ಅನುದಿನ ಚರಿತೆ | ಗೊತ್ತು-ಗುರಿ ಇಲ್ಲದ ಶಿಕ್ಷಣ ಮತ್ತು ಸ್ವಾತಂತ್ರ್ಯದ ಕಲ್ಪನೆ

ಸಮಾಜಗಳ ರಚನೆಗೆ ಬೇಕಾಗಿರುವ ಸಾಮಾಜಿಕ, ಮಾನವಿಕ ಚೌಕಟ್ಟುಗಳು ಇಂಡಿಯಾದಲ್ಲಿ ಇನ್ನೂ ಅಸ್ತಿತ್ವಕ್ಕೇ ಬಂದಿಲ್ಲ. ಹಾಗಾಗಿ, ಸಾಮಾಜಿಕ-ರಾಜಕೀಯ ಪ್ರಜ್ಞೆಗಳ ನಡುವಣ ಅಂತರ ನಮಗೆ ಗೊತ್ತೇ ಆಗಿಲ್ಲ. ಪರಿಣಾಮವಾಗಿ, ಯುರೋಪಿನ ಕಲ್ಪನೆಗಳಾದ 'ಸೊಸೈಟಿ,' 'ಸಿವಿಕ್ ಸೊಸೈಟಿ,' 'ಸಾವರ್ನಿಟಿ,' ಡೆಮಾಕ್ರಸಿಯನ್ನು ಕೇವಲ ಮಂತ್ರಗಳನ್ನಾಗಿ ಜಪಿಸುತ್ತಿದ್ದೇವೆ!

ಈಗಷ್ಟೇ 'ನಾವು ಭಾರತೀಯರು' ಅಮೃತ ಮಹೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡೆವು. ಈ ಆಚರಣೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಮೌಲ್ಯದ ಆಯಾಮಗಳನ್ನು ಲಗತ್ತಿಸಿರುವುದನ್ನು ನಾವು ನೋಡಿದ್ದೇವೆ. ಇದನ್ನೊಂದು ಅಭೂತವೂರ್ವ ವಿದ್ಯಮಾನವನ್ನಾಗಿ ಕೊಂಡಾಡಿದ್ದೇವೆ. ‘ಸ್ವಾತಂತ್ರ್ಯ’ ಅನ್ನುವ ಮೌಲ್ಯವೇ ಈ ಇಡೀ ಕೊಂಡಾಟಕ್ಕೆ ಮುಖ್ಯ ಕಾರಣ. ಹಾಗಾದರೆ, ಸ್ವಾತಂತ್ರ್ಯ ಎಂಬ ಈ ಪರಿಕಲ್ಪನೆಯನ್ನು ನಾವು ಅರ್ಥೈಸಿಕೊಂಡ ಬಗೆ ಯಾವುದು? ಅದಕ್ಕೆ ಆರೋಪಿಸಿದ ಅರ್ಥಗಳ ಸ್ವರೂಪ ಎಂತಹವು? ಸ್ವಾತಂತ್ರ್ಯ ಎನ್ನುವುದು ನಡೆ ಮತ್ತು ನುಡಿಗೆ ಸಂಬಂಧಿಸಿದ ನಿಲುವೇ? ಅಥವಾ ರಾಜಕೀಯ ಹಿತಾಸಕ್ತಿಯನ್ನು ಕಾಪಾಡುವ ಅಸ್ತ್ರವೇ? ಇಲ್ಲವೇ, ಸಮುದಾಯಗಳ ಚೈತನ್ಯವನ್ನು ಪ್ರೇರೇಪಿಸುವ ವಿಧಾನವೇ? ಒಟ್ಟಾರೆ ಈ ಪರಿಕಲ್ಪನೆಯನ್ನು ವ್ಯಕ್ತಿ ಮತ್ತು ಸಮೂಹಗಳ ಮನಸ್ಸಿನಲ್ಲಿ ಕಸಿ ಮಾಡುವುದಕ್ಕೆ ನಾವು ಬಳಸಿಕೊಳ್ಳುವ ದಾರಿ ಯಾವುದು? ಅಂತಹದೊಂದು ದಾರಿ ಶಿಕ್ಷಣವೇ ಆಗಿದ್ದರೆ? ಆ ಶಿಕ್ಷಣದ ಉದ್ದೇಶಗಳು ಯಾವುವು? ಮತ್ತು ಶಿಕ್ಷಣದ ಮೂಲಕ ಪ್ರೇರೇಪಿಸುವ ತಾತ್ವಿಕತೆಗೂ ಹಾಗೂ ಜನಮಾನಸದಲ್ಲಿ ನೆಲೆಗೊಂಡಿರುವ ಸಾಮಾಜಿಕ ವಿವೇಕದ ತಾತ್ವಿಕತೆಗೂ ನಡುವಣ ಭಿನ್ನತೆಗಳು ಎಂತಹವು? ಇಂತಹ ಹಲವು ಪ್ರಶ್ನೆಗಳು ನನ್ನಲ್ಲಿ ಒಡಮೂಡಿದ ಹಾಗೆಯೇ ನನ್ನಂತ ಬಹುತೇಕ ಭಾರತೀಯರಲ್ಲಿ ಒಡಮೂಡಿರುವುದಕ್ಕೆ ಸಾಧ್ಯ. ಆದರೆ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ನನ್ನದಲ್ಲ. ಇದಕ್ಕೆ ಹೊರತಾಗಿ, ನಮ್ಮಲ್ಲಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಂದಕಗಳನ್ನು ಗುರುತಿಸುವುದಾಗಿದೆ. ಪರಿಣಾಮವಾಗಿ, ನಮ್ಮ ಬದುಕಿನ ನಡೆ ಮತ್ತು ನುಡಿಗಳಲ್ಲಿ ಉಂಟಾಗಿರುವ ಬಿರುಕುಗಳ ಸ್ವರೂಪ ಮತ್ತು ಸ್ವಭಾವ ಎಂತಹದು ಅನ್ನುವುದನ್ನು ಅರ್ಥೈಸುವ ಪ್ರಯತ್ನವನ್ನೂ ಮಾಡಲಾಗಿದೆ. ಇಲ್ಲಿ ಎತ್ತಿರುವ ಈ ಪ್ರಶ್ನೆಗಳ ಹರವು ಮತ್ತು ವ್ಯಾಪ್ತಿ ಅಗಾಧವಾದುದು. ಈ ತಾತ್ವಿಕತೆಯನ್ನು ವಿಶ್ಲೇಷಿಸುವ ಬದಲಾಗಿ, ಇಂತಹದೊಂದು ತಾತ್ವಿಕತೆಯ ಕೊರತೆಯಿಂದ ಏರ್ಪಡುವ ಸಾಮಾಜಿಕ ಅವಜ್ಞೆ ಎಂತಹದು ಅನ್ನುವುದನ್ನು ಅರಿಯುವುದಾಗಿದೆ. ಮುಖ್ಯವಾಗಿ, ಉನ್ನತ ಶಿಕ್ಷಣದ ಸನ್ನಿವೇಶದಲ್ಲಿ ಈ ಎಲ್ಲ ಪ್ರಶ್ನೆಗಳನ್ನು ನೆಲೆಗೊಳಿಸಿ, ಸ್ವಾತಂತ್ರ್ಯ ಪರಿಕಲ್ಪನೆಯ ಭಾವಲೋಕವನ್ನು ಅಥವಾ ಈ ಪದಕ್ಕೆ ಅಂಟಿದ ಭಾವತೀವ್ರತೆಯನ್ನು ಪರಿಭಾವಿಸುವುದಾಗಿದೆ.

Image

ಉನ್ನತ ಶಿಕ್ಷಣವನ್ನು ಕುರಿತ ನಮ್ಮ ನಿಲುವುಗಳು ದಿನದಿಂದ ದಿನಕ್ಕೆ ಅತ್ಯಂತ ಆದರ್ಶದ ಸ್ವರೂಪವನ್ನು ತಾಳುತ್ತವೆ ಮತ್ತು ಬಿಸಿಬಿಸಿ ಚರ್ಚೆಯ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ. ಇಂತಹ ಹೊತ್ತಿನಲ್ಲಿ, ನಾನಿಲ್ಲಿ ಹೇಳಹೊರಟಿರುವ ಕೆಲವು ಸಂಗತಿಗಳು ಅಚ್ಚರಿಯನ್ನು ಮೂಡಿಸಬಲ್ಲವು. ಅಚ್ಚರಿ ಏಕೆಂದರೆ, ತಂತ್ರಜ್ಞಾನ, ವಿಜ್ಞಾನ ಮೊದಲಾದ ಕ್ರಾಂತಿಗಳನ್ನು ಕಂಡಿರುವ ನಮ್ಮ ಭವ್ಯ ಭಾರತದಲ್ಲಿ ಹಳ್ಳಿಯ ಮಕ್ಕಳ ಶಿಕ್ಷಣದ (ಒಟ್ಟಾರೆ ಶಿಕ್ಷಣದ ಸ್ಥಿತಿಯೂ ಇದೇ ಆಗಿರುತ್ತದೆ) ಪರಿಸ್ಥಿತಿಯನ್ನು ಅರ್ಥೈಸುವ ಇಲ್ಲವೇ ವಿಶ್ಲೇಷಿಸುವ ಯಾವುದೇ ಕೈಂಕರ್ಯವು ಅರ್ಥಪೂರ್ಣವಾಗಿ ಇದುವರೆಗೂ ನಡೆದಿರುವುದಿಲ್ಲ. ಆದರೂ ನಾವು ಹಲವು ಬಗೆಯ ಆದರ್ಶಗಳ ಹಗಲುಗನಸನ್ನು ಕಾಣುತ್ತೇವೆ ಎನ್ನುವುದು ಮಾತ್ರ ಚಾರಿತ್ರಿಕ ವ್ಯಂಗ್ಯವೇ ಸರಿ. ಶಿಕ್ಷಣ ಪಡೆಯುವ, ಆ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಯಾವುದೇ ಖಚಿತತೆ ಇಲ್ಲದ ಮಕ್ಕಳು, ನಗರ-ಪಟ್ಟಣಗಳಿಗೆ ಬಂದು ಪಡೆಯುವ ಶಿಕ್ಷಣದ ಪರಿ ಯಾವುದು ಎಂದು ಯೋಚಿಸುವ ಕಾಳಜಿಯನ್ನು ನಮ್ಮ ವಿದ್ವತ್ಪೂರ್ಣ ಚರ್ಚೆ ಸಂವಾದಗಳಲ್ಲಿಯೂ ನೋಡಲು ಸಾಧ್ಯವಿಲ್ಲ. ಅಂದರೇನಾಯಿತು, ಏಳ್ಗೆಯ ಬಗೆಗಿನ ನಿಲುವುಗಳು ಕೇವಲ ಉಳ್ಳವರನ್ನು, ಮೇಲಿನವರನ್ನು ಮಾತ್ರ ನೆಲೆಯಾಗಿಸಿಕೊಂಡಿರುತ್ತವೆ. ಹಲವು ರೀತಿಯ ಆದರ್ಶಪ್ರಾಯವಾದ ಶಿಕ್ಷಣವನ್ನು ಯಥೇಚ್ಛವಾಗಿ ನಿರೂಪಿಸುವ ನಮಗೆ, ಹಲವು ದಶಕಗಳಿಂದಲೂ ಶಿಕ್ಷಣಕ್ಕೆ ತೆರೆದುಕೊಂಡಿರುವ ಹಳ್ಳಿಯ, ಹಿಂದುಳಿದ, ದಲಿತ ಬಡವ ಮಕ್ಕಳಿಗೆ, ಪದವಿ ಶಿಕ್ಷಣದ ಹಂತದಲ್ಲಿ ತಾವು ಯಾವ ಬಗೆಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ತಮ್ಮ ಭವಿಷ್ಯದ ಉದ್ಯೋಗ ಏನು, ಉದ್ಯೋಗ ಅವಕಾಶಗಳಿಗೂ ಮತ್ತು ತಾವು ಪದವಿ ಹಂತದಲ್ಲಿ ಆಯ್ಕೆ ಮಾಡಿಕೊಳ್ಳುವ ವಿಷಯಗಳಿಗೂ ಏನು ಸಂಬಂಧ ಎಂಬ ಸಂಗತಿಯ ಬಗೆಗೆ ಏನನ್ನೂ ಅರಿಯದ ಅಥವಾ ಅರ್ಥ ಮಾಡಿಸಿರದ ಮಕ್ಕಳು ಪದವಿಗೆ ಬಂದು ಸೇರಿಕೊಳ್ಳುತ್ತಾರೆ. ಇಲ್ಲಿಯೂ ಬಹುತೇಕವಾಗಿ ಅನುಪಯುಕ್ತವಾಗಿಸಿದ ವಿಷಯಗಳಿಗೆ ಇವರು ಬಲಿಯಾಗುತ್ತಾರೆ. ದಿಟ, ಯಾವ ವಿಷಯವೂ ತನ್ನಷ್ಟಕ್ಕೆ ಅನುಪಯುಕ್ತವಲ್ಲ. ಆದರೆ, ಆ ವಿಷಯದ ಮೂಲಕ ಪಡೆಯುವ ತಿಳಿವು ಪ್ರಸ್ತುತ ಬದುಕಿಗೂ ಮತ್ತು ಆ ಬದುಕಿನ ಆಂತರ್ಯವನ್ನು ಅರಿಯುವುದಕ್ಕೆ ಎಷ್ಟು ಯೋಗ್ಯವಾಗಿರುತ್ತದೆ ಅನ್ನುವುದೇ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ. ನಮ್ಮ ಬದುಕಿಗೂ ಹಾಗೂ ಬದುಕಿನ ನಡೆಗೂ ಯೋಗ್ಯವಲ್ಲದ ಶಿಕ್ಷಣದ ಮೂಲಕ ಯಾವ ಬಗೆಯ ಮೌಲ್ಯಗಳನ್ನು ನಾವು ನೆಲೆಗೊಳಿಸಲು ಸಾಧ್ಯ? ಅಂದರೆ, ಶಿಕ್ಷಣದ ಮೂಲಕ ದೊರೆಯುವ ತಿಳಿವು ಬದುಕಿನ ಯಾವುದೇ ತಾತ್ವಿಕತೆಯನ್ನು ಉತ್ತೇಜಿಸುವ ಆಯಾಮವನ್ನು ಹೊಂದಿರುವುದಿಲ್ಲ. ಪರಿಣಾಮವಾಗಿ ಮೌಲ್ಯಗಳ ಬಗೆಗಿನ ಜಿಜ್ಞಾಸೆಯನ್ನು ಅಡ್ರೆಸ್ ಮಾಡುವ ಇರಾದೆಯೂ ನಮ್ಮ ಶಿಕ್ಷಣಕ್ಕೆ ಇಲ್ಲವೆಂದಾಯಿತು. ಹಾಗಾಗಿ ಸಂವಿಧಾನದ ಮೂಲಕ ಪ್ರೇರೇಪಿತವಾದ ಮೌಲ್ಯಗಳಿಗೂ ಹಾಗೂ ಬದುಕಿನ ಕ್ರಿಯಾವರ್ತುಲದೊಳಗೆಯೇ ಮೈದೋರಿದ ಅನುಭವದ ವಿನ್ಯಾಸಗಳಿಗೂ ಇರುವ ನಂಟಸ್ತಿಕೆಯನ್ನು ಕುರಿತು ಯೋಚಿಸುವ ಸನ್ನಿವೇಶವು ನಮಗೆ ಒದಗಿ ಬರುವುದಿಲ್ಲ. ಆದ್ದರಿಂದ ಸ್ವಾತಂತ್ರ್ಯ, ಸಮಾನತೆ, ಸೆಕ್ಯುಲರ್ ತತ್ವ, ಸಹನೆ ಮೊದಲಾದ ಬದುಕಿನ ಮೌಲ್ಯಗಳು ಕೇವಲ ರಾಜಕೀಯ ಸರಿತನವನ್ನು ಪ್ರತಿಪಾದಿಸುವುದಕ್ಕೆ ಮಾತ್ರ ಉಲ್ಲೇಖಿಸುವ ಸೂತ್ರಗಳು ಆಗಿರುತ್ತವೆ. ಈ ಮೌಲ್ಯಗಳು ನಮ್ಮ ನಡೆ ಹಾಗೂ ನುಡಿಗಳ ನಡುವಣ ಅನುಸಂಧಾನದ ಮಾದರಿಗಳಾಗಿ ನೆಲೆಗೊಳ್ಳುವುದಿಲ್ಲ. ಪರಿಣಾಮವಾಗಿ ನಾವು ಮೌಲ್ಯಗಳನ್ನು ಕೇವಲ ಪಠಿಸುತ್ತೇವೆ ಹೊರತು ಆಚರಿಸುವುದಿಲ್ಲ. ಯಾವ ಮೌಲ್ಯ ನಮ್ಮ ಆಚರಣೆಯ ಭಾಗವಾಗುತ್ತದೆಯೋ ಅಂತಹ ಮೌಲ್ಯವು ಸಾಮಾಜಿಕ ವಿವೇಕವೂ ಹಾಗೂ ಸಾಂಸ್ಕೃತಿಕ ಎಚ್ಚರವೂ ಆಗಿರುತ್ತದೆ. ಹಾಗಾದರೆ, ನಾವು ಕೊಂಡಾಡುವ ಸ್ವಾತಂತ್ರ್ಯದ ಕಲ್ಪನೆ ಎಷ್ಟರಮಟ್ಟಿಗೆ ಸಾಮಾಜಿಕ ವಿವೇಕ ಹಾಗೂ ಸಾಂಸ್ಕೃತಿಕ ಎಚ್ಚರದ ಭಾಗವಾಗಿದೆ. ಒಂದುವೇಳೆ, ಸ್ವಾತಂತ್ರ್ಯ ಅನ್ನುವುದು ನಮ್ಮ ಪ್ರಜ್ಞೆ ಮತ್ತು ಪರಿಸರವನ್ನು ರೂಪಿಸುವ ನೆಲೆಯಾಗಿದ್ದರೆ, ಅದನ್ನು ಅರ್ಥೈಸುವ ವಿನ್ಯಾಸಗಳೇ ಬೇರೆಯಾಗಿರುತ್ತಿದ್ದವು.

Image

ಬದುಕಿನ ಮೌಲ್ಯಗಳನ್ನು ಸಮೂಹ ಅಥವಾ ವ್ಯಕ್ತಿಗಳಲ್ಲಿ ನೆಲೆಗೊಳಿಸಲು ಶಿಕ್ಷಣವೊಂದೇ ದಾರಿಯಲ್ಲ ಆದರೆ ಇದೊಂದು ಪ್ರಧಾನ ನೆಲೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಶಿಕ್ಷಣದ ಮೂಲಕ ಒದಗಿಸುವ ತಿಳಿವು ಹೇಗಿರಬೇಕು ಎಂಬ ಪ್ರಶ್ನೆ ಅತ್ಯಂತ ಮಹತ್ವವನ್ನು ಪಡೆದುಕೊಳ್ಳುತ್ತದೆ. ಆದರೆ, ಪಠ್ಯಕ್ರಮ, ಪಠ್ಯ ಮತ್ತು ಇವೆರಡನ್ನೂ ನಿರೂಪಿಸುವ ತಾತ್ವಿಕತೆಗಳನ್ನು ಮುನ್ನೆಲೆಗೆ ತರುವವರು ಯಾರು ಎನ್ನುವ ಪ್ರಶ್ನೆಯನ್ನು ನಾವು ಯಾವತ್ತೂ ಕೇಳುವುದೇ ಇಲ್ಲ. ಇದಕ್ಕೆ ಕಾರಣಗಳನ್ನು ಸೂಚಿಸುವವರು ನೇರವಾಗಿ ಮೇಷ್ಟ್ರುಗಳನ್ನೇ ಆರೋಪಿಸುತ್ತಾರೆ. ಹೌದು ಕೆಲವಾರು ಬೆವರು ಸುರಿಸದ ಮೇಷ್ಟ್ರುಗಳ ಕಾರಣದಿಂದ, ಇಡೀ ಶಿಕ್ಷಕ ಸಮೂಹವನ್ನು ದೂರುವುದು ಸಲ್ಲದು. ಆದರೆ ಮೇಷ್ಟ್ರುಗಳ ಈ ಪರಿಸ್ಥಿತಿಗೆ ಏನು ಕಾರಣ? ಯಾರು ಕಾರಣ? ಯಾಕೆ ಇವರೆಲ್ಲ ಹೀಗಾಗಿದ್ದಾರೆ? - ಈ ಪ್ರಶ್ನೆಗಳಿಗೆ ಉತ್ತರಿಸುವವರು, ಏನನ್ನೂ ಹೇಳಲಾರರು. ಆರೋಪಗಳು ಮತ್ತು ಪ್ರತ್ಯಾರೋಪಗಳು ಮಾತ್ರ ಯಥೇಚ್ಛವಾಗಿ ನಡೆಯುತ್ತವೆ. ನಾವು ಸಮಸ್ಯೆಗೆ ಪರಿಹಾರದ ದಾರಿಗಳನ್ನು ಕಂಡುಕೊಳ್ಳುವ ಬದಲಾಗಿ ಈ ಸಮಸ್ಯೆಗಳನ್ನು ನಮ್ಮ ಭವಿಷ್ಯದ ಸಾಧ್ಯತೆಗಳನ್ನಾಗಿ ಮಾಡಿಕೊಂಡಿದ್ದೇವೆ. ಇಂತಹ ಬಿಕ್ಕಟ್ಟುಗಳ ಫಲಿತ ಏನೆಂದರೆ, ನಿರುಪಯುಕ್ತವಾದ ಶಿಕ್ಷಣವನ್ನು ರೂಪಿಸಿ ಬೆಳೆಸುವುದೇ ಆಗಿದೆ.  

ಈ ಕಟು ಸತ್ಯಗಳನ್ನು ಅರಿಯುವ ಬಗೆಗೆ ನಾವು ಗಮನಹರಿಸುವ ಯಾವ ಸೂಚನೆಗಳೂ ಯಾವುದೇ ಸ್ವರೂಪದಲ್ಲಿ ಇವತ್ತು ಕಂಡುಬರುತ್ತಿಲ್ಲ. ಶಿಕ್ಷಣವನ್ನು ಹಕ್ಕಾಗಿ, ಬಿಡುಗಡೆಯ ದಾರಿಯನ್ನಾಗಿ ನೆಮ್ಮಿಕೊಂಡಿರುವ ಸಮುದಾಯಗಳು ಹಲವಾರಿವೆ. ಈ ಸಮೂಹಗಳಿಗೆ ದೊರೆಯುವ ಶಿಕ್ಷಣದ ಸ್ವರೂಪಕ್ಕೂ ಮತ್ತು ಈಗಾಗಲೇ ತಲೆಮಾರುಗಳಿಂದ ಶಿಕ್ಷಣಕ್ಕೆ ತೆರೆದುಕೊಂಡಿರುವ ಸಮೂಹಗಳ ಜನರು ಪಡೆಯುವ ಶಿಕ್ಷಣಕ್ಕೂ ಯಾವುದೇ ಗುಣಾತ್ಮಕ ವ್ಯತ್ಯಾಸಗಳು ಇರುವುದಿಲ್ಲ. ಹಾಗಂತ ಇವರಿಬ್ಬರೂ ಸಮಾನ ಸ್ಥಾನ-ಮಾನಗಳನ್ನು ಹೊಂದಿದ್ದಾರೆ ಎನ್ನಲೂ ಸಾಧ್ಯವಿಲ್ಲ. ಈ ಮಾತನ್ನು ಕೇವಲ ಪಠ್ಯಕ್ರಮ, ಪಠ್ಯವಸ್ತು ಹಾಗೂ ಪಠ್ಯಗಳ ಹಿಂದಿನ ತಾತ್ವಿಕತೆಯನ್ನು ಮಾತ್ರ ಕುರಿತು ಹೇಳುತ್ತಿಲ್ಲ. ಬದಲಾಗಿ, ಶಿಕ್ಷಣ ಎನ್ನುವ ಸಾಮಾಜಿಕ ಸಾಂಸ್ಕೃತಿಕ ವಿದ್ಯಮಾನವು, ಯಾವ ಬಗೆಯಲ್ಲಿ ಸಮೂಹಗಳ ವಿವೇಕವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿವೆ ಎನ್ನುವ ಪ್ರಶ್ನೆ ಇಲ್ಲಿ ಮುಖ್ಯವಾಗಿದೆ. ಶಿಕ್ಷಣವನ್ನು ಕುರಿತು ನಿರ್ವಚಿಸುವ ಒಂದೊಂದು ಸನ್ನಿವೇಶದಲ್ಲಿಯೂ ನಾವು ಅನುಸರಿಸುವ ಮಾನದಂಡಗಳು ಮಾತ್ರ ಚರಿತ್ರೆಯಲ್ಲಿ ಈಗಾಗಲೇ ವ್ಯಕ್ತಗೊಂಡ ಹೇಳಿಕೆಗಳೇ ಆಗಿರುತ್ತವೆ. ಯಾವುದೇ ತಿಳಿವನ್ನು ಅರ್ಥೈಸುವ ಅಥವಾ ವ್ಯಾಖ್ಯಾನಿಸುವ ಇಲ್ಲವೇ ನಿರ್ವಚಿಸುವ ಬಗೆಗಳನ್ನು ನಿಗಾವಹಿಸಿ ಪರಿಶೀಲಿಸಿದರೆ, ಶಿಕ್ಷಣದ ಮೂಲಕವೇ ನಾವು ಸೃಷ್ಟಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಪಕಲ್ಪನೆಗಳು ಎಂತಹವು ಅನ್ನುವುದನ್ನು ಮನಗಾಣುತ್ತೇವೆ. ಅಂದರೆ ಸಂಸ್ಕೃತಿ, ಸಮಾಜ, ರಾಜಕಾರಣ, ಧರ್ಮ, ಜಾತಿ, ಲಿಂಗ, ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಸೆಕ್ಯುಲರ್ ತತ್ವ, ವ್ಯಕ್ತಿ ಮತ್ತು ಸಮೂಹಗಳ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯ ಮೊದಲಾದ ಪರಿಕಲ್ಪನೆಗಳನ್ನು ವಿವರಿಸಿಕೊಂಡ ಕ್ರಮದಲ್ಲಿಯೇ ದೋಷಗಳಿವೆ ಅನ್ನಿಸುತ್ತದೆ. ಉದಾ.ಗೆ ಈಗಾಗಲೇ ಉಲ್ಲೇಖಿಸಿದ ಸ್ವಾತಂತ್ರ್ಯ ಎನ್ನುವ ಪರಿಕಲ್ಪನೆಯನ್ನು ನಿರ್ವಚಿಸಿದ ರೀತಿಯನ್ನು ಕೂಲಂಕಷವಾಗಿ ಗಮನಿಸಿದರೆ, ಆ ಪರಿಕಲ್ಪನೆಯ ಸುತ್ತಲೂ ಸುತ್ತಿಕೊಂಡಿರುವ ಅಪಕಲ್ಪನೆಗಳು ನಮಗೆ ಎದ್ದು ಕಾಣುತ್ತವೆ. ಸ್ವಾತಂತ್ರ್ಯ ಅನ್ನುವುದು ಬೇರೊಬ್ಬರಿಂದ ಪಡೆಯುವ ಒಂದು ರಾಜಕೀಯ ಮೌಲ್ಯವನ್ನಾಗಿ ಮಾತ್ರ ಪರಿಗಣಿಸಲಾಗಿದೆ. ವ್ಯಕ್ತಿ ಇಲ್ಲವೇ ಸಮೂಹಗಳ ಮಾನಸಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಸ್ತಿತ್ವದ ಕುರುಹು ಈ ಸ್ವಾತಂತ್ರ್ಯ ಆಗಿರುತ್ತದೆ ಅನ್ನುವ ವಾಸ್ತವವನ್ನು ಪರಿಗಣಿಸಿರುವುದಿಲ್ಲ. ಯಾವುದೇ ಒಂದು ಸಮೂಹದ ಮನಸ್ಸನ್ನು (ಸೋಶಿಯಲ್ ಮೈಂಡ್) ಅರಿಯಬೇಕೆಂದರೆ, ಆಯಾ ಸಮೂಹದ ಸಾಮಾಜಿಕ ಹಾಗೂ ಸಾಂಸ್ಕೃತಿಕ ನಡೆ ನುಡಿಗಳ ನಡುವಣ ಅನುಸಂಧಾನದ ಮಾದರಿಗಳನ್ನು ತಿಳಿಯುವುದು ಅತ್ಯಂತ ಮುಖ್ಯ. ಈ ಚರ್ಚೆಯ ಹರವಿನಲ್ಲಿ ‘ಅರಿ’ ಮತ್ತು ‘ತಿಳಿ’ ಎಂಬೆರಡು ಪ್ರಮುಖ ಪದಗಳನ್ನು ಬಳಸಲಾಗಿದೆ. ಇವುಗಳ ತಾತ್ಪರ್ಯವೇನೆಂದರೆ, ಸ್ವಾತಂತ್ರ್ಯ ಅನ್ನುವುದು ಅರಿಯುವ ಮತ್ತು ತಿಳಿಯುವ ನೆಲೆಗಳ ಬಗೆಗಿನ ಎಚ್ಚರವಾಗಿದೆ. ಅರಿವೇ ಗುರು ಅನ್ನುವ ಸಂದೇಶದ ಹಿಂದಿನ ತಾತ್ವಿಕತೆಯೂ ಇದೇ ಆಗಿರುತ್ತದೆ. ಸಮಾಜ ಇಲ್ಲವೇ ವ್ಯಕ್ತಿಗಳಲ್ಲಿ ಏರ್ಪಟ್ಟಿರುವ ಅರಿವು ಎಷ್ಟರಮಟ್ಟಿಗೆ ಸಮಾಜ ಅಥವಾ ವ್ಯಕ್ತಿಗಳ ನಡೆಯನ್ನು ರೂಪಿಸುವ ತಿಳಿವು ಆಗಿ ಅದು ನೆಲೆ ಪಡೆಯುತ್ತದೆ ಅನ್ನುವುದು ಮುಖ್ಯ. ನಾವು ಸಾಮಾನ್ಯವಾಗಿ ಯಾವುದನ್ನು ಸಾಮಾಜಿಕ ಪ್ರಜ್ಞೆ ಎಂದು ಗುರುತಿಸುತ್ತೇವೋ ಅದು ಬಹುತೇಕವಾಗಿ ಅರಿವು ಮತ್ತು ತಿಳಿವುಗಳಿಂದ ಏರ್ಪಟ್ಟಿರುವ ವಿದ್ಯಮಾನವಾಗಿರುತ್ತದೆ. ಸಮುದಾಯದ ಮನಸ್ಸನ್ನು ರೂಪಿಸುವ ವಿನ್ಯಾಸಗಳಾದ ಜ್ಞಾನ, ಸಾಮಾಜಿಕ ಧೋರಣೆಗಳು, ತಾತ್ವಿಕ ಚೌಕಟ್ಟುಗಳು ಹಾಗೂ ಇತರೆ ಸಾಮಾಜಿಕ ಪ್ರತಿನಿಧೀಕರಣಕ್ಕೆ ಸಂಬಂಧಿಸಿದ ನಿಲುವುಗಳು, ಸಾಮುದಾಯಿಕ ಎಚ್ಚರ ಇಲ್ಲವೇ ಪ್ರಜ್ಞೆಯನ್ನು ನೆಲೆಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ, ಶಿಕ್ಷಣದ ಮೂಲ ಆಶಯವೇ ಇಂತಹ ನಿಲುವುಗಳ ಮೂಲಕ ನಮ್ಮ ಸಾಮೂಹಿಕ ಪ್ರಜ್ಞೆಯ ವಿಭಿನ್ನ ನೆಲೆಗಳನ್ನು ಕಂಡುಕೊಳ್ಳುವ ವಿಧಾನವಾಗುತ್ತದೆ. ಈ ವಿಧಾನವನ್ನು ಮಾನ್ಯ ಮಾಡುವ ಇರಾದೆ ನಮ್ಮ ಶೈಕ್ಷಣಿಕ ನೀತಿಗಳನ್ನು ರೂಪಿಸುವವರಿಗೆ ಇರುವುದಿಲ್ಲ. ಕಾರಣವೇನೆಂದರೆ, ಸಮೂಹಗಳ ಬಿಡುಗಡೆಯ ದಾರಿಗಳನ್ನು ಸುಗಮಗೊಳಿಸಿದರೆ, ಅವುಗಳು ಸ್ವಾಯತ್ತತೆಯನ್ನು ಪಡೆದುಕೊಳ್ಳುತ್ತವೆ. ಸಮುದಾಯಗಳಿಗೆ ತಮ್ಮ ಬದುಕಿನ ಸ್ವಾಯತ್ತತೆಯನ್ನು ಪಡೆಯುವುದೇ ಸ್ವಾತಂತ್ರ್ಯವನ್ನು ಪಡೆಯುವ ಬಗೆಯಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಸ್ವಾಯತ್ತತೆ ಇಲ್ಲದ ಸಮೂಹಗಳಿಗೆ ಸ್ವಾತಂತ್ರ್ಯ ಅನ್ನುವುದು ಕೇವಲ ಬಿಸಿಲುಗುದುರೆಯಾಗಿದೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 12 | 'ಹಿಂದೂ'ಗಳ ಒಗ್ಗಟ್ಟಿಗೆ ಅಡ್ಡಿಯಾದ ಅತೀ ದೊಡ್ಡ ತೊಡರುಗಾಲು 'ಜಾತಿ ಪದ್ಧತಿ'

ಮನುಷ್ಯ ಪ್ರೀತಿ, ಸಹಜೀವನ ಮೊದಲಾದ ಮೌಲ್ಯಗಳನ್ನು ರೂಪಿಸಿಕೊಳ್ಳುವುದಕ್ಕೆ ಬೇಕಾಗಿರುವ ಸಾಮಾಜಿಕ-ರಾಜಕೀಯ ರಾಚನಿಕ ಹೊಂದಾಣಿಕೆಯನ್ನು ವೈಚಾರಿಕತೆ ಎಂದು ಕರೆಯೋಣ. ಬುದ್ಧ, ಬಸವ, ಗುರುನಾನಕ್, ಮಹ್ಮದ್, ಕಬೀರ್, ಕನಕದಾಸ, ನಾರಾಯಣಗುರು, ಮಾರ್ಕ್ಸ್, ಅಂಬೇಡ್ಕರ್, ಗಾಂಧಿ, ಕುವೆಂಪು ಮೊದಲಾದವರನ್ನು ಚಿಂತಕರು, ವಿಚಾರವಂತರು, ಮಹರ್ಷಿಗಳು ಎಂಬೆಲ್ಲ ಹೆಸರುಗಳಿಂದ ಗುರುತಿಸುತ್ತೇವೆ. ಇಂತಹ ಹೆಸರುಗಳಿಂದ ಗುರುತಿಸುವುದಕ್ಕೆ ಇರುವ ಆಧಾರಗಳೇ ವಿಚಾರ, ವಿವೇಕ ಇಲ್ಲವೇ ವೈಚಾರಿಕ ವಿನ್ಯಾಸಗಳಾಗಿರುತ್ತವೆ. ಅಂದರೇನಾಯ್ತು? ವ್ಯಕ್ತಿ ನೆಲೆಯಿಂದ ಸಾಮುದಾಯಿಕ ನೆಲೆಗಿನ ಪಯಣವೇ ನಾಗರಿಕ ಸಮೂಹಗಳ ರಚನೆಯಾಗಿದೆ. ನಿಜ, ಸಮಾಜಗಳ ರಚನೆಗೆ ಬೇಕಾಗಿರುವ ಸಾಮಾಜಿಕ, ಮಾನವಿಕ ಹಾಗೂ ಶಾಸ್ತ್ರೀಯ ಚೌಕಟ್ಟುಗಳು ಇಂಡಿಯಾದಲ್ಲಿ ಇನ್ನೂ ಅಸ್ತಿತ್ವಕ್ಕೆ ಬಂದಿರುವುದಿಲ್ಲ. ಹಾಗಾಗಿ, ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆಗಳ ನಡುವಣ ಅಂತರಗಳನ್ನು ಇವತ್ತಿಗೂ ನಮ್ಮಿಂದ ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಯುರೋಪಿನ ಕಲ್ಪನೆಗಳಾದ ಸೊಸೈಟಿ, ಸಿವಿಕ್ ಸೊಸೈಟಿ, ಸಾವರ್ನಿಟಿ ಹಾಗೂ ಡೆಮಾಕ್ರಸಿಯನ್ನು ಕೇವಲ ಮಂತ್ರಗಳನ್ನಾಗಿ ಜಪಿಸುತ್ತಿದ್ದೇವೆ. ಅದೇ ಪ್ರಕಾರ, ರಾಶಿನ್ಯಾಲಿಟಿ, ಫಿಲಾಸಫಿಕಲ್ ಮುಂತಾದ ಪದಗಳಿಗೆ ಪರ್ಯಾಯವಾಗಿ ವೈಚಾರಿಕ, ತಾತ್ವಿಕ ಎಂಬ ಸಮಾನ ಪದಗಳನ್ನು ಮಾತ್ರ ಬಳಸಲಾಗುತ್ತದೆಯೇ ಹೊರತು, ಆಯಾ ಪದಗಳಲ್ಲಿ ಗೃಹಿತವಾಗಿರುವ ವಿಚಾರ, ವಿವೇಕ ಇಲ್ಲವೇ ಅರಿವಿನ ವಿನ್ಯಾಸಗಳನ್ನು ಕೈಬಿಟ್ಟಿದ್ದೇವೆ, ಕೇವಲ ಪದಗಳ ಬೆನ್ನು ಹತ್ತಿದ್ದೇವೆ.

ನಿಮಗೆ ಏನು ಅನ್ನಿಸ್ತು?
1 ವೋಟ್