಂಬಂಧ ಕಲ್ಪಿಸಿ ಕೆಟ್ಟದಾಗಿ ಬಯ್ಯುತ್ತಿದ್ದ. ಹಾಗಾಗಿ, ಯಾರೂ ನಮ್ಮನ್ನು ತಮ್ಮ ಮನೆಗಳಿಗೆ ಸೇರಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಾಂದರ್ಭಿಕ ಚಿತ್ರ

ಅಂದು ಅಮ್ಮಿ ನಮ್ಮನ್ನು ಯಾರ ಮನೆಗೂ ಕರೆದೊಯ್ಯಲಿಲ್ಲ. ನಮ್ಮ ಮನೆಯ ಪಕ್ಕದಲ್ಲೇ ಇದ್ದ ಭಾಗ್ಯಾಂಟಿಯ ಮೈದುನ ರಾಜಶೇಖರ ಮಾಮನ ದನದ ಕೊಟ್ಟಿಗೆಯೊಳಗೆ ಎಳೆದುಕೊಂಡು ಓಡಿದಳು. ಆ ಕೊಟ್ಟಿಗೆಯ ಮೂಲೆಯೊಂದರಲ್ಲಿ ನಮ್ಮನ್ನು ತನ್ನ ಮಡಿಲಲ್ಲಿ ಅವುಚಿಕೊಂಡು ಕೂತಳು. ಅಬ್ಬ ಮಾತ್ರ ಕತ್ತಿ ಹಿಡಿದುಕೊಂಡು ಕಟಕಟನೆ ಹಲ್ಲು ಕಡಿಯುತ್ತ ನಮ್ಮನ್ನು ಕೆಟ್ಟದಾಗಿ ಬಯ್ಯುತ್ತ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತ ನಮ್ಮನ್ನು ಹುಡುಕುತ್ತಲೇ ಇದ್ದ. ಒಂದೆರಡು ಮನೆಗಳ ಬಾಗಿಲು ತಟ್ಟಿ ಅವರೊಂದಿಗೂ ಜಗಳಾಡಿ ಬಂದ. ಮಧ್ಯರಾತ್ರಿಯವರೆಗೂ ಹುಡುಕಿದ. ನಮ್ಮ ಸುಳಿವು ಸಿಗದಿದ್ದಕ್ಕೆ ಮನೆಯಲ್ಲಿದ್ದ ಎಲ್ಲ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ. ಆ ಸದ್ದುಗಳು ನಮ್ಮ ಕಿವಿಗಳಿಗೆ ಬಂದು ಅಪ್ಪಳಿಸುತ್ತಿದ್ದವು. ಎಷ್ಟೋ ಹೊತ್ತಾದ ಮೇಲೆ ರಪ್ಪನೆ ಮನೆಯ ಬಾಗಿಲು ನೂಕಿ ಚಿಲಕ ಹಾಕಿಕೊಂಡ. ನಾವು ಇದನ್ನೆಲ್ಲ ಆ ಗೌವ್ ಎನ್ನುತ್ತಿದ್ದ ಕೊಟ್ಟಿಗೆಯೊಳಗಿನಿಂದಲೇ ಕೇಳಿಸಿಕೊಳ್ಳುತ್ತಿದ್ದೆವು. ಸಗಣಿ ಗಂಜಲದ ವಾಸನೆಯ ಜೊತೆಗೆ ರಾತ್ರಿಯ ಆ ಗೌಗತ್ತಲು ನನ್ನ ಪುಟ್ಟ ಮನವನ್ನು ಇನ್ನಿಲ್ಲದಂತೆ ಬೆದರಿಸಿತ್ತು. ನನ್ನೆಲ್ಲ ದೆವ್ವದ ಕಲ್ಪನೆಗಳಿಗೂ ಆ ಕತ್ತಲು ಮೂರ್ತರೂಪವನ್ನು ಒದಗಿಸಿತ್ತು. ಆ ದೆವ್ವದ ಕಲ್ಪನೆಗಳ ಪ್ರವೇಶಿಕೆಗೆ ನೇಪಥ್ಯವನ್ನು ಒದಗಿಸಿದಂತೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಂದೆರಡು ಹಸುಗಳು ಹುಲ್ಲು ಜಿಗಿಯುತ್ತ ಬಾಲವನ್ನು ನೆಲಕ್ಕೆ ಅಪ್ಪಳಿಸುತ್ತಿದ್ದ ಶಬ್ದಗಳು ನನ್ನ ಉಸಿರಾಟದ ಲಯವನ್ನೇ ಕ್ಷೀಣಗೊಳಿಸಿದ್ದವು. ಜೊತೆಗೆ ತಣ್ಣಗೆ ಕೊರೆಯುತ್ತಿದ್ದ ಚಳಿಗಾಳಿಯೂ ಇಡೀ ರಾತ್ರಿ ನಮ್ಮನ್ನು ಸಾಕಷ್ಟು ಭಾಧಿಸಿತ್ತು. ಕ್ರಮೇಣ ಎಲ್ಲ ಶಬ್ದಗಳು ಕತ್ತಲೊಳಗೆ ಲೀನವಾದಂತೆ ನನಗೆ ನಿದ್ದೆ ಹತ್ತಿದ್ದು ತಿಳಿಯಲಿಲ್ಲ. ಬೆಳಗ್ಗೆ ಕೋಳಿ ಕೂಗುವ ಹೊತ್ತಿಗೆ ಅಮ್ಮಿ ನಮ್ಮನ್ನು ಎಚ್ಚರಿಸಿ ಕರೆದುಕೊಂಡು ಹೋಗಿ, ಮನೆಯ ಬಾಗಿಲ ಬಳಿಯ ಗೋಡೆಗೆ ಒರಗಿ ಕೂತಳು. ಬೆಳಕು ಹರಿದಾಗ ಎಚ್ಚರಗೊಂಡ ಅಬ್ಬ ಬಾಗಿಲು ತೆರೆದ. ಬಾಗಿಲಲ್ಲೇ ಒರಗಿ ಕೂತಿದ್ದ ಅಮ್ಮಿಯನ್ನು ದುರುಗುಟ್ಟಿ ನೋಡಿ, "ರಾತ್ರಿ ಯಾವನ್ ಹತ್ರ ಹೋಗಿದ್ದೇ... ಸೂ...ಮುಂ..." ಎನ್ನುತ್ತ ಒದ್ದ ಒದೆತಕ್ಕೆ ಅಮ್ಮಿ, "ಅಯ್ಯಪ್ಪಾ..." ಎಂದು ಚೀರುತ್ತ ಅಷ್ಟು ದೂರ ಹೋಗಿಬಿದ್ದಳು. ಅಬ್ಬ ಹತ್ತಿರ ಹೋಗಿ ಅಮ್ಮಿಯನ್ನು ಬಯ್ಯುತ್ತ ತುಳಿದ, ಒದ್ದ... ಆಮೇಲೆ ಕಾಲುವೆ ದಾಟಿ, ಸರ್ಕಲ್‌ನ ದಾರಿಯಲ್ಲೇ ನಡೆದು ಕಣ್ಮರೆಯಾದ. ಅಮ್ಮಿ ನೋವಿನಲ್ಲಿಯೇ ಎದ್ದು ಕುಂಟುತ್ತ ಮನೆಯ ಒಳಗೆ ಹೋಗಿ, ಅಸ್ತವ್ಯಸ್ತವಾಗಿದ್ದ ಮನೆಯನ್ನು ಒಪ್ಪಗೊಳಿಸಿದಳು. ಅಂದೇ ಭಾಗ್ಯಾಂಟಿ ಬಂದು ನಿರ್ದಾಕ್ಷಿಣ್ಯವಾಗಿ ಮನೆ ಖಾಲಿ ಮಾಡಲು ಹೇಳಿ ಹೋದರು.

ಇಂತಹ ಎಷ್ಟೋ ಘಟನೆಗಳಲ್ಲಿ ಅಮ್ಮಿಯ ಮೇಲಾಗುತ್ತಿದ್ದ ದೈಹಿಕ ಮತ್ತು ಮಾನಸಿಕ ದೌರ್ಜನ್ಯದ ಎಳೆಗಳು ಅವಳ ದೇಹದ ಮೇಲಿನ ಗಾಯಗಳಿಂದ ವ್ಯಕ್ತವಾಗುತ್ತಿತ್ತೇ ಹೊರತು, ಅವಳಂತೂ ಏನೂ ನಡೆದೇ ಇಲ್ಲವೆಂಬಂತೆ ನಿರಾಳವಾಗಿರುತ್ತಿದ್ದದ್ದನ್ನು ನೋಡಿ, ನನಗೆ ಆ ಎಳೆಯ ವಯಸ್ಸಿನಲ್ಲೂ ಆಶ್ಚರ್ಯವೆನ್ನಿಸುತ್ತಿತ್ತು. ಜೊತೆಗೆ, ಅಬ್ಬನ ನೆನೆದು ಒಳಗೊಳಗೇ ಮನಸ್ಸು ಕುದಿಯುತ್ತಿತ್ತು.

ಮುಖ್ಯ ಚಿತ್ರ: ಪೆನ್ಸಿಲ್ವೇನಿಯಾದ ವಿಲ್ಲಾ ಮರಿಯಾ ಅಕಾಡೆಮಿ ಹೈಸ್ಕೂಲ್ ವಿದ್ಯಾರ್ಥಿಯೊಬ್ಬರು ರಚಿಸಿದ 'ಕೌಟುಂಬಿಕ ಹಿಂಸೆ'ಯ ಕಲಾಕೃತಿ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app