ಕರುಣೆಯ ಕೃಷಿ | ಡೆನಿಸ್ ಬ್ರೂಟಸ್ ಕವಿತೆ 'ಗಲ್ಲಿಗೇರಿಸಿದರು ಅವನನ್ನು - ನಾನೆಂದೆ ತಿರಸ್ಕಾರದಿಂದ'

dennis brutus 4

ಗಲ್ಲಿಗೇರಿಸಿದರು ಅವನನ್ನು, ನಾನೆಂದೆ ತಿರಸ್ಕಾರದಿಂದ

ಹೇಳಲು ಇರದುದರಿಂದ ಬೇರಾವುದೇ ರೀತಿ

ಅವನ ಸಾವಿನ ಕುರಿತು

ಅಥವಾ ಅವನ ಸ್ನೇಹದ ಕುರಿತು

ಅಥವಾ ಕಾಯಕ, ಆಶಯ, ಆಕಾಂಕ್ಷೆ, ಸರಳ ಚಟುವಟಿಕೆಗಳಲ್ಲಿ

ಹೇಗೆ ನಾವು ಒಂದಾಗಿದ್ದೆವು ಎನ್ನುವುದರ ಕುರಿತು.

ಈಗ ಅವನು ಇಲ್ಲವಾಗಿದ್ದಾನೆ:

ನನಗೆ ಕಲ್ಪಿಸಿಕೊಳ್ಳುವ ಧೈರ್ಯವೂ ಇಲ್ಲ

ಆತಂಕ ಅವನನ್ನು ತಳ್ಳಿದ ಸ್ಥಿತಿಯ ಕುರಿತು

ಅವನು ಎದುರಿಸಬೇಕಾಗಿಬಂದ ಯಾತನೆಯ ಕುರಿತು

ನನ್ನ ವ್ಯಥೆಯ ಬಗೆಗೆ ಅವನು ಪಟ್ಟ ಸಂಕಟದ ಕುರಿತು:

ಈಗ, ಅತ್ಯಂತ ಸುಲಭವಾಗಿ ಹೇಳಲು ಸಾಧ್ಯವಾದುದೆಂದರೆ

ಗಲ್ಲಿಗೇರಿಸಿದರು ಅವನನ್ನು, ತಿರಸ್ಕಾರದಿಂದ.

* * * * *

“Every beautiful poem is an act of resistance” - Mahmoud Darwish

Image
dennis brutus 2

ದಕ್ಷಿಣ ಆಫ್ರಿಕಾದಲ್ಲಿ 'ಅಪಾರ್ಥೈಡ್' (ವರ್ಣ-ಆಧಾರಿತ ತಾರತಮ್ಯ) ವಿರೋಧದಲ್ಲಿ ಸಕ್ರಿಯರಾಗಿದ್ದ ಸಾಹಿತಿಗಳಲ್ಲಿ ಎದ್ದುಕಾಣುವ ಹೆಸರುಗಳಲ್ಲಿ ಒಂದು ಡೆನಿಸ್ ಬ್ರೂಟಸ್ (1924-2009) ಅವರದ್ದು. ಅಪಾರ್ಥೈಡ್ ಅನ್ನುವುದು ತಾರತಮ್ಯವೇ ನ್ಯಾಯವ್ಯವಸ್ಥೆಯಾಗಿ ಜಾರಿಯಲ್ಲಿರುವ ಸ್ಥಿತಿ. ದಕ್ಷಿಣ ಆಫ್ರಿಕಾದಲ್ಲಿ ಸಮಾಜದ ಸಕಲ ಅಂಗಗಳಲ್ಲಿಯೂ ವರ್ಣ-ಆಧಾರಿತ ವರ್ಗೀಕರಣ ಜಾರಿಯಲ್ಲಿತ್ತು. ಇದು ಆಡಳಿತ, ನೌಕರಿ, ಶಿಕ್ಷಣ ಮಾತ್ರವಲ್ಲದೆ, ಕ್ರೀಡೆ, ಮನರಂಜನೆ ಇತ್ಯಾದಿ ವಲಯದಲ್ಲಿಯೂ ಅಷ್ಟೇ ತೀವ್ರ ಹಿಡಿತ ಹೊಂದಿತ್ತು.

ಡೆನಿಸ್ ಬ್ರೂಟಸ್ ಕ್ರೀಡಾ ಕ್ಷೇತ್ರದಲ್ಲಿ ಅಪಾರ್ಥೈಡ್ ವಿರೋಧಿಸಿ 1958ರಲ್ಲಿ, 'ದಕ್ಷಿಣ ಆಫ್ರಿಕಾದ ಕ್ರೀಡಾ ಸಂಘ'ವನ್ನು ಸ್ಥಾಪಿಸಿದ್ದರು. ಮುಂದೆ ಅವರು 1962ರಲ್ಲಿ ಆಫ್ರಿಕಾದ ವರ್ಣ ಪದ್ಧತಿ ವಿರೋಧಿ ಒಲಿಂಪಿಕ್ ಸಮೀತಿಯ ಅಧ್ಯಕ್ಷರಾಗಿಯೂ ಆಯ್ಕೆಯಾಗಿದರು. ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಕೇವಲ ಒಂದು ವರ್ಣೀಯರಿಗೆ ಅವಕಾಶ ಕಲ್ಪಿಸುವುದರ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಡೆನಿಸ್ ಬ್ರೂಟಸ್ ಅವರನ್ನು ಜೈಲಿನಲ್ಲಿಡಲಾಗಿತ್ತು. ನೆಲ್ಸನ್ ಮಂಡೇಲಾ ಅವರ ಪಕ್ಕದ ಕೋಣೆಯಲ್ಲಿಯೇ ಬ್ರೂಟಸ್ ಹದಿನಾರು ತಿಂಗಳು ಕಳೆದರು. 1966ರ ನಂತರದಲ್ಲಿ ಮೊದಲು ಇಂಗ್ಲಂಡ್, ನಂತರ ಅಮೆರಿಕಗೆ ವಲಸೆ ಹೋದರು. ರೊನಾಲ್ಡ್ ರೇಗನ್ ಅಮೆರಿಕದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಗಡಿಪಾರು ವಿಚಾರಣೆಗೆ ಒಳಗಾಗಿದ್ದರು. 1990ರಲ್ಲಿ ಅಪಾರ್ಥೈಡ್ ಅಂತ್ಯವಾದ ನಂತರ ಅವರ ಮೇಲಿದ್ದ ನಿಷೇಧ ತೆರವಾದ ತರುವಾಯ ಅವರು ದಕ್ಷಿಣ ಆಫ್ರಿಕಾಕ್ಕೆ ವಾಪಸಾದರು.

ಡೆನಿಸ್ ಬ್ರೂಟಸ್ ಅವರ ಕಾವ್ಯವೂ ಸಹಜವಾಗಿಯೇ ಅಪಾರ್ಥೈಡ್ ವಿರೋಧಿ ನೆಲೆಯದ್ದು. ತಾರತಮ್ಯ ಪದ್ಧತಿಯಡಿಯ ಜೀವನದ ದಾರುಣವನ್ನು ನಿರೂಪಿಸುವ ಅವರ ಕಾವ್ಯ, ವೈಯಕ್ತಿಕ ನೋವಿನ ಹಿಂದಿರುವ ರಾಜಕೀಯ ಸಂದರ್ಭವನ್ನು ಸೂಚಿಸುತ್ತದೆ. ಒಟ್ಟು ಹದಿನಾಲ್ಕು ಕೃತಿಗಳನ್ನು ರಚಿಸಿರುವ ಬ್ರೂಟಸ್, 'ಸೈರೆನ್ಸ್, ನಕಲ್ಸ್, ಬೂಟ್ಸ್' ಎಂಬ ಮೊದಲ ಕಾವ್ಯ ಸಂಕಲನಕ್ಕೆ ನೀಡಲಾದ ಪ್ರಶಸ್ತಿ ನಿರಾಕರಿಸಿದರು. ಯಾಕೆಂದರೆ, ಆ ಪ್ರಶಸ್ತಿಯನ್ನೂ ನೀಡುವಲ್ಲಿಯೂ ವರ್ಣ ಆಧಾರಿತ ವರ್ಗೀಕರಣದ ಹಿನ್ನೆಲೆ ಇತ್ತು.

ಆಫ್ರಿಕಾದ ಆಧುನಿಕ ಕಾವ್ಯದ ಕುರಿತಾಗಿ ಮಾತು ಬಂದಾಗ ಡೆನಿಸ್ ಬ್ರೂಟಸ್ ಹೆಸರು ಬರುವುದು ಅನಿವಾರ್ಯವೇ. ಕವಿ ಮಾತ್ರವಲ್ಲದೆ ಡೆನಿಸ್ ಬ್ರೂಟಸ್ ಓರ್ವ ನಿರ್ಭೀತ ನ್ಯಾಯ ಪಕ್ಷಪಾತಿ, ನಿರಂತರ ಕಾರ್ಯಕರ್ತ, ಉತ್ತಮ ಶಿಕ್ಷಕ ಹಾಗೂ ಅಸೀಮ ಮಾನವತಾವಾದಿಯಾಗಿದ್ದರು.

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ಜಸಿಂತಾ ಕೆರಕೆಟ್ಟಾ ಕವಿತೆ 'ನದಿ, ಗುಡ್ಡ ಹಾಗೂ ಮಾರುಕಟ್ಟೆ'

'ಗಲ್ಲಿಗೇರಿಸಿದರು ಅವನನ್ನು - ನಾನೆಂದೆ ತಿರಸ್ಕಾರದಿಂದ' ಎನ್ನುವ ಈ ಕವನದಲ್ಲಿ ಬ್ರೂಟಸ್, ವೈಯಕ್ತಿಕ ದುರಂತದ ಹಿನ್ನೆಲೆಯಾಗಿ ವ್ಯವಸ್ಥೆಯ ಪಾತ್ರ ಇರುವುದರ ಕುರಿತಾಗಿ ಧ್ಯಾನಿಸುತ್ತಾರೆ. ಒಂದು ಸ್ತರದಲ್ಲಿ, ಹಲವು ಕವಿಗಳು ಎತ್ತಿಕೊಂಡಿರುವ ವಿಷಯವೇ ಈ ಕವನದಲ್ಲಿಯೂ ಇದೆ. ಅದೆಂದರೆ, ಶೋಕವನ್ನು ಕಾವ್ಯವಾಗಿಸುವಲ್ಲಿ ಎದುರಾಗುವ ಸಮಸ್ಯೆ ಅಥವಾ ಶಬ್ದಗಳ, ಅರ್ಥಗಳ ಮಿತಿ. ಹಾಗೆ ನೋಡಿದರೆ, ಈ ಕವನ ಗೆಳೆಯನೊಬ್ಬನ ಸಾವಿನ ಕುರಿತು ಬರೆಯಲು ಸಾಧ್ಯವಾಗದ ಸ್ಥಿತಿಯನ್ನು ಧ್ಯಾನಿಸುತ್ತದೆ. ಕಾವ್ಯದ ಮಿತಿಗಳನ್ನೇ ತನ್ನ ವಿಷಯವಾಗಿಸಿಕೊಂಡ 'ಮೆಟಾ ಕವನ' ಎನ್ನಬಹುದು.

ರೋಹಿತ್ ವೆಮುಲಾ ನಿಧನದ ಸಂದರ್ಭದಲ್ಲಿ ಬಂದ ಕೆಲವು ಕವನಗಳನ್ನು ನೆನಪಿಸುವಂತಿದೆ ಈ ಕವನ. ಸಾವಿನ ಹಿಂದಿರುವ ವ್ಯವಸ್ಥೆಯ ಕೈವಾಡದ ಕುರಿತು ಮತ್ತು ಇಂತಹ ಸಾವುಗಳು ಸಾಧಾರಣವಾಗಿಬಿಡುವ ಕುರಿತು ಕೂಡ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ.

ನಿಮಗೆ ಏನು ಅನ್ನಿಸ್ತು?
2 ವೋಟ್