ಶತಾವರಿ | ಆ ಮಧ್ಯರಾತ್ರಿ ಸಿಕ್ಕ ಕಾಡೊಳಗಿನ ಪಾಳುಮನೆಯಲ್ಲಿ ಅನ್ನಿಸಿತ್ತು - ನಾ ಇಲ್ಲೇ ಸತ್ತುಹೋದರೆ...?

ಹಿಂದಿನ ಸಂಚಿಕೆಯಿಂದ... | ದಾರಿಗಾಗಿ ಕಾಡುಹಂದಿಯಂತೆ ಹಂದಾಡತೊಡಗಿದ್ದ ನನಗೆ, "ಶಕ್ತಿ ಇದ್ದರೆ ಮಾತ್ರ ಇಲ್ಲಿ ನಿನಗೆ ಜಾಗ," ಎನ್ನುವ ಪಾಠವನ್ನು ಕೆನ್ನೆ ತಟ್ಟಿ ಹೇಳಿದಂತಿತ್ತು ಕಾಡು. ಕ್ಯಾಂಪಿಗೆ ಹೋಗುವ ದಾರಿಗಾಗಿ, ನೀರಿಗಾಗಿ ಮಧ್ಯರಾತ್ರಿ ಕನಲತೊಡಗಿದ್ದೆ. ನಿರ್ಜನ ಕತ್ತಲ ದಾರಿಯಲ್ಲಿ ಕಾಡುನಾಯಿಗಳ ಆರ್ತನಾದ, ಸಣ್ಣಗೆ ಜಿನುಗು ಮಳೆ... ಮುಂದೆ ಓದಿ

ಇಡೀ ರಾತ್ರಿ ಇಬ್ಬನಿಗೆ ನೆನೆದ ಮೆತ್ತನೆಯ ನೆಲದ ಮಬ್ಬುಗತ್ತಲೆಯಲ್ಲಿ ಕಾಡಿನೊಳಗಿನ ದಾರಿಯಲ್ಲಿ ಚಡಪಡಿಸುತ್ತಿದ್ದೆವು. ಮಧ್ಯರಾತ್ರಿ ಎಂಬುದು ಕಾಡುಪ್ರಾಣಿಗಳು ಅತಿ ಹೆಚ್ಚು ಚಟುವಟಿಕೆಯಿಂದಿರುವ ಸಮಯ. ಪ್ರಾಣಿಗಳಿಗೆ ನನ್ನ ಮೈಯ ಬೆವರಿನ ವಾಸನೆ ಸಿಗದಂತೆ ಗಾಳಿಗೆ ವಿರುದ್ಧ ದಿಕ್ಕಿನೆಡೆ ಸಾಗಬೇಕಾದ ಕ್ಲಿಷ್ಟಕರ ಸಂದರ್ಭ. ಭಯದ ತುತ್ತತುದಿ ತಲುಪಿದ್ದ ನನಗೆ, ಕಾಡಿನ ಸದ್ಯದ ವಾತಾವರಣವೆಲ್ಲ ದ್ವಂದ್ವದ ಗೂಡಾಗಿ ಅಂದಿನ ರಾತ್ರಿ ನನ್ನ ಪಾಲಿಗೆ ಎದುರು ನಿಂತಿತ್ತು.

Eedina App

ಎದುರಿಗೆ ಬೃಹದಾಕಾರದ ಧೂಪ, ಬೂರುಗ, ನಂದಿ, ಹೊಳೆಮತ್ತಿ ಮರಗಳು ಮುಗಿಲೆತ್ತರಕ್ಕೆ ನಿಂತು, ನನ್ನನ್ನೇ ನುಂಗುವಂತೆ ಭಾಸವಾಗುತ್ತಿತ್ತು. ಆ ಮರಗಳ ಅಗಾಧತೆಗೆ ಮೇಲೆ ಕತ್ತೆತ್ತಲೂ ಭಯವಾಗಿ, ಇಲ್ಲಿಂದ ನಾನು ಕ್ಯಾಂಪ್ ತಲುಪುತ್ತೇನೋ ಇಲ್ಲವೋ ಎನ್ನುವ ಅಳುಕು. ಈಗ ಹೋಗುವುದು ಅಪಾಯದ ಆಹ್ವಾನವೆಂದೂ ಒಳ ಮನಸ್ಸು ತರ್ಕ ಮಾಡುತ್ತಿತ್ತು. ಕಾರಣ - ಕರಡಿಗಳ ಓಡಾಟ. ಅಷ್ಟರಲ್ಲೇ ಏನೋ ನಿರ್ಧರಿಸಿದಂತೆ, ಈ ರಾತ್ರಿ ಇಲ್ಲೇ ಎಲ್ಲಾದರೂ ಸುರಕ್ಷಿತ ಜಾಗದಲ್ಲಿ ಕಳೆದು ಬೆಳಗ್ಗೆ ಹೋದರಾಯಿತು ಎಂದೆಣಿಸಿದ ಮನಸ್ಸು, ತಂಗುವ ಜಾಗಕ್ಕಾಗಿ ಸುತ್ತಮುತ್ತಲಿನ ಸುರಕ್ಷಿತ ಜಾಗಕ್ಕಾಗಿ, ನೀರಿನಿಂದ ಆಚೆ ಬಿದ್ದ ಮೀನಿನಂತೆ ಜೀವ ಉಳಿಸಿಕೊಳ್ಳಲು ಚಡಪಡಿಸುತ್ತಿತ್ತು.

ಸಮಯ ಓಡುತ್ತಿಲ್ಲ... ಸೆಕೆಂಡುಗಳು ಗಂಟೆಗಳಾಗಿ ಜೀವ ಹಿಂಡುತ್ತಲಿತ್ತು. ಎದೆಯಲ್ಲಿ ಭಯದ ಭತ್ತದ ತೌಡು ಕುಟ್ಟಿದ ಡವಗುಟ್ಟುವಿಕೆ. ಕತ್ತಲಲ್ಲಿ ನಾ ಹುಡುಕುತ್ತಿದ್ದ ಕಾಲುದಾರಿ ಸಿಕ್ಕರೂ, ಹೆಚ್ಚೇನೂ ದಾರಿ ಸವೆದಿರಲಿಲ್ಲ. ಕಣ್ಣುಗಳು ಕತ್ತಲೆಗೆ ಹೊಂದಿಕೊಂಡು ಶತಮಾನವೇ ಉರುಳಿದಂತೆ ಅನ್ನಿಸತೊಡಗಿತ್ತು. ಕಾಡು ನಿಧಾನವಾಗಿ ನಿಗೂಢತೆಗೆ ತೆರೆದುಕೊಳ್ಳತೊಡಗಿತ್ತು. ಕತೆ, ಕಾದಂಬರಿಗಳಲ್ಲಿ ಓದುತ್ತಿದ್ದ, ಸಿನಿಮಾಗಳಲ್ಲಿ ನೋಡುತ್ತಿದ್ದ ಇಂಥ ಸನ್ನಿವೇಶಗಳನ್ನು ನಾನು, ನನ್ನ ವೃತ್ತಿಜೀವನದಲ್ಲಿಯೂ ಅಂಥದ್ದೇ ಜೀವನ್ಮರಣದ ಘಟನೆ ನಡೆಯುತ್ತದೆಂದು ಕನಸಿನಲ್ಲೂ ಎಣಿಸಿರಲಿಲ್ಲ.

AV Eye Hospital ad

ಸುರಕ್ಷಿತ ಜಾಗಕ್ಕಾಗಿ ಹಂದಾಡುತ್ತಿದ್ದ ಆ ಕಾಳರಾತ್ರಿಯಲ್ಲಿ ನಾನಿದ್ದ ಜಾಗದಿಂದ ಕಣ್ಣಳತೆಯ ದೂರದಲ್ಲಿ ಪಾಳು ಹೆಂಚಿನ ಮನೆ ಅಸ್ಪಷ್ಟವಾಗಿ ಕಾಣಿಸಿತು. ಮರುಭೂಮಿಯಲ್ಲಿ ಸಿಕ್ಕ ಓಯಸಿಸ್‌ನಂತೆ ಆ ಮನೆ ಕಾಡಲ್ಲಿ ಸಿಕ್ಕಿದ್ದು ಕಂಡು ಹೋದ ಜೀವ ಬಂದಗಾಗಿತ್ತು. ಸುತ್ತಲೂ ಕಣ್ಣಾಡಿಸುತ್ತ, ಆ ಮನೆಯ ಕಡೆ ಇಡುವ ಪ್ರತೀ ಹೆಜ್ಜೆಯನ್ನೂ ಅಳೆದು-ತೂಗಿ ತುಂಬಾ ಸೂಕ್ಷ್ಮತೆಯಿಂದ ಸಾಗುವಾಗ, ಪುಸ್ತಕಗಳಲ್ಲಿ ಓದುತ್ತಿದ್ದ 'ಅರಣ್ಯ ರೋಧನ' ಅನ್ನುವ ಪದಕ್ಕೆ ಆ ಸರಿರಾತ್ರಿಯಲ್ಲಿ ಅರ್ಥ ಸಿಕ್ಕಿತ್ತು. ನಿಧಾನವಾಗಿ ನೆಲದ ಮೇಲೆ ಬಿದ್ದಿದ್ದ ಒಣ ಕಟ್ಟಿಗೆ ತುಂಡುಗಳನ್ನು ತುಳಿಯದೆ, ಶಬ್ದ ಮಾಡದೆ ನಿಶ್ಯಬ್ದವಾಗಿ ಬೆಕ್ಕು ಹೆಜ್ಜೆಗಳನ್ನು ಇಡುವಂತೆ ಹೆಂಚಿನ ಮನೆಯೊಳಗೆ ಕಾಲಿರಿಸಿದೆ. ಇಟ್ಟ ಮರುಕ್ಷಣವೇ ಒಂಥರಾ ರಕ್ಷಣೆಯ ಭಾವ ಆವರಿಸಿತು. ಬದುಕಿದೆಯಾ ಬಡಜೀವವೇ ಎಂಬ ಸಮಾಧಾನದ ಉಸಿರು ಎದೆಯೊಳಗಿಂದ ಆಚೆ ಬಂದಿತ್ತು.

ನಿರುಮ್ಮಳವಾದ ಸಮಾಧಾನದೊಂದಿಗೆ ಇಡೀ ಮನೆಯ ವರಾಂಡ ಸುತ್ತು ಹಾಕಿದೆ. ಜೀವ ಉಳಿಯಿತೆಂದೂ, ಬೆಳಗ್ಗೆಯವರೆಗೂ ನಿಶ್ಚಿಂತೆಯಾಗಿ ಇರಬಹುದೆಂದೂ ಅಂದಾಜಿಸುವಷ್ಟರಲ್ಲೇ; ಪಾಳು ಹೆಂಚಿನ ಮನೆಯ ಸಹಿಸಲಸಾಧ್ಯವಾದ ಮೌನ ಮಾತ್ರ, ನಾ ಬದುಕುಳಿಯುವ ಸಣ್ಣ ಆಸೆಯನ್ನು ಸಹ ತಲೆಕೆಳಗಾಗಿ ಮಾಡಿ ಅಪಹಾಸ್ಯ ಮಾಡಿ ನಗುವಂತಿತ್ತು. ಇಡೀ ಮನೆಯಲ್ಲಿ ಉಳಿದುಕೊಳ್ಳಲು ಸುರಕ್ಷಿತವಾದ ಜಾಗಕ್ಕೆ ಹಲುಬುತ್ತಿದ್ದ ನನಗೆ, ಅಲ್ಲಿಂದ ಹೊರಹೋಗುತ್ತೇನೆ ಅನ್ನುವ ಯಾವ ನಂಬಿಕೆಯೂ ಉಳಿದಿರಲಿಲ್ಲ.

ಈ ಲೇಖನ ಓದಿದ್ದೀರಾ?: ಶತಾವರಿ | ಗೋವಾದ ಮಾಂಡೋವಿ ಮಡಿಲಿನ ದಟ್ಟಕಾಡಿನ ನಡುರಾತ್ರಿ ಮಾರುತಿ ಮಾಡಿದ ಎಡವಟ್ಟು

ನಾ ಇಲ್ಲೇ ಸತ್ತುಹೋದರೆ ಹೇಗೆ... ಎಂಬ ಆಲೋಚನೆ. ಮನೆ, ಊರು, ಸ್ನೇಹಿತರನ್ನು ಭೇಟಿಯಾಗುತ್ತೇನೋ ಇಲ್ಲವೋ ಎನ್ನುವ ಅಳಕು ಪದೇಪದೆ ಕಾಡುತ್ತಿತ್ತು. ಹೆದರಿ ತೊಯ್ದುತೊಪ್ಪೆಯಾಗಿ ಅತ್ತ ನಡೆಯುತ್ತಿದ್ದರೆ, ಇದ್ದಕ್ಕಿದ್ದಂತೆ ನಾ ಕಾಲಿಟ್ಟ ಭಾರಕ್ಕೆ ನೆಲದ ಮೇಲೆ ಬಿದ್ದಿದ್ದ ಒಣ ಕಟ್ಟಿಗೆಯ ತುಂಡುಗಳು ಲಟಲಟ ಮುರಿದು, ಇಡೀ ಕಾಡಿನ ನೀರವ ಮೌನವನ್ನು ಕದಡಿಬಿಟ್ಟಿತ್ತು.

ಮುಂದುವರಿಯಲಿದೆ...
ನಿಮಗೆ ಏನು ಅನ್ನಿಸ್ತು?
4 ವೋಟ್
eedina app