ಅನುದಿನ ಚರಿತೆ | ಕಾಂಗ್ರೆಸ್‌ನ 'ಭಾರತ ಐಕ್ಯತಾ ಯಾತ್ರೆ' - ಕೆಲವು ಪ್ರಶ್ನೆಗಳು

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ 'ಭಾರತ ಐಕ್ಯತಾ ಯಾತ್ರೆ' ಈಗಾಗಲೇ ಒಂದು ಸಾವಿರ ಕಿಮೀ ದಾಟಿದೆ. ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿರುವ ಈ ಯಾತ್ರೆ ಬಗೆಗಿನ ಕೆಲವು ಮೌಲ್ಯಯುತ ಪ್ರಶ್ನೆಗಳು ಇಲ್ಲಿವೆ. ಐಕ್ಯತಾ ಯಾತ್ರೆ ಕುರಿತು ಇನ್ನಷ್ಟು ಸ್ಪಷ್ಟತೆ ತರುವ ಮತ್ತು ಉದ್ದೇಶಕ್ಕೆ ಸಾಣೆ ಹಿಡಿಯುವ ಕೆಲಸವನ್ನು ಈ ಪ್ರಶ್ನೆಗಳು ಮಾಡಲಿವೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಐಕ್ಯತಾ ಯಾತ್ರೆಯನ್ನು ಕೈಗೊಂಡಿದ್ದಾರೆ. ಇದೊಂದು ಮಹತ್ವದ ನಡೆಯೆಂದು ಬಹುತೇಕ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳು ಒಪ್ಪಿಕೊಂಡು, ಈ ಯಾತ್ರೆಯೊಂದಿಗೆ ತಾವೂ ಸಹಯಾತ್ರಿಕರಾಗಿ ಸೇರಿಕೊಂಡಿವೆ. ಕರ್ನಾಟಕದ ಕೆಲವು ಚಿಂತಕರು, ಸಂಶೋಧಕರು ಹಾಗೂ ಸಾಹಿತಿಗಳು ಕೂಡ ಈ ಯಾತ್ರೆಗೆ ತಮ್ಮ ಬೆಂಬಲವನ್ನು ಸೂಚಿಸಿರುವುದಷ್ಟೇ ಅಲ್ಲದೆ, ಈ ಯಾತ್ರೆಯಲ್ಲಿ ತಾವುಗಳು ಪಾಲ್ಗೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇರಲಿ, ಇದು ಅವರವರ ಬದ್ಧತೆ ಮತ್ತು ಹಕ್ಕು ಎಂದು ಹೇಳಲಾಗುತ್ತದೆ. ಇಂತಹ ಬದ್ಧತೆ ಮತ್ತು ಹಕ್ಕಿನ ಪ್ರಶ್ನೆಗಳು ಮುನ್ನೆಲೆಗೆ ಬರುವುದು ಬಹುತೇಕವಾಗಿ ಸಾಮಾಜಿಕ ಮತ್ತು ರಾಜಕೀಯವಾಗಿ ಏರ್ಪಡುವ ಅಪಚಾರಗಳನ್ನು ಪ್ರಶ್ನೆ ಮಾಡುವುದಕ್ಕೂ ಮತ್ತು ಅವುಗಳನ್ನು ಸರಿಪಡಿಸುವುದಕ್ಕೂ ಸಂಬಂಧಿಸಿರುತ್ತವೆ. ವ್ಯಕ್ತಿಗತವಾದ ನಿಲುವುಗಳು ಕೂಡ ಇಲ್ಲಿ ಮುಖ್ಯವೇ ಆಗಿರುತ್ತವೆ. ಆದರೆ, ಈ ವ್ಯಕ್ತಿಗತ ನಿಲುವುಗಳಿಗಿಂತ ಸಮೂಹಗಳು ಎದುರಿಸುತ್ತಿರುವ ಬಿಕ್ಕಟ್ಟುಗಳು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತವೆ ಅನ್ನುವುದು ಗಮನಾರ್ಹ. ಅಂದರೆ, ಸಮೂಹಗಳ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆಗಳು ತಲೆದೋರಿದಾಗ ನಾವು ಅನುಸರಿಸುವ ತತ್ವಗಳು, ಪಾಲಿಸುವ ಚಟುವಟಿಕೆಗಳು ಹಾಗೂ ಕೈಗೊಳ್ಳುವ ನಿಲುವುಗಳು ಕೇವಲ ವೈಯಕ್ತಿಕವಾದ ಹಿತಾಸಕ್ತಿಯ ಮೇಲೆ ನಿಂತಿರುವುದಿಲ್ಲ; ಬದಲಾಗಿ, ಸಮೂಹಗಳ ಏಳಿಗೆಯನ್ನು ಅವಲಂಬಿಸಿರುತ್ತವೆ. ಸಮೂಹಗಳ ಪ್ರಶ್ನೆಗಳೇ ಮುಖ್ಯವೆಂದು ನಾವು ಭಾವಿಸುವುದಾದರೆ, ಯಾವುದನ್ನು ಹೇಗೆ ಪ್ರತಿರೋಧಿಸಬೇಕು? ಯಾರಿಗಾಗಿ ಈ ಪ್ರತಿರೋಧ ರೂಪುಗೊಳ್ಳಬೇಕು? ಯಾರ ಪ್ರಾತಿನಿಧ್ಯದ ಪ್ರಶ್ನೆಗಳು ಇಲ್ಲಿ ಮುಖ್ಯವಾಗಬೇಕು? ಹಾಗೂ ಯಾರೆಲ್ಲರ ಹಿತಾಸಕ್ತಿಗೆ ಪೂರಕವಾಗಿ ನಮ್ಮ ನಡೆಗಳು ಹೊರಹೊಮ್ಮಬೇಕು... ಎಂಬೆಲ್ಲ ಪ್ರಶ್ನೆಗಳನ್ನು ಕೇಳುವ ಜರೂರಿದೆ. ಏಕೆಂದರೆ, "ಈ ಯಾತ್ರೆಯು ರಾಜಕೀಯ ಉದ್ದೇಶಗಳನ್ನು ಈಡೇರಿಸುವುದಕ್ಕಿಂತ ಸಾಮಾಜಿಕ ಸಾಮರಸ್ಯವನ್ನು ನೆಲೆಗೊಳಿಸುವುದು ಮತ್ತು ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯುವುದಾಗಿದೆ," ಎಂದು ಈ ಯಾತ್ರೆಯ ನೇತಾರರು ಹೇಳುತ್ತಿದ್ದಾರೆ.

Eedina App

ಇವತ್ತಿನ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಸ್ವರೂಪವನ್ನು ಕೂಲಂಕಷವಾಗಿ ಪರಿಶೀಲಿಸಿ ನೋಡಿದರೆ, ಇವುಗಳ ಬೇರುಗಳು ಚರಿತ್ರೆಯಲ್ಲಿ ಸಿಗುತ್ತವೆ. ಅಂದರೆ ಧರ್ಮ, ಜಾತಿ ಹಾಗೂ ಅಸ್ಪೃಶ್ಯತೆಯ ಪ್ರಶ್ನೆಗಳು ಕೇವಲ ಇವತ್ತು ಮೈದೋರಿದಂತಹವುಗಳುಲ್ಲ. ಶತಶತಮಾನಗಳಿಂದ ಈ ಪ್ರಶ್ನೆಗಳು ನಮ್ಮ ಸಮೂಹಗಳನ್ನು ಬಾಧಿಸುತ್ತ ಬಂದಿರುತ್ತವೆ. ಇದರಿಂದ ಉಂಟಾದ ಗಾಯಗಳನ್ನು ಮತ್ತಷ್ಟು ಕೆರೆಯುವ ಕೆಲಸ ಸ್ವತಂತ್ರ ಭಾರತದಲ್ಲಿಯೂ ಮುಂದುವರಿಯುತ್ತ ಬಂದಿದ್ದರಿಂದ ಈ ಗಾಯಗಳು ಬರೀ ಗಾಯಗಳಾಗಿ ಉಳಿದಿಲ್ಲ. ಇವುಗಳು ದೊಡ್ಡ-ದೊಡ್ಡ ರೋಗದ ಸ್ವರೂಪ ಪಡೆದುಕೊಂಡಿವೆ. ಈ ರೋಗಕ್ಕೆ ಬಲಿಯಾಗುತ್ತಿರುವವರು ದಲಿತರು, ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ಸಮುದಾಯಗಳು. ಈ ಬಲಿಪಶುತನದ ರೂಪಗಳು, ಇಂದು ತೀವ್ರಗೊಂಡಿರುವ ಭ್ರಷ್ಟಾಚಾರ, ನಿರುದ್ಯೋಗ ಹಾಗೂ ದೈನಂದಿನ ಜೀವನಾವಶ್ಯಕ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿರುವ ಪ್ರಕ್ರಿಯೆಯಲ್ಲಿ ನಿಚ್ಚಳವಾಗಿ ಕಾಣುತ್ತಿವೆ. ಇಂತಹ ಸವಾಲುಗಳನ್ನು ಎದುರಿಸುವ ಮತ್ತು ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಇರಾದೆಗೆ ಪೂರಕವಾಗಿ ಈ ಭಾರತ ಐಕ್ಯತಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂಬುದನ್ನು ಮತ್ತೆ-ಮತ್ತೆ ಈ ಯಾತ್ರೆಯ ರೂವಾರಿಗಳು ಹೇಳುತ್ತಿದ್ದಾರೆ. ಇದುವೇ ಈ ಯಾತ್ರೆಯ ಉದ್ದೇಶವಾಗಿದ್ದರೆ, ಈ ಉದ್ದೇಶಗಳನ್ನು ಈಡೇರಿಸುವ ಬಗೆಗಳು ಯಾವವು? ರಾಜಕೀಯ ಅಧಿಕಾರವನ್ನು ಸಾಧಿಸುವ ಮೂಲಕ ಇದನ್ನು ಈಡೇರಿಸಲಾಗುತ್ತದೆಯೇ? ಅಥವಾ ಸಾಮಾಜಿಕ ಸಾಮರಸ್ಯವನ್ನು ನೆಲೆಗೊಳಿಸುವ ಮುಖಾಂತರ ಪ್ರಜಾಸತ್ತಾತ್ಮಕ ವಾತಾವರಣವನ್ನು ಸೃಷ್ಟಿಸಲಾಗುತ್ತದೆಯೋ? ಈ ಎರಡೂ ಅವಕಾಶಗಳು ಈ ಹಿಂದೆಯೂ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದ್ದವು, ಈ ಕೆಲಸಗಳನ್ನು ಆವಾಗ ಮಾಡುವುದಕ್ಕೆ ಸಾಧ್ಯವಾಗಲಿಲ್ಲವೇ? ಅಥವಾ ಆಗ ಇಂತಹದೊಂದು ಇಚ್ಛಾಶಕ್ತಿ ಇರಲಿಲ್ಲವೇ? ಏಕೆಂದರೆ, ಬಂಡವಾಳಶಾಹಿಗಳ ಜೊತೆಗಿನ ನಂಟಸ್ತಿಕೆ, ಸಾಮಾಜಿಕ ತಾರತಮ್ಯ, ಧಾರ್ಮಿಕ ಅಸಹನೆ ಮೊದಲಾದವುಗಳು ಇವತ್ತು ಮತ್ತಷ್ಟು ಹಿಗ್ಗಿವೆ ಮತ್ತು ಉಬ್ಬಿಕೊಂಡಿವೆ. ಪಕ್ಷಗಳು ಬದಲಾದಂತೆ ಅವುಗಳು ತಮ್ಮ ಸೈದ್ಧಾಂತಿಕ ಪರಿಪ್ರೇಕ್ಷ್ಯವನ್ನೂ ಬದಲಾಯಿಸಿಕೊಳ್ಳುತ್ತವೆ. ತಮ್ಮ ಅಜೆಂಡಾಗಳನ್ನು ಕಾರ್ಯರೂಪಕ್ಕೆ ತರಲು ಇಡೀ ಸಮೂಹಗಳನ್ನೇ ಬಲಿಕೊಡುವ ಕ್ರಿಯೆಗಳು ನಿರಂತರವಾಗಿ ಮುಂದುವರಿಯುತ್ತವೆ. ಹಾಗೆಯೇ ಸಮೂಹಗಳ ಬಲಿಪಶುತನ ಮತ್ತಷ್ಟು ತೀವ್ರಗೊಳ್ಳುತ್ತಲೇ ಹೋಗುತ್ತದೆ.

ಈ ಲೇಖನ ಓದಿದ್ದೀರಾ?: ಗಾಯ ಗಾರುಡಿ | 'ಪ್ರೀತ್ಸೆ ಪ್ರೀತ್ಸೆ' ಎಂಬ ಚಿತ್ರಗೀತೆಯೂ 'ಜನಗಣಮನ' ಎಂಬ ರಾಷ್ಟ್ರಗೀತೆಯೂ

AV Eye Hospital ad

ಈ ಯಾತ್ರೆಯನ್ನು ಕಾಂಗ್ರೆಸ್ ಪಕ್ಷದಿಂದ ಉಂಟಾಗಿರುವ ಸಾಮಾಜಿಕ, ರಾಜಕೀಯ ಮಹತ್ವದ ಹಾಗೂ ಐತಿಹಾಸಿಕ ಬೆಳವಣಿಗೆಯನ್ನಾಗಿ ನೋಡುವುದಷ್ಟೇ ಅಲ್ಲದೆ (ಹಾಗಂತ ತೀರ್ಮಾನಿಸಲಾಗಿದೆ), ಫಲಿತಗಳನ್ನು ತೀರ್ಮಾನಿಸಿ ಹೋರಾಟಗಳನ್ನು ಕೈಗೊಳ್ಳುವುದಕ್ಕಿಂತ, ಸಮೂಹಗಳ ಏಳಿಗೆಯನ್ನೇ ಪ್ರಧಾನ ಗುರಿಯನ್ನಾಗಿರಿಸಿಕೊಂಡು ಹೋರಾಟ ಅಥವಾ ಚಳವಳಿಗಳನ್ನು ಹಮ್ಮಿಕೊಂಡರೆ ಇದರ ಪ್ರಭಾವ ಮತ್ತು ಪರಿಣಾಮಗಳು ಬೇರೆ ರೀತಿಯಲ್ಲಿರುತ್ತವೆ. ಅಂದರೆ ಗಾಂಧಿಯವರು ದಂಡಿಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹವನ್ನು ಹಾಗೂ ಅಂಬೇಡ್ಕರ್ ಅವರ ಮುಂದಾಳುತನದಲ್ಲಿ ನಡೆದ ದೇಗುಲ ಪ್ರವೇಶ ಮತ್ತು ಮಹಡ್ ಕೆರೆಯ ಸತ್ಯಾಗ್ರಹಗಳನ್ನು ಗಮನಿಸಬಹುದು. ಗಾಂಧಿ ಮತ್ತು ಅಂಬೇಡ್ಕರ್ ಅವರ ಹೋರಾಟಗಳಲ್ಲಿ ರಾಜಕಾರಣವಿತ್ತು. ಅದು 'ಸಾಂಸ್ಕೃತಿಕ ರಾಜಕಾರಣ'ಕ್ಕೆ ಸಂಬಂಧಿಸಿತ್ತೇ ಹೊರತು, ಕೇವಲ ರಾಜಕೀಯ ಅಧಿಕಾರವನ್ನು ಪಡೆಯುವ ರಾಜಕಾರಣಕ್ಕೆ ಅದು ಸಂಬಂಧಿಸಿರಲಿಲ್ಲ. ಈ ಎರಡೂ ಹೋರಾಟಗಳಲ್ಲಿ ಜನರ ಬದುಕು ಮತ್ತು ಅಸ್ತಿತ್ವದ ಪ್ರಶ್ನೆಗಳು ಮುಖ್ಯವಾಗಿದ್ದವು. ಪ್ರಜಾಸತ್ತಾತ್ಮಕ ಪ್ರಜ್ಞೆಯನ್ನು ಸಮೂಹಗಳಲ್ಲಿ ಒಡಮೂಡಿಸುವ ಇರಾದೆಯೂ ಈ ಸತ್ಯಾಗ್ರಹಗಳ ಹಿಂದಿನ ಕಾಳಜಿಯಾಗಿತ್ತು ಅನ್ನುವುದು ವಿಶೇಷ. ಜೊತೆಗೆ, ಸಾಮಾಜಿಕ ಸಂವಾದವನ್ನು ನೆಲೆಗೊಳಿಸುವ ಮಹತ್ವದ ಕೈಂಕರ್ಯವನ್ನೂ ಈ ಮಹನೀಯರು ಹೊಂದಿದ್ದರು.

ಸಂವಾದವಿಲ್ಲದೆ ಶಾಂತಿ ನೆಲಸದು. ಪ್ರಜಾಪ್ರಭುತ್ವದ ತಾತ್ಪರ್ಯವೇ ಸಂವಾದ ಆಗಿರುತ್ತದೆ. ಎಲ್ಲಿ ಸಂವಾದಕ್ಕೆ ಅವಕಾಶವಿರುತ್ತದೆಯೋ ಅಲ್ಲೆಲ್ಲ ಸಹಜವಾಗಿಯೇ ಸಹನೆ, ಸಹಬಾಳ್ವೆಯ ಭಾವನೆ ಹಾಗೂ ಶಾಂತಿ ಪ್ರೇರಿತ ವಾತಾವರಣವೂ ನೆಲೆಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ವಾಸ್ತವದಲ್ಲಿ ಪ್ರಜಾಪ್ರಭುತ್ವವನ್ನು ಅನುಸರಿಸುವುದೆಂದರೆ, ನಮ್ಮೆಲ್ಲ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಭಿನ್ನತೆಗಳ ಹೊರತಾಗಿಯೂ ನಾವು ಸೌರ್ಹಾದತೆಯಿಂದ ಕೂಡಿ ಬಾಳುವುದು ಮತ್ತು ನಮ್ಮೆಲ್ಲ ಭಿನ್ನತೆಗಳನ್ನು ಪ್ರತ್ಯೇಕತೆಯ ಲಕ್ಷಣಗಳನ್ನಾಗಿ ನೋಡದೆ, ನಮ್ಮ ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆಗಳನ್ನಾಗಿ ಪರಿಭಾವಿಸುವ ಮನಸ್ಥಿತಿಯನ್ನು ನೆಲೆಗೊಳಿಸುವುದೇ ಆಗಿರುತ್ತದೆ. ಇಂತಹ ಎಲ್ಲ ಬಗೆಯ ವೈವಿಧ್ಯತೆಯನ್ನು ಕೇವಲ ಜಾತಿ, ಧರ್ಮದ ಹಿನ್ನಲೆಯಲ್ಲಿ ಮಾತ್ರ ಗ್ರಹಿಸದೆ, ಅವುಗಳನ್ನು ಜ್ಞಾನಮೀಮಾಂಸೆಯ ಇಲ್ಲವೇ ತಿಳಿವಿನ ವಿಭಿನ್ನ ವಿನ್ಯಾಸಗಳು ಎಂದು ಪರಿಗಣಿಸಬೇಕಾದ ಅಗತ್ಯವಿರುತ್ತದೆ.

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ಅಲೆಮಾರಿ ಸಮುದಾಯಗಳನ್ನು ಒಂದುಗೂಡಿಸುವ ಕೊಂಡಿ 'ಹದ್ ಅನಹದ್'

ಯಾವ ನಾಡಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಭಾಷಿಕ ವೈವಿಧ್ಯತೆಯನ್ನು ಬದುಕಿನ ಸೌಂದರ್ಯವನ್ನಾಗಿ ನೋಡುವ ದೃಷ್ಟಿಕೋನ ಇರುವುದಿಲ್ಲವೋ, ಅಲ್ಲೆಲ್ಲ ಕಡೆಯೂ ಪ್ರಜಾಪ್ರಭುತ್ವವನ್ನೇ ನಮ್ಮ ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತದ ತಳಹದಿಯನ್ನಾಗಿ ಅನುಸರಿಸಿದಾಗಲೂ, ಜಾತಿದ್ವೇಷ, ಧಾರ್ಮಿಕ ಶತ್ರುತ್ವ, ಸಾಮಾಜಿಕ ಅಸಹನೆ, ಲಿಂಗ ತಾರತಮ್ಯ ಹಾಗೂ ಸಾಂಸ್ಕೃತಿಕ ಭೇದವು ಯಥೇಚ್ಛವಾಗಿ ಮೈದೋರುತ್ತವೆ. ಪರಿಣಾಮವಾಗಿ ಕೋಮುದ್ವೇಷ, ಕೋಮುವಾದ ಹಾಗೂ ಜಾತೀಯತೆಯ ಭಾವ ತೀವ್ರಗೊಳ್ಳುತ್ತದೆ.

ಭಾರತದಲ್ಲಿ ಕೋಮುದ್ವೇಷ, ಗಲಭೆ ಹಾಗೂ ಸವರ್ಣೀಯರು ದಲಿತರ ಜೊತೆಗೆ ಹೀನಾಯವಾಗಿ ನಡೆದುಕೊಳ್ಳುವುದು ಅತ್ಯಂತ ಸಹಜ ಪ್ರಕ್ರಿಯೆಯಾಗಿದೆ. ಈ ಪರಿಸ್ಥಿತಿಯ ತೀವ್ರತೆಯನ್ನು ಗ್ರಹಿಸಿಯೇ, "ವಿರೋಧಾಭಾಸದಿಂದ ಕೂಡಿದ ಜಗತ್ತಿಗೆ ನಾವು ತೆರೆದುಕೊಳ್ಳುತ್ತಿದ್ದೇವೆ," ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸೆಂಬ್ಲಿ ಡಿಬೇಟಿನ ತಮ್ಮ ಕೊನೆಯ ಭಾಷಣದಲ್ಲಿ ಹೇಳಿದ್ದು. ಅಷ್ಟೇ ಅಲ್ಲದೆ, "ನಮ್ಮಲ್ಲಿ ಬೇರೂರಿದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ವೈರುಧ್ಯ ಅಥವಾ ವಿರೋಧಾಭಾಸಗಳನ್ನು ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ಮೀರುವುದಕ್ಕೆ ಸಾಧ್ಯವಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವು ದತ್ತವಾಗಬೇಕು," ಎನ್ನುವ ಅವರ ನಿಲುವಿನ ಕಾಳಜಿ ಇವತ್ತು ಮತ್ತಷ್ಟು ಸ್ಪಷ್ಟವಾಗಿದೆ. ಈ ಸ್ಪಷ್ಟತೆಯನ್ನು ಮನಗಾಣದ ಯಾವುದೇ ರಾಜಕೀಯ ನಾಯಕರೂ ಭಾರತವನ್ನು ಶಾಂತಿ, ಸಹನೆ ಹಾಗೂ ಸಹಬಾಳ್ವೆಯಂತಹ ಮೌಲ್ಯಗಳಿಂದ ಕೂಡಿದ ಭಾರತವನ್ನಾಗಿ (ಮರು)ರೂಪಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರು ತಮ್ಮ ಗಮನವನ್ನು ಈ ನಿಲುವುಗಳ ಕಡೆ ಹೆಚ್ಚು ಹರಿಸಿದಷ್ಟೂ ಭಾರತಕ್ಕೆ ಒಳ್ಳೆಯದು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app