ಅರ್ಥ ಪಥ | ಜಾಗತೀಕರಣದ ಯುಗ ನಿಜಕ್ಕೂ ಮುಗಿದುಹೋಯಿತೇ?

Sri Lanka Crisis

ಕೊರೋನಾ ಕಾಟ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರಗಳಲ್ಲಿ, ಕೆಲವೇ ಮಿತ್ರ ದೇಶಗಳು ಒಂದಾಗಿ ತಮ್ಮೊಳಗೇ ವ್ಯಾಪಾರ ಮಾಡಿಕೊಳ್ಳುವಂಥ ವ್ಯವಸ್ಥೆ ಹುಟ್ಟುಹಾಕುವ ಚರ್ಚೆ ಶುರುವಾಗಿದೆ. ಆದರೆ, ಹೀಗೆ ದ್ವೀಪಗಳಂತಾಗುವುದು ಈ ಸಮಸ್ಯೆಗೆ ನಿಜಕ್ಕೂ ಪರಿಹಾರವೇ? ಇದರಿಂದ ಬಡ ರಾಷ್ಟ್ರಗಳಿಗೆ ಅನ್ಯಾಯ ಆಗುವುದಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಜಾಗತೀಕರಣದ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಅದರ ಅವಸಾನ ಪ್ರಾರಂಭವಾಗಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿವೆ. ಕೊರೋನಾ, ಉಕ್ರೇನ್ ಯುದ್ಧದಿಂದ ಸೃಷ್ಟಿಯಾದ ಪೂರೈಕೆಯ ಸಮಸ್ಯೆಗಳು ಇದಕ್ಕೆ ಬಹುಮಟ್ಟಿಗೆ ಕಾರಣ. ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲ್ಲೆನ್ ಜಾಗತಿಕ ಆರ್ಥಿಕ ವ್ಯವಸ್ಥೆಯ ಪುನಶ್ಚೇತನ ಕುರಿತು ಮಾತನಾಡುವಾಗ, ಮೈತ್ರಿ ಒಕ್ಕೂಟ ವ್ಯಾಪಾರಕ್ಕೆ (ಫ್ರೆಂಡ್ ಶೋರಿಂಗ್) ಅಂದರೆ, ಕೆಲವೇ ನಂಬಿಕಸ್ಥ ದೇಶಗಳ ಜೊತೆ ಪ್ರಮುಖ ಸರಕುಗಳ ವ್ಯಾಪಾರ, ವಹಿವಾಟನ್ನು ನಡೆಸಲು ಕರೆ ನೀಡಿದ್ದಾರೆ. ಆಗ, ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಪ್ರಮುಖ ವಸ್ತುಗಳ ಪೂರೈಕೆ ಸಮಸ್ಯೆಯ ಅಪಾಯ ಇರುವುದಿಲ್ಲ ಎನ್ನುವುದು ಈ ಸಲಹೆಯ ಇಂಗಿತ. ರಷ್ಯಾ-ಉಕ್ರೇನ್ ಯುದ್ಧದಿಂದ ಪೆಟ್ರೋಲ್, ಆಹಾರ, ಗೊಬ್ಬರ ಹಾಗೂ ಇತರ ಸರಕುಗಳ ಬೆಲೆಗಳಲ್ಲಿ ವಿಪರೀತ ಏರಿಕೆಯಾಗಿದೆ. ಹಾಗೆಯೇ, ಪೂರೈಕೆಯಲ್ಲೂ ಸಾಕಷ್ಟು ತೊಂದರೆಯಾಗಿ, ಜಗತ್ತು ಇವುಗಳ ತೀವ್ರ ಕೊರತೆಯನ್ನು ಅನುಭವಿಸುತ್ತಿದೆ. ಇದು ಒಟ್ಟಾರೆ ಆರ್ಥಿಕತೆಯನ್ನು ತೀವ್ರವಾಗಿ ಬಾಧಿಸಿದೆ. ಮುಂದೆ ಈ ತೊಂದರೆ ಆಗಬಾರದು ಅಂತಾದರೆ, ಕೇವಲ ಮಿತ್ರರಾಷ್ಟ್ರಗಳ ನಡುವೆ ವ್ಯವಹಾರ ನಡೆಸುವುದು ಒಳ್ಳೆಯದು ಎಂದು ಕೆಲವರಿಗೆ ತೋರುತ್ತಿದೆ.

ಉಕ್ರೇನ್ ಮೇಲೆ ಯುದ್ಧ ಮಾಡಿದರೆ ತಮ್ಮ ಮೇಲೆ ನಿರ್ಬಂಧ ಹೇರುತ್ತಾರೆ ಅನ್ನುವುದು ರಷ್ಯಾಕ್ಕೆ ತಿಳಿದಿತ್ತು. ಬಹುಶಃ ನಿರ್ಬಂಧಗಳ ವ್ಯಾಪ್ತಿಯ ಅರಿವು ಪೂರ್ಣವಾಗಿ ಇಲ್ಲದೆ ಇದ್ದಿರಬಹುದು. ಆದರೆ, ಜಗತ್ತು ಇಂದು ಪರಸ್ಪರ ಎಷ್ಟೊಂದು ಅವಲಂಬಿತವಾಗಿದೆ ಅಂದರೆ, ರಷ್ಯಾದ ಪೆಟ್ರೋಲ್ ಇಲ್ಲದೆ ಎಷ್ಟೋ ದೇಶಗಳಿಗೆ ದಿನನಿತ್ಯದ ವ್ಯವಹಾರವೇ ಸಾಧ್ಯವಿಲ್ಲ. ಹಾಗಾಗಿಯೇ, ಭಾರತ ಮತ್ತು ಕೆಲವು ಐರೋಪ್ಯ ರಾಷ್ಟ್ರಗಳೂ ಸೇರಿದಂತೆ ಎಷ್ಟೋ ದೇಶಗಳು ತಮಗೆ ಬೇಕಾದ ಪೆಟ್ರೋಲ್ ಮತ್ತಿತರ ಅವಶ್ಯ ವಸ್ತುಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿವೆ. ಯುದ್ಧಪೂರ್ವ ದಿನಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ರಷ್ಯಾ ರಫ್ತು ಮಾಡಿದೆ. ಹಾಗಾಗಿ, ಇಷ್ಟೆಲ್ಲ ನಿರ್ಬಂಧಗಳ ನಡುವೆಯೂ ಜಗತ್ತು ಭಾವಿಸಿದ ಪ್ರಮಾಣದ ಆರ್ಥಿಕತೆಯ ಬಿಕ್ಕಟ್ಟನ್ನು ರಷ್ಯಾ ಎದುರಿಸುತ್ತಿಲ್ಲ. ಆದರೆ, ಜಗತ್ತಿನ ಹಲವು ರಾಷ್ಟ್ರಗಳು ತೀವ್ರವಾದ ಬಿಕ್ಕಟ್ಟಿಗೆ ತುತ್ತಾಗಿವೆ. ಹೆಚ್ಚಿನ ಕಡೆಗಳಲ್ಲಿ ಆಹಾರದ ಕೊರತೆ ತೀವ್ರವಾಗಲಿದೆ ಎಂಬ ಆತಂಕ ಆವರಿಸಿದೆ.

ಹಾಗಾಗಿ, “ಕೆಲವು ರಾಷ್ಟ್ರಗಳು ಪ್ರಮುಖ ಕಚ್ಚಾ ಸಾಮಗ್ರಿಗಳು, ತಂತ್ರಜ್ಞಾನ ಅಥವಾ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತಮಗಿರುವ ಪ್ರಾಬಲ್ಯವನ್ನು ಬಳಸಿಕೊಂಡು ಉಳಿದ ದೇಶಗಳ ಆರ್ಥಿಕತೆಯನ್ನು ನಾಶ ಮಾಡಲು ಬಿಡಬಾರದು. ಆದ್ದರಿಂದ ಆ ಪದಾರ್ಥಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಬೇಕು ಅಥವಾ ಕೆಲವು ಮಿತ್ರರಾಷ್ಟ್ರಗಳು ಒಂದಾಗಿ ತಮ್ಮೊಳಗೇ ವ್ಯಾಪಾರ ಮಾಡಿಕೊಂಡು ಇಂತಹ ಅಪಾಯ ಮರುಕಳಿಸದಂತೆ ನೋಡಿಕೊಳ್ಳಬೇಕು. ಒಂದು ಮೌಲ್ಯವನ್ನು ಒಪ್ಪಿಕೊಂಡಿರುವ ಮತ್ತು ಅದಕ್ಕೆ ಬದ್ಧವಾಗಿರುವ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು,” ಎಂಬಂತಹ ಹೇಳಿಕೆಗಳು ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಧ್ವನಿಸುತ್ತಿವೆ.

Image
Janet Yellen
ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲ್ಲೆನ್

ಯೆಲ್ಲನ್ ಅವರ ಈ ವಾದವು ಹುಟ್ಟಿಕೊಂಡಿರುವುದೂ ಈ ಹಿನ್ನೆಲೆಯಲ್ಲೇ. ಆದರೆ, ಈ ವಾದ ಹಲವು ದಶಕಗಳಿಂದ ಅಮೆರಿಕ ಮತ್ತು ಯುರೋಪಿನ ನಾಯಕರು ಪ್ರತಿಪಾದಿಸುತ್ತ ಬಂದಿರುವ ಜಾಗತೀಕರಣ ಸಿದ್ಧಾಂತಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಜಾಗತಿಕ ವ್ಯಾಪಾರ ಮುಖ್ಯ. ಅದು ಎಲ್ಲ ದೇಶಗಳನ್ನೂ ಬೆಸೆಯುತ್ತದೆ. ಇದರಿಂದ ಹಿಂದುಳಿದ ರಾಷ್ಟ್ರಗಳಲ್ಲೂ ಬೆಳವಣಿಗೆ ಸಾಧ್ಯವಾಗುತ್ತದೆ. ಅದಕ್ಕಾಗಿ ಜಾಗತಿಕ ವಾಣಿಜ್ಯ ಮತ್ತು ಹಣಕಾಸಿನ ಸಂಬಂಧಗಳನ್ನು ಒಳಗೊಂಡ ಒಂದು ಸ್ಥಿರವಾದ ಅಂತಾರಾಷ್ಟ್ರೀಯ ವ್ಯವಸ್ಥೆ ಬೇಕು ಅನ್ನುವುದು ಮುಖ್ಯ ವಾದವಾಗಿತ್ತು. ವ್ಯಾಪಾರವೇ ಮೊದಲು ಅಂತ ಜರ್ಮನಿಯು ಎಲ್ಲ ವಿರೋಧಗಳ ನಡುವೆಯೂ ರಷ್ಯಾ ಜೊತೆ ಬೃಹತ್ ಪೈಪ್‍ಲೈನ್ ಯೋಜನೆಗೆ ಕೈಹಾಕಿತು. ಬ್ರಿಟನ್ ಕೆಂಪು ಕಂಬಳಿ ಹಾಸಿ ಚೀನಾವನ್ನು ಸ್ವಾಗತಿಸಿತು. ವ್ಯಾಪಾರದ ಮೂಲಕ ಸ್ನೇಹ ಅನ್ನುವ ನಂಬಿಕೆ ವ್ಯಾಪಕವಾಗಿತ್ತು. ಅದರಿಂದ ಅಗ್ಗದ ದರದಲ್ಲಿ, ಸಲೀಸಾಗಿ ತಂತ್ರಜ್ಞಾನ, ಸರಕು, ಇವೆಲ್ಲ ಜಗತ್ತಿಗೆ ಲಭ್ಯವಾಗುತ್ತವೆ ಎಂಬ ನಿರೀಕ್ಷೆ ಆವರಿಸಿಕೊಂಡಿತ್ತು. ಆದರೆ, ಈ ತೀವ್ರವಾದ ಅವಲಂಬನೆಯಿಂದ ಆಗಿರುವ ಅವಘಡಗಳು ಈ ನಂಬಿಕೆಯನ್ನು ಅಲ್ಲಾಡಿಸುತ್ತಿವೆ. ಜೊತೆಗೆ, ಗಂಭೀರ ಚರ್ಚೆಯನ್ನೂ ಹುಟ್ಟುಹಾಕಿದೆ.

"ಜಾಗತೀಕರಣವನ್ನು ತಿರಸ್ಕರಿಸುವುದು ಸರಿಯಲ್ಲ. ಎದುರಾಗಿರುವ ಕೆಲವು ಬಿಕ್ಕಟ್ಟುಗಳಿಗೆ ಧೃತಿಗೆಡುವ ಅವಶ್ಯಕತೆ ಇಲ್ಲ. ನಾವು ಜಾಗತಿಕವಾಗಿ ಒಟ್ಟಾಗಿ ನಿಲ್ಲುವುದರಲ್ಲೇ ಇಂದಿನ ಬಿಕ್ಕಟ್ಟಿಗೆ ಪರಿಹಾರ ಇರುವುದು," ಎಂಬುದು ರಘುರಾಂ ರಾಜನ್‌ಂತಹ ಹಲವರ ವಾದ. ಜಾಗತೀಕರಣದಿಂದ ಹಲವು ಲಾಭಗಳಾಗಿವೆ ಎನ್ನುವುದು ಅವರ ಒಟ್ಟಾರೆ ಪ್ರತಿಪಾದನೆ. ಅವರ ವಾದ ಈ ಕೆಳಗಿನಂತಿದೆ:

"ತೆರಿಗೆ, ಸಾಗಣೆ ಹಾಗೂ ಸಂವಹನ ವೆಚ್ಚದಲ್ಲಿ ಕಡಿತ ಆಗಿರುವುದರಿಂದ ಉತ್ಪಾದನಾ ವೆಚ್ಚ ಕಡಿಮೆ ಇರುವ ಕಡೆ ಉತ್ಪಾದಿಸಿ, ಜಗತ್ತಿನ ಉಳಿದ ಕಡೆಗಳಿಗೆ ಆಗ್ಗದ ದರದಲ್ಲಿ ಪೂರೈಸುವುದು ಸಾಧ್ಯವಾಗಿದೆ. ಎಲ್ಲಿ ಯಾವ ವಸ್ತುಗಳನ್ನು ತಯಾರಿಸಲು ಅನುಕೂಲವಿರುತ್ತದೆಯೋ ಆಯಾ ದೇಶಗಳಲ್ಲಿ ತಯಾರಿಸುವುದರಲ್ಲೇ ಲಾಭ ಇದೆ. ಎಲ್ಲಿ ಸಂಶೋಧನೆ ನಡೆಸುವುದಕ್ಕೆ ಅನುಕೂಲ ಇದೆಯೋ ಅಲ್ಲಿ ಸಂಶೋಧನೆ ನಡೆಯಬೇಕು. ಎಲ್ಲಿ ಉತ್ಪಾದನೆ ಅಗ್ಗವಾಗಿ ಆಗುತ್ತದೋ ಅಲ್ಲಿ ಉತ್ಪಾದನೆ ನಡೆಯಬೇಕು. ಎಲ್ಲಿ ಕೃಷಿಗೆ ಅನುಕೂಲಕರ ಪರಿಸ್ಥಿತಿ ಇದೆಯೋ ಅಲ್ಲಿ ಕೃಷಿ ನಡೆಯಬೇಕು. ಅಂತಿಮವಾಗಿ ಅದರ ಲಾಭ ಜಗತ್ತಿಗೆ ತಲುಪಬೇಕು. ಇದು ಜಾಗತೀಕರಣದಿಂದ ಸಾಧ್ಯವಾಗಿದೆ. ಕೆಲವೇ ಮಿತ್ರರಾಷ್ಟ್ರಗಳಿಗೆ ವ್ಯಾಪಾರವನ್ನು ಸೀಮಿತಗೊಳಿಸಿಕೊಂಡರೆ ಈ ಅನುಕೂಲ ತಪ್ಪಿಹೋಗುತ್ತದೆ. ಒಂದೇ ರೀತಿಯ ಮೌಲ್ಯಗಳಿರುವ ದೇಶಗಳೊಂದಿಗೆ ವ್ಯವಹಾರ ನಡೆಸುವುದು ಅಂದರೆ, ಅಂತಿಮವಾಗಿ ಒಂದೇ ಮಟ್ಟದ ಬೆಳೆವಣಿಗೆ ಹೊಂದಿರುವ ದೇಶಗಳೊಡನೆ ವ್ಯಾಪಾರ ನಡೆಸುವುದು ಎಂತಲೇ ಆಗಿಬಿಡುತ್ತದೆ. ನಿಜವಾಗಿ ಬೆಳವಣಿಗೆಯ ವಿಭಿನ್ನ ಹಂತಗಳಲ್ಲಿರುವ ರಾಷ್ಟ್ರಗಳೊಂದಿಗೆ ವ್ಯವಹಾರ ನಡೆಸುವುದರಿಂದಲೇ ಜಾಗತಿಕ ಪೂರೈಕೆಯ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಕ್ಕೆ ಸಾಧ್ಯ. ಜೊತೆಗೆ, ಕೆಲವೇ ರಾಷ್ಟ್ರಗಳಿಗೆ ವ್ಯವಹಾರವನ್ನು ಸೀಮಿತಗೊಳಿಸಿಕೊಂಡರೆ ಸ್ಥಿರತೆ ಸಾಧ್ಯ ಅನ್ನುವುದೂ ಸರಿಯಲ್ಲ. ಇದಕ್ಕೆ ಇತ್ತೀಚೆಗೆ ಅಮೆರಿಕದಲ್ಲಿ ಕಾಣಿಸಿಕೊಂಡ ಮಕ್ಕಳ ಪೌಷ್ಟಿಕ ಹಾಲಿನ ಸಮಸ್ಯೆಯನ್ನು ಉದಾಹರಿಸುತ್ತಾರೆ. ಈ ವಸ್ತುವನ್ನು ಅಮೆರಿಕದಲ್ಲಿ ನಾಲ್ಕು ಕಂಪನಿಗಳು ತಯಾರಿಸುತ್ತವೆ. ಅಷ್ಟೇ ಅಲ್ಲ, ಸರ್ಕಾರದ ಬೆಂಬಲವೂ ಅದಕ್ಕಿದೆ. ಆದರೂ ಅದರ ಪೂರೈಕೆ ತೀವ್ರ ಅಸ್ತವ್ಯಸ್ತವಾಗಿದೆ. ಹಾಗಾಗಿ, ದೇಶದೊಳಗೆ ಪೂರೈಕೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಕಷ್ಟವಾಗಿರುವಾಗ, ಕೆಲವೇ ರಾಷ್ಟ್ರಗಳ ನಡುವೆ ಸಾಧ್ಯ ಅನ್ನುವುದನ್ನು ಒಪ್ಪಿಕೊಳ್ಳುವುದು ಕಷ್ಟ."

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಪ್ರೀತಿ, ಸಹನೆ ನಮ್ಮ ಆರ್ಥಿಕತೆಯ ಬುನಾದಿ ಆಗದಿದ್ದರೆ ಮುಂದಿನ ಹಾದಿ ಕಠಿಣ

ಅಷ್ಟೇ ಅಲ್ಲ, ಮಿತ್ರ ಒಕ್ಕೂಟ ಅನ್ನುವ ಪರಿಕಲ್ಪನೆ ಕೂಡ ಸ್ಥಿರವಲ್ಲ. ಬ್ರಿಟಿಷ್ ರಾಜಕೀಯ ಮುತ್ಸದ್ದಿ ಲಾರ್ಡ್ ಪಾಲ್ಮರ್‌ಸ್ಟನ್ 1848ರಲ್ಲೇ, "ನಮಗೆ ಯಾರೂ ಶಾಶ್ವತವಾಗಿ ಮಿತ್ರರಲ್ಲ, ಹಾಗೆಯೇ ಶಾಶ್ವತವಾಗಿ ಶತ್ರುಗಳೂ ಅಲ್ಲ. ನಮ್ಮ ಹಿತಾಸಕ್ತಿಯೊಂದೇ ಶಾಶ್ವತ. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ,” ಎಂದಿದ್ದ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಜವಾದ ಸ್ನೇಹಿತರು ಯಾರು ಅಂತ ಹೇಳುವುದೇ ಕಷ್ಟ. ಇದನ್ನು ಸಮರ್ಥಿಸಲು ಬ್ರೆಕ್ಸಿಟ್ ಉದಾಹರಣೆಯನ್ನು ಕೊಡುತ್ತಾರೆ. ಹಾಗೆಯೇ, ಟ್ರಂಪ್ ಆಳ್ವಿಕೆಯ ಸಮಯದಲ್ಲಿ ತೀರಾ ಆತ್ಮೀಯವಾಗಿದ್ದ ಕೆನಡಾ ಮತ್ತು ಅಮೆರಿಕ ನಡುವೆಯೇ ವೈಮನಸ್ಯ ಉಂಟಾಗಿತ್ತು.

ಮಿತ್ರ ಒಕ್ಕೂಟದ ಒಳಗೇ ವ್ಯಾಪಾರವನ್ನು ಸೀಮಿತ ಮಾಡಿಕೊಂಡರೆ ಬಡ ದೇಶಗಳು ಆಚೆಗೆ ಉಳಿದುಬಿಡುತ್ತವೆ. ಅವು ಹೆಚ್ಚು ಶ್ರೀಮಂತವಾಗುವ ಮತ್ತು ಪ್ರಜಾಸತ್ತಾತ್ಮಕ ಆಗಬಹುದಾದ ಸಾಧ್ಯತೆಗಳು ತಪ್ಪಿಹೋಗುತ್ತವೆ. ಭಯೋತ್ಪಾದನೆ ಬೆಳೆಯುವುದಕ್ಕೆ ಫಲವತ್ತಾದ ಸ್ಥಳವಾಗಿಬಿಡುತ್ತವೆ. ಹಿಂಸೆ ಹೆಚ್ಚುತ್ತದೆ. ಅಲ್ಲಿಂದ ಜನ ಸಾಮೂಹಿಕವಾಗಿ ವಲಸೆ ಹೋಗುವುದು ಹೆಚ್ಚಾಗಬಹುದು. ಇಂತಹ ಹಲವು ಕಾರಣಗಳಿಂದ ಮಿತ್ರ ಒಕ್ಕೂಟದ ನಡುವೆ ವ್ಯಾಪಾರ ಸೀಮಿತವಾಗುವುದು ಒಳ್ಳೆಯದಲ್ಲ ಎಂಬುದು ಅವರ ಪ್ರತಿಪಾದನೆ. ಸುಮಾರಾಗಿ ಇಂತಹುದೇ ಅಭಿಪ್ರಾಯವನ್ನು ಇನ್ನೂ ಹಲವರು ವ್ಯಕ್ತಪಡಿಸಿದ್ದಾರೆ.

ಕೇವಲ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ದೇಶದೊಳಗೆ ಅಥವಾ ಮಿತ್ರ ಒಕ್ಕೂಟದಲ್ಲಿ ತಯಾರಿಸುವುದರ ಬಗ್ಗೆ ಅವರಿಗೆ ಸಮಸ್ಯೆಯಿಲ್ಲ. ಆದರೆ ಅದನ್ನು ನೆಪ ಮಾಡಿಕೊಂಡು ಉಕ್ಕು, ಅಲ್ಯೂಮಿನಿಯಂ ಮುಂತಾದ ಹಲವು ವಸ್ತಗಳನ್ನು ಸೇರಿಸಿಕೊಳ್ಳುತ್ತ ಪಟ್ಟಿಯನ್ನು ಹಿಗ್ಗಿಸುತ್ತ ಹೋಗುವುದು ಒಳ್ಳೆಯದಲ್ಲ.

ಇವರು ಹೇಳುವುದು ಸ್ವಲ್ಪ ಮಟ್ಟಿಗೆ ನಿಜ ಇರಬಹುದು. ಜಾಗತಿಕ ಶಾಂತಿ ಮತ್ತು ಸುಭದ್ರತೆಗೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಬಲಗೊಳ್ಳಬೇಕು. ಅವು ಸಕ್ರಿಯವಾಗಿ, ಪರಿಣಾಮಕಾರಿಯಾಗಿ, ನ್ಯಾಯಯುತವಾಗಿ ಕೆಲಸ ಮಾಡಬೇಕು ಅನ್ನುವುದೂ ನಿಜ. ಹಾಗೆಯೇ, ಕೆಲವು ಜಾಗತಿಕ ಸಮಸ್ಯೆಗಳನ್ನು ಜಾಗತಿಕ ಮಟ್ಟದಲ್ಲಿಯೇ ಪರಿಹರಿಸಲು ಸಾಧ್ಯ ಅನ್ನುವುದೂ ಸತ್ಯ. ಬಡತನ, ಹವಾಮಾನ ವೈಪರೀತ್ಯ, ಕೊರೋನಾದಂತಹ ಪಿಡುಗನ್ನು ಪರಿಹರಿಸುವುದಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸಬೇಕು ಅನ್ನುವುದೂ ಅಷ್ಟೇ ಸಮಂಜಸ.

Image
Ukraine
ಉಕ್ರೇನ್

ಆದರೆ, ಈ ಸಮಸ್ಯೆಗಳನ್ನು ಹುಟ್ಟುಹಾಕಿದ್ದು ಜಾಗತೀಕರಣವೇ ಅನ್ನುವುದು ಪೂರ್ಣ ಸುಳ್ಳಲ್ಲ. ಇಂದು ಎಷ್ಟೋ ರಾಷ್ಟ್ರಗಳು ಬಡ ರಾಷ್ಟ್ರಗಳಾಗಿಯೇ ಉಳಿದಿರುವುದಕ್ಕೂ ಜಾಗತಿಕ ಆರ್ಥಿಕ ನೀತಿಗಳು ಕಾರಣ. ಯಾವುದೇ ಆರ್ಥಿಕ ಸಮಸ್ಯೆ ಮೊದಲು ಕಾಡುವುದು ಬಡ ರಾಷ್ಟ್ರಗಳನ್ನು. ರಷ್ಯಾದ ಮೇಲಿನ ನಿರ್ಬಂಧಗಳಿಂದ ನಿಜವಾಗಿ ತೊಂದರೆಗೆ ಒಳಗಾಗಿರುವುದು ಬಡ ರಾಷ್ಟ್ರಗಳು. ಐರೋಪ್ಯ ರಾಷ್ಟ್ರಗಳಿಗೂ ಇದರಿಂದ ತೊಂದರೆಯಾಗಿದೆ ಅನ್ನುವುದು ನಿಜ. ಹಾಗಾಗಿಯೇ, ಭಾರತದಂತಹ ದೇಶಗಳು ರಷ್ಯಾದಿಂದ ಪೆಟ್ರೋಲನ್ನು ಆಮದು ಮಾಡಿಕೊಳ್ಳುತ್ತಲೇ ಇವೆ. ಐರೋಪ್ಯ ರಾಷ್ಟ್ರಗಳು ಕೂಡ ಇಂದಿಗೂ ಆಮದು ಮಾಡಿಕೊಳ್ಳುತ್ತಿವೆ. ಅಮೆರಿಕದ ದೌರ್ಬಲ್ಯ ಢಾಳಾಗಿ ಕಾಣಿಸುತ್ತಿದೆ. ಮಿತ್ರ ಒಕ್ಕೂಟದ ಒಳಗೆ ವ್ಯಾಪಾರವನ್ನು ಸೀಮಿತಗೊಳಿಸಿಕೊಳ್ಳಬೇಕು ಅನ್ನುವ ವಾದವೂ ಅಮೆರಿಕದಿಂದಲೇ ಬರುತ್ತಿರುವುದು ಬಹುಶಃ ಕಾಕತಾಳೀಯವಲ್ಲ. ಇಂದು ಅಮೆರಿಕ ಪ್ರತಿಪಾದಿಸುತ್ತಿರುವ ಯುದ್ಧ ಪ್ರಚೋದಿಸುವ ಮತ್ತು ಕಾರ್ಪೊರೇಟ್ ಆರ್ಥಿಕ ನೀತಿಯು ಜಗತ್ತಿನ ಬಿಕ್ಕಟ್ಟಿಗೆ ಪರಿಹಾರವಲ್ಲ. ಇಂದು ಜಗತ್ತಿನ ಆರ್ಥಿಕತೆಯ ನಿಯಂತ್ರಣ ಇರುವುದು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಕೈಯಲ್ಲಿ. ಚಾಲ್ತಿಯಲ್ಲಿರುವುದು ನವ ಉದಾರವಾದಿ ಆರ್ಥಿಕತೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಅದೇ ಆರ್ಥಿಕ ನೀತಿಯನ್ನು ಜಾರಿಗೆ ತರುವುದು. ಆರ್ಥಿಕತೆ ವಿಫಲವಾದರೆ ಆಡಳಿತದಲ್ಲಿರುವ ಸರ್ಕಾರವನ್ನು ಟೀಕಿಸುತ್ತ ಸಾಗುತ್ತೇವೆ. ನಿಜವಾಗಿ ಅದರ ಹಿಂದಿರುವ ಆರ್ಥಿಕ ನೀತಿಯನ್ನು ಗುರುತಿಸಿ ವಿಮರ್ಶಿಸಬೇಕು. ಆರ್ಥಿಕ ಬಿಕ್ಕಟ್ಟಿಗೆ ಈ ಹಿಂದೆ ಮನಮೋಹನ್ ಸಿಂಗ್ ಅವರನ್ನು, ಈಗ ಮೋದಿಯವರನ್ನು ಟೀಕಿಸುವುದು ಅಥವಾ ಶ್ರೀಲಂಕಾದಲ್ಲಿ ರಾಜಪಕ್ಸ ಅವರನ್ನು ಟೀಕಿಸುವುದು ಒಂದು ಮಟ್ಟಿಗೆ ಮಾತ್ರ ಸರಿ. ಇವರೆಲ್ಲರೂ ಹಲವಾರು ಎಡವಟ್ಟುಗಳನ್ನು ಮಾಡುತ್ತಲೇ ಇದ್ದಾರೆ ಎನ್ನುವುದು ನಿಜ. ಆದರೆ ಸಮಸ್ಯೆ ಇರುವುದು ಅವರು ಅನುಸರಿಸುತ್ತಿರುವ ಆರ್ಥಿಕ ನೀತಿಯಲ್ಲಿ. ಯಾರೇ ಆಡಳಿತಕ್ಕೆ ಬಂದರೂ ಅದೇ ನೀತಿಗಳಿಗೆ ಶರಣಾಗುತ್ತಿರುವುದು ದುರಂತ. ಅದು ಇಂದಿನ ಸಮಸ್ಯೆಗೆ ಪರಿಹಾರವಲ್ಲ. ಅದರ ಬಗ್ಗೆ ಚರ್ಚೆ ಆಗುತ್ತಿರುವುದು ತುಂಬಾ ಕಡಿಮೆ. ನಿಜವಾಗಿ ಚರ್ಚೆ ಆಗಬೇಕಾಗಿರುವುದು ಇದು.

ಇಂದಿನ ಆರ್ಥಿಕತೆಯನ್ನು ಕಾಡುತ್ತಿರುವುದು ಪೂರೈಕೆ ಸಮಸ್ಯೆ ಅನ್ನುವುದಾದರೆ, ಅದಕ್ಕೆ ಪರಿಹಾರ ಪೂರೈಕೆಯನ್ನು ಹೆಚ್ಚಿಸುವುದರಲ್ಲಿ ಅಂದರೆ, ಉತ್ಪಾದನೆಯನ್ನು ಹೆಚ್ಚಿಸುವುದರಲ್ಲಿ ಇದೆ. ಭಾರತದಲ್ಲಿ ಖಾದ್ಯತೈಲದ ಕೊರತೆ ಇದ್ದರೆ ಅದನ್ನು ಹೆಚ್ಚು ಉತ್ಪಾದಿಸಬೇಕು. ಯಾವುದು ನಮ್ಮಲ್ಲಿ ಉತ್ಪಾದಿಸಲು ಸಾಧ್ಯವಿಲ್ಲವೋ ಅದರ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗ ಇವೆಲ್ಲ ಆದ್ಯತೆಯ ವಿಷಯಗಳಾಗಬೇಕು. ಅದಕ್ಕೆ ಬೇಕಾದ ಹಣವನ್ನು ಸಂಪತ್ತಿನ ಮೇಲೆ ತೆರಿಗೆ ವಿಧಿಸಿ ಕ್ರೋಢೀಕರಿಸಬೇಕು. ಸುಮ್ಮನೆ ಕೊರೋನಾ ಪಿಡುಗನ್ನೋ, ಉಕ್ರೇನ್ ಯುದ್ಧವನ್ನೋ ಹೊಣೆ ಮಾಡುವುದು ಸರಿಯಲ್ಲ. ಅದಕ್ಕಿಂತ ಹಿಂದೆಯೂ ಈ ಸಮಸ್ಯೆಗಳು ಇದ್ದವು. ಅವುಗಳಿಂದ ಸಮಸ್ಯೆಗಳು ಒಂದಿಷ್ಟು ಉಲ್ಬಣಗೊಂಡಿವೆ ಅಷ್ಟೆ.

ಮುಖ್ಯ ಚಿತ್ರ ಕೃಪೆ: 'ಪೀಪಲ್ಸ್ ಡಿಸ್ಪ್ಯಾಚ್' ಜಾಲತಾಣ
ನಿಮಗೆ ಏನು ಅನ್ನಿಸ್ತು?
5 ವೋಟ್