ಗುಂಪಿನಲ್ಲಿ ವ್ಯಾಯಾಮ ಮಾಡುವುದು ಖಿನ್ನತೆಗೆ ಒಂದು ಬಗೆಯ ಚಿಕಿತ್ಸೆ - ಹೇಗೆ?

'ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು?' ಸರಣಿ | ಕರ್ನಾಟಕ ಶಿಕ್ಷಣ ಇಲಾಖೆಯು ಇತ್ತೀಚೆಗೆ, 'ಪ್ರಾಥಮಿಕ ಶಾಲೆಗಳಲ್ಲಿ ಪ್ರತೀ ದಿನ ಹತ್ತು ನಿಮಿಷ ಧ್ಯಾನ ಕಡ್ಡಾಯ' ಎಂಬ ಸುತ್ತೋಲೆ ಹೊರಡಿಸಿದೆ. ಮಕ್ಕಳ ಭಾವನಾತ್ಮಕ ಸಮಸ್ಯೆಗಳ ಬಗ್ಗೆ ಸರ್ಕಾರ ಯೋಚಿಸುತ್ತಿರುವುದು ಖುಷಿಯ ವಿಷಯ. ಆದರೆ, ಸರ್ಕಾರ ಕಂಡುಕೊಂಡ ದಾರಿ ಮಾತ್ರ ಪಕ್ಕಾ ಅವೈಜ್ಞಾನಿಕ

ಶೀರ್ಷಿಕೆ ಓದಿ ಕೆಲವರಿಗೆ ಆಶ್ಚರ್ಯ ಆಗಿರಬೇಕಲ್ಲವೇ? ಆದರೆ, ವಿಷಯ ನಿಜ. ಇಂಗ್ಲೆಂಡ್ ದೇಶದಲ್ಲಿ ಮನೋವೈದ್ಯಕೀಯ ಚಿಕಿತ್ಸಕರಿಗೆ ಅಲ್ಲಿಯ National Health Service (NHS) ಅಂದರೆ, ಜನರ ಆರೋಗ್ಯ ಪಾಲನೆ ಮಾಡುವ ಸಂಸ್ಥೆ ಪ್ರಕಟಿಸುವ 'Nice Guidelines'ನಲ್ಲಿ ಈ ಕುರಿತ ಸಲಹೆ ಇದೆ. ವ್ಯಾಯಾಮ, ಅದರಲ್ಲೂ ಗುಂಪಿನಲ್ಲಿ ವ್ಯಾಯಾಮ ಮಾಡುವುದನ್ನು ಸೌಮ್ಯ ಮಟ್ಟದ ಮತ್ತು ಮಧ್ಯಮ ಮಟ್ಟದ ಖಿನ್ನತೆ ರೋಗಕ್ಕೆ ಚಿಕಿತ್ಸಾ ಕ್ರಮವನ್ನಾಗಿ ವೈದ್ಯರು ಉಪಯೋಗಿಸಬೇಕು ಎಂಬುದೇ ಆ ಸಲಹೆ. ಹಾಗೆಯೇ, ಸೌಮ್ಯ ಮಟ್ಟದ ಖಿನ್ನತೆಯಲ್ಲಿ ವೈದ್ಯರು ಆದಷ್ಟು ಮಾತ್ರೆ ಚಿಕಿತ್ಸೆ ಉಪಯೋಗಿಸದೆ ಮಾತಿನ ಚಿಕಿತ್ಸೆ ಅಂದರೆ, ಕಾಗ್ನಿಟಿವ್ ಬೆಹವಿಯರ್ ಥೆರಪಿ, ಸಾವಧಾನತೆ ಧ್ಯಾನ ಮತ್ತು ಗುಂಪು ವ್ಯಾಯಾಮ ಇವುಗಳನ್ನು ರೋಗಿಗಳಿಗೆ ಸಲಹೆಯಾಗಿ ನೀಡಬೇಕು ಎಂಬ ಸುತ್ತೋಲೆಯನ್ನೂ NHS ಹೊರಡಿಸಿದೆ.

Eedina App

ನಮ್ಮ ದೇಶದ ಮಟ್ಟಿಗೆ ಈಗಿನ ಪರಿಸ್ಥಿತಿಯಲ್ಲಿ ಹೆಚ್ಚುತ್ತಲೇ ಇರುವ ಮಾನಸಿಕ ಸಮಸ್ಯೆಗಳು ಮತ್ತು ಅದಕ್ಕೆಲ್ಲ ಚಿಕಿತ್ಸೆ ಕೊಡಲು ಬೇಕಾದ ಮಾನವ ಸಂಪನ್ಮೂಲದ ಕೊರತೆ ಗಮನಿಸಿದರೆ, NHSನ ಇಂತಹ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನಾವು ಸರಿಯಾಗಿ ಓದಿ, ನಮ್ಮ ಈಗಿನ ಸನ್ನಿವೇಶಕ್ಕೆ ತಕ್ಕಂತೆ ಉಪಯೋಗಿಸಬಹುದು ಅನ್ನಿಸುತ್ತದೆ.

ಖಿನ್ನತೆಯನ್ನು ಕಡಿಮೆ ಮಾಡಲು ವ್ಯಾಯಾಮ ಹೇಗೆ ಸಹಾಯ ಮಾಡುತ್ತದೆ?

AV Eye Hospital ad

ಜೈವಿಕವಾಗಿ, ವ್ಯಾಯಾಮವು ಮೆದುಳಿನಲ್ಲಿ ಕೆಲವು ರಾಸಾಯನಿಕಗಳನ್ನು ಹೆಚ್ಚಿಸಬಹುದು. 'ಎಂದೋರ್ಫಿನ್ಸ್' ಎಂಬ, ಮನಸ್ಸಿಗೆ ಖುಷಿ ನೀಡುವ ರಾಸಾಯನಿಕವು ಬಿರುಸು ನಡಿಗೆ, ಓಟ ಹಾಗೂ ಸೈಕ್ಲಿಂಗ್ ಮಾಡುವಾಗ ಹೆಚ್ಚುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಹಾಗೆಯೇ, ವ್ಯಾಯಾಮದಿಂದ ಮಿದುಳಿನಲ್ಲಿ ಹೊಸ ಕೋಶಗಳ ಬೆಳವಣಿಗೆಯಾಗುತ್ತದೆ ಮತ್ತು ಮಿದುಳಿನ ಕೋಶಗಳ ನಡುವೆ ಹೊಸ ಸಂಪರ್ಕಗಳನ್ನು ರೂಪಿಸಲು ಸಹಕಾರಿ ಎಂಬುದು ಇತ್ತೀಚಿನ ಸಂಶೋಧನೆಗಳಲ್ಲಿ ತಿಳಿದುಬಂದ ವಿಷಯ. ಇದು ಮಿದುಳಿನ ಮೇಲೆ ನೇರ ಪ್ರಭಾವದ ಮಾತಾಯಿತು. ಇನ್ನು, ವ್ಯಾಯಾಮದೊಂದಿಗೆ ಸಂಭವಿಸುವ ದೈಹಿಕ ಬದಲಾವಣೆಗಳಾದ ಹೃದಯದ ಫಿಟ್ನೆಸ್ ಮತ್ತು ಸುಧಾರಿತ ಚಯಾಪಚಯ ಆರೋಗ್ಯವು ಮಿದುಳಿನ ಆರೋಗ್ಯವನ್ನು ಪರೋಕ್ಷವಾಗಿ ಉತ್ತೇಜಿಸುತ್ತದೆ.

ವ್ಯಾಯಾಮವು ಹಲವಾರು ಭೌತಿಕ ಪ್ರಯೋಜನಗಳನ್ನೂ ಹೊಂದಿದೆ. ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿದಿರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಜೊತೆಗೆ, ಆತಂಕವನ್ನು ಕಡಿಮೆ ಮಾಡುವ ಮೂಲಕ ಒಟ್ಟಾರೆಯಾಗಿ ಮನಸ್ಸು ಉತ್ತಮವಾಗುವಂತೆ ಮಾಡುತ್ತದೆ. ಹಾಗೆಯೇ, ಮಾನಸಿಕವಾಗಿ ವ್ಯಾಯಾಮವು ಸ್ವಾಭಿಮಾನ ಮತ್ತು ಸ್ವಯಂ ಪರಿಣಾಮಕಾರಿತ್ವವನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ; ಏಕೆಂದರೆ, ಸಣ್ಣ ಗುರಿಗಳು ನಿರ್ದಿಷ್ಟ ಮೈಲು ನಡೆಯುವುದು ಅಥವಾ ನಿರ್ದಿಷ್ಟ ದೂರವನ್ನು ಓಡುವುದು ಅಥವಾ ನಿರ್ದಿಷ್ಟ ಸಮಯದವರೆಗೆ ಓಡುವುದು ಇಂತಹ ವಿಷಯಗಳು ನೆರೆವೇರಿದಾಗ ಮನಸ್ಸಿಗೆ ಏನೋ ಸಾಧನೆ ಮಾಡಿದ್ದೇವೆ ಅನ್ನಿಸಲು ಪ್ರಾರಂಭವಾಗುತ್ತದೆ. ಸಾಮಾಜಿಕವಾಗಿ, ವ್ಯಾಯಾಮ - ವಿಶೇಷವಾಗಿ ಗುಂಪಿನಲ್ಲಿ ಅಥವಾ ಸ್ನೇಹಿತ ಪಾಲುದಾರರೊಂದಿಗೆ ಮಾಡಿದಾಗ ಇತರರೊಂದಿಗೆ ನಿಮ್ಮ ಸಾಮಾಜಿಕ ಸಂಬಂಧವನ್ನು ಉತ್ತಮಗೊಳಿಸುತ್ತದೆ ಮತ್ತು ಖಿನ್ನತೆಯಲ್ಲಿ ರೋಗಿಗಳು ಅನುಭವಿಸುವ ಒಂಟಿತನವನ್ನು ಮರೆಯುವಂತೆ ಮಾಡುತ್ತದೆ.

ಎಷ್ಟು ವ್ಯಾಯಾಮ ಮಾಡಬೇಕು?

ಮೇಯೊ ಕ್ಲಿನಿಕ್ ಪ್ರಕಾರ, ವಾರದಲ್ಲಿ ಮೂರರಿಂದ ಐದು ದಿನಗಳವರೆಗೆ ಪ್ರತೀದಿನ ಕನಿಷ್ಠ 30 ನಿಮಿಷಗಳ ವ್ಯಾಯಾಮದಲ್ಲಿ ತೊಡಗುವುದರಿಂದ ಖಿನ್ನತೆಯ ಲಕ್ಷಣಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಯಾವ ವ್ಯಾಯಾಮಗಳನ್ನು ಮಾಡಬೇಕು?

ಏರೋಬಿಕ್ ವ್ಯಾಯಾಮಗಳು, ತೂಕ ಎತ್ತುವ ವ್ಯಾಯಾಮಗಳು, ಫ್ಲೆಕ್ಸಿಬಿಲಿಟಿ ಹೆಚ್ಚಿಸುವ ವ್ಯಾಯಾಮಗಳು ಖಿನ್ನತೆ ನಿವಾರಣೆಗೆ ಸಹಾಯಕ.

ನಾನು ಈಗ ಈ ಲೇಖನವನ್ನು ಬರೆಯಲು ಮುಖ್ಯ ಕಾರಣ - ಕರ್ನಾಟಕ ಶಿಕ್ಷಣ ಇಲಾಖೆ ಇತ್ತೀಚೆಗೆ ನೀಡಿದ, 'ಪ್ರಾಥಮಿಕ ಶಾಲೆಗಳಲ್ಲಿ ಪ್ರತೀದಿನ ಹತ್ತು ನಿಮಿಷ ಧ್ಯಾನ ಕಡ್ಡಾಯ' ಎಂಬ ಸುತ್ತೋಲೆ. ಮಕ್ಕಳಲ್ಲಿರುವ ಭಾವನಾತ್ಮಕ ಸಮಸ್ಯೆಗಳ ಬಗ್ಗೆ ಸರಕಾರ ಯೋಚಿಸುತ್ತಿರುವುದು ಖುಷಿಯ ವಿಷಯ. ಆದರೆ, ಸರ್ಕಾರ ಕಂಡುಕೊಂಡ ದಾರಿ ಮಾತ್ರ ಅವೈಜ್ಞಾನಿಕ. ಸರ್ಕಾರ ನಿಜವಾಗಿ ಮಾಡಬೇಕಾದ ಕೆಲಸವೆಂದರೆ, ಈ ಹಿಂದೆ ಬರೆದ ಹಾಗೆ ಶಾಲೆಯಲ್ಲಿ ಮಾನಸಿಕ ಅರೋಗ್ಯದ ಬಗ್ಗೆ ಆಪ್ತಸಲಹೆ ನೀಡುವ ಆಪ್ತಸಲಹಾಕಾರರ ನೇಮಕ. ಜೊತೆಗೆ, ಮಕ್ಕಳ ಯೋಗಕ್ಷೇಮ ಹೆಚ್ಚಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಚ್ಛಾಶಕ್ತಿ.

ಹಾಗೆಯೇ, ಮಕ್ಕಳಿಗೆ ಕಡ್ಡಾಯವಾಗಿ ಪಠ್ಯೇತರ ಚಟುವಟಿಕೆಗಳು ಅಂದರೆ, ಆಟ, ಓಟ, ಸಂಗೀತ, ನಾಟಕ ಮುಂತಾದವುಗಳು ಪ್ರತೀ ಶಾಲೆಯಲ್ಲಿ ಕಡ್ಡಾಯವಾಗಿ ನಡೆಯಬೇಕು. ಈ ಹಿಂದಿನಂತೆ ದಸರಾ ರಜೆ, ಸೆಖೆ ಕಾಲದಲ್ಲಿ ರಜೆ ಮುಂತಾದವುಗಳು ಕಡ್ಡಾಯವಾಗಿ ಮಕ್ಕಳಿಗೆ ಸಿಗುವಂತಾಗಬೇಕು. ರಜಾದಿನಗಳಲ್ಲಿ ತರಗತಿಗಳು ಮತ್ತು ನೀಟ್, ಜೆಇಇ, ಸಿಇಟಿ ಅಥವಾ ಸಿಎ  ತರಬೇತಿಗಳು ನಿಲ್ಲಬೇಕು. ಶಾಲೆ ಮತ್ತು ಕಾಲೇಜುಗಳು 18 ವರ್ಷ ವಯಸ್ಸಿನವರೆಗೆ ಪ್ರತೀ ಶಾಲೆಯಲ್ಲಿ ದೈಹಿಕ ತರಬೇತಿ ಅವಧಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕು. ದೈಹಿಕ ಶಿಕ್ಷಣಕ್ಕಾಗಿ ವಾರಕ್ಕೆ ಕನಿಷ್ಠ ಮೂರು ಗಂಟೆಗಳ ಕಾಲ ಮೀಸಲಿಡಬೇಕು. ಇದು ಖಂಡಿತವಾಗಿಯೂ ಮಕ್ಕಳಲ್ಲಿ ಒತ್ತಡ ಮತ್ತು ಏಕಾಗ್ರತೆಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ.

ಹಾಗೆಯೇ, ತಾಯಿ-ತಂದೆಯರು ಕೂಡ ಮಕ್ಕಳ ಬೆಳವಣಿಗೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಸತ್ಯವೇನೆಂದರೆ, ಮಕ್ಕಳ ಏಳಿಗೆಗೆ ಪಾಠ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು - ಅವರ ಮಾನಸಿಕ ಯೋಗಕ್ಷೇಮಕ್ಕಾಗಿ ಆಟ ಕೂಡ ಅಷ್ಟೇ ಮುಖ್ಯ. ಇಂದು ಮಕ್ಕಳಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತಿರುವ ಪ್ರಮುಖ ಕಾರಣ ಆಧುನಿಕ ಜೀವನಶೈಲಿ, ಬದಲಾದ ಆಹಾರ ಪದ್ಧತಿ ಹಾಗೂ ಅಶಿಸ್ತಿನ ಜೀವನ. ನಿಯಮಿತ ವ್ಯಾಯಾಮ, ಪ್ರತಿದಿನ ಕನಿಷ್ಠ 45 ನಿಮಿಷಗಳ ಕಾಲ ನಡಿಗೆ, ಆಹಾರಾಭ್ಯಾಸ (ಡಯಟ್), ಜಂಕ್ ಫುಡ್ ಸೇವನೆ ಮಾಡದಿರುವುದು... ಹೀಗೆ ಹಲವಾರು ಶಿಸ್ತುಗಳನ್ನು ರೂಢಿಸಿಕೊಳ್ಳುವುದರಿಂದ ಬೊಜ್ಜು ಸಮಸ್ಯೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸಬಹುದು.

ಈ ಲೇಖನ ಓದಿದ್ದೀರಾ?: ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು? | 16ರ ವಯಸ್ಸನ್ನು 'ಹುಚ್ಚು ಕೋಡಿ ಮನಸ್ಸು' ಎಂದು ಕರೆಯುವುದೇಕೆ?

ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್, ಕಂಪ್ಯೂಟರ್, ಟಿ.ವಿಯಿಂದಾಗಿ ದೈಹಿಕ ಚಟುವಟಿಕೆ ತುಂಬಾ ಕಡಿಮೆ ಆಗುತ್ತಿದೆ. ಇದೇ ಕಾರಣದಿಂದಾಗಿ ಮಕ್ಕಳು ಬೊಜ್ಜು ದೇಹವನ್ನು ಹೊಂದುವುದು ಸಾಮಾನ್ಯವಾಗುತ್ತಿದೆ. ಇದು ಭಾರತದಲ್ಲಿ ಮಾತ್ರವಲ್ಲ, ಎಲ್ಲ ದೇಶದ ಮಕ್ಕಳ ಸಮಸ್ಯೆ. ಮನೆಯಿಂದ ಆಚೆಗೆ ಮೈದಾನಕ್ಕೆ ಹೋಗಿ ಆಟವಾಡುವಂತಹ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಆಗುತ್ತಿದೆ.

ಅಧ್ಯಯನಗಳ ಪ್ರಕಾರ, ಬೊಜ್ಜು ಮತ್ತು ಖಿನ್ನತೆ ಮಧ್ಯೆ ಯಾವುದೇ ರೀತಿಯ ನೇರ ಸಂಬಂಧ ಇಲ್ಲ. ಆದರೆ, ಬೊಜ್ಜು ದೇಹ ಇರುವ ಮಕ್ಕಳನ್ನು ನಾನಾ ಸಂದರ್ಭಗಳಲ್ಲಿ ಕಡೆಗಣಿಸುವ ಕಾರಣ, ಮಾನಸಿಕವಾಗಿ ಇದು ಅವರ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಮುಖ್ಯವಾಗಿ ಖಿನ್ನತೆ ಉಂಟಾಗಬಹುದು, ದೇಹದ ರಚನೆ ಬಗ್ಗೆ ಚಿಂತೆ ಆಗಬಹುದು, ಆತ್ಮವಿಶ್ವಾಸ ಕುಂದಬಹುದು. ಈ ಎಲ್ಲ ಸಮಸ್ಯೆಗಳಿಂದ ಪಾರಾಗಲು ಮಗು ಮತ್ತೆ ಆಹಾರದತ್ತ ಮುಖ ಮಾಡಿದರೆ ಬೊಜ್ಜು ಹೆಚ್ಚಾಗುವುದು. ಆದ್ದರಿಂದ ಸರ್ಕಾರ ಮೊಟ್ಟಮೊದಲು ಮಾಡಬೇಕಾಗಿರುವುದು - ದೈಹಿಕ ಶಿಕ್ಷಣ, ಆಟದಂತಹ ವಿಷಯಗಳ ಕಡೆಗೆ ಗಮನ ಕೊಡುವುದು. ತದನಂತರ ಧ್ಯಾನದ ಬಗ್ಗೆ ವೈಜ್ಞಾನಿಕ ವಿಷಯಗಳನ್ನು ಕಲೆಹಾಕಿ, ಅದನ್ನು ಕಡ್ಡಾಯ ಮಾಡುವ ಬಗ್ಗೆ ಆಲೋಚಿಸುವುದು ಒಳಿತು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app