ಮುಳ್ಳುಹಾದಿಗೆ ಮಣ್ಣು ಹೊತ್ತವರು | ನಿಷಿದ್ಧ ಗಡಿಗಳ ದಾಟಿದ ಡಾಕ್ಟರ್ ರುಕ್ಮಾಬಾಯಿ

Rukhmabai 6

ಈಗ್ಗೆ 160 ವರ್ಷಗಳ ಹಿಂದೆ ಕುಟುಂಬದ, ಕುಲದ, ಸಮಾಜದ ರೂಢಿ ಮುರಿದು, ತನ್ನ ಬುದ್ಧಿ ಬಲಿಯುವ ಮೊದಲೇ ವಿವಾಹವಾದ ಗಂಡನ್ನು ಗಂಡ ಎಂದೊಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ವಾದ ಹೂಡಿ ಕೋರ್ಟಿನಲ್ಲಿ ಗೆದ್ದದ್ದು; ಮದುವೆಗೆ ಹುಡುಗಿಯರಿಂದಲೂ 'ಸಮ್ಮತಿ’ ಪಡೆಯಬೇಕು ಎಂಬುದನ್ನು ತನ್ನ ಪ್ರಕರಣದ ಮೂಲಕ ರುಕ್ಮಾಬಾಯಿ ಎತ್ತಿ ಹಿಡಿದಿದ್ದು ಮಹಾನ್ ಕ್ರಾಂತಿ

ಬಾಲ್ಯ ವಿವಾಹ, ಒಳ ವಿವಾಹ ಹಾಗೂ ವಿಧವಾ ಪದ್ಧತಿಗಳು ಭಾರತೀಯ ವಿವಾಹ ವ್ಯವಸ್ಥೆಯ ಮುಖ್ಯ ಆಚರಣೆಗಳು. ಅವು ಮಹಿಳೆಗೆ ಆಯ್ಕೆಯ ಮುಕ್ತ ಅವಕಾಶ ನೀಡದೆ, ಹೆಣ್ಣೆಂದರೆ "ಒಪ್ಪಿಗೆ..." ಎಂದು ತಲೆ ಅಲ್ಲಾಡಿಸಬೇಕಾದವಳು ಎನ್ನುವಂತೆ ಮಾಡಿವೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಇಂಗ್ಲಿಷ್ ಭಾಷೆ, ಜ್ಞಾನಕ್ಕೆ ತೆರೆದುಕೊಂಡ ಭಾರತೀಯ ಸಮಾಜ ಸುಧಾರಕರ ಹೋರಾಟದ ಫಲವಾಗಿ ಸತಿ ಪದ್ಧತಿ ನಿಂತು ಹೋಗಿ, ವಿಧವಾ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂತು. 1829ರಲ್ಲಿ ಸತಿ ನಿರ್ಮೂಲನಾ ಕಾಯಿದೆ, 1856ರಲ್ಲಿ ವಿಧವಾ ಪುನರ್ವಿವಾಹ ಕಾಯಿದೆ ಜಾರಿಯಾದವು. ಆದರೂ ಬಾಲ್ಯ ವಿವಾಹ ಮತ್ತು ಒಳ ವಿವಾಹ ಪದ್ಧತಿಗಳು ಮುಂದುವರಿದುಕೊಂಡು ಬಂದವು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಾಗಲು 1930ರ ತನಕ ಕಾಯಬೇಕಾಯಿತು.

1860ರಲ್ಲಿ ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ ಭಾರತೀಯ ದಂಡ ಸಂಹಿತೆಯನ್ನು ರೂಪಿಸುತ್ತ, ಲೈಂಗಿಕ ಸಮಾಗಮಕ್ಕೆ (ಅಂದರೆ, ಆ ಮೂಲಕ ಮದುವೆ ಊರ್ಜಿತಗೊಳ್ಳುವುದಕ್ಕೆ) ಹೆಣ್ಣಿನ ಒಪ್ಪಿಗೆಯ ವಯಸ್ಸು ಕನಿಷ್ಠ 15-16 ವರ್ಷ ಇರಬೇಕೆಂದು ಹೇಳಿದಾಗ, ಭಾರತದಲ್ಲಿ ಕೋಲಾಹಲ ಉಂಟಾಯಿತು. ಎಲ್ಲ ಮದುವೆಗಳೂ ಕಾನೂನಿನ ಪ್ರಕಾರ ಅಸಿಂಧುವಾಗುವ ಅಪಾಯ ಒದಗಿತು. ಕೊನೆಗೆ 1861ರಲ್ಲಿ, 'ಒಪ್ಪಿಗೆ ವಯಸ್ಸು ಕಾಯ್ದೆ’ (ಏಜ್ ಆಫ್ ಕನ್ಸೆಂಟ್ ಬಿಲ್) ಜಾರಿಯಾದಾಗ ಹೆಣ್ಣಿಗೆ ಕನಿಷ್ಠ ಹತ್ತು ವರ್ಷ ಆಗಿರಬೇಕು ಎಂದಾಯಿತು.

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಘನತೆ ಇಲ್ಲದ ವೃತ್ತಿ ಬೇಡವೆಂದ ಹೋಮೈ ವ್ಯಾರಾವಾಲಾ

ಒಂದಾದ ಮೇಲೊಂದು ಪ್ರಕರಣಗಳು ನ್ಯಾಯಾಲಯದೆದುರು ಬಂದವು. ಆದರೆ, ಒಪ್ಪಿಗೆ ಪಡೆದು ಮದುವೆಯಾಗುವ ಪಾಶ್ಚಾತ್ಯ ಸಮಾಜದ 'ಒಪ್ಪಿಗೆ ವಯಸ್ಸು ಕಾಯ್ದೆ’ಯು ಭಾರತಕ್ಕೆ ಹೊಂದಿಕೊಳ್ಳುತ್ತಿರಲಿಲ್ಲ. ಎಲ್ಲ ವಿವಾಹಗಳೂ ಬಾಲ್ಯ ವಿವಾಹವೇ ಆಗಿದ್ದ ಕಾಲದಲ್ಲಿ ಮದುವೆಗೆ ಹೆಣ್ಣಿನ ಒಪ್ಪಿಗೆ ಪಡೆಯುವ ಪರಿಪಾಠವೇ ಇರಲಿಲ್ಲ. ಒಪ್ಪಿಗೆ ಎಂದರೆ, ಹುಡುಗ-ಹುಡುಗಿಯ ಪಾಲಕ-ಪೋಷಕರ ಒಪ್ಪಿಗೆಯೇ ಆಗಿತ್ತು. ಹಾಗಾಗಿ, ನ್ಯಾಯ ಕೇಳಿದ ಹೆಣ್ಣುಗಳು ಮತ್ತೆ ಮರಳಿ ಸಾಂಪ್ರದಾಯಿಕ ವೈವಾಹಿಕ ಬಂಧನದಲ್ಲೇ ಮುಂದುವರಿಯುವಂತಾಗಿತ್ತು. ಇಂಥ ಗೊಂದಲಮಯ ಸನ್ನಿವೇಶದಲ್ಲಿ ಒಬ್ಬ ದಿಟ್ಟ ಯುವತಿ, ಒಪ್ಪಿಗೆ ವಯಸ್ಸಿನ ಕಾಯ್ದೆಯ ದ್ವಂದ್ವಗಳನ್ನೂ, ದುರ್ಬಲ ಅಂಶಗಳನ್ನೂ ಬಯಲುಗೊಳಿಸಿ, ಹೆಣ್ಣು ಒಪ್ಪಿಗೆಯ ಅರ್ಥವನ್ನು ಮುನ್ನೆಲೆಗೆ ತಂದಳು. ಬಾಲ್ಯ ವಿವಾಹದ ಹೆಸರಿನ ಅನ್ಯಾಯವನ್ನು ಎತ್ತಿ ತೋರಿಸಿದಳು.

ಅವಳು ಮುಂಬಯಿಯ ರುಕ್ಮಾಬಾಯಿ. ಇವತ್ತಿಗೂ, ತಮ್ಮ ಆಶಯಗಳಿಗೆ ಹೊಂದುವಂತಹ ಬದುಕನ್ನು ರೂಪಿಸಿಕೊಳ್ಳಲು ಹೆಣಗುತ್ತಿರುವ ಅಸಂಖ್ಯ ಸೋದರಿಯರಿಗೆ ಸ್ಫೂರ್ತಿದಾಯಕವಾಗಬಲ್ಲ ದಿಟ್ಟೆ ಡಾ. ರುಕ್ಮಾಬಾಯಿ ಭಾರತದ ಮೊದಲ ತಲೆಮಾರಿನ ವೈದ್ಯೆಯೂ ಹೌದು.

ಈಗ್ಗೆ 160 ವರ್ಷಗಳ ಕೆಳಗೆ, ಮರಾಠಾ ಸಮಾಜದಲ್ಲಿ ಹುಟ್ಟಿದ ಹೆಣ್ಣಾಗಿ, ಕುಟುಂಬದ, ಕುಲದ, ಸಮಾಜದ ರೂಢಿ ಮುರಿದು ತನ್ನ ಬುದ್ಧಿ ಬಲಿಯುವ ಮೊದಲೇ ವಿವಾಹವಾದ ಗಂಡನ್ನು ಗಂಡ ಎಂದೊಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ವಾದ ಹೂಡಿ ಕೋರ್ಟಿನಲ್ಲೂ ಗೆದ್ದದ್ದು; ಮದುವೆಗೆ ಹುಡುಗಿಯರಿಂದ 'ಸಮ್ಮತಿ’ ಎಂಬ ಪದ ಬರಬೇಕೆನ್ನುವುದನ್ನು ತನ್ನ ಪ್ರಕರಣದ ಮೂಲಕ ರುಕ್ಮಾಬಾಯಿ ಎತ್ತಿ ಹಿಡಿದಿದ್ದು ಮಹಾನ್ ಕ್ರಾಂತಿಕಾರಿ ನಡೆ ಎನ್ನಬಹುದು. ಆಕೆಯ ಬದುಕಿನ ಹೆಜ್ಜೆ ಗುರುತುಗಳು ಸ್ವತಂತ್ರವಾಗತೊಡಗಿದ್ದ ಭಾರತದ ಅಸ್ವತಂತ್ರ ಹೆಣ್ಣುಗಳು ನಡೆಸಿದ ಸ್ವಾಯತ್ತತೆಯ ಹೋರಾಟದ ಕುರುಹುಗಳೂ ಹೌದು.

* * * * *

Image
Rukhmabai 4
ರುಕ್ಮಾಬಾಯಿ ಗೌರವಾರ್ಥವಾಗಿ ಗೂಗಲ್ ಡೂಡಲ್

ಮುಂಬೈನಲ್ಲಿ 1864ರಲ್ಲಿ ಹುಟ್ಟಿದ ರುಕ್ಮಾಬಾಯಿಗೆ ಎರಡು ವರ್ಷವಾದಾಗ ತಂದೆ ಜನಾರ್ದನ ಪಾಂಡುರಂಗ ತೀರಿಹೋದರು. ತಾಯಿ ಜಯಂತಿ ಬಾಯಿಗೆ ಆಗ 17 ವರ್ಷ. ಅಮ್ಮ, ಮಗಳು ಆರು ವರ್ಷಗಳನ್ನು ಕಷ್ಟದಲ್ಲಿ ಕಳೆದರು. ಬಳಿಕ ಸಮಾಜ ಸುಧಾರಕರಾಗಿದ್ದ ಡಾ. ಸಖರಾಂ ಅರ್ಜುನ್ ಎನ್ನುವವರನ್ನು ಜಯಂತಿ ಬಾಯಿ ವಿವಾಹವಾದರು. ಡಾ. ಸಖರಾಂ ಮುಂಬಯಿಯ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಕಲಿತು, 1858ರಲ್ಲಿ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಿ ಎಲ್‍ಎಂಪಿ ವೈದ್ಯರಾಗಿದ್ದರು. ಔಷಧೀಯ ಸಸ್ಯಗಳ ಬಗೆಗೆ ಅಪಾರ ಜ್ಞಾನ ಹೊಂದಿ, ಮೆಡಿಕಲ್ ಬಾಟನಿಯ ಬೋಧಕರಾಗಿ ಕೆಲಸ ಮಾಡುತ್ತಿದ್ದರು. ಮರಾಠಿಯಲ್ಲಿ ಪುಸ್ತಕ, ಲೇಖನಗಳನ್ನು ಬರೆಯುತ್ತಿದ್ದರು. ಥಿಯಾಸಫಿ ಸೊಸೈಟಿ ಸೇರಿ ನಿಯಮಿತವಾಗಿ ಸಭೆ, ಸಂವಾದಗಳಲ್ಲಿ ಭಾಗವಹಿಸುತ್ತಿದ್ದರು. ಸಮಾಜ ಸುಧಾರಕರಾಗಿದ್ದ ಅವರು ವಿಧವೆಯನ್ನು ವಿವಾಹವಾಗುವ ನಿರ್ಧಾರ ಮಾಡಿದ್ದರು. ಆಗ ಸುತಾರ (ಬಡಗಿ) ಸಮುದಾಯದಲ್ಲಿ ಮರು ಮದುವೆ, ವಿಧವಾ ವಿವಾಹ ಸ್ವೀಕಾರಾರ್ಹವಾಗಿತ್ತು. ವಿಧವೆ ಜಯಂತಿ ಬಾಯಿಯನ್ನು ಮದುವೆಯಾಗಿ, ಆಕೆಯ ಮಗಳು ರುಕ್ಮಾಬಾಯಿಯನ್ನೇ ತಮ್ಮ ವಾರಸಾ ಮಗಳಾಗಿ ಸ್ವೀಕರಿಸಿದರು. ಸಖರಾಂ ಅವರ ಆಸ್ತಿಗೆ ರುಕ್ಮಾಬಾಯಿ ಏಕೈಕ ಹಕ್ಕುದಾರಳಾದಳು. ಅವರ ಪ್ರೋತ್ಸಾಹದಿಂದ ರುಕ್ಮಾ ಶಾಲೆ ಸೇರಿ ವಿದ್ಯಾಭ್ಯಾಸ ಪಡೆಯತೊಡಗಿದಳು.

ಅಂದಿನ ಸಮಾಜದ ರೂಢಿಯಂತೆ 11 ವರ್ಷದ ರುಕ್ಮಾಬಾಯಿಯ ಮದುವೆ ಸಖರಾಂ ಅವರ ಸಂಬಂಧಿಯಾಗಿದ್ದ, 19 ವರ್ಷದ ದಾದಾಜಿ ಭೀಕಾಜಿಯೊಂದಿಗೆ ನೆರವೇರಿತು. ಮದುವೆಯ ಕಾಲದ ಒಪ್ಪಂದದಂತೆ ಅವನು ಶಿಕ್ಷಣ ಪಡೆದು ಸಜ್ಜನನಾಗಬೇಕು ಮತ್ತು ಮನೆ ಅಳಿಯನಾಗಿ ಹೆಂಡತಿಯ ಮನೆಗೆ ಬಂದು ನಿಲ್ಲಬೇಕಿತ್ತು. ಅವನನ್ನು 'ವಿದ್ಯಾವಂತ ಸಜ್ಜನ’ನಾಗಲು ಶಾಲೆಗೆ ಸೇರಿಸಿದರು. ಇತ್ತ ಮದುವೆಯಾಗಿ ಆರು ತಿಂಗಳಿಗೆ ರುಕ್ಮಾ 'ದೊಡ್ಡವ’ಳಾದಳು. ರೂಢಿಯಂತೆ ಕೂಡಲೇ 'ಗರ್ಭಾದಾನ’ ಶಾಸ್ತ್ರ ನಡೆಯಬೇಕಿತ್ತು. ಆದರೆ, ಸಣ್ಣ ವಯಸ್ಸಿನ ವಧುವಿಗೆ ಗರ್ಭಾದಾನ ನಡೆಸುವುದು ಸರಿಯಲ್ಲವೆಂದು ಸಖರಾಂ ಮತ್ತು ಜಯಂತಿ ಬಾಯಿ ಶಾಸ್ತ್ರವನ್ನು ಮುಂದೂಡಿದರು.

ಭೀಕಾಜಿಗೆ ಇದು ಸಿಟ್ಟು ತರಿಸಿತು. ಅವನೋ ತನ್ನ ವಧುವಿನೊಡನೆ ಒಂದಾಗಲು ಅತ್ಯಾತುರನಾಗಿರುವಾಗ ಹೆಂಡತಿಯ ಮನೆಯವರು ಅಡ್ಡಗಾಲು ಹಾಕುವುದು ಕೋಪ ತರಿಸಿತು. ಅದಕ್ಕೆ ಸರಿಯಾಗಿ 20 ವರ್ಷದ ಅವನಿಗೆ ಆರನೆಯ ತರಗತಿಯ ಹುಡುಗರ ನಡುವೆ ಕೂರಲು, ಕಲಿಯಲು ಏನೂ ಇಷ್ಟವಿರಲಿಲ್ಲ. ಆ ವೇಳೆಗೆ ಅವನ ತಾಯಿ ತೀರಿಕೊಂಡಳು. ಸಖರಾಂರ ಮನೆಯಿಂದ ತನ್ನ ಸೋದರಮಾವ ನಾರಾಯಣ ಧೂಮಾಜಿಯವರ ಮನೆಗೆ ಹೊರಟುಹೋದ. ಆ ಮನೆಯಲ್ಲಿ ಅವನಿಗೆ ಹೇಳುವವರು, ಕೇಳುವವರಾರೂ ಇರಲಿಲ್ಲ. ಶಾಲೆ ಇಲ್ಲ, ಅಕ್ಷರವಿಲ್ಲ, ಕೆಲಸವೂ ಇಲ್ಲ. ಉಂಡು ಅಲೆದು ಸೋಂಬೇರಿಯಾಗಿ ತಿರುಗತೊಡಗಿದ. ದೇಹವಾಂಛೆ ಒಂದೇ ಸಮ ಸೆಳೆಯುತ್ತಿರಲು ತನ್ನ ಮನೆಗೆ ಬಾ, ಬಾ ಎಂದು ರುಕ್ಮಾಬಾಯಿಯ ಹಿಂದೆ-ಮುಂದೆ ತಿರುಗಿ, ದುಂಬಾಲು ಬಿದ್ದು ಪೀಡಿಸತೊಡಗಿದ. ಅವಳು ಒಪ್ಪಲಿಲ್ಲ. ಶಾಲೆಗೆ ಹೋಗುತ್ತಿದ್ದ ಅವಳು, ಫ್ರೀ ಚರ್ಚ್ ಮಿಷನ್ನಿನ ಗ್ರಂಥಾಲಯದಿಂದ ಪುಸ್ತಕಗಳನ್ನು ತಂದು ಓದತೊಡಗಿದ್ದಳು. ಮಹಿಳೆಯರ ಬದುಕಿನ ಸುಧಾರಣೆಗಾಗಿ ಶಿಕ್ಷಣವೂ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಡಾ. ಸಖರಾಂ, ವಿಷ್ಣು ಶಾಸ್ತ್ರಿ ಪಂಡಿತ ಮೊದಲಾದವರು ಅವಳ ಓದಿನ ದಾಹವನ್ನು ಗುರುತಿಸಿ ಬೆಂಬಲಿಸಿದರು. 1883ರಲ್ಲಿ ಆತ್ಮಾರಾಮ ಪಾಂಡುರಂಗ ಎನ್ನುವವರೊಡನೆ ಸಖರಾಂ, 'ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ' ಆರಂಭಿಸಿದ ಬಳಿಕ ಮನೆಗೆ ಬಂದುಹೋಗುವ ಗಣ್ಯರು ಹೆಚ್ಚಿದರು. ರುಕ್ಮಾ ತನ್ನ ತಾಯಿಯೊಡನೆ ಪ್ರಾರ್ಥನಾ ಸಮಾಜ, ಆರ್ಯ ಮಹಿಳಾ ಸಮಾಜದ ಸಭೆಗಳಿಗೆ ಹೋಗುತ್ತಿದ್ದಳು.

Image
Rukhmabai 7
'ಡಾಕ್ಟರ್ ರಕ್ಮಾಬಾಯಿ' ಮರಾಠಿ ಚಿತ್ರದ ದೃಶ್ಯ

ರುಕ್ಮಾಗೆ 20 ವರ್ಷವಾಯಿತು. "ನಿಮ್ಮ ಮಲಮಗಳನ್ನು ನನ್ನ ಬಳಿಗೆ ಕಳಿಸಲು ತಡೆಯೊಡ್ಡಬಾರದು," ಎಂದು ಸೂಚಿಸಿ ಭೀಕಾಜಿಯು ಸಖರಾಂ ಅವರಿಗೆ ಲೀಗಲ್ ನೋಟಿಸ್ ಕಳಿಸಿದ. "ರುಕ್ಮಾಬಾಯಿಯೇ ಹೋಗಲು ಒಪ್ಪದಿರುವುದರಿಂದ ತಾನೇನೂ ಮಾಡಲಾಗದು," ಎಂದು ಸಖರಾಂ ಮರು ನೋಟಿಸ್ ಕಳಿಸಿದರು. 1885ರಲ್ಲಿ ಹೆಂಡತಿಯೊಡನೆ ವಾಸಿಸುವ ತನ್ನ ವೈವಾಹಿಕ ಹಕ್ಕುಗಳನ್ನು ಪಡೆಯಲು ಭೀಕಾಜಿ ನ್ಯಾಯಾಲಯಕ್ಕೆ ಹೋದ. ದಾದಾಜಿಯ ವಕೀಲರು, "ಮದುವೆಯಾದ ಮರುಕ್ಷಣದಿಂದ ಹಿಂದೂ ಮಹಿಳೆಗೆ ಅವಳ ಗಂಡನೇ ಪೋಷಕ, ರಕ್ಷಕ. ಮದುವೆಯಾಗುವಾಗ ಅವಳು ಹಸುಗೂಸಾಗಿದ್ದರೇನು, ಋತುಮತಿಯಾದದ್ದೇ ಗಂಡನ ಮನೆಗೆ ಬಂದು ಇರಬೇಕು. ಅವನ ಮನೆಯೇ ಅವಳ ಮನೆ," ಎಂದು ವಾದಿಸಿದರು. ಆದರೆ, "ಮದುವೆಯ ವೇಳೆ ಆದ ಒಪ್ಪಂದದಂತೆ ಶಿಕ್ಷಿತ ಸಜ್ಜನನಾಗಿ ಮನೆ ಅಳಿಯನಾಗಿ ಅವನು ತನ್ನ ತವರಿಗೆ ಬಂದಿರಬೇಕೇ ಹೊರತು ತಾನು ಸುತರಾಂ ಹೋಗುವುದಿಲ್ಲ," ಎಂದು ರುಕ್ಮಾ ಪಟ್ಟು ಹಿಡಿದಳು.

ಪ್ರಕರಣದ ವಿಚಾರಣೆ ತ್ವರಿತವಾಗಿ ನಡೆಯಿತು. ನ್ಯಾಯಾಧೀಶರಾಗಿದ್ದ ಜಸ್ಟಿಸ್ ಪಿನ್ಹೆ ವಿಭಿನ್ನವಾಗಿ ಯೋಚಿಸಿದ್ದರು. "ಒಬ್ಬ ತರುಣಿಗೆ ತನಗಿಷ್ಟವಿಲ್ಲದವನ ಜೊತೆ ಹೋಗಿ ಬದುಕು ಎಂದು ಹೇಳುವುದು ನನಗೆ ಕ್ರೌರ್ಯವೆನಿಸುತ್ತದೆ. ಬ್ರಿಟಿಷ್ ಕಾನೂನು ಇಲ್ಲಿ ಅನ್ವಯವಾಗದಿದ್ದರೂ, ಹಿಂದೂ ಕಾನೂನಿನ ಸಹಾಯ ಇಲ್ಲದಿದ್ದರೂ, ಬಾಲ್ಯದ ಅಸಹಾಯಕತೆಯಲ್ಲಿ ಮದುವೆಯಾದ ರುಕ್ಮಾಬಾಯಿಗೆ ಇಷ್ಟವಿಲ್ಲದ ಗಂಡನ ಮನೆಗೆ ಹೋಗು ಎಂಬ ಆದೇಶ ಕೊಡಲು ನನಗೆ ಸಾಧ್ಯವಿಲ್ಲ," ಎಂದು ಪಿನ್ಹೆ ಹೇಳಿದರು. ರುಕ್ಮಾಬಾಯಿಯ ವಕೀಲರಾಗಿದ್ದ ಇನ್ವರೇರಿಟಿ ಜೂನಿಯರ್ ಮತ್ತು ಕಾಶೀನಾಥ ತ್ರಯಂಬಕ ತೇಲಂಗರು ತೀರ್ಪು ಹೊರಬಿದ್ದಾಗ ಹರ್ಷದಿಂದ ಕುಣಿದಾಡಿದರು. ಆದರೆ, ಸಾಕಷ್ಟು ಜನ ಭೀಕಾಜಿಯನ್ನು ಬೆಂಬಲಿಸಿ ತೀರ್ಪನ್ನು ವಿರೋಧಿಸಿದರು. ಅವರಲ್ಲಿ ಬಾಲಗಂಗಾಧರ ತಿಲಕರೂ ಇದ್ದರು!

Image
Rukhmabai 5
ಕಲಾಕೃತಿ ಕೃಪೆ: 'ಫೆಮಿನಿಸಂ ಇನ್ ಇಂಡಿಯಾ' ಜಾಲತಾಣ

1885ರಲ್ಲಿ ರುಕ್ಮಾಗೆ ಎಲ್ಲ ತರಹದ ಬೆಂಬಲ ನೀಡಿದ್ದ ಡಾ. ಸಖರಾಂ ತೀರಿಹೋದರು. 21 ವರ್ಷ ವಯಸ್ಸಿನ ರುಕ್ಮಾ ಧೃತಿಗೆಡಲಿಲ್ಲ. 'ಓರ್ವ ಹಿಂದೂ ಮಹಿಳೆ' ಎಂಬ ಹೆಸರಿನಲ್ಲಿ 'ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಸರಣಿ ಪತ್ರ ಬರೆದಳು. ಬಾಲ್ಯವಿವಾಹದ ದಾಷ್ಟ್ಯ, ಅನ್ಯಾಯವನ್ನು ಅವು ಎಳೆಎಳೆಯಾಗಿ ಬಿಡಿಸಿಟ್ಟವು. ಅನಾಮಿಕ ಹೆಸರುಗಳಲ್ಲಿ ಸುದ್ದಿ ಪತ್ರಿಕೆಗಳಿಗೆ ಬಾಲ್ಯ ವಿವಾಹ ಮತ್ತು ವಿಧವಾ ಪದ್ಧತಿಗಳನ್ನು ಅನಿಷ್ಟವೆಂದು ಟೀಕಿಸಿ ಲೇಖನ ಬರೆದಳು. ಜಾತಿಯ ಚೌಕಟ್ಟು ಇರುವುದರಿಂದ ಹೆಣ್ಣಿನ ಆಯ್ಕೆಗೆ ಮುಕ್ತ ಅವಕಾಶಗಳಿಲ್ಲ ಎಂದೂ ದೂರಿದಳು. ಸಾರ್ವಜನಿಕ ಚರ್ಚೆ ಆರಂಭವಾಯಿತು. ವೈವಾಹಿಕ ಪದ್ಧತಿಯಲ್ಲಿ ಸುಧಾರಣೆಯ ಅಗತ್ಯ, ಸಾಂಪ್ರದಾಯಿಕ ರೂಢಿಗಳ ಪ್ರಸ್ತುತತೆ ಮೊದಲಾದ ಹಲವಾರು ವಿಷಯಗಳು ಬಿಸಿ-ಬಿಸಿ ಚರ್ಚೆಗೊಳಗಾದವು. ಯಾವುದೇ ಸುಧಾರಣೆಯನ್ನು ಖಡಾಖಂಡಿತವಾಗಿ ನಿರಾಕರಿಸಿದ ತಿಲಕರು, "ಇಂಗ್ಲಿಷ್ ಶಿಕ್ಷಣದ ಪರಿಣಾಮವಾಗಿ ಭಾರತೀಯ ಸಂಸ್ಕೃತಿ ಅಪಾಯದಲ್ಲಿದೆ ಎನ್ನಲು ರುಕ್ಮಾಬಾಯಿ ಪ್ರಕರಣವೇ ಸಾಕ್ಷಿ," ಎಂದರು. ಮತ್ತೊಂದೆಡೆ, "ಕಾನೂನು ಈ ಪ್ರಕರಣದಲ್ಲಿ ಹೆಚ್ಚು ಸಹಾಯ ಮಾಡಲಾರದು. ಶಿಕ್ಷಣ ಪಡೆದು ಜ್ಞಾನವಂತಳಾದ ರುಕ್ಮಾಬಾಯಿಯೇ ತನಗೇನು ಒಳ್ಳೆಯದು ಎಂದು ನಿರ್ಧರಿಸಲಿ," ಎಂದು ಜರ್ಮನಿಯ ವಿದ್ವಾಂಸ ಮ್ಯಾಕ್ಸ್ ಮುಲ್ಲರ್ ರುಕ್ಮಾಳ ಹಕ್ಕನ್ನು ಬೆಂಬಲಿಸಿದರು.

ವ್ಯಗ್ರನಾದ ಭೀಕಾಜಿ ಉಚ್ಚ ನ್ಯಾಯಾಲಯಕ್ಕೆ ಹೋದ. ಈಗ ತೀರ್ಪು ಅವನ ಪರವಾಗಿ ಬಂತು. "ಅವನೊಡನೆ ಬದುಕಬೇಕು. ಇಲ್ಲವೇ, ಆರು ತಿಂಗಳು ಜೈಲುವಾಸ ಅನುಭವಿಸಬೇಕು," ಎಂದು ತೀರ್ಪು ಹೇಳಿತು. "ಬುದ್ಧಿ ಬಲಿತಿಲ್ಲದ ವಯಸ್ಸಿನಲ್ಲಿ ನನ್ನ ಪರವಾಗಿ ಹಿರಿಯರು ತೆಗೆದುಕೊಂಡ ನಿರ್ಧಾರಕ್ಕೆ ನಾನು ಬದ್ಧಳಲ್ಲ. ಯೋಚಿಸಲು ಪ್ರಬುದ್ಧಳಲ್ಲದ ಕಾಲದಲ್ಲಿ ಕೊಟ್ಟ ಒಪ್ಪಿಗೆಗೆ ಇಂದು ಬದ್ಧಳಾಗಿರಲು ಸಾಧ್ಯವಿಲ್ಲ. ಜೈಲಿಗಾದರೂ ಹೋದೇನು, ಅನಾಗರಿಕ, ಬೇಜವಾಬ್ದಾರಿಯ ಬದುಕು ನಡೆಸುವ ಅವನೊಡನೆ ಇರಲು ಸಾಧ್ಯವೇ ಇಲ್ಲ," ಎಂದು ರುಕ್ಮಾ ತೀರ್ಪನ್ನು ನೇರಾನೇರ ತಿರಸ್ಕರಿಸಿದಳು.

ಆ ಕಾಲದಲ್ಲಿ ಬಾಲ್ಯ ವಿವಾಹ ಸರ್ವೇಸಾಮಾನ್ಯವಾಗಿತ್ತು. ಅಂದಿನ ಸಮಾಜಕ್ಕೆ, (ಅಂದೇಕೆ, ಇಂದಿಗೂ) ಮದುವೆಯೆಂದರೆ ಒಂದು ಗಂಡು, ಒಂದು ಹೆಣ್ಣು ಒಟ್ಟಿಗೆ ಬದುಕಲು ಆರಂಭಿಸಿ ಮಕ್ಕಳನ್ನು ಹೆರುವುದಕ್ಕೆ ಇರುವ ರಹದಾರಿ. ಅಷ್ಟೇ ಎಂದರೆ ಅಷ್ಟೇ. ಗಂಡ-ಹೆಂಡಿರಾಗಲಿರುವವರ ಗುಣ, ಸ್ವಭಾವ ಹೊಂದುವುದೇ? ಜೋಡಿಯು ಜೊತೆಯಾಗಿ ಇರಬಲ್ಲರೇ? ಎಂಬ ಯೋಚನೆ ಯಾರಿಗೂ ಬರುತ್ತಿರಲಿಲ್ಲ. ಅಂಥ ಸಮಯದಲ್ಲಿ, ಇದುವರೆಗೆ ಯಾರೂ ಆಡಿರದ ಮಾತುಗಳನ್ನು ರುಕ್ಮಾ ಹೇಳಿದಾಗ ಕಲಿಗಾಲ ಬಂತೆಂದು ಭಾರತದ ಗಂಡು ಮನಸುಗಳು ಗಡಗಡ ನಡುಗಿಹೋದವು. ಹೀಗೆಯೇ ಬಿಟ್ಟರೆ ಪ್ರಳಯ ಸಂಭವಿಸೀತೆಂದು, ತಮ್ಮ ಸುಖಕ್ಕೆ ಕುತ್ತು ಬಂದೇಬಿಟ್ಟಿತೆಂದು ಎಲ್ಲರೂ ಚುರುಕಾದರು. ಭೀಕಾಜಿಗೆ ಬೆಂಬಲದ ಮಹಾಪೂರ ಹರಿದುಬಂತು. ಮನವಿ, ಮೇಲ್ಮನವಿಯೆಂದು ಪ್ರಕರಣ ಮುಂದುವರಿಯುತ್ತ ಹೋಯಿತು. ಎಲ್ಲೆಡೆ, "ಮದುವೆಯಾದ ಗಂಡನ ಮನೆಗೆ ರುಕ್ಮಾಬಾಯಿ ಹೋಗಲೇಬೇಕು," ಎಂಬ ತೀರ್ಪು ಬಂದಿತು.

Image
queen victoria
ರಾಣಿ ವಿಕ್ಟೋರಿಯಾ

ಅಂತಿಮವಾಗಿ ರುಕ್ಮಾ, ವಿಕ್ಟೋರಿಯಾ ರಾಣಿಗೊಂದು ಪತ್ರ ಬರೆದಳು. ಅದು ವಿಕ್ಟೋರಿಯಾ ರಾಣಿಯಾಗಿ 50ನೆಯ ವರ್ಷದ ಸಂದರ್ಭ. "ಉತ್ತಮ ಆಡಳಿತಗಾರಳಾಗಿ ಹೆಸರು ಮಾಡಿದ ರಾಣಿ ನೀವು. ನಿಮ್ಮ ಮಕ್ಕಳಾದ ಕೋಟ್ಯಂತರ ಹಿಂದೂ ಮಹಿಳೆಯರು ಈ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಒಂದು ಅಹವಾಲು ಇಡುತ್ತೇವೆ. 15 ವರ್ಷದ ಕೆಳಗಿನ ಹುಡುಗಿಯರು, 20 ವರ್ಷದೊಳಗಿನ ಹುಡುಗರು ಆದ ಮದುವೆ ಅಸಿಂಧು ಎಂಬ ಒಂದು ಸಾಲನ್ನು ನಮ್ಮ ಹಿಂದೂ ಕಾನೂನು ಪುಸ್ತಕದಲ್ಲಿ ಸೇರಿಸಿದರೆ ನಿಮಗೆ ಸರ್ವದಾ ಕೃತಜ್ಞರಾಗಿರುತ್ತೇವೆ," ಎಂದು ಬಲು ವಿನಯಪೂರ್ವಕವಾಗಿ ಪತ್ರ ಬರೆದಳು. ರಾಣಿಗೆ ಪತ್ರ ತಲುಪಿತೋ ಇಲ್ಲವೋ, ಅದರ ಪರಿಣಾಮವೋ ಅಲ್ಲವೋ, ಅಂತೂ ಒಂದೆರೆಡು ವರ್ಷಗಳ ಬಳಿಕ ವಿಕ್ಟೋರಿಯಾ ರಾಣಿ ಬಾಲ್ಯ ವಿವಾಹವನ್ನು ಅಸಿಂಧುಗೊಳಿಸಿದಳು.

ರುಕ್ಮಾಬಾಯಿಯ ಮಟ್ಟಿಗೆ ನ್ಯಾಯಾಲಯದ ಹೊರಗೆ ಪ್ರಕರಣ ಕೊನೆಗೊಂಡಿತು. 1888ರಲ್ಲಿ ಎರಡೂ ಪಕ್ಷದವರು ಒಂದು ಒಪ್ಪಂದಕ್ಕೆ ಬಂದರು. ಅದರಂತೆ, ರುಕ್ಮಾ 2,000 ರೂಪಾಯಿಗಳನ್ನು ಭೀಕಾಜಿಗೆ ಕೊಟ್ಟು ತನ್ನ ಸ್ವಾತಂತ್ರ್ಯ ಗಳಿಸಿದಳು. ಜೈಲುವಾಸದಿಂದ ತಪ್ಪಿಸಿಕೊಂಡಳು. ಅವ ಮರುವರ್ಷವೇ ಇನ್ನೊಂದು ಮದುವೆಯಾದ. ತನ್ನ ತಂದೆಯಿಂದ 25,000 ಬೆಲೆಯ ಆಸ್ತಿ ಪಡೆಯಲಿದ್ದ ರುಕ್ಮಾ ಒಂಟಿಯಾಗಿಯೇ ಉಳಿದಳು. ಪ್ರಕರಣ ಕೊನೆಗೊಂಡ ರೀತಿಯು ಸಂಪ್ರದಾಯವಾದಿಗಳಿಗೆ ಗೆಲುವಿನಂತೆಯೂ, ಬಾಲ್ಯ ವಿವಾಹವನ್ನು ವಿರೋಧಿಸುತ್ತಿದ್ದವರಿಗೆ ಹಿನ್ನಡೆಯಾಗಿಯೂ ತೋರಿತು. ಭಾರತದ ಸಾಮಾಜಿಕ ಅನಿಷ್ಟಗಳ ಕುರಿತು, ವಿಶೇಷವಾಗಿ ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿದ್ದ ಬೆಹ್ರಾಮ್ಜಿ ಮಲಬಾರಿ ಇದನ್ನೊಂದು ಸೋಲೆಂಬಂತೆ ಪರಿಗಣಿಸಿದರು. ಬಾಲ್ಯ ವಿವಾಹ ರದ್ಧತಿಗಷ್ಟೇ ಅಲ್ಲದೆ, ಒಪ್ಪಿಗೆ ವಯಸ್ಸನ್ನು ಕಾಯ್ದೆ ಮೂಲಕ ಹೆಚ್ಚಿಸಬೇಕೆಂದು ಮಲಬಾರಿ, ಪಂಡಿತ ರಮಾಬಾಯಿ, ಆನಂದಿಬಾಯಿ ಮೊದಲಾದವರು ಒತ್ತಾಯ ತಂದರು. 1891ರಲ್ಲಿ 'ಒಪ್ಪಿಗೆ ವಯಸ್ಸು ಕಾಯ್ದೆ' ಜಾರಿಯಾಯಿತು. ಅದನ್ನು ಭಾರತೀಯ ಸಂಸ್ಕೃತಿಯ ಮೇಲಿನ ವಸಾಹತುಶಾಹಿ ದಬ್ಬಾಳಿಕೆ ಎಂದು ಬಾಲಗಂಗಾಧರ ತಿಲಕರೂ ಸೇರಿದಂತೆ ಹಲವರು ವಿರೋಧಿಸಿದರು.

ಒಪ್ಪಿಗೆ ವಯಸ್ಸಿನ ಚರ್ಚೆ ಮತ್ತೆ ಶುರುವಾಗಿದ್ದು 1889ರಲ್ಲಿ. 11 ವರ್ಷದ ಫೂಲಮ್ನಿ ಎಂಬ ವಿವಾಹಿತ ಬಂಗಾಳಿ ಹುಡುಗಿ, 35 ವರ್ಷದ ತನ್ನ ಗಂಡ ಹರಿಮೋಹನ ಮೈತಿಯೊಡನೆ ಲೈಂಗಿಕ ಸಂಪರ್ಕ ಏರ್ಪಟ್ಟಾಗ ತೀವ್ರ ರಕ್ತಸ್ರಾವವಾಗಿ ತೀರಿಕೊಂಡಳು. ಎಳೆಯ ಹುಡುಗಿಯ ದಾರುಣ ಸಾವು ಒಪ್ಪಿಗೆ ವಯಸ್ಸನ್ನು 10ರಿಂದ 12ಕ್ಕೇರಿಸುವಂತೆ ಮಾಡಿತು. 12 ವರ್ಷದ ಒಳಗೆ ಗಂಡನೇ ಆದರೂ ಹುಡುಗಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದಲ್ಲಿ ಅದು ಅತ್ಯಾಚಾರ ಎಂದು ಪರಿಗಣಿತವಾಯಿತು.

ಪ್ರಕರಣದ ವಿಚಾರಣೆಯುದ್ದಕ್ಕೂ ರುಕ್ಮಾಗೆ ದೊರೆತ ಬೆಂಬಲ ಕೂಡ ಹಿರಿದು. ಕಾಮಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಡಾ. ಎಡಿತ್ ಪಿಚ್ಚೆ ರುಕ್ಮಾಳನ್ನು ಬೆಂಬಲಿಸಿದ್ದರು. ಧೈರ್ಯವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ ಅವಳ ಶಿಕ್ಷಣಕ್ಕೆ ಸಮಾಜ ಸಹಾಯ ಮಾಡಬೇಕೆಂದು ಧನಸಂಗ್ರಹ ಮಾಡಿದರು. ಸಂಪ್ರದಾಯದ ವಿರುದ್ಧ ದಿಟ್ಟವಾಗಿ ನಿಂತು ಹೋರಾಡಿದ್ದಕ್ಕೆ ರಾಜ ಶಿವಾಜಿ ರಾವ್ ಹೋಳ್ಕರ್ 500 ರೂಪಾಯಿ ಬಹುಮಾನ ಕೊಟ್ಟರು. ಮತದಾನದ ಹಕ್ಕಿಗಾಗಿ ಹೋರಾಡುತ್ತಿದ್ದ ಬ್ರಿಟನ್ನಿನ ಇವಾ ಮತ್ತು ವಾಲ್ಟರ್ ಮೆಕ್‍ಲಾರೆನ್, 'ಮೆಡಿಕಲ್ ವಿಮೆನ್ ಫಾರ್ ಇಂಡಿಯಾ ಫಂಡ್’ನ ಅಡಿಲೇಡ್ ಮ್ಯಾನಿಂಗ್ ಮೊದಲಾದವರು 'ರುಕ್ಮಾಬಾಯಿ ಬೆಂಬಲ ಸಮಿತಿ’ ಸ್ಥಾಪಿಸಿ, ಅವಳ ವಿದ್ಯಾಭ್ಯಾಸ ಮತ್ತು ಬದುಕಿಗಾಗಿ ಧನಸಂಗ್ರಹ ಮಾಡಿದರು. ಎಲ್ಲದರ ಪರಿಣಾಮವಾಗಿ ರುಕ್ಮಾ ವೈದ್ಯಕೀಯದ ಓದಿಗೆಂದು 1889ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದಳು. 1894ರಲ್ಲಿ ಲಂಡನ್ನಿನ ಮಹಿಳಾ ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿ ಪಡೆದಳು. ರಾಯಲ್ ಫ್ರೀ ಹಾಸ್ಪಿಟಲ್‍ನಲ್ಲಿ ಇಂಟರ್ನ್ ಮುಗಿಸಿದಳು.

* * * * *

ಆ ಕಾಲದಲ್ಲಿ ಮಹಿಳೆ ಹೆಜ್ಜೆಹೆಜ್ಜೆಗೂ ತಾರತಮ್ಯ ಎದುರಿಸಿ ವೈದ್ಯ ಪದವಿ ಪಡೆಯಬೇಕಿತ್ತು. 1870ರಲ್ಲಿ ಪ್ಯಾರಿಸ್ ಮೆಡಿಕಲ್ ಸ್ಕೂಲಿನಿಂದ ಪದವಿ ಪಡೆದ ಮೊದಲ ಮಹಿಳೆ ಇಂಗ್ಲೆಂಡಿನ ಎಲಿಜಬೆತ್ ಗ್ಯಾರೆಟ್. ಆ ಕಾಲದ ವೈಜ್ಞಾನಿಕ ಮತ್ತು ವೈದ್ಯಕೀಯ ಪತ್ರಿಕೆಗಳು ಮೊದಲ ವೈದ್ಯೆಯು ಪದವಿ ಪಡೆದಾಗ 1875ರಲ್ಲಿ ಹೀಗೆ ಬರೆದವು:

'ಉಳಿದೆಲ್ಲ ಕಾರಣಗಳು ಏನೇ ಇರಲಿ, ಹೆಣ್ಣು ವೈದ್ಯಳಾಗುವುದು ಸಾಧ್ಯವಿಲ್ಲ, ಸರಿಯಲ್ಲ. ಆಗವಳು ತನ್ನ ಹೆಣ್ತನ ಕಳೆದುಕೊಳ್ಳುತ್ತಾಳೆ. ಸೂಕ್ಷ್ಮತೆ ಕಳೆದುಕೊಳ್ಳುತ್ತಾಳೆ. ನೈತಿಕ ವ್ಯಕ್ತಿತ್ವ ಸಂಪೂರ್ಣ ಬದಲಾಗುತ್ತದೆ. ಹೃದಯ ಮಿಡಿಯುವುದನ್ನು ನಿಲ್ಲಿಸುತ್ತದೆ. ಮದುವೆಯಲ್ಲಿ, ಕುಟುಂಬದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಹೊರಗಿನಿಂದ ಹೆಣ್ಣಿನಂತೆ ಕಂಡರೂ ಹೆಣ್ತನವನ್ನು ಹೊಂದಿರುವುದಿಲ್ಲ. ಹೆಣ್ಣಾಗಿರಬೇಕೆಂದರೆ ವೈದ್ಯರಾಗಲು ಸಾಧ್ಯವಿಲ್ಲ. ವೈದ್ಯೆಯಾದ ಹೆಣ್ಣು ಅರೆಲಿಂಗಿಯಾಗಬಹುದು ಅಥವಾ ದೆವ್ವವಾಗಬಹುದು. ಈ ವಿಶೇಷಣಗಳನ್ನು ಒಪ್ಪಿಕೊಳ್ಳುವವರು ವೈದ್ಯೆಯರಾಗಲು ತೊಂದರೆಯಿಲ್ಲ. ಜೊತೆಗೆ ಇದನ್ನೂ ನೆನಪಿಡಬೇಕು, ವೈದ್ಯರಾಗಿ ಹೆಂಗಸರು ದಾರುಣವಾಗಿ ಸೋಲುವುದಂತೂ ಖಚಿತ.’

...ಎಂಥ ಭವಿಷ್ಯವಾಣಿ ಮತ್ತು ಹಾರೈಕೆ!

Image
Rukhmabai 6

1888ರಲ್ಲಿ ಕ್ಯಾರೊಲಿನ್ ಷುಲ್ಟ್ಜ್ ಎಂಬ ವೈದ್ಯ ವಿದ್ಯಾರ್ಥಿನಿಯ ಥೀಸಿಸ್ ಮೌಲ್ಯಮಾಪನ ಮಾಡಿ ಪ್ರೊ. ಚಾರ್ಕಾಟ್ ಎಂಬ ಖ್ಯಾತ ಸರ್ಜನ್ ಬರೆದ ಟಿಪ್ಪಣಿಗಳು ಸಮಾಜ ಮಹಿಳೆಯನ್ನು ಹೇಗೆ ಗ್ರಹಿಸಿತ್ತು ಎಂದು ತಿಳಿಸುತ್ತವೆ. ಥೀಸಿಸ್ ಉತ್ತಮವಾಗಿದ್ದರೂ ಆಕೆ ವೈದ್ಯೆಯಾಗಲು ಏಕೆ ಅನುಮತಿ ಕೊಡಬಾರದೆಂದು ಚಾರ್ಕಾಟ್ ಬರೆದ ನಾಲ್ಕು ಷರಾಗಳು ಇಂತಿವೆ:

1. ತಮ್ಮ ದೈಹಿಕ ನ್ಯೂನತೆಯ ಕಾರಣದಿಂದ ಹುಡುಗಿಯರಿಗೆ ರೋಗಿಗಳನ್ನು ಎತ್ತುವುದು ಅಸಾಧ್ಯ.

2. ತಿಂಗಳಲ್ಲಿ ಒಂದು ವಾರ ಅವರ ದೈಹಿಕ ಶಕ್ತಿ ಕುಂದಿರುತ್ತದೆ. ಋತುಸ್ರಾವದ ಅವಧಿಯಲ್ಲಿ ತನ್ನ ಕಾಳಜಿ ವಹಿಸುವುದು ಬಿಟ್ಟು ಬೇರಾರೋ ರೋಗಿಯ ಕಾಳಜಿಯನ್ನು ಹೇಗೆ ವಹಿಸುತ್ತಾರೆ?

3. ಬಾಗು-ಬಳುಕುಗಳ ಅವರ ಸೂಕ್ಷ್ಮ ದೇಹವು ರೋಗಿಗಳ ಕೊಳಕು ಮತ್ತು ಒರಟು ದೇಹಗಳ ಜೊತೆ ಒದ್ದಾಡುವುದು ಸರಿಯಲ್ಲ. ಹೆಣ್ಣುಮಕ್ಕಳ ಸೂಕ್ಷ್ಮ ಪ್ರವೃತ್ತಿಯೂ ವೈದ್ಯವೃತ್ತಿಗೆ ಅಡೆತಡೆಯಾಗುತ್ತದೆ. ರಕ್ತ, ಕೀವು, ಮಾಂಸ-ಮಜ್ಜೆ ಅವರ ವ್ಯಕ್ತಿತ್ವದ ಸೂಕ್ಷ್ಮತೆಯನ್ನು ನಾಶ ಮಾಡುತ್ತವೆ.

4. ನೈಸರ್ಗಿಕ ಗುಣ ಸ್ವಭಾವಗಳೇ ಅವರು ವೈದ್ಯ ವೃತ್ತಿ ಮಾಡದಂತೆ ತಡೆಯುತ್ತವೆ: ಹೆಣ್ಣುಗಳು ಅತೀವ ಹೆಮ್ಮೆಯ, ಮಹಾತ್ವಾಕಾಂಕ್ಷೆಯ ಪ್ರವೃತ್ತಿಯವರು. ಯಾರಿಗೂ ಎರಡನೆಯವರಾಗಿರಲು ಬಯಸುವುದಿಲ್ಲ. ಸೇವೆಯೇ ಮುಖ್ಯವಾಗಿದ್ದರೆ ಅವರು ಮಿಡ್‍ವೈಫುಗಳಾಗಿಯೋ, ನರ್ಸುಗಳಾಗಿಯೋ ಸೇವೆ ಮಾಡಿಕೊಂಡಿರಬಹುದಲ್ಲವೇ?

- ಇಂಥ ಕಾಲೆಳೆಯುವಿಕೆ, ತೆಗಳಿಕೆಗಳ ನಡುವೆಯೂ ಕಂಗೆಡದೆ ಸಾಕಷ್ಟು ಮಹಿಳೆಯರು ವೈದ್ಯ ಪದವಿ ಪಡೆದರು.

ಈ ವಿಷಯದಲ್ಲಿ ಭಾರತವೇನೂ ಭಿನ್ನವಾಗಿರಲಿಲ್ಲ. ಮದ್ರಾಸ್ ಮೆಡಿಕಲ್ ಕಾಲೇಜು ಮೊದಲ ಬ್ಯಾಚಿನ ಬ್ರಿಟಿಷ್ ಹೆಣ್ಣುಮಕ್ಕಳನ್ನು ಸೇರಿಸಿಕೊಂಡಿದ್ದು 1875ರಲ್ಲಿ. ಕ್ರೈಸ್ತ ಅಥವಾ ಆಂಗ್ಲೋಸಾಕ್ಸನ್ ಮೂಲದ ಮಹಿಳೆಯರಿಗಷ್ಟೇ ಪ್ರವೇಶವಿತ್ತು. ಮೊದಲ ವಿದ್ಯಾರ್ಥಿನಿ ಮೇರಿ ಆನ್ ಹಲವು ತಿಂಗಳು ಕೈ-ಕೈ ಹೊಸೆಯುತ್ತ ಕಾಲ ಕಳೆಯಬೇಕಾಯಿತು. "ನೀನು ವಾರ್ಡಿನಲ್ಲಿ ಬೇಕಾದರೆ ತಿರುಗಾಡು, ಪಾಠ ಮಾತ್ರ ಹೇಳಿಕೊಡುವುದಿಲ್ಲ," ಎಂದು ಡೈರೆಕ್ಟರ್ ಮಹಾಶಯ ಬೋಧಿಸಲು ನಿರಾಕರಿಸಿದ. ಕೊನೆಗೂ ಉಳಿದ ಪ್ರೊಫೆಸರುಗಳ ಸಹಾಯದಿಂದ ಮೇರಿ ಪದವಿ ಪಡೆದಳು. ವಿಜ್ಞಾನಿ ಜಗದೀಶ ಚಂದ್ರ ಬೋಸರ ಹೆಂಡತಿ ಅಬಲಾ ದಾಸ್ 1881ರಲ್ಲಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ, ಮಹಿಳೆ ಎಂಬ ಕಾರಣಕ್ಕೆ ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಭಾರತದ ಮೊದಲ ವೈದ್ಯೆ ಆನಂದಿ ಬಾಯಿ ಜೋಷಿ 1886ರಲ್ಲಿ ಅಮೆರಿಕಕ್ಕೆ ಹೋಗಿ, ಪೆನ್ಸಿಲ್ವೇನಿಯಾ ಕಾಲೇಜಿನಿಂದ ವೈದ್ಯ ಪದವಿ ಗಳಿಸಿದರು. ಕೊಲ್ಕತ್ತಾ ಮೆಡಿಕಲ್ ಕಾಲೇಜಿನಿಂದ ಕಾದಂಬಿನಿ ಗಂಗೂಲಿ ವೈದ್ಯೆ ಪದವಿ ಪಡೆದು ವೃತ್ತಿ ಆರಂಭಿಸಿದ್ದರು.

ಡಾ. ರುಕ್ಮಾಬಾಯಿ ಭಾರತಕ್ಕೆ ಹಿಂದಿರುಗಿ ವೈದ್ಯಕೀಯ ವೃತ್ತಿ ನಡೆಸಿದ ಎರಡನೆಯ ಭಾರತೀಯ ಮಹಿಳೆಯಾದರು. 1895ರಲ್ಲಿ ಸೂರತ್‍ನ ಮಹಿಳಾ ಆಸ್ಪತ್ರೆಗೆ ಮುಖ್ಯ ವೈದ್ಯಾಧಿಕಾರಿಯಾಗಿ ನೇಮಕವಾದ ರುಕ್ಮಾ, 1918ರಿಂದ ತಮ್ಮ ನಿವೃತ್ತಿಯ ತನಕ ರಾಜಕೋಟ್‍ನ ಜೆನಾನಾ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು. ರಾಜಕೋಟೆಯಲ್ಲಿ ರೆಡ್‍ಕ್ರಾಸ್ ಸೊಸೈಟಿ ಆರಂಭಿಸಿದರು. ನಿವೃತ್ತಿಯ ಬಳಿಕ ಮುಂಬಯಿಗೆ ಬಂದ ರುಕ್ಮಾ, 'ಪರ್ದಾ: ನಿಷೇಧದ ಅಗತ್ಯ' ಎಂಬ ಹೊತ್ತಗೆ ಬರೆದು ಪ್ರಕಟಿಸಿದರು. ವಿಧವೆಯರಿಗೆ ಸಮಾಜವು ಎಲ್ಲ ಅವಕಾಶ ನಿರಾಕರಿಸುವುದನ್ನು ವಿರೋಧಿಸಿ ಬರಹಗಳನ್ನು ಬರೆದರು. ತನ್ನ ಹೆಸರಿನೊಂದಿಗೆ ರಾವತ್, ಅರ್ಜುನ್, ಸುತಾರ, ದಾದಾಜೀ ಮುಂತಾದ ಯಾವುದೇ ಜಾತಿ-ಸ್ಥಿತಿ ಸೂಚಕ ಪುರುಷ ಹೆಸರುಗಳನ್ನು ಅಂಟಿಸಿಕೊಳ್ಳದೆ, ಕೊನೆತನಕ ಡಾ. ರುಕ್ಮಾಬಾಯಿಯಾಗಿಯೇ ಉಳಿದರು. 90ನೆಯ ವಯಸ್ಸಿನಲ್ಲಿ, 1955ರಲ್ಲಿ ಶ್ವಾಸಕೋಶದ ಕ್ಯಾನ್ಸರಿನಿಂದ ಮುಂಬಯಿಯಲ್ಲಿ ಮರಣ ಹೊಂದಿದರು.

* * * * *

ಈ ಲೇಖನ ಓದಿದ್ದೀರಾ?: ಮುಳ್ಳುಹಾದಿಗೆ ಮಣ್ಣು ಹೊತ್ತವರು | ಪ್ರತ್ಯಕ್ಷವೇ ಪ್ರಮಾಣ: ಸರಸ್ವತಿ ಗೋರಾ

ಶಿಕ್ಷಣವು ಹಕ್ಕಾಗಿರುವ, ಮಹಿಳಾ ಸಬಲೀಕರಣಕ್ಕಾಗಿ ನಾನಾ ಯೋಜನೆಗಳು ಜಾರಿಯಾಗಿರುವ ಈ ಕಾಲದಲ್ಲಿಯೂ, ಪ್ರತೀ ಐವರಲ್ಲಿ ಇಬ್ಬರು ಹುಡುಗಿಯರು 18 ವರ್ಷದೊಳಗೇ ಮದುವೆಯಾಗಿರುತ್ತಾರೆಂಬ ಅಂಶ ದಿಗಿಲುಗೊಳಿಸುತ್ತದೆ. ಅಂತಾರಾಷ್ಟ್ರೀಯ ಮಹಿಳಾ ಸಂಶೋಧನಾ ಸಂಸ್ಥೆಯ ಪ್ರಕಾರ, 18 ವರ್ಷದೊಳಗೆ ಹೆಣ್ಣುಮಕ್ಕಳು ಮದುವೆಯಾಗುವ ವಿಶ್ವದ ಮೊದಲ 20 ರಾಷ್ಟ್ರಗಳ ಪೈಕಿ ಭಾರತ 11ನೇ ಸ್ಥಾನದಲ್ಲಿದೆ. ರಾಜಸ್ಥಾನದಲ್ಲಿ ಮೊದಲ ಸಲ ತಾಯಿಯಾಗುವ ಮಹಿಳೆಯ ಸರಾಸರಿ ವಯಸ್ಸು 16.3 ವರ್ಷ! ದಕ್ಷಿಣ ಭಾರತದಲ್ಲಿ ಉತ್ತರ ಭಾರತಕ್ಕಿಂತ ಬಾಲ್ಯ ವಿವಾಹ ಕಡಿಮೆ ಇದ್ದರೂ, ಕರ್ನಾಟಕ ಮಕ್ಕಳ ಹಕ್ಕು ಸಮೀಕ್ಷಾ ವರದಿಯ ಪ್ರಕಾರ, ಉತ್ತರ ಕರ್ನಾಟಕದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ಕಂಡುಬರುತ್ತದೆ.

ಒಪ್ಪಿಗೆ ವಯಸ್ಸಿನ ವಿವಾದ ಇಂದಿಗೂ ನಿಂತಿಲ್ಲ. 'ಪೆನೆಟ್ರೇಟಿವ್’ ಅಲ್ಲದ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ವಯಸ್ಸು 12 ವರ್ಷ (ವಿವಾಹದ ಹೊರತಾಗಿ) ಎಂದು ನಿಗದಿ ಮಾಡಿದ ಕಾಯ್ದೆಯೊಂದು 2011ರಲ್ಲಿ ಸಂಸತ್ತಿನ ಮುಂದೆ ಚರ್ಚೆಗೆ ಬಂದಾಗ ತೀವ್ರ ವಿವಾದಗಳೆದ್ದಿದ್ದವು. ಯಾವುದು ಅತ್ಯಾಚಾರ, ಯಾವುದು ಅಲ್ಲ, ಮದುವೆ ಸಂಬಂಧದಲ್ಲಿ ಬಲವಂತದ ಲೈಂಗಿಕತೆಯನ್ನು ಅತ್ಯಾಚಾರವೆಂದು ಪರಿಗಣಿಸಬೇಕೇ ಬೇಡವೇ ಎಂಬ ಬಗೆಗೆ ಇನ್ನೂ ಬಿಸಿ-ಬಿಸಿ ಚರ್ಚೆ, ವಾಗ್ಯುದ್ಧಗಳು ನಡೆಯುತ್ತಲೇ ಇವೆ. ಹೆಣ್ಣನ್ನು ಅವಳ ಪಾರಂಪರಿಕ ನೆಲೆಗೇ ಕಟ್ಟಿಹಾಕಲು ನಾನಾ ಹೊಸ ಶೀರ್ಷಿಕೆಗಳು ತಯಾರಾಗಿವೆ. ಮೂರು ಗಂಟು ಬೀಳುವಾಗಷ್ಟೇ ಅಲ್ಲ; ಅದಕ್ಕಿಂತ ಮೊದಲೂ ನಂತರವೂ ಹೆಣ್ಣು ಅಭಿಪ್ರಾಯಕ್ಕೆ ಬೆಲೆಯೇ ಇಲ್ಲ ಎನ್ನುವುದಕ್ಕೆ ಸಮಾಜದ ಈ ಧೋರಣೆಗಳು ಸಾಕ್ಷಿಯಾಗಿವೆ.

ಹೀಗಿರುತ್ತ, ಒಂದೂವರೆ ಶತಮಾನದ ಕೆಳಗೆ ತನ್ನ ಶಿಕ್ಷಣ, ವೃತ್ತಿ, ಬದುಕು, ಆಯ್ಕೆಯ ಸ್ವಾತಂತ್ರ್ಯವನ್ನು ಪ್ರತಿಪಾದಿಸಿ, ಅದರಂತೆ ಬದುಕಿದ ರುಕ್ಮಾ, ಬಲವಂತಕ್ಕೆ ಕಟ್ಟುಬಿದ್ದು ಮೂಕಾಂಬಿಕೆಯರಾಗಿರುವ ಭಾರತೀಯ ನಾರಿಯರಿಗೆ ಇವತ್ತಿಗೂ ಮಾದರಿಯಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
7 ವೋಟ್