ಹಳ್ಳಿ ಹಾದಿ | ಕೃಷಿ ಕಸಕ್ಕೆ ಸಮವಾಗಿ ಹೋಯಿತೇ?

farmer

ಝಗಮಗಿಸುವ ವಿಮಾನ ನಿಲ್ದಾಣ, ಅಭಿವೃದ್ಧಿಯ ತುತ್ತತುದಿಯ ಗೋಪುರಗಳು ನಿರ್ಮಾಣವಾಗುವುದು ರೈತರ ಮೇಲೆ ಕಲ್ಲ ಚಪ್ಪಡಿ ಎಳೆದಾಗಲೇ ತಾನೇ? ಸ್ವಾಧೀನವಾದ ಭೂಮಿಯಲ್ಲಿ ಅಭಿವೃದ್ಧಿ ಇಲ್ಲ! ಅನ್ನ, ತರಕಾರಿ, ಹಣ್ಣು, ಹೂವು ಬೆಳೆದು ದೇಶದ ಆಹಾರ ಭದ್ರತೆಗೆ ಕೊಡುಗೆ ನೀಡುತ್ತಿದ್ದವರನ್ನೇ ಬೇಡುವವರನ್ನಾಗಿಸುವ ಅಭಿವೃದ್ಧಿ ಯಾರಿಗಾಗಿ?

ಕರ್ನಾಟಕದಲ್ಲಿ ಭೂಸುಧಾರಣಾ ಕಾನೂನಿಗೆ ತಿದ್ದುಪಡಿಗಳನ್ನು ತರಹೊರಟಿದ್ದಾಗ ‘ನಮ್ಮೂರ ಭೂಮಿ ನಮಗಿರಲಿ’ ಜನಪರ ಸಂಘಟನೆಯು ಒಂದು ಸಾರ್ವಜನಿಕ ವಕಾಲತ್ತು ಮಾಡಿತ್ತು. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಮತ್ತು ಕೃಷಿ ತಜ್ಞರು, ಪರಿಸರ ತಜ್ಞರಿದ್ದ ಒಂದು ಪ್ಯಾನೆಲ್‌ ರಚಿಸಿ ಸಾರ್ವಜನಿಕ ಅಹವಾಲಿಗೆ ಅವಕಾಶ ನೀಡಲಾಗಿತ್ತು. ಇಲ್ಲಿ ರಾಜ್ಯದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗಗಳಿಂದ ಕೈಗಾರಿಕೆಗೆ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದ ರೈತರು ತಮ್ಮ ಪಡಿಪಾಟಲನ್ನು ಹಂಚಿಕೊಂಡಿದ್ದರು. ತಮಗೆ ನ್ಯಾಯ ಬೇಕೆಂದು ಅಂಗಲಾಚಿದ್ದರು. ಭೂಮಿ ಕಳೆದುಕೊಂಡವರಿಗೆ ನ್ಯಾಯ ಸಿಗುವುದಿರಲಿ, ಅವರ ಸಂಖ್ಯೆಯನ್ನೇ ಮತ್ತಷ್ಟು, ಇನ್ನಷ್ಟು ಹೆಚ್ಚು ಮಾಡಲು ಸರ್ಕಾರ ಪಣತೊಟ್ಟಿರುವುದು ಖೇದಕರ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೃಷಿ ಭೂಮಿಯನ್ನು ಕೊಡುವುದಿಲ್ಲ ಎಂದು ಅಲ್ಲಿನ ರೈತರು ಹೋರಾಡುತ್ತಿದ್ದು, ಅಲ್ಲಿ ಚಾಮರಾಜನಗರದ ಕಳ್ಳಂಬಳ್ಳದಲ್ಲಿ ರೈತರು ಸಂಘಟಿತರಾಗುತ್ತಿರುವಾಗ, ಇತ್ತ ದಕ್ಷಿಣಕನ್ನಡದ ಹಚ್ಚ ಹಸಿರು ಕೃಷಿ ಭೂಮಿಯ ಮೇಲೆ ಸರಕಾರದ ವಕ್ರದೃಷ್ಟಿ ಬಿದ್ದಿದೆ. ಕೈಗಾರಿಕಾ ವಲಯಕ್ಕಾಗಿ ಮೂಲ್ಕಿ ತಾಲೂಕಿನ ಮೂರು ಗ್ರಾಮಗಳ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿದೆ.

‘ನಮ್ಮೂರ ಭೂಮಿ ನಮಗಿರಲಿ’ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಚಾಮರಾಜನಗರದ ಕಳ್ಳಂಬಳ್ಳಿ ಮತ್ತು ಬದನಗುಪ್ಪೆ ಕೃಷಿಕರು ಬಂದಿದ್ದರು. ಅಲ್ಲಿ 15 ವರ್ಷಗಳ ಹಿಂದೆಯೇ ಕೆಐಎಡಿಬಿ 1,800 ಹೆಕ್ಟೇರ್ ಕೃಷಿ ಭೂಮಿಯನ್ನು ಕಿತ್ತುಕೊಂಡಿತ್ತು. ಇದೂವರೆಗೆ ಆ ಜಾಗದಲ್ಲಿ ಒಂದೇ ಒಂದು ಕೈಗಾರಿಕೆಯೂ ಬಂದಿಲ್ಲ. ಕೃಷಿಕರ ಮಕ್ಕಳಿಗೆ ಒಂದೊಂದು ಉದ್ಯೋಗ ಕೊಡುತ್ತೇನೆಂಬ ಭರವಸೆ ನೀರ ಮೇಲಿನ ಗುಳ್ಳೆಯಾಗಿತ್ತು. ಕೈಗಾರಿಕೆಯೇ ಬಂದಿಲ್ಲವೆಂದ ಮೇಲೆ ಉದ್ಯೋಗ ಕೊಡುವುದು ಎಲ್ಲಿಂದ?

Image
migration
ಸಾಂಧರ್ಭಿಕ ಚಿತ್ರ

ಒಟ್ಟು 600 ಕುಟುಂಬಗಳು ಭೂಮಿಯನ್ನು ಕಳೆದುಕೊಂಡಿವೆ. ಕೈಗೆ ಸಿಕ್ಕ ಮೊತ್ತವು ಕರಗಿಹೋಗಿದೆ. ಇಂದು ಅವರಿಗೆ ಉದ್ಯೋಗವೆಂದರೆ ಕೂಲಿಯೊಂದೇ. ಈಗ ಮತ್ತೆ 366 ರೈತರ 1,189 ಎಕರೆ ಭೂಮಿಯನ್ನು ಕಸಿದುಕೊಳ್ಳಲು ಕೆಐಎಡಿಬಿ ಮುಂದಾಗಿದೆ. ಕೃಷಿ ಭೂಮಿ ಮಾತ್ರವಲ್ಲ, ಕೃಷ್ಣ ಮೃಗದಂಥ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆವಾಸ ಸ್ಥಾನವನ್ನೂ ಕಸಿದುಕೊಳ್ಳಲು ಹೊರಟಿದೆ ಸರ್ಕಾರ.

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನೀರಾವರಿ ಯೋಜನೆಗಳಿಗಾಗಿ ರೈತರನ್ನು ಕೇಳದೆಯೇ ಭೂಮಿಯನ್ನು ಕಿತ್ತುಕೊಳ್ಳಲಾಯಿತು. ನೀರಾವರಿಯೆಂದರೆ ಅಭಿವೃದ್ಧಿ ತಾನೇ? ಅದಕ್ಕೆ ಜನರು ತ್ಯಾಗ ಮಾಡಬೇಕು. ಪರಿಹಾರದ ಮಾತೇ ಇಲ್ಲ. ಅಧಿಕಾರಶಾಹಿಯನ್ನು ಪ್ರಶ್ನಿಸಲಾಗದೇ ಭೂಮಿ ಕಳೆದುಕೊಂಡವರು ಕೆಲಸ ಹುಡುಕುತ್ತ, ಪರ ಊರಿಗೆ, ಪರ ರಾಜ್ಯಕ್ಕೆ ಹೊರಟುಹೋದರು. ಉಳಿದುಕೊಂಡವರು ಭಿಕ್ಷೆ ಬೇಡುವ ಸ್ಥಿತಿಗೆ ಬಂದರು.

ಈ ಲೇಖನ ಓದಿದ್ದೀರಾ?: ಹಳ್ಳಿ ಹಾದಿ | ಅನ್ನ ಕಪ್ಪಾದೊಡೆ ಉಣಲುಂಟೆ?

ಹೊಸಪೇಟೆಯಲ್ಲಿ ರೈತರು ಕಳೆದ 60 ವರ್ಷಗಳಲ್ಲಿ ಎರಡು ಬಾರಿ ಭೂಮಿಯನ್ನು ಕಳೆದುಕೊಂಡಿದ್ದಾರೆ. ತುಂಗ-ಭದ್ರೆಗೆ ಡ್ಯಾಮ್ ಕಟ್ಟಿದಾಗ ಭೂಮಿ ಕಳೆದುಕೊಂಡವರಿಗೆ 1953ರಲ್ಲಿ ಸರಕಾರವು ಐದೈದು ಎಕರೆ ಭೂಮಿಯನ್ನು ಕೊಟ್ಟಿತ್ತು. 2010ರಲ್ಲಿ ‘ಎಕ್ಸ್ ಇಂಡಿಯಾ’ ಎಂಬ ಖಾಸಗಿ ಕಂಪನಿಯು ಸರ್ಕಾರದ ಪರವಾನಗಿ ಪಡೆಯುವ ಗೋಜಿಗೂ ಹೋಗದೆ ಕೆಲಸ ಕೊಡುತ್ತೇನೆಂಬ ಭರವಸೆ ಮತ್ತು ಎಕರೆಗೆ 5 ಲಕ್ಷ ಕೊಟ್ಟು ಈ ಎಲ್ಲಾ ಭೂಮಿಯನ್ನೂ ಕಿತ್ತುಕೊಂಡಿತು. ಯಾರಿಗೂ ಕೆಲಸ ಸಿಕ್ಕಿಲ್ಲ. ಒಂದಷ್ಟು ಕೈಗಾರಿಕೆಗಳು ಬಂದು ಇಡೀ ಪ್ರದೇಶವನ್ನೆಲ್ಲ ಧೂಳಿನಿಂದ ಮುಚ್ಚಿಹಾಕಿವೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಯಾರಿಗೆ ಗೊತ್ತಿಲ್ಲ? 1995-96ರಲ್ಲಿ ಒಂದೊಂದು ಎಕರೆಗೆ 5 ಲಕ್ಷ ಹಣ ಕೊಟ್ಟು ರೈತರಿಂದ ಸರ್ಕಾರವು ಭೂಮಿ ಖರೀದಿಸಿತ್ತು. ಅಂದು ಭೂಮಿ ಕೊಟ್ಟು ಐದು ಲಕ್ಷ ಪಡೆದ ರೈತರೆಲ್ಲರ ಕೈ ಈಗ ಖಾಲಿಯಾಗಿದೆ. ಅಕ್ಕುಪೇಟೆ ಮತ್ತು ರಾಮನಹಳ್ಳಿಗಳ ಎಲ್ಲ ಭೂಮಿಯನ್ನು ವಶಪಡಿಸಿಕೊಂಡಾಗಿದೆ. ಆದರೆ, ಹಳ್ಳಿ ಇದೆ, ಜನರಿದ್ದಾರೆ. ಉಳಲೂ ಭೂಮಿ ಇಲ್ಲ, ಸತ್ತವರನ್ನು ಹೂಳಲು ಕೂಡ ಜಾಗವಿಲ್ಲ. ಕೂಲಿ ಕೆಲಸದ ಹೊರತಾಗಿ ಇನ್ನಾವುದೇ ಕೆಲಸವೂ ಊರಿನವರಿಗೆ ಸಿಕ್ಕಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತೀ ದಿನಕ್ಕೆ ಕೋಟಿಗಟ್ಟಲೆ ಹಣ ಗಳಿಸುತ್ತದೆ. ಭೂಮಿಯನ್ನು ಕೊಟ್ಟವರಿಗೆ ಆ ಲಾಭದಲ್ಲೇಕೆ ಪಾಲಿಲ್ಲ?

ಅದು ಬಹಳ ದೊಡ್ಡವರ ಕತೆಯಾಯಿತು ಬಿಡಿ. ಝಗಮಗಿಸುವ ದೊಡ್ಡ ವಿಮಾನ ನಿಲ್ದಾಣ, ಅಭಿವೃದ್ಧಿಯ ತುತ್ತತುದಿಯ ಗೋಪುರ ನಿರ್ಮಾಣವಾಗುವುದು ಕೆಳಕ್ಕಿರುವ ರೈತರ ಮೇಲೆ ಕಲ್ಲಿನ  ಚಪ್ಪಡಿ ಎಳೆದಾಗಲೇ ತಾನೇ? ವಿದ್ಯುತ್ತಿಗಾಗಿ ಕೃಷಿ ಭೂಮಿಯನ್ನು ಮುಳುಗಿಸುವುದು, ಕೈಗಾರಿಕೆಗಳ ಸ್ಥಾಪನೆಗೆ ಮತ್ತೆ ಕೃಷಿ ಭೂಮಿಯನ್ನು ವಶಕ್ಕೆ ಪಡೆಯುವುದು. ಇದು ಬಹಳವಾಯಿತೆಂದು ಪ್ರತಿರೋಧಿಸಿದರೆ ತಗೊಳ್ಳಿ, ದಿಂಡಿಯಾಗಿ ಬೀಳುವ ಸೂರ್ಯ ಬಿಸಿಲಿನ ‘ಪರಿಸರ ಸ್ನೇಹಿ’ ಸೋಲಾರ್ ವಿದ್ಯುತ್ ಉತ್ಪಾದಿಸುತ್ತೇವೆಂದು ಬಳ್ಳಾರಿಗೆ ಬಂದವು ಕಂಪನಿಗಳು.

Image
Solar

ಅವು ಕಿತ್ತುಕೊಂಡ ಭೂಮಿಯ ಪ್ರಮಾಣವೆಷ್ಟು ನೋಡಲು ನೀವು ಬಯಲು ನಾಡು ಬಳ್ಳಾರಿಗೆ ಬರಬೇಕು. ಸೌರಶಕ್ತಿ ಅಭಿವೃದ್ಧಿ ಕಾರ್ಪೋರೇಶನ್‌ಗಾಗಿ ಬಳ್ಳಾರಿ ಮತ್ತು ಪಾವಗಡಗಳಲ್ಲಿ ಸರಕಾರವು ಕೃಷಿಕರಿಂದ ಭೂಮಿಯನ್ನು ಖರೀದಿಸಿಲ್ಲ. ಬದಲಿಗೆ 28 ವರ್ಷಕ್ಕೆ ಲೀಸ್‌ನಲ್ಲಿ ತೆಗೆದುಕೊಂಡು ಸೌರ ಕಂಪನಿಗಳಿಗೆ ಕೊಟ್ಟಿತು. ಕಂಪನಿಗಳು ಹೊಲಗಳಲ್ಲಿದ್ದ ಎಲ್ಲಾ ಗಿಡಮರಗಳನ್ನೂ ನೆಲಕ್ಕುರುಳಿಸಿದವು. ಹೊಲ ಹೊಲಗಳ ಮಧ್ಯದ ಗುರುತು ಕಲ್ಲುಗಳನ್ನೆಲ್ಲ ಎತ್ತಿ ಬಿಸಾಕಲಾಗಿದೆ. 28 ವರ್ಷಗಳ ನಂತರ ಹಿರಿಯರೆಲ್ಲ ಮರೆಯಾಗಿ, ಅವರ ಮಕ್ಕಳೇನಾದರೂ ತಮ್ಮ ಹೊಲವನ್ನು ಹುಡುಕಿಕೊಂಡು ಹೋದರೆ ಯಾವುದು ತಮ್ಮ ಹೊಲವೆಂದು ಹೇಗೆ ಕಂಡುಹಿಡಿಯುತ್ತಾರೆ?

ಎರಡು ವರ್ಷಗಳ ಹಿಂದೆ ’ನಮ್ಮೂರ ಭೂಮಿ ನಮಗಿರಲಿ’ ಸಂಘಟನೆಯ ಸಾರ್ವಜನಿಕ ಜನಸಂವಾದದಲ್ಲಿ ಪ್ರಸ್ತಾಪವಾದ ಕೆಲವೇ ಉದಾಹರಣೆಗಳಿವು. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 'ಕೆಐಎಡಿಬಿ' ತನ್ನ ಬಳಿ ಇಟ್ಟುಕೊಂಡು ಹತ್ತಿಪ್ಪತ್ತು ವರ್ಷಗಳೇ ಕಳೆದುಹೋಗಿವೆ. ಅಲ್ಲಿ ಕೈಗಾರಿಕೆಗಳು ಬರುವ ಯಾವುದೇ ಸೂಚನೆ ಕಾಣುತ್ತಿಲ್ಲ. ಈಗ ಮತ್ತೆ ನವೆಂಬರ್ ಒಳಗಾಗಿ 50,000 ಎಕರೆ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನ ಪಡಿಸಿಕೊಳ್ಳುವ ಗುರಿಯಿರಿಸಿಕೊಂಡಿದೆ ಸರ್ಕಾರ.

ಕಲಬುರಗಿ, ಉಡುಪಿ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವಿವಿಧ ಹೋಬಳಿಗಳ ರೈತರಿಗೆ ಈಗಾಗಲೇ ನೋಟಿಸ್ ಹೋಗಿವೆ, ರೈತರು ತಕರಾರುಗಳಿದ್ದರೆ ತಿಳಿಸಬೇಕು ಎಂದು. ಹಣವೆಂದೂ ಕೈಯಲ್ಲಿರುವ ಭೂಮಿಗೆ ಸಾಟಿಯಲ್ಲ, ಈಗಾಗಲೇ ಹಣ ಪಡೆದು ಭೂಮಿ ಕೊಟ್ಟು ಹೋದವರು ಭಿಕಾರಿಗಳಾಗಿದ್ದಾರೆ. ಅತ್ತ ರೈತರ ಕುಟುಂಬಗಳು ಬೀದಿಗೆ, ಇತ್ತ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಯಾವುದೇ ಅಭಿವೃದ್ಧಿ ಇಲ್ಲ! ಇದಾವ ನ್ಯಾಯದ ಪರಿ? ಅನ್ನ, ತರಕಾರಿ, ಹಣ್ಣು ಹೂವು ಬೆಳೆದು ದೇಶದ ಆಹಾರ ಭದ್ರತೆಗೆ ಕೊಡುಗೆ ನೀಡುತ್ತಿದ್ದವರನ್ನೇ ಬೇಡುವವರನ್ನಾಗಿಸುವ ಅಭಿವೃದ್ಧಿ ಇದು! ಕೆಐಎಡಿಬಿಯಲ್ಲಿ ಪಾಳು ಬಿದ್ದಿರುವ ಭೂಮಿ ಎಷ್ಟು ಎಂಬ ಆಡಿಟ್ ಮಾಡಿಕೊಳ್ಳದೆಯೇ ಮತ್ತಷ್ಟು ಭೂಸ್ವಾಧೀನ ಮಾಡುತ್ತ ಪ್ರಾದೇಶಿಕ ಆಹಾರ ಭದ್ರತೆಗೂ ಸ್ಥಳೀಯ ಪರಿಸರಕ್ಕೂ ದೊಡ್ಡ ಪೆಟ್ಟು ಕೊಡುತ್ತ ಸರ್ಕಾರ ತನ್ನ ಬೇಜವಾಬ್ದಾರಿಯ ಪರಮಾವಧಿಯನ್ನು ತೋರಿಸುತ್ತಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್