ವರ್ತಮಾನ | ನೈತಿಕ ಶಿಕ್ಷಣದ ಬಗೆಗೆ ಮಾತನಾಡುವ ನೈತಿಕತೆಯನ್ನು ಸಚಿವ ಬಿ ಸಿ ನಾಗೇಶ್ ಉಳಿಸಿಕೊಂಡಿದ್ದಾರೆಯೇ?

ತಮ್ಮ ನಡೆ-ನುಡಿಗಳಲ್ಲಿ ನೈತಿಕತೆ ಪ್ರದರ್ಶಿಸಲು ನಿರಂತರವಾಗಿ ಸೋಲುತ್ತಿರುವ ರಾಜಕಾರಣಿಗಳು ಮತ್ತು ಮಠಾಧೀಶರು, ನೈತಿಕತೆ ಅಥವಾ ನೈತಿಕ ಶಿಕ್ಷಣದ ಕುರಿತು ಮಾತನಾಡತೊಡಗಿದರೆ ನಮಗೆ ಆಘಾತವಾಗದಿದ್ದರೂ ಆತಂಕವಾದರೂ ಆಗಬೇಕಲ್ಲವೇ? ಇಲ್ಲವಾದರೆ, ನಾವೂ ಅವರದೇ ಹಾದಿಯಲ್ಲಿ ನಡೆಯಲಾರಂಭಿಸಿದ್ದೇವೆ ಎಂದೇ ಅರ್ಥ!

ಶಾಲಾ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಕಾರ್ಯಸೂಚಿಯ ಜಾರಿಗೆ ಪೂರ್ವಭಾವಿಯಾಗಿ ಎರಡು ವಾರಗಳ ಹಿಂದೆ (09/01/2023) ನಡೆಸಿದ ಸಮಾಲೋಚನಾ ಸಭೆಯಲ್ಲಿ ರಾಜ್ಯದ ವಿವಿಧ ಮಠಾಧೀಶರು ನೀಡಿದ ಸಲಹೆಗಳ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಅದರಲ್ಲೂ, ಶಾಲೆಗಳಲ್ಲಿ ಸಾತ್ವಿಕ ಆಹಾರವನ್ನಷ್ಟೇ ನೀಡಬೇಕು ಎಂಬ - ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯ ಸಲಹೆ ಸಹಜವಾಗಿಯೇ ಟೀಕೆಗೆ ಗುರಿಯಾಗಿದೆ. ಈ ನಡುವೆ, "ಮುಂಬರುವ ಶೈಕ್ಷಣಿಕ ವರ್ಷದಿಂದಲೇ ನೈತಿಕ ಮೌಲ್ಯಗಳ ಶಿಕ್ಷಣ ನೀಡಲಾಗುವುದು," ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪ್ರತಿಪಾದಿಸುತ್ತಿದ್ದಾರೆ.

ನೈತಿಕ ಶಿಕ್ಷಣದೆಡೆಗೆ ಶಿಕ್ಷಣ ಸಚಿವರು ಮತ್ತು ಸರ್ಕಾರ ತೋರುತ್ತಿರುವ ಒಲವು ಗಮನಾರ್ಹವಾದುದು. ಸರ್ಕಾರ ನೈತಿಕ ಶಿಕ್ಷಣ ಜಾರಿಗೆ ಹೊರಡುವ ಮುನ್ನ, 'ನೈತಿಕತೆ ಎಂದರೇನು?' 'ನೈತಿಕ ಮೌಲ್ಯಗಳು ಯಾವುವು?' 'ನೈತಿಕ ಮೌಲ್ಯಗಳನ್ನು ಮುಖ್ಯಮಂತ್ರಿ ಮತ್ತು ಸಚಿವರು ಚಾಚೂ ತಪ್ಪದೆ ಅಳವಡಿಸಿಕೊಂಡಿದ್ದಾರೆಯೇ?' ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುವ ಅಗತ್ಯವಿದೆ. ಈಗಾಗಲೇ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ) ಎಂಜಿನಿಯರಿಂಗ್ ಪದವಿ ಹಂತದ ಶಿಕ್ಷಣದಲ್ಲಿ 'ಜಾಗತಿಕ ಮಾನವೀಯ ಮೌಲ್ಯಗಳು (Universal Human Values)' ಎಂಬ ವಿಷಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದನ್ನು ಕಡ್ಡಾಯಗೊಳಿಸಿದೆ. ಈ ವಿಷಯದ ಪಠ್ಯವನ್ನು ಸತ್ಯ, ಪ್ರೀತಿ ಹಾಗೂ ಸಹಾನುಭೂತಿಯ ತಳಪಾಯದ ಮೇಲೆ ರೂಪಿಸಲಾಗಿದೆ ಎಂದು ಎಐಸಿಟಿಇ ಹೇಳಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ನೈತಿಕ ಮೌಲ್ಯಗಳ ಶಿಕ್ಷಣ ಕೂಡ ಈ ಮೂರು ಅಂಶಗಳನ್ನೇ ಮುಖ್ಯಭೂಮಿಕೆಯಾಗಿ ಪರಿಗಣಿಸುವುದೇ ಆದರೆ, ಮೊದಲಿಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಇವುಗಳನ್ನು ತಮ್ಮ ಸಾರ್ವಜನಿಕ ನಡವಳಿಕೆಯಲ್ಲಿ ಪ್ರದರ್ಶಿಸುತ್ತಿರುವರೇ ಎಂದು ಪರಿಶೀಲಿಸುವುದು ಸೂಕ್ತವಲ್ಲವೇ?

ರೋಹಿತ್ ಚಕ್ರತೀರ್ಥ

ಶಿಕ್ಷಣ ಸಚಿವರು ‘ಸತ್ಯ'ಕ್ಕೆ ಬದ್ಧರಾಗಿರುವರೇ? ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ವಿವಾದಗಳಿಗೆ ಎಡೆಮಾಡಿಕೊಟ್ಟಾಗ, ಅದರ ನೇತೃತ್ವ ವಹಿಸಿದ್ದ ರೋಹಿತ್ ಚಕ್ರತೀರ್ಥ ಅವರಿಗೆ ಇರುವ ಶೈಕ್ಷಣಿಕ ಅರ್ಹತೆಯಾದರೂ ಏನು ಎಂಬ ಸರಳ ಪ್ರಶ್ನೆ ಶಿಕ್ಷಣ ಸಚಿವರಿಗೆ ಎದುರಾಯಿತು. ಇದಕ್ಕೆ ಅವರು ನೀಡಿದ ಉತ್ತರ ಸತ್ಯಕ್ಕೆ ಹತ್ತಿರವಿತ್ತೇ? ಅದುವರೆಗೂ ಶೈಕ್ಷಣಿಕ ವಲಯಕ್ಕೆ ಅಪರಿಚಿತವಾಗಿದ್ದ 'ಸಿಇಟಿ ಪ್ರೊಫೆಸರ್' ಎಂಬ ಹೊಸ ಪದನಾಮವನ್ನೇ ಸೃಷ್ಟಿಸಿ ನಗೆಪಾಟಲಿಗೀಡಾದರು. ಸಚಿವರು ಸತ್ಯ ಹೇಳಬೇಕೆನ್ನುವ ನೈತಿಕ ಮೌಲ್ಯಕ್ಕೆ ಬದ್ಧರಾಗಿ ತಮಗೆ ತಿಳಿದಿರುವುದನ್ನಷ್ಟೇ ಹೇಳಬಹುದಿತ್ತಲ್ಲವೇ? ಸ್ವತಃ ಸುಳ್ಳು ಹೇಳುವವರಿಗೆ ಮಕ್ಕಳು ಮಾತ್ರ ಸತ್ಯವನ್ನಷ್ಟೇ ನುಡಿಯಬೇಕು ಎಂದು ಹೇಳುವ ನೈತಿಕತೆ ಇದೆಯೇ?

ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗಬಹುದೇ ಎಂಬ ಅಂಶವೂ ದೊಡ್ಡ ವಿವಾದವಾಗಿ ಬೆಳೆದು ನಿಂತ ಸಂದರ್ಭದಲ್ಲಿ ಬಿ ಸಿ ನಾಗೇಶ್ ಅವರು ವರ್ತಿಸಿದ ರೀತಿ, ಅವರಲ್ಲಿ 'ಪ್ರೀತಿ' ಮತ್ತು 'ಸಹಾನುಭೂತಿ' ಎಂಬ ಮಾನವೀಯ ಮೌಲ್ಯಗಳು ಯಾವ ಪರಿ ಬೇರೂರಿವೆ ಎಂಬುದನ್ನು ಸಮಾಜಕ್ಕೆ ಸಾರಿ ಹೇಳಿತು. ಸಾಕ್ಷರತಾ ಪ್ರಮಾಣ ಹೆಚ್ಚಿಸುವುದೇ ಮೊದಲ ಧ್ಯೇಯವಾಗಿ, ಅನಕ್ಷರಸ್ಥರಾಗಿದ್ದ ವಯಸ್ಕರಿಗೂ ಓದು-ಬರೆಯುವುದನ್ನು ಹೇಳಿಕೊಡುವುದು ಒಂದು ಕಾಲದಲ್ಲಿ ಸರ್ಕಾರಗಳ ಆದ್ಯತೆಯಾಗಿತ್ತು. ಆದರೆ, ಈ ವಿವಾದದ ವೇಳೆ, ಹಿಜಾಬ್-ಬುರ್ಕಾ ಧರಿಸಿ ಬರುವರೆಂಬ ನೆಪ ಮುಂದೊಡ್ಡಿ ಕೆಲ ಹೆಣ್ಣುಮಕ್ಕಳ ಓದಿಗೆ ತಡೆಯೊಡ್ಡುವ ಕೆಲಸವೂ ನಡೆಯಿತು. ಹಿಜಾಬ್ ವಿವಾದ ಮುಸ್ಲಿಂ ವಿದ್ಯಾರ್ಥಿನಿಯರೆಡೆಗೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರಿಗೆ ಎಷ್ಟರಮಟ್ಟಿಗೆ 'ಸಹಾನುಭೂತಿ' ಇದೆ ಎಂಬುದನ್ನು ಜಗಜ್ಜಾಹೀರುಗೊಳಿಸಿತು.

ಹಿಜಾಬ್ ವಿವಾದ

ಒಂದು ವೇಳೆ, ಧಾರ್ಮಿಕ ಸಂಕೋಲೆಗಳಿಂದ ವಿದ್ಯಾರ್ಥಿಗಳನ್ನು ಬಿಡಿಸಿ ಅವರಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವುದೇ ಸರ್ಕಾರ ಮತ್ತು ಶಿಕ್ಷಣ ಸಚಿವರ ಆದ್ಯತೆಯಾಗಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸುವ ಮಠಾಧೀಶರಿಂದ ಸಲಹೆ ಪಡೆದು ಶಿಕ್ಷಣದಲ್ಲಿ ಏನನ್ನು ಅಳವಡಿಸಬೇಕು ಎಂಬುದನ್ನು ನಿರ್ಧರಿಸುತ್ತಿದ್ದರೇ? ಸತ್ಯ, ಪ್ರೀತಿ ಮತ್ತು ಸಹಾನುಭೂತಿ ಎಂಬ ಮಾನವೀಯ ಮೌಲ್ಯಗಳನ್ನು ಪಾಲಿಸುವುದೇ ಆಗಿದ್ದರೆ, ಪಠ್ಯಪುಸ್ತಕ ಪರಿಷ್ಕರಣೆಗೆ ಅನರ್ಹ ವ್ಯಕ್ತಿಯನ್ನು ನೇಮಿಸಿದ್ದಲ್ಲದೆ, ಆತ ನೀಡಿದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಮುಂದಾದ ತಪ್ಪಿಗೆ ನೈತಿಕ ಹೊಣೆ ಹೊತ್ತು ಬಿ ಸಿ ನಾಗೇಶ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕಿತ್ತು. ಅದರ ಬದಲಿಗೆ ಮತ್ತೊಮ್ಮೆ ಮಾಡಿದ ತಪ್ಪನ್ನು ಪುನರಾವರ್ತಿಸುವುದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಹೊಣೆಗೇಡಿ ವರ್ತನೆಯಲ್ಲವೇ?

ಮಕ್ಕಳಿಗೆ ಏನನ್ನು ಕಲಿಸಬೇಕು ಎಂಬುದನ್ನು ನಿರ್ಧರಿಸಲು ಸರ್ಕಾರ ಸಮಾಲೋಚಿಸಬೇಕಿರುವುದು ಶಿಕ್ಷಣ ತಜ್ಞರೊಂದಿಗೋ ಅಥವಾ ಮಠಾಧೀಶರೊಂದಿಗೋ? ನೈತಿಕ ಶಿಕ್ಷಣ ಜಾರಿ ಕುರಿತಂತೆ ಸರ್ಕಾರಕ್ಕೆ ಸಲಹೆ ನೀಡುವಷ್ಟು ನೈತಿಕತೆಯನ್ನು ಸಭೆಯಲ್ಲಿ ಭಾಗವಹಿಸಿದ್ದ ಮಠಾಧೀಶರಾದರೂ ಉಳಿಸಿಕೊಂಡಿರುವರೇ? ತಾವು ಪ್ರತಿನಿಧಿಸುವ ಜಾತಿ ವರ್ತುಲದಿಂದ ಹೊರಬಂದು ಎಲ್ಲರ ಒಳಿತಿಗಾಗಿ ಯೋಚಿಸುವ ವಿಶಾಲ ಮನೋಭಾವ ಹೊಂದಿರದ ಮಠಾಧೀಶರಿಗೇ ನೈತಿಕ ಶಿಕ್ಷಣದ ಅಗತ್ಯವಿರುವಾಗ, ಅವರಿಂದ ಸಲಹೆ ಪಡೆದುಕೊಳ್ಳುವುದು ಹಾಸ್ಯಾಸ್ಪದವೆನಿಸುವುದು ಸಹಜವೇ.

'ಆಪರೇಷನ್ ಕಮಲ' 2021

ಚುನಾವಣೆಯಲ್ಲಿ ಬೇರೆ ಪಕ್ಷಗಳಿಂದ ಆರಿಸಿ ಬಂದ ಶಾಸಕರಿಂದ ರಾಜಿನಾಮೆ ಕೊಡಿಸಿ, ಅದುವರೆಗೂ ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ಉರುಳಿಸಿ ಅಧಿಕಾರ ಹಿಡಿದವರು ನೈತಿಕತೆ ಕುರಿತು ಮಾತನಾಡಿದರೆ ಅದನ್ನು ಗಂಭೀರವಾಗಿ ಸ್ವೀಕರಿಸಬೇಕೇ?

ಮಕ್ಕಳಲ್ಲಿ ನಾವು ಬಿತ್ತಲು ಹೊರಡುವ ಮೌಲ್ಯಗಳು, ಮೊದಲಿಗೆ ನಮ್ಮ ನಡೆ-ನುಡಿಗಳಲ್ಲಿ ಅಭಿವ್ಯಕ್ತಗೊಳ್ಳಬೇಕಲ್ಲವೇ? ಕೇವಲ ತರಗತಿಗಳಲ್ಲಿ, ಪಠ್ಯಗಳ ಮೂಲಕ ಮಾತ್ರ ನೈತಿಕ ಮೌಲ್ಯಗಳು ಅಸ್ತಿತ್ವದಲ್ಲಿದ್ದರೆ, ಅವುಗಳನ್ನು ಪಾಲಿಸಲು ಮಕ್ಕಳಿಗೆ ಹೇಗೆ ಸಾಧ್ಯ? ಮನೆ, ಶಾಲೆ ಹಾಗೂ ಒಟ್ಟಾರೆ ಸಮಾಜದಲ್ಲಿ ಬೇರೂರದ ಮೌಲ್ಯಗಳನ್ನು ಮಕ್ಕಳಲ್ಲಿ ಬೇರೂರಿಸುವುದಾದರೂ ಹೇಗೆ? ಮಕ್ಕಳನ್ನು ಸರಿದಾರಿಗೆ ತರುವ ಕುರಿತು ಯೋಚಿಸುವ ಮೊದಲು, ನಾವು ಸರಿ ದಾರಿಯಲ್ಲಿದ್ದೇವೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೇ?

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | 'ನ್ಯಾಯದೇವತೆ'ಗೂ ಹೆಣ್ಣುಮಕ್ಕಳಿಗೂ ಇರುವ ಅಂತರ ಕಡಿಮೆಯಾಗುವ ಬಗೆ ಎಂತು?

ಸತ್ಯ, ಪ್ರೀತಿ ಹಾಗೂ ಸಹಾನುಭೂತಿ ಎಂಬ ಮೌಲ್ಯಗಳಿಗೆ ನಮ್ಮ ಸಮಾಜದಲ್ಲಿ ಬೆಲೆ ಇದೆಯೇ? ನಾವು ಮಾಡುವ ರಾಜಕೀಯದ ಆಯ್ಕೆಗಳು ಇವುಗಳನ್ನು ಆಧರಿಸಿವೆಯೇ? ಸುಳ್ಳು ಹೇಳುವವರಿಗೆ, ದ್ವೇಷ ಹರಡುವವರಿಗೆ ಹಾಗೂ ಕಷ್ಟದಲ್ಲಿರುವವರ ಕುರಿತು ಸಹಾನುಭೂತಿ ತೋರದವರಿಗೆ ನಾವು ಮತ ಚಲಾಯಿಸುವುದಿಲ್ಲವೆಂಬ ನಿಲುವು ತಾಳಿ, ಅದಕ್ಕೆ ಬದ್ಧರಾಗುವ ಮೂಲಕ ಮೊದಲಿಗೆ ನೈತಿಕತೆ ಗಳಿಸಿಕೊಳ್ಳಬೇಕಲ್ಲವೇ?

2016ರ ನವೆಂಬರ್ 8ರಂದು 500 ಮತ್ತು 1000 ರೂಪಾಯಿ ಮೌಲ್ಯದ ನೋಟುಗಳ ರದ್ದತಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವನ್ನು ನಾವೆಲ್ಲ ಮತ್ತೊಮ್ಮೆ ಆಲಿಸಬೇಕಿದೆ. ಅಂದು ಅವರು ನೀಡಿದ್ದ ಆಶ್ವಾಸನೆಗಳಲ್ಲಿ ಎಷ್ಟೆಲ್ಲ ನಿಜವಾಗಿವೆ ಎಂಬುದನ್ನು ಪರಿಶೀಲಿಸಲೇಬೇಕು. ಆನಂತರ ನಮ್ಮ ಪ್ರಧಾನಿ ಸತ್ಯ, ಪ್ರೀತಿ ಹಾಗೂ ಸಹಾನುಭೂತಿ ಎಂಬ ಮೌಲ್ಯಗಳನ್ನು ನಿಜಕ್ಕೂ ಅಳವಡಿಸಿಕೊಂಡಿರುವರೇ ಎಂದು ನಿರ್ಧರಿಸಬೇಕು.

ಪ್ರಧಾನಿ ನರೇಂದ್ರ ಮೋದಿ

ತಮ್ಮ ನಡೆ-ನುಡಿಗಳಲ್ಲಿ ನೈತಿಕತೆ ಪ್ರದರ್ಶಿಸಲು ನಿರಂತರವಾಗಿ ಸೋಲುತ್ತಿರುವ ರಾಜಕಾರಣಿಗಳು ಮತ್ತು ಮಠಾಧೀಶರು, ನೈತಿಕತೆ ಅಥವಾ ನೈತಿಕ ಶಿಕ್ಷಣದ ಕುರಿತು ಮಾತನಾಡತೊಡಗಿದರೆ ನಮಗೆ ಆಘಾತವಾಗದಿದ್ದರೂ ಆತಂಕವಾದರೂ ಆಗಬೇಕಲ್ಲವೇ? ಇಲ್ಲವಾದರೆ, ನಾವೂ ಅವರದೇ ಹಾದಿಯಲ್ಲಿ ನಡೆಯಲಾರಂಭಿಸಿದ್ದೇವೆಯೇ ಎನ್ನುವ ಅನುಮಾನವಾದರೂ ಮೂಡಬೇಕಲ್ಲವೇ?

ಶೈಕ್ಷಣಿಕ ವಿಚಾರಗಳಲ್ಲಿ ಸಲಹೆ ಪಡೆಯಲು ಶಿಕ್ಷಣ ತಜ್ಞರ ಜೊತೆ ಸಮಾಲೋಚಿಸಬೇಕೆನ್ನುವ ಕನಿಷ್ಠ ವಿವೇಕವೂ ಇಲ್ಲದ ಸಚಿವರಲ್ಲಿ ಮೊದಲಿಗೆ ನೈತಿಕ ಮತ್ತು ಕರ್ತವ್ಯ ಪ್ರಜ್ಞೆ ಜಾಗೃತವಾದರೆ ರಾಜ್ಯಕ್ಕೆ ಒಳಿತು. ಇಲ್ಲವಾದಲ್ಲಿ, ಮತ್ತಷ್ಟು 'ಸಿಇಟಿ ಪ್ರೊಫೆಸರ್'ಗಳು ರಾಜ್ಯದಲ್ಲಿ ಉದ್ಭವವಾಗುವ ಅಪಾಯವಿದೆ.

ಮುಖ್ಯ ಚಿತ್ರ - ಶಿಕ್ಷಣ ಸಚಿವ ಬಿ ಸಿ ನಾಗೇಶ್
ನಿಮಗೆ ಏನು ಅನ್ನಿಸ್ತು?
0 ವೋಟ್
eedina app