ಗ್ರಾಹಕಾಯಣ | ವೈದ್ಯಕೀಯ ನಿರ್ಲಕ್ಷ್ಯ ಎಂದರೇನು, ಯಾವಾಗ ದೂರು ಕೊಡಬಹುದು?

medical malpractice

ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಹೊರಿಸಿ ವೈದ್ಯರ ಮೇಲೆ ಹಲ್ಲೆ ಮಾಡುವ ಪ್ರಕರಣಗಳು ದಿನವೂ ವರದಿ ಆಗುತ್ತಲೇ ಇರುತ್ತವೆ. ಹಾಗೆಯೇ, ನಿರ್ಲಕ್ಷ್ಯ ತೋರಿಯೂ ವೈದ್ಯರು ಬಚಾವಾದ ನಿದರ್ಶನಗಳೂ ಉಂಟು. ಆದರೆ, ನಿಜವಾಗಿಯೂ 'ವೈದ್ಯಕೀಯ ನಿರ್ಲಕ್ಷ್ಯ' ಎಂದರೇನು? ಪ್ರಕರಣವೊಂದರ ವಿಚಾರಣೆ ವೇಳೆ ಈ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು? ಇಲ್ಲಿದೆ ವಿವರ

ಗ್ರಾಹಕ ಸಂರಕ್ಷಣಾ ಅಧಿನಿಯಮ ಜಾರಿಗೆ ಬಂದ ನಂತರ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ದೂರುಗಳು ಹೆಚ್ಚಾಗುತ್ತಿವೆ. ಆದರೆ, ಬಹಳಷ್ಟು ಪ್ರಕರಣಗಳಲ್ಲಿ ವೈದ್ಯರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ. ಕೆಲವು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡ 80-90ರಷ್ಟು ಪ್ರಕರಣಗಳಲ್ಲಿ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ನಡೆದಿಲ್ಲ ಎಂದು ತಿಳಿದುಬಂದಿದೆ.

ಮಾರುಕಟ್ಟೆಯಲ್ಲಿ ಅಥವಾ ಆನ್‍ಲೈನ್‍ನಲ್ಲಿ ಸರಕು ಮತ್ತು ಸೇವೆಗಳನ್ನು ಖರೀದಿಸುವುದಕ್ಕೂ ಒಬ್ಬ ವೈದ್ಯರಿಂದ ಚಿಕಿತ್ಸೆ ಪಡೆಯುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ವೈದ್ಯರು ಚಿಕಿತ್ಸೆ ನೀಡಬಹುದು, ಗಾಯಕ್ಕೆ ಔಷಧಿ ಹಚ್ಚಬಹುದು ಅಥವಾ ಬ್ಯಾಂಡೇಜ್ ಕಟ್ಟಬಹುದು. ಆದರೆ, ಒಳಗಿನ ಗಾಯ ವಾಸಿ ಮಾಡುವ ಶಕ್ತಿ ಬೇರೊಂದು ಇದೆ ಎಂಬುದನ್ನು ಯಾರೂ ಮರೆಯುವಂತಿಲ್ಲ.

Image
medical malpractice 2
ಸಾಂದರ್ಭಿಕ ಚಿತ್ರ

ನವನೀತ್ ಕಾಂತ್ ಎಂಬುವವರು ತೀವ್ರ ರಕ್ತದೊತ್ತಡಕ್ಕೆ ಒಳಪಟ್ಟಿದ್ದರು. ಅವರು ಡಾ.ಪಿ ಡಿ ಗುಲಾಟಿ ಎಂಬುವವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಯಾವುದೇ ಸುಧಾರಣೆ ಕಂಡುಬರದಿದ್ದ ಕಾರಣ, ರೀನಲ್ ಟ್ರಾನ್ಸ್‌ಪ್ಲಾಂಟ್ (Kidney transplant or renal transplant is the organ transplant of a kidney into a patient with end-stage kidney disease) ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಯಿತು. ಅದರಂತೆ, ನವನೀತ್ ಕಾಂತ್ ದೆಹಲಿಯ ಆಸ್ಪತ್ರೆಯೊಂದರಲ್ಲಿ ಡಾ.ಗುಲಾಟಿ ಅವರ ಮಾರ್ಗದರ್ಶನದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಆರಂಭಿಸಿದರು. ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಸೂಕ್ತವಲ್ಲ ಎಂದು ನಿರ್ಧರಿಸಿ, ಚೆನ್ನೈನ ಡಾ.ಎಂ ಎ ಮುತ್ತು ಸೇತುಪತಿ (ಕಿಡ್ನಿ ತಜ್ಞರು) ಅವರ ಸಲಹೆ ಮೇರೆಗೆ, ಅಶ್ವಿನಿ ಸೌಂದ್ರ ನರ್ಸಿಂಗ್ ಹೋಮ್‍ಗೆ ವರ್ಗಾವಣೆ ಆದರು. ಅಲ್ಲಿ, 12 ಮಂದಿ ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮಾಡಿಸಿಕೊಂಡರು.

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನವನೀತ್ ಮನೆಗೆ ತೆರಳಿದ್ದರು. ಆದರೆ, ಕೆಲವೇ ದಿನಗಳಲ್ಲಿ ಅವರ ಪರಿಸ್ಥಿತಿ ಗಂಭೀರವಾದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರು ಸಾಕಷ್ಟು ಶ್ರಮ ವಹಿಸಿ ತಮಗೆ ತಿಳಿದ ಎಲ್ಲ ಚಿಕಿತ್ಸೆ ನೀಡಿದರು. ನವನೀತ್ ಅವರ ಶ್ವಾಸಕೋಶದಲ್ಲಿ ಸೆಪ್ಟಿಸಿಮಿಯಾ (A life-threatening complication of an infection) ಕಾಣಿಸಿಕೊಂಡಿತು. ವೈದ್ಯರು ನೀಡಿದ ಔಷಧಿ ಮತ್ತು ಚಿಕಿತ್ಸೆ ಫಲಕಾರಿಯಾಗಲಿಲ್ಲ. ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಯಿತು. ಆದರೂ ನವನೀತ್‍ರನ್ನು ಉಳಿಸಿಕೊಳ್ಳಲಾಗಲಿಲ್ಲ.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | 'ಉಚಿತ' ಎಂದು ಬೊಬ್ಬೆ ಹಾಕುವ ಜಾಹೀರಾತುಗಳನ್ನು ಕಣ್ಮುಚ್ಚಿ ನಂಬದಿರಿ

ನವನೀತ್ ಅವರ ಕುಟುಂಬಸ್ಥರು ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ದೂರು ಸಲ್ಲಿಸಿದರು. ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸರಿಯಾದ ಚಿಕಿತ್ಸೆ ನೀಡಲಿಲ್ಲವೆಂದೂ, ವೈದ್ಯಕೀಯ ನಿರ್ಲಕ್ಷ್ಯವೇ ಅವರ ಸಾವಿಗೆ ಕಾರಣ ಎಂದೂ ಆರೋಪಿಸಲಾಯಿತು. ಜೊತೆಗೆ, 95,16,174 ರುಪಾಯಿ ಪರಿಹಾರ ನೀಡಬೇಕೆಂದು ಆಯೋಗವನ್ನು ಕೇಳಿಕೊಂಡರು. ಇತರೆ ವೈದ್ಯರುಗಳನ್ನು ಸಂಪರ್ಕಿಸಿ, ಆಸ್ಪತ್ರೆಯಲ್ಲಿ ನೀಡಿದ ಚಿಕಿತ್ಸೆಯಲ್ಲಿ ಲೋಪವಾಗಿದೆ ಎಂಬ ಪತ್ರವನ್ನೂ ಆಯೋಗಕ್ಕೆ ಸಲ್ಲಿಸಿದರು.

ಪ್ರಕರಣವನ್ನು ದೀರ್ಘವಾಗಿ ವಿಚಾರಣೆಗೆ ಒಳಪಡಿಸಿದ ಆಯೋಗ, ಈ ಪ್ರಕರಣದಲ್ಲಿ ವೈದ್ಯರು ತಮ್ಮ ಶಕ್ತಿಗೆ ಮೀರಿ ಚಿಕಿತ್ಸೆ ನೀಡಿದ್ದಾರೆಂಬ ತೀರ್ಮಾನಕ್ಕೆ ಬಂದಿತು. ಯಾವುದೇ ನಿರ್ಲಕ್ಷ್ಯ ಆಗಿಲ್ಲವೆಂದು ತೀರ್ಮಾನಿಸಿ, ದೂರನ್ನು ತಿರಸ್ಕರಿಸಿತು. ನಂತರ ನವನೀತ್ ಸಂಬಂಧಿಕರು ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದರು.

Image
Supreme Court of India
ಸುಪ್ರೀಂ ಕೋರ್ಟ್

ಪ್ರಕರಣವನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಸಹ, ವೈದ್ಯರ ನಿರ್ಲಕ್ಷ್ಯದ ವಾದವನ್ನು ತಳ್ಳಿಹಾಕಿತು. "ವೈದ್ಯಕೀಯ ನಿರ್ಲಕ್ಷ್ಯಕ್ಕೆ ಎರಡು ಅಂಶಗಳನ್ನು ಸಾಬೀತು ಮಾಡಬೇಕಾಗುತ್ತದೆ. ಮೊದಲನೆಯದು, ವೈದ್ಯನೊಬ್ಬ ತನ್ನಲ್ಲಿ ಯಾವ ಕೌಶಲ ಇದೆ ಎಂದು ಹೇಳಿ ಚಿಕಿತ್ಸೆ ನೀಡುತ್ತಾನೋ ಆ ಕೌಶಲ ಇಲ್ಲದಿದ್ದಲ್ಲಿ ಅದನ್ನು ನಿರ್ಲಕ್ಷ್ಯ ಎನ್ನಬಹುದು. ಎರಡನೆಯದಾಗಿ, ಚಿಕಿತ್ಸೆ ನೀಡುವ ಸಮಯದಲ್ಲಿ ಒಬ್ಬ ಸಾಮಾನ್ಯ ವೈದ್ಯ ಕೈಗೊಳ್ಳಬಹುದಾದ ಎಲ್ಲ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ನಿರ್ಲಕ್ಷ್ಯ ಆರೋಪಕ್ಕೆ ಗುರಿಪಡಿಸಬಹುದು. ಚಿಕಿತ್ಸೆಯ ವಿಷಯದಲ್ಲಿ ವೈದ್ಯರು ಕೈಗೊಳ್ಳುವ ನಿರ್ಧಾರ ಏರುಪೇರು (Error of Judgment) ಆದಲ್ಲಿ ಅದನ್ನು ನಿರ್ಲಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ," ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

"ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಆಗುತ್ತಿದೆ. ವೈದ್ಯರು ಒಂದೇ ಕಾಯಿಲೆಗೆ ಹಲವು ಬಗೆಯ ಚಿಕಿತ್ಸಾ ವಿಧಾನ ಅನುಸರಿಸುವುದಿದೆ. ವೈದ್ಯರ ಬುದ್ಧಿವಂತಿಕೆ, ಕೌಶಲ, ಅನುಭವ, ಲಭ್ಯವಿರುವ ಸೌಲಭ್ಯ, ರೋಗಿಯ ವಯಸ್ಸು, ಸ್ಥಿತಿಗತಿ ಇತ್ಯಾದಿಯನ್ನು ಗಮನದಲ್ಲಿ ಇಟ್ಟುಕೊಂಡು ಯಾವ ಚಿಕಿತ್ಸಾ ವಿಧಾನ ಅನುಸರಿಸಬೇಕು ಎಂದು ನಿರ್ಧರಿಸಲಾಗುತ್ತದೆ. ಇಷ್ಟಾದರೂ ಚಿಕಿತ್ಸೆ ಫಲಕಾರಿ ಆಗದಿದ್ದರೆ, ಅದಕ್ಕೆ ವೈದ್ಯರನ್ನು ನಿರ್ಲಕ್ಷ್ಯಕ್ಕೆ ಗುರಿ ಮಾಡಲು ಸಾಧ್ಯವಿಲ್ಲ," ಎಂದೂ ಹೇಳಿತು.

(ಈ ಅಂಕಣದಲ್ಲಿ ವಿಶ್ಲೇಷಿಸುವ ಪ್ರಕರಣದ ವಿವರ ನೀಡುವಂತೆ ಕೆಲವು ಓದುಗರು ಕೋರಿದ್ದಾರೆ. ಮೇಲ್ಕಂಡ ಪ್ರಕರಣದ ವಿವರ: CIVIL APPEAL NO(s).6507 OF 2009; April 20, 2022)

ಮುಖ್ಯ ಚಿತ್ರ - ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
2 ವೋಟ್