
ಕಾಫಿ ವರ್ಕ್ಸ್ ಹೆಂಗಸರನ್ನು ನೋಡುತ್ತಿದ್ದಂತೆ ಹುಮ್ಮಸ್ಸು ಉಮ್ಮಳಿಸಿ ಒಳಗೊಳಗೇ ಹಿರಿಹಿರಿ ಹಿಗ್ಗುತ್ತಿದ್ದೆ. ಅರ್ಧ ದಾರಿಯಲ್ಲೇ ಓಡಿಹೋಗಿ ಅಮ್ಮಿಗೆ ಜಡೆ ಬಿದ್ದು ಹೊಡೆಸಿಕೊಂಡು ಬಾಗಿಲಲ್ಲೇ ಜಗ್ಗಿ ಕೂರಿಸಿ ಹಾಲು ಚೀಪುತ್ತಿದ್ದೆ. ಪ್ರತಿದಿನ ಬೆಳಿಗ್ಗೆ ದುಡಿಮೆಯ ಗಡಿಬಿಡಿಯಲ್ಲಿರುತ್ತಿದ್ದ ಅಮ್ಮಿಗೆ, ನನ್ನನ್ನು ಶಾಲೆಗೆ ಕಳುಹಿಸುವುದು ಒಂದು ಸಾಹಸದ ಕೆಲಸವೇ ಆಗಿಬಿಟ್ಟಿತ್ತು
ನಾನು ಒಂದನೆಯ ತರಗತಿಯೋ ಅಥವಾ ಎರಡನೆಯ ತರಗತಿಯೋ ಓದುತ್ತಿದ್ದ ಬೇಸಿಗೆ ರಜೆಯ ದಿನಗಳವು. ಕೋತಿಯಂತೆ ಮರಕ್ಕೆ ಜೋತು ಬೀಳುತ್ತಾ, ಮಣ್ಣಾಟ, ಕಣ್ಣಾಮುಚ್ಚಾಲೆ ಆಟಗಳನ್ನಾಡುತ್ತಾ ಕಾಲ ಕಳೆಯುತ್ತಿದ್ದ ಹೂ ವಯಸ್ಸು. ವಯಸ್ಸು ನಾಲ್ಕು ದಾಟಿದರೂ ಇನ್ನೂ ಅಮ್ಮಿಯ ಎದೆಹಾಲು ಕುಡಿಯುತ್ತಿದ್ದ ನನ್ನನ್ನು ಸಾಹಸ ಮಾಡಿ ಅಮ್ಮಿ ಹಳೇಕೂಡಿಗೆಯ ಸರ್ಕಾರಿ ಶಾಲೆಗೆ ಸೇರಿಸಿದ್ದೂ ಆಗಿತ್ತು. ಕೊಪ್ಪಲಿನ ಭಾಗ್ಯಾಂಟಿಯ ಕೊನೆಯ ಮಗ ಮಂಜನನ್ನೂ ನನ್ನನ್ನೂ ಒಟ್ಟಿಗೆ ನಿಲ್ಲಿಸಿ ತಲೆಯ ಕೂದಲು ಸಂಪೂರ್ಣವಾಗಿ ಬೆಳ್ಳಗಾಗಿದ್ದ ಲಕ್ಷ್ಮಮ್ಮ ಟೀಚರ್ ನಮ್ಮ ಮುಟ್ಟದ ಕಿವಿಗೆ ಕೈಯನ್ನು ಜಗ್ಗಿ ಜಗ್ಗಿ ಮುಟ್ಟಿಸಿ ಜಯಗಳಿಸಿದವರಂತೆ ನಮ್ಮ ಹೆಸರನ್ನು ದಾಖಲಾತಿ ಪುಸ್ತಕದಲ್ಲಿ ನೊಂದಾಯಿಸಿಕೊಂಡರೂ, ವಯಸ್ಸು ಕಡಿಮೆ ಇದ್ದ ಕಾರಣ ನನ್ನ ಒಂದನೆಯ ತರಗತಿಯ ಬೆಂಚನ್ನು ಮುಂದಿನ ಮತ್ತೊಂದು ವರ್ಷಕ್ಕೂ ಕಾಯ್ದಿರಿಸಿರುವಂತೆ ತಮ್ಮ ಮನಸ್ಸಿನಲ್ಲೇ ಅಂದಾಜು ಮಾಡಿಕೊಂಡಿದ್ದರೇನೋ? ಹಾಗಾಗಿ ನಾನು ಒಂದನೆಯ ತರಗತಿಯನ್ನು ಎರಡೆರಡು ಸಲ ಓದಬೇಕಾಗಿ ಬಂತು. ಹಾಲಿಲ್ಲದ ಮೊಲೆಗಳನ್ನು ಚೀಪುವುದನ್ನೇ ಚಟ ಮಾಡಿಕೊಂಡಿದ್ದ ನನ್ನನ್ನು ಶಾಲೆಗೆ ಸೇರಿಸುವುದರಿಂದ ರೂಢಿಯಾಗಿದ್ದ ಚಟವಾದರೂ ಕೊಂಚ ಕಡಿಮೆ ಆಗಬಹುದು ಎಂಬುದು ಅಮ್ಮಿಯ ಭಾವನೆ.
ಆದರೆ, ಅಮ್ಮಿ ಮನೆಯಲ್ಲಿ ಇಲ್ಲದಿದ್ದರೂ ನಾನು ಮಧ್ಯಾಹ್ನದ ಊಟದ ಬಿಡುವಿನಲ್ಲಿಯೋ ಅಥವಾ ಆಟದ ಬಿಡುವಿನಲ್ಲಿಯೋ ಶಾಲೆಯಿಂದ ತಪ್ಪಿಸಿಕೊಂಡು ರಸ್ತೆಗಿಳಿದು ಬದಿಯಲ್ಲಿಯೇ ನಡೆದುಕೊಂಡು ಮನೆಗೆ ಬಂದು ಬಿಡುತ್ತಿದ್ದೆ. ಬಂದು ಮನೆಯಲ್ಲಿ ಅಮ್ಮಿ ಇಲ್ಲದ್ದು ಕಂಡು ದುಃಖದಿಂದ ಬಾಗಿಲಲ್ಲಿ ಕೂತು ಅಮ್ಮಿ ಬರುವುದನ್ನೇ ಕಾಯುತ್ತಿದ್ದವಳಿಗೆ ಐದು ಗಂಟೆಗೆ ಗುಂಪುಗುಂಪಾಗಿ ಬರುತ್ತಿದ್ದ ಕಾಫಿ ವರ್ಕ್ಸ್ ಹೆಂಗಸರನ್ನು ನೋಡುತ್ತಿದ್ದಂತೆ ಹುಮ್ಮಸ್ಸು ಉಮ್ಮಳಿಸಿ ಒಳಗೊಳಗೇ ಹಿರಿಹಿರಿ ಹಿಗ್ಗುತ್ತಿದ್ದೆ. ಅರ್ಧ ದಾರಿಯಲ್ಲೇ ಓಡಿಹೋಗಿ ಅಮ್ಮಿಗೆ ಜಡೆ ಬಿದ್ದು ಹೊಡೆಸಿಕೊಂಡು ಬಾಗಿಲಲ್ಲೇ ಜಗ್ಗಿ ಕೂರಿಸಿ ಹಾಲು ಚೀಪುತ್ತಿದ್ದೆ. ಪ್ರತಿದಿನ ಬೆಳಿಗ್ಗೆ ದುಡಿಮೆಯ ಗಡಿಬಿಡಿಯಲ್ಲಿರುತ್ತಿದ್ದ ಅಮ್ಮಿಗೆ, ನನ್ನನ್ನು ಶಾಲೆಗೆ ಕಳುಹಿಸುವುದು ಒಂದು ಸಾಹಸದ ಕೆಲಸವೇ ಆಗಿಬಿಟ್ಟಿತ್ತು. ಬೇವಿನಸೊಪ್ಪು, ಕವಟೆಕಾಯಿಗಳನ್ನು ತನ್ನ ಮೊಲೆತೊಟ್ಟುಗಳಿಗೆ ಹಚ್ಚಿಕೊಂಡರೂ ಬಿಡದೇ ಅದನ್ನು ಬಟ್ಟೆಯಿಂದ ಒರೆಸಿ ಹಾಲು ಚೀಪುತ್ತಿದ್ದೆ. ಒಮ್ಮೆ ಶಾಲೆಗೆ ಹೋಗುವುದನ್ನು ಗಂಭೀರವಾಗಿ ವಿರೋಧಿಸಿದ ನನ್ನನ್ನು ಜುಟ್ಟು ಹಿಡಿದು ರಸ್ತೆಯಲ್ಲಿ ದರದರನೆ ಎಳೆದೊಯ್ದು ಶಾಲೆಯ ಗೇಟಿನ ಒಳಗೆ ಬಿಸಾಕಿ ಟೀಚರ್ಗೆ ನನ್ನ ಮೇಲೊಂದು ಕಣ್ಣಿಡಲು ಹೇಳಿ ಬಂದಿದ್ದಳು.

ನಮ್ಮೂರಿನ ಮಸೀದಿಯ ಪಕ್ಕದಲ್ಲಿ ದೇವಮ್ಮಜ್ಜಿಗೆ ಸೇರಿದ ವಿಶಾಲವಾದ ಗದ್ದೆ ಬಯಲಿನಲ್ಲಿ ಹರಡಿಕೊಂಡಿದ್ದ ದೊಡ್ಡದೊಂದು ಮಾವಿನ ಮರವಿತ್ತು. ಅದರ ಕೆಳಗೆ ದೇವಮ್ಮಜ್ಜಿಯ ಮೊಮ್ಮಕ್ಕಳೊಂದಿಗೆ ನಾನು ಮತ್ತು ದಿನಣ್ಣ ಕುಳಿತು ಗಾಳಿಗೆ ಉದುರಿ ಬಿದ್ದಿರುತ್ತಿದ್ದ ಅಥವಾ ಕೈಗೆ ಎಟಕುವ ಮಾವಿನ ಕಾಯಿಗಳನ್ನು ನೆಲಕ್ಕೆ ಬಡಿದು, ಅದರ ಹೋಳುಗಳಿಗೆ ಅಮ್ಮಿ ಮನೆಯಲ್ಲಿ ರುಬ್ಬಿಟ್ಟಿರುತ್ತಿದ್ದ ಉಪ್ಪೆಸರು ಕಾರವನ್ನೋ ಅಥವಾ ಬೆರೆಸಿದ ಉಪ್ಪು ಕಾರದಪುಡಿಯ ಮಿಶ್ರಣವನ್ನೋ ಹಚ್ಚಿಕೊಂಡು ಅದನ್ನು ಮೆಲ್ಲುತ್ತಾ ದಿನವಿಡೀ ಆ ಮರದ ಕೆಳಗೆ ಇಲ್ಲವೆ, ಸುತ್ತ ಮುತ್ತಲಿನ ಗದ್ದೆ ಬಯಲುಗಳಲ್ಲಿ ಆಡಿಕೊಂಡಿರುತ್ತಿದ್ದೆವು. ರಾತ್ರಿಯೆಲ್ಲಾ ಸುರಿಯುತ್ತಿದ್ದ ಗಾಳಿ ಮಳೆಗೆ ಆ ಮರದಲ್ಲಿ ತೂಗಾಡುತ್ತಿದ್ದ ಹುಳಿ ಮಾವಿನಕಾಯಿಗಳು ನಮ್ಮ ಕಲ್ಪನಾ ಕಣ್ಣುಗಳಿಗೆ ಆಕಾಶದಿಂದ ರೆಕ್ಕೆ ಪುಕ್ಕ ಕಟ್ಟಿಕೊಂಡು ನಮ್ಮೆಡೆಗೆ ಹಾರಿ ಬರುತ್ತಿರುವಂತೆ ಭಾಸವಾಗುತ್ತಿದ್ದವು. ರಾತ್ರಿಯೆಲ್ಲ ಮಾವಿನ ಮರದಡಿಯಲ್ಲಿ ಮನಸ್ಸು ಮನೆ ಮಾಡಿದ್ದರೆ ಬೆಳಗ್ಗೆಯಾದೊಡನೆ ಶಿಸ್ತಿನಿಂದ ಹಾಜರಾಗಿ ಬಿಡುತ್ತಿದ್ದೆವು. ಜೋತಾಡುತ್ತಾ ಕೈಗೆಟಕುತ್ತಿದ್ದ ಮಾವಿನ ಕಾಯಿಗಳನ್ನು ಅಸಡ್ಡೆ ಮಾಡಿ ಎತ್ತರದ ಕಾಯಿಗಳಿಗೆ ಕಲ್ಲು ಬೀರುತ್ತಿದ್ದೆವು.
ಆ ಗದ್ದೆಯಲ್ಲೊಂದು ದೊಡ್ಡಾಲದ ಮರವಿತ್ತು. ಪ್ರತಿವರ್ಷ ದೇವಮ್ಮಜ್ಜಿಯ ಮುಂದಾಳತ್ವದಲ್ಲಿ ಅವರ ಕುಟುಂಬದವರೊಂದಿಗೆ ಆ ದೊಡ್ಡಾಲದ ಮರಕ್ಕೆ ಪೂಜೆ ಸಲ್ಲುತ್ತಿತ್ತು. ದೇವಮ್ಮಜ್ಜಿ ಅಲ್ಲೇ ಆಡಿಕೊಂಡಿರುತ್ತಿದ್ದ ನಮ್ಮನ್ನು ಕರೆದು, ಆ ಮರದ ಸುತ್ತಲೂ ಸ್ವಚ್ಛ ಮಾಡಲು ಹೇಳುತ್ತಿದ್ದರು. ನಾವು ಹುಮ್ಮಸ್ಸಿನಿಂದ ಆ ಮರದ ಸುತ್ತಲೂ ಸ್ವಚ್ಛ ಮಾಡಿ, ಮರದಡಿಯಲ್ಲಿ ಬಿದ್ದಿರುತ್ತಿದ್ದ ಸೌದೆ ಪುಳ್ಳೆಗಳನ್ನು ಆಯ್ದು ಒಂದೆಡೆಗೆ ಒಟ್ಟುತ್ತಿದ್ದೆವು. ಅಲ್ಲದೇ, ಗದ್ದೆಯ ನಡುವಿದ್ದ ಬಾವಿಯಿಂದ ನೀರನ್ನು ಸೇದಿ ಸೇದಿ ಮರದ ಸುತ್ತಲೂ ಸಿಂಪಡಿಸಿ ಅಡಿಗೆಗೆ ಬೇಕಾಗುವಷ್ಟು ನೀರನ್ನು ಸೇದಿ ಇಡುತ್ತಿದ್ದೆವು. ಮಧ್ಯಾಹ್ನದ ಹೊತ್ತಿಗೆ ಒಂದೆಡೆ ಆ ಮರದ ಬುಡದಲ್ಲಿ ವರ್ಷಪೂರ್ತಿ ಪೂಜೆ ಕಾಣದೇ ಕೂತಿರುತ್ತಿದ್ದ ಆ ಕಲ್ಲಿನ ಮೂರ್ತಿ ಅರಿಶಿನ, ಕುಂಕುಮ, ಹೂವು, ಊದುಕಡ್ಡಿಗಳಿಂದ ಸಿಂಗರಿಸಿಕೊಂಡು ಪೂಜೆಗೆ ಅಣಿಯಾಗುತ್ತಿದ್ದರೆ, ಮತ್ತೊಂದೆಡೆ ಅಲ್ಲೇ ಕೋಳಿಗಳನ್ನು ಕೊಯ್ದು ಆ ಮರದ ಸುತ್ತಲೂ ಅದರ ರಕ್ತ ಚೆಲ್ಲಿ, ನಂತರ ಅದನ್ನು ಅಡುಗೆಗೆ ಸಿದ್ದಪಡಿಸುತ್ತಿದ್ದರು.
ಮಧ್ಯಾಹ್ನದ ಹೊತ್ತಿಗೆ ಘಮ್ಮೆಂದು ಹರಡುತ್ತಿದ್ದ ಮಾಂಸದಡುಗೆಯ ವಾಸನೆಗೆ ಮನಸೋತು ನಾವು ಆ ಜಾಗ ಬಿಟ್ಟು ಕದಲುತ್ತಿರಲಿಲ್ಲ. ಎಲ್ಲರೂ ದೇವರಿಗೆ ಭಕ್ತಿಯಿಂದ ಬೆಳಗಿ ಅಡ್ಡಬಿದ್ದಾದ ನಂತರ ನಾವೂ ಅವರಂತೆಯೇ ಪೂಜೆ ಮಾಡಿ, ಅಡ್ಡಬಿದ್ದು, ಹೊಟ್ಟೆ ಬಿರಿಯುವಂತೆ ಉಂಡು ಬರುತ್ತಿದ್ದೆವು. ದೇವಮ್ಮಜ್ಜಿಯೂ ಅಷ್ಟೇ, ಪ್ರತೀ ವರ್ಷ ನಮ್ಮನ್ನು ನೆಂಟರನ್ನು ಆಹ್ವಾನಿಸುವಂತೆ ಪೂಜೆಗೆ ತಪ್ಪದೇ ಕರೆಯುತ್ತಿದ್ದರು. ಆ ಮಾವಿನಮರದ ಕಾಯಿಗಳು ಮಿಡಿಯಿಂದ ಹಿಡಿದು ಹಡೆಗೆ ಬರುವವರೆಗೂ ಆ ಮರ ನಮ್ಮ ಮುಖ್ಯ ಆಕರ್ಷಣೆಯ ಕೇಂದ್ರವಾಗಿರುತ್ತಿತ್ತು. ದೇವಮ್ಮಜ್ಜಿ ಹಣ್ಣುಗಳನ್ನು ಹಡೆಯಿಂದ ತೆಗೆದು ಚೆಂದದ ಹಣ್ಣುಗಳನ್ನು ಎತ್ತಿಟ್ಟುಕೊಂಡು ಅರ್ಧಂಬರ್ಧ ಹಾಳಾಗಿದ್ದ ಹಣ್ಣುಗಳಲ್ಲಿ ಹಾಳಾದ ಭಾಗವನ್ನು ಕೊಯ್ದು ತೆಗೆದು ನಮಗೆ ತಿನ್ನಲು ಕೊಡುತ್ತಿದ್ದರು. ಎಷ್ಟು ತಿಂದರೂ ಮುಗಿಯದ ಸಿಹಿಯಾದ ಆ ಹಣ್ಣುಗಳಿಂದ ಹೊಟ್ಟೆ ಸಂಪೂರ್ಣವಾಗಿ ಬಿರಿದಂತಾಗುತ್ತಿತ್ತು.

ಆ ದಿನಗಳಲ್ಲೆ ನಾನು ಮೊದಲ ಬಾರಿಗೆ ನನ್ನ ದೊಡ್ಡಪ್ಪನನ್ನು ನೋಡಿದ್ದು. ಜೊತೆಗೆ ನನಗೂ ಬಾಂಧವ್ಯದ ಕೊಂಡಿಗಳಿವೆ ಎಂಬ ಅಪರೂಪದ ಭಾವವೊಂದನ್ನು ಅನುಭವಿಸಿದ್ದು. ದೊಡ್ಡಪ್ಪನ ಹೆಸರು ಈಗ ನನಗೆ ನೆನಪಿಲ್ಲ. ಅಬ್ಬನಂತೆಯೇ ಅಂದವಾಗಿದ್ದ ಅವರು, ಅಬ್ಬನಷ್ಟೆ ಪ್ರೀತಿ ತುಂಬಿಕೊಂಡವರು. ಅಬ್ಬನಷ್ಟು ಎತ್ತರವಿಲ್ಲದಿದ್ದರೂ ಸ್ವಲ್ಪ ದಪ್ಪಗಿದ್ದರು. ಅವರನ್ನು ನೋಡಿದರೆ ಅಬ್ಬನಷ್ಟೆ ಪ್ರೀತಿ ಉಕ್ಕಿ ಬರುತ್ತಿತ್ತು. ಅವರಿಗೊಬ್ಬ ರೂಪವಂತ ಮಗನಿದ್ದ. ಅವನನ್ನು ನಾನು ದಾದಾ ಅಂತಲೇ ಕರೆಯುತ್ತಿದ್ದೆ. ಈಗ ಅವನ ಹೆಸರು ಚಹರೆ ಎಲ್ಲವೂ ಮರೆತುಹೋಗಿದೆ. ಇನ್ನು ದೊಡ್ಡಮ್ಮನಂತು ಅತಿ ಸುಂದರಿ. ಬೆಳ್ಳಗೆ ಉದ್ದವಾಗಿದ್ದ ಅವರು ಇಂದಿರಾಗಾಂಧಿಯನ್ನೇ ಹೋಲುತ್ತಿದ್ದರು. ತುಂಡು ಜಡೆ, ಮುಖದ ಮೇಲೊಂದು ಮಚ್ಚೆಯಿತ್ತು. ಹೆಣ್ಣು ಮಕ್ಕಳಿಲ್ಲದ ಅವರಿಗೆ ಹೆಣ್ಣು ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ.
ಒಮ್ಮೆ ಅಬ್ಬ ಕುಶಾಲನಗರದ ಹಣ್ಣಿನ ಮಾರುಕಟ್ಟೆಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ದೊಡ್ಡಪ್ಪ ವ್ಯಾಪಾರಕ್ಕೆಂದು ಅಲ್ಲಿಗೆ ಬಂದಾಗ ಅಬ್ಬನನ್ನು ಮೊದಲ ಬಾರಿಗೆ ಭೇಟಿಯಾಗಿದ್ದಂತೆ. ಅಬ್ಬ ಮನೆ ಬಿಟ್ಟು ಬಂದ ನಂತರ ಇದೇ ಅವರಿಬ್ಬರ ಮೊದಲು ಭೇಟಿಯಂತೆ. ದೊಡ್ಡಪ್ಪ ಮತ್ತು ದೊಡ್ಡಮ್ಮ ಅವರ ಒಬ್ಬ ಮಗನೊಂದಿಗೆ ಕುಶಾಲನಗರದ ಒಂದು ಗಲ್ಲಿಯಲ್ಲಿ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹೀಗೆ, ಅಕಸ್ಮಾತ್ ಕಂಡ ದೊಡ್ಡಪ್ಪನನ್ನು ಅಬ್ಬ ಕೂಡಿಗೆಯಲ್ಲಿ ನಾವಿದ್ದ ಮನೆಗೆ ಕರೆದುಕೊಂಡು ಬಂದಿದ್ದನು. ನನ್ನನ್ನು ನೋಡಿ ದೊಡ್ಡಪ್ಪ 'ಇವಳನ್ನು ನಾನೇ ಸಾಕ್ಕೊಳ್ತೀನಿ... ನನಗೇ ಕೊಟ್ಟುಬಿಡು,' ಎಂದು ನಗುತ್ತಾ ಕೇಳಿದ್ದರು. ಅಬ್ಬ ನಕ್ಕು ಸುಮ್ಮನಾಗಿದ್ದನು. ಮರುದಿನ ದೊಡ್ಡಪ್ಪ ವಾಪಸ್ ಹೊರಡುವಾಗ ನನ್ನನ್ನು ಒಂದೆರಡು ದಿನಗಳಿಗೆ ಅವರ ಮನೆಗೆ ಕಳಿಸಿ ಕೊಡುವಂತೆ ಕೇಳಿದರು. ಅಬ್ಬ ಅಮ್ಮಿ ನಗುತ್ತ ಒಪ್ಪಿ ನನ್ನನ್ನು ಅವರೊಟ್ಟಿಗೆ ಕಳುಹಿಸಲು ಒಪ್ಪಿದರು. ಹುಟ್ಟಿದಾಗಿನಿಂದ ನೆಂಟರಿಷ್ಟರೊಡನೆ ಒಡನಾಡಿದ ಅನುಭವವೇ ಇಲ್ಲದಿದ್ದ ನನಗೆ, ಇದಾವುದೋ ಅಪರೂಪದ ಭಾಗ್ಯದಂತೆಯೇ ಅನ್ನಿಸಿ ನಾನು ಹೊಸ ಹುರುಪಿನಿಂದ ಅವರೊಂದಿಗೆ ಹೊರಡಲು ಅನುವಾದೆ.
ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಮಲ್ಲೇನಹಳ್ಳಿಯ ವೆಂಕಟರಮಣ ಮಾಮ ಮತ್ತು ಗುಡ್ಡದ ಗುಡಿಸಲು
ಕುಶಾಲನಗರದ ಯಾವುದೋ ರಸ್ತೆ ಬದಿಯಲ್ಲಿದ್ದ ಪುಟ್ಟ ಮನೆಯದು. ಆ ಮನೆಯ ಎದುರಿಗೊಂದು ಮಸೀದಿಯಿತ್ತು. ಆ ಮನೆಗೂ ಕೂಡ ನಮ್ಮ ಎಲ್ಲಾ ಮನೆಗಳಿಗೂ ಇದ್ದಂತೆ ಎರಡು ಕೋಣೆಗಳಿದ್ದವು. ಆ ಎರಡು ಕೋಣೆಗಳ ನಡುವೆ ಒಂದು ತುಂಡು ಗೋಡೆ. ಸ್ನಾನಕ್ಕೆ ಮನೆಯ ಪಕ್ಕದಲ್ಲಿಯೇ ಸುತ್ತಲೂ ನೆರಿಕೆ ಕಟ್ಟಿಕೊಂಡಿದ್ದರು. ಅಡಿಗೆ ಕೋಣೆಯಲ್ಲಿ ನೀರು ಕಾಯಿಸಿಕೊಂಡು ಅದನ್ನು ಬಚ್ಚಲಿಗೆ ಕೊಂಡುಹೋಗಿ ಸ್ನಾನ ಮಾಡಬೇಕಿತ್ತು. ದೊಡ್ಡಮ್ಮ ನನ್ನನ್ನು ಅದೆಷ್ಟು ಚೆನ್ನಾಗಿ ನೋಡಿಕೊಂಡರೆಂದರೆ, ನನ್ನನ್ನು ಬೆಳಗ್ಗೆ ಬೇಗನೆ ಎಬ್ಬಿಸಿ, ಎದ್ದ ಕೂಡಲೆ ಬಿಸಿ ಬಿಸಿ ನೀರು ಕಾಯಿಸಿ ಸ್ನಾನ ಮಾಡಿಸುತ್ತಿದ್ದರು. ಅವರ ಮಗನಿಗೆ ಚಹಾ ಕೊಟ್ಟರೆ ನನಗೆ ಹಾಲು, ಅವನಿಗೆ ರಾಗಿಮುದ್ದೆ ಕೊಟ್ಟರೆ ನನಗೆ ಅಕ್ಕಿ ಹಿಟ್ಟಿನಲ್ಲಿ ಬಿಳಿ ಮುದ್ದೆ ಮಾಡಿಕೊಡುತ್ತಿದ್ದರು. ನೆಂಟರ ಮನೆಯ ಸಿರಿಯಲ್ಲಿ ಬಟ್ಟೆ ಬರೆಯನ್ನು ತರದೆ ಕೈ ಬೀಸಿಕೊಂಡು ಬಂದಿದ್ದ ನನ್ನ ಮಾನವನ್ನು ಒಂದು ತಿಂಗಳು ಅವನ ಚಡ್ಡಿ ಶರ್ಟುಗಳೇ ಮುಚ್ಚಿದ್ದವು.
ಸಲೂನೊಂದಕ್ಕೆ ಕೊಂಡೊಯ್ದು ನನ್ನ ಕೂದಲನ್ನು ಚೆಂದದ ವಿನ್ಯಾಸದಲ್ಲಿ ಕತ್ತರಿಸಿದ್ದರು. ದೊಡ್ಡಮ್ಮ ಬೆಳಿಗ್ಗೆ ಸ್ನಾನ ಮಾಡಿಸಿ ಅವನ ಬಟ್ಟೆಗಳನ್ನು ತೊಡಿಸಿ ತಲೆಗೆ ಬಟ್ಟೆ ಸುತ್ತಿ ಅವನೊಂದಿಗೆ ನನ್ನನ್ನು ಮದರಸಕ್ಕೆ ಕಳಿಸುತ್ತಿದ್ದರು. ಅಲ್ಲಿ ನಾನು ಒಂದಷ್ಟು ಉರ್ದು ಅಕ್ಷರಗಳನ್ನು ಕಲಿತಿದ್ದೆ. ಒಂದಷ್ಟು ದಿನಗಳಲ್ಲಿ ನಾನು ಅಲ್ಲಿನ ನೆಮ್ಮದಿಯ ಬದುಕಿಗೆ ಚೆನ್ನಾಗಿ ಹೊಂದಿಕೊಂಡು ಅಬ್ಬ, ಅಮ್ಮಿ, ದಿನಣ್ಣ ಎಲ್ಲರನ್ನು ಮರೆತುಬಿಟ್ಟೆ. ಅವರ ನೆನಪು ಕೂಡ ಆಗದಷ್ಟು ಪ್ರೀತಿ ಅಕ್ಕರೆಯನ್ನು ಧಾರೆ ಎರೆದಿದ್ದರೂ ಆ ಮೂವರು. ಹೀಗೆ ತಿಂಗಳು ಕಳೆದದ್ದೇ ಅರಿವಿಗೆ ಬರಲಿಲ್ಲ. ಇದರ ಮಧ್ಯೆ ಅಬ್ಬ ಆಗಾಗ ಬಂದು ನನ್ನನ್ನು ನೋಡಿಕೊಂಡು ಹೋಗುತ್ತಿದ್ದನು. ಅಷ್ಟರಲ್ಲಿ ನಾನು ಆ ಮನೆಗೆ ಬೇಕಾದವಳಾಗಿ ಅಲ್ಲಿಗೇ ಹೊಂದಿಕೊಂಡುಬಿಟ್ಟಿದ್ದೆ.

ಆವತ್ತು ದೊಡ್ಡಪ್ಪ ಇನ್ನೂ ಮನೆಗೆ ಬಂದಿರಲಿಲ್ಲ. ರಾತ್ರಿ ಬೇಗ ಊಟ ಮುಗಿಸಿ ನಾನು, ದಾದಾ ಇಬ್ಬರೂ ಆಟದಲ್ಲಿ ತೊಡಗಿದ್ದೆವು. ದೊಡ್ಡಮ್ಮ ಪಕ್ಕದ ಮನೆಯ ಹೆಂಗಸೊಂದಿಗೆ ಮಾತಾಡುತ್ತಾ ಕುಳಿತಿದ್ದರು. ನನಗೆ ಇದ್ದಕ್ಕಿದ್ದಂತೆ ದಿನಣ್ಣ ಮತ್ತು ಅಮ್ಮಿಯ ನೆನಪಾಗಿ ಓಡಿಬಂದು ದೊಡ್ಡಮ್ಮನ ತೊಡೆಯ ಮೇಲೆ ಮಲಗಿ ದುಃಖಿಸತೊಡಗಿದೆ. ನಾನು ಯಾವುದೋ ಅಮೂಲ್ಯವಾದದ್ದರಿಂದ ದೂರವಾಗುತ್ತಿರುವ ಭಾವ ಆವರಿಸಿ ನನ್ನನ್ನು ಕೊಲ್ಲುತ್ತಿರುವಂತೆ ಭಾಸವಾಗತೊಡಗಿತು. ನನಗೆ ಇನ್ನು ಒಂದು ಕ್ಷಣವೂ ಅಲ್ಲಿರುವುದು ಕಷ್ಟವಾಯಿತು. ಕೂಡಲೇ ನನ್ನನ್ನು ಮನೆಗೆ ಕರೆದುಕೊಂಡು ಹೋಗಬೇಕೆನ್ನುವ ಬೇಡಿಕೆಯನ್ನು ಮುಂದಿಟ್ಟು ರಚ್ಚೆ ಹಿಡಿದು ಅಳತೊಡಗಿದೆ. ರಾತ್ರಿಯಿಡೀ ಅಳುತ್ತಿದ್ದವಳನ್ನು ಎದೆಗವುಚಿಕೊಂಡು ಸಂತೈಸುತ್ತಾ, ತಮ್ಮ ತೋಳ ಮೇಲೆಯೇ ಮಲಗಿಸಿಕೊಂಡಿದ್ದರು ದೊಡ್ಡಮ್ಮ.
ಆ ಅಪ್ಪುಗೆಯ ಕಾವು ನನಗಿಂದಿಗೂ ನೆನಪಾಗುತ್ತದೆ. ಬೆಳಿಗ್ಗೆಯಾದೊಡನೆ ನನ್ನನ್ನು ಕುಶಾಲನಗರದ ಅಂಗಡಿಯೊಂದಕ್ಕೆ ಕರೆದೊಯ್ದು ಆಕಾಶ ನೀಲಿ ಬಣ್ಣದ ಒಂದು ಚೂಡಿದಾರ್ ಕೊಡಿಸಿ, ಜುಟ್ಟಿಗೊಂದು ಮೊಳ ಕನಕಾಂಬರ ಮುಡಿಸಿ 'ಅಪ್ಪ-ಅಮ್ಮನ ಮುಖ ನೋಡಿ ವಾಪಾಸು ನಮ್ಮೊಂದಿಗೆ ಬರಬೇಕೆಂದು,' ನನ್ನ ಬಳಿ ಮಾತು ತೆಗೆದುಕೊಂಡು ವ್ಯಾನೊಂದರಲ್ಲಿ ಕೂರಿಸಿಕೊಂಡು ಮನೆಗೆ ಬಂದರು. ನಾನು ಮನೆಯವರನ್ನು ಕಂಡವಳೇ ಓಡಿ ಹೋಗಿ ಅಮ್ಮಿಯ ಸೆರಗಿನ ಹಿಂದೆ ಬಚ್ಚಿಟ್ಟುಕೊಂಡು, 'ನೀವು ಮೊದಲು ಇಲ್ಲಿಂದ ಹೋಗಿ,' ಎಂದು ಕಿರುಚುತ್ತಾ ಹಠಕ್ಕೆ ಬಿದ್ದೆ. ಅವರೆಷ್ಟು ಪರಿಪರಿಯಾಗಿ ನನ್ನ ಮನವೊಲಿಸಲು ಪ್ರಯತ್ನಿಸಿದರೂ ನಾನು ಅವರಿಗೆ ಪ್ರತಿಕ್ರಿಯಿಸದಿದ್ದದ್ದರಿಂದ ನೊಂದುಕೊಂಡ ಅವರು, ಅಂದು ಹೋದವರು ಮತ್ತೆಂದೂ ಕಣ್ಮುಂದೆ ಸುಳಿಯಲಿಲ್ಲ. ಆದರೆ, ದೊಡ್ಡಮ್ಮನ ಪ್ರೀತಿ ತುಂಬಿದ ಮುಖವನ್ನು ನೆನೆಯದಿರಲಾರೆ.
(ಮುಂದುವರಿಯುವುದು)