ಮೈಕ್ರೋಸ್ಕೋಪು | ಜೋಪಾನ... ಅಡುಗೆಮನೆಯ ಹೊಗೆ ನಿಮ್ಮ ದೃಷ್ಟಿ ಕಿತ್ತುಕೊಳ್ಳಬಹುದು

Village Kitchen 4

ಭಾರತವನ್ನು ಅಭಿವೃದ್ಧಿ ರಾಷ್ಟ್ರ ಎನ್ನುತ್ತಾರಾದರೂ, ಅಶುದ್ಧ ಇಂಧನಗಳ ಬಳಕೆ ವ್ಯಾಪಕವಾಗಿರುವುದು ವಾಸ್ತವ. ನೀತಿ ಆಯೋಗದ ಪ್ರಕಾರ, ಭಾರತದಲ್ಲಿ ಅಶುದ್ಧ ಇಂಧನ ಬಳಸುವವರ ಸಂಖ್ಯೆ 78 ಕೋಟಿ. ಇವರಲ್ಲಿ ಮುಕ್ಕಾಲು ಪಾಲು ಗ್ರಾಮೀಣ ಭಾರತದವರು. ಸ್ವಚ್ಛ ಇಂಧನ ಬಳಕೆಯ ಯಾವ ಕ್ರಮಗಳೂ ಇದುವರೆಗೆ ಯಶಸ್ಸು ಕಂಡಿಲ್ಲ ಎಂಬುದು ಗಮನಾರ್ಹ

ವಯಸ್ಸು ನಲವತ್ತಾಗುತ್ತಿದ್ದ ಹಾಗೆ ನಮ್ಮ ಬದುಕಿನಲ್ಲಿ ಹಲವು ಬದಲಾವಣೆಗಳು ಕಾಣಿಸುವುದು ಸಹಜ. ಸಮೀಪದ ಬಂಧುಗಳ ಸಾವುಗಳ ಸರಮಾಲೆಯನ್ನು ಕಾಣಬೇಕಾಗುತ್ತದೆ. ಮಧ್ಯ ವಯಸ್ಸಿನ ಕೋಟಲೆಗಳು - ಡಯಾಬಿಟೀಸ್, ರಕ್ತದೊತ್ತಡ, ಕಚೇರಿಯಲ್ಲಿನ ಆತಂಕಗಳು ಮೊದಲಾದುವು – ಎದ್ದು ತೋರುತ್ತವೆ. ಇವೆಲ್ಲದರ ಜೊತೆಗೆ, ದೃಷ್ಟಿಯೂ ಸ್ವಲ್ಪ ಮಸುಕಾಗಿ ಚಾಳೀಸು ಮುಖವನ್ನು ಅಲಂಕರಿಸುತ್ತದೆ. ಇವೆಲ್ಲವೂ ವಯೋಸಹಜ ಬದಲಾವಣೆಗಳು. ಈ ಬದಲಾವಣೆಗಳು ಇನ್ನಷ್ಟು ವೇಗವಾಗಿ ಬರುವಂತೆ ಮಾಡುವ ಹಲವು ಕಾರಣಗಳಿವೆ. ಅದರಲ್ಲಿಯೂ ಕಣ್ಣು ಮಂಜಾಗುವಂತೆ ಮಾಡುವ ಕಣ್ಣಿನ ಪೊರೆ ಹೀಗೆ ಸಾಮಾನ್ಯಕ್ಕಿಂತಲೂ ಕಡಿಮೆ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುವಂತೆ ಮಾಡುವುದರಲ್ಲಿ ಅಡುಗೆಮನೆಯ ಪಾತ್ರವೂ ಇದೆ ಎನ್ನುವ ಸುದ್ದಿ ಬಂದಿದೆ. ಮುಂಬೈನ 'ಇಂಟರ್‌ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸ್‌'ನ ಆಶೀಷ್ ಕುಮಾರ್ ಉಪಾಧ್ಯಾಯ ಮತ್ತು ಸಮರುಲ್ ಇಸ್ಲಾಮ್ ನಡೆಸಿದ ಅಧ್ಯಯನವೊಂದರ ಪ್ರಕಾರ, ಅಡುಗೆ ಮನೆಯಲ್ಲಿ ಬಳಸುವ ಇಂಧನಕ್ಕೂ, ನಲವತ್ತೈದರ ನಂತರ ಕಾಣಿಸಿಕೊಳ್ಳುವ ದೃಷ್ಟಿದೋಷಗಳಿಗೂ ಸಂಬಂಧವಿದೆ.

ನಲವತ್ತೈದರ ನಂತರ ಬರುವ ದೃಷ್ಟಿದೋಷಗಳು ಹಲವು. ಅವುಗಳಲ್ಲಿ ಪ್ರಮುಖವಾದದ್ದು ಚಾಳೀಸ ಅಥವಾ ಪ್ರೆಸ್ಬಿಯೋಪಿಯಾ. ಕಣ್ಣಿನ ಪಾಪೆ ಕಿರಿದಾಗುವ ಸಾಮರ್ಥ್ಯ ಕುಗ್ಗುವುದರಿಂದ ಈ ದೃಷ್ಟಿದೋಷ ಕಾಣಿಸುತ್ತದೆ. ಹತ್ತಿರದ ವಸ್ತುಗಳು ಮಸುಕಾಗುತ್ತವೆ. ಪತ್ರಗಳನ್ನು ದೂರ ಹಿಡಿದು ನೋಡಿದರಷ್ಟೇ ಅಕ್ಷರಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಇದನ್ನು ಚಾಳೀಸು ಅಥವಾ ಕನ್ನಡಕ ಬಳಸಿ ಅಕ್ಷರಗಳು ಸ್ಪಷ್ಟವಾಗಿ ಕಾಣುವಂತೆ ಮಾಡಬಹುದು. ಚಾಳೀಸದಂತೆಯೇ ದೃಷ್ಟಿಯಲ್ಲಾಗುವ ಸಹಜ ಬದಲಾವಣೆ ಕಣ್ಣಿನ ಪೊರೆಯದ್ದು. ಕಣ್ಣಿನೊಳಗೆ ಇರುವ ಗಾಜಿನಂತಹ ಮಸೂರ ತಿಳಿಯಾಗಿರುವುದು, ಕ್ರಮೇಣ ಬಿಳಿಯಾಗುತ್ತದೆ. ಬೆಳಕು ಒಳ ನುಸುಳದಂತಾಗುತ್ತದೆ. ದೃಷ್ಟಿ ಮಸುಕಾಗುತ್ತದೆ. ಇದಕ್ಕೂ ಪರಿಹಾರವಿದೆ. ಮಸುಕಾದ ಮಸೂರವನ್ನೇ ತೆಗೆದುಹಾಕಿ, ಕನ್ನಡಕವನ್ನಷ್ಟೇ ಬಳಸುವುದು ಒಂದು ಉಪಾಯ. ಇಲ್ಲವೇ, ಗಾಜಿನಂತೆಯೇ ಇರುವ ಪ್ಲಾಸ್ಟಿಕ್ ಅಥವಾ ಪಾಲಿಮರ್ ಮಸೂರವನ್ನು ಕಣ್ಣಿನ ಮಸೂರದ ಜಾಗದಲ್ಲಿಡಬಹುದು. ಜಗತ್ತಿನಲ್ಲಿ ನಡೆಯುವ ಶಸ್ತ್ರಚಿಕಿತ್ಸೆಗಳಲ್ಲಿ ಇವೆರಡೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗುವಂಥವು, ನಿರಪಾಯಕಾರಿ ಕೂಡ.

Image
Village Kitchen 2
ಸಾಂದರ್ಭಿಕ ಚಿತ್ರ

ಕಣ್ಣಿನ ಪೊರೆ ಬರುವುದಕ್ಕೆ ಹಲವು ಕಾರಣಗಳನ್ನು ತರ್ಕಿಸಲಾಗಿದೆ. ವಯಸ್ಸಾಗುವುದು ಅದರಲ್ಲೊಂದಷ್ಟೆ. ಇದಲ್ಲದೆ, ಧೂಮಪಾನ ಮಾಡುವುದು, ಮದ್ಯ ಸೇವನೆ, ಹೊಗೆಯಿರುವ ವಾತಾವರಣದಲ್ಲಿ ವಾಸಿಸುವುದು ಮೊದಲಾದವು ಕಣ್ಣಿನ ಮಸೂರ ಮಂಜುಗಟ್ಟುವಂತೆ ಮಾಡುತ್ತವೆ ಎನ್ನಲಾಗಿದೆ. ಡಯಾಬಿಟಿಸ್ ಕೂಡ ಇದಕ್ಕೆ ಒತ್ತಾಸೆಯಾಗುವ ಇನ್ನೊಂದು ಕಾರಣ. ಈ ಹಿಂದಿನ ಹಲವು ಅಧ್ಯಯನಗಳಲ್ಲಿ, ಮನೆಯೊಳಗಿನ ಮಾಲಿನ್ಯದಿಂದಾಗಿ, ಅದರಲ್ಲಿಯೂ ಗಾಳಿಯಲ್ಲಿ ಹೊಗೆ ಇರುವಂತಹ ಪರಿಸರದಿಂದಾಗಿ ಕಣ್ಣಿನ ಪೊರೆ ಬೇಗನೆ ಕಾಣಿಸಿಕೊಳ್ಳಬಹುದು ಎಂದು ಗಣಿಸಲಾಗಿತ್ತು. ಈಗ ಉಪಾಧ್ಯಾಯ ಮತ್ತು ಇಸ್ಲಾಮರ ಸಂಶೋಧನೆ ಪ್ರಕಾರ, ಇವಷ್ಟೇ ಅಲ್ಲ. ದೂರ ಮತ್ತು ಸಮೀಪ ದೃಷ್ಟಿದೋಷದಂತಹ ಕಣ್ಣಿನ ದೋಷಗಳಿಗೂ ಮನೆಯೊಳಗಿನ ಮಾಲಿನ್ಯ ಕಾರಣವಿರಬಹುದು. ಅದರಲ್ಲಿಯೂ, ಅಡುಗೆಗೆ ಸೌದೆ, ಇದ್ದಿಲು, ಬೆರಣಿ, ಸೀಮೆಎಣ್ಣೆಯಂತಹ ಇಂಧನಗಳನ್ನು ಬಳಸುವುದರಿಂದಲೂ ದೃಷ್ಟಿದೋಷ ಹೆಚ್ಚಾಗಬಹುದು ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಘಟನೆ ಈ ಇಂಧನಗಳನ್ನು 'ಅಶುದ್ಧ ಇಂಧನಗಳು' ಎಂದು ವರ್ಗೀಕರಿಸಿದೆ.

ಅಶುದ್ಧ ಇಂಧನಗಳ ಬಳಕೆಗೂ ನಮ್ಮ ಆರೋಗ್ಯಕ್ಕೂ ತಳುಕು ಹಾಕುವ ಹಲವಾರು ಸಂಶೋಧನೆಗಳು ಈಗಾಗಲೇ ಆಗಿವೆ. ಕಣ್ಣಿನ ಆರೋಗ್ಯದ ದೃಷ್ಟಿಯಿಂದಲೂ ಇಂತಹ ಅಧ್ಯಯನಗಳು ನಡೆದಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದರ ಪ್ರಕಾರ, ಪ್ರಪಂಚದಲ್ಲಿ ಸುಮಾರು 23 ಕೋಟಿ ಜನ ಸೀಮೆಎಣ್ಣೆ, ಸೌದೆ, ಬೆರಣಿ ಮೊದಲಾದವುಗಳನ್ನು ಅಡುಗೆ ಮಾಡಲು ಬಳಸುತ್ತಾರೆ. ಇದರಿಂದ ಉಂಟಾಗುವ ಮಾಲಿನ್ಯದ ಪರಿಣಾಮವಾಗಿ, ಅಂದಾಜು ನಲವತ್ತು ಲಕ್ಷ ಮಂದಿ ಸಹಜ ಸಾವಿಗೂ ಮುನ್ನವೇ ಅಸ್ತಮಾ, ಪಾರ್ಶ್ವವಾಯು, ಹೃದಯಾಘಾತ ಮೊದಲಾದ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಮಕ್ಕಳಲ್ಲಿ, ಅದರಲ್ಲಿಯೂ ಐದು ವರ್ಷಕ್ಕೂ ಕಿರಿಯ ವಯಸ್ಸಿನ ಮಕ್ಕಳಲ್ಲಿ ಆಗುವ ಸಾವುಗಳಲ್ಲಿ ಅರ್ಧಕ್ಕರ್ಧ ಮನೆಯೊಳಗಿನ ಹೊಗೆಯಿಂದಾಗಿ ಉಂಟಾದ ಅಸ್ತಮಾದ ಕಾರಣದಿಂದ ಎನ್ನುತ್ತದೆ ಈ ವರದಿ.

Image
Village Kitchen 3
ಸಾಂದರ್ಭಿಕ ಚಿತ್ರ

'ಶುದ್ಧ ಇಂಧನಗಳು' ಎಂದರೆ ಇನ್ನೇನಲ್ಲ; ಉರಿದಾಗ ಇವುಗಳಿಂದ ಜನಿಸುವ ಹೊಗೆಯ ಕಣಗಳು ಮತ್ತು ಕಾರ್ಬನ್ ಮಾನಾಕ್ಸೈಡಿನ ಪ್ರಮಾಣ ಕಡಿಮೆ ಇರಬೇಕು. 2.5 ಮೈಕ್ರಾನಿಗಿಂತಲೂ ಕಡಿಮೆ ಗಾತ್ರದ ಧೂಳಿನ ಕಣಗಳನ್ನು ವಿಜ್ಞಾನಿಗಳು ಅತಿ ಹಾನಿಕರವೆಂದು ಪರಿಗಣಿಸುತ್ತಾರೆ. 2.5 ಪಿಪಿಎಂ (ಕಣರೂಪಿ ವಸ್ತು) ಎಂದು ಹೆಸರಿಸುವ ಇವು ಹೆಚ್ಚಿದ್ದಷ್ಟೂ ಶ್ವಾಸಕೋಶಕ್ಕೆ, ಉಸಿರಾಟಕ್ಕೆ ಧಕ್ಕೆ ಬರುವ ಸಾಧ್ಯತೆ ಹೆಚ್ಚು. ಹೊಗೆ ಮುಸುಕಿದಂತಹ ಮನೆಯೊಳಗೆ ಇಂತಹ ಧೂಳಿನ ಪ್ರಮಾಣ ಹೆಚ್ಚಿರುತ್ತದೆ. ಜೊತೆಗೆ ಇದ್ದಿಲು, ಸೌದೆ, ಬೆರಣಿ, ಸೀಮೆಎಣ್ಣೆಯಂತಹ ವಸ್ತುಗಳು ಸಂಪೂರ್ಣವಾಗಿ ಉರಿಯುವುದಿಲ್ಲ. ಅರೆಬರೆ ಉರಿದಾಗ ಅವುಗಳಿಂದ ಅತಿ ಸೂಕ್ಷ್ಮವಾದ ಕಾರ್ಬನ್‌ ಕಣಗಳಷ್ಟೇ ಅಲ್ಲ, ಕಾರ್ಬನ್ ಮಾನಾಕ್ಸೈಡಿನಂತಹ ವಿಷಾನಿಲವೂ ಉತ್ಪತ್ತಿಯಾಗುತ್ತದೆ. ಹೀಗಾಗಿ, ಬೆರಣಿ, ಸೌದೆ, ತರಗು, ಸೀಮೆಎಣ್ಣೆಗಳನ್ನು ಅಶುದ್ಧ ಇಂಧನಗಳೆಂದು ವಿಶ್ವ ಆರೋಗ್ಯ ಸಂಘಟನೆ ಪರಿಗಣಿಸಿದೆ.

ಅಶುದ್ಧ ಇಂಧನಗಳ ಬಳಕೆಯಿಂದ ಕಣ್ಣಿನ ದೃಷ್ಟಿ ಕಳೆದು ಕುರುಡಾಗಬಹುದು ಎನ್ನುವ ಅಂದಾಜು ಇತ್ತು. ಹಲವು ಅಧ್ಯಯನಗಳು ಈ ಬಗ್ಗೆ ಬೆರಳು ಮಾಡಿ ತೋರಿಸಿದ್ದವು. ಮನೆಯೊಳಗಿನ ಮಾಲಿನ್ಯದ ಪ್ರಭಾವ ಇನ್ನೂ ಹೆಚ್ಚಿರಬಹುದು ಎನ್ನುತ್ತದೆ ಉಪಾಧ್ಯಾಯ ಹಾಗೂ ಇಸ್ಲಾಮರ ಅಧ್ಯಯನ. ಭಾರತದಲ್ಲಿ ವೃದ್ಧಾಪ್ಯದ ನಡೆ ಹೇಗಿದೆ ಎನ್ನುವುದನ್ನು ತಿಳಿಯಲು 2017-2018ರ ಅವಧಿಯಲ್ಲಿ ಒಂದು ವ್ಯಾಪಕ ಸಮೀಕ್ಷೆ ನಡೆದಿತ್ತು. ಎಲ್ಲ ರಾಜ್ಯಗಳಿಂದಲೂ ಸೇರಿ 72,000 ಮಂದಿಯ ಅಧ್ಯಯನ ನಡೆಸಲಾಗಿತ್ತು. ವಿವಿಧ ವಯಸ್ಸು, ಗಂಡು-ಹೆಣ್ಣು, ಶ್ರೀಮಂತಿಕೆ ಮೊದಲಾದ ಸಂಗತಿಗಳನ್ನೂ ಈ ಸಮೀಕ್ಷೆ ಒಳಗೊಳ್ಳಲಾಗಿತ್ತು. ಜೊತೆಗೆ, ಅವರ ಕಣ್ಣಿನ ಆರೋಗ್ಯವನ್ನು, ಮುಖ್ಯವಾಗಿ ಕಣ್ಣಿನ ದೋಷಗಳಾದ ಸಮೀಪ ಮತ್ತು ದೂರ ದೃಷ್ಟಿದೋಷಗಳನ್ನು ಪರೀಕ್ಷಿಸಲಾಗಿತ್ತು. ಇವೆಲ್ಲದರ ಜೊತೆಗೆ, ಅವರ ಮನೆಯಲ್ಲಿ ಎಂತಹ ಇಂಧನ ಬಳಸುತ್ತಾರೆ, ಪ್ರತ್ಯೇಕವಾದ ಅಡುಗೆಮನೆ ಇದೆಯೋ ಅಥವಾ ಮಲಗುವ ಕೋಣೆಯಲ್ಲಿಯೇ ಅಡುಗೆಯನ್ನೂ ಮಾಡುವಂತಿದೆಯೋ ಎಂದೂ ಪ್ರಶ್ನಿಸಲಾಗಿತ್ತು.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಬೋಂಡ, ಬಜ್ಜಿ, ಕಬಾಬ್, ಗೋಬಿ, ಎಗ್‌ ರೈಸ್, ನೂಡಲ್ಸ್ ತಿನ್ನುವ ಮುನ್ನ...

ಈ ಎಲ್ಲ ಅಂಶಗಳನ್ನೂ ಗಮನಿಸಿ, ಕಣ್ಣಿನ ದೋಷವುಳ್ಳವರ ಸಂಖ್ಯೆಯಲ್ಲಿ ವ್ಯತ್ಯಾಸಗಳಾಗಿವೆಯೇ ಎಂದು ಉಪಾಧ್ಯಾಯ ಮತ್ತು ಇಸ್ಲಾಮ್ ಗಣಿಸಿದ್ದಾರೆ. ಇವರ ಲೆಕ್ಕಾಚಾರಗಳ ಪ್ರಕಾರ, ವಯಸ್ಸು, ಲಿಂಗ, ಆರ್ಥಿಕತೆ, ರಾಜ್ಯ ಮೊದಲಾದ ಅಂಶಗಳ ಪ್ರಭಾವಗಳನ್ನು ತೆಗೆದುಹಾಕಿದರೆ, ಮನೆಯೊಳಗೆ ಅಡುಗೆ ಮಾಡುವ ವಿಧಾನಕ್ಕೂ ಕಣ್ಣಿನ ದೋಷಗಳಿಗೂ ನೇರ ಸಂಬಂಧ ಇರುವಂತೆ ತೋರುತ್ತದೆ. ಅಶುದ್ಧ ಇಂಧನಗಳನ್ನು ಬಳಸುವಂತಹ ಮನೆಗಳಲ್ಲಿ ವಾಸಿಸುವಂತಹ ವೃದ್ಧರಲ್ಲಿ ಶೇಕಡ 8ರಷ್ಟು ಹೆಚ್ಚು ಮಂದಿಯಲ್ಲಿ ಸ್ವಲ್ಪ ಮಟ್ಟಿಗಿನ ಸಮೀಪ ದೃಷ್ಟಿದೋಷ ಇತ್ತು. ದೂರ ದೃಷ್ಟಿದೋಷ ಕೂಡ 1.88ರಷ್ಟು ಜನರಲ್ಲಿ ಕಾಣಿಸಿತು. ಅಂಧತ್ವವನ್ನು ಪರಿಗಣಿಸಿದಾಗ ಅಂತಹ ವ್ಯತ್ಯಾಸವೇನೂ ಕಾಣಲಿಲ್ಲ. ಹಾಗೆಯೇ, ಮಹಿಳೆಯರು ಮತ್ತು ಪುರುಷರ ನಡುವೆಯೂ ಅಷ್ಟೇನೂ ವ್ಯತ್ಯಾಸ ಕಾಣಲಿಲ್ಲ. ಅರ್ಥಾತ್, ಅಡುಗೆ ಮಾಡುವವರು ಮಹಿಳೆಯರೇ ಆಗಿದ್ದರೂ, ಅವರ ಮೇಲಿನ ಪರಿಣಾಮದಷ್ಷ್ಟೇ ಮನೆಯೊಳಗೆ ವಾಸಿಸುವ ಗಂಡಸರ ಮೇಲೆಯೂ ಇರುವಂತೆ ತೋರುತ್ತದೆ. ಅಶುದ್ಧ ಇಂಧನಗಳ ಬಳಕೆ ಈ ಹೆಚ್ಚಿದ ಕಣ್ಣಿನ ದೋಷಗಳನ್ನು ಹೇಗೆ ಉಂಟುಮಾಡಬಲ್ಲದು ಎಂಬುದಕ್ಕೆ ವಿವರಣೆ ಇಲ್ಲವಾದರೂ, ಸಂಬಂಧ ಸ್ಪಷ್ಟವಾಗಿದೆ ಎನ್ನುತ್ತಾರೆ ಉಪಾಧ್ಯಾಯ ಮತ್ತು ಇಸ್ಲಾಮ್.

ಅಡುಗೆಮನೆಯ ಮಾಲಿನ್ಯದಿಂದಾಗಿ ಕಣ್ಣಿನ ದೋಷಗಳುಂಟಾಗುತ್ತವೆ ಎನ್ನುವುದಕ್ಕೆ ಇದೊಂದೇ ಪುರಾವೆಯಲ್ಲ. ಕಳೆದ ವರ್ಷ ಇನ್ನೂ ವ್ಯಾಪಕವಾದೊಂದು ಅಧ್ಯಯನವನ್ನು ಚೀನಾದ ವಿಜ್ಞಾನಿಗಳು ಪ್ರಕಟಿಸಿದ್ದರು. ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ಐದು ಲಕ್ಷ ಮಂದಿಯ ಕಣ್ಣಿನ ಆರೋಗ್ಯವನ್ನು ಅಧ್ಯಯನ ಮಾಡಲಾಗಿತ್ತು. ಇದು ಅಶುದ್ಧ ಇಂಧನಗಳನ್ನು ದೀರ್ಘಕಾಲ ಬಳಸುವುದರಿಂದ ಕಣ್ಣಿನಲ್ಲಿ ಪೊರೆ ಹುಟ್ಟುವುದರ ಸಾಧ್ಯತೆಯ ಜೊತೆಗೆ, ಕಣ್ಣಿನ ಗ್ರಂಥಿಗಳಲ್ಲಿ ಸೋಂಕುಂಟಾಗುವ ಸಾಧ್ಯತೆಗಳೂ ಶೇಕಡ 2ರಷ್ಟು ಹೆಚ್ಚುತ್ತವೆ ಎಂದು ತೋರಿಸಿತ್ತು.

Image
Village Kitchen 3
ಸಾಂದರ್ಭಿಕ ಚಿತ್ರ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಅಶುದ್ಧ ಇಂಧನಗಳ ಬಳಕೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿಯೇ ಹೆಚ್ಚು. ಒಂದು ವರದಿಯ ಪ್ರಕಾರ, ಪ್ರಪಂಚದ ಶೇಕಡ 38ರಷ್ಟು ಮಂದಿಗೆ ಮತ್ತು ಅಭಿವೃದ್ಧಿಶೀಲ ದೇಶಗಳ ಶೇಕಡ ಅರ್ಧಕ್ಕರ್ಧದಷ್ಟು ಜನತೆಗೆ ಇಂತಹ ಅಶುದ್ಧ ಇಂಧನಗಳೇ ಅಡುಗೆಗೆ ಉರುವಲು. ಭಾರತವನ್ನು ಅಭಿವೃದ್ಧಿ ರಾಷ್ಟ್ರ ಎಂದು ಹೇಳಬಹುದಾದರೂ, ಶೇಕಡ 25ರಷ್ಟು ಮಂದಿ ಇನ್ನೂ ಬಡತನದ ರೇಖೆಯ ಕೆಳಗೇ ಇರುವುದರಿಂದ ಇಲ್ಲಿಯೂ ಅಶುದ್ಧ ಇಂಧನಗಳ ಬಳಕೆ ವ್ಯಾಪಕವಾಗಿರುವುದು ವಾಸ್ತವ. ನೀತಿ ಆಯೋಗದ ಪ್ರಕಾರ, ಭಾರತದಲ್ಲಿ ಅಶುದ್ಧ ಇಂಧನಗಳನ್ನು ಬಳಸುವವರ ಸಂಖ್ಯೆ ಸುಮಾರು 78 ಕೋಟಿ. ಇವರಲ್ಲಿ ಮುಕ್ಕಾಲು ಪಾಲು ಮಂದಿ ಗ್ರಾಮೀಣ ಭಾರತದವರು. ಇಂತಹ ಇಂಧನಗಳ ಬಳಕೆಯನ್ನು ಕುಗ್ಗಿಸಿ, ಸ್ವಚ್ಛ ಇಂಧನವನ್ನು ಬಳಸಲು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆಯಾದರೂ, ಅವುಗಳ ಫಲ ಎಲ್ಲರಿಗೂ ಸಿಗುತ್ತಿಲ್ಲ. ಉದಾಹರಣೆಗೆ, ಸೌದೆಯನ್ನು ಸ್ವಚ್ಛವಾಗಿ ಉರಿಸುವ ಹಲವು ಸುಧಾರಿತ ಒಲೆಗಳಿವೆ. ಇವುಗಳ ಬಳಕೆಗೆ ಸಬ್ಸಿಡಿಯೇ ಮೊದಲಾದ ನೆರವು ನೀಡಿ ಪ್ರೋತ್ಸಾಹಿಸಿದರೂ ಕೇವಲ ಒಂದು ಶತಾಂಶದಷ್ಟು ಜನತೆ ಮಾತ್ರ ಅವನ್ನು ಬಳಸುತ್ತಿವೆ ಎನ್ನುತ್ತದೆ ನೀತಿ ಆಯೋಗ.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಜನರಿಂದ, ಜನರಿಗಾಗಿ, ಜನರೇ ನಿರ್ವಹಿಸುವ ವಿಜ್ಞಾನ

ವೃದ್ಧಾಪ್ಯದಲ್ಲಿ ದೃಷ್ಟಿದೋಷವನ್ನು ಕುಗ್ಗಿಸಬೇಕಾದರೆ, ಅದಕ್ಕೆ ಕಾರಣವೆನ್ನಿಸುವ ಮನೆಯೊಳಗಿನ ಮಾಲಿನ್ಯವನ್ನೂ ಕಡಿಮೆ ಮಾಡಬೇಕಷ್ಟೆ. ಇಂತಹ ಹಲವು ಉಪಾಯಗಳನ್ನು ವಿಜ್ಞಾನಿಗಳು ಈಗಾಗಲೇ ಒದಗಿಸಿದ್ದರು. ನಾಲ್ಕು ದಶಕಗಳ ಹಿಂದೆ ಹೊಗೆ ಕಡಿಮೆ ಸೂಸುವ, ಉಷ್ಣವನ್ನು ಹೆಚ್ಚು ನೀಡುವ 'ಅಸ್ತ್ರ' ಎನ್ನುವ ಸೌದೆ ಒಲೆಗಳನ್ನು ರೂಪಿಸಲಾಗಿತ್ತು. ಹಾಗೆಯೇ, ಕಡಿಮೆ ಹೊಗೆ ಸೂಸುವ ಮತ್ತು ಶೇಕಡ ಇಪ್ಪತ್ತರಷ್ಟು ಸೀಮೆಎಣ್ಣೆಯನ್ನು ಉಳಿತಾಯ ಮಾಡುವ 'ನೂತನ್ ಸ್ಟವ್‌ಗಳು' ಬಳಕೆಯಲ್ಲಿದ್ದುವು. ಸ್ವಚ್ಛ ಎನ್ನಿಸುವ ಅಡುಗೆ ಅನಿಲದ ಬಳಕೆ ವ್ಯಾಪಕವಾಗುತ್ತಿದ್ದಂತೆ ಈ ಒಲೆಗಳ ಬಳಕೆ ಕಡಿಮೆಯಾಯಿತಾದರೂ ಸಂಪೂರ್ಣವಾಗಿ ನಿಂತಿಲ್ಲ. ಇತ್ತೀಚೆಗೆ ಸರ್ಕಾರ 'ಉಜ್ವಲ್' ಎನ್ನುವ ಯೋಜನೆಯಡಿ ಸ್ವಚ್ಛ ಇಂಧನವನ್ನು ಎಲ್ಲ ಕುಟುಂಬಗಳಿಗೂ ಒದಗಿಸುವ ಉಪಾಯ ಮಾಡಿತ್ತಷ್ಟೆ. ಈ ಉಪಾಯವೂ ಫಲಿಸುತ್ತಿಲ್ಲವಂತೆ. ಅಡುಗೆ ಅನಿಲಗಳ ಸಿಲಿಂಡರುಗಳನ್ನು ಪಡೆದ ಗ್ರಾಮೀಣ ಜನತೆಯಲ್ಲಿ ಶೇಕಡ ಹತ್ತರಷ್ಟು ಕುಟುಂಬಗಳು ಅವನ್ನು ಮತ್ತೆ ತುಂಬಿಸಿಕೊಳ್ಳಲೇ ಇಲ್ಲ ಎನ್ನುತ್ತದೆ ಒಂದು ವರದಿ.

ಒಟ್ಟಾರೆ, ಚಾಳೀಸವನ್ನು ನಿವಾರಿಸುವುದು ಅಸಾಧ್ಯವಾದಂತೆಯೇ, ಹೊಗೆಯಿಂದ ಉಂಟಾಗುವ ದೃಷ್ಟಿದೋಷವನ್ನು ನಿವಾರಿಸುವುದು ಸುಲಭವಲ್ಲವೇನೋ. ಉಪಾಧ್ಯಾಯ ಮತ್ತು ಇಸ್ಲಾಮರ ಅಧ್ಯಯನದ ವಿವರಗಳನ್ನು 'ಎನ್ವಿರಾನ್‌ಮೆಂಟ್ ಇಂಟರ್‌ನ್ಯಾಶನಲ್' ಪತ್ರಿಕೆ ಪ್ರಕಟಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್