ನಿಮಗೆ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ಇದ್ದರೆ ದಯವಿಟ್ಟು ಖಿನ್ನತೆ ಕಾಡದಂತೆ ನೋಡಿಕೊಳ್ಳಿ; ಏಕೆಂದರೆ...

ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು? ಸರಣಿ | ಸಕ್ಕರೆ ಕಾಯಿಲೆ ಮತ್ತು ಖಿನ್ನತೆ ನಡುವೆ ಸಾಕಷ್ಟು ನಂಟಿದೆ. ಸಕ್ಕರೆ ಕಾಯಿಲೆಯ ಹಲವು ಗುಣಲಕ್ಷಣಗಳು ಖಿನ್ನತೆಯ ಗುಣಲಕ್ಷಣಗಳನ್ನು ಹೋಲುತ್ತವೆ. ಕಾರಣವಿಲ್ಲದೆ ಸುಸ್ತು, ನಿತ್ರಾಣ, ಕೆಲಸದಲ್ಲಿ ನಿರಾಸಕ್ತಿ, ಲೈಂಗಿಕ ನಿರಾಸಕ್ತಿ - ಸಕ್ಕರೆ ಕಾಯಿಲೆ ಇದ್ದಾಗಲೂ ಕಾಣಿಸಿಕೊಳ್ಳುತ್ತವೆ, ಖಿನ್ನತೆ ಇದ್ದಾಗ ಕೂಡ

ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ರೋಗದ ಜೊತೆಯಲ್ಲಿಯೇ ಜನಸಾಮಾನ್ಯರು ಗಮನಿಸಬೇಕಾದ ಇನ್ನೊಂದು ಅನಾರೋಗ್ಯವೆಂದರೆ ಖಿನ್ನತೆ (Depression). ಡಯಾಬಿಟಿಸ್  ರೋಗಿಗಳಲ್ಲಿ ಖಿನ್ನತೆಯು ಸಾಮಾನ್ಯ ಜನರಿಗಿಂತ ಎರಡು ಪಟ್ಟು ಹೆಚ್ಚು ಎಂದು ವೈದ್ಯಕೀಯ ಸಂಶೋಧನೆಗಳು ತಿಳಿಸುತ್ತವೆ. ಡಯಾಬಿಟಿಸ್‌ನಲ್ಲಿ ರೋಗಿಯ ಮೆದುಳಿನಲ್ಲಿ ಉಂಟಾಗುವ ಕೆಲವು ಬದಲಾವಣೆಗಳು ಮತ್ತು ಈ ರೋಗವನ್ನು ನಿಭಾಯಿಸುವುದರಲ್ಲಿ ರೋಗಿಗೆ ಉಂಟಾಗುವ ಒತ್ತಡವೇ  ಖಿನ್ನತೆಗೆ ಕಾರಣ ಎಂದು ತಿಳಿಸಲಾಗಿದೆ. ಸಕ್ಕರೆ ಕಾಯಿಲೆಯ ವೇಳೆ ಮೆದುಳಿನ ನರವಾಹಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾಗೆಯೇ, ಸಕ್ಕರೆ ಕಾಯಿಲೆಯ ಬಹು ದೊಡ್ಡ ಸಮಸ್ಯೆಗಳಾದ ನ್ಯೂರೋಪತಿ, ಹಾಗೆಯೇ ರಕ್ತ ಪರಿಚಲನೆ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉಂಟಾದಾಗ ಕೂಡ ಖಿನ್ನತೆ ಸಂಭವಿಸಬಹುದು ಎನ್ನುತ್ತವೆ ಸಂಶೋಧನೆಗಳು.

ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ಖಿನ್ನತೆಯಿಂದ ಬಳಲುತ್ತಿರುವವರಿಗೆ ಸಕ್ಕರೆ ಕಾಯಿಲೆಯಿಂದ ಉಂಟಾಗುವ ಕಾಂಪ್ಲಿಕೇಷನ್ಸ್‌ಗಳು ಕೂಡ ಜಾಸ್ತಿ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಖಿನ್ನತೆಗೆ ಒಳಗಾಗಿದ್ದರೆ ಸಕ್ಕರೆ ಕಾಯಿಲೆಯನ್ನು ನಿಭಾಯಿಸಲು ಮಾಡಬೇಕಾದಂತಹ ಜೀವನಶೈಲಿಯ ಬದಲಾವಣೆ, ನಿಭಾಯಿಸಬೇಕಾದ ಪಥ್ಯ ಹಾಗೂ ಆಹಾರ ಬದಲಾವಣೆ, ವ್ಯಾಯಾಮ ಮುಂತಾದವುಗಳನ್ನು ಸರಿಯಾಗಿ ಮಾಡಲು ಆಗುವುದಿಲ್ಲ. ಖಿನ್ನತೆಯ ಕಾರಣದಿಂದ ಬೇಸರದಿಂದ ಸಕ್ಕರೆ ಕಾಯಿಲೆಗೆ ಕೊಟ್ಟ ಮಾತ್ರೆಗಳನ್ನು ಕೂಡ ಈ ರೋಗಿಗಳು ಸರಿಯಾಗಿ ತೆಗೆದುಕೊಳ್ಳುವುದಿಲ್ಲ. ಇದರಿಂದಾಗಿ ಸಕ್ಕರೆ ಕಾಯಿಲೆ ಕೂಡ ಜಾಸ್ತಿಯಾಗುತ್ತದೆ.

Image

ಒಟ್ಟಿನಲ್ಲಿ, ಸಕ್ಕರೆ ಕಾಯಿಲೆ ಮತ್ತು ಖಿನ್ನತೆ ನಡುವೆ ಬಹಳಷ್ಟು ನಂಟು ಇದೆ. ಹಾಗಾಗಿ, ಖಿನ್ನತೆಯ ಗುಣಲಕ್ಷಣಗಳನ್ನು ಪ್ರತ್ಯೇಕವಾಗಿ ಗಮನಿಸಬೇಕಾಗುತ್ತದೆ. ಏಕೆಂದರೆ, ಸಕ್ಕರೆ ಕಾಯಿಲೆಯ ಹಲವು ಗುಣಲಕ್ಷಣಗಳು ಖಿನ್ನತೆಯ ಗುಣಲಕ್ಷಣಗಳನ್ನು ಹೋಲುತ್ತವೆ. ಕಾರಣವಿಲ್ಲದೆ ಸುಸ್ತು, ನಿತ್ರಾಣ, ಕೆಲಸದಲ್ಲಿ ನಿರಾಸಕ್ತಿ, ಲೈಂಗಿಕ ನಿರಾಸಕ್ತಿ, ಸಕ್ಕರೆ ಕಾಯಿಲೆ ಇದ್ದಾಗಲೂ ಉಂಟಾಗುತ್ತವೆ, ಖಿನ್ನತೆ ಇದ್ದಾಗಲೂ ಉಂಟಾಗುತ್ತವೆ.

ಖಿನ್ನತೆಯಲ್ಲಿ ಕಂಡುಬರುವ ಪ್ರಮುಖ ಗುಣಲಕ್ಷಣಗಳು ಎಂದರೆ, ಕಾರಣವಿಲ್ಲದೆ ಬೇಸರ, ನಾನು ಜೀವನದಲ್ಲಿ ಏನೂ ಸಾಧಿಸಲಿಲ್ಲ ಎಂಬ ಅನಿಸಿಕೆ, ಬದುಕಿ ಪ್ರಯೋಜನವಿಲ್ಲ ಎಂದು ತೋರುವುದು, ನಿದ್ರೆ ಹತ್ತಲು ಕಷ್ಟವಾಗುವುದು, ಬೆಳಗ್ಗೆ ಬೇಗ ಎಚ್ಚರವಾಗುವುದು, ಲೈಂಗಿಕ ನಿರಾಸಕ್ತಿ ಮತ್ತು ತಪ್ಪಿತಸ್ಥ ಮನೋಭಾವ. ಈ ಗುಣಲಕ್ಷಣಗಳು ಇದ್ದು, ಸಕ್ಕರೆ ಕಾಯಿಲೆಯೂ ಇದ್ದಲ್ಲಿ - ಈ ಕೂಡಲೇ ನಿಮ್ಮ ವೈದ್ಯರನ್ನು ಬೇಟಿಯಾಗಿ ಚರ್ಚಿಸಿ.

ಈ ಲೇಖನ ಓದಿದ್ದೀರಾ?: ನಮ್ಮ ಪ್ರೀತಿಪಾತ್ರರ ಆತ್ಮಹತ್ಯೆ ತಡೆಯಲು ನಾವು ಮಾಡಬಹುದಾದ್ದು ಏನು? ಇಲ್ಲಿವೆ ಕೆಲವು ಸಲಹೆ

ಖಿನ್ನತೆಯಿಂದ ಬಳಲುತ್ತಿರುವ ಸಕ್ಕರೆ ಕಾಯಿಲೆಯ ರೋಗಿಯು, ಸಕ್ಕರೆ ಕಾಯಿಲೆಯ ಮಾತ್ರೆಗಳನ್ನು ಮತ್ತು ಖಿನ್ನತೆಯ ಮಾತ್ರೆಗಳನ್ನು ತೆಗೆದುಕೊಳ್ಳಲು ನಿರಾಕರಿಸಬಹುದು. ಅಲ್ಲದೆ, ವೈದ್ಯರು ಹೇಳಿದ ಎಲ್ಲ ವಿಷಯಗಳನ್ನು - ಅಂದರೆ, ಜೀವನಶೈಲಿ, ಮಾತ್ರೆ, ಇನ್ಸುಲಿನ್ ಹಾಗೂ ಪಥ್ಯ ಎಲ್ಲವನ್ನೂ ತಿರಸ್ಕರಿಸಿ, ತನಗೆ ಸಕ್ಕರೆ ಕಾಯಿಲೆಯಿಂದ ಸಮಸ್ಯೆಗಳು ಉಂಟಾಗಲಿ ಎಂದು ಆಶಿಸಬಹುದು.
ಖಿನ್ನತೆಯ ಕಾರಣದಿಂದ ಈ ರೀತಿಯ ನಡವಳಿಕೆಗಳನ್ನು ಹಲವು ಬಾರಿ ವೈದ್ಯರುಗಳೂ ಗುರುತಿಸಲಾರರು.

ಖಿನ್ನತೆಗೆ ಚಿಕಿತ್ಸೆ ಅಂದ ಕೂಡಲೇ ಮಾತ್ರೆ ಕೊಡಬೇಕಂತ ಇಲ್ಲ. ಕೆಲವೊಮ್ಮೆ ಮಾತು ಸಾಕು. ಇದನ್ನು 'ಸೈಕೋಥೆರಪಿ' ಅಂತ ಕರೆಯಲಾಗುತ್ತದೆ. ಅಲ್ಪ ಮಟ್ಟದ ಖಿನ್ನತೆಗೆ ಕೇವಲ ಅವರ ಮನಸ್ಸಿನ ಗೊಂದಲಗಳನ್ನು ಕಡಿಮೆ ಮಾಡಿಕೊಳ್ಳಲು ವಿವಿಧ ಬಗೆಯ ಥೆರಪಿಗಳು ಲಭ್ಯ ಇವೆ. Cognitive Behaviour Therapy ಒಂದು ಪ್ರಮುಖವಾದ ಚಿಕಿತ್ಸಾ ವಿಧಾನ. ಹಲವು ಬಾರಿ ನಾವು ಅನುಭವಿಸಿದ ಘಟನೆಗಳು, ಆ ಘಟನೆಗಳ ಬಗೆಗಿನ ನಮ್ಮ ಯೋಚನೆಗಳು ಸೇರಿ ನಮ್ಮ ನಡವಳಿಕೆಗಳನ್ನು ನಿರ್ಧರಿಸುತ್ತವೆ. ನಮ್ಮ ನಡವಳಿಕೆ ಬದಲಾಗಬೇಕಾದರೆ ಯೋಚನೆಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಖಿನ್ನತೆಯಿಂದ ನಕಾರಾತ್ಮಕ ಆಲೋಚನೆಗಳು ಪದೇಪದೆ ತಲೆಗೆ ಬರಲು ಶುರುವಾಗುತ್ತದೆ; NEGATIVE AUTOMATIC THOUGHTS... NEGATIVE VIEW OF SELF, NEGATIVE VIEW OF PAST, NEGATIVE VIEW OF FUTURE... ನಮ್ಮ ಬದುಕನ್ನು ಬದಲಿಸಬೇಕೆಂದರೆ ಮೊದಲಿಗೆ ನಮ್ಮ ನಕಾರಾತ್ಮಕ ಆಲೋಚನೆಗಳನ್ನು ಬದಲಿಸಲು ಪ್ರಯತ್ನಿಸಬೇಕು. ಆ ಆಲೋಚನೆಗಳನ್ನು ಬದಲಿಸಬೇಕಾದರೆ ಕೆಲವೊಮ್ಮೆ ನಮ್ಮ ಚಟುವಟಿಕೆಗಳನ್ನು ಕೂಡ ಬದಲಿಸಬೇಕಾಗುತ್ತದೆ. ಏಕೆಂದರೆ, ದೇಹದಲ್ಲಿ ಬಹಳಷ್ಟು ನಿಶ್ಯಕ್ತಿ ಇರುತ್ತದೆ. ಇದನ್ನು ಸರಿಪಡಿಸಲು ಮನಶಾಸ್ತ್ರಜ್ಞರು 'ACTIVITY SCHEDULING' ಎಂಬ ಸಲಹೆ ಕೊಡುತ್ತಾರೆ. ಇಲ್ಲಿ ಖಿನ್ನತೆಯಿಂದ ಬಳಲುತ್ತಿದ್ದವರು ತಾವೇ ಮನಃಶಾಸ್ತ್ರಜ್ಞರ ಸಹಾಯದಿಂದ ಚಟುವಟಿಕೆಗಳನ್ನು ಮಾಡಲು ನಿರ್ಧರಿಸುತ್ತಾರೆ, ಮೊದಮೊದಲು ಕಷ್ಟವಾಗುತ್ತದೆ, ಆದರೆ ಮುಂದೆ ಅದೇ ಸಹಜವಾಗುತ್ತದೆ. ಖಿನ್ನತೆ ಎಂಬುದು ನಮ್ಮಲ್ಲಿ ಬಹಳಷ್ಟು ಸಮಸ್ಯೆಗಳನ್ನು ಮಾಡುವ ಕಾಯಿಲೆ. ಇದಕ್ಕೆ ಮಾತ್ರೆ ಚಿಕಿತ್ಸೆ ಮತ್ತು ಮಾತಿನ ಚಿಕಿತ್ಸೆ ಬೇಕಾಗುತ್ತದೆ. ಅಲ್ಪಮಟ್ಟದ ಖಿನ್ನತೆಗೆ ಮಾತಿನ ಚಿಕಿತ್ಸೆಯೇ ಸಾಕಾಗುತ್ತದೆ.

Image

ಖಿನ್ನತೆ ಅಂದಕೂಡಲೇ ಅದನ್ನು ಕೇವಲ 'ಮಾನಸಿಕ ಕಾಯಿಲೆ' ಅಂದುಕೊಳ್ಳಬೇಡಿ. ಮಿದುಳಿನ ನರವಾಹಕಗಳಲ್ಲಿ ಸಮಸ್ಯೆಗಳಾಗಿ, ಕೆಲವು ದೈಹಿಕ ಸಮಸ್ಯೆಗಳು ಕೂಡ ಉಂಟಾಗುತ್ತವೆ. ಖಿನ್ನತೆಯನ್ನು ಮೊದಲೇ ಗುರುತಿಸದೆ ಇದ್ದರೆ, ಆತ್ಮಹತ್ಯೆಯ ಆಲೋಚನೆಗಳು, ಜೀವನದಲ್ಲಿ ಜಿಗುಪ್ಸೆ, ನಿದ್ರಾಹೀನತೆ, ತೀವ್ರವಾಗಿ ತೂಕ ಕಡಿಮೆ ಆಗುವುದು, ಸಕ್ಕರೆ ಕಾಯಿಲೆ ನಿಯಂತ್ರಣ ಹತೋಟಿ ತಪ್ಪುವುದು... ಹೀಗೆ ಹಲವಾರು ಸಂದಿಗ್ಧತೆ ಉಂಟಾಗುತ್ತವೆ. ಇವೆಲ್ಲ ನಿಯಂತ್ರಣ ಮೀರಿದಾಗ ಖಿನ್ನತೆಗೆ ಕೂಡ ಮಾತ್ರೆಯ ಚಿಕಿತ್ಸೆ ಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ, ಸಕ್ಕರೆ ಕಾಯಿಲೆಯ ಮಾತ್ರೆಗಳು ಮತ್ತು ಖಿನ್ನತೆಯ ಮಾತ್ರೆಗಳನ್ನು ಒಟ್ಟಿಗೇ ತೆಗೆದುಕೊಳ್ಳುವುದರಿಂದ ಏನಾದರೂ ಅನಾರೋಗ್ಯಕರ ಪರಿಣಾಮ ಆದೀತೇ ಎಂದು ಗಮನಿಸಿ ಮಾತ್ರೆಗಳನ್ನು ನೀಡಬೇಕಾಗುತ್ತದೆ.

ಈ ಲೇಖನ ಓದಿದ್ದೀರಾ?: ಗುಂಪಿನಲ್ಲಿ ವ್ಯಾಯಾಮ ಮಾಡುವುದು ಖಿನ್ನತೆಗೆ ಒಂದು ಬಗೆಯ ಚಿಕಿತ್ಸೆ - ಹೇಗೆ?

ಇನ್ನು, ಖಿನ್ನತೆಯಿಂದಾಗಿ ಆತ್ಮಹತ್ಯೆಯ ಯೋಚನೆಗಳು ತೀವ್ರವಾಗಿದ್ದಲ್ಲಿ ಅಥವಾ ಆತ್ಮಹತ್ಯೆ ಪ್ರಯತ್ನಗಳನ್ನು ಮಾಡಿದ್ದಲ್ಲಿ 'ವಿದ್ಯುತ್ ಕಂಪನ ಚಿಕಿತ್ಸೆ' ಎಂಬ ಒಂದು ವೈಜ್ಞಾನಿಕ ಚಿಕಿತ್ಸೆಯನ್ನು ಕೂಡ ಮನೋವೈದ್ಯರು ಸಲಹೆ ನೀಡುವುದುಂಟು.

ಸಕ್ಕರೆ ಕಾಯಿಲೆಯ ನಿಯಂತ್ರಣದಲ್ಲಿ ಮನಸ್ಸಿನ ಪಾತ್ರ ಬಹಳಷ್ಟಿದೆ. ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕೆ ಅತಿ ಅಗತ್ಯವಾದ ಆಹಾರ ಬದಲಾವಣೆ ಮನಸ್ಸಿನ ಸ್ಥಿತಿಯ ಮೇಲೆ ನಿರ್ಭರವಾಗಿರುತ್ತದೆ. ವೈದ್ಯರು ಜಾಸ್ತಿ ತಿನ್ನಬಾರದು ಎಂದು ಹೇಳಿದ ಪದಾರ್ಥಗಳನ್ನು (ಕರಿದ ತಿಂಡಿ, ಸಿಹಿ) ತಿನ್ನುವ ಹಂಬಲ, ತವಕ ಸಹಜ. ಹಾಗೆಯೇ, ವೈದ್ಯರು ಹೇಳುವ ಪ್ರತಿದಿನದ ವ್ಯಾಯಾಮ ಮಾಡಲು ಕೂಡ ಮನಸ್ಸು ಸರಿಯಾಗಿರಬೇಕು. ಆದ್ದರಿಂದ ಸಕ್ಕರೆ ಕಾಯಿಲೆ ಇರುವ ರೋಗಿಯು ಈ ದೀರ್ಘಕಾಲೀನ ಕಾಯಿಲೆಯ ನಿವಾರಣೆ ಮಾಡಲು ಮನಸ್ಸಿನ ಆರೋಗ್ಯದ ಬಗ್ಗೆ ಕೂಡ ಗಮನ ಹರಿಸಬೇಕಾದ್ದು ಅನಿವಾರ್ಯ.

ಚಿತ್ರಗಳು - ಸಾಂದರ್ಭಿಕ | ಕೃಪೆ: unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180