ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು? | ಹದಿಹರೆಯದವರಲ್ಲಿ ಮುಟ್ಟಿನ ಹೊತ್ತಿನ ಮಾನಸಿಕ ಸಮಸ್ಯೆ; ಪೋಷಕರಿಗೆ ಗೊತ್ತಿರಬೇಕಾದ್ದೇನು?

ಹದಿಹರೆಯದವರು ಋತುಸ್ರಾವದ ಹೊತ್ತಿನಲ್ಲಿ ಮಾನಸಿಕ ಸಮಸ್ಯೆಗೆ ಒಳಗಾದಾಗ ಸಹಜವಾಗಿ ಖಿನ್ನತೆಗೂ ತುತ್ತಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಪ್ರಸೂತಿ ತಜ್ಞರು ಮನೋವೈದ್ಯರ ಆಪ್ತ ಸಲಹೆ ಪಡೆಯಲು ಹೇಳುವುದು ಇದೇ ಕಾರಣಕ್ಕೆ. ಹದಿಹರೆಯದವರು ಮಾತ್ರವಲ್ಲದೆ ಅವರ ಪೋಷಕರೂ ಈ ಸೂಕ್ಷ್ಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯ

ಶಿಕ್ಷಕರೊಬ್ಬರು 17 ವರುಷದ ಮಗಳನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದರು.

"ಋತುಸ್ರಾವದ ಸಮಯದಲ್ಲಿ ಮಗಳು ವಿಚಿತ್ರವಾಗಿ ಆಡುತ್ತಾಳೆ. ಸಣ್ಣ-ಸಣ್ಣ ವಿಷಯಕ್ಕೆ ಕಿರಿಕಿರಿ ಮಾಡಿಕೊಳ್ಳುತ್ತಾಳೆ. ಋತುಚಕ್ರದ ಸಮಯದ ಏಳು ದಿನಗಳು ಮನೆಯವರಿಗೆಲ್ಲ ಕಿರಿಕಿರಿಯ ದಿನಗಳು. ಮನೆಯವರ ಮೇಲೆ ಕಿರುಚಾಟ. 'ಟಿವಿ ಜೋರಾಗಿ ಹಾಕಿದ್ದೀಯ' ಅಂತ ತಮ್ಮನಿಗೆ ಪೆಟ್ಟು, ಸಿಟ್ಟಿನಲ್ಲಿ ರಿಮೋಟ್ ಬಿಸಾಡುವುದು, ಜೋರಾಗಿ ಕೂಗುತ್ತಲೇ ಇರುವುದು, ಕಾರಣವಿಲ್ಲದೆ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವುದು..." ಇತ್ಯಾದಿ ಹೇಳಿಕೊಂಡರು.

ಪ್ರೀ ಮೆನ್ಸ್‌ಟ್ರುವಲ್ ಸಿಂಡ್ರೋಮ್ (Premenstrual Syndrome - PMS) ಮತ್ತು ಪ್ರಿ ಮೆನ್ಸ್‌ಟ್ರುವಲ್ ಡಿಸ್ಫೋರಿಯ (Premenstrual Dysphoria - PMDD) ಇವುಗಳು ಋತುಚಕ್ರದ ಸಮಯದಲ್ಲಿ ದೇಹದಲ್ಲಿ ಉಂಟಾಗುವ ರಸದೂತಗಳ ಬದಲಾವಣೆಯ ಕಾರಣ ಉಂಟಾಗುವ ಸಮಸ್ಯೆ. PMS ಅಲ್ಪ ಮಟ್ಟದ ಸಮಸ್ಯೆ. ತೀವ್ರ ಆಗುವಾಗ ಅದನ್ನು PMDD ಅಂತ ಕರೆಯುತ್ತೇವೆ. ಇದು ಎರಡು ಕೂಡ ಋತುಚಕ್ರದ Luteal Phase, ಅಂದರೆ, ಗರ್ಭಾಶಯವು ರಸದೂತಗಳಿಂದ ಉಲ್ಬಣಗೊಂಡು ಗರ್ಭಧಾರಣೆಗೆ ಗರ್ಭಾಶಯವನ್ನು ತಯಾರು ಮಾಡುತ್ತ ಇರುವ ಸಮಯದಲ್ಲಿ ಉಂಟಾಗುವ ಮನೋದೈಹಿಕ ಸಮಸ್ಯೆ.

Image

ಮನಸ್ಸಿನ ಮೂಡ್‌ನಲ್ಲಿ ಬದಲಾವಣೆಗಳು, ಕಾರಣವಿಲ್ಲದೆ ಖಿನ್ನತೆ, ಆತಂಕ ಅಥವಾ ಉದ್ವೇಗ, ಕಾರಣವಿಲ್ಲದೆ ಅಳುವುದು, ಸಣ್ಣ ವಿಷಯಕ್ಕೆ ಭಾವೋದ್ವೇಗಕ್ಕೆ ಒಳಗಾಗುವುದು, ತಮಗೆ ಬೇಕಾದದ್ದು ಸಿಗದಿದ್ದಾಗ ತೀವ್ರವಾಗಿ ಪ್ರತಿಕ್ರಿಯಿಸುವುದು, ಏಕಾಗ್ರತೆಯ ಕೊರತೆ, ಅತಿಯಾಗಿ ಹಸಿವಾಗುವುದು ಅಥವಾ ತುಂಬಾ ಕಡಿಮೆ ಹಸಿವಾಗುವುದು, ದೇಹ ಬಳಲಿದಂತಾಗುವುದು, ಹೊಟ್ಟೆ ಉಬ್ಬರಿಸಿದ ಭಾವ, ಮೈ-ಕೈ ಸೆಳೆತ, ತಲೆನೋವು, ಸ್ತನಗಳ ನೋವು... ಹೀಗೆ ವಿವಿಧ ಸಂಕೀರ್ಣ ಸಮಸ್ಯೆಗಳಿಂದ ಪ್ರಕಟಗೊಳ್ಳುತ್ತದೆ. ಇದು ಋತುಚಕ್ರದ ಐದರಿಂದ ಎಂಟು ದಿನಗಳ ಮುಂಚೆ ಪ್ರಾರಂಭವಾಗಿ, ಋತುಚಕ್ರದ ಅವಧಿಯಲ್ಲಿ ಮುಂದುವರಿಯುತ್ತದೆ. ಇದು ಹೆಚ್ಚಾಗಿ ಋತುಮತಿಯಾದ ಕೂಡಲೇ, ಅಂದರೆ ಹದಿಹರೆಯದಲ್ಲಿ ಪ್ರಕಟಗೊಳ್ಳುವ ಸಮಸ್ಯೆ.

ಈ ಋತುಚಕ್ರದ ಅವಧಿಯಲ್ಲಿ ಅಲ್ಪ ಮಟ್ಟದಲ್ಲಿ ಉಂಟಾಗುವ ಭಾವನಾತ್ಮಕ ಮತ್ತು ದೈಹಿಕ ಸಮಸ್ಯೆಗಳು ಸಾಧಾರಣವಾಗಿ ಶೇಕಡ 75ರಷ್ಟು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಋತುಚಕ್ರದ ಸಮಯದಲ್ಲಿ ಸಿಡುಕು, ಸುಸ್ತು, ಹೆದರಿಕೆ ಸರ್ವೇಸಾಮಾನ್ಯ. ಆದರೆ, ತೀವ್ರ ಬಗೆಯ ಸಮಸ್ಯೆ ಅಂದರೆ - ಧಾರಾವಾಹಿ ನೋಡಿ ಅಳಲು ಪ್ರಾರಂಭಿಸುವುದು, ತೀವ್ರ ಖಿನ್ನತೆ, "ಜೀವನ ಬೇಡ, ಸಾಯಬೇಕು, ಜೀವನವೇ ವ್ಯರ್ಥ..." ಮುಂತಾಗಿ ಯೋಚನೆ ಮಾಡುವುದು ಮುಂತಾದ ರೂಪದಲ್ಲಿ ಪ್ರಕಟಗೊಳ್ಳುತ್ತದೆ.

ಋತುಚಕ್ರದ ಒಂದು ವಾರದ ಮುಂಚೆ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ರಸದೂತಗಳಿಗೆ ಗರ್ಭಾಶಯದ ಸಂವೇದನೆ ಜಾಸ್ತಿಯಾಗುವುದೇ ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಸಂಶೋಧನೆಗಳ ಪ್ರಕಾರ, ಈ ಸಮಸ್ಯೆ ಅನುವಂಶಿಕ ಕೂಡ. ಇದರಿಂದ ಬಳಲುವ ಮಕ್ಕಳ ತಾಯಿ ಅಥವಾ ಅಜ್ಜಿ ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.

ಹದಿಹರೆಯದಲ್ಲಿ ಈ ಸಮಸ್ಯೆ ಬಂದಿತೆಂದರೆ, ಪ್ರತಿ ಋತುಚಕ್ರದ ಸಮಯದಲ್ಲಿ ಮನೆಯವರೊಂದಿಗೆ, ಸಹಪಾಠಿಗಳೊಂದಿಗೆ ಘರ್ಷಣೆಗಳು, ಶೈಕ್ಷಣಿಕ ಸಮಸ್ಯೆಗಳು ಸರ್ವೇಸಾಮಾನ್ಯ ಆಗಿಬಿಡುತ್ತವೆ.

ಈ ಲೇಖನ ಓದಿದ್ದೀರಾ?: ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು? | ಋತುಚಕ್ರ ನಿಂತ ಮಹಿಳೆಯೊಬ್ಬರ ಮಾನಸಿಕ ಸಮಸ್ಯೆಗಳು

ಈ ಸಮಸ್ಯೆ ಬಗ್ಗೆ ಅರಿವು ಬಹಳ ಮುಖ್ಯ. ಅರಿವು ಬೆಳೆಸಿಕೊಳ್ಳಲು ಋತುಚಕ್ರದ ಸಮಯದಲ್ಲಿ ಈ ಸಮಸ್ಯೆಯನ್ನು Track ಮಾಡಲು ಕ್ಯಾಲೆಂಡರ್‌ನಲ್ಲಿ ಬರೆಯುವುದು ಅಥವಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ಉಪಯೋಗಿಸಿ ಟ್ರಾಕ್ ಮಾಡುವ ದಾರಿ ಕಂಡುಕೊಳ್ಳಬಹುದು. ಏನೇನು ಗುಣಲಕ್ಷಣಗಳು ಇರುತ್ತವೆ ಮತ್ತು ಯಾವಾಗ ಇರುತ್ತವೆ ಎಂಬುದನ್ನು ಬರೆದುಕೊಂಡರೆ ಸಾಕಷ್ಟು ಅನುಕೂಲ. ಹದಿಹರೆಯದವರು ಇಲ್ಲವೇ ಮನೆಯವರು ಈ ಕೆಲಸವನ್ನು ಮಾಡಬಹುದು.

ಸಮಸ್ಯೆ ಇದ್ದಲ್ಲಿ ಮೊದಲು ಪ್ರಸೂತಿ ರೋಗತಜ್ಞರಿಗೆ ತೋರಿಸಬೇಕು. ಇದು ರಸದೂತಗಳ ಸಮಸ್ಯೆ ಆದ್ದರಿಂದ ಋತುಚಕ್ರದ ಅವಧಿಯಲ್ಲಿ ಅವರು ಕೆಲವು ಬಗೆಯ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ತಿಳಿಸಬಹುದು. ಇದರಿಂದಾಗಿ ರಸದೂತಗಳ ಅಸಮತೋಲನ ಕಡಿಮೆ ಆಗಬಹುದು. ಈ ಮಾತ್ರೆಗಳಿಂದ ಕಡಿಮೆ ಆಗದೆ ಇದ್ದಲ್ಲಿ, ಖಿನ್ನತೆ ಅಥವಾ ಆತಂಕದ ಸಮಸ್ಯೆ ಇದ್ದಲ್ಲಿ, ಋತುಚಕ್ರದ ಅವಧಿಯಲ್ಲಿ ಖಿನ್ನತೆ ನಿವಾರಕ ಮಾತ್ರೆಗಳನ್ನು ವೈದ್ಯರು ತೆಗೆದುಕೊಳ್ಳಲು ಹೇಳಬಹುದು.

ಹದಿಹರೆಯದವರು ಈ ಸಮಸ್ಯೆಗೆ ಒಳಗಾದಾಗ ಸಹಜವಾಗಿಯೇ ಮುಂದೆ ಖಿನ್ನತೆಗೆ ಒಳಗಾಗುತ್ತಾರೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಹಲವೊಮ್ಮೆ ಪ್ರಸೂತಿ ತಜ್ಞರು ಮನೋವೈದ್ಯರ ಬಳಿಗೆ ಆಪ್ತ ಸಲಹೆಗಾಗಿ ಕಳಿಸುತ್ತಾರೆ. ಮನೋವೈದ್ಯರು ಆ ಸಮಯದಲ್ಲಿ ಉಂಟಾಗುವ ಮನೋದೈಹಿಕ ಬದಲಾವಣೆ ಗಮನಿಸಿ, 'ಯೋಚನಾ ವರ್ತನಾ ಚಿಕಿತ್ಸೆ' ಅಂದರೆ - ನಿಮ್ಮ ಆಲೋಚನೆಗಳನ್ನು ಗಮನಿಸಿ ಅದನ್ನು ಬದಲಾವಣೆ ಮಾಡಿಕೊಳ್ಳುವುದು, ನಿಮ್ಮ ವರ್ತನೆಗಳನ್ನು ಬದಲಿಸುವುದು ಮುಂತಾದ ಸಲಹೆಗಳನ್ನು ನೀಡುತ್ತಾರೆ. ಹಾಗೆಯೇ, ಕೆಲವೊಮ್ಮೆ ಖಿನ್ನತೆ ನಿವಾರಕ ಅಥವಾ ಆತಂಕ ನಿವಾರಕ ಮಾತ್ರೆಗಳು ತೆಗೆದುಕೊಳ್ಳಲು ಹೇಳಬಹುದು.

Image

ಈ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಮನೆ ಮಂದಿಯ ಪಾತ್ರ ದೊಡ್ಡದಿದೆ. ಮೊದಲಿಗೆ ಮನೆಯವರಿಗೆ ಈ ಸಮಸ್ಯೆ ಬಗ್ಗೆ ಸರಿಯಾದ ಶಿಕ್ಷಣ ಅಗತ್ಯ. ಈ ಸಮಯದಲ್ಲಿ ಮನೆಯವರು ಕೂಡ ಈ ಸಮಸ್ಯೆ ಇರುವ ಮಗುವಿಗೆ ಕಿರಿಕಿರಿ ಮಾಡದೆ, ಅವಳೊಂದಿಗೆ ಸಮಾಧಾನದಿಂದ ಇರಬೇಕು. ಅವರಿಗೆ ವಿಶ್ರಾಂತಿಗೆ ಸಮಯ ಕೊಡಬೇಕು. ಅವರ ಊಟ-ತಿಂಡಿಯಲ್ಲಿ ಅಗತ್ಯ ಬದಲಾವಣೆ ಮಾಡಿಸಬೇಕು.

ಸಮಸ್ಯೆ ಇರುವ ಹದಿಹರೆಯದವರು ಈ ಸಂದರ್ಭದಲ್ಲಿ ಕಾಫಿ, ಟೀ, ಮದ್ಯಪಾನ ಮುಂತಾದವುಗಳ ಉಪಯೋಗ ಕಡಿಮೆ ಮಾಡಬೇಕು. ದೈಹಿಕ ವ್ಯಾಯಾಮ ಮತ್ತು ಮಾನಸಿಕ ವ್ಯಾಯಾಮ (Relaxation Exercises) ಮಾಡಿದಲ್ಲಿ, ಮನಸ್ಸಿಗೆ ಉಂಟಾಗುವ ಉದ್ವೇಗ ಕಡಿಮೆಯಾಗುತ್ತದೆ.

ಒಟ್ಟಿನಲ್ಲಿ ಇದು ಬೆಳವಣಿಗೆಯ ಘಟ್ಟದಲ್ಲಿ ಒಂದು ಮನೋದೈಹಿಕ ಸಮಸ್ಯೆ ಎಂಬುದನ್ನು ತಾಯಿ-ತಂದೆಯರು, ಗುರುಹಿರಿಯರು ಹಾಗೂ ಯುವ ಜನಾಂಗ ತಿಳಿದುಕೊಳ್ಳಬೇಕು. ಹಲವೊಮ್ಮೆ ಇಂತಹ ಸಮಸ್ಯೆಗಳು ವೈದ್ಯರ ಬಳಿಗೆ ತಲುಪದೆ, ಪ್ರತೀ ತಿಂಗಳು ಹದಿಹರೆಯದವರನ್ನು ಕಾಡುತ್ತವೆ. ಪರಿಣಾಮವಾಗಿ, ಈ ಮಕ್ಕಳ ಬದುಕಿನಲ್ಲಿ ಪ್ರೀತಿಪಾತ್ರರೊಂದಿಗೆ ಸಂಘರ್ಷ, ಕೆಲಸದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ನಿಮಗೆ ಏನು ಅನ್ನಿಸ್ತು?
4 ವೋಟ್