ವರ್ತಮಾನ | ಕೋಮುದ್ವೇಷ ತಗ್ಗಿಸುವ ಕುರಿತು ಈಗ ನಿಜಕ್ಕೂ ಮಾತನಾಡಬೇಕಿರುವುದು ಯಾರು?

Narendra Modi

ಕೋಮು ಸೌಹಾರ್ದ ಕಾಪಾಡುವ ಮೂಲಕ ಕಾನೂನು ಸುವ್ಯವಸ್ಥೆ ಖಾತ್ರಿಪಡಿಸುವ ಹೊಣೆ ಹೊತ್ತ ಪ್ರಭುತ್ವವೇ ಕೋಮುದ್ವೇಷ ಹರಡುವ ಕಾರ್ಯಸೂಚಿ ಜಾರಿಗೆ ಮುಂದಾದಾಗ ಯಾರನ್ನು ದೂರುವುದು? ಒಂದು ಧರ್ಮದವರ ಕೋಮುವಾದಕ್ಕೆ ಮತ್ತೊಂದು ಧರ್ಮದವರ ಕೋಮುವಾದ ಪರಿಹಾರ ಒದಗಿಸಲು ಸಾಧ್ಯವೇ? ಈ ಬಗ್ಗೆ ಮಾತಾಡಬೇಕಿರುವುದು ಯಾರು?

ಅಷ್ಟೇನೂ ಒಡನಾಟ ಹೊಂದಿರದ ಮಾಜಿ ವಿದ್ಯಾರ್ಥಿಯೊಬ್ಬನಿಂದ ವಾಟ್ಸಾಪ್‍ನಲ್ಲಿ ಮೆಸೇಜುಗಳು ಒಂದರ ಹಿಂದೊಂದರಂತೆ ಬಂದು ಬೀಳತೊಡಗಿದವು. ಬಹುತೇಕ ಒಂದು ವರ್ಷದ ನಂತರ ಅವನು ಮೆಸೇಜು ಮಾಡುತ್ತಿರುವುದರಿಂದ ವಿಷಯ ಏನಿರಬಹುದೆಂಬ ಕುತೂಹಲದಿಂದ ತೆರೆದು ನೋಡಿದೆ. "ಭಯ ಆಗುತ್ತೆ ಬದ್ಕೋಕೆ. ನಾವು ನಮ್ ಧರ್ಮ ಆಚರಿಸುವುದೇ ತಪ್ಪಾ ಅನ್ನಿಸ್ತಿದೆ. ಹಿಂದೂ ಅಂತ ಹೇಳ್ಕೊಳ್ಳೋಕೆ ಭಯ ಆಗ್ತಿದೆ... ಇದೇ ಅಲ್ವಾ ನಿಮ್ಮ ಸೋ ಕಾಲ್ಡ್ ಸೆಕ್ಯೂಲರಿಸಂ? ನಾಳೆ ನಿಮ್ಮ ಬರಹ ನೋಡುವ..." ಅಂತ ಅವನು ನನ್ನ ಮೇಲೆ ಅಸಹನೆ ಹೊರಹಾಕಿದ್ದ. ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚದೆ ಹೋದರೂ ಕಡೆಗೆ, "ಇದಕ್ಕೆಲ್ಲ ಪರಿಹಾರ ಏನಪ್ಪ ಹಾಗಾದ್ರೆ?" ಅಂತ ಅವನನ್ನೇ ಕೇಳಿದೆ.

"ನಾವು ಭಾರತೀಯರು ಸರ್. ನಮ್ಮ ಇತಿಹಾಸದಲ್ಲಿ ಯಾರನ್ನೂ ದ್ವೇಷದಿಂದ ನೋಡಿಲ್ಲ. ಅಂಥ ಘಜನಿ-ಘೋರಿನೇ ಬಿಟ್ಟಿದ್ದೀವಿ, ಜಾಗ ಕೊಟ್ಟಿದ್ದೀವಿ. ನಮಗೆ ಬೇಕಾಗಿರೋದು ಸ್ನೇಹ-ಪ್ರೀತಿ. ಆದ್ರೆ ಆ ಕ್ರೂರರಿಗೆ ಅದು ಬೇಡವಾಗಿದೆ. ಇದುಕ್ಕೆಲ್ಲ ಮುಖ್ಯ ಕಾರಣ ಬುದ್ಧಿಜೀವಿ ಅಂತ ಕರ್ಕೊಳ್ಳೋರು. ಇವ್ರೇ ಮೊದ್ಲಿಂದ ಅವರುಗಳಿಗೆ ಸಪೋರ್ಟ್ ಮಾಡ್ಕೊಂಡು ಬಂದಿರೋದು. ಅವ್ರಿಗೆ ಭಯ ಇಲ್ಲ. ಯಾಕಂದ್ರೆ ಅವ್ರನ್ನ ಡಿಫೆಂಡ್ ಮಾಡ್ಕೊಳ್ಳೋಕೆ ಇವ್ರು ಇದಾರೆ. ಮೊದ್ಲು ತಪ್ಪು ಮಾಡ್ದಾಗ ತಲೆ ಮೇಲೆ ಹೊಡ್ದು ಬುದ್ಧಿ ಹೇಳಿ, ನಿಮ್ಮ ತಪ್ಪುಗಳಿಗೆ ನಮ್ಮ ಸಮರ್ಥನೆ ಇಲ್ಲ ಅಂದಿದ್ರೆ ಅವ್ರು ಹೀಗೆ ಬೆಳೀತಿರ್ಲಿಲ್ಲ. ನೀವೇ ಬೆಳ್ಸಿರೋದು, ನಮ್ಮೊಳಗಿನ ನಮ್ಮವರೇ," ಅಂತ ಪ್ರತಿಕ್ರಿಯಿಸಿದ.

Image
Rajasthan
ರಾಜಸ್ಥಾನದ ದರ್ಜಿ ಕೊಲೆ ಪ್ರಕರಣದ ಆರೋಪಿಗಳು

ವರ್ಷದ ಹಿಂದೆ ಎಂಜಿನಿಯರಿಂಗ್ ಪದವಿ ಮುಗಿಸಿ, ಸದ್ಯ ಬೆಂಗಳೂರಿನಲ್ಲಿ ಡಾಟಾ ಸೈನ್ಸ್ ಕೋರ್ಸು ಮಾಡುತ್ತಿರುವ ಇವನು ಇತಿಹಾಸ ತಜ್ಞನಾಗಿದ್ದು ಯಾವಾಗ ಎನ್ನುವ ಪ್ರಶ್ನೆ ಮನದಲ್ಲಿ ಮೂಡಿತಾದರೂ, ಆ ಕುರಿತು ಕೇಳಿ ಅವನನ್ನು ಮತ್ತಷ್ಟು ಕೆಣಕಲು ಮನಸ್ಸಾಗಲಿಲ್ಲ. ಹಾಗಾಗಿ, "ಧಾರ್ಮಿಕ ಭಯೋತ್ಪಾದನೆ ಮುಸ್ಲಿಮರದ್ದೇ ಆಗಿರಲಿ, ಕ್ರಿಶ್ಚಿಯನ್ನರದ್ದೇ ಆಗಿರಲಿ, ಹಿಂದೂಗಳದ್ದೇ ಆಗಿರಲಿ, ಎಲ್ಲವೂ ಅಪಾಯಕಾರಿ ಕಣಪ್ಪ. ತಪ್ಪು ಮಾಡಿದವರನ್ನು ದೂರಬೇಕು, ಶಿಕ್ಷಿಸಬೇಕೇ ಹೊರತು ಎಲ್ಲರನ್ನೂ ದ್ವೇಷಿಸಿ ಸಾಧಿಸುವುದು ಏನೂ ಇಲ್ಲ," ಅಂತ ಅಭಿಪ್ರಾಯ ಮಂಡಿಸಿ, ಕೊನೆಗೆ ತಿಳಿದುಕೊಳ್ಳುವ ಕುತೂಹಲದಿಂದಲೇ, "ಬುದ್ಧಿಜೀವಿಗಳು ಅಂದ್ರೆ ಯಾರಪ್ಪ?" ಅನ್ನುವ ಪ್ರಶ್ನೆ ಮುಂದಿಟ್ಟೆ. "ಕೆಲವೊಮ್ಮೆ ಕಣ್ಣೆದುರೇ ಎಲ್ಲ ನಡೀತಿದ್ರೂ ಏನೂ ಗೊತ್ತಿಲ್ಲದ ಹಾಗೆ ಇದ್ದು, ಅವ್ರ ಬೇಳೆ ಬೇಯಿಸ್ಕೊಳ್ಳೋ ಟೈಮ್ ಬಂದಾಗ ಮಾತಾಡವ್ರು," ಅಂತ ತನ್ನಲ್ಲಿರುವ ‘ಬುದ್ಧಿಜೀವಿ' ವ್ಯಾಖ್ಯಾನ ಮಂಡಿಸಿದ.

ಹೀಗೆ ಮೆಸೇಜುಗಳಲ್ಲಿ ಚರ್ಚಿಸುತ್ತಿದ್ದರೆ ಇಬ್ಬರ ಸಮಯವೂ ಹಾಳೆಂಬ ಜ್ಞಾನೋದಯವಾಗಿ ಅವನಿಗೆ ಕರೆ ಮಾಡಿದೆ. ಉಭಯ ಕುಶಲೋಪರಿಯ ನಂತರ ಮತ್ತೆ ಚರ್ಚೆ ರಾಜಸ್ಥಾನದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯತ್ತಲೇ ವಾಲಿತು. ನಾನು ನನಗೆ ಸರಿ ಅನಿಸಿದ್ದನ್ನು, ಅವನು ಅವನಿಗೆ ಸರಿ ಎಂದು ಕಂಡದ್ದನ್ನು ಹೇಳುತ್ತಲೇ ಹೋದೆವು. ಇಬ್ಬರ ನಡುವೆ ಸಹಮತ ಏರ್ಪಡುವ ಸೂಚನೆ ಸಿಗದೆ ಹೋದಾಗ ಮತ್ತು ತುರ್ತು ಕೆಲಸವೂ ಇದ್ದುದರಿಂದ, ಮುಂದೆ ಎಂದಾದರೂ ಈ ಕುರಿತು ಮತ್ತಷ್ಟು ಮಾತಾಡೋಣ ಹೇಳಿ ಮಾತು ನಿಲ್ಲಿಸಿದೆ.

ಈ ಲೇಖನ ಓದಿದ್ದೀರಾ?: ಸುದ್ದಿ ವಿವರ | 'ಜತೆಗಿರುವನು ಚಂದಿರ' ನಾಟಕ ಪ್ರದರ್ಶನಕ್ಕೆ ಅಡ್ಡಿ; ಆನವಟ್ಟಿಯಲ್ಲಿ ಅಸಲಿಗೆ ನಡೆದದ್ದೇನು?

ರಾಜಸ್ಥಾನದಲ್ಲಿ ಧರ್ಮಾಂಧರು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದರೆ, ಮಾಜಿ ವಿದ್ಯಾರ್ಥಿಗೆ ಮತ್ತು ಅವನ ಹಾಗೆ ಯೋಚಿಸುವವರಿಗೆ ನನ್ನಂತಹವರ ಮೇಲೇಕೆ ಸಿಟ್ಟು ಬರುತ್ತದೆ ಎನ್ನುವ ಪ್ರಶ್ನೆ ಕಾಡತೊಡಗಿತು. ಹತ್ಯೆ ಮಾಡಿದವರು ಮತ್ತು ಕೊಲೆಗಾರರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿರುವ ಸರ್ಕಾರದ ಮೇಲೆ ಅಸಹನೆ ತೋರುವ ಬದಲಿಗೆ ನಮ್ಮಂತಹವರ ಮೇಲೇಕೆ ಮುಗಿಬೀಳುತ್ತಿದ್ದಾರೆ? 'Public intellectual' ಎಂದು ಸಮಾಜ ಗುರುತಿಸುವ ಯಾರಾದರೂ ಇದುವರೆಗೂ ಕನ್ಹಯ್ಯ ಲಾಲ್ ಹತ್ಯೆಯನ್ನು ಸಮರ್ಥಿಸಿದ್ದಾರೆಯೇ? ನನ್ನದೇ ಮಿತಿಯಲ್ಲಿ ಗಮನಿಸಿರುವಂತೆ, ಧಾರ್ಮಿಕ ದ್ವೇಷದ ರಾಜಕಾರಣವನ್ನು ವಿರೋಧಿಸುವ ಎಲ್ಲರೂ ಈ ಹತ್ಯೆಯನ್ನು ಖಂಡಿಸಿದ್ದಾರೆ. ಧರ್ಮದ ಆಧಾರದಲ್ಲಿ ಜನರ ನಡುವೆ ದ್ವೇಷ ಬಿತ್ತುವ ಕೆಲಸ ಇನ್ನಾದರೂ ನಿಲ್ಲಲಿ ಎನ್ನುವ ಕಳಕಳಿಯನ್ನೇ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸುಳ್ಳುಗಳ ತಳಪಾಯದ ಮೇಲೆಯೇ ಅಧಿಕಾರ ಹಿಡಿದು, ಇಂದಿಗೂ ಯಾವುದೇ ಹಿಂಜರಿಕೆ ಇಲ್ಲದೆ ಒಂದರ ಮೇಲೊಂದರಂತೆ ಸುಳ್ಳುಗಳನ್ನು ಪೋಣಿಸುತ್ತಲೇ ಇರುವವರಿಗೆ, 'ಬುದ್ಧಿಜೀವಿಗಳು ಕನ್ಹಯ್ಯ ಲಾಲ್ ಹತ್ಯೆ ಕುರಿತು ಮಾತನಾಡುತ್ತಿಲ್ಲ' ಎಂದು ಬಿಂಬಿಸುವುದು ಸವಾಲಿನ ಕೆಲಸವೇನಲ್ಲ. ದೇಶದಲ್ಲಿ ಕೋಮುದ್ವೇಷದ ನಂಜು ತೀವ್ರವಾಗಿ, ಕೊಲೆಗಳಾಗುತ್ತಿರುವ ಹೊತ್ತಿನಲ್ಲಿ ಅಸಲಿಗೂ ಈ ಕುರಿತು ಮಾತನಾಡಬೇಕಿರುವುದು ಪ್ರಧಾನಿ ನರೇಂದ್ರ ಮೋದಿ ಅವರಲ್ಲವೇ? "ಧರ್ಮದ ಆಧಾರದಲ್ಲಿ ಯಾರನ್ನೂ ದ್ವೇಷಿಸಲು ಹೋಗಬೇಡಿ. ಸೌಹಾರ್ದ ಕಾಯ್ದುಕೊಂಡು ಎಲ್ಲರೂ ಮುನ್ನಡೆಯೋಣ," ಎನ್ನುವ ಮಾತು ಬರಬೇಕಿರುವುದು, ಜನರ ಮೇಲೆ ನಿಜಕ್ಕೂ ಪ್ರಭಾವ ಬೀರುವಂತಹ ಸ್ಥಾನಗಳನ್ನು ಅಲಂಕರಿಸಿರುವ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಧಿಗಳಿಂದಲ್ಲವೇ? ಕೋಮುದ್ವೇಷದ ಬೆಂಕಿಗೆ ತುಪ್ಪ ಸುರಿಯುವ ಕಾಯಕದಲ್ಲಿ ಆಳುವವರೇ ಪಾಲ್ಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ‘ಬುದ್ಧಿಜೀವಿ'ಗಳೆಂಬ ಹಣೆಪಟ್ಟಿ ಹೊರಿಸಿ ಕೋಮುವಾದಿ ರಾಜಕಾರಣ ವಿರೋಧಿಸುವವರ ಮೇಲೇಕೆ ಕೊಲ್ಲುವಷ್ಟು ಅಸಹನೆ? ಬುದ್ಧಿಜೀವಿಗಳು ಹಾಗೆ-ಹೀಗೆ ಅಂತೆಲ್ಲ ಹೇಳುವುದರೊಂದಿಗೆ ನನಗೂ ಬುದ್ಧಿಜೀವಿಯ ಪಟ್ಟ ದಯಪಾಲಿಸಿದ ನನ್ನ ಮಾಜಿ ವಿದ್ಯಾರ್ಥಿ, ತಾನು ಬುದ್ಧಿಜೀವಿಗಳೆಂದು ಭಾವಿಸಿ ದ್ವೇಷಿಸುವವರ ಎಷ್ಟು ಬರಹಗಳನ್ನು ಓದಿರಬಹುದು, ಭಾಷಣಗಳನ್ನು ಕೇಳಿರಬಹುದು?

Image
Nupur Sharma
ಪ್ರವಾದಿ ನಿಂದನೆ ಕೇಸುಗಳನ್ನು ಎದುರಿಸುತ್ತಿರುವ ನೂಪುರ್ ಶರ್ಮಾ

ಕೋಮು ಸೌಹಾರ್ದ ಕಾಪಾಡುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಖಾತ್ರಿಪಡಿಸುವ ಹೊಣೆ ಹೊತ್ತ ಪ್ರಭುತ್ವವೇ ಕೋಮುದ್ವೇಷ ಹರಡುವ ಕಾರ್ಯಸೂಚಿ ಜಾರಿಗೆ ಮುನ್ನುಗ್ಗುತ್ತಿರುವಾಗ ದೂರಬೇಕಿರುವುದು ಯಾರನ್ನು? ಒಂದು ಧರ್ಮದವರ ಕೋಮುವಾದಕ್ಕೆ ಮತ್ತೊಂದು ಧರ್ಮದವರ ಕೋಮುವಾದ ಪರಿಹಾರ ಒದಗಿಸಲು ಸಾಧ್ಯವೇ? ಈ ದ್ವೇಷದ ದಳ್ಳುರಿ ಅಂತಿಮವಾಗಿ ಯಾರನ್ನೂ ನೆಮ್ಮದಿಯಿಂದಿರಲು ಬಿಡುವುದಿಲ್ಲವೆನ್ನುವ ಸರಳ ಸತ್ಯ ಅರಿಯಲೂ ನಾವೇಕೆ ಇಷ್ಟೆಲ್ಲ ತಿಣುಕಾಡುತ್ತಿದ್ದೇವೆ? ಧರ್ಮದ ಆಧಾರದಲ್ಲಿ ನಡೆಯುವ ಭಯೋತ್ಪಾದನೆಯೂ ಸೇರಿದಂತೆ ಯಾವುದೇ ಅಪರಾಧಿ ಕೃತ್ಯಗಳನ್ನು ತಡೆಯುವಲ್ಲಿ ಸರ್ಕಾರದ ಪಾತ್ರ ಮಹತ್ವಪೂರ್ಣವಾದುದು. ಸರ್ಕಾರದ ಅಡಿ ಕಾರ್ಯನಿರ್ವಹಿಸುವ ಪೊಲೀಸರು, ತನಿಖಾ ಸಂಸ್ಥೆಗಳು, ಗುಪ್ತಚರ ವ್ಯವಸ್ಥೆ ವೃತ್ತಿಪರತೆ ಮೈಗೂಡಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಕನ್ಹಯ್ಯ ಲಾಲ್ ಹತ್ಯೆಯಂತಹ ಘಟನೆಗಳು ನಡೆದಾಗ ನಮ್ಮ ಬೆರಳುಗಳು ರಾಜಸ್ಥಾನ ಸರ್ಕಾರ ಮತ್ತು ಒಕ್ಕೂಟ ಸರ್ಕಾರದ ಆಡಳಿತ ವೈಖರಿಯತ್ತ ತಿರುಗಬೇಕಿತ್ತೋ ಅಥವಾ 'Public intellectual'ಗಳತ್ತಲೋ?

ಕಳೆದ ಏಳೆಂಟು ವರ್ಷಗಳಿಂದ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಯಶ ಕಂಡಿರುವ ಪ್ರಭುತ್ವ ಕೃಪಾಪೋಷಿತ ಪ್ರೊಪಗಾಂಡ ಮೆಷಿನರಿ, ಈ ದೇಶದಲ್ಲಿ ನಡೆಯುವ ಅಪಸವ್ಯಗಳಿಗೆಲ್ಲ ದೂರಬೇಕಿರುವುದು ಯಾರನ್ನು ಎಂದು ಮೊದಲೇ ಗುರುತಿಸಿ ಇಟ್ಟುಕೊಂಡಿದೆ. ಅದರ ತಾಳಕ್ಕೆ ತಕ್ಕಂತೆ ಕುಣಿಯುವುದನ್ನಷ್ಟೇ ಬಲ್ಲವರಿಗೆ, ಕಾನೂನು ಸುವ್ಯವಸ್ಥೆ ಕಾಪಾಡುವ ಗುರುತರ ಜವಾಬ್ದಾರಿ ನಿರ್ವಹಿಸಬೇಕಿರುವ ಪ್ರಭುತ್ವದ ಅಸಮರ್ಥತೆಯು ಎಂದಾದರೂ ಕಾಣಲು ಸಾಧ್ಯವೇ? ಸತ್ಯದ ಪರ ಒಲವುಳ್ಳವರನ್ನು ಜೈಲಿಗಟ್ಟುವ ಪ್ರಭುತ್ವ, ದೇಶದ ಹಿತಕ್ಕಾಗಿ ದುಡಿಯುತ್ತಿದೆ ಎಂದು ನಂಬುವವರ ಮೆದುಳಿಗೆ ವಾಸ್ತವ ಗ್ರಹಿಸುವ ಸಂಯಮ ದಕ್ಕಿದ ದಿನ, ಬುದ್ಧಿ ಇರುವ ಜೀವಿಗಳೆಂದು ಈ ಮೊದಲು ಸಮಾಜ ಭಾವಿಸುತ್ತಿದ್ದ 'Public intellectual''ಗಳ ಮೇಲಿನ ದ್ವೇಷವೂ ಗೌರವವಾಗಿ ರೂಪಾಂತರಗೊಳ್ಳಬಹುದೇನೋ?

ನಿಮಗೆ ಏನು ಅನ್ನಿಸ್ತು?
9 ವೋಟ್