ಪಾಟಿ ಚೀಲ | ಮೊಟ್ಟೆಯೊಂದು ತಟ್ಟೆಯ ಮೇಲೆ ಬಿದ್ದಾಗ...

ನಮ್ಮ ಆಹಾರದ ಶೇಕಡ 29ರಷ್ಟು ಅಂದರೆ, 729 ಕ್ಯಾಲರಿಯಷ್ಟು ಶಕ್ತಿಯು ಮೊಟ್ಟೆ, ಹಾಲು, ಮೀನು, ಮಾಂಸ, ಕಾಳುಗಳಿಂದ ಬರಬೇಕು. ಆದರೆ, ಹಳ್ಳಿಯ ಬಡ ಮಕ್ಕಳು ತಾವು ಸೇವಿಸಬೇಕಾಗಿದ್ದ ಪ್ರೋಟೀನಿನ ಶೇಕಡ 6ರಷ್ಟನ್ನು ಮಾತ್ರ ಸೇವಿಸುತ್ತಿದ್ದಾರೆ. ಇದು ನಿಜಕ್ಕೂ ಚಿಂತೆಯ ವಿಷಯ. ಬಲಿಷ್ಠ ದೇಹವಿಲ್ಲದೆ ಬಲಿಷ್ಠ ಭಾರತ ಕಟ್ಟುವುದಾದರೂ ಹೇಗೆ?

ಇದು ಬಹಳ ಹಳೆಯ ಕತೆ. ಆದರೂ ನೆನಪಿಸುವೆ...

ಆಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕಾಮರಾಜರ ಕಾರು ಚಿರನ್ಮಹಾದೇವಿ ಎಂಬ ಊರಿನ ರೈಲ್ವೆ ಕ್ರಾಸಿಂಗ್ ಬಳಿ ನಿಂತಿತ್ತು. ರೈಲು ಇನ್ನೇನು ಬರಬೇಕಿತ್ತು. ಕಾಮರಾಜರು ಕಿಟಕಿಯಾಚೆ ನೋಡಿದರು. ಒಬ್ಬ ಹುಡುಗ ದನ ಮೇಯಿಸುತ್ತಿದ್ದ. ಅವನೊಡನೆ ಮಾತನಾಡಬೇಕೆನಿಸಿತು ಅವರಿಗೆ. ಕರೆದು, “ಯಾಕಪ್ಪಾ ಶಾಲೆಗೆ ಹೋಗಲಿಲ್ಲ?” ಎಂದು ಕೇಳಿದರು. ತಕ್ಷಣವೇ ಆತ, “ದಿನವೂ ಶಾಲೆಗೆ ಹೋದರೆ ಊಟಕ್ಕೆ ನೀವು ಹಾಕುತ್ತೀರಾ?” ಎಂದು ಕೇಳಿದ. ಆ ಬುಡಕಟ್ಟು ಹುಡುಗ ಅವರನ್ನು ಗುರುತಿಸಿರಲಿಲ್ಲ. ನಂತರ ಕಾಮರಾಜರು ದೇಶದಲ್ಲೇ ಮೊದಲ ಬಾರಿಗೆ 1956ರಲ್ಲಿ ಶಾಲೆಗಳಲ್ಲಿ ಮದ್ಯಾಹ್ನದ ಬಿಸಿಯೂಟ ಆರಂಭಿಸಿದರು. ಆದಿದ್ರಾವಿಡ ಸಮುದಾಯದ ಮಕ್ಕಳಿಗೆ ಅಕ್ಷರದ ಜೊತೆ ಅನ್ನವೂ ಸಿಕ್ಕ ಸಂಭ್ರಮ.

ಮೊನ್ನೆ ನಮ್ಮ ಮಕ್ಕಳ ತಟ್ಟೆಯ ಮೇಲೆ ಮೊಟ್ಟೆ ಬಿದ್ದಾಗಲೂ ಅಂಥದ್ದೇ ಪುಳಕ. ಮೊಟ್ಟೆ ಕೊಡುತ್ತಾರೆ ಎಂಬ ಸುದ್ದಿ ಗೊತ್ತಾದ ದಿನದಿಂದಲೇ, "ನಮ್ಮ ಕ್ಲಾಸಿನಲ್ಲಿ ಒಬ್ಬರಿಗಷ್ಟೇ ಚಿಕ್ಕಿ, ಉಳಿದಿದ್ದೆಲ್ಲ ಮೊಟ್ಟೆ," ಎಂದು ಲೆಕ್ಕ ಕೊಡಲು ಶುರುಮಾಡಿದ್ದರು. ಎಂಟನೆಯ ತರಗತಿಯ ಮಕ್ಕಳಿಗೆ ಮಾತ್ರ ಮೊಟ್ಟೆ ಸಿಗುತ್ತದೆ ಎಂದು ಆ ನಂತರ ಗೊತ್ತಾದಾಗ ಒಂಬತ್ತು, ಹತ್ತರವರಿಗೆ ನಿರಾಸೆಯಾದದ್ದೂ ಹೌದು. ಹಾಗೆ ನೋಡಿದರೆ, ಬೆಳಗ್ಗೆ ಹಾಲು ಕುಡಿಯಲು ಮಕ್ಕಳಿಗೆ ಈ ಉತ್ಸಾಹವಿಲ್ಲ. ನಮ್ಮ ಶಾಲೆಗೆ ಬರುವ ಅನೇಕ ಮಕ್ಕಳ ಮನೆಯಲ್ಲಿ ಹಾಲು ಕರೆಯುವ ಹಸುವಿದ್ದರೂ, ಅವರು ಹಾಲು ಕುಡಿಯುವ ಅಭ್ಯಾಸ ಹೊಂದಿಲ್ಲ. ಆಲೂಗಡ್ಡೆ ಇಷ್ಟಪಡುತ್ತಾರೆ. ಹೆಚ್ಚಿನ ಮಕ್ಕಳಿಗೆ ಸೌತೆ, ಕುಂಬಳ ಮತ್ತಿತರ ಕಾಯಿಗಳು ಇಷ್ಟವಿಲ್ಲ. ನಾವು ಹಾಲು ಕುಡಿಯುವ ಅಭ್ಯಾಸಕ್ಕೆ ಒಗ್ಗಿಸಿದ್ದೇವೆ. ಕೆಲವರಿಗೆ ಹಾಲು ಆಗಿಬರುವುದಿಲ್ಲ. ಅವರನ್ನು ಒತ್ತಾಯಿಸುವುದಿಲ್ಲ. ಅವರ ತಟ್ಟೆಗೆ ಗದರಿಸಿ ತರಕಾರಿ ಬಡಿಸುವಾಗ ಮಕ್ಕಳು ಮುನಿಸು ತೋರುತ್ತಾರೆ. ಅದು ನಿಜವೆಂದು ನಾನು ಮೊದಲು ನಂಬಿದ್ದೆ. ಆದರೆ, ಹೀಗೆ ಗದರಿಸಿ ಹಾಲು ಕುಡಿಸುವುದನ್ನೂ ಅವರು ಇಷ್ಟಪಡುತ್ತಾರೆ. ಈಗ ಒಂದು ತರಗತಿಯ ವಿದ್ಯಾರ್ಥಿಗಳಿಗೆ ನಾನೇ ಹಾಲು ಬಡಿಸುತ್ತೇನೆ. ಅವರಿಗೆ ನಾನು ಬಡಿಸುವುದು ಇಷ್ಟವಾದಂತೆ ಹಾಲೂ ಇಷ್ಟವಾಗುತ್ತಿದೆ.

Image

ಬಡಿಸುವವರ ಖುಷಿ ಇರುವುದು ತಿನ್ನುವವರ ಖುಷಿಯಲ್ಲಿ. ಎಲ್ಲರಿಗೂ ಅವರಿಗಿಷ್ಟವಾಗುವ ಆಹಾರವನ್ನು ಬಡಿಸಲಾಗದೆ ಇರಬಹುದು. ಆದರೆ, ಬಡಿಸಿದ್ದನ್ನೇ ಇಷ್ಟವಾಗುವಂತೆ ಮಾಡಲು ಸಾಧ್ಯವಿದೆ. ಮೊಟ್ಟೆ ಎಂಟನೆಯ ತರಗತಿಯವರಿಗೆ ಮಾತ್ರ ಎಂದಾಗ ನನಗೆ ಸ್ವಲ್ಪ ಕಸಿವಿಸಿಯಾಯ್ತು. ಅವರಿಗಾದರೂ ದೊರೆಯುತ್ತಿದೆಯಲ್ಲ ಎಂಬ ಖುಷಿ ಈಗ. ಮೊಟ್ಟೆ ಕೊಡುವ ಮೊದಲು, ಯಾರಿಗೆಲ್ಲ ಮೊಟ್ಟೆ, ಇನ್ಯಾರಿಗೆ ಚಿಕ್ಕಿ ಅಥವಾ ಬಾಳೆಹಣ್ಣು ಎಂದು ಆದ್ಯತೆಯನ್ನು ಕೇಳಿದಾಗ ಕನ್ನಡ ಮಾಧ್ಯಮದ ಬಹುತೇಕ ಎಲ್ಲ ಮಕ್ಕಳು ಮೊಟ್ಟೆಯನ್ನೇ ಆಯ್ಕೆ ಮಾಡಿದರು. ಆಂಗ್ಲ ಮಾಧ್ಯಮದಲ್ಲಿಯೂ ಮಾಂಸಹಾರ ಅಭ್ಯಾಸದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿದ್ದರೂ, ಈ ಪ್ರಮಾಣವನ್ನು ಮೀರಿ ಹಲವು ಮಕ್ಕಳು ಚಿಕ್ಕಿಯನ್ನು ಆಯ್ಕೆ ಮಾಡಿಕೊಂಡರು. ಬಾಳೆಹಣ್ಣು ಯಾಕೋ ಯಾರ ಆಯ್ಕೆಯೂ ಆಗಲಿಲ್ಲ. ಆದರೆ, ಮೊಟ್ಟೆ ಮತ್ತು ಚಿಕ್ಕಿಯನ್ನು ಪ್ರತ್ಯೇಕ ಕೌಂಟರಿನಲ್ಲಿ ಬಡಿಸುವಾಗ ಕೆಲವು ಮಕ್ಕಳು ತಮ್ಮ ಆಯ್ಕೆಯನ್ನು ಬದಲಿಸುವ ಅವಕಾಶವಿದೆಯೇ ಎಂದು ಕೇಳಿದರು. "ಓಹ್! ಯಾಕಿಲ್ಲ? ಇನ್ನೊಂದು ಹತ್ತು ನಿಮಿಷ ಕಾದರೆ ನಿಮ್ಮ ಬದಲಾದ ಆಯ್ಕೆ ಬಟ್ಟಲಲ್ಲಿರುತ್ತದೆ," ಎಂದೆ. "ಮುಂದಿನ ವಾರ ನನಗೆ ಮೊಟ್ಟೆ ಸರ್," ಎಂದು ಚಿಕ್ಕಿ ಹಿಡಿದುಕೊಂಡೇ ಒಬ್ಬಳು ಹುಡುಗಿ ಹೇಳಿದಳು. ಮೊಟ್ಟೆ ಇಷ್ಟವಿದ್ದರೂ ಅವರೇಕೆ ಮೊಟ್ಟೆಯನ್ನು ಬಿಟ್ಟು ಚಿಕ್ಕಿ ಆಯ್ದುಕೊಂಡರು?

ಅವರ ಆಯ್ಕೆಯ ಹಿಂದೆ ಹಲವು ಪದರುಗಳಿವೆ ಎಂಬುದು ನನ್ನ ಅನಿಸಿಕೆ. ಅವರ ಪಕ್ಕದಲ್ಲಿ ಯಾರು ಕುಳಿತಿದ್ದಾರೆ? ಅವರಲ್ಲಿ ಆಯ್ಕೆ ನೀಡಲು ಹೇಳಿದವರ ಆಹಾರ ಕ್ರಮ ಯಾವುದು? ಇತ್ಯಾದಿ ಇತ್ಯಾದಿ. ಇದಕ್ಕೆ ಪೂರಕವೆಂಬಂತೆ ಕೆಲವು ಶಾಲೆಗಳಲ್ಲಿ ಎಲ್ಲ ಫಲಾನುಭವಿಗಳೂ ಮೊಟ್ಟೆಯನ್ನು ಆಯ್ಕೆ ಮಾಡಿರುವುದೂ ಮತ್ತು ಒಂದು ಶಾಲೆಯಲ್ಲಿ ಎಲ್ಲ ಮಕ್ಕಳೂ ಮೊಟ್ಟೆಯ ಬದಲು ಚಿಕ್ಕಿಯನ್ನೇ ಆಯ್ದುಕೊಂಡಿರುವುದೂ ತಿಳಿದುಬಂತು. ಕೆಲವು ಶಾಲೆಯವರು ಮೊಟ್ಟೆಯ ಕವಚವನ್ನು ನಿರ್ವಹಿಸುವುದು ಹೇಗೆ ಎಂದು ತಲೆಕೆಡಿಸಿಕೊಂಡರು. ಇನ್ನು ಕೆಲವರು, ಮೊಟ್ಟೆ ಕೊಳೆಯುತ್ತದೆ,  ಚಿಕ್ಕಿಯ ಹೊರಕವಚದ್ದೇ (ರ್‍ಯಾಪರ್) ತಲೆನೋವು ಎಂದು ಅಭಿಪ್ರಾಯಪಟ್ಟರು.

ಈ ಲೇಖನ ಓದಿದ್ದೀರಾ?: ಊರ್ಬದಿ | ಶಾಲೆ ವಿಲೀನ ಪ್ರಹಸನ ಮತ್ತು ಇಂದ್ರೋಡಿಮನೆ ಶಾಲೆಯ ಪೂರ್ಣಿಮಾ

ಖಾಸಗಿ ಶಾಲೆಯ ಮಕ್ಕಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಯ ಹೆಚ್ಚಿನ ಮಕ್ಕಳು ಪೀಚಲಾಗಿರುತ್ತಾರೆ. ಕಡಿಮೆ ತೂಕ, ಕಣ್ಣುಗಳಲ್ಲಿ ಗುಳಿ, ಬಿಳಿಚಿಕೊಂಡ ತುಟಿಗಳು. ಇವೆಲ್ಲವೂ ನ್ಯೂನ ಪೋಷಣೆಯ ಸೂಚಕಗಳು. ಕಳೆದ ವರ್ಷ ನಡೆದ ಒಂದು ಅಧ್ಯಯನದ ಪ್ರಕಾರ, ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಗಳ ಶೇಕಡ 74ರಷ್ಟು ವಿದ್ಯಾರ್ಥಿಗಳು ನ್ಯೂನ ಪೋಷಣೆಯಿಂದ ಬಳಲುತ್ತಿದ್ದಾರೆ. ಕಲಬುರಗಿ, ಕೊಪ್ಪಳ, ಬೀದರ್, ರಾಯಚೂರುಗಳಲ್ಲೂ ಮುಕ್ಕಾಲು ಪಾಲು ಮಕ್ಕಳ ದೇಹ ತೂಕ ಅವರ ಎತ್ತರಕ್ಕೆ ತಕ್ಕದಾಗಿರಲಿಲ್ಲ. ಜೊತೆಗೆ, ರಕ್ತಹೀನತೆ, ಅವಧಾನ ಕೊರತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರು ಕೂಡ. ಕಳೆದ ಡಿಸೆಂಬರ್‍‌ನಿಂದ ಈ ಜಿಲ್ಲೆಗಳ ಹದಿನಾಲ್ಕೂವರೆ ಲಕ್ಷ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ನೀಡಲು ಆರಂಭಿಸಿದ ಮೇಲೆ, ಕೇವಲ ಮೂರು ತಿಂಗಳಲ್ಲಿ ನ್ಯೂನ ಪೋಷಣೆಯ ತೀವ್ರತೆ ಇಳಿಮುಖವಾಯ್ತು.

ಕೆಲವು ಮಕ್ಕಳಿಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ. ಉಳಿದ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ದೊರೆಯುತ್ತಿದ್ದರೂ ನ್ಯೂನ ಪೋಷಣೆ ಇದೆ. "ನಮ್ಮ ಮಕ್ಕಳ ನ್ಯೂನ ಪೋಷಣೆಗೆ ಮುಖ್ಯ ಕಾರಣವೆಂದರೆ ನಮ್ಮ ಊಟದ ತಟ್ಟೆಯ ಬಹುಭಾಗವು ಅಕ್ಕಿ, ಗೋಧಿ, ಜೋಳ, ರಾಗಿ ಮುಂತಾದ ಧಾನ್ಯ ಮೂಲದ ಆಹಾರದಿಂದ ತುಂಬಿರುವುದು," ಎನ್ನುತ್ತದೆ, ಪೋಷಣೆಯ ಬೆನ್ನು ಹಿಡಿದು ಹೋದ 'EAT-lancet' ಅಧ್ಯಯನ. ನಮ್ಮ ಆಹಾರದ ಶೇಕಡ 29ರಷ್ಟು ಅಂದರೆ, 729 ಕ್ಯಾಲರಿಯಷ್ಟು ಶಕ್ತಿಯು ಮೊಟ್ಟೆ, ಹಾಲು, ಮೀನು, ಮಾಂಸ, ಕಾಳುಗಳಿಂದ ಬರಬೇಕು. ಆದರೆ, ಹಳ್ಳಿಯ ಬಡ ಮಕ್ಕಳು ತಾವು ಸೇವಿಸಬೇಕಾಗಿದ್ದ ಪ್ರೋಟೀನಿನ ಶೇಕಡ 6ರಷ್ಟನ್ನು ಮಾತ್ರ ಸೇವಿಸುತ್ತಿದ್ದಾರೆ. ಇದು ಚಿಂತೆಗೀಡುಮಾಡುವ ವಿಷಯ. ಬಲಿಷ್ಠ ದೇಹವಿಲ್ಲದೆ ಬಲಿಷ್ಠ ಭಾರತವನ್ನು ಕಟ್ಟುವುದಾದರೂ ಹೇಗೆ?

Image

ಕಳೆದ ವರ್ಷ ಯಾದಗಿರಿ ಜಿಲ್ಲೆಯ ಶೇಕಡ ನಾಲ್ಕು ಮಕ್ಕಳಷ್ಟೇ ಮೊಟ್ಟೆ ತಿನ್ನಲಿಲ್ಲ. ಅವರಿಗೆ ಬಾಳೆಹಣ್ಣು ನೀಡಲಾಗಿತ್ತು. ತಮ್ಮ-ತಮ್ಮ ಆಹಾರ ಕ್ರಮವನ್ನು ಇಷ್ಟಪಡುವಂತೆ ಬೇರೆಯವರ ಆಹಾರ ಕ್ರಮವನ್ನೂ ಗೌರವಿಸುವ ಮನೋಭಾವ ಅವರಲ್ಲಿ ವೃದ್ಧಿಯಾಗಿದೆ ಎಂದು ಅಲ್ಲಿನ ಹಲವಾರು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಅಡುಗೆಮನೆಯಲ್ಲಿ ಮೊಟ್ಟೆ ಬೇಯಿಸಿದ್ದ ಕಾರಣಕ್ಕೆ ಮೊನ್ನೆ ಒಬ್ಬಿಬ್ಬರು ಮಕ್ಕಳು ಊಟಮಾಡಲಿಲ್ಲ ಎಂದು ತಡವಾಗಿ ತಿಳಿಯಿತು. ಮೊಟ್ಟೆಯ ಸಂಭ್ರಮ ಇಳಿದುಹೋಯಿತು. ಮಕ್ಕಳು ಹಸಿದು ಹೋದರೆ ಬೇಸರವಾಗದೇ? ಮುಂದಿನ ಮೊಟ್ಟೆಯ ದಿನದ ಒಳಗಾಗಿ ಇದಕ್ಕೆ ಪರಿಹಾರ ಹುಡುಕಬೇಕಿದೆ. ಅದಕ್ಕೂ ಮೊದಲು, ಸಮಸ್ಯೆಯನ್ನು ಹುಡಕಬೇಕು. ಸಮಸ್ಯೆ ಮೊಟ್ಟೆಯಲ್ಲಿದೆಯೋ ಅಥವಾ ಮೊಟ್ಟೆ ಬೇಯಿಸುವ ಕೋಣೆಯಲ್ಲಿದೆಯೋ ಅಥವಾ ಇನ್ನೆಲ್ಲಿಯೋ?

ನಿಮಗೆ ಏನು ಅನ್ನಿಸ್ತು?
7 ವೋಟ್