ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು? | ಋತುಚಕ್ರ ನಿಂತ ಮಹಿಳೆಯೊಬ್ಬರ ಮಾನಸಿಕ ಸಮಸ್ಯೆಗಳು

ಋತುಸ್ರಾವ ನಿಲ್ಲುವ ಸಂದರ್ಭದಲ್ಲಿ ಮಹಿಳೆಯರಲ್ಲಿ ಒಂದು ಬಗೆಯ ಖಿನ್ನತೆ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಒಂದು ಬಗೆಯ ನಿರಾಸಕ್ತಿ, ಬೇಸರ, ಜನರೊಂದಿಗೆ ಬೆರೆಯುವಲ್ಲಿ ಹಿಂದೇಟು, ಮೈಯೆಲ್ಲ ಬಿಸಿಯಾಗುವುದು, ಸಿಡುಕುವುದು, ತಪ್ಪಿತಸ್ಥ ಭಾವನೆ ಮುಂತಾದವು ಉಂಟಾಗಬಹುದು. ಇದಕ್ಕೆ ಸೂಕ್ತ ಪರಿಹಾರವೇನು? ಇಲ್ಲಿದೆ ವಿವರ

ನಲವತ್ತೆರಡು ವರ್ಷದ ಹೆಂಗಸೊಬ್ಬರು ಇಂದು ಆಸ್ಪತ್ರೆಗೆ ಬಂದಿದ್ದರು.

ಇತ್ತೀಚೆಗೆ ಅವರಿಗೆ ಋತುಚಕ್ರ ನಿಂತುಹೋಗಿದ್ದು, ಮನಸ್ಸಿನಲ್ಲಿ ಏನೋ ಒಂದು ಬಗೆಯ ಕಿರಿಕಿರಿ, ನಿದ್ರೆ ಸರಿಯಾಗಿ ಬರುವುದಿಲ್ಲ, ಹದಿನೈದು ವರ್ಷಗಳ ಹಿಂದಿನ ಒಂದು ಘಟನೆ ಪದೇಪದೆ ಮನಸ್ಸಿಗೆ ನೆನಪಿಗೆ ಬರುತ್ತಾ ಇದೆ... ತಾನು ತಪ್ಪು ಮಾಡಿದ್ದೇನೆ ತನಗೆ ಜೀವನವೇ ಬೇಡ ಎಂಬ ಯೋಚನೆಗಳು, ಮೈಯೆಲ್ಲ ಬಿಸಿಬಿಸಿಯಾಗುತ್ತದೆ, ಎದೆ ಬಡಬಡ ಹೊಡೆದುಕೊಳ್ಳುತ್ತದೆ, ಕೆಲಸ ಮಾಡಲು ಆಸಕ್ತಿ ಇಲ್ಲ, ಜನರೊಂದಿಗೆ ಬೆರೆಯುಲು ತೋಚುವುದಿಲ್ಲ... ಹೀಗೆ ಹಲವಾರು ತರಹ ಸಮಸ್ಯೆಗಳು.

ಕುಟುಂಬ ವೈದ್ಯರ ಸಲಹೆ ಮೇರೆಗೆ ಹದಿನೈದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮನೋವೈದ್ಯರನ್ನು ಹೋಗಿ ಕಂಡರಂತೆ. ಸುದೀರ್ಘ ಸಮಾಲೋಚನೆಯ ನಂತರ ಅಲ್ಲಿ ಮಾತ್ರೆಗಳನ್ನು ಕೊಟ್ಟಿದ್ದರಂತೆ. ಆದರೆ, ಪಕ್ಕದ ಮನೆಯವರು ಹೇಳಿದರಂತೆ: "ಮನೋವೈದ್ಯರ ಮದ್ದು ತೆಗೆದುಕೊಳ್ಳಬೇಡಿ - ಜೀವನಪೂರ್ತಿ ತೆಗೆದುಕೊಳ್ಳಬೇಕಾಗುತ್ತದೆ!" ಇದರಿಂದ ಹೆದರಿದ ಮಹಿಳೆ ಆ ಮಾತ್ರೆಗಳನ್ನು ನಿಲ್ಲಿಸಿದರಂತೆ. ನನ್ನನ್ನು ಕೇಳಿದರು: "ಮಾತ್ರೆ ಬೇಕಾ ಡಾಕ್ಟರ್? ನಿಮ್ಮದೊಂದು ಸೆಕೆಂಡ್ ಒಪಿನಿಯನ್ ಕೊಡಿ..."

ಈ ಮಹಿಳೆಯೊಂದಿಗೆ ಮಾತನಾಡಿದಾಗ ನನಗೆ ತಿಳಿದುಬಂದ ವಿಷಯವೆಂದರೆ, ಇವರು ಒಂದು ಬಗೆಯ 'ಒಳಜನ್ಯ ಖಿನ್ನತೆಯಾದ (Endogeneous Depression) 'INVOLUTIONAL MELANCHOLIA' ಎಂಬ ಸಮಸ್ಯೆಯಿಂದ ಬಳಲುತ್ತಿದ್ದರು.

Image
ಸಾಂದರ್ಭಿಕ ಚಿತ್ರ

ಮಹಿಳೆಯರಲ್ಲಿ ಋತುಸ್ರಾವ ನಿಲ್ಲುವ ಸಂದರ್ಭದಲ್ಲಿ ಒಂದು ಬಗೆಯ ಖಿನ್ನತೆ ಉಂಟಾಗುವ ಸಾಧ್ಯತೆ ಇದೆ. ಈ ಖಿನ್ನತೆಯ ಅವಧಿಯಲ್ಲಿ ಒಂದು ಬಗೆಯ ನಿರಾಸಕ್ತಿ, ಬೇಸರ, ಜನರೊಂದಿಗೆ ಬೆರೆಯುವಲ್ಲಿ ಅನಾಸಕ್ತಿ, ಹಾಗೆಯೇ ಮೈಯೆಲ್ಲ ಬಿಸಿಯಾಗುವುದು, ಸಿಡುಕುವುದು, ತಪ್ಪಿತಸ್ಥ ಭಾವನೆ ಮುಂತಾದವು ಉಂಟಾಗಬಹುದು.

ಇಂತಹ ಸಮಸ್ಯೆಗಳನ್ನು ಗಮನ ವಹಿಸಿ ಮನೆಯವರು ಕೂಡಲೇ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕು. ಈ ಖಿನ್ನತೆ ಅತಿಯಾದಾಗ ಆತ್ಮಹತ್ಯೆಯ ಪ್ರಯತ್ನಗಳು ನಡೆಯುತ್ತವೆ. ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸುವಂತಿಲ್ಲ. ಇದಕ್ಕೆ ಮಾತ್ರೆಯ ಚಿಕಿತ್ಸೆ ಮತ್ತು ಮಾತಿನ ಚಿಕಿತ್ಸೆ ಎರಡೂ ಅತ್ಯಗತ್ಯ.

ಈ ಹೆಂಗಸಿನೊಂದಿಗೆ ಮಾತನಾಡಿದಾಗ, ಆಕೆ ಹದಿನೈದು ವರ್ಷಗಳ ಹಿಂದಿನ ಒಂದು ಸಣ್ಣ ಘಟನೆ ಹಂಚಿಕೊಂಡರು... ಶಾಲೆಯಲ್ಲಿರುವಾಗ ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದರಂತೆ. ಆ ಹುಡುಗ ಸುಮಾರು ವರ್ಷಗಳ ನಂತರ ಊರಿಗೆ ಬಂದಾಗ ಅವನನ್ನು ಹೋಗಿ ಮಾತನಾಡಿಸಬೇಕು ಎಂದು ಅನ್ನಿಸಿತ್ತು. ಅವನನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಿದ್ದಾಯಿತು; ಆದರೆ, ಈ ವಿಷಯವನ್ನು ಗಂಡನಿಗೆ ಹೇಳಲಿಲ್ಲ. ಮದುವೆಯಾದ ಹೆಂಗಸು ಈ ರೀತಿ, ಈ ಹಿಂದೆ ಸಣ್ಣವಳಿದ್ದಾಗ ಇಷ್ಟಪಟ್ಟ ವ್ಯಕ್ತಿಯನ್ನು ಹೋಗಿ ನೋಡಿದ್ದು ದೊಡ್ಡ ತಪ್ಪು ಎಂದು ಆಕೆಗೆ ಈಗ ಅನ್ನಿಸತೊಡಗಿತ್ತು. ಆ ಕಾರಣದಿಂದ ಅವಳ ಮನಸ್ಸಿನಲ್ಲಿ ಹುದುಗಿಸಿಟ್ಟಿದ್ದ ಇದೇ ವಿಷಯವನ್ನು ಪದೇಪದೆ ಯೋಚನೆ ಮಾಡುತ್ತಿದ್ದರು.

ನನ್ನ ಬಳಿ ಮನೋವೈದ್ಯಕೀಯ ಸಲಹೆಗೆ ಬಂದಾಗ, ಇವರಿಗೆ ಈ ವಿಷಯಗಳನ್ನು ಮನಸ್ಸು ಬಿಚ್ಚಿ ಮಾತನಾಡಲು, ಚರ್ಚಿಸಲು ಅನುವು ಮಾಡಿಕೊಟ್ಟೆ. ಹಲವೊಮ್ಮೆ ಮನಸ್ಸಿನಲ್ಲಿರುವ ವಿಚಾರಗಳನ್ನು ಮರೆಮಾಚದೆ ಮಾತನಾಡಿದಾಗ ಮನಸ್ಸು ಆರಾಮವಾಗುತ್ತದೆ. ನಾವು ಮನೋವೈದ್ಯರು ಈ ರೀತಿಯ ಪ್ರಕ್ರಿಯೆಯನ್ನು 'Ventilation' ಅನ್ನುತ್ತೇವೆ; A Problem shared is problem halved. A problem kept in mind is problem doubled. ಘಟನೆ ಹೇಳಿಕೊಂಡ ನಂತರ ಆಕೆ ಸ್ವಲ್ಪ ಆರಾಮಾಗಿ ನಿಟ್ಟುಸಿರುಬಿಟ್ಟರು. ಕೊನೆಯಲ್ಲಿ, ಹದಿನೈದು ದಿನಗಳ ಖಿನ್ನತೆ ನಿವಾರಕ ಮಾತ್ರೆಗಳನ್ನು ಕೊಟ್ಟೆ.

ಈ ಲೇಖನ ಓದಿದ್ದೀರಾ?: ಇತ್ತೀಚೆಗೆ ಮಕ್ಕಳು ಪದೇಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಏಕೆ?; ಇಲ್ಲಿದೆ ಕಾರಣ ಮತ್ತು ಪರಿಹಾರ

ಮೆದುಳಿನ ನರವಾಹಕಗಳಲ್ಲಿನ ಬದಲಾವಣೆಗಳಿಂದ, ಋತುಸ್ರಾವ ನಿಲ್ಲುವಾಗ ಆಗುವ ರಸದೂತಗಳ ಬದಲಾವಣೆಗಳಿಂದ ಸಾಮಾನ್ಯವಾಗಿ ಒಳಜನ್ಯ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಕಾರಣವಿಲ್ಲದೆಯೂ ಬರಬಹುದು. ಮಹಿಳೆಯರು ಈ ಒಳಜನ್ಯ ಖಿನ್ನತೆಯ ಬಗ್ಗೆ ತಿಳಿದುಕೊಂಡಿರುವುದು ಒಳ್ಳೆಯದು. ಕಾಯಿಲೆ ತೀವ್ರವಾಗುವ ಮುನ್ನವೇ ಗುರುತಿಸಿದಲ್ಲಿ ಒಳ್ಳೆಯದು. ಕಾಯಿಲೆ ತೀವ್ರವಾಗಿ, ಆತ್ಮಹತ್ಯೆಯ ಯೋಚನೆಗಳು ಬರುವಾಗ ಅಥವಾ ರೋಗಿ ಇತರರಿಗೆ ತೊಂದರೆ ಮಾಡಲು ತೊಡಗಿದಾಗ ಹಲವೊಮ್ಮೆ ಆಸ್ಪತ್ರೆಗೆ ದಾಖಲು ಮಾಡಬೇಕಾಗುತ್ತದೆ. ಕೆಲವೊಮ್ಮೆ ವಿದ್ಯುತ್ ಕಂಪನ ಚಿಕಿತ್ಸೆ (Modified Electroconvulsive Therapy) ಕೊಡಬೇಕಾಗುತ್ತದೆ.

ಇಂತಹ ಕಾಯಿಲೆಗಳ ಸುತ್ತ ಮೂಢನಂಬಿಕೆಗಳಿಗೇನೂ ಕೊರತೆ ಇಲ್ಲ. ಈಗಷ್ಟೇ ಹೇಳಿದ ಮಹಿಳೆಯ ಮನೆಯವರು - ಈಕೆ ಸುಮ್ಮನಿರುವುದು, ಬಿಕ್ಕಿಬಿಕ್ಕಿ ಅಳುವುದು, ಊಟ ಮಾಡದಿರುವುದನ್ನು ನೋಡಿ ಯಾರೋ ಮಾಟ ಮಾಡಿಸಿದ್ದಾರೆ ಎಂದುಕೊಂಡು, ಒಂದಷ್ಟು ಸ್ಥಳಗಳಿಗೆ ಓಡಾಡುತ್ತ ಸಮಯ ವ್ಯರ್ಥ ಮಾಡಿದ್ದರು!

ಯಾವುದೇ ಬಗೆಯ ಮಾಟ-ಮಂತ್ರಗಳಿಂದ ಮಾನಸಿಕ ಕಾಯಿಲೆಗಳು ಬರುವುದಿಲ್ಲ. ಈ ಮಾಟ-ಮಂತ್ರ ಎನ್ನುವುದು ಶುದ್ಧ ಸುಳ್ಳು. ಅಮಾಯಕ ಜನರ ಬಲಹೀನತೆಯನ್ನು ಉಪಯೋಗಿಸಿ ಇಂತಹ ವಿಚಾರಗಳನ್ನು ತಲೆಗೆ ತುಂಬಿ, ಅವೈಜ್ಞಾನಿಕ ಆಚರಣೆಗಳನ್ನು ಮಾಡಿ ಈ ಕಾಯಿಲೆ ಉಲ್ಬಣಗೊಳ್ಳುವಂತೆ ಮಾಡಲಾಗುತ್ತದೆ. ಇದನ್ನು ಜನಸಾಮಾನ್ಯರು ಗಮನದಲ್ಲಿಟ್ಟುಕೊಳ್ಳಬೇಕು.

ಕೆಲವೊಮ್ಮೆ ಹೊರಗಿನವರು ಇಲ್ಲಸಲ್ಲದ ಸಲಹೆಗಳನ್ನು ಕೊಡುತ್ತಾರೆ. ಈ ಮಹಿಳೆಯ ನೆರೆಮನೆಯವರು ಹೇಳಿದ ಹಾಗೆ, "ಮಾನಸಿಕ ಕಾಯಿಲೆಗೆ ಕೊಡಲಾಗುವ ಮಾತ್ರೆಗಳನ್ನು ಜೀವನಪರ್ಯಂತ ತೆಗೆದುಕೊಳ್ಳಬೇಕಾಗುತ್ತದೆ, ಆ ಮಾತ್ರೆಗಳು ಅಡಿಕ್ಷನ್ ಆಗುತ್ತವೆ, ಅವು ನಿದ್ರಾಗುಳಿಗೆಗಳು..." ಮುಂತಾದ ಅಪಪ್ರಚಾರ ನಡೆಯುತ್ತಲೇ ಇರುತ್ತದೆ. ಜನಸಾಮಾನ್ಯರು ತಿಳಿದುಕೊಳ್ಳಬೇಕಿರುವ ವಿಷಯವೇನೆಂದರೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ ದೈಹಿಕ ಕಾಯಿಲೆಗಳಿಗೆ ತೆಗೆದುಕೊಳ್ಳುವ ಹಾಗೆಯೇ ಮಾನಸಿಕ ಕಾಯಿಲೆಗಳಿಗೂ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಕ್ಕರೆ ಕಾಯಿಲೆ ದೇಹದ ಇನ್ಸುಲಿನ್ ಎಂಬ ಹಾರ್ಮೋನ್ ಕೊರತೆಯಿಂದ ಅಥವಾ ಇರುವ ಇನ್ಸುಲಿನ್ ಅನ್ನು ಸಮಗ್ರವಾಗಿ ಉಪಯೋಗಿಸುವ ಸಾಮರ್ಥ್ಯವನ್ನು ದೇಹ ಕಳೆದುಕೊಳ್ಳುವುದರಿಂದ (Insulin Resistance) ಬರುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ಹಾಗೆಯೇ - ಖಿನ್ನತೆ ಎಂಬ ಕಾಯಿಲೆ ಕೂಡ ಮಿದುಳಿನ ಕೆಲವು ನರವಾಹಕಗಳ (Neurotransmitters) ಅಸಮತೋಲನದಿಂದ ಬರುತ್ತದೆ ಎಂbuದು ವೈಜ್ಞಾನಿಕ ಸಂಶೋಧನೆಗಳ ನಂತರ ತಿಳಿದುಬಂದಿರುವ ವಿಚಾರ. ಅದರಂತೆ, ಈ ನರವಾಹಕಗಳ ಉತ್ಪಾದನೆ ಮಾಡುವುದಕ್ಕೋಸ್ಕರ ಖಿನ್ನತೆ ನಿವಾರಕ ಮಾತ್ರೆಗಳನ್ನು ವೈದ್ಯರು ನೀಡುತ್ತಾರೆ.

Image

ಋತುಸ್ರಾವದ ನಂತರ ಪ್ರಾರಂಭವಾಗಿರುವ ಖಿನ್ನತೆ ಅದೇ ಮೊದಲ ಬಾರಿಗೆ ಜೀವನದಲ್ಲಿ ಬಂದಿದ್ದರೆ, ಸುಮಾರು ಒಂದು ವರ್ಷಗಳ ಕಾಲ ಚಿಕಿತ್ಸೆ ಬೇಕಾಗುತ್ತದೆ. ಪದೇಪದೆ ಅವಧಿಗೊಂದು ಬಾರಿ ಬರುವ ಖಿನ್ನತೆಯಲ್ಲಿ ಮಾತ್ರ ವೈದ್ಯರು ಬಹಳಷ್ಟು ವರ್ಷಗಳ ಕಾಲ ಖಿನ್ನತೆ ನಿವಾರಕ ಮಾತ್ರೆಗಳನ್ನು ಕೊಡುತ್ತಾರೆ. ಅಲ್ಪ ಮಟ್ಟದ ಖಿನ್ನತೆ ಇರುವಾಗ, ಕೆಲವು ಬಗೆಯ ಮಾತಿನ ಚಿಕಿತ್ಸೆಗಳು (ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ) ಸಹಾಯಕ್ಕೆ ಬರುತ್ತದೆ.

ನಮ್ಮ ಜೀವನದ ಭೂತಕಾಲದಲ್ಲಿ ನಡೆದುಹೋದ ಘಟನೆಗಳ ಬಗ್ಗೆ ನಕಾರಾತ್ಮಕ ಯೋಚನೆಗಳು, ವರ್ತಮಾನದ ಸಂದರ್ಭಗಳಲ್ಲಿ ನಡೆಯುತ್ತಿರುವ ಎಲ್ಲ ವಿಷಯಗಳೂ ನಕಾರಾತ್ಮಕವಾಗಿಯೇ ನಡೆಯುತ್ತಿವೆ ಹಾಗೂ ಭವಿಷ್ಯದಲ್ಲಿ ತನಗೆ ಏನೂ ಒಳ್ಳೆಯದಾಗುವುದಿಲ್ಲ ಎಂಬ ಅಪನಂಬಿಕೆಯನ್ನು ಹೆಚ್ಚಿನ ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳು ಹೊಂದಿರುತ್ತಾರೆ. ಅವರಲ್ಲಿ ಇರುವ Cognitive Distortions ಅಂದರೆ, ವಿರೂಪಗೊಂಡ ಯೋಚನೆಗಳನ್ನು ರೋಗಿಯ ಗಮನಕ್ಕೆ ತಂದು, ಅವುಗಳನ್ನು ಬದಲಿಸಲು ಯಾವ ರೀತಿ ಪ್ರಯತ್ನಿಸಬಹುದು ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಈ ಬಗ್ಗೆ ನುರಿತ ಮನೋವೈದ್ಯರು ಅಥವಾ ಮನಶ್ಶಾಸ್ತ್ರಜ್ಞರು ಸಹಾಯ ಮಾಡಬಹುದು.

ಊಟ ತಿಂಡಿ ಬಿಟ್ಟಿದ್ದು, ಆತ್ಮಹತ್ಯೆ ಪ್ರಯತ್ನ ಮಾಡುತ್ತಿದ್ದು, ಬಹಳಷ್ಟು ಉದ್ರೇಕಗೊಂಡ ರೋಗಿಗಳಿಗೆ ಮಾತ್ರೆ ಚಿಕಿತ್ಸೆಯೇ ಪ್ರಮುಖವಾಗಿರುತ್ತದೆ. ಇದನ್ನು ಜನಸಾಮಾನ್ಯರು ನೆನಪಿನಲ್ಲಿಟ್ಟುಕೊಳ್ಳಬೇಕು.

ನಿಮಗೆ ಏನು ಅನ್ನಿಸ್ತು?
4 ವೋಟ್