ಅರ್ಥ ಪಥ | ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ನಮಗೂ ಪಾಠವಾಗಬಹುದೇ?

"ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಚೀನಾ ಕಾರಣ. ವಿಪರೀತ ಸಾಲ ಕೊಟ್ಟು ಅದನ್ನು ತೀರಿಸಲಾಗದ ಸ್ಥಿತಿಗೆ ತಂದಿರುವ ಚೀನಾ, ತನ್ನ ಹಂಗಿನಲ್ಲಿ ಇರುವಂತೆ ನೋಡಿಕೊಳ್ಳುವ ತಂತ್ರ ಮಾಡಿದ್ದು, ಇದು ಸಾಲದ ಬಲೆಯ ರಾಜತಂತ್ರ," ಎಂದಿದೆ ಅಮೆರಿಕ. ಆದರೆ, ಶ್ರೀಲಂಕಾಗೆ ಚೀನಾ 2020ರಲ್ಲಿ ಕೊಟ್ಟಿರುವ ಸಾಲವು ಒಟ್ಟು ಸಾಲದ ಶೇಕಡ 10ರಷ್ಟು ಮಾತ್ರ

ಪೆಟ್ರೋಲ್ ಬಂಕ್ ಮುಂದೆ ಮೈಲುದ್ದದ ಕ್ಯೂ. ಆಸ್ಪತ್ರೆಗಳಲ್ಲಿ ಅವಶ್ಯಕ ಔಷಧಿಗಳಿಲ್ಲದೆ ರೋಗಿಗಳ ಪರದಾಟ. ಮುದ್ರಣಕ್ಕೆ ಬೇಕಾದ ಪೇಪರಿಲ್ಲದೆ ವೃತ್ತಪತ್ರಿಕೆಗಳ ಮುದ್ರಿತ ಆವೃತ್ತಿ ಬಂದ್. ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಲು ಹಾಳೆಗಳಿಲ್ಲದೆ ಪರೀಕ್ಷೆ ಮುಂದಕ್ಕೆ... ಇದು ಇಂದಿನ ಶ್ರೀಲಂಕಾದ ಪರಿಸ್ಥಿತಿ.

ಇಷ್ಟು ಸಾಲದು ಎಂಬಂತೆ ಹಣದುಬ್ಬರದ ದರ ಶೇಕಡ 20ನ್ನು ದಾಟಿದೆ. ಅಕ್ಕಿ ಕೆ.ಜಿ.ಗೆ 500 ಶ್ರೀಲಂಕನ್ ರೂಪಾಯಿಗಳಾಗಿವೆ. 400 ಗ್ರಾಂ ಹಾಲುಪುಡಿಗೆ 250 ರೂಪಾಯಿ ಕೊಡಬೇಕು, ಪೆಟ್ರೋಲ್ ಲೀಟರಿಗೆ 400 ರೂಪಾಯಿ. ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇವೆಲ್ಲ ಜನರ ಸಂಕಟವಾದರೆ ದೇಶದ ಸ್ಥಿತಿಯಂತೂ ಚಿಂತಾಜನಕ. ಒಂದೇ, ಎರಡೇ, ತೀವ್ರವಾದ ನೂರಾರು ಆರ್ಥಿಕ ಸಂಕಷ್ಟಗಳು ದೇಶದ ಆರ್ಥಿಕತೆಯನ್ನು ಛಿದ್ರಗೊಳಿಸುತ್ತಿವೆ.

ವಿದೇಶಿ ವಿನಿಮಯದ ಕೊರತೆ, ಕೃಷಿ ಉತ್ಪನ್ನದ ದಾಖಲೆ ಕುಸಿತ, ಪಾತಾಳಕ್ಕಿಳಿದ ರೂಪಾಯಿ ಮೌಲ್ಯ. ಅವಶ್ಯಕ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕಾಸಿಲ್ಲದ ಸ್ಥಿತಿ. ರಫ್ತಿನಲ್ಲಿ ಭಾರಿ ಕುಸಿತ. ಬೇಕಾದ ವಸ್ತುಗಳ ಹಾಗೂ ಇಂಧನದ ಕೊರತೆಯಿಂದ ಕೈಗಾರಿಕೆ ಸ್ಥಗಿತ. ಏನನ್ನೂ ನಿಭಾಯಿಸಲಾಗದ ಅಸಹಾಯಕ ಸ್ಥಿತಿ. ಕೊನೆಗೆ ತುರ್ತು ಪರಿಸ್ಥಿತಿ ಘೋಷಣೆ. ಕೆಲವೇ ದಿನಗಳಲ್ಲಿ ಜನರ ಸಿಟ್ಟು ಹಾಗೂ ವಿರೋಧ ತಾಳಲಾರದೆ ಮತ್ತೆ ತುರ್ತು ಪರಿಸ್ಥಿತಿ ಹಿಂತೆಗೆದುಕೊಳ್ಳಬೇಕಾದ ಪರಿಸ್ಥಿತಿ.

ಯಾಕೆ ಈ ಸ್ಥಿತಿ ಬಂತು?

1948ರಲ್ಲಿ ಬ್ರಿಟಿಷರ ದಾಸ್ಯದಿಂದ ಸ್ವತಂತ್ರಗೊಂಡಾಗಿನಿಂದ ಶ್ರೀಲಂಕಾ ಮುಖ್ಯವಾಗಿ ಕೃಷಿಯನ್ನೇ ನೆಚ್ಚಿಕೊಂಡ ದೇಶ. ಟೀ, ಕಾಫಿ, ರಬ್ಬರ್, ತೆಂಗು, ಮಸಾಲೆ ಪದಾರ್ಥಗಳು ಇವೇ ಅಲ್ಲಿಯ ಮುಖ್ಯ ಬೆಳೆ. ಇವುಗಳನ್ನೆಲ್ಲಾ ಮುಖ್ಯವಾಗಿ ರಫ್ತಿಗಾಗಿ ಬೆಳೆಯಲಾಗುತ್ತಿತ್ತು. ಹಾಗೆ ರಫ್ತು ಮಾಡಿ ಬಂದ ಹಣದಿಂದ ಅವಶ್ಯಕ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಕ್ರಮೇಣ ರಫ್ತಿನ ಸಾಮಾನಿನ ಪಟ್ಟಿಗೆ ಬಟ್ಟೆ ಸೇರಿಕೊಂಡಿತು. ಪ್ರವಾಸೋದ್ಯಮದಿಂದಲೂ ವಿದೇಶಿ ವಿನಿಮಯ ಬರುತ್ತಿತ್ತು. ಹಾಗೇ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸಿಂಹಳೀಯರು ಒಂದಿಷ್ಟು ಹಣವನ್ನು ಕಳುಹಿಸುತ್ತಿದ್ದರು. 

ಶ್ರೀಲಂಕಾ ಮೊದಲಿನಿಂದಲೂ ರಫ್ತನ್ನು ಬಹಳವಾಗಿ ಅವಲಂಬಿಸಿತ್ತು. ಜಿಡಿಪಿಯ ಶೇಕಡ 40ರಷ್ಟು ಮೌಲ್ಯದ ಸರಕುಗಳು ರಫ್ತಾಗುತ್ತಿದ್ದವು. ಐಎಂಎಫ್ ಮತ್ತು ಜಾಗತಿಕ ಬ್ಯಾಂಕುಗಳ ಒತ್ತಾಯವೂ ರಫ್ತಿಗೆ ಒತ್ತು ಕೊಡುವ ನೀತಿಗೆ ಸ್ವಲ್ಪ ಮಟ್ಟಿಗೆ ಕಾರಣವಾಗಿತ್ತು. ರಫ್ತು ಚೆನ್ನಾಗಿರುವ ತನಕ ಎಲ್ಲವೂ ಸರಿಯಾಗಿತ್ತು. ಕೊರಿಯಾದ ಯುದ್ಧ ಈ ವಸ್ತುಗಳ ರಫ್ತಿಗೆ ಅನುಕೂಲವಾಗಿತ್ತು. ಆದರೆ ಕೊರಿಯಾ ಯುದ್ಧ ಮುಗಿದ ಮೇಲೆ 1957 ಹಾಗೂ 1965ರ ನಡುವೆ ರಫ್ತಿನ ಏರಿಕೆಯ ವೇಗಕ್ಕೆ ಕಡಿವಾಣ ಬಿತ್ತು. ರಫ್ತು ಇಳಿಯಿತು. ಆದರೆ ಆಮದು ಮಾತ್ರ ಹಾಗೇ ಮುಂದುವರಿದಿತ್ತು. ಇದರಿಂದಾಗಿ ವ್ಯಾಪಾರದ ಕೊರತೆ ಹೆಚ್ಚಿತು. 

Image

ಆಮದನ್ನು ನಿಯಂತ್ರಿಸುವುದು ಸರ್ಕಾರಕ್ಕೆ ಅನಿವಾರ್ಯವಾಯಿತು. ಈ ನಿಟ್ಟಿನಲ್ಲಿ 1959 ಹಾಗೂ 1976ರ ನಡುವೆ ಹಲವು ಕ್ರಮಗಳನ್ನು ತೆಗೆದುಕೊಂಡಿತು. ಆಮದಿನ ಪ್ರಮಾಣಕ್ಕೆ ಮಿತಿಯನ್ನು ಹೇರಿತು. ಆಮದು ಸುಂಕವನ್ನು ಹೆಚ್ಚಿಸಿತು. ಆದರೆ ಇವೆಲ್ಲ ನಿರೀಕ್ಷಿತ ಫಲ ನೀಡಲಿಲ್ಲ. ಆಮದಿನ ಖರ್ಚು ಇಳಿಯಲಿಲ್ಲ, ರಫ್ತು ಹೆಚ್ಚಲಿಲ್ಲ. ಚಾಲ್ತಿ ಲೆಕ್ಕದ ಕೊರತೆ ಹೆಚ್ಚಿತು. 

ವಿದೇಶಿ ವಿನಿಮಯದ ಇನ್ನೊಂದು ಮೂಲ ಅಂದರೆ ಪ್ರವಾಸೋದ್ಯಮ. ಕೊರೊನಾ ಪಿಡುಗಿನಿಂದ ಇದಕ್ಕೂ ಬಲವಾದ ಪೆಟ್ಟು ಬಿದ್ದಿತ್ತು. ಶ್ರೀಲಂಕಾದ ಕೇಂದ್ರ ಬ್ಯಾಂಕಿನ ಮಾಹಿತಿಯ ಪ್ರಕಾರ 2018ರಲ್ಲಿ ಪ್ರವಾಸೋದ್ಯಮದಿಂದ ಶ್ರೀಲಂಕಾ 4.4 ಬಿಲಿಯನ್ ಡಾಲರ್ ಗಳಿಸಿತ್ತು. 2019ರಲ್ಲಿ ಅದು 3.6 ಬಿಲಿಯನ್ ಡಾಲರ್ ಅಷ್ಟಾಯಿತು. 2020ರಲ್ಲಿ ಕೇವಲ 682 ಮಿಲಿಯನ್ನಿಗೆ ಇಳಿದು 2021ರಲ್ಲಿ ಕೇವಲ 534 ಮಿಲಿಯನ್ ಡಾಲರ್ ಆಯಿತು. ಈಗ 50 ಮಿಲಿಯನ್ನಿಗಿಂತ ಕಮ್ಮಿಯಾಗಿದೆಯಂತೆ.

ಸ್ವಾಭಾವಿಕವಾಗಿಯೇ ದೇಶದ ಆರ್ಥಿಕತೆ ಈ ಪರಿಸ್ಥಿತಿಯಲ್ಲಿದ್ದಾಗ ದೇಶದ ನಾಣ್ಯ ಮೌಲ್ಯ ಕಳೆದುಕೊಳ್ಳುವುದು ಅನಿವಾರ್ಯ. ಡಾಲರ್ ಎದುರು ಶ್ರೀಲಂಕಾದ ರೂಪಾಯಿ ಬೆಲೆ ಇಳಿಯುತ್ತ ಹೋಯಿತು. ರೂಪಾಯಿ ಅಪಮೌಲ್ಯ ಮಾಡುವುದಿಲ್ಲ ಅಂದುಕೊಂಡಿದ್ದ ಸರ್ಕಾರ ಕೊನೆಗೂ ರೂಪಾಯಿ ಬೆಲೆ ಇಳಿಸಬೇಕಾಯ್ತು. ಮಾರ್ಚ್ ತಿಂಗಳಿನಲ್ಲಿ ಒಂದು ಡಾಲರಿಗೆ 300 ರೂಪಾಯಿ ಆಗಿದೆ. ರೂಪಾಯಿ ಬೆಲೆ ಇಳಿದೊಡನೆ, ವಿದೇಶಿ ವಿನಿಮಯದ ಮೀಸಲು ಕಮ್ಮಿಯಾಗುತ್ತದೆ. ಹಣದುಬ್ಬರದ ದರ ಏರುತ್ತದೆ, ಆಮದು ದುಬಾರಿಯಾಗುತ್ತದೆ. ಪೆಟ್ರೋಲ್, ಆಹಾರ ಪದಾರ್ಥಗಳು, ಔಷಧಿ ಇತ್ಯಾದಿ ಅವಶ್ಯಕ ವಸ್ತುಗಳ ಆಮದನ್ನೇ ನೆಚ್ಚಿಕೊಂಡ ದೇಶದ ಸ್ಥಿತಿ ಮತ್ತಷ್ಟು ಹಾಳಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಸಿಂಹಳೀಯರೂ ಹಣವನ್ನು ಕಳುಹಿಸಲು ಕಾಳಸಂತೆ ಮಾರ್ಗ ಹಿಡಿಯುತ್ತಿದ್ದಾರೆ. ಹೆಚ್ಚಿನ ಹಣ ಸಿಗುತ್ತದೆ ಅನ್ನುವ ನಿರೀಕ್ಷೆಯಿಂದ. 

ಆಮದು ನಿಯಂತ್ರಣ ನಿರೀಕ್ಷಿತ ಫಲ ನೀಡಲಿಲ್ಲ. ಹೆಚ್ಚಿನ ವಿದೇಶಿ ವಿನಿಮಯಕ್ಕಾಗಿ ಸರ್ಕಾರ ವಿದೇಶಿ ಬಂಡವಾಳಕ್ಕೆ ಪ್ರಯತ್ನಿಸತೊಡಗಿತು. ಅಧಿಕೃತ ಹಾಗೂ ಖಾಸಗೀ ಲೇಣಿದಾರರಿಂದ ಸಾಲಕ್ಕಾಗಿ ಪ್ರಯತ್ನಿಸತೊಡಗಿತು. ಆದರೆ ಅದರಿಂದ ವ್ಯಾಪಾರದ ಕೊರತೆಯಾಗಲಿ, ಚಾಲ್ತಿ ಶುಲ್ಕ ಕೊರತೆಯಂತಹ ಸಮಸ್ಯೆಯಾಗಲಿ ನೀಗಲಿಲ್ಲ. ಆದರೆ ಸಾಲದ ಹೊರೆ ಹೆಚ್ಚಾಯಿತು. 

ಈ ಲೇಖನ ಓದಿದ್ದೀರಾ? ಕೊಂಡಾಟ | ಶ್ರೀಲಂಕಾವನ್ನು ಪತನದ ಹೆದ್ದಾರಿಗೆ ಕೊಂಡೊಯ್ದ ಜನಾಂಗ ದ್ವೇಷ 

ವಿದೇಶಿ ಸಾಲದ ವಿಷಯಕ್ಕೆ ಬಂದರೆ, ಅದಕ್ಕೆ ಕೇವಲ ಈ ಸರ್ಕಾರವನ್ನು ದೂರಲಾಗುವುದಿಲ್ಲ. ಹಿಂದಿನ ಮಹಿಂದಾ ರಾಜಪಕ್ಸ ಸರ್ಕಾರ 2004 ಮತ್ತು 2015ರ ನಡುವೆ 14.06 ಬಿಲಿಯನ್ ಡಾಲರ್ ಸಾಲ ಮಾಡಿತ್ತು. ನಂತರದ ಸರ್ಕಾರಗಳು ಮಾಡಿದ ಸಾಲ ಸೇರಿಕೊಂಡು ಅದು ಬೆಳೆದು ಸುಮಾರು 35 ಬಿಲಿಯನ್ ಡಾಲರ್ ಆಗಿದೆ. ಹಾಗಾಗಿ ಮರುಪಾವತಿಯ ಖರ್ಚು ವಿಪರೀತವಾಗುತ್ತದೆ. 2022ರಲ್ಲಿ ಮರುಪಾವತಿಗೆ 69 ಬಿಲಿಯನ್ ಡಾಲರ್ ಬೇಕಿತ್ತಂತೆ. 

ಆಮದು ಹೆಚ್ಚಿತು. ರೂಪಾಯಿ ಅಪಮೌಲ್ಯಗೊಂಡಿತು. ಸಾಲ ಮರುಪಾವತಿಯ ಖರ್ಚು ಹೆಚ್ಚಿತು. ಇವೆಲ್ಲದರ ಫಲ ವಿದೇಶಿ ವಿನಿಮಯದ ಮೀಸಲು ಕರಗತೊಡಗಿತು. 2020ರಲ್ಲಿ ಮೊದಲ ಮೂರು ತಿಂಗಳಿನಲ್ಲೇ ವಿದೇಶಿ ವಿನಿಮಯದ ಮೀಸಲು ಶೇಕಡ 70ರಷ್ಟು ಕುಸಿಯಿತು. ಮಾರ್ಚ್ ತಿಂಗಳಿನಲ್ಲಿ ವಿದೇಶಿ ವಿನಿಮಯದ ಖಾತೆಯಲ್ಲಿ ಕೇವಲ 2.4 ಬಿಲಿಯನ್ ಡಾಲರ್ ಉಳಿದಿತ್ತು. 2021ರ ಜುಲೈ ಕೊನೆಯ ವೇಳೆಗೆ 2.6 ಬಿಲಿಯನ್ ಡಾಲರ್ ಆಯಿತು.

ಅಂತಾರಾಷ್ಟ್ರೀಯ ಹಣಕಾಸು ನಿಧಿ ವಿಶೇಷ ಎಸ್‌ಡಿಆರ್‌ನ ಮೊದಲ ಕಂತು 780 ಮಿಲಿಯನ್ ಸಿಕ್ಕಿದ್ದರಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ಚೀನಾ, ಭಾರತದಿಂದಲೂ ನೆರವು ಸಿಕ್ಕಿತು. ಆದರೂ 2022ರ ಪ್ರಾರಂಭದಲ್ಲಿ ಶ್ರೀಲಂಕಾದ ಬಳಿ ಇದ್ದುದು ಕೇವಲ 1.6 ಬಿಲಿಯನ್ ಡಾಲರ್ ಮಾತ್ರ. ಅಂತಿಮವಾಗಿ ವಿದೇಶಿ ಹಣ ತೀರಿಸುವುದಕ್ಕಾಗದ ಸ್ಥಿತಿಗೆ ಶ್ರೀಲಂಕಾ ಬಂತು. ಜನವರಿ 2022ರಲ್ಲಿ ಶ್ರೀಲಂಕಾದ ಕೇಂದ್ರ ಬ್ಯಾಂಕ್ 500 ಬಿಲಿಯನ್ ಸಾಲ ಮರಪಾವತಿ ಮಾಡುತ್ತೇನೆ ಅಂತ ಘೋಷಿಸಿದಾಗ ದೇಶದ ಹಲವು ಆರ್ಥಿಕ ತಜ್ಞರು ಹಾಗೆ ಮಾಡದೆ ತೀರಾ ಅವಶ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಆ ವಿದೇಶಿ ವಿನಿಮಯವನ್ನು ಬಳಸಿಕೊಳ್ಳಬೇಕೆಂದು ಸೂಚಿಸಿದರು. ಜನ ಗಲಾಟೆ ಮಾಡಿದರು. ಕೊನೆಗೆ ಸಾಲ ಮರುಪಾವತಿ ಮಾಡುವುದಿಲ್ಲ ಅಂತ ಸರ್ಕಾರ ಘೋಷಿಸಬೇಕಾಯಿತು.

ಮತ್ತೆ ಆಮದಿನ ನಿಯಂತ್ರಣಕ್ಕೆ ಪ್ರಯತ್ನಿಸಿತು. 2020ರಲ್ಲಿ ಕಾರುಗಳಿಂದ ಹಿಡಿದು, ಗೊಬ್ಬರ ಸಕ್ಕರೆ ಹಾಗೂ ಅರಿಸಿನ ಹೀಗೆ ಹಲವು ಪದಾರ್ಥಗಳ ಆಮದಿನ ಮೇಲೆ ನಿರ್ಬಂಧಗಳನ್ನು ಹೇರಿತು. ಗೊಬ್ಬರ, ಕೀಟನಾಶಕಗಳಂತಹ ಪದಾರ್ಥಗಳ ಮೇಲೆ ನಿರ್ಬಂಧ ಹೇರಿ ತೊಂದರೆಯನ್ನೂ ಮಾಡಿಕೊಂಡಿತು. ಅದರಿಂದ ಕೃಷಿ ಉತ್ಪನ್ನಕ್ಕೆ ಪೆಟ್ಟು ಬಿತ್ತು. ಆಹಾರ ಪದಾರ್ಥಗಳ ಆಮದಿನ ಮೇಲೆ ಅವಲಂಬನೆ ಹೆಚ್ಚಿದೆ. ಸರ್ಕಾರ ತಾನು ಸಾವಯವ ಕೃಷಿಗೆ ನೂರಕ್ಕೆ ನೂರು ಬದ್ದರಾಗಿರುವುದರಿಂದ ಹಾಗೆ ಮಾಡಿರುವುದಾಗಿ ಹೇಳಿಕೊಂಡಿದ್ದರೂ ವಿದೇಶಿ ವಿನಿಮಯದ ಕೊರತೆ ಅದಕ್ಕೆ ನಿಜವಾದ ಕಾರಣ ಅನ್ನುವುದು ಸ್ಪಷ್ಟ. ಒಟ್ಟಾರೆ ಬಡ ಹಾಗೂ ಮಧ್ಯಮವರ್ಗದವರ ಬವಣೆ ಇನ್ನಷ್ಟು ಹೆಚ್ಚಾಗಿದ್ದು ವಾಸ್ತವ.

ಬಿಕ್ಕಟ್ಟು ನಿಯಂತ್ರಣ ಕಷ್ಟವಾಗುತ್ತಿರುವ ಸಮಯದಲ್ಲಿ ನಿರ್ಧಾರಗಳನ್ನು ಎಚ್ಚರದಿಂದ ತೆಗೆದುಕೊಳ್ಳಬೇಕು. ಆದರೆ ಸರ್ಕಾರ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇದೆ. ಈಗಾಗಲೇ ಸಾಲದ ಹೊರೆ ವಿಪರೀತವಾಗಿದೆ. ಸರ್ಕಾರದ ಆದಾಯ ಕಡಿಮೆಯಾಗಿದೆ. ಈ ಹೊತ್ತಿನಲ್ಲಿ ರಾಜಪಕ್ಸ ಸರ್ಕಾರ 2019ರಲ್ಲಿ ವ್ಯಾಟ್ ಅನ್ನು ಶೇಕಡ 15ರಿಂದ ಶೇಕಡ 8ಕ್ಕೆ ಕಡಿತಗೊಳಿಸಿ ವರಮಾನ ಇನ್ನಷ್ಟು ಕಡಿಮೆ ಮಾಡಿಕೊಂಡಿದೆ. ಜೊತೆಗೆ ಸ್ಥಳೀಯ ಸರಕು ಹಾಗೂ ಸೇವೆಗಳ ಮೇಲಿದ್ದ ಶೇಕಡ 2ರಷ್ಟು ರಾಷ್ಟ್ರೀಯ ನಿರ್ಮಾಣ ತೆರಿಗೆಯನ್ನು ತೆಗೆಯಿತು. ಈ ಎಲ್ಲ ಕ್ರಮಗಳಿಂದ ಜಿಡಿಪಿಯ ಶೇಕಡ 4ರಷ್ಟು ಆದಾಯದ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. 

Image
ಶ್ರೀಲಂಕಾ ಪ್ರಜೆಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

ಈ ಸಮಯದಲ್ಲಿ ಇನ್ನೊಂದು ವಾದ ತಲೆ ಎತ್ತಿದೆ. ಶ್ರೀಲಂಕಾದ ಇಂದಿನ ಸಾಲದ ಬಿಕ್ಕಟ್ಟಿಗೆ ಚೀನಾ ಕಾರಣ ಎಂದು ಅಮೆರಿಕ ಹೇಳಿದೆ. ಅದು ಶ್ರೀಲಂಕಾಗೆ ವಿಪರೀತ ಸಾಲ ಕೊಟ್ಟು ಅದನ್ನು ತೀರಿಸಲಾಗದ ಸ್ಥಿತಿಗೆ ತಂದು ತನ್ನ ಹಂಗಿನಲ್ಲಿ ಇರುವಂತೆ ನೋಡಿಕೊಳ್ಳುವ ತಂತ್ರ ಮಾಡಿದೆ ಎನ್ನಲಾಗಿದೆ. ಅದನ್ನು ‘ಸಾಲದ ಬಲೆಯ ರಾಜತಂತ್ರ’ ಎಂದು ಅಮೆರಿಕ ಕರೆದಿದೆ.

ಆದರೆ ಶ್ರೀಲಂಕಾಗೆ ಚೀನಾ 2020ರಲ್ಲಿ ಕೊಟ್ಟಿರುವ ಸಾಲ ಒಟ್ಟು ಸಾಲದ ಕೇವಲ ಶೇಕಡ 10ರಷ್ಟು ಮಾತ್ರ. ಹಾಗೆ ನೋಡಿದರೆ ಜಪಾನ್ ಶೇಕಡ 11ರಷ್ಟು ಕೊಟ್ಟಿದೆ. ನಿಜವಾಗಿ ಅತಿ ಹೆಚ್ಚು ಸಾಲ ಕೊಟ್ಟಿರುವುದು ಐಎಂಎಫ್ 1965ರ ನಂತರ ಐಎಂಎಫ್ ಇಂದ ಶ್ರೀಲಂಕಾ 16 ಸಾಲಗಳನ್ನು ಪಡೆದುಕೊಂಡಿದೆ. ಮಾಮೂಲಿನಂತೆ ಐಎಂಎಫ್ ಹಲವು ಷರತ್ತುಗಳನ್ನು ವಿಧಿಸಿದೆ. ಬಜಿಟ್ ಕೊರತೆಯಲ್ಲಿ ಕಡಿತಮಾಡಬೇಕು, ಬಿಗಿ ಹಣಕಾಸು ನೀತಿಯನ್ನು ಅನುಷ್ಠಾನಕ್ಕೆ ತರಬೇಕು, ಆಹಾರದ ಸಬ್ಸಿಡಿಯನ್ನು ಕಡಿತಗೊಳಿಸಬೇಕು, ಇತ್ಯಾದಿ. ಪ್ರಶ್ನೆ ಎಂದರೆ 56 ಬಿಲಿಯನ್ ಡಾಲರ್ ಸಾಲ ಉಳಿಸಿಕೊಂಡ ದೇಶಕ್ಕೆ ಮತ್ತೆ-ಮತ್ತೆ ಸಾಲ ಹೇಗೆ ಸಿಗುತ್ತಿದೆ? ಕೆಲವರ ಊಹೆಯ ಪ್ರಕಾರ ಬ್ರಿಟನ್ ವುಡ್ ಸಂಸ್ಥೆಗಳು ಸೂಚಿಸಿದ ಮಾರುಕಟ್ಟೆ ಸ್ನೇಹಿ ಆರ್ಥಿಕತೆಯನ್ನು ಅಳವಡಿಸಲು ಒಪ್ಪಿದ್ದರಿಂದ ಈ ಸಂಸ್ಥೆಗಳು ಸಾಲ ನೀಡುತ್ತಿವೆ.

ಸಂಯುಕ್ತ ರಾಷ್ಟ್ರೀಯ ಪಕ್ಷ 1977ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಧ್ಯಕ್ಷೀಯ ಸರ್ಕಾರವಿರುವ ಹೊಸ ಸಂವಿಧಾನ ಜಾರಿಗೆ ಬಂತು. ಒಂದು ಮುಕ್ತ, ಮಾರುಕಟ್ಟೆ ಸ್ನೇಹಿ ಆರ್ಥಿಕ ನೀತಿಯ ಆಳ್ವಿಕೆ ರೂಪ ಪಡೆದುಕೊಂಡಿತು. ಇದರ ಜೊತೆಗೇ ಪಾವತಿ ಶಿಲ್ಕಿನ ಸಮಸ್ಯೆಗಳು ಬೆಳೆಯುತ್ತಾ ಹೋದವು. ದೀರ್ಘಕಾಲದ ಜನಾಂಗೀಯ ಸಂಘರ್ಷದಿಂದ ಸಮಸ್ಯೆ ಬಿಗಡಾಯಿಸಿತು. ವ್ಯಾಪಾರದ ಕೊರತೆ ಹಾಗೂ ಚಾಲ್ತಿ ಲೆಕ್ಕದ ಕೊರತೆಯನ್ನು ನಿರ್ವಹಿಸಲು ನಿರಂತರವಾಗಿ ಸಾಲವನ್ನು ಆಶ್ರಯಿಸುವ ದಾರಿ ಹಿಡಿಯಲಾಯಿತು.

ವಿದೇಶಿ ಸಾಲ 1977ರಲ್ಲಿ 1 ಬಿಲಿಯನ್ ಡಾಲರ್ ಇದ್ದುದು, 1988ರಲ್ಲಿ 5 ಬಿಲಿಯನ್ ಡಾಲರ್ ಆಯಿತು. ಹೀಗೆ ಏರುತ್ತಾ-ಏರುತ್ತಾ 2020ರಲ್ಲಿ 56 ಬಿಲಿಯನ್ ಡಾಲರ್ ತಲುಪಿತು. ಹಣದ ಅಪಮೌಲ್ಯ ಮಾಡಬೇಕು. 2016 ರಿಂದ 2019ರವರೆಗೆ 1.5 ಬಿಲಿಯನ್ ಸಾಲವನ್ನು ಮೂರು ವರ್ಷ ಪಡೆದಿದೆ. ದುರಂತವೆಂದರೆ ಈ ಅವಧಿಯಲ್ಲಿ ಹೂಡಿಕೆ, ಉಳಿತಾಯ, ಆದಾಯ ಎಲ್ಲ ಕುಸಿದಿದೆ. ಮತ್ತೆ 17 ಬಾರಿ ಸಾಲಕ್ಕೆ ಐಎಂಎಫ್ ಮುಂದೆ ಹೋಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಇಂದಿನ ಶ್ರೀಲಂಕಾದ ಬಿಕ್ಕಟ್ಟಿನಲ್ಲಿ ಐಎಂಎಫ್ ಸಾಲ, ಹಾಗೂ ಅವುಗಳ ಷರತ್ತುಗಳ ಪಾತ್ರ ಬಹಳವಾಗಿಯೇ ಇದೆ ಅನ್ನುವ ವಾದದಲ್ಲಿ ಹುರುಳಿದೆ.

ರಫ್ತನ್ನು ಆಧರಿಸಿದ, ಸಾಲದ ವರ್ತುಲದಲ್ಲಿ ಸಿಕ್ಕ ಆರ್ಥಿಕತೆ ಬಿಕ್ಕಟ್ಟಿನಿಂದ ಹೊರಬರಲು ತನ್ನದೇ ಆದ ಪರಿಹಾರಗಳನ್ನು ಕಂಡುಕೊಳ್ಳಬೇಕು. ಐಎಂಎಫ್ ಅಂತಹ ಸಂಸ್ಥೆಗಳು ನೀಡುವ ಸಲಹೆಗಳು ಅನುಕೂಲಕ್ಕಿಂತ ತೊಂದರೆಯನ್ನು ಮಾಡಿರುವುದೇ ಹೆಚ್ಚು. ಅಂತಹ ಸಂಸ್ಥೆಗಳು ಆಯಾ ದೇಶಗಳಿಗೆ ತಮ್ಮದೇ ಆದ, ಅಲ್ಲಿಯ ಪರಿಸ್ಥಿತಿಗೆ ಹೆಚ್ಚು ಸೂಕ್ತವಾದ ಪರಿಹಾರಗಳನ್ನು ಕಂಡುಕೊಳ್ಳಲು ಉತ್ತೇಜಿಸಬೇಕು. ಎಲ್ಲ ದೇಶಗಳಲ್ಲಿನ, ಎಲ್ಲ ಸಮಸ್ಯೆಗಳಿಗೆ ಒಂದೇ ಪರಿಹಾರ ಸಾಧ್ಯ ಅನ್ನುವ ಮನೋಭಾವವನ್ನು ಬಿಡಬೇಕು. ಶ್ರೀಲಂಕಾದ ಅನುಭವದಿಂದ ನಮ್ಮಂತಹ ದೇಶಗಳು ಹಲವು ಪಾಠಗಳನ್ನು ಕಲಿಯಬಹುದಾಗಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್