ಅರ್ಥ ಪಥ | ರಷ್ಯಾ-ಉಕ್ರೇನ್ ಯುದ್ಧ ಮತ್ತು ಆರ್ಥಿಕತೆ

Jo Biden

ರಷ್ಯಾ ಮೇಲೆ ನಿರ್ಬಂಧ ಹೇರುವುದರಿಂದ ಜಗತ್ತಿನ ಹಲವು ದೇಶಗಳ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂಬುದು ದಿನೇ-ದಿನೇ ಸಾಬೀತಾಗುತ್ತಲೇ ಇದೆ. ನಿರ್ಬಂಧಗಳು ಬಿಗಿಯಾದರೆ, ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ಉಂಟಾಗುತ್ತದೆ. ಆಹಾರ ಮತ್ತು ಪೆಟ್ರೋಲಿಯಂ ಪದಾರ್ಥಗಳು ಮಾತ್ರವಲ್ಲ, ಇನ್ನೂ ಹಲವು ವಸ್ತುಗಳ ಬೆಲೆ ಏರಲಿದೆ

ಈಗಿನ ಜಾಗತೀಕರಣದ ಸಂದರ್ಭದಲ್ಲಿ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಆದ ಘಟನೆಯ ಪರಿಣಾಮ ಆ ಸ್ಥಳಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತದೆ. ಇದಕ್ಕೆ ರಷ್ಯಾ-ಉಕ್ರೇನ್ ಯುದ್ಧ ಕೂಡ ಹೊರತಲ್ಲ. ಅದು ಎಲ್ಲ ದೇಶಗಳನ್ನೂ, ಎಲ್ಲ ಜನರನ್ನು ಕಾಡಿದೆ. ಎಲ್ಲ ಆರ್ಥಿಕತೆಗಳೂ ಸಂಕಷ್ಟಕ್ಕೆ ಸಿಲುಕಿವೆ.

ಯುದ್ಧಕ್ಕೂ ಮೊದಲೇ ನಮ್ಮ ಎಷ್ಟೋ ಆರ್ಥಿಕತೆಗಳು ಸಂಕಟದಲ್ಲಿದ್ದವು. ಈಗ ಅವು ಇನ್ನಷ್ಟು ಕುಸಿದಿವೆ. ಸಾಮಾನ್ಯವಾಗಿ ಇಂದಿನ ಆರ್ಥಿಕತೆಯನ್ನು ವಿವರಿಸೋದಕ್ಕೆ ಉಬ್ಬರ ಸ್ಥಗಿತ ಅಂದರೆ, 'ಸ್ಟಾಗ್‌ಪ್ಲೆಷನ್' ಅನ್ನೋ ಪದವನ್ನು ಬಳಸುತ್ತಾರೆ. ಉಬ್ಬರ ಸ್ಥಗಿತ ಅಂದರೆ ಹಣದ (ಉಬ್ಬರ) ಮತ್ತು ಆರ್ಥಿಕ (ಸ್ಥಗಿತತೆ) ಎರಡೂ ಒಟ್ಟಿಗೆ ಇರುವ ಸ್ಥಿತಿ. ಸ್ಥಗಿತತೆ ಅನ್ನುವುದು ಹೆಚ್ಚೂಕಮ್ಮಿ ಬೆಳವಣಿಗೆಯೇ ಇಲ್ಲದ ದುರ್ಬಲ ಆರ್ಥಿಕ ಪರಿಸ್ಥಿತಿಯನ್ನು ಸೂಚಿಸುತ್ತದೆ. ಹಣದುಬ್ಬರದ ಸಂದರ್ಭದಲ್ಲಿ ಬೆಲೆಗಳು ನಿರಂತರವಾಗಿ ಏರುತ್ತಿರುತ್ತದೆ. ಇಂಗ್ಲೆಂಡಿನ ಕನ್ಸರ್ವೇಟಿವ್ ಪಕ್ಷದ ಆರ್ಥಿಕ ವಕ್ತಾರ ಐಯಾನ್ ಮ್ಯಾಕ್ ಲಿಯಾಡ್ 1970ರಲ್ಲಿ ಈ ಪದವನ್ನು ಇದಕ್ಕಿಂತ ಸ್ವಲ್ಪ ಭಿನ್ನವಾದ ಸ್ಥಿತಿಯನ್ನು ವಿವರಿಸಲು ಬಳಸಿದ್ದ. ಆಗ ಇಂಗ್ಲೆಂಡ್‌ನಲ್ಲಿ ಜನರ ವರಮಾನ ಹೆಚ್ಚುತ್ತಿತ್ತು. ಆದರೆ, ಆರ್ಥಿಕತೆ ಸಂಪೂರ್ಣವಾಗಿ 'ಸ್ಥಗಿತವಾಗಿತ್ತು.' ಆ ಸ್ಥಿತಿಯನ್ನು ಅವನು 'ಉಬ್ಬರ ಸ್ಥಗಿತ' ಅಂತ ಕರೆದಿದ್ದ. ಈಗ ಹಣದುಬ್ಬರ ಹಾಗೂ ಸ್ಥಗಿತತೆ ಒಟ್ಟಿಗೆ ಇರುವ ಸ್ಥಿತಿಯನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತಿದೆ.

ಆರ್ಥಿಕ ಸ್ಥಗಿತತೆ ಇದ್ದಾಗ ಸಾಮಾನ್ಯವಾಗಿ ಹಣದುಬ್ಬರದ ದರ ಕಮ್ಮಿ ಇರುತ್ತದೆ. ನಿರುದ್ಯೋಗ ಹೆಚ್ಚಿರುತ್ತದೆ. ಸ್ವಾಭಾವಿಕವಾಗಿಯೇ ಕೂಲಿ ಕಡಿಮೆ ಇರುತ್ತದೆ. ಬಳಕೆದಾರರು ಮತ್ತು ಉದ್ದಿಮೆಗಳು ಮಾಡುವ ಖರ್ಚಿನ ಪ್ರಮಾಣವೂ ಕಡಿಮೆ ಇರುತ್ತದೆ. ಸರಕು ಸೇವೆಗಳಿಗೆ ಬೇಡಿಕೆ ಕಡಿಮೆ ಆಗುತ್ತದೆ. ಬೆಲೆ ಏರಿಕೆಯ ದರವೂ ತಗ್ಗುತ್ತದೆ. ಹಾಗೆಯೇ, ಆರ್ಥಿಕತೆ ಅರಳುತ್ತಿದ್ದಾಗ ಕೆಲಸಗಾರರು ಹೆಚ್ಚೆಚ್ಚು ಬೇಕಾಗುತ್ತಾರೆ. ಕೂಲಿ ಹೆಚ್ಚುತ್ತದೆ. ಹೆಚ್ಚಿದ ಉತ್ಪಾದನಾ ವೆಚ್ಚವನ್ನು ಬಳಕೆದಾರರು ತೆರಬೇಕಾಗುತ್ತದೆ. ಪದಾರ್ಥಗಳ ಬೆಲೆ ಹೆಚ್ಚುತ್ತವೆ, ಹಣದುಬ್ಬರ ಹೆಚ್ಚುತ್ತದೆ. ನಿರುದ್ಯೋಗ ಕಮ್ಮಿಯಾಗುತ್ತದೆ.

Image
Russia Ukarin War
ರಷ್ಯಾ-ಯುಕ್ರೇನ್ ಯುದ್ಧಭೂಮಿ

ಆದರೆ, ಉಬ್ಬರ ಸ್ಥಗಿತದ ಸ್ಥಿತಿ ಬೇರೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕೆ ಭಿನ್ನವಾದ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೇಂದ್ರ ಬ್ಯಾಂಕುಗಳಿಗೆ ಒಂದು ರೀತಿಯ ಇಕ್ಕಟ್ಟಿನ ಪರಿಸ್ಥಿತಿ. ಯಾಕೆಂದರೆ, ಆರ್ಥಿಕತೆ ಸ್ಥಗಿತಗೊಂಡಾಗ ಸ್ವಾಭಾವಿಕವಾಗಿಯೇ ಕೇಂದ್ರ ಬ್ಯಾಂಕುಗಳು ಹೂಡಿಕೆಯನ್ನು ಪ್ರೋತ್ಸಾಹಿಸಬೇಕು. ಅದಕ್ಕಾಗಿ ಬಡ್ಡಿ ದರ ಕಡಿಮೆ ಮಾಡುತ್ತವೆ. ಆ ಮೂಲಕ ಹೂಡಿಕೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡುತ್ತವೆ. ಆದರೆ, ಅದರಿಂದ ಬೆಲೆ ಹೆಚ್ಚಿ, ಹಣದುಬ್ಬರ ಇನ್ನಷ್ಟು ಹೆಚ್ಚಾಗಿಬಿಡಬಹುದು. ಹಾಗೆಯೇ, ಹಣದುಬ್ಬರವನ್ನು ಕಡಿಮೆ ಮಾಡಲು ಬಡ್ಡಿದರವನ್ನು ಹೆಚ್ಚಿಸಿದರೆ, ಆರ್ಥಿಕ ಬೆಳವಣಿಗೆ ಇನ್ನಷ್ಟು ಕುಂಠಿತಗೊಳ್ಳುವ ಸಾಧ್ಯತೆ ಇರುತ್ತದೆ.

ಹಣದುಬ್ಬರ ಕೆಲವೇ ದಿನಗಳಲ್ಲಿ ನಿಯಂತ್ರಣಕ್ಕೆ ಬರುತ್ತದೆ ಎಂದೇ ಜಗತ್ತಿನ ಹೆಚ್ಚಿನ ದೇಶಗಳು, ಹಣಕಾಸು ಸಂಸ್ಥೆಗಳು ಭಾವಿಸಿದ್ದವು. ಹಾಗಾಗಿ, ಬಡ್ಡಿದರ ಇಳಿಕೆ ಇತ್ಯಾದಿ ಕ್ರಮಗಳಿಗೆ ಕೈಹಾಕಿರಲಿಲ್ಲ. ಆದರೆ, ಕಳೆದ ತಿಂಗಳು ಯುಕ್ರೇನ್ ಮೇಲೆ ದಾಳಿಯ ನಂತರ ಮತ್ತು ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಪರಿಸ್ಥಿತಿ ಬದಲಾಗಿದೆ. ಗೋಧಿ, ಇಂದನ ಇತ್ಯಾದಿ ಹಲವು ಪದಾರ್ಥಗಳ ಬೆಲೆ ಹೆಚ್ಚಿದೆ. ಇದರಿಂದ ಹಣದುಬ್ಬರ ದರ ಕೂಡ ಒಂದೇ ಸಮ ಹೆಚ್ಚುತ್ತಿದೆ. ಆರ್ಥಿಕ ಬೆಳವಣಿಗೆಯೂ ಕುಂಠಿತವಾಗುತ್ತಿದೆ. ಹಾಗಾಗಿ, ಈಗ ಆರ್ಥಿಕ ಉಬ್ಬರ ಸ್ಥಗಿತತೆಯ ಸ್ಥಿತಿ ಕೇವಲ ಆತಂಕವಾಗಿ ಉಳಿದಿಲ್ಲ. ಅದು ಹೆಚ್ಚು ವಾಸ್ತವವಾಗಿದೆ. ಇದಕ್ಕೆ ರಷ್ಯಾ-ಯುಕ್ರೇನ್ ಯುದ್ಧ ಬಹುಮಟ್ಟಿಗೆ ಕಾರಣ.

ಬಹುತೇಕ ರಾಷ್ಟ್ರಗಳು ಪೆಟ್ರೋಲಿಯಂ ಸೇರಿದಂತೆ ಹಲವು ಪದಾರ್ಥಗಳಿಗೆ ರಷ್ಯಾ ಮತ್ತು ಯುಕ್ರೇನ್ ದೇಶಗಳನ್ನು ಅವಲಂಬಿಸಿರುವುದು ಸತ್ಯ. ರಷ್ಯಾ-ಯುಕ್ರೇನ್ ಒಟ್ಟಾಗಿ ಜಗತ್ತಿನ ಶೇಕಡ 30ರಷ್ಟು ಗೋಧಿಯನ್ನು ಉತ್ಪಾದಿಸುತ್ತದೆ. ಕಳೆದ 5 ವರ್ಷಗಳಲ್ಲಿ ಜಗತ್ತಿನ ಶೇಕಡ 17ರಷ್ಟು ಜೋಳವನ್ನು, ಶೇಕಡ 32ರಷ್ಟು ಬಾರ್ಲಿಯನ್ನು ಹಾಗೂ ಶೇಕಡ ಏಳರಷ್ಟು ಸೂರ್ಯಕಾಂತಿ ಎಣ್ಣೆಯನ್ನು ಉತ್ಪಾದಿಸುತ್ತಿದ್ದವು. ಜೊತೆಗೆ, ಗೊಬ್ಬರ ಮತ್ತು ನೈಸರ್ಗಿಕ ಅನಿಲವನ್ನು ಪೂರೈಸುವ ದೇಶಗಳಲ್ಲಿ ರಷ್ಯಾ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ. ರಷ್ಯಾದಿಂದ ಏನನ್ನೂ ಆಮದು ಮಾಡಿಕೊಳ್ಳಬಾರದು ಅಂತ ನಿರ್ಬಂಧ ಹೇರಿದರೆ, ಸ್ವಾಭಾವಿಕವಾಗಿಯೇ ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ಉಂಟಾಗುತ್ತದೆ. ಕೇವಲ ಆಹಾರ ಪದಾರ್ಥಗಳು, ಪೆಟ್ರೋಲಿಯಂ ಪದಾರ್ಥಗಳು ಮಾತ್ರವಲ್ಲ, ಇನ್ನೂ ಹಲವು ಪದಾರ್ಥಗಳ ಬೆಲೆಗಳು ಏರುತ್ತವೆ. ಈಗಾಗಲೇ ಗೋಧಿಯ ಬೆಲೆ ಶೇಕಡ 21ರಷ್ಟು ಹೆಚ್ಚಿದೆ, ಬಾರ್ಲಿ ಶೇಕಡ 33ರಷ್ಟು ಹೆಚ್ಚಿದೆ. ರಾಸಾಯನಿಕ ಗೊಬ್ಬರ ಶೇಕಡ 40ರಷ್ಟು ಹೆಚ್ಚಿದೆ. ಈ ಯುದ್ಧ ಇನ್ನಷ್ಟು ದಿನ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

Image
Putin
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಭಾರತ ಕೂಡ ತನ್ನ ಅವಶ್ಯಕತೆಯ ಶೇಕಡ 25ರಷ್ಟನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ರಂಜಕಕ್ಕೆ (ಫಾಸ್ಪರಸ್) ಅದು ಶೇಕಡ 90ರಷ್ಟು ಆಮದನ್ನು ಅವಲಂಬಿಸಿದೆ. ಪೊಟ್ಯಾಷ್‌ ಅನ್ನು ಕೂಡ ಶೇಕಡ ನೂರರಷ್ಟು ಆಮದು ಮಾಡಿಕೊಳ್ಳುತ್ತಿದೆ. ಆಹಾರ ಪದಾರ್ಥಗಳ ವಿಷಯಕ್ಕೆ ಬಂದಾಗ ಭಾರತ ನೆಮ್ಮದಿ ಪಟ್ಟುಕೊಳ್ಳಬಹುದಾದ ಒಂದು ವಿಷಯ ಅಂದರೆ, ಭಾರತದ ಆಹಾರ ನಿಗಮದಲ್ಲಿ ಈಗ 234 ಮಿಲಿಯನ್ ಟನ್ ದಾಸ್ತಾನು ಇದೆ.

ಇನ್ನು, ಖಾದ್ಯ ತೈಲ ವಿಷಯಕ್ಕೆ ಬಂದರೆ, ಭಾರತ ತನ್ನ ಅವಶ್ಯಕತೆಯ ಶೇಕಡ 55ರಷ್ಟನ್ನು ಕಳೆದ ಎರಡು ವರ್ಷ ಆಮದು ಮಾಡಿಕೊಳ್ಳುತ್ತಿತ್ತು. ಸರ್ಕಾರ ದಾಸ್ತಾನು ಮಿತಿಯನ್ನು ಹಾಕಿರುವುದರಿಂದ ರೈತರು ಹೆಚ್ಚಿನ ಬೆಲೆಗೆ ಮಾರಿಕೊಳ್ಳಬಹುದಾದ ಅವಕಾಶಗಳು ಕಡಿಮೆ. ಈಗ ಹಲವು ರಾಜ್ಯಗಳಲ್ಲಿ ಚುನಾವಣೆ ಮುಗಿದಿರುವುದರಿಂದ ಸರ್ಕಾರ ಮತ್ತೆ ಪೆಟ್ರೋಲಿಯಂ ಬೆಲೆಯನ್ನು ನಿರಂತರವಾಗಿ ಏರಿಸುತ್ತಿರುವುದನ್ನು ಕಾಣಬಹುದು. ಉಕ್ರೇನ್ ಮತ್ತು ರಷ್ಯಾ ಸೂರ್ಯಕಾಂತಿ ಎಣ್ಣೆಯ ಅತಿ ಹೆಚ್ಚಿನ ಉತ್ಪಾದಕರು. ಹಾಗಾಗಿ, ಯುದ್ಧ ಮುಂದುವರಿದರೆ ಆಮದು ಅವಲಂಬಿತ ದೇಶಗಳ ಸಂಕಷ್ಟ ಹೆಚ್ಚುತ್ತದೆ. ಗೊಬ್ಬರ ಇಲ್ಲದಿದ್ದರೆ ಅಕ್ಕಿ, ಸೋಯಾಬಿನ್, ಹತ್ತಿ ಹಾಗೂ ಇತರ ಬೆಳೆಗಳ ಉತ್ಪಾದಕತೆ ಕಮ್ಮಿಯಾಗುತ್ತದೆ. ಯುದ್ಧ ನಿಂತರೂ ಹಲವು ದೇಶಗಳ ಆರ್ಥಿಕತೆಗೆ ಸಾಕಷ್ಟು ಘಾಸಿಯಾಗುತ್ತದೆ. ಹಾಗಾಗಿ, ರಷ್ಯಾ-ಉಕ್ರೇನ್ ಯುದ್ಧದ ಸಂಪೂರ್ಣ ಪರಿಣಾಮ ಮುಂದಿನ ತಿಂಗಳುಗಳಲ್ಲಿ ಅನಾವರಣಗೊಳ್ಳುತ್ತವೆ.

ಇದನ್ನು ಓದಿದ್ದೀರಾ?: ಬೆಲೆ ಏರುತ್ತಲೇ ಇದ್ದರೂ ಸರ್ಕಾರ ಸುಮ್ಮನಿರುವುದಕ್ಕೆ ಕಾರಣಗಳಿವೆ

ಅಮೆರಿಕ ನೇರವಾಗಿ ಯುದ್ಧದಲ್ಲಿ ಭಾಗವಹಿಸದೆ ಆರ್ಥಿಕ ಸಮರವನ್ನು ಸಾರಿದೆ. ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಿದೆ. ಈಗ ಆರ್ಥಿಕ ನಿರ್ಬಂಧಗಳು ಅಮೆರಿಕದಂಥ ಸಾಮ್ರಾಜ್ಯಶಾಹಿ ರಾಷ್ಟ್ರಗಳಿಗೆ ಪ್ರಮುಖ ಅಸ್ತ್ರವಾಗಿದೆ. ಆದರೆ, ಸಂಪೂರ್ಣ ನಿರ್ಬಂಧ ಹೇರುವುದು ಅಮೆರಿಕಗೆ ಸಾಧ್ಯವಾಗಿಲ್ಲ. ರಷ್ಯಾದಿಂದ ಇಂಧನದ ಆಮದನ್ನು ನಿರ್ಬಂಧಿಸುವುದು ಕಷ್ಟದ ಕೆಲಸ. ಯಾಕೆಂದರೆ, ಐರೋಪ್ಯ ಒಕ್ಕೂಟಕ್ಕೆ ಬೇಕಾದ ಇಂಧನದ ಶೇಕಡ 40ರಷ್ಟು ರಷ್ಯಾದಿಂದ ಪೂರೈಕೆಯಾಗುತ್ತದೆ. ರಷ್ಯಾದಿಂದ ಪ್ರತಿದಿನ ಐದು ಮಿಲಿಯನ್ ಬ್ಯಾರಲ್ ಪೆಟ್ರೋಲ್ ರಫ್ತಾಗುತ್ತಿದೆ. ಹಾಗಾಗಿ, ಆಮದು ಮಾಡಿಕೊಳ್ಳಬಾರದು ಅಂದುಬಿಟ್ಟರೆ ಐರೋಪ್ಯ ದೇಶಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಆಗ ಅಲ್ಲಿಂದಲೂ ನಿರ್ಬಂಧಗಳಿಗೆ ವಿರೋಧ ಬರಬಹುದು. ಪಶ್ವಿಮ ರಾಷ್ಟ್ರಗಳೊಂದಿಗಿನ ಮೈತ್ರಿಗೆ ತೊಂದರೆ ಆಗಿಬಿಡಬಹುದು. ಹಾಗಾಗಿ, ರಷ್ಯಾ ಮೇಲಿನ ಜಗತ್ತಿನ ಅವಲಂಬನೆಯನ್ನು ಕಡಿಮೆ ಮಾಡುವುದಕ್ಕೆ ಉಳಿದ ಇಂಧನ ಉತ್ಪಾದಕರನ್ನು ಹೆಚ್ಚು ಉತ್ಪಾದಿಸಲು, ರಫ್ತು ಮಾಡಲು ಅಮೆರಿಕ ಒತ್ತಾಯಿಸುತ್ತಿದೆ. ತಮಾಷೆ ಅಂದರೆ, ಅವರು ಇಂದು ಹೆಚ್ಚು ಉತ್ಪಾದಿಸಲು ಒತ್ತಾಯ ಹೇರುತ್ತಿರುವ ಇರಾನ್, ವೆನಿಜುವೆಲಾ ದೇಶಗಳ ಮೇಲೆ ಈವರೆಗೂ ಅಮೆರಿಕ ನಿರ್ಬಂಧ ಹೇರಿತ್ತು. ವೆನಿಜುವೆಲಾ ಸರ್ಕಾರವನ್ನು ಉರುಳಿಸಲು ಅಮೆರಿಕ ಪ್ರಯತ್ನಿಸುತ್ತಲೇ ಇತ್ತು. ಇರಾನ್ ಮೇಲೂ 1979ರಿಂದ ಒಂದಲ್ಲ ಒಂದು ರೀತಿಯ ನಿರ್ಬಂಧಗಳನ್ನು ಹೇರುತ್ತಲೇ ಬಂದಿದೆ. ಇತ್ತೀಚೆಗೆ ಜೋ ಬೈಡನ್ ಇರಾನ್ ವಿರುದ್ಧ ನಿರ್ಬಂಧಗಳು ಮುಂದುವರಿಯುತ್ತವೆ ಎಂದೇ ಹೇಳಿದ್ದರು. ಇಂತಹ ಕ್ರಮಗಳಿಂದಾಗಿ ಅವೆರಡೂ ದೇಶಗಳ ಇಂಧನದ ರಫ್ತಿನ ಪ್ರಮಾಣ ಕಡಿಮೆಯಾಗಿತ್ತು. ಅವು ಸಾಕಷ್ಟು ಸಂಕಟದಲ್ಲಿದ್ದವು. ಈಗ ಅಮೆರಿಕವು ರಷ್ಯಾವನ್ನು ಹೊರಗಿಡುವುದಕ್ಕೆ ಇರಾನ್ ಜೊತೆ ಚರ್ಚಿಸುತ್ತಿದೆ.

Image
Nicolás Maduro 2
ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮದುರೊ

ಆದರೆ, ಅದು ಅಷ್ಟು ಸಲೀಸಲ್ಲ. ಮೊದಲನೆಯದಾಗಿ, ಇತ್ತೀಚಿನ ದಿನಗಳಲ್ಲಿ ಇರಾನ್, ವೆನಿಜುವೆಲಾ ದೇಶಗಳ ಇಂಧನ ಉತ್ಪಾದನೆ ಕಡಿಮೆಯಾಗಿದೆ. ಅವುಗಳ ಮೇಲೆ ವಿಧಿಸಿದ ನಿರ್ಬಂಧಗಳಿಂದಾಗಿ ಅವು ತಮ್ಮ ಉತ್ಪಾದನೆಯನ್ನು ಕಡಿಮೆ ಮಾಡಿಕೊಂಡಿವೆ. ದಿಢೀರನೆ ಉತ್ಪಾದನೆ ಹೆಚ್ಚಿಸಿಕೊಳ್ಳುವುದು ಸಾಧ್ಯವಿಲ್ಲ. ಪ್ರಯತ್ನಿಸಿದರೂ ತಕ್ಷಣಕ್ಕೆ ಪ್ರತಿದಿನ ಐದು ಮಿಲಿಯನ್ ಬ್ಯಾರಲ್ ಪೆಟ್ರೋಲ್ ಪೂರೈಸುವುದು ಕಷ್ಟವಾಗಬಹುದು. ಜೊತೆಗೆ, ಇನ್ನೊಂದು ಸಮಸ್ಯೆ ಅಂದರೆ, ರಷ್ಯಾ ಇಂದು ಅತ್ಯಂತ ರಿಯಾಯತಿ ದರದಲ್ಲಿ ಇಂಧನ ಪೂರೈಸುತ್ತಿದೆ. ಪ್ರತಿ ಬ್ಯಾರಲ್‌ಗೆ 35 ಡಾಲರ್‌ನಷ್ಟು ಕಡಿಮೆ ದರದಲ್ಲಿ ಅದು ಪೆಟ್ರೋಲ್ ಒದಗಿಸುತ್ತಿದೆ. ಹಾಗಾಗಿ, ಬೇರೆ ದೇಶಗಳಿಂದ ಆಮದು ಮಾಡುಕೊಳ್ಳುವುದು ಎಲ್ಲ ದೇಶಗಳಿಗೂ ಹೊರೆಯಾಗುತ್ತದೆ.

ಭಾರತ ಕೂಡ ರಷ್ಯಾದಿಂದ ಪೆಟ್ರೋಲ್ ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕದಿಂದ ನೇರ ಒತ್ತಡ ಬಂದಿದ್ದರೂ ಆಮದು ಮಾಡಿಕೊಳ್ಳುತ್ತಲೇ ಇದೆ. ಕಳೆದ ಕೆಲವು ದಿನಗಳಲ್ಲಿ ಭಾರತದ ಇಂಧನದ ಆಮದು ನಾಲ್ಕು ಪಟ್ಟು ಹೆಚ್ಚಾಗಿದೆ. ಈಗ ಪ್ರತಿದಿನ 360,000 ಬ್ಯಾರಲ್ ಆಮದು ಮಾಡಿಕೊಳ್ಳಲಾಗುತ್ತಿದೆ. ರಷ್ಯಾ ನೀಡುತ್ತಿರುವ ರಿಯಾಯತಿಯಿಂದ ಭಾರತದ ಆಮದಿನ ಖರ್ಚು ತಿಂಗಳಿಗೆ 200 ಮಿಲಿಯನ್ ಡಾಲರ್‌ನಷ್ಟು ಕಡಿಮೆಯಾಗುತ್ತಿದೆ. ಹಾಗಾಗಿ, ಬಹುತೇಕ ರಾಷ್ಟ್ರಗಳು ರಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ.

Image
Ebrahim Raisi
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ

ರಷ್ಯಾ-ಯುಕ್ರೇನ್ ಯುದ್ಧ ಹಲವು ಹೊಸ ಅನುಮಾನಗಳನ್ನು ಸೃಷ್ಟಿಸಿವೆ. ಅಮೆರಿಕದ ಪ್ರಾಬಲ್ಯ ಮೊದಲಿಗಿಂತ ಕಡಿಮೆಯಾಗಿದೆ ಅನ್ನುವ ಅನುಮಾನ ಇದೆ. ಹಾಗಾಗಿ, ಆರ್ಥಿಕವಾಗಿ ಅಮೆರಿಕ ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳುತ್ತದೆಯೇ ಅನ್ನುವ ಪ್ರಶ್ನೆಯೂ ಈಗ ಮುಂಚೂಣಿಗೆ ಬರುತ್ತಿದೆ. ಹೆಚ್ಚಿನ ದೇಶಗಳು ಡಾಲರ್ ಬಿಟ್ಟು ತಮ್ಮದೇ ಆದ ರೀತಿಯಲ್ಲಿ ರಷ್ಯಾ ಜೊತೆ ವಹಿವಾಟು ಮಾಡಿಕೊಳ್ಳುತ್ತಿವೆ. ರಷ್ಯಾ ತನ್ನ ರಫ್ತಿಗೆ ರ‍್ಯೂಬಲ್ ಮೂಲಕ ಹಣ ಪಾವತಿಸಲು ಕೇಳುತ್ತಿದೆ. ಭಾರತ ಕೂಡ ಆ ನಿಟ್ಟಿನಲ್ಲಿ ಯೋಚಿಸುತ್ತಿದೆ. ಹಾಗಾಗಿ, ಡಾಲರ್ ಕೂಡ ಅಂತಾರಾಷ್ಟ್ರೀಯ ಕರೆನ್ಸಿಯಾಗಿ ತನ್ನ ಮಹತ್ವ ಕಳೆದುಕೊಳ್ಳಬಹುದು.

ಯುದ್ಧಗಳು ದೇಶಗಳ ನಡುವೆ, ಜನರ ನಡುವೆ ದ್ವೇಷ ಹರಡುತ್ತವೆ, ಸಂಬಂಧಗಳನ್ನು ನಾಶಮಾಡಿಬಿಡುತ್ತವೆ. ಇದು ಯಾವುದೇ ಹಿಂಸೆಯ ವಿಷಯದಲ್ಲೂ ನಿಜ. ಆದ ಗಾಯ ಬಹುಕಾಲ ವಾಸಿಯಾಗುವುದಿಲ್ಲ. ದೇಶಗಳು, ಸಮುದಾಯಗಳು ಆರ್ಥಿಕವಾಗಿ ನಲುಗಿಬಿಡುತ್ತವೆ. ಜೊತೆಗೆ, ಶಾಂತಿ, ನ್ಯಾಯ ಇತ್ಯಾದಿ ಮೌಲ್ಯಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಕಷ್ಟಪಟ್ಟು ಕಟ್ಟಿದ ಸಂಸ್ಥೆಗಳನ್ನು ಈ ಪ್ರಕ್ರಿಯೆಯಲ್ಲಿ ನಾಶಮಾಡಿಬಿಡುತ್ತೇವೆ. ಇದು ಆಗಬಾರದು.

ನಿಮಗೆ ಏನು ಅನ್ನಿಸ್ತು?
2 ವೋಟ್