ಮೈಕ್ರೋಸ್ಕೋಪು | ಪುಟ್ಟಕ್ಕನಿಗೆ ಪೊಲೀಸು ನೆರವು ಕೊಡಿಸುವುದು ಹೇಗೆ?

Police 1

ಮಹಿಳಾ ಸಿಬ್ಬಂದಿಯಷ್ಟೇ ಇರುವ ಪೊಲೀಸ್ ಠಾಣೆ ಬೇಕು ನಿಜ. ಅದು ಸಾಧ್ಯ ಆಗದಿದ್ದಾಗ, ಪುರುಷ ಸಿಬ್ಬಂದಿಯ ಠಾಣೆಯನ್ನೇ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡುವುದು ಸಾಧ್ಯ ಎಂದು ಅಧ್ಯಯನವೊಂದರಲ್ಲಿ ಕಂಡುಕೊಳ್ಳಲಾಗಿದೆ. ಇದನ್ನು ಆಧರಿಸಿ ಮಧ್ಯಪ್ರದೇಶ ಸರ್ಕಾರ 700 ಪೊಲೀಸ್ ಠಾಣೆಗಳಲ್ಲಿ ಮಹಿಳಾ ಹೆಲ್ಪ್ ಡೆಸ್ಕ್ ಸ್ಥಾಪಿಸಲು ಮುಂದಾಗಿದೆ

'ಪುಟ್ಟಕ್ಕನ ಮಕ್ಕಳು' ಎಂಬ ಧಾರಾವಾಹಿಯಲ್ಲಿ ಒಂದು ದೃಶ್ಯವಿದೆ. ತನ್ನ ಹಣ ಕಳೆದುಹೋಯಿತೆಂದು ದೂರು ಕೊಡಲು ಪುಟ್ಟಮ್ಮ ಪೊಲೀಸ್ ಸ್ಟೇಶನ್ನಿಗೆ ಬರುತ್ತಾಳೆ. ಆದರೆ, ಪೊಲೀಸು ದೂರನ್ನು ದಾಖಲಿಸುವುದೂ ಇಲ್ಲ. "ನಿನಗೆ ಹತ್ತು ಲಕ್ಷ ಎಲ್ಲಿಂದ ಬಂತು? ಗಂಡ ಇಲ್ಲದವಳು ಹೆಣ್ಣುಮಕ್ಕಳನ್ನು ಇಟ್ಟುಕೊಂಡು ಧಂಧೆ ನಡೆಸುತ್ತೀಯೋ?” ಎಂಬ ಹೀಗಳಿಕೆ ಪುಟ್ಟಕ್ಕನಿಗೆ ಎದುರಾಗುತ್ತದೆ. ಬಹುಶಃ ನಮ್ಮ ಪೊಲೀಸ್ ಸ್ಟೇಶನ್ನುಗಳಲ್ಲಿನ ವಾಸ್ತವತೆಯನ್ನು ತೆರೆದಿಟ್ಟ ದೃಶ್ಯ ಇದು ಎಂದರೆ ತಪ್ಪೇನಲ್ಲ. ಈ ಸ್ಥಿತಿಯನ್ನು ಬದಲಿಸಬಹುದೇ? ಬದಲಿಸುವುದು ಸಾಧ್ಯ. ಮಹಿಳೆಯರಿಗೆ ಪೊಲೀಸ್ ಸ್ಟೇಶನ್ನಿನಲ್ಲಿ ನ್ಯಾಯ ದೊರಕಿಸುವುದು ಸಾಧ್ಯ. ಸ್ಟೇಶನ್ನಿನಲ್ಲಿ ಮಹಿಳೆಯರ ದೂರು ದಾಖಲಿಸುವುದಕ್ಕಾಗಿಯೇ ಒಂದು ಸಹಾಯವಾಣಿಯನ್ನೋ, ವಿಶೇಷ ಸಿಬ್ಬಂದಿಯನ್ನೋ ನೇಮಿಸಿದರೆ ಸಾಕು. ಮಹಿಳೆಯರು ದೂರು ನೀಡುವುದೂ ಹೆಚ್ಚಾಗುತ್ತದೆ. ಮಹಿಳೆಯರ ಸಮಸ್ಯೆಗಳಿಗೆ ಪೊಲೀಸ್ ಸಕಾರಾತ್ಮಕವಾಗಿ ಸ್ಪಂದಿಸುವುದೂ ಹೆಚ್ಚಾಗುತ್ತದೆ ಎಂದು 'ಸೈನ್ಸ್' ಪತ್ರಿಕೆಯಲ್ಲಿ ಮೊನ್ನೆ ವರದಿಯಾಗಿರುವ ಸಂಶೋಧನೆಯೊಂದು ತಿಳಿಸಿದೆ. ಅಮೆರಿಕೆಯ ವರ್ಜೀನಿಯ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ಸಂದೀಪ್ ಸುಖ್ತಂಕರ್ ಮತ್ತು ಸಂಗಡಿಗರು ಹೀಗೊಂದು ಸಂಶೋಧನೆಯನ್ನು ಪ್ರಕಟಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಹೇಳಬೇಕಿಲ್ಲ. ಮನೆಯಲ್ಲಿನ ಜಗಳಗಳಿಂದ ಆರಂಭಿಸಿ, ಕಚೇರಿಗಳಲ್ಲಿ, ಸಮಾಜದಲ್ಲಿ ಮಹಿಳೆಯರ ಮೇಲೆ ಲೈಂಗಿಕ, ದೈಹಿಕ ಶೋಷಣೆ ನಡೆಯುವ ಬಗ್ಗೆ ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ನಮಗೆ ಕೇಳಿಬರುವ ಸಂಗತಿಗಳು ಆಲದ ಎಲೆಯಂತೆ. ಮರದ ಆಳ, ಅಗಲ, ಎತ್ತರವನ್ನು ಅದು ಕಾಣಿಸುವುದಿಲ್ಲ. ಶೋಷಣೆ ಆಗುವುದನ್ನು ನಿಲ್ಲಿಸಲು ಕಾನೂನುಗಳೇನೋ ಇವೆ. ಆದರೆ, ಅವನ್ನು ಬಳಸಿಕೊಳ್ಳುವ ವ್ಯವಸ್ಥೆಯಲ್ಲಿ ಮೊದಲ ಹಂತವೇ ಬಲು ಕಷ್ಟದ್ದು ಎನ್ನುತ್ತಾರೆ ಸಮಾಜವಿಜ್ಞಾನಿಗಳು. ಕಾನೂನು ದೊರಕಿಸುವ ರಕ್ಷಣೆಯನ್ನು ಪಡೆಯಲು ಮೊದಲಿಗೆ ಪೊಲೀಸಿಗೆ ದೂರು ನೀಡಲೇಬೇಕು. ಇದುವೇ ಬಲು ಕಷ್ಟದ ಕೆಲಸ. ಪುಟ್ಟಮ್ಮನಿಗೆ ಎದುರಾದಂತೆ ಮಹಿಳೆಯರ ಸಮಸ್ಯೆಗಳನ್ನು ಪೊಲೀಸರು ಅವಗಣಿಸುವುದೇ ಹೆಚ್ಚು. ಜೊತೆಗೆ ಅವಮಾನಿಸುವುದೂ ಹೆಚ್ಚು. ಕೆಲವೊಮ್ಮೆ ಇದು ಬಾಣಲೆಯಿಂದ ಬೆಂಕಿಗೆ ನೇರ ಬಿದ್ದಂತೆ ಆಗುವುದೂ ಉಂಟು. ಈ ಎಲ್ಲ ಸಮಸ್ಯೆಗಳಿಂದಾಗಿ ಮಹಿಳೆಯರು ಪೊಲೀಸ್ ಸ್ಟೇಶನ್ನಿಗೆ ಹೋಗಿ ದೂರು ಕೊಡಲು ಹಿಂಜರಿಯುತ್ತಾರೆ ಎನ್ನುವುದು ಸಮಾಜವಿಜ್ಞಾನಿಗಳ ಅಭಿಪ್ರಾಯ.

Image
Police 3
ಗುರುಗ್ರಾಮ್ ಪೊಲೀಸ್ ಠಾಣೆಯಲ್ಲಿನ ಮಹಿಳಾ ಹೆಲ್ಪ್ ಡೆಸ್ಕ್

ಈ ಸಮಸ್ಯೆಗೆ ಪರಿಹಾರಗಳಿಲ್ಲವೆಂದಲ್ಲ. ಮಹಿಳೆಯರ ದೂರುಗಳನ್ನು ದಾಖಲಿಸಿ, ಕ್ರಮ ಕೈಗೊಳ್ಳಲೆಂದೇ ವಿಶೇಷ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯುವುದು ಒಂದು ಉಪಾಯ. ಭಾರತದಲ್ಲಿ ಈ ಉಪಾಯವನ್ನೂ ಕಾರ್ಯಗತಗೊಳಿಸಲಾಗಿದೆ. ಕರ್ನಾಟಕದಲ್ಲಿ 1994ರಲ್ಲಿ ಮೊತ್ತಮೊದಲ ಮಹಿಳಾ ಪೊಲೀಸ್ ಠಾಣೆಯನ್ನು ತೆರೆಯಲಾಯಿತು. ಇದೀಗ ಒಟ್ಟು 36 ಮಹಿಳಾ ಪೊಲೀಸ್ ಠಾಣೆಗಳು ಕರ್ನಾಟಕದಲ್ಲಿ ಇವೆ. ಇಂತಹ ಠಾಣೆಗಳಲ್ಲಿ ಇರುವ ಸಿಬ್ಬಂದಿ ಎಲ್ಲರೂ ಮಹಿಳೆಯರೇ ಆಗಿದ್ದು, ಮಕ್ಕಳ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ವೇಶ್ಯಾವಾಟಿಕೆಯ ಕಾನೂನಿಗೆ ಸಂಬಂಧಿಸಿದ ದೂರುಗಳು ಮೊದಲಾದವನ್ನು ನಿರ್ವಹಿಸಲಾಗುತ್ತದೆ. ಸದ್ಯಕ್ಕೆ ರಾಜ್ಯದಲ್ಲಿರುವ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಕೇವಲ 10 ಮಾತ್ರ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ ಠಾಣೆಗಳಾಗಿದ್ದು, ಉಳಿದವುಗಳಲ್ಲಿ ಪುರುಷ ಮೇಲಾಧಿಕಾರಿಗಳಿದ್ದಾರೆ ಎನ್ನುತ್ತದೆ ಒಂದು ವರದಿ. ಎಲ್ಲ ಠಾಣೆಗಳನ್ನೂ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವಂತೆ ಮಾಡಬೇಕೆಂಬ ಕೂಗು ಕಳೆದ ವರ್ಷ ಎದ್ದಿತ್ತು. ಪುರುಷ ಸಿಬ್ಬಂದಿ ಇರುವವರೆಗೂ ಮಹಿಳೆಯರ ಮೇಲಿನ ದೂರುಗಳ ಬಗ್ಗೆ ಗಂಭೀರವಾಗಿ ತನಿಖೆಯಾಗುವುದಿಲ್ಲ ಎನ್ನುವುದು ವಾದ. ಇದು ಕೇವಲ ಭಾರತದ ಅನುಭವವಲ್ಲ. ನೆರೆಯ ಪಾಕಿಸ್ಥಾನ, ದೂರದ ಬ್ರೆಜಿಲ್ ಮೊದಲಾದ ದೇಶಗಳಲ್ಲಿ ನಡೆದಿರುವ ಸಂಶೋಧನೆಗಳೂ ಲೈಂಗಿಕ ದೌರ್ಜನ್ಯ ಕುರಿತ ಪ್ರಕರಣಗಳ ದಾಖಲಾತಿ ಕಡಿಮೆ ಇರುವುದಕ್ಕೆ ಪುರುಷ ಪ್ರಧಾನವಾದ ಪೊಲೀಸ್ ವ್ಯವಸ್ಥೆ ಕಾರಣ ಎಂದು ತಿಳಿಸಿವೆ.

ಆದರೆ, ಸರ್ವ ಮಹಿಳಾ ಸಿಬ್ಬಂದಿಗಳಿರುವ ಠಾಣೆಗಳನ್ನು ಸ್ಥಾಪಿಸುವುದು ಬಹಳ ದುಬಾರಿ. ಈಗಿರುವ ಠಾಣೆಗಳಿಗೆ ಬೇಕಾದ ಸಿಬ್ಬಂದಿಗಳನ್ನು ನೇಮಕ ಮಾಡುವುದೇ ಕಷ್ಟವಾಗಿರುವಾಗ ಬೇರೆ ಉಪಾಯವೇನು ಎನ್ನುವುದು ಒಂದು ಪ್ರಶ್ನೆ. ಈಗಿರುವ ಠಾಣೆಗಳಲ್ಲಿರುವ ಪುರುಷರು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡುವುದು ಸಾಧ್ಯವಾದರೆ, ಪ್ರತ್ಯೇಕವಾಗಿ ಮಹಿಳೆಯರ ಠಾಣೆಗಳನ್ನು ಸ್ಥಾಪಿಸಬೇಕಿಲ್ಲ ಎನ್ನುವುದು ಇನ್ನೊಂದು ಆಲೋಚನೆ. ಈ ಎರಡನೆಯ ಆಲೋಚನೆ ಸರಿಯೇ? ಹಾಗೆ ಪುರುಷರನ್ನು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡುವುದು ಹೇಗೆ? ಇದು ಪ್ರಶ್ನೆ. "ಪುರುಷ ಸಿಬ್ಬಂದಿ ಇರುವ ಠಾಣೆಯಲ್ಲಿಯೇ ಮಹಿಳೆಯರ ದೂರುಗಳನ್ನು ದಾಖಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಈ ಸಮಸ್ಯೆಗೆ ಪರಿಹಾರ ದೊರಕಬಹುದು," ಎನ್ನುತ್ತಾರೆ ಸಂದೀಪ್ ಸುಖ್ತಂಕರ್.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಬಸಿರಿಳಿಸಿಕೊಳ್ಳುವುದು ಭ್ರೂಣ ಹೊರುವ ಹಕ್ಕಿನ ಕುರುಹೋ, ಕೊಲೆಯೋ?

ಇದು ಕೇವಲ ಅವರ ಅಭಿಪ್ರಾಯವಲ್ಲ; ಈ ನಿಟ್ಟಿನಲ್ಲಿ ಪ್ರಪಂಚದಲ್ಲಿ ಇದುವರೆಗೆ ನಡೆದಿರುವ ಯಾವುದೇ ಅಧ್ಯಯನಕ್ಕಿಂತಲೂ ದೊಡ್ಡದಾದ, ವಿಸ್ತೃತವಾದ ಅಧ್ಯಯನ ಹಾಗೂ ಪ್ರಯೋಗದ ಫಲ. ಠಾಣೆಗಳ ಮೇಲೆ ಪ್ರಯೋಗವೇ ಎಂದು ಅಚ್ಚರಿಯಾಗಬೇಕಿಲ್ಲ. ವೈದ್ಯಕೀಯ ಸಂಶೋಧನೆಗಳಲ್ಲಿ ಔಷಧಗಳ ಪರಿಣಾಮಗಳನ್ನು ಅಧ್ಯಯನ ಮಾಡಲು ಬಳಸುವ ತಂತ್ರಗಳನ್ನು ಬಳಸಿ ಪೊಲೀಸ್ ಠಾಣೆಗಳಲ್ಲಿ ಪ್ರಯೋಗ ನಡೆಸಲಾಯಿತು. ಮಧ್ಯಪ್ರದೇಶ ರಾಜ್ಯದಲ್ಲಿನ ನೂರೆಂಬತ್ತು ಪೊಲೀಸ್ ಠಾಣೆಗಳಲ್ಲಿ ಮಹಿಳೆಯರ ದೂರನ್ನು ದಾಖಲಿಸುವ ವ್ಯವಸ್ಥೆಯನ್ನು ವಿಶೇಷವಾಗಿ ಸ್ಥಾಪಿಸಲಾಯಿತು. ಈ ಠಾಣೆಗಳು ಸುಮಾರು ಎರಡು ಕೋಟಿ ಜನತೆಗೆ ಸೇವೆ ಸಲ್ಲಿಸುತ್ತವೆ.

ಈ ಠಾಣೆಗಳಲ್ಲಿ ಪ್ರತಿಯೊಂದರಲ್ಲಿಯೂ ಮಹಿಳೆಯರ ಅದರಲ್ಲಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ದೂರುಗಳನ್ನು ದಾಖಲಿಸಲು ಪ್ರತ್ಯೇಕ ಡೆಸ್ಕ್ ಸ್ಥಾಪಿಸಲಾಯಿತು. ಇದಕ್ಕೂ ಮುನ್ನ ಈ ಠಾಣೆಗಳಲ್ಲಿ ದಾಖಲಾಗುತ್ತಿದ್ದ ಮಹಿಳಾ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಒಟ್ಟಾರೆ ಪ್ರಕರಣಗಳ ಶೇಕಡ ಒಂದರಷ್ಟಿತ್ತು ಅಷ್ಟೆ. ಖಾಸಗಿ ಕೋಣೆಗಳಲ್ಲಿ, ದೂರುದಾರರು ಮತ್ತು ಡೆಸ್ಕ್ ಸಿಬ್ಬಂದಿಗಳು ಮಾತ್ರ ಇರುವಂತೆ ವ್ಯವಸ್ಥೆ ಮಾಡಲಾಯಿತು. ಜೊತೆಗೆ ಈ ಬಗ್ಗೆ ನೆರೆಹೊರೆಯಲ್ಲಿ ಜಾಗೃತಿಯನ್ನು ಮೂಡಿಸಲಾಯಿತು. ಇವನ್ನು ನಿರ್ವಹಿಸಲು ತರಬೇತಿ ಪಡೆದ ಸಿಬ್ಬಂದಿ ನೇಮಿಸಲಾಯಿತು. ಕೆಲವು ಠಾಣೆಗಳಲ್ಲಿ ತರಬೇತಿ ಪಡೆದ ಮಹಿಳೆಯರಿದ್ದರು, ಉಳಿದವುಗಳಲ್ಲಿ ಪುರುಷರೂ ಇದ್ದರು. ಈ ಎಲ್ಲ ಠಾಣೆಗಳ ಸಿಬ್ಬಂದಿಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ತರಬೇತಿಯನ್ನು ಆರು ತಿಂಗಳ ಕಾಲ ನೀಡಲಾಯಿತು. ಎರಡು ವರ್ಷಗಳು ಕಳೆದ ಮೇಲೆ ಈ ಠಾಣೆಗಳಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ದೂರಿನ ಸಂಖ್ಯೆಯನ್ನು ಪರಿಶೀಲಿಸಲಾಯಿತು. ತರಬೇತಿ, ಜಾಗೃತಿ ಹಾಗೂ ಸಿಬ್ಬಂದಿಯ ನೇಮಕಾತಿಯಿಂದ ಏನಾದರೂ ಬದಲಾವಣೆಗಳಾಗಿವೆಯೇ ಎಂದು ಗಮನಿಸಲಾಯಿತು. ಇವೆಲ್ಲ ಮಾಹಿತಿಯನ್ನೂ ನೇರವಾಗಿ ಠಾಣೆಗಳಿಂದಲೇ ಪಡೆಯದೆ, ಪರೋಕ್ಷವಾಗಿ ಬೇರೆ ಮೂಲಗಳಿಂದ ಪಡೆಯಲಾಯಿತು. ಸಾರ್ವಜನಿಕರನ್ನೂ ಭೇಟಿ ಮಾಡಿ ಠಾಣೆಯ ಸಿಬ್ಬಂದಿ ನಡವಳಿಕೆಯ ಬಗ್ಗೆ ಪ್ರಶ್ನಿಸಲಾಯಿತು.

Image
Police 2

ಹೀಗೆ, "ವೈದ್ಯಕೀಯದಲ್ಲಿ ನಡೆಸುವ ಪ್ರಯೋಗದಂತೆಯೇ ಕೇವಲ ಒಂದೇ ಒಂದು ಅಂಶದಲ್ಲಿ ವ್ಯತ್ಯಾಸವಿರುವ ಎರಡು ಗುಂಪುಗಳ ಠಾಣೆಗಳ ಅಧ್ಯಯನ ನಡೆಯಿತು. ಇವುಗಳಲ್ಲಿ ಉಳಿದೆಲ್ಲ ಅಂಶಗಳೂ ಸಾಮಾನ್ಯವಾಗಿದ್ದರೂ, ಡೆಸ್ಕ್ ನಿರ್ವಹಿಸುವ ಸಿಬ್ಬಂದಿ ಪುರುಷರೋ, ಮಹಿಳೆಯರೋ ಎನ್ನುವುದರಲ್ಲಿ ಮಾತ್ರ ವ್ಯತ್ಯಾಸವಿತ್ತು. ಈ ಪ್ರಯೋಗದ ಫಲಿತಾಂಶ ಆಶಾದಾಯಕವಾಗಿದೆ," ಎನ್ನುತ್ತಾರೆ ಸಂದೀಪ್ ಸುಖ್ತಂಕರ್. ಮಡದಿಯರ ಮೇಲಿನ ಹಲ್ಲೆ ಪ್ರಕರಣಗಳು ದಾಖಲೇ ಆಗದಿದ್ದಂತಹ ಠಾಣೆಗಳಲ್ಲಿ ಹೊಸ ಪ್ರಕರಣಗಳು ದಾಖಲಾಗಿದ್ದು ಕಂಡುಬಂತು. ಅದರಲ್ಲಿಯೂ ಮಹಿಳೆಯರು ಡೆಸ್ಕನ್ನು ನಿರ್ವಹಿಸುತ್ತಿದ್ದಂತಹ ಠಾಣೆಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿತ್ತು. ಈ ಠಾಣೆಗಳಲ್ಲಿ ದಾಖಲಾದ ಎಫ್ಐಆರ್ ಸಂಖ್ಯೆಯಲ್ಲಿಯೂ ಇದೇ ರೀತಿಯ ಬದಲಾವಣೆ ಇತ್ತು. ಆದರೆ, ಹೀಗೆ ಡೆಸ್ಕ್ ಇಲ್ಲದ, ತರಬೇತಿ ಪಡೆಯದ ಉಳಿದ ಠಾಣೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಸಾರ್ವಜನಿಕರ ಅಭಿಪ್ರಾಯದಲ್ಲಿಯೂ, ಮಹಿಳೆಯರು ಡೆಸ್ಕ್ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಗಳಲ್ಲಿದ್ದ ಪುರುಷರು ಮಹಿಳೆಯರ ಜೊತೆಗೆ ಹೆಚ್ಚು ಸೌಜನ್ಯದಿಂದ ನಡೆದುಕೊಳ್ಳುತ್ತಾರೆಂದು ತಿಳಿದುಬಂದಿತು.

ಇದರ ಅರ್ಥ ಇಷ್ಟೆ; "ಮಹಿಳಾ ಸಿಬ್ಬಂದಿಯಷ್ಟೇ ಇರುವ ಪೊಲೀಸ್ ಠಾಣೆಗಳು ಬೇಕು ಎನ್ನುವುದು ನಿಜ. ಆದರೆ, ಅದು ಸಾಧ್ಯವಾಗದಿದ್ದಾಗ, ಇರುವ ಪುರುಷ ಸಿಬ್ಬಂದಿಯ ಠಾಣೆಯನ್ನೇ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡುವುದು ಸಾಧ್ಯ ಎಂದು ಈ ಪ್ರಯೋಗದ ಫಲಿತಾಂಶಗಳು ನಿರೂಪಿಸುತ್ತಿವೆ," ಎನ್ನುತ್ತಾರೆ ಸಂದೀಪ್. ಈ ಪ್ರಯೋಗದ ಫಲಿತಾಂಶಗಳನ್ನು ಆಧರಿಸಿ ಮಧ್ಯಪ್ರದೇಶ ಸರ್ಕಾರ 700 ಪೊಲೀಸ್ ಠಾಣೆಗಳಲ್ಲಿ ಇಂತಹ ಮಹಿಳಾ ಡೆಸ್ಕುಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ. ನಮ್ಮಲ್ಲಿಯೂ ವಿಶೇಷ ಮಹಿಳಾ ಪೊಲೀಸ್ ಠಾಣೆಗಳ ಬದಲಿಗೆ, ಈಗಾಗಲೇ ಇರುವ ಠಾಣೆಗಳಲ್ಲಿ ಇಂತಹ ಒಬ್ಬೊಬ್ಬ ತರಬೇತಿ ಪಡೆದ ಮಹಿಳಾ ಸಿಬ್ಬಂದಿ ನೇಮಿಸಲು ಸಾಧ್ಯವಾಗಬಹುದೇ? ಪುರುಷ ಸಿಬ್ಬಂದಿಯ ನಡವಳಿಕೆ ಬದಲಾಗಬಹುದೇ?

ನಿಮಗೆ ಏನು ಅನ್ನಿಸ್ತು?
0 ವೋಟ್