ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು? | 16ರ ವಯಸ್ಸನ್ನು 'ಹುಚ್ಚು ಕೋಡಿ ಮನಸ್ಸು' ಎಂದು ಕರೆಯುವುದೇಕೆ?

ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು? ಸರಣಿ | ಹದಿಹರೆಯದ ವೇಳೆ ದೇಹದಲ್ಲಿ ಉಂಟಾಗುವ ಬದಲಾವಣೆಗಳಲ್ಲಿ ರಸದೂತಗಳ (ಹಾರ್ಮೋನ್ಸ್) ಬದಲಾವಣೆಯೂ ಒಂದು. ಈ ವಯಸ್ಸಿನಲ್ಲಿ ದೈಹಿಕ, ಲೈಂಗಿಕ ಬದಲಾವಣೆಗಳು ಇತರೆ ಸಮವಯಸ್ಕರ ಜೊತೆಜೊತೆಗೇ ಆಗದೆ ಬಹುಬೇಗನೆ ಉಂಟಾದಲ್ಲಿ ಒಂದು ರೀತಿಯ ಗೊಂದಲ, ಕಿರಿಕಿರಿ ಸಹಜ

ನಿಮಗೆಲ್ಲ ಆಶ್ಚರ್ಯ ಆಗಬಹುದು; ಖಿನ್ನತೆ, ಆತಂಕ, ಮಾದಕ ದ್ರವ್ಯ ವ್ಯಸನ, ತಿನ್ನುವಿಕೆಯ ಅಸ್ವಸ್ಥತೆಗಳು (Eating Disorders) ಮುಂತಾದವು ಪ್ರಾರಂಭ ಆಗುವುದೇ ಹದಿಹರೆಯದಲ್ಲಿ. ಹದಿಹರೆಯದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಅರ್ಥ ಮಾಡಿಕೊಂಡರೆ, 'ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು' ಎಂಬ ಕವಿವಾಣಿ ಅರ್ಥಪೂರ್ಣ ಅನ್ನಿಸುತ್ತದೆ. ಹದಿಹರೆಯದಲ್ಲಿ ಮಿದುಳಿನ ಬೇರೆ-ಬೇರೆ ಭಾಗಗಳಲ್ಲಿ ಬಹಳಷ್ಟು ನರಕೋಶಗಳು ಬೆಳೆಯಲು ಆರಂಭಿಸುತ್ತವೆ. 14ರಿಂದ 24 ವಯಸ್ಸಿನವರೆಗೆ ಅತಿ ವೇಗದಲ್ಲಿ ಬೆಳೆಯುವ ನರಕೋಶಗಳು, ಹದಿಹರೆಯದಲ್ಲಿ ಉಂಟಾಗುವ ಸಾಮಾಜಿಕ ಅನುಭವಗಳಂತೆ ಬದಲಾಗುತ್ತ ಬರುತ್ತವೆ. ಹಾಗಾಗಿಯೇ, ಹದಿಹರೆಯ ನಮ್ಮೆಲ್ಲರ ಜೀವನದಲ್ಲಿ ಬಹಳ ಪ್ರಮುಖ ಕಾಲಘಟ್ಟ.

Eedina App

ಹದಿಹರೆಯದಲ್ಲಿ ಮಿತ್ರರ ಪ್ರೇರಣೆ, ಮಿತ್ರರ ಪ್ರೀತಿಗಾಗಿ ಹಾತೊರೆಯುವುದು ಹೆಚ್ಚಾಗುತ್ತದೆ. ಮಿತ್ರರನ್ನು ಓಲೈಸಲು ಹಲವಾರು ಯುವಕರು ಪ್ರಥಮ ಬಾರಿಗೆ ಮದ್ಯ, ಸಿಗರೇಟ್ ಸೇವನೆ, ಗಾಂಜಾ ಸೇವನೆ ಮಾಡುತ್ತಾರೆ. ಮಿತ್ರರನ್ನು ಓಲೈಸಿಕೊಳ್ಳಲು ಕಾನೂನು ಉಲ್ಲಂಘನೆ ಮಾಡುವುದೂ ಇದೆ. ಹಲವಾರು ಯುವಕರು ಇಷ್ಟವಿಲ್ಲದೆ ಇದ್ದರೂ ಮೊದಲ ಬಾರಿಗೆ ಮದ್ಯ, ಮಾದಕ ದ್ರವ್ಯ ಸೇವನೆ ಮಾಡುವುದು, ಲೈಂಗಿಕ ಕ್ರಿಯೆಗಳಿಗೆ ಸಹಕರಿಸುವುದು ಕಂಡುಬರುತ್ತದೆ. ಮಿತ್ರರು ಒತ್ತಡ ಹೇರುವಾಗ, "ಇಲ್ಲ..." ಅನ್ನಲು ಬಾರದಿರುವುದೇ ಮುಂದೆ ಸಮಸ್ಯೆಗಳಿಗೆ ಕಾರಣವಾಗಬಹುದು.

ಈ ಲೇಖನ ಓದಿದ್ದೀರಾ?: ಮಕ್ಕಳು ಮನೆಯಿಂದ ದೂರಾದಾಗ ತಾಯ್ತಂದೆಯರು ಅನುಭವಿಸುವ ಮಾನಸಿಕ ಸಮಸ್ಯೆಗಳೇನು, ಪರಿಹಾರವೇನು?

AV Eye Hospital ad

ಹಾಗೆಯೇ, ಮಿತ್ರರ ಗುಂಪಿನಿಂದ ಎಲ್ಲಿ ಹೊರಗೆ ಹೋಗಬೇಕಾಗಬಹುದೋ ಎಂದು ಹೆದರಿ ಹಲವು ಯುವಕ-ಯುವತಿಯರು ಬೇರೆಯವರು ಮಾಡಿದ ಕೆಲಸಗಳನ್ನು ಅನುಕರಿಸುತ್ತ ಇರುತ್ತಾರೆ. ಒಟ್ಟಿನಲ್ಲಿ, ಮಿತ್ರರ ಒತ್ತಡ ಹದಿಹರೆಯದ ಬೆಳವಣಿಗೆಯಲ್ಲಿ ಒಂದು ಪ್ರಮುಖ ಅಂಶವೆಂದರೆ ತಪ್ಪಾಗಲಾರದು.

ಹದಿಹರೆಯ ಹಿರಿಯರ ಮೇಲೆ ಪ್ರತಿರೋಧದ ಭಾವನೆಗಳನ್ನು ವ್ಯಕ್ತಪಡಿಸುವ ಕಾಲ ಕೂಡ. "ಮನೆಯವರಿಗೆ, ಗುರು-ಹಿರಿಯರಿಗೆ ಏನೂ ಗೊತ್ತಾಗೋಲ್ಲ. ಅವರೆಲ್ಲ ಹಳೆಯ ಜಮಾನದವರು, ಬರೀ ದುಡ್ಡು-ದುಡ್ಡು ಅಂತ ಸಾಯ್ತಾರೆ, ಲೈಫ್ ಎಂಜಾಯ್ ಮಾಡಕ್ಕೆ ಬರೋಲ್ಲ..." ಇವು - ಹದಿಹರೆಯದವರ ಬಾಯಿಯಿಂದ ಕೇಳಿಬರುವ ಸರ್ವೇಸಾಮಾನ್ಯ ಮಾತುಗಳು. ಆದರೂ, ಆಶ್ಚರ್ಯ ಅಂದರೆ, ಹದಿಹರೆಯದವರು ಖ್ಯಾತನಾಮರನ್ನು ನೋಡಿ, ಅವರಂತೆ ಆಗಲು ಇಷ್ಟಪಡುವುದು ಕೂಡ ಇದೇ ವಯಸ್ಸಿನಲ್ಲಿ. ಹಾಗೆಯೇ, ಕೆಲವು ಗುರು-ಹಿರಿಯರನ್ನು ನೋಡಿ ಕೂಡ ತಾನೂ ಅವರಂತೆ ಆಗಬೇಕು ಅನ್ನುವ ಹಂಬಲದ ಕಾಲ.

ಹದಿಹರೆಯದಲ್ಲಿ ಕುತೂಹಲ, ಪ್ರಯೋಗ ಮನೋಭಾವ ಜಾಸ್ತಿ. ಅದರಲ್ಲೂ, ಅಪ್ಪ, ಅಮ್ಮ, ಗುರು, ಹಿರಿಯರು "ಬೇಡ..." ಅನ್ನುವ ವಿಷಯಗಳ ಬಗ್ಗೆ ಒಲವು ಜಾಸ್ತಿ. ಇಂದು ಅಗಾಧವಾಗಿ ಬೆಳೆಯುತ್ತಿರುವ ನಡವಳಿಕೆಯ ವ್ಯಸನಗಳಾದ ಅತಿಯಾದ ಮೊಬೈಲ್ ಬಳಕೆ, ಅನಿಯಂತ್ರಿತ ಸಾಮಾಜಿಕ ಜಾಲತಾಣಗಳ ಉಪಯೋಗ, ಲೈಂಗಿಕ ವಿಷಯಗಳ ಬಗ್ಗೆ ಅತಿಯಾದ ಆಸಕ್ತಿ ಮತ್ತು ಅದನ್ನು ವೀಕ್ಷಿಸುವ ವ್ಯಸನ, ಇಂಟರ್ನೆಟ್‌ನಲ್ಲಿ ಜೂಜು, ಕ್ರಿಕೆಟ್ ಬೆಟ್ಟಿಂಗ್ ಮುಂತಾದವುಗಳಿಗೆ ಪ್ರಮುಖ ಕಾರಣವೇ ಈ ಕುತೂಹಲ ಮತ್ತು ಪ್ರಯೋಗ ಮನೋಭಾವ.

ಹದಿಹರೆಯದಲ್ಲಿ ದೇಹದಲ್ಲಿ ಉಂಟಾಗುವ ಬದಲಾವಣೆಗಳಲ್ಲಿ ರಸದೂತಗಳ (ಹಾರ್ಮೋನ್ಸ್) ಬದಲಾವಣೆಯೂ ಒಂದು. ಇದರ ಪರಿಣಾಮವೆಂದರೆ, ಅನ್ಯ ಲಿಂಗ ಆಕರ್ಷಣೆ. ಈ ವಯಸ್ಸಿನಲ್ಲಿ ದೈಹಿಕ ಮತ್ತು ಲೈಂಗಿಕ ಬದಲಾವಣೆಗಳು ಇತರೆ ಸಮವಯಸ್ಕರ ಜೊತೆಜೊತೆಗೆ ಆಗದೆ, ಬಹುಬೇಗನೆ ಉಂಟಾದಲ್ಲಿ ಮನಸ್ಸಿಗೆ ಒಂದು ರೀತಿಯ ಗೊಂದಲ, ಕಿರಿಕಿರಿ. ಹಾಗೆಯೇ, ಈ ವಯಸ್ಸಿನಲ್ಲಿ ಉಂಟಾಗುವ ಲೈಂಗಿಕ ಅನುಭವಗಳು, ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳು ಮನಸ್ಸಿನ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡುತ್ತವೆ. ಹಲವು ಅನುಭವಗಳು ಮತ್ತು ಅಭ್ಯಾಸಗಳು ದೀರ್ಘಕಾಲೀನ ಪರಿಣಾಮ ಮತ್ತು ಧೋರಣೆಗಳನ್ನು ರೂಪಿಸಲು ಕಾರಣವಾಗುತ್ತವೆ. ಈ ವಯಸ್ಸಿನಲ್ಲಿ ಅತಿಯಾದ ಮದ್ಯಪಾನದ ಬಳಕೆ, ಗಾಂಜಾ ಬಳಕೆ ಮಿದುಳಿನ ಮೇಲೆ ಪರಿಣಾಮ ಬೀರಿ ಬದಲಾವಣೆಗಳನ್ನು ತರುತ್ತವೆ.

ಈ ಲೇಖನ ಓದಿದ್ದೀರಾ?: ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು? | ಅನಾಟಮಿ ವಿದ್ಯಾರ್ಥಿನಿಯೊಬ್ಬರ ಆಪ್ತಸಮಾಲೋಚನೆ

ಆನುವಂಶಿಕ ದುರ್ಬಲತೆ ಮತ್ತು ಜೀವನದ ಅನುಭವಗಳ ಕಾರಣದಿಂದಾಗಿ ಲೈಂಗಿಕ ದೃಷ್ಟಿಕೋನವು ಬೆಳೆಯುತ್ತದೆ. ಹಲವು ಯುವಕ-ಯುವತಿಯರು ಈ ವಯಸ್ಸಿನಲ್ಲಿ ಲೈಂಗಿಕ ಅಲ್ಪಸಂಖ್ಯಾತ ಧೋರಣೆಗಳನ್ನು ಅಂದರೆ, ಸಲಿಂಗಕಾಮ, ಲಿಂಗ ಗುರುತಿಸುವಿಕೆಯ ಅಸ್ವಸ್ಥತೆ (ಹುಟ್ಟಿನಿಂದ ನಿಯೋಜಿಸಲಾದ ಲಿಂಗ ಮತ್ತು ನೀವು ಗುರುತಿಸುವ ಲಿಂಗಗಳ ನಡುವಿನ ವ್ಯತ್ಯಾಸದಿಂದಾಗಿ ನೀವು ಸಾಕಷ್ಟು ತೊಂದರೆಗಳನ್ನು ಅನುಭವಿಸಿದಾಗ, ನಿಮಗೆ ಲಿಂಗ ಗುರುತಿನ ಅಸ್ವಸ್ಥತೆ ಇದೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ) ಬೆಳೆಸಿಕೊಳ್ಳುವುದನ್ನು ನೋಡುತ್ತೇವೆ.

ಜೀವನ ನಿರ್ವಹಣೆಯ ಸಂದರ್ಭದಲ್ಲಿ ಉಂಟಾಗುವ ಅನುಭವಗಳು ಮಿದುಳಿನ ಬೆಳವಣಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರುವುದರಿಂದ, ಈ ಹದಿಹರೆಯದ ಮಕ್ಕಳ ಜೀವನಾನುಭವಗಳು ಬಹಳ ಮುಖ್ಯ.

ಪೋಷಕರು, ಶಿಕ್ಷಕರು ಈ ವಯಸ್ಸಿನ ಮಕ್ಕಳೊಂದಿಗೆ ವ್ಯವಹರಿಸುವಾಗ ಗಮನಿಸಬೇಕಾದ ವಿಷಯಗಳೆಂದರೆ, ಅವರನ್ನು ಬೇರೆ ಮಕ್ಕಳೊಂದಿಗೆ ತುಲನೆ ಮಾಡುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಅವರಲ್ಲಿ ಏನಾದರೂ ತಪ್ಪುಗಳನ್ನು ಕಂಡಲ್ಲಿ, ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡದೆ, ಅವರನ್ನು ಮಾತ್ರ ಹತ್ತಿರ ಕರೆದು ಮಾತನಾಡುವುದು ಒಳ್ಳೆಯದು. 'Praise Publicly, Scold Privately' ಎಂಬ ಮಾತು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಈ ವಯಸ್ಸಿನ ಮಕ್ಕಳು ಗುರು-ಹಿರಿಯರ ಒತ್ತಡದಿಂದಲೋ ಅಥವಾ ತಾವೇ ತಮ್ಮ ಮೇಲೆ ಹೇರಿಕೊಂಡ ಒತ್ತಡದಿಂದಲೋ ತೀವ್ರ ಪೈಪೋಟಿ ಮಾಡುತ್ತಿರುವುದು ಹೆಚ್ಚುತ್ತಲೇ ಇದೆ. ನೀಟ್, ಐಐಟಿ, ಜೆಇಇ, ಸಿಇಟಿ ಪರೀಕ್ಷೆಗಳು ಈ ಒತ್ತಡದ ವಾತಾವರಣವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಈ ಅತೀವ ಪೈಪೋಟಿ ಮತ್ತು ಒತ್ತಡಗಳು ಹದಿಹರೆಯದ ಮಕ್ಕಳಲ್ಲಿ ಆತ್ಮಹತ್ಯಾ ಯೋಚನೆಗಳನ್ನು ಉಂಟುಮಾಡುವುದನ್ನೂ, ಇದೇ ಕಾರಣಕ್ಕೆ ಹಲವು ಯುವಜನ ಆತ್ಮಹತ್ಯೆ ಮಾಡಿಕೊಳ್ಳುವುದನ್ನೂ ನೋಡುತ್ತಿದ್ದೇವೆ.

ಈ ವಯಸ್ಸಿನಲ್ಲಿನ ಕೀಳರಿಮೆ ಅವರ ಭವಿಷ್ಯದಲ್ಲಿ ಸಾಮಾಜಿಕ ಆತಂಕ, ಖಿನ್ನತೆ, ಆತಂಕ ಮನೋಬೇನೆ, ಪರೀಕ್ಷಾ ಆತಂಕ ಮುಂತಾದ ಸಮಸ್ಯೆಗಳಿಗೂ ಕಾರಣ ಆಗಬಹುದು. ಹಾಗಾಗಿ, ಹದಿಹರೆಯ ಎಂಬ ಈ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಈ ಮಕ್ಕಳ ಮಾನಸಿಕ ಗೊಂದಲಗಳನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app