ಅರ್ಥ ಪಥ | ರಷ್ಯಾವನ್ನು ಕಟ್ಟಿಹಾಕುವ ಉಮೇದಿನಲ್ಲಿ ಕುಸಿಯುತ್ತಿರುವ ಯುರೋಪ್

ಲಾಭದ ಹಿಂದೆ ಬಿದ್ದಿರುವ ಆರ್ಥಿಕತೆಯು ಸಮಾಜದ ದೃಷ್ಟಿಯಿಂದ, ನ್ಯಾಯಬದ್ಧ ಹಂಚಿಕೆಯ ದೃಷ್ಟಿಯಿಂದ, ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಪರಿಣಾಮಕಾರಿ ಆಗಲು ಸಾಧ್ಯವಿಲ್ಲ ಎಂಬುದಕ್ಕೆ ಯುರೋಪಿನ ರಾಷ್ಟ್ರಗಳ ಪರಿಸ್ಥಿತಿ ತಾಜಾ ನಿದರ್ಶನ. ಇಂಥ ಆರ್ಥಿಕತೆಯ ಮಾದರಿಗಳಿಂದ ಬೃಹತ್ ಕಾರ್ಪೋರೇಟುಗಳಷ್ಟೇ ಬೆಳೆಯಬಲ್ಲವು ಎಂಬುದು ಸ್ಪಷ್ಟ

ಜಗತ್ತು ಆರ್ಥಿಕ ಸಂಕಷ್ಟದಲ್ಲಿದೆ. ಹಣದುಬ್ಬರವನ್ನು ಹಿಮ್ಮೆಟ್ಟಿಸುವುದಕ್ಕೆ ಹೋಗಿ, ಆರ್ಥಿಕ ಹಿಂಜರಿಕೆಯ ಆತಂಕದಲ್ಲಿ ಸಿಲುಕಿದೆ. ಮುಂದುವರಿದ ರಾಷ್ಟ್ರಗಳು ಎಂದು ಬೀಗುತ್ತಿದ್ದ ಜಿ7 ದೇಶಗಳು ಈಗ ಸಂಕಷ್ಟದಲ್ಲಿವೆ. ಇವರ ಸಂಕಷ್ಟವನ್ನು ತೀವ್ರಗೊಳಿಸಿದ ಯುಕ್ರೇನ್ ಯುದ್ಧ ಮುಗಿದಿಲ್ಲ. ಸದ್ಯದಲ್ಲಿ ನಿಲ್ಲುವ ಸಾಧ್ಯತೆಯೂ ಕಾಣುತ್ತಿಲ್ಲ. ಉಕ್ರೇನ್ ಮೇಲೆ ಯುದ್ಧ ಮಾಡಿದ್ದಕ್ಕೆ ರಷ್ಯಾವನ್ನು ದಂಡಿಸಲು ಹೋದ ಈ ರಾಷ್ಟ್ರಗಳು ಈಗ ರಷ್ಯಾಗಿಂತ ಹೆಚ್ಚಿಗೆಯೇ ಒದ್ದಾಡುತ್ತಿವೆ. ಜಗತ್ತು, ಅದರಲ್ಲೂ ವಿಶೇಷವಾಗಿ ಯುರೋಪ್ ಇಂಧನಕ್ಕಾಗಿ ರಷ್ಯಾವನ್ನು ಸ್ವಲ್ಪ ಅತಿಯಾಗಿಯೇ ಅವಲಂಬಿಸಿದೆ. ಹಾಗಾಗಿ, ರಷ್ಯಾದಿಂದ ಇಂಧನ ಕೊಳ್ಳುವುದನ್ನು ನಿಲ್ಲಿಸುವ ತೀರ್ಮಾನದಿಂದ ತೀವ್ರವಾಗಿಯೇ ಬಳಲುತ್ತಿದೆ. ಈಗ ಜಾಗತೀಕರಣದ ವಾತಾವರಣದಲ್ಲಿ ಪರಸ್ಪರ ಅವಲಂಬನೆ ಎಷ್ಟು ಪ್ರಬಲವಾಗಿದೆಯೆಂದರೆ, ಯಾವುದೇ ದೇಶಕ್ಕೂ ತನಗೆ ತೊಂದರೆ ಮಾಡಿಕೊಳ್ಳದೆ ಇನ್ನೊಬ್ಬರಿಗೆ ತೊಂದರೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ, ಯುದ್ಧದ ಅಸ್ತ್ರವಾಗಿ ಆರ್ಥಿಕ ದಿಗ್ಭಂಧನವನ್ನು ಬಳಸಲು ಹೊರಟ ಕೂಡಲೇ ಈ ರಾಷ್ಟ್ರಗಳೂ ಆರ್ಥಿಕ ದಿಗ್ಬಂಧನದ ಪರಿಣಾಮವನ್ನು ಎದುರಿಸಲೇಬೇಕು. ಯರೋಪ್ ರಾಷ್ಟ್ರಗಳ ಒಕ್ಕೂಟ, ಅದರಲ್ಲೂ ವಿಶೇಷವಾಗಿ ಜರ್ಮನಿ ತುಂಬಾ ಸಂಕಷ್ಟಕ್ಕೆ ಸಿಲುಕಿದೆ.

ಅಮೆರಿಕವು ರಷ್ಯಾವನ್ನು ಮಣಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಷ್ಯಾದಿಂದ ರಫ್ತನ್ನು ತಡೆಯುವ ಕಸರತ್ತು ನಡೆಸುತ್ತಿದೆ. ಯೂರೋಪ್ ಒಕ್ಕೂಟ ಇದಕ್ಕೆ ಬೆಂಬಲ ಸೂಚಿಸಿದೆ. ಪರಿಣಾಮವಾಗಿ, ರಷ್ಯಾಕ್ಕೆ ವಿದೇಶಿ ಬ್ಯಾಂಕುಗಳಲ್ಲಿರುವ ತನ್ನ ಹಣವನ್ನು ಬಳಸಲು ಆಗುತ್ತಿಲ್ಲ. ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರವೂ ನಿಂತಿದೆ. ಇದರ ಜೊತೆಗೆ ರಫ್ತು ನಿಂತರೆ ವಿದೇಶಿ ವಿನಿಮಯ ಸಂಪೂರ್ಣ ನಿಲ್ಲುತ್ತದೆ. ಆಗ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಲು ಸಂಪನ್ಮೂಲವಿಲ್ಲದೆ ರಷ್ಯಾ ಹಿಮ್ಮೆಟ್ಟಲೇಬೇಕು ಅನ್ನುವುದು ಈ ದೇಶಗಳ ಲೆಕ್ಕಾಚಾರ.

Image

ಆದರೆ, ಸದ್ಯಕ್ಕೆ ರಷ್ಯಾದ ಸ್ಥಿತಿ ಅಷ್ಟೊಂದು ಹದಗೆಟ್ಟಿಲ್ಲ. ಕಚ್ಚಾತೈಲ ಮತ್ತು ಇಂಧನದ ರಫ್ತಿನ ಪ್ರಮಾಣ ಕಡಿಮೆಯಾಗಿಲ್ಲ. ಐರೋಪ್ಯ ದೇಶಗಳೂ ಈವರೆಗೆ ಸಾಕಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಂಡಿದ್ದವು. ಚೀನಾ, ಭಾರತ ಹಾಗೂ ಇಂಧನದ ಅವಶ್ಯಕತೆಯಿರುವ ಇತರೆ ದೇಶಗಳು ಇಂಧನವನ್ನು ಕೊಳ್ಳುತ್ತಲೇ ಇವೆ. ರಷ್ಯಾದ ರೂಬೆಲ್ ಮೌಲ್ಯವೂ ಮತ್ತೆ ಏರಿದೆ. ಒಟ್ಟಾರೆಯಾಗಿ, ಬೇರೆ ದೇಶಗಳಿಗೆ ಹೋಲಿಸಿದರೆ ರಷ್ಯಾದಲ್ಲಿ ಸದ್ಯಕ್ಕೆ ಅಂತಹ ಕುಸಿತ ಕಂಡಿಲ್ಲ.

ಬದಲಿಗೆ, ಯೂರೋಪಿನ ವ್ಯಾಪಾರ ಶಿಲ್ಕು ಕುಸಿಯುತ್ತಲೇ ಇದೆ. ಸಾಲದ ಪ್ರಮಾಣವೂ ಏರುತ್ತಿದೆ. ಯೂರೋ ಮೌಲ್ಯ ಡಾಲರಿಗಿಂತ ಕಡಿಮೆಯಾಗಿದೆ. ಕಳೆದ 20 ವರ್ಷಗಳಲ್ಲೇ ಹೀಗಾಗಿರುವುದು ಇದೇ ಮೊದಲು. ಯುರೋಪಿನ ಸರ್ಕಾರಗಳು ಇಂಧನಕ್ಕಾಗಿ ಪರ್ಯಾಯ ಮಾರುಕಟ್ಟೆಯನ್ನು ಹುಡುಕುತ್ತಿವೆ. ಈಗ ವಿಪರೀತ ಬೆಲೆ ಕೊಟ್ಟು ಕೊಳ್ಳಬೇಕಾಗಿದೆ. ರಷ್ಯಾವನ್ನು ಸೋಲಿಸುವ ಈ ರಾಷ್ಟ್ರಗಳ ಹತಾಶ ಪ್ರಯತ್ನದಲ್ಲಿ ಮಾರುಕಟ್ಟೆ ಬೆಲೆಗಳು ಗಗನ ಮುಟ್ಟುತ್ತಿವೆ. ನೈಸರ್ಗಿಕ ಅನಿಲವನ್ನು (ಲಿಕ್ವಿಡ್ ನ್ಯಾಚುರಲ್ ಗ್ಯಾಸ್) ದುಬಾರಿ ದರದಲ್ಲಿ ಕೊಳ್ಳುತ್ತಿವೆ. ಚಳಿಗಾಲಕ್ಕಾಗಿ ತುಂಬಾ ಜತನದಿಂದ ಇಂಧನವನ್ನು ಕೂಡಿಟ್ಟುಕೊಳ್ಳಬೇಕಾಗಿದೆ. ಈಗ ರಷ್ಯಾದಿಂದ ಅನಿಲ ಪೂರೈಕೆ ಸಂಪೂರ್ಣ ನಿಂತಿದೆ. ಅದನ್ನು ಸರಿದೂಗಿಸುವುದಕ್ಕೆ ಸ್ಪೇನ್ ಮತ್ತು ಉತ್ತರ ಅಮೆರಿಕದಿಂದ ಕೊಳ್ಳಬೇಕಾಗಿದೆ.

ಈ ಲೇಖನ ಓದಿದ್ದೀರಾ?: ಗಾಯ ಗಾರುಡಿ | ವಿಷಯುಕ್ತ ತ್ಯಾಜ್ಯ ನೀರು ಬಿಡುತ್ತಿದ್ದ ಕಾರ್ಖಾನೆ ವಿರುದ್ಧದ ಕ್ರಾಂತಿ

ಈ ಚಳಿಗಾಲಕ್ಕಾಗಿ ಕೂಡಿಟ್ಟಿರುವ ಇಂಧನವೆಲ್ಲ ಮುಗಿದ ಮೇಲೆ ಮುಂದೇನು ಎನ್ನುವುದೇ ದೊಡ್ಡ ಪ್ರಶ್ನೆ. ರಷ್ಯಾದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ. ಹೊಸ ನಿರ್ಬಂಧಗಳನ್ನು ಹೇರಲು ಚಿಂತಿಸಲಾಗುತ್ತಿದೆ. ರಷ್ಯಾದಿಂದ ಅಮದಾಗುವ ಎಲ್ಲ ತೈಲದ ಮೇಲೆ ಬೆಲೆಮಿತಿ ಹಾಕುವುದು. ಪೂರ್ವನಿರ್ಧರಿತ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಕೊಟ್ಟರೆ ಮಾತ್ರ ರಷ್ಯಾದಿಂದ ಕೊಳ್ಳುವುದು, ಇಲ್ಲದಿದ್ದರೆ ಇಲ್ಲ ಅಂತ ಘೋಷಿಸುವುದು. ಇದರಿಂದ ರಷ್ಯಾದ ರಫ್ತು ವರಮಾನ ಕುಸಿಯುತ್ತದೆ. ಉಕ್ರೇನ್ ಮೇಲೆ ಯುದ್ಧ ಮಾಡಲು ಹಣ ಇರುವುದಿಲ್ಲ. ಆದರೆ, ರಷ್ಯಾ ಇದಕ್ಕೆ ಒಪ್ಪದೇಹೋದರೆ? ಅದಕ್ಕೆ ವಿದೇಶಿ ಆದಾಯದ ಬೇರೆ ಮೂಲ ಇರುವುದಿಲ್ಲ. ಜೊತೆಗೆ, ಬೇಡಿಕೆ ಇಲ್ಲದೇಹೋದರೆ ಉತ್ಪಾದನೆಯನ್ನು ತಗ್ಗಿಸಬೇಕು. ತೈಲಬಾವಿಗಳನ್ನು ಮುಚ್ಚಬೇಕಾಗುತ್ತದೆ. ಒಮ್ಮೆ ಮುಚ್ಚಿದರೆ ಅದನ್ನು ಮತ್ತೆ ಪ್ರಾರಂಭಿಸುವುದು ಕಷ್ಟ. ದೀರ್ಘಕಾಲ ಮುಚ್ಚಿಬಿಟ್ಟರೆ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ರಷ್ಯಾದ ಪ್ರಾಬಲ್ಯಕ್ಕೆ ಹೊಡೆತ ಬೀಳುತ್ತದೆ. ಯುದ್ಧವನ್ನು ಮುಂದುವರಿಸುವುದು ಕಷ್ಟವಾಗುತ್ತದೆ. ಇದು ಈ ಕ್ರಮದ ಹಿಂದಿರುವ ಸ್ಥೂಲ ಚಿಂತನೆ.

ವಾಸ್ತವದಲ್ಲಿ, ಹಲವು ದೇಶಗಳು ಜಿ7 ನಿರ್ಬಂಧಗಳನ್ನು ಒಪ್ಪದೇ ಇರಬಹುದು. ಭಾರತ, ಚೀನಾದಂತಹ ದೇಶಗಳು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಬಹುದು. ರಷ್ಯಾ ಬಿಡಿ, ಯೂರೋಪಿಗೆ ಈ ಮಧ್ಯೆ ಏನಾಗಬಹುದು ಯೋಚಿಸಿ. ಜಾಗತಿಕ ಮಟ್ಟದಲ್ಲಿ ಇಂಧನ ಮತ್ತು ಆಹಾರದ ಬೆಲೆ ಏರುತ್ತಲೇ ಇದೆ. ಜೀವನ ನಿಭಾಯಿಸುವುದು ಕಷ್ಟವಾಗುತ್ತಿದೆ. ಯುರೋಪಿನ ಎಲ್ಲ ಕಡೆ ನೈಜ ಕೂಲಿ ಕುಸಿಯುತ್ತಿದೆ. ಬ್ರಿಟನ್ ಸ್ಥಿತಿಯಂತೂ ಕೇಳುವುದೇ ಬೇಡ; ಅಂದಾಜಿನ ಪ್ರಕಾರ, ಹಣದುಬ್ಬರ ಕನಿಷ್ಠ ಶೇಕಡ 13.3 ಮುಟ್ಟುತ್ತದೆ. ಈ ಚಳಿಗಾಲದಲ್ಲಿ ಶೇಕಡ 40ರಷ್ಟು ಕುಟುಂಬಗಳಿಗೆ ಮನೆಯನ್ನು ಬೆಚ್ಚಗೆ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗದೆ ಇರಬಹುದು. ಒಂದು ಕುಟುಂಬ ಕೇವಲ ಇಂಧನಕ್ಕೆಂದೇ ವರ್ಷಕ್ಕೆ ಕನಿಷ್ಠ 5,300 ಪೌಂಡ್ ಖರ್ಚು ಮಾಡಬೇಕಾಗಿದೆ. ಜೀವನ ವೆಚ್ಚ ವಿಪರೀತವಾಗಿ, ಬಿಕ್ಕಟ್ಟು ತೀವ್ರವಾಗಿರುವ ಇಂದಿನ ಸ್ಥಿತಿಯಲ್ಲಿ  ಆರ್ಥಿಕವಾಗಿ ಕೆಳಗಿರುವವರ ಸ್ಥಿತಿ ಭೀಕರವಾಗಬಹುದು. ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಮೂವತ್ತು ಲಕ್ಷ ಜನ ಬಡತನ ರೇಖೆಗಿಂತ ಕೆಳಗೆ ಕುಸಿಯುತ್ತಾರೆ ಎನ್ನಲಾಗಿದೆ.

Image

ಜನಸಾಮಾನ್ಯರ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡಿನಲ್ಲಿ ಇಂಧನದ ಬೆಲೆಗೆ ಮಿತಿ ಹಾಕಲಾಗಿದೆ. ಆದರೆ, ಆ ಗರಿಷ್ಠ ಮಿತಿಯೂ ವಿಪರೀತ ಏರುತ್ತಿದೆ. ವರ್ಷಕ್ಕೆ ಸಾವಿರ ಪೌಂಡು ಇದ್ದುದು ಈಗ 3,549 ಆಗಿದೆ. ಅದು ಮುಂದೆ 6,600 ಪೌಂಡ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಣ್ಣ ಉದ್ದಿಮೆಗಳು ಮತ್ತು ಬಡ ಕುಟುಂಬಗಳಿರಲಿ, ಮಧ್ಯಮ ವರ್ಗದವರಿಗೂ ಇದನ್ನು ಭರಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ.

ಯಾಕೆ ಇಷ್ಟೊಂದು ಬೆಲೆ ಏರಿಕೆ? ಯಾರು ಲಾಭ ಮಾಡಿಕೊಳ್ಳುತ್ತಿದ್ದಾರೆ? ಸದ್ಯಕ್ಕೆ ಉಕ್ರೇನ್ ಯುದ್ಧ ಎದ್ದುಕಾಣುವ ಕಾರಣ. ಆದರೆ, ಮರೆಯಲ್ಲಿ ಇರುವುದು ಈ ಬೆಲೆ ಏರಿಕೆಯ ಪರಿಸ್ಥಿತಿಯನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಿರುವ ದೊಡ್ಡ ಕಾರ್ಪೋರೇಟುಗಳ ಲಾಭಬಡುಕತನ ಕೂಡ ಬೆಲೆ ಏರಿಕೆಗೆ ಕಾರಣ. 1990ರಲ್ಲಿ ಇಂಗ್ಲೆಂಡಿನಲ್ಲಿ ಅನಿಲ ಮತ್ತು ವಿದ್ಯುತ್ ವಿತರಣೆಯ ಖಾಸಗೀಕರಣ ಪ್ರಾರಂಭವಾಯಿತು. ಅಂದಿನಿಂದ ಕೆಲವೇ ಕೆಲವು ದೊಡ್ಡ ಕಂಪನಿಗಳು ಹೇರಳ ಲಾಭ ಮಾಡಿಕೊಳ್ಳುತ್ತಿವೆ. ಆ ಕಂಪನಿಗಳ ಶೇರುದಾರರು ಅಪಾರ ಡಿವಿಡೆಂಡ್ ಗೋರಿಕೊಳ್ಳುತ್ತಿದ್ದಾರೆ. ಉದ್ದಿಮೆಗಳಿರುವುದೇ ಲಾಭ ಮಾಡಿಕೊಳ್ಳುವುದಕ್ಕೆ ಅನ್ನುವ ದೋರಣೆ ವ್ಯಾಪಕವಾಗಿದೆ. ಉದಾಹರಣೆಗೆ ದೊಡ್ಡ ಆರು ವಿತರಕರು 23 ಶತಕೋಟಿ ಡಿವಿಡೆಂಡ್ ಹಂಚಿದ್ದಾರೆ. ಅದು ಕಳೆದ 10 ವರ್ಷಗಳಲ್ಲಿ ಅವರು ಕಟ್ಟಿದ ತೆರಿಗೆಯ ಆರು ಪಟ್ಟು ಆಗುತ್ತದೆ. ಜನ ಕಟ್ಟುತ್ತಿರುವ ಇಂಧನದ ಬಿಲ್ಲುಗಳು ಅದೇ ವೇಗದಲ್ಲಿ ಹೆಚ್ಚುತ್ತಿದೆ. ಇಂಧನವನ್ನು ನೆಚ್ಚಿಕೊಂಡಿರುವ ಸಣ್ಣ ಉದ್ದಿಮೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗೀಕರಣಗೊಳಿಸುವಾಗ ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ಉತ್ಪಾದನೆ ಮತ್ತು ವಿತರಣೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತದೆ ಎಂದು ವಾದಿಸಲಾಗಿತ್ತು. ಆದರೆ, ಈಗ ಮಾರುಕಟ್ಟೆ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಹಲವರಿಗೆ ಮನವರಿಕೆಯಾಗಿದೆ. ಐರೋಪ್ಯ ಒಕ್ಕೂಟದ ಮುಖ್ಯಸ್ಥರೇ, "ವಿದ್ಯುತ್ ಮಾರುಕಟ್ಟೆಯ ವಿನ್ಯಾಸದ ಮಿತಿ ಎದ್ದುಕಾಣುತ್ತಿದೆ," ಎಂದಿದ್ದಾರೆ. ಈಗ ದೊಡ್ಡ ಕಂಪನಿಗಳು ಎಲ್ಲವನ್ನೂ ನಿಯಂತ್ರಿಸುತ್ತಿವೆ. ಮುಖ್ಯವಾಗಿ ಹಲವರು ಪ್ರತಿಪಾದಿಸುತ್ತಿರುವಂತೆ ಮಾರುಕಟ್ಟೆಗೆ ಪೆಟ್ರೋಲ್ ಬೆಲೆಯನ್ನು ನಿರ್ಧರಿಸಲು ಬಿಡಬಾರದು. ಅಂದರೆ, ಇಂಧನದ ವಿತರಣೆಯ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು.

Image

ಇನ್ನೊಂದು ದುರಂತವೆಂದರೆ, ಈವರೆಗೂ ಆದ್ಯತೆಯ ವಿಷಯಗಳಾಗಿದ್ದ ಹಲವು ಸಮಸ್ಯೆಗಳು ನಮ್ಮ ಗಮನದಿಂದ ಹಿಂದಕ್ಕೆ ಸರಿದಿವೆ. ಉದಾಹರಣೆಗೆ, ಪರಿಸರದ ತಾಪಮಾನದ ನಿಯಂತ್ರಣ ನಮ್ಮ ಪ್ರಮುಖ ಕಾಳಜಿಯ ವಿಷಯವಾಗಿತ್ತು. ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುವುದು ಆದ್ಯತೆಯ ಸಂಗತಿಯಾಗಿತ್ತು. ಈಗ ಆ ಪ್ರಯತ್ನ ಜಾಗತಿಕ ಮಟ್ಟದಲ್ಲಿ ಅಂಗಾತ ಬಿದ್ದಿದೆ. ಫಾಸಿಲ್ ಇಂಧನದ ಉತ್ಪಾದನೆಯನ್ನು ಕಮ್ಮಿ ಮಾಡಬೇಕೆಂದು ಒಟ್ಟಿಗೆ ಕೂಗಾಡಿದ್ದನ್ನು ಈ ದೇಶಗಳು ಮರೆತಿವೆ. ಇಂಧನದ ಬೆಲೆ ನಿಯಂತ್ರಣ ಈಗ ಆದ್ಯತೆಯ ವಿಷಯವಾಗಿದೆ. ಈಗ ಅದರ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇವು ಯೋಚಿಸುತ್ತಿವೆ. ಫಾಸಿಲ್ ಇಂಧನದ ಮೇಲಿನ ಅವಲಂಬನೆಯನ್ನು ಹೆಚ್ಚಿಸಿಕೊಂಡಿದ್ದೇವೆ. ಟ್ರಂಪ್ ಅವರನ್ನು ಅಮೆರಿಕದ ಕಲ್ಲಿದ್ದಲು ಕೈಗಾರಿಕೆಯ ಉದ್ಧಾರಕ ಅಂತ ಟೀಕಿಸಲಾಗುತ್ತಿತ್ತು. ಬೈಡೆನ್ ಕಾಲದಲ್ಲಿ ಅದಕ್ಕೂ ಮೀರಿ ಕಲ್ಲಿದ್ದಲು ಆಧಾರಿತ ಇಂಧನ ಉತ್ಪತ್ತಿಯಾಗುತ್ತಿದೆ. 2021ರಲ್ಲಿ ಯೂರೋಪಿನಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್ ಶೇಕಡ 18ರಷ್ಟು ಹೆಚ್ಚಿದೆ. ಪುನರ್ ಬಳಕೆಯ ಇಂಧನದ ಕಡೆಗಿನ ನಡೆ ಸೋಲುತ್ತಿದೆ. ಜಾಗತಿಕ ಇಂಧನದ ಶೇಕಡ 80ರಷ್ಟು ಫಾಸಿಲ್ ಇಂಧನ ಆಕ್ರಮಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಅದರ ಪ್ರಮಾಣ ಹೆಚ್ಚಬಹುದೇ ಹೊರತು ಕಡಿಮೆಯಾಗುವ ಸಾಧ್ಯತೆ ಕಾಣುತ್ತಿಲ್ಲ. ಫಾಸಿಲ್ ಇಂಧನ ಕಂಪನಿಗಳ ಮೇಲೆ ಕಡಿವಾಣ ಹಾಕಬೇಕಾದದ್ದು ಅನಿವಾರ್ಯ. ಅವುಗಳನ್ನು ಹಿಡಿತಕ್ಕೆ ತೆಗೆದುಕೊಂಡು ಅವುಗಳ ಉತ್ಪಾದನೆಯನ್ನು ತಗ್ಗಿಸುವ ಕಡೆ ಗಮನ ಕೊಡಬೇಕು. ಪುನರ್ಬಳಕೆಯ ಇಂಧನದ ಮೇಲೆ ಹೆಚ್ಚಿನ ಹೂಡಿಕೆಯನ್ನು ಮಾಡುವ ನಿಟ್ಟಿನಲ್ಲಿ ಈ ರಾಷ್ಟ್ರಗಳು ಯೋಚಿಸಬೇಕು. ಅದರಿಂದ ಜನಸಾಮಾನ್ಯರ ಮತ್ತು ಸಣ್ಣ ಉದ್ದಿಮೆಗಳ ಇಂಧನದ ಖರ್ಚನ್ನು ಕಡಿಮೆ ಮಾಡಬಹುದು.

ಸದ್ಯಕ್ಕೆ ಗ್ರಾಹಕರಿಗೆ ರಕ್ಷಣೆ ಒದಗಿಸಲು ಸಬ್ಸಿಡಿಯನ್ನು ಕೊಡಲು ಸರ್ಕಾರ ಮುಂದಾಗಿದೆ. ಆದರೆ, ಆ ರಾಷ್ಟ್ರಗಳ ಆರ್ಥಿಕ ಸ್ಥಿತಿ ನೋಡಿದರೆ ಬಹುದಿನ ಇದು ನಡೆಯುವ ಲಕ್ಷಣಗಳಿಲ್ಲ. ಈಗ ಈ ದೇಶಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಪೂರೈಕೆಯಲ್ಲಿ ಏರುಪೇರಾಗಿದೆ. ಬೆಲೆಗಳು ಒಂದೇ ಸಮ ಏರುತ್ತಿವೆ. ಸಣ್ಣ ಉದ್ದಿಮೆಗಳು ಕುಸಿಯುತ್ತಿವೆ. ಯುದ್ಧ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಸಾಲದ ಹೊರೆ ಏರುತ್ತಿದೆ. ಜಗತ್ತು ಆರ್ಥಿಕ ಕುಸಿತದ ಕಡೆ ಸಾಗುತ್ತಿದೆ. ಕೆಲವೇ ಕಾರ್ಪೋರೇಟುಗಳು ಲಾಭ ಮಾಡಿಕೊಳ್ಳುತ್ತಲೇ ಇವೆ. ಕೆಳಸ್ತರದ ಬಡವರ ಸ್ಥಿತಿ ಕುಸಿಯುತ್ತಲೇ ಇದೆ.

Image

ಇದು ಕೊರೊನಾದಿಂದಲೋ ಅಥವಾ ಉಕ್ರೇನ್ ಯುದ್ಧದಿಂದಲೋ ನಿನ್ನೆ-ಮೊನ್ನೆ ಪ್ರಾರಂಭವಾದ ಸಮಸ್ಯೆಯಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅವೆರಡರಿಂದ ಈ ಬಿಕ್ಕಟ್ಟು ತೀವ್ರವಾಗಿರಬಹುದು ಅಷ್ಟೆ. ಇದು ಜಾಗತಿಕವಾಗಿ ದೇಶಗಳು ಅನುಸರಿಸುತ್ತಿರುವ ಆರ್ಥಿಕ ನೀತಿಯ ಫಲ ಅನ್ನುವುದು ಸ್ಪಷ್ಟವಾಗಬೇಕು. ಬೃಹತ್ ಕಾರ್ಪೋರೇಟುಗಳಷ್ಟೇ ಇದರಿಂದ ಬೆಳೆಯಬಲ್ಲದು ಎಂಬುದು ಸ್ಪಷ್ಟ. ಲಾಭದ ಹಿಂದೆ ಬಿದ್ದಿರುವ ಆರ್ಥಿಕತೆಯು ಸಮಾಜದ ದೃಷ್ಟಿಯಿಂದ, ನ್ಯಾಯಬದ್ಧ ಹಂಚಿಕೆಯ ದೃಷ್ಟಿಯಿಂದ, ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಅನ್ನುವುದನ್ನು ಯುರೋಪಿನ ಅನುಭವವೂ ನಮಗೆ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್