ಅರ್ಥ ಪಥ | ಡಾಲರ್ ಎದುರು ಮಂಡಿಯೂರಿದ ರೂಪಾಯಿ; ಯಾಕೆ ಹೀಗಾಗುತ್ತಿದೆ?

ಬಂಡವಾಳದ ಹೊರಹರಿವನ್ನು ತಡೆಯುವುದಕ್ಕೆ ನಮ್ಮಲ್ಲಿ ಯಾವುದೇ ಪರಿಣಾಮಕಾರಿ ಉಪಾಯಗಳಿಲ್ಲ. ಹಾಗೆಯೇ, ಆರ್ಥಿಕ ಸ್ಥಗಿತತೆಯನ್ನು ತಡೆಯುವುದಕ್ಕೂ ಯಾವುದೇ ಕ್ರಮಗಳು ಮುಂದುವರಿದ ರಾಷ್ಟ್ರಗಳ ಕೈಯಲ್ಲಿ ಇಲ್ಲ. ಹಾಗಾಗಿ, ಭಾರತದ ರೂಪಾಯಿ ಮೌಲ್ಯದ ಕುಸಿತ ತಾತ್ಕಾಲಿಕ ಸಮಸ್ಯೆಯಂತೂ ಅಲ್ಲ. ಹಾಗಾಗಿ ಇದು ನಿಜವಾಗಿಯೂ ಗಂಭೀರ ವಿಷಯ

ಇತ್ತೀಚೆಗೆ ರೂಪಾಯಿ, ಡಾಲರ್, ಯೂರೋ, ಯೆನ್ ಇವೆಲ್ಲ ಸ್ಪರ್ಧೆಗೆ ಇಳಿದಂತೆ ಕಾಣುತ್ತಿದೆ. ಸ್ಪರ್ಧೆಯಲ್ಲಿ ಡಾಲರ್ ಎದುರು ಉಳಿದೆಲ್ಲ ನಾಣ್ಯಗಳ ಮೌಲ್ಯ ಕುಸಿಯುತ್ತಿದೆ. ರುಪಾಯಿ ದಿನೇ-ದಿನೇ ಅಗ್ಗವಾಗುತ್ತಿದೆ. ಈ ವಾರ (ಆಗಸ್ಟ್ 1ರಿಂದ ಆಗಸ್ಟ್ 5) ಡಾಲರ್ ಬೆಲೆ 80 ರೂಪಾಯಿ ಆಗಿದೆ. ಇದು ರುಪಾಯಿಯ ದಾಖಲೆ ಮಟ್ಟದ ಕುಸಿತ ಎನ್ನಲಾಗಿದೆ. ಪ್ರತೀ ವಾರವೂ ಈ ರೀತಿಯ ಹೊಸ-ಹೊಸ ದಾಖಲೆಗಳು ಸೃಷ್ಟಿಯಾಗುತ್ತಲೇ ಇವೆ. ಭಾರತದ ರೂಪಾಯಿ ಮಾತ್ರವಲ್ಲ, ಕೊರಿಯಾದ ವಾನ್, ಫಿಲಿಪೈನಿನ ಪೆಸೊ, ಥಾಯ್ ದೇಶದ ಭ್ಹಾತ್... ಹೀಗೆ ಹಲವು ದೇಶಗಳ ನಾಣ್ಯಗಳ ಮೌಲ್ಯವೂ ಕುಸಿದಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಈ ಎಲ್ಲ ನಾಣ್ಯಗಳು ಶೇಕಡ 10ಕ್ಕಿಂತ ಹೆಚ್ಚು ಮೌಲ್ಯ ಕಳೆದುಕೊಂಡಿರುವುದು ನಿಜ. ಡಾಲರ್ 20 ವರ್ಷಗಳಲ್ಲೇ ಅತೀ ಹೆಚ್ಚು ಮೌಲ್ಯ ಪಡೆದುಕೊಂಡಿದೆ.

ಯಾಕೆ ಹೀಗಾಗುತ್ತಿದೆ? ರುಪಾಯಿ ಮೌಲ್ಯ ಹೇಗೆ ನಿರ್ಧಾರವಾಗುತ್ತದೆ? ಎಲ್ಲ ಸರಕುಗಳ ವಿಷಯದಲ್ಲಿ ಆಗುವಂತೆ ನಾಣ್ಯಗಳ ಮೌಲ್ಯವೂ ಅದರ ಬೇಡಿಕೆ ಮತ್ತು ಪೂರೈಕೆಯನ್ನು ಆಧರಿಸಿ ನಿರ್ಧಾರವಾಗುತ್ತದೆ. ರೂಪಾಯಿಗೆ ಬೇಡಿಕೆ ಹೆಚ್ಚಿದರೆ ಅದರ ಮೌಲ್ಯ ಹೆಚ್ಚುತ್ತದೆ. ಬೇಡಿಕೆ ಇಳಿದರೆ, ಅಂದರೆ ಬೇಡಿಕೆಗಿಂತ ಅದರ ಪೂರೈಕೆ ಹೆಚ್ಚಿದ್ದರೆ ಅದರ ಮೌಲ್ಯ ಕುಸಿಯುತ್ತದೆ. ಹಣದ ಪೂರೈಕೆಯ ವಿಷಯವನ್ನು ಅಂದರೆ, ಎಷ್ಟು ನೋಟನ್ನು ಮುದ್ರಿಸಬೇಕು ಇತ್ಯಾದಿ ವಿಷಯವನ್ನು ಆರ್‌ಬಿಐ ನಿರ್ಧರಿಸುತ್ತದೆ. ಇನ್ನು, ರೂಪಾಯಿ ಬೇಡಿಕೆಯನ್ನು ಆರ್ಥಿಕತೆಯಲ್ಲಿ ಒಟ್ಟಾರೆ ಉತ್ಪಾದನೆಯಾದ ಸರಕು ಮತ್ತು ಸೇವೆಯ ಪ್ರಮಾಣ, ಆಮದಿನ ಪ್ರಮಾಣ ಇತ್ಯಾದಿ ಅಂಶಗಳು ನಿರ್ಧರಿಸುತ್ತವೆ. ಉದಾಹರಣೆಗೆ, ಕಚ್ಚಾತೈಲದ ಆಮದಿಗೆ ಬೇಡಿಕೆ ಹೆಚ್ಚಾದರೆ ವಿದೇಶಿ ವಿನಿಮಯದ ಮಾರುಕಟ್ಟೆಯಲ್ಲಿ ರೂಪಾಯಿಯ ಪೂರೈಕೆ ಹೆಚ್ಚುತ್ತದೆ; ರೂಪಾಯಿ ಮೌಲ್ಯ ಕುಸಿಯುತ್ತದೆ. ಬದಲಿಗೆ, ಭಾರತದಲ್ಲಿನ ಉತ್ಪನ್ನಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಿದರೆ ಡಾಲರ್ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುತ್ತದೆ; ರುಪಾಯಿ ಬೆಲೆ ಹೆಚ್ಚುತ್ತದೆ. ಹಾಗೆಯೇ, ಭಾರತದಲ್ಲಿ ಬಂಡವಾಳ ಹೂಡಲು ವಿದೇಶಿ ಹೂಡಿಕೆದಾರರು ಹೆಚ್ಚು ಉತ್ಸುಕರಾಗಿದ್ದರೆ ವಿದೇಶಿ ಹಣದ ಹರಿವು ಹೆಚ್ಚುತ್ತದೆ. ಆಗಲೂ ರೂಪಾಯಿ ಮೌಲ್ಯ ಹೆಚ್ಚುತ್ತದೆ.

ಈಗ ಭಾರತದಲ್ಲಿ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದಕ್ಕೆ ಹಲವು ಕಾರಣಗಳಿವೆ.

ಮೊದಲನೆಯದಾಗಿ, ಹಲವು ವರ್ಷಗಳಿಂದ ನಮ್ಮಲ್ಲಿ ರಫ್ತಿಗಿಂತ ಆಮದಿನ ಪ್ರಮಾಣ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಇದರಿಂದ ವ್ಯಾಪಾರದ ಕೊರತೆ ಅಂದರೆ, ರಫ್ತು ಮತ್ತು ಆಮದಿನ ನಡುವಿನ ಅಂತರ ಹೆಚ್ಚುತ್ತಿದೆ. ಜೂನ್ ತಿಂಗಳಿನಲ್ಲಿ ನಮ್ಮ ಒಟ್ಟಾರೆ ರಫ್ತು ಸುಮಾರು 38 ಬಿಲಿಯನ್ ಡಾಲರ್‌ಗಳಷ್ಟಿತ್ತು. ಆದರೆ, ಆ ತಿಂಗಳಿನಲ್ಲಿ ನಾವು 63.6 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದೆವು. ಹಾಗಾಗಿ ನಮ್ಮ ವ್ಯಾಪಾರದಲ್ಲಿ 25.6 ಶತಕೋಟಿಗಳಷ್ಟು ಕೊರತೆಯುಂಟಾಗಿತ್ತು. ಜುಲೈ ತಿಂಗಳಿನಲ್ಲಿ ಈ ಕೊರತೆ 31.02 ಶತಕೋಟಿ ಡಾಲರ್‌ಗಳಷ್ಟಾಯಿತು.  ಕಳೆದ ವರ್ಷ ಜುಲೈನಲ್ಲಿ ಅದು 10.63ರಷ್ಟಿತ್ತು. ಅಂದರೆ, ಒಂದು ವರ್ಷದಲ್ಲಿ ಕೊರತೆ ಮೂರು ಪಟ್ಟು ಹೆಚ್ಚಿದೆ. ಈ ಕೊರತೆಯನ್ನು ತುಂಬಲು ವಿದೇಶಿ ವಿನಿಮಯದ ಮೀಸಲಿನಿಂದ ಡಾಲರ್ ತೆಗೆಯಬೇಕು. ಇಲ್ಲವೇ, ಹೊರಗಡೆಯಿಂದ ಆ ಪ್ರಮಾಣದಲ್ಲಿ ಡಾಲರ್ ಹರಿದುಬರಬೇಕು. ಕೆಲ ವರ್ಷಗಳ ಹಿಂದೆ ಡಾಲರ್ ಹಾಗೆ ಬರುತ್ತಿತ್ತು. ಈಗ ಅದು ನಿಂತಿದೆ. ಇರುವ ಒಂದೇ ದಾರಿ ಅಂದರೆ, ವಿದೇಶಿ ವಿನಿಮಯದ ಸಂಗ್ರಹವನ್ನು ಬಳಸುವುದು. ಹೀಗೆ, ಹಲವು ತಿಂಗಳುಗಳಿಂದ ಬೊಕ್ಕಸವನ್ನು ಕರಗಿಸುತ್ತ ಬರುತ್ತಿದ್ದೇವೆ. 2021ರ ಜೂನ್ ತಿಂಗಳಿನಲ್ಲಿ 19 ತಿಂಗಳ ಆಮದಿನ ಖರ್ಚನ್ನು ಭರಿಸುವಷ್ಟು ಹಣ ನಮ್ಮಲ್ಲಿತ್ತು. ಈಗ ಕೇವಲ 9.5 ತಿಂಗಳ ಆಮದಿನ ಖರ್ಚನ್ನು ನಿರ್ವಹಿಸಲು ಸಾಲುತ್ತದೆ.

Image

ಸರ್ಕಾರ ಆತಂಕಕ್ಕೆ ಕಾರಣವಿಲ್ಲ ಅನ್ನುತ್ತದೆ. "ಉಕ್ರೇನ್ ಯುದ್ಧದಿಂದ ಪೆಟ್ರೋಲ್ ಬೆಲೆ ಹೆಚ್ಚಿದೆ. ಹಾಗಾಗಿ ಆಮದಿನ ವೆಚ್ಚ ಹೆಚ್ಚಿದೆ. ಇದೊಂದು ತಾತ್ಕಾಲಿಕ ಸಮಸ್ಯೆ," ಎಂಬುದು ಸರ್ಕಾರದ ಸಮರ್ಥನೆ. ಆದರೆ, ಆಮದಿನ ಹೆಚ್ಚಳಕ್ಕೆ ಪೆಟ್ರೋಲಿನ ಬೆಲೆ ಏರಿಕೆ ಮಾತ್ರ ಕಾರಣವಲ್ಲ. ನಾವು ಕಲ್ಲಿದ್ದಲಿನಿಂದ ಹಿಡಿದು ಚಿನ್ನದವರೆಗೆ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಕಚ್ಚಾತೈಲ, ಕಲ್ಲಿದ್ದಲು, ಗೊಬ್ಬರ ಹಾಗೂ ಚಿನ್ನ ನಮ್ಮ ಒಟ್ಟಾರೆ ಆಮದಿನ ಸುಮಾರು ಅರ್ಧ ಭಾಗವಾಗುತ್ತದೆ. ಈ ಪದಾರ್ಥಗಳ ಬೆಲೆ ಜಾಸ್ತಿಯಾದರೂ ಬೇಡಿಕೆಯಲ್ಲಿ ಅಷ್ಟೊಂದು ಇಳಿಕೆಯಾಗುವುದಿಲ್ಲ. ಕಲ್ಲಿದ್ದಲು ನಮ್ಮಲ್ಲೇ ಸಾಕಷ್ಟು ಉತ್ಪಾದನೆಯಾಗುತ್ತಿತ್ತು. ಮಳೆ ಇತ್ಯಾದಿ ಹವಾಮಾನದ ಸಮಸ್ಯೆಯಿಂದ ಕಲ್ಲಿದ್ದಲು ತೆಗೆಯುವುದಕ್ಕೆ ಸಾಧ್ಯವಾಗಲಿಲ್ಲ ಅನ್ನುವ ಸಮಜಾಯಿಷಿ ನೀಡಲಾಗುತ್ತಿದೆ. ಅದು ನಿಜವಾದ ಕಾರಣವಲ್ಲ. ಸರ್ಕಾರದ ನೀತಿಯಲ್ಲಿ ಸಮಸ್ಯೆ ಇದೆ. ಮೊದಲಿಗೆ ಸಾರ್ವಜನಿಕ ವಲಯದಲ್ಲಿ ಕಲ್ಲಿದ್ದಲು ಉತ್ಪಾದನೆಗೆ ನಿರ್ಬಂಧ ಹೇರಲಾಯಿತು. ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಯಿತು. ಖಾಸಗಿ ಕ್ಷೇತ್ರದಲ್ಲಿ ನಿರೀಕ್ಷಿತ ಉತ್ಪಾದನೆಯಾಗಲಿಲ್ಲ. ಹಾಗಾಗಿ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಯಿತು. ಅದಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ತೆರಬೇಕಾಯಿತು. ವ್ಯಾಪಾರದ ಕೊರತೆ ಹೆಚ್ಚಿತು. ವಿದೇಶಿ ವಿನಿಮಯದ ಸಂಗ್ರಹಕ್ಕೆ ಹೊರೆಯಾಯಿತು. ರೂಪಾಯಿಯ ಮೇಲೂ ಒತ್ತಡ ಹೆಚ್ಚಾಯಿತು.

ವಿದೇಶಿ ಬಂಡವಾಳ ಹರಿದುಬಂದಿದ್ದರೆ ಆಮದಿನ ಖರ್ಚನ್ನು ನಿಭಾಯಿಸಬಹುದಿತ್ತು. ದುರದೃಷ್ಟವೆಂದರೆ, ವಿದೇಶಿ ಬಂಡವಾಳದ ಹೊರ ಹರಿವು ಪ್ರಾರಂಭವಾಗಿದೆ. 2022ರಲ್ಲಿ ಜನವರಿಯಿಂದ ಜೂನ್‍ವರೆಗಿನ ಆವಧಿಯಲ್ಲಿ ಸುಮಾರು 29.73 ಶತಕೋಟಿ ಡಾಲರ್ ಬಂಡವಾಳವನ್ನು ವಿದೇಶಿ ಬಂಡವಾಳಗಾರರು ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಬಂಡವಾಳದ ಹೊರ ಹರಿವು ರೂಪಾಯಿಯ ಮೌಲ್ಯದ ಕುಸಿತಕ್ಕೆ ಬಹುಮುಖ್ಯ ಕಾರಣ. ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದ ಬಹುತೇಕ ಸಂದರ್ಭಗಳಲ್ಲಿ ವಿದೇಶಿ ಬಂಡವಾಳ ಗಣನೀಯ ಪ್ರಮಾಣದಲ್ಲಿ ಹೊರಗೆ ಹರಿದಿರುವುದನ್ನು ಗಮನಿಸಬಹುದು. ಉದಾಹರಣೆಗೆ, 2019ರ ಆಗಸ್ಟ್‌ನಲ್ಲಿ, 2020ರ ಮಾರ್ಚ್‌ನಲ್ಲಿ ಮತ್ತು 2022ರ ಮೇ-ಜೂನ್ ತಿಂಗಳಿನಲ್ಲಿ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿತ್ತು. ಈ ಮೂರು ಸಂದರ್ಭಗಳಲ್ಲಿಯೂ ವಿದೇಶಿ ಬಂಡವಾಳ ಗಣನೀಯ ಪ್ರಮಾಣದಲ್ಲಿ ಹೊರಗೆ ಹರಿದಿತ್ತು.

ವಿದೇಶಿ ವ್ಯಾಪಾರದಲ್ಲಿನ ಕೊರತೆ, ವಿದೇಶಿ ಬಂಡವಾಳದ ಹೊರ ಹರಿವಿನಿಂದ ಆರ್‌ಬಿಐನ ವಿದೇಶಿ ವಿನಿಮಯದ ಮೀಸಲು ಕಡಿಮೆಯಾಗುತ್ತದೆ. ಅದು 2021ರ ಸೆಪ್ಟೆಂಬರ್‌ನಲ್ಲಿ 642 ಬಿಲಿಯನ್ ಡಾಲರ್ ಇತ್ತು. ಈಗ 572.7 ಶತಕೋಟಿ ಡಾಲರ್ ಆಗಿದೆ. ಡಾಲರ್ ಎದುರು ಇತರ ದೇಶದ ನಗದಿನ ಮೌಲ್ಯ ಕುಸಿದಾಗಲೂ ವಿದೇಶಿ ವಿನಿಮಯದ ಸಂಗ್ರಹದ ಮೌಲ್ಯ ಕಡಿಮೆಯಾಗಬಹುದು. ಉದಾಹರಣೆಗೆ, ಯೂರೋ ಬೆಲೆ ಕುಸಿದರೆ, ಸಂಗ್ರಹದಲ್ಲಿರುವ ಯೂರೋವಿನ ಮೌಲ್ಯ ಕಡಿಮೆಯಾಗುತ್ತದೆ. ಜೊತೆಗೆ, ರೂಪಾಯಿ ಮೌಲ್ಯದ ಕುಸಿತವನ್ನು ತಡೆಯುವುದಕ್ಕೆ ಆರ್‌ಬಿಐ ಡಾಲರನ್ನು ಮಾರುಕಟ್ಟೆಯಲ್ಲಿ ಮಾರಿದಾಗಲೂ ವಿದೇಶಿ ವಿನಿಮಯದ ಮೀಸಲಿಗೆ ಹೊಡೆತ ಬೀಳುತ್ತದೆ.

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಭಾರತದ ಆರ್ಥಿಕ ಬೆಳವಣಿಗೆಯ ದಾರಿ ಕುರಿತು ರಘುರಾಂ ರಾಜನ್ ಹೇಳುವುದೇನು?

ಮೊದಲು ಬಂಡವಾಳಿಗರು ಹಿಂದುಳಿದ ದೇಶಗಳಲ್ಲಿ ಹಣವನ್ನು ಹೂಡಲು ಹಿಂದೇಟು ಹಾಕುತ್ತಿದ್ದರು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಂದುವರಿದ ರಾಷ್ಟ್ರಗಳು ಬಿಕ್ಕಟ್ಟಿನಿಂದ ಹೊರಬರಲು ಅಗ್ಗದ ಹಣದ ನೀತಿಯನ್ನು ಅನುಸರಿಸಲು ಪ್ರಾರಂಭಿಸಿದವು. ಅಂದರೆ, ಕೇಂದ್ರ ಬ್ಯಾಂಕ್ ಬಡ್ಡಿ ದರವನ್ನು ಕಡಿಮೆ ಮಾಡಿ ಅಗ್ಗದಲ್ಲಿ ಹಣ ದೊರೆಯುವಂತೆ ಮಾಡಿತು ಮತ್ತು ಮಾರುಕಟ್ಟೆಯಿಂದ ಬಾಂಡುಗಳನ್ನು ಕೊಂಡು ಆರ್ಥಿಕತೆಯಲ್ಲಿ ಹೆಚ್ಚು ಹಣ ಇರುವಂತೆ ನೋಡಿಕೊಂಡಿತು. ಅದರ ಪರಿಣಾಮ ಎರಡು ರೀತಿಯಲ್ಲಾಯಿತು. ಹೂಡಿಕೆದಾರರು ಹೆಚ್ಚಿನ ಬಡ್ಡಿ ದರ ಸಿಗುತ್ತಿದ್ದ ಪ್ರದೇಶಗಳಲ್ಲಿ ಬಂಡವಾಳ ಹೂಡತೊಡಗಿದರು. ಆಗ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬಂಡವಾಳ ಹರಿದುಬಂತು. ಕೆಲವು ಅರ್ಥಶಾಸ್ತ್ರಜ್ಞರು ಹೇಳುವಂತೆ, ಇನ್ನೊಂದು ರೀತಿಯ ಪರಿಣಾಮವೂ ಆಗಿರಬಹುದು. ಅಮೆರಿಕದಲ್ಲಿ ಬಡ್ಡಿ ದರ ತುಂಬಾ ಕಡಿಮೆ ಇದ್ದುದರಿಂದ ಅಲ್ಲಿಂದ ಅಗ್ಗದಲ್ಲಿ ಬಂಡವಾಳ ಪಡೆದುಕೊಂಡು ಭಾರತದಂತಹ ರಾಷ್ಟ್ರಗಳಲ್ಲಿ ಹೂಡಿ ಲಾಭ ಮಾಡಿಕೊಳ್ಳುವ ಪ್ರಯತ್ನವೂ ನಡೆದಿರಬಹುದು. ಒಟ್ಟಿನಲ್ಲಿ, ಭಾರತದಂತಹ ದೇಶಗಳಿಗೆ ವಿದೇಶಿ ಹಣ ಸಾಕಷ್ಟು ಹರಿದುಬಂತು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಜಗತ್ತಿನಾದ್ಯಂತ ಹಣದುಬ್ಬರ ತೀವ್ರಗೊಳ್ಳುತ್ತಿದೆ. ಅಮೆರಿಕದಲ್ಲಿ ಹಣದುಬ್ಬರ ಶೇಕಡ 8.6 ಮುಟ್ಟಿತ್ತು. ಅದು 41 ವರ್ಷಗಳಲ್ಲೇ ದಾಖಲೆ. ಹಾಗಾಗಿ, ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ಅವರು ಬಡ್ಡಿದರವನ್ನು ಹೆಚ್ಚಿಸುವುದು ಅನಿವಾರ್ಯವಾಯಿತು. ಜೊತೆಗೆ, ಬಾಂಡ್‍ಗಳನ್ನು ಕೊಳ್ಳುವುದಕ್ಕೂ ಕಡಿವಾಣ ಹಾಕಬೇಕಾಯಿತು. ಅಗ್ಗದಲ್ಲಿ ಬಂಡವಾಳ ಸಿಗುವುದು ನಿಂತಿತು. ಹಾಗಾಗಿ, ಅಲ್ಲಿಂದ ಹಣ ಪಡೆದು ಬೇರೆ ದೇಶಗಳಲ್ಲಿ ಹೂಡುವ ಪ್ರವೃತ್ತಿ ನಿಂತಿದೆ. ಜೊತೆಗೆ, ಅಲ್ಲಿ ಬಡ್ಡಿ ದರ ಹೆಚ್ಚಿರುವುದರಿಂದ ತಮ್ಮಲ್ಲಿರುವ ಬಂಡವಾಳವನ್ನು ಅಲ್ಲೇ ಹೂಡಬಹುದು. ಹೂಡಿಕೆದಾರರು ನಮ್ಮಂತಹ ದೇಶಗಳಿಂದ ಬಂಡವಾಳ ಹಿಂತೆಗೆದುಕೊಂಡು ಅಮೆರಿಕದಲ್ಲೇ ಹೂಡುವುದಕ್ಕೆ ಪ್ರಾರಂಭಿಸಿದ್ದಾರೆ. ಭಾರತದಲ್ಲಿ ವಿದೇಶಿ ವಿನಿಮಯ ಸಂಗ್ರಹ ಕರಗುವುದಕ್ಕೆ ಪ್ರಾರಂಭವಾಗಿದೆ. ಅದರಿಂದ ರೂಪಾಯಿಯ ಮೇಲೆ ಒತ್ತಡ ಹೆಚ್ಚಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ. ವಿದೇಶಿ ಬಂಡವಾಳದ ಹೊರ ಹರಿವನ್ನು ತಪ್ಪಿಸುವುದಕ್ಕೆ ಮತ್ತು ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ರೆಪೊ ದರವನ್ನು ಆರ್‌ಬಿಐ ಹೆಚ್ಚಿಸುತ್ತಿದೆ.

Image

ಬಂಡವಾಳದ ಹೊರಹರಿವಿನಿಂದ ಇನ್ನೂ ಎರಡು ಪರಿಣಾಮಗಳಾಗಬಹುದು. ಮೊದಲನೆದಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದ ಡಾಲರ್ ಪ್ರಮಾಣ ಕಮ್ಮಿಯಾಗುತ್ತದೆ. ಇದರಿಂದ ವ್ಯಾಪಾರಿ ಮತ್ತು ಚಾಲ್ತಿ ಖಾತೆಯ ಕೊರತೆಯ ಮೇಲೆ ಒತ್ತಡ ಹೆಚ್ಚುತ್ತದೆ. ಎರಡನೆಯದಾಗಿ ವಿದೇಶಿ ವಿನಿಮಯದ ಪ್ರಮಾಣ ಕಡಿಮೆಯಾಗುವುದರಿಂದ ರೂಪಾಯಿ ಮೌಲ್ಯ ಕುಸಿತವನ್ನು ತಡೆಯುವುದಕ್ಕೆ ಆರ್‍ಬಿಐಗೆ ಕ್ರಮ ತೆಗೆದುಕೊಳ್ಳಲು ಉತ್ಸಾಹ ಕಡಿಮೆಯಾಗುತ್ತದೆ. ಯಾಕೆಂದರೆ ರೂಪಾಯಿ ಬೇಡಿಕೆಯನ್ನು ಹೆಚ್ಚಿಸುವುದಕ್ಕೆ ಡಾಲರನ್ನು ಮಾರುವುದು ರೂಢಿಗತ ಕ್ರಮ. ಹಾಗೆ ಮಾಡಿದರೆ, ವಿದೇಶಿ ವಿನಿಮಯ ಇನ್ನಷ್ಟು ಕರಗುತ್ತದೆ. ಹಾಗಾಗಿ, 2022ರಲ್ಲಿ ಒಂದು ಸಲ ಆರ್‌ಬಿಐ ಡಾಲರನ್ನು ಮಾರಿ ರೂಪಾಯಿ ಬೆಂಬಲಿಸಿದ್ದನ್ನು ಬಿಟ್ಟರೆ, ಸರ್ಕಾರ ಅಂತಹ ಪ್ರಯತ್ನ ಮಾಡಿದಂತಿಲ್ಲ. ಬಹುಶಃ ಅದೂ ಕೂಡ ನಮ್ಮ ಆರ್ಥಿಕತೆ ರೂಪಾಯಿಯನ್ನು ಬೆಂಬಲಿಸುವ ಸ್ಥಿತಿಯಲ್ಲಿ ಇಲ್ಲ ಎಂಬ ಸಂದೇಶ ರವಾನೆಯಾಗಬಾರದು ಅನ್ನುವ ಕಾರಣಕ್ಕೆ ಇದ್ದಿರಬಹುದು ಅನ್ನುವ ಅನುಮಾನ ವ್ಯಕ್ತವಾಗಿದೆ.

ಬಂಡವಾಳದ ಹೊರಹರಿವನ್ನು ತಡೆಯುವುದಕ್ಕೆ ನಮ್ಮಲ್ಲಿ ಯಾವುದೇ ಉಪಾಯಗಳಿಲ್ಲ. ಹಾಗೆಯೇ, ಆರ್ಥಿಕ ಸ್ಥಗಿತತೆಯನ್ನು ತಡೆಯುವುದಕ್ಕೂ ಯಾವುದೇ ಕ್ರಮಗಳು ಮುಂದುವರಿದ ರಾಷ್ಟ್ರಗಳ ಕೈಯಲ್ಲಿ ಇಲ್ಲ. ಹಾಗಾಗಿ, ರೂಪಾಯಿ ಮೌಲ್ಯದ ಕುಸಿತ ತಾತ್ಕಾಲಿಕ ಸಮಸ್ಯೆಯಲ್ಲ. ಅದು ನಿಜವಾಗಿ ಕಾಳಜಿಯ ವಿಷಯ. ವ್ಯಾಪಾರದ ಕೊರತೆ ಇನ್ನೂ ಹಲವು ಕಾಲ ಕಾಡುತ್ತಿರುತ್ತದೆ. ವಿದೇಶಿ ಬಂಡವಾಳದ ಒಳಹರಿವು ಕಡಿಮೆಯಾಗಿರುವುದರಿಂದ ರೂಪಾಯಿಯ ಮೇಲೆ ಒತ್ತಡ ಹೆಚ್ಚುತ್ತಲೇ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೂಪಾಯಿ ಮೌಲ್ಯ ಕುಸಿಯುವ ಪ್ರಕ್ರಿಯೆ ಇನ್ನೂ ಹಲವು ಕಾಲ ಮುಂದುವರಿಯಬಹುದು. ಇದನ್ನು ಒಂದು ವ್ಯಾಪಕವಾದ ಆರ್ಥಿಕ ಬಿಕ್ಕಟ್ಟಿನ ಲಕ್ಷಣವನ್ನಾಗಿ ನೋಡುವುದು ಒಳ್ಳೆಯದು.

ನಿಮಗೆ ಏನು ಅನ್ನಿಸ್ತು?
3 ವೋಟ್