ಹೆಣ್ಣೆಂದರೆ... | ಗಳಸ್ಯ-ಕಂಠಸ್ಯ ನಿರ್ದೇಶಕಿಯರು (ಭಾಗ 2): ಕನಸಲ್ಲೂ ಸಿನಿಮಾ ಕನವರಿಸುವ ರಶ್ಮಿ

Rashmi S 3

ಕದ್ದು ಸಿನಿಮಾ ನೋಡಲು ಹೋದಾಗ ಮನೆಯಲ್ಲಿ ಸಿಕ್ಕಿಹಾಕಿಕೊಂಡು ಹೊಡೆತ ತಿಂದಿದ್ದಿದೆ. ಓದು ಮುಗಿದ ನಂತರ ಮಗಳು ಸಿನಿಮಾ ಎಂದು ಅಲೆಯುವುದು ಮನೆಯವರಿಗೆ ಇಷ್ಟವಿರಲಿಲ್ಲ. ಇನ್ನು, ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಸಾಕಷ್ಟು ಸವಾಲುಗಳ ಪರಿಚಯವೂ ಆಗಿದೆ. ಆದರೆ ಇದ್ಯಾವುದೂ, ಸಿನಿಮಾ ಮೇಲಿನ ಪ್ರೀತಿಯನ್ನು ಕಡಿಮೆ ಮಾಡಲಾಗಲಿಲ್ಲ

ಚಿಕ್ಕಂದಿನಲ್ಲೇ ಸಿನಿಮಾ ಹುಚ್ಚು ಹಚ್ಚಿಕೊಂಡು ಶಾಲೆಗೆ ಚಕ್ಕರ್ ಹೊಡೆಯುತ್ತಿದ್ದ ಈ ಪೋರಿಯ ಹೆಸರು ರಶ್ಮಿ ಎಸ್. ಮಂಡ್ಯದ ಕೆ ಎಂ ದೊಡ್ಡಿಯವರು. ಬಾಲ್ಯ ಕಳೆದಿದ್ದು ಮತ್ತು ಬದುಕಿನ ಕನಸುಗಳನ್ನು ಕಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ.

ಕೆಎಸ್‌ಆರ್‌ಟಿಸಿ ಡ್ರೈವರ್ ಆಗಿದ್ದ ಅಪ್ಪ ಕೆಲಸದಲ್ಲಿ ಹೈರಾಣಾಗಿದ್ದಾಗ, ರಶ್ಮಿ ಥಿಯೇಟರ್ ಕಡೆ ಹಾಯ್ದರೆ ಮನೆಯವರ ಕೈಗೆ ಸಿಕ್ಕುಬೀಳುತ್ತಿರಲಿಲ್ಲ. ಚಾಮರಾಜಪೇಟೆಯಲ್ಲಿ ತಮ್ಮ ಶಾಲೆಗೆಂದು ಹೋಗುವುದು, ಹೊಸ ಸಿನಿಮಾ ಬಂದಾಗ ಚಿಕ್ಕಪ್ಪನೊಡನೆ ಪಕ್ಕದಲ್ಲಿದ್ದ ಉಮಾ ಥಿಯೇಟರ್‌ನಲ್ಲಿ ಹಾಜರಿ ಹಾಕುವುದು, ಶಾಲೆಯ ವೇಳೆಯಲ್ಲಿ ಚಿಕ್ಕಪ್ಪ ಬಂದು ಸುಳ್ಳೆ-ಪಳ್ಳೆ ಕಾರಣ ಹೇಳಿ ಸಿನೆಮಾಗೆ ಕರೆದುಕೊಂಡು ಹೋಗುವುದು... ಒಟ್ಟಾರೆ ರಶ್ಮಿಗೆ ಖುಷಿಯೋ ಖುಷಿ.

ಪ್ರಾಥಮಿಕ ಶಾಲೆಯ ನಂತರ ಊರಿಗೆ ಮರಳಿ, ಅಲ್ಲಿ ಹೈಸ್ಕೂಲ್‌ಗೆ ಹೋಗಲು ಶುರು ಮಾಡಿದಾಗ ಸಿನಿಮಾ ನೋಡುವ ಚಟಕ್ಕೆ ಬ್ರೇಕ್ ಬಿದ್ದಿತ್ತು. ಆದರೂ ಕೆಲವು ಬಾರಿ ಕದ್ದು ಹೋದಾಗ ಮನೆಯಲ್ಲಿ ಸಿಕ್ಕಿಹಾಕಿಕೊಂಡು ಹೊಡೆತ ತಿಂದಿದ್ದೂ ಇದೆ. ಪುಟ್ಟಣ್ಣ ಕಣಗಾಲ್ ಅವರ ಸಿನಿಮಾದ ಸ್ತ್ರೀ ಪಾತ್ರಗಳು ಎಂದರೆ ಅಂದಿಗೂ ಇಂದಿಗೂ ಹೇಳಲಾಗದಷ್ಟು ಇಷ್ಟ.

Image
Rashmi S 2

ಡಿಪ್ಲೊಮಾ ಓದು ಮುಗಿದ ಕೂಡಲೇ ಸಿನಿಮಾದತ್ತ ಹೊರಳುವ ಅವಕಾಶ ಬಂದೊದಗಿತ್ತು. ಇವರ ಕನಸುಗಳ ಬಗ್ಗೆ ಗೊತ್ತಿದ್ದ ಚಿಕ್ಕಪ್ಪ, ತಮ್ಮ ಸ್ನೇಹಿತ ಮಾಡುತ್ತಿದ್ದ ಸಿನಿಮಾಗೆ ರಶ್ಮಿ ಅವರನ್ನು ಸಹ ನಿರ್ದೇಶಕಿಯಾಗಿ ಸೇರಿಸಿದರು. ‘ಪ್ರಿಯಾ ಮೈ ಡಾರ್ಲಿಂಗ್,' ‘ಉಲ್ಲಾಸದ ಹೂ ಮಳೆ’ ಮುಂದಾದ ಚಿತ್ರಗಳಲ್ಲಿ ರಶ್ಮಿ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ

ಡಿಪ್ಲೊಮಾ ನಂತರ ಕಂಪನಿಗಳಲ್ಲಿ ಕೆಲಸ ಮಾಡಿ ತಿಂಗಳಿಗೆ ಸಂಬಳ ಎಣಿಸುವುದು ಬಿಟ್ಟು ಮಗಳು ಸಿನಿಮಾ ಎಂದು ಅಲೆಯುವುದು ಮನೆಯವರಿಗೆ ಸುತಾರಾಂ ಇಷ್ಟವಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಸಿನೆಮಾ ರಂಗ ಎಂದರೇನೇ ಕೆಟ್ಟದು ಎಂಬ ಭಾವನೆ ಅವರಲ್ಲಿ ಇದ್ದಿದ್ದರಿಂದ ಸಿನಿಮಾ ಕ್ಷೇತ್ರವನ್ನು ಬಿಡಲೇಬೇಕು ಎಂಬ ಒತ್ತಡ ಶುರುವಾಯಿತು. ಮನೆಯವರ ಒತ್ತಡಕ್ಕೆ ಮಣಿದು ಕೆಲ ಕಾಲ ಎಂಜಿನಿಯರ್ ಆಗಿ ಕೆಲಸ. ಆದರೆ, ಸಿನಿಮಾ ವ್ಯಾಮೋಹ ಬಿಡಬೇಕಲ್ಲ? ಹಗಲು ಕಂಪನಿ ಕೆಲಸ, ರಾತ್ರಿ ಸಿನೆಮಾ ಸ್ಕ್ರಿಪ್ಟ್, ಡೈಲಾಗ್ ಕೆಲಸ! ಆ ನಂತರ ಸೆನ್ಸಾರ್ ಕೆಲಸ ಕಲಿತದ್ದಾಯಿತು. ಸಿನಿಮಾ ಬಗ್ಗೆ ಇದ್ದ ತೀವ್ರ ಆಸಕ್ತಿಯಿಂದ ಕತೆ, ನಿರ್ದೇಶನ, ಸ್ಕ್ರೀನ್ ಪ್ಲೇ, ಮೇಕಪ್ ಅಸಿಸ್ಟೆಂಟ್ ಆಗಿ ಕೂಡ ಪಳಗಿದರು. ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಬೇಕು ಎಂಬ ಕನಸಿಗೆ ಧೈರ್ಯ ಬಂದಿದ್ದೇ ಈ ಬಹುಮುಖ ಕಲಿಕೆಯಿಂದ.

ಈ ವೇಳೆ ರಶ್ಮಿ ಅವರ ಕನಸಿಗೆ ಸಿನಿಮಾ ಪಯಣಕ್ಕೆ ಜೊತೆಯಾಗಿ ಸಿಕ್ಕವರೇ ಪೂರ್ಣ ಶ್ರೀ. ಇವರಿಬ್ಬರೂ ಎಷ್ಟು ಜಾಣೆಯರೆಂದರೆ, ಸಿನಿಮಾ ಮಾತ್ರ ಹೊಟ್ಟೆ ತುಂಬಿಸಲಾರದು ಎಂದು ಬದುಕಿಗಾಗಿ ಬೇರೆ ಕೆಲಸವನ್ನು ಮಾಡುತ್ತಲೇ, ಸಿನಿಮಾ ಕನಸುಗಳನ್ನು ನನಸು ಮಾಡಿಕೊಳ್ಳುತ್ತ ಹೋದವರು. ವರ್ಷ ಪೂರ್ತಿ ದುಡಿಯುವುದು, ನಂತರ ಆ ದುಡ್ಡನ್ನು ಸಿನಿಮಾಗೆ ಹಾಕುವುದು. ಈ ಹಾದಿಯಲ್ಲಿ ಇವರು ಕಟ್ಟಿದ 'ಸಂಯುಕ್ತ ಸ್ಟುಡಿಯೋಸ್'ನಲ್ಲಿ ಕಡಿಮೆ ವೆಚ್ಚದ ಸಿನಿಮಾ ಮಾಡಲು ಬೇಕಾದ ಎಲ್ಲ ಉಪಕರಣಗಳಿವೆ ಎಂಬುದನ್ನು ಕೇಳಲು ಹೆಮ್ಮೆಯಾಗುತ್ತದೆ.

Image
Rashmi S 5

"ಕೆಲವು ನಿರ್ಮಾಪಕರಿಗೆ ಹೆಣ್ಣುಮಕ್ಕಳ ಸಿನಿಮಾಗೆ ಹಣ ಹೂಡುವುದೆಂದರೆ, ನಾವು ನಿರ್ದೇಶಕಿಯರು ಅವರ ಜೊತೆ ಎಲ್ಲ ರಾಜಿಗೂ ಸಿದ್ಧವಾಗಿರಬೇಕು ಅಥವಾ ನಾಯಕಿಯರನ್ನು ಇಂತಹ ರಾಜಿಗೆ ಒಪ್ಪಿಸಬೇಕು. ಇದೆರಡರ ಬದ್ಧ ವಿರೋಧಿ ನಾನು. ಆದ್ದರಿಂದಲೇ ಹಠಕ್ಕೆ ಬಿದ್ದು ನಮ್ಮದೇ ಪ್ರೊಡಕ್ಷನ್ ಶುರು ಮಾಡಿದ್ದು," ಎನ್ನುತ್ತಾರೆ ರಶ್ಮಿ.

"ಮೊದಲು ಸಹ ನಿರ್ದೇಶಕಿಯಾಗಿ ಕೆಲಸ ಮಾಡುವಾಗ, 'ನಿಮಗಂತಲೇ ಬೇರೆ ರೂಮ್ ಕೊಡಲಾಗುವುದಿಲ್ಲ' ಎಂದಾಗ, ನಾನು ಹುಡುಗರ ಜೊತೆ ಹುಡುಗರಂತೆ ಇರಲು ಶುರು ಮಾಡಿದೆ. ಯಾವುದಕ್ಕೂ ಹೆದರದ, ಏನಕ್ಕೂ ಜಗ್ಗದ ಗಟ್ಟಿ ಮನೋಭಾವ ಅಲ್ಲಿನ ವಾತಾವರಣದಿಂದಲೇ ಬೆಳೆದಿದ್ದು...."

"ನಾನು-ಪೂರ್ಣ ಇಬ್ಬರೂ ಸೇರಿ ಸಿನಿಮಾ ಮಾಡುವಾಗ ಅನೇಕ ಚಾಲೆಂಜಸ್ ಎದುರಾಗಿದ್ದಿದೆ. ಏನೇ ಆದರೂ ಸಿನಿಮಾ ಚೆನ್ನಾಗಿ ಬರಬೇಕು ಎಂಬ ಉದ್ದೇಶ ನಮ್ಮದಾಗಿದ್ದರಿಂದ ನಮ್ಮ ಸಿನಿಮಾಗಳಿಗೆ ಇಂದು ಇಷ್ಟು ಪ್ರಶಸ್ತಿಗಳು ಬರಲು ಕಾರಣವಾಯಿತು. ಅನೇಕ ನಿರ್ಮಾಪಕರು ಹತ್ತು ಲಕ್ಷದ ಮೇಲೆ ಹಣ ಹೂಡಲು ಸಿದ್ಧರಿರುವುದಿಲ್ಲ. ಆ ಹಣದಲ್ಲಿ ಮೊದಲ ಪ್ರಿಂಟ್ ತೆಗೆದುಕೊಡುವುದು ಕೂಡ ಕಷ್ಟ ನಮಗೆ. ಇನ್ನು, ರಿಟರ್ನ್ ಕೊಡುವ ಪ್ರಶ್ನೆಗೆ ಉತ್ತರಿಸಲು ಅಸಾಧ್ಯ. ಈ ಸಮಸ್ಯೆ ಚಿತ್ರರಂಗದ ಹಲವು ನಿರ್ದೇಶಕಿಯರಿಗಿದೆ. ಆದರೆ, ಛಲ ಬಿಡದ ಪ್ರಯತ್ನ ಮಾತ್ರ ನಮ್ಮನ್ನು ಮುನ್ನಡೆಸುತ್ತಿದೆ," ಎನ್ನುತ್ತಾರವರು.

ಈ ಲೇಖನ ಓದಿದ್ದೀರಾ?: ಹೆಣ್ಣೆಂದರೆ... | ಗಳಸ್ಯ-ಕಂಠಸ್ಯ ನಿರ್ದೇಶಕಿಯರು (ಭಾಗ 1): ಪೂರ್ಣ ಶ್ರೀ

"ಆರಂಭದಲ್ಲಿ, 'ನಿನ್ನ ಕೈಲಿ ಕ್ಯಾಮರಾ ಎತ್ತೋಕೆ ಶಕ್ತಿ ಇಲ್ಲ, ರೀಡಿಂಗ್ ಕೊಡು ಸಾಕು, ಚಪ್ಪಲಿ ಎತ್ಕೊಂಡು ಬಾ, ಛತ್ರಿ ಹಿಡ್ಕೊ ಬಾ' ಎಂಬ ಮಾತುಗಳು ಮಾಮೂಲಿ. ನಾವು ಅದರಾಚೆಗೆ ಬೆಳೆಯಬೇಕು. ನಮ್ಮ ಕನಸುಗಳ ಬೆನ್ನತ್ತಬೇಕು. ಅದಕ್ಕೂ ಮೊದಲು ಎಲ್ಲ ಕೆಲಸಗಳನ್ನು ಆಸಕ್ತಿಯಿಂದ ಕಲಿಯಬೇಕು," ಎಂದು ಅನುಭವ ಹಂಚಿಕೊಳ್ಳುತ್ತಾರೆ.

"ಕೇರಳ ಸರ್ಕಾರದಂತೆ ಕರ್ನಾಟಕ ಸರ್ಕಾರ ಸಹ ಬಜೆಟ್‌ನಲ್ಲಿ ಸಿನಿಮಾದವರಿಗೆ, ಈ ಕ್ಷೇತ್ರದಲ್ಲಿ ದುಡಿಯುವ ಹೆಣ್ಣುಮಕ್ಕಳಿಗೆ ಧನ ಸಹಾಯ ಮಾಡಬೇಕು. ಆಗ ಹೆಚ್ಚು ಮಂದಿ ಹೆಣ್ಣುಮಕ್ಕಳು ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತಾರೆ. ಗಂಡು ಧ್ವನಿಯೇ ಎದ್ದು ಕಾಣುವ ಸಿನಿಮಾಗಳ ಸಂಖ್ಯೆ ಹಾಗಾದರೂ ತಗ್ಗಬಹುದು," ಎಂಬುದು ಅವರ ಗಟ್ಟಿ ಅಭಿಪ್ರಾಯ.

"ಚಿತ್ರರಂಗಕ್ಕೆ ಬರುವ ಹೆಣ್ಣುಮಕ್ಕಳು ಮಧ್ಯವರ್ತಿಗಳಿಂದ ದೂರವಿರಬೇಕು. ವ್ಯಕ್ತಿಯ ಪ್ರಾಮಾಣಿಕತೆಯನ್ನು ಪರೀಕ್ಷಿಸಿಯೇ ಮುಂದಡಿ ಇಡಬೇಕು," ಎಂಬುದು ಯುವ ಪ್ರತಿಭೆಗಳಿಗೆ ಅವರ ಕಿವಿಮಾತು.

Image
Rashmi S 4

"ಮಿಕ್ಸಿಂಗ್, ಎಡಿಟಿಂಗ್, ಸೌಂಡ್ ಡಿಸೈನ್‌ನಲ್ಲಿ ನಮ್ಮ ರಾಜ್ಯ ದೊಡ್ಡ ಹಬ್ ಆಗಿ ಬೆಳೆಯಬೇಕು. ಇಂಥದ್ದಕ್ಕೆಲ್ಲ ಚೆನ್ನೈ ಕಡೆ ನೋಡುವ, ಅನಿವಾರ್ಯವಾಗಿ ಅಲ್ಲಿಗೆ ಓಡುವ ನಮ್ಮ ಪರಿಸ್ಥಿತಿ ಬದಲಾಗಬೇಕು. ರಾತ್ರಿಯೆಲ್ಲ ನಾವು ಅಲ್ಲಿ ಕೂತು ಕಳೆಯಬೇಕಾದ ಪರಿಸ್ಥಿತಿ ಕೊನೆಯಾಗಬೇಕು," ಎಂಬುದು ಅವರಾಸೆ.

ರಶ್ಮಿ ಅವರ ಕನಸುಗಳು ನನಸಾಗಲಿ. ಶಿವಣ್ಣ, ರಮ್ಯಾರಿಗೆ ಅವರು ಮಾಡಿಟ್ಟುಕೊಂಡ ಸ್ಕ್ರಿಪ್ಟ್ ಪರದೆ ಮೇಲೆ ನಾವು ನೋಡುವಂತಾಗಲಿ. ಪೂರ್ಣ ಶ್ರೀ ಮತ್ತು ರಶ್ಮಿ ಅವರ ಕನಸುಗಳ ದಿಕ್ಕು ಸದ್ಯಕ್ಕೆ ಬೇರೆ-ಬೇರೆಯಾದರೂ ಮುಂದೊಮ್ಮೆ ಸಂಧಿಸಲಿ.

ನಿಮಗೆ ಏನು ಅನ್ನಿಸ್ತು?
4 ವೋಟ್