ಹೌದು... ಮಕ್ಕಳಿಗೂ ಮಾನಸಿಕ ಸಮಸ್ಯೆಗಳು ಇರುತ್ತವೆ, ನಿರ್ಲಕ್ಷ್ಯ ಖಂಡಿತ ಒಳ್ಳೆಯದಲ್ಲ

ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು ಸರಣಿ | ಮಕ್ಕಳಲ್ಲಿನ ಮಾನಸಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಅವು ಹದಿಹರೆಯಕ್ಕೂ ಮುಂದುವರಿದು, ಅವರ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರಬಹುದು. ಹಾಗಾಗಿ, ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮಾನಸಿಕ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದನ್ನು ಮಕ್ಕಳ ಪಾಲನೆಯ ಒಂದು ಭಾಗ ಎಂದೇ ಪರಿಗಣಿಸಬೇಕಿದೆ

ಸಣ್ಣ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ಎಂದ ಕೂಡಲೇ ಹಲವು ಜನ ಉಬ್ಬು ಏರಿಸುಸುವುದು ಸಹಜ. ಆದರೆ, ಮಕ್ಕಳನ್ನೂ ಮಾನಸಿಕ ಸಮಸ್ಯೆಗಳು ಕಾಡುತ್ತವೆ. ಮಕ್ಕಳಲ್ಲಿ ಕಂಡುಬರುವ ಮಾನಸಿಕ ಸಮಸ್ಯೆಗಳನ್ನು ನಾವು ಮೂರು ವಿಧವಾಗಿ ವಿಂಗಡಿಸುತ್ತೇವೆ: ಶೈಕ್ಷಣಿಕ ಸಮಸ್ಯೆಗಳು, ಭಾವನಾತ್ಮಕ ಸಮಸ್ಯೆಗಳು ಹಾಗೂ ಮನೋರೋಗಗಳು.

ಕೆಲವೊಮ್ಮೆ ಶೈಕ್ಷಣಿಕ ಕಾರಣಗಳಿಂದ ಭಾವನಾತ್ಮಕ ಸಮಸ್ಯೆಗಳು, ಹಾಗೆಯೇ ಭಾವನಾತ್ಮಕ ಸಮಸ್ಯೆಗಳಿಂದ ಮಾನಸಿಕ ರೋಗಗಳು ಉಂಟಾಗುವ ಸಾಧ್ಯತೆಯೂ ಇದೆ. ಒಂದು ಮಗುವನ್ನು ಮಾನಸಿಕ ತಜ್ಞರ ಹತ್ತಿರ ಕರೆದುಕೊಂಡು ಬಂದಾಗ, ನಾವು ಮಾನಸಿಕ ತಜ್ಞರು ಗಮನಿಸುವ ವಿಷಯವೆಂದರೆ, ಆ ಮಗುವಿನ ತಾಯಿ-ತಂದೆ ಅಥವಾ ಮಗುವಿನ ಶಿಕ್ಷಕರು ಅಥವಾ ಸುತ್ತಮುತ್ತಲು ಇರುವವರು ಯಾರೋ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಎಂಬುದು. ಕೆಲವು ಸಮಸ್ಯೆಗಳಂತೂ ತಾಯಿ-ತಂದೆ ಅಥವಾ ಶಿಕ್ಷಕರು ಮಗುವಿನ ಮೇಲೆ ಸಾಕಷ್ಟು ಒತ್ತಡ ಹೇರುವಾಗ ಉಂಟಾಗುತ್ತವೆ. ಮಕ್ಕಳಲ್ಲಿ ಈ ಸಮಸ್ಯೆಗಳು ಬರಲು ಕಾರಣ ಏನು ಮತ್ತು ಇದಕ್ಕೆ ಚಿಕಿತ್ಸೆ ಏನು ಅನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳಲ್ಲಿ ಅನುವಂಶಿಕ ಮತ್ತು ಮಿದುಳಿನ ನ್ಯೂನತೆಗಳು ಪ್ರಮುಖವಾಗಿವೆ. ಇವುಗಳನ್ನು ನಾವು 'ಜೈವಿಕ ಕಾರಣಗಳು' ಎಂದು ಕರೆಯುತ್ತೇವೆ. ಮಗು ಹುಟ್ಟುವಾಗ ತಾಯಿಯ ಜನನನಾಳದಲ್ಲಿ ಸಿಕ್ಕಿಬಿದ್ದರೆ ಅಥವಾ ಹುಟ್ಟಿದ ಕೂಡಲೇ ತಲೆಗೆ ಜಾಂಡಿಸ್ ಏರುವುದು, ಜ್ವರ ಏರುವುದು ಅಥವಾ ಹುಟ್ಟಿದ ಕೂಡಲೇ ಮಗು ಅಳದಿರುವುದು - ಇವು ಮಿದುಳಿಗೆ ಘಾಸಿ ಉಂಟುಮಾಡಬಹುದು ಅಥವಾ ಮಿದುಳಿನ ಮೇಲ್ಮೈಗೆ ಅಥವಾ ಒಳ ಮೈಗೆ ಗಾಯಗಳಾಗಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದಾಗಿ ಹಲವು ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ನಿರ್ದಿಷ್ಟ ಕಲಿಕಾ ಸಮಸ್ಯೆಗಳು ಅಥವಾ ಅತಿ ಚಟುವಟಿಕೆ ಉಂಟಾಗಬಹುದು.

ಈ ಲೇಖನ ಓದಿದ್ದೀರಾ?: 'ಸ್ವಲ್ಪ ಎಣ್ಣೆ ಹೊಡೆದರೆ ಎಲ್ಲ ಸರಿಯಾಗುತ್ತೆ ಬಿಡು' ಎಂಬ ಅತ್ಯಂತ ಜನಪ್ರಿಯ ಸುಳ್ಳು

ಇನ್ನು, ದೈಹಿಕ ಅಥವಾ ಮಾನಸಿಕ ದೌರ್ಜನ್ಯಗಳನ್ನು ಅನುಭವಿಸಿದ ಮಕ್ಕಳಲ್ಲಿ ಮಾನಸಿಕ ಒತ್ತಡದ ಸಮಸ್ಯೆಗಳು ಜಾಸ್ತಿ ಕಂಡುಬರುತ್ತವೆ. ಮಕ್ಕಳು ಬೆಳೆಯುವ ವಾತಾವರಣ, ಅದರಲ್ಲಿಯೂ ಕುಟುಂಬದ ಹಿನ್ನೆಲೆ - ಅಂದರೆ, ಯಾವ ಕುಟುಂಬದಲ್ಲಿ ಮಾನಸಿಕ ಕಾಯಿಲೆ ಇರುವವರು ಇರುತ್ತಾರೆ ಅಥವಾ ಯಾರ ಮನೆಗಳಲ್ಲಿ ಮದ್ಯ-ಮಾದಕದ್ರವ್ಯ ವ್ಯಸನಿಗಳು ಇರುತ್ತಾರೆ ಹಾಗೂ ಸಣ್ಣ ವಯಸ್ಸಿನಲ್ಲಿ ಅಪ್ಪ-ಅಮ್ಮನಿಂದ ನಿರ್ಲಕ್ಷಕ್ಕೆ ಒಳಗಾಗಿರುತ್ತಾರೋ ಅಂತಹ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚು ಎಂಬುದು ಸಂಶೋಧನೆಗಳ ಸಾರ. ಕಡುಬಡತನದಲ್ಲಿ ಬೆಳೆದುಬರುವ ಮಕ್ಕಳು ಅಥವಾ ಅನನುಕೂಲ ಹಿನ್ನೆಲೆಯಿಂದ ಬೆಳೆಯುವ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚು.

ಯಾವ ಸಮುದಾಯದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳ ಕೊರತೆ ಇರುತ್ತದೆಯೋ, ಯಾವ ಸಮುದಾಯದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆಯ ಬಗ್ಗೆ ಕಳಂಕದ ಧೋರಣೆ ಇರುತ್ತದೆಯೋ ಹಾಗೂ ಯಾವ ಸಮುದಾಯದಲ್ಲಿ ಈ ಕಾಯಿಲೆಗಳ ಕುರಿತು ಮೂಢನಂಬಿಕೆ (ಮಾಟ-ಮಂತ್ರ, ದೇವರ ಶಾಪ, ಭೂತದ ಉಪದ್ರ ಇತ್ಯಾದಿ) ಇರುತ್ತದೆಯೋ ಅಂತಹ ಸಮುದಾಯಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಿಗೆ ಮಾನಸಿಕ ಸಮಸ್ಯೆ ಅಧಿಕ. ಅಲ್ಲದೆ, ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಲಭಿಸದೆ ಈ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುವುದನ್ನು ಕಾಣಬಹುದು.

ಆತಂಕದ ಅಸ್ವಸ್ಥತೆಗಳು, ಖಿನ್ನತೆ, ಹೈಪರ್ ಆಕ್ಟಿವಿಟಿ ಡಿಸಾರ್ಡರ್‌ನಂತಹ (ADHD) ಅನೇಕ ಮನೋವೈದ್ಯಕೀಯ ಕಾಯಿಲೆಗಳು ಬಾಲ್ಯ ಅಥವಾ ಹದಿಹರೆಯದಲ್ಲಿಯೇ ಪ್ರಾರಂಭವಾಗುತ್ತವೆ. ಈ ಅಸ್ವಸ್ಥತೆಗಳು ಮಗುವಿನ ಬೆಳವಣಿಗೆ, ಶಿಕ್ಷಣ ಹಾಗೂ ಬಾಂಧವ್ಯಗಳ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಇದರಿಂದಾಗಿ ಶಾಲೆಯ ಫಲಿತಾಂಶ, ಮಗುವಿನ ಬಾಂಧವ್ಯಗಳು, ಜೀವನ ನಿರ್ವಹಣೆಯ ಮೇಲೆ ಸಾಕಷ್ಟು ಪ್ರಭಾವ ಉಂಟಾಗುತ್ತದೆ.

ಮಕ್ಕಳ ಮಾನಸಿಕ ಸಮಸ್ಯೆಗಳ ಚಿಕಿತ್ಸೆ ಎನ್ನುವಾಗ ನೆನಪಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ, ಮಕ್ಕಳ ತಾಯಿ-ತಂದೆ, ಕೆಲವೊಮ್ಮೆ ಶಿಕ್ಷಕರು, ಅಜ್ಜಿ-ಅಜ್ಜ, ಮತ್ತೆ ಕೆಲವೊಮ್ಮೆ ಮಕ್ಕಳ ಸ್ನೇಹಿತರು ಕೂಡ ಆಪ್ತ ಸಲಹೆಗೆ ಅರ್ಹರಾಗಿರುತ್ತಾರೆ. ಮಕ್ಕಳ ಮನೋಚಿಕಿತ್ಸೆಯಲ್ಲಿ ಪರಿಹಾರ ಬೋಧನೆ, ಆಪ್ತಸಮಾಲೋಚನೆ (ಕೌನ್ಸೆಲಿಂಗ್), ಫ್ಯಾಮಿಲಿ ಕೌನ್ಸೆಲಿಂಗ್ ಇವುಗಳ ಪಾತ್ರ ಬಹಳ ಮುಖ್ಯ. ಮಕ್ಕಳಿಗೆ ಗೀಳು ಮನೋರೋಗದಂತಹ ಸಮಸ್ಯೆಗಳು ಇರುವಾಗ ಕೆಲವೊಮ್ಮೆ ವರ್ತನಾ ಚಿಕಿತ್ಸೆಯ ಏರ್ಪಾಡು ಮಾಡಬೇಕಾಗುತ್ತದೆ.

ಅತಿಕ್ರಮಣಕಾರಿ ವರ್ತನೆಗಳು, ಆತ್ಮಹತ್ಯಾ ಪ್ರಯತ್ನಗಳು, ದಿನಗಟ್ಟಲೆ ಊಟ-ತಿಂಡಿ ಬಿಟ್ಟು ಹಠ ಮಾಡುವುದು ಮೊದಲಾದ ಸಂದರ್ಭದಲ್ಲಿ ಮಕ್ಕಳಿಗೆ ಮಾತ್ರೆ ಚಿಕಿತ್ಸೆ ಕೂಡ ಉಪಯೋಗಕ್ಕೆ ಬರುತ್ತದೆ. ವರ್ತನಾ ಚಿಕಿತ್ಸೆ ಮತ್ತು ಕೌನ್ಸಿಲಿಂಗ್‌ನಿಂದ ಉಪಯೋಗವಾಗದೆ ಇದ್ದಲ್ಲಿ ಮಾತ್ರ ಮಕ್ಕಳ ಮಾನಸಿಕ ಸಮಸ್ಯೆಗಳಿಗೆ ಮಾತ್ರೆ ಚಿಕಿತ್ಸೆ ಉಪಯೋಗಿಸಲಾಗುತ್ತದೆ.

ಸಣ್ಣ ವಯಸ್ಸಿನಲ್ಲಿ ನಿರ್ಲಕ್ಷ್ಯ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳು ಕಂಡುಬರುತ್ತವೆ. ಬೆರಳು ಚೀಪುವುದು, ಹಾಸಿಗೆಯಲ್ಲಿ ಮೂತ್ರ ಮಾಡುವುದು, ನಿದ್ರೆಯಲ್ಲಿ ಎದ್ದು ಕಿರುಚುವುದು ಮುಂತಾದ ಭಾವನಾತ್ಮಕ ಸಮಸ್ಯೆಗಳು ಕಂಡುಬರುತ್ತವೆ. ಇಂತಹ ಘಟನೆಗಳಿಂದ ಮಕ್ಕಳ ಸ್ವಾಭಿಮಾನವು ಘಾಸಿಗೊಂಡಿರುತ್ತದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಸರಿಯಾದ ಚಿಕಿತ್ಸೆ ಸಿಗದಿದ್ದಲ್ಲಿ ಖಿನ್ನತೆ, ಆತಂಕ ಮುಂತಾದ ಅನಾರೋಗ್ಯಗಳು ದೀರ್ಘಕಾಲೀನ ಪರಿಣಾಮ ಉಂಟುಮಾಡಿ, ಪ್ರೌಢಾವಸ್ಥೆಯಲ್ಲೂ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಸಣ್ಣ ವಯಸ್ಸಿನಲ್ಲಿ ಮನಸ್ಸಿನ ಸಮಸ್ಯೆಗಳ ಬಗ್ಗೆ ಶಿಕ್ಷಕರು, ತಾಯಿ-ತಂದೆಯರು ಸರಿಯಾಗಿ ತಿಳಿದಿರಬೇಕು.

ಕೆಲವು ಸಮಸ್ಯೆಗಳನ್ನಂತೂ ಮೊದಲೇ ಗುರುತಿಸಿ ಕೂಡಲೇ ಸೂಕ್ತ ಹೆಜ್ಜೆ ಇಟ್ಟಲ್ಲಿ ಬಹುಬೇಗ ಹತೋಟಿಗೆ ಬರುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಸಣ್ಣ ಮಕ್ಕಳಲ್ಲಿಯೂ ಮಾನಸಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇವೆ ಎನ್ನುವುದನ್ನು ಜನಸಾಮಾನ್ಯರು ತಿಳಿದುಕೊಳ್ಳಬೇಕು. ಅವುಗಳ ಪರಿಹಾರ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅವರಿಗೆ ಅದು ಸಿಗುವ ಹಾಗೆ ಮಾಡಬೇಕು. ಕೆಲವೊಂದು ಸಂದರ್ಭದಲ್ಲಿ ಬೆಳವಣಿಗೆಯ ಸಮಸ್ಯೆಗಳು ಕಾಡುತ್ತವೆ; ಉದಾಹರಣೆಗೆ ಆಟಿಸಂ. ಇಂಥದ್ದನ್ನು ಬಹುಬೇಗ ಗುರುತಿಸಿ, ಸೂಕ್ತ ಚಿಕಿತ್ಸೆ ಕೊಡಿಸುವ ಅವಶ್ಯಕತೆ ಹೆಚ್ಚು. ಒಟ್ಟಿನಲ್ಲಿ ಮಕ್ಕಳ ಮಾನಸಿಕ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದು ಮಕ್ಕಳ ಪಾಲನೆ-ಪೋಷಣೆಯ ಒಂದು ಭಾಗ ಎಂದೇ ಭಾವಿಸಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app