ಅಪ್ರಮೇಯ | ರೂಹೀಶನ ಪೀರಿಯೆಡ್‌ನ ಮೊದಲ ದಿನ ಮತ್ತು ತಿತಿ ಊಟ (ಎಲ್ಲರ ಕನ್ನಡ*)

ಔನು ಅವತ್ತು ಹಾಕ್ಕೊಂಡಿದ್ ಬಟ್ಟೆ - ಒಂದ್ ಪ್ಯಾಂಟ್, ಹೆಂಗಸರ ಟಾಪ್... ಶರ್ಟೂ ಹಾಕ್ಬಿಟ್ರೆ ಇನ್ ಕೇಳ್ಳೇಬೇಡಿ... ಮೇಶ್ಟ್ರು ಓಡ್ಸಿಬಿಡ್ತಾರೆ. ಈ ವೇಶ ಸಾಲ್ದು ಅಂತ ಅದರ್ ಮೇಲೆ ಒಂದು ದುಪಟ್ಟ ಹಾಕ್ಕೊಂಡು, ಮೇಶ್ಟ್ರನ್ನ ಹಿಂದೆ ಕೂರಿಸ್ಕೊಂಡು ಸ್ಲೋ ಹೋಗಕ್ಕೆ ಶುರು ಮಾಡಿದ್ನಂತೆ. ಮೇಶ್ಟ್ರು ಹೇಳಿದ್ರಂತೆ, "ಏನ್ ಬಸ್ವನ್ ಹುಳು ಹೋದಂಗೆ ಹೋಗ್ತೀಯ? ಒಡ್ಸೋಡ್ಸು..."

ನಮ್ಮಲ್ಲಿ ತಿತಿ ಮಾಡುವಾಗ ಮಾಡುವಶ್ಟು ಇರುವ ಚಿಕ್ಕ ಉದ್ದಿನ ವಡೆ ಇಡೀ ಜಗತ್ತಿನಲ್ಲಿ ಇರೋದಿಲ್ಲ. ನಮ್ ಕಂಕು ತುಂಬಾ ಚೆನ್ನಾಗಿ ಹೇಳೋರು, "ಇವತ್ತು ಆಯಪ್ಪನ್ ತಿತಿ. ಉಳಿ ಸುತ್ತಿಗೆ ತಗೊಂಡ್ ಹೋಗ್ಬೇಕು - ಇಲ್ಲಾಂದ್ರೆ ವಡೆ ಒಡಿಯಕ್ಕಾಗಲ್ಲ," ಅಂತ. ನಾ ಸತ್ರೂ ಇದನ್ನ ಮರಿಯಲ್ಲ. ಯಾಕಂದ್ರೆ, ತಿತಿ ಮಾಡುವಾಗ ಬ್ರಾಮಣರ ಮನೇಲಿ ಏನೇ ಮಾಡಿದ್ರೂ ಆದಶ್ಟು ಕೆಡಿಸಿ, ಇಲ್ಲಾಂದ್ರೆ ಮಿನಿಯೇಚರ್ ಸೈಸಿನಲ್ಲಿ ಕಲ್ಲಿನಂತೆ ಮಾಡಿರುತ್ತಾರೆ. ಇದು ಬ್ರಾಮಣರ ಜಿಪುಣತನದ ಒಂದು ರೂಪ. ಆದ್ರೆ ಯಾರೂ ಒಪ್ಪಲ್ಲ.

Eedina App

ಅದೇನೇ ಆಗ್ಲಿ... ಹೀಗೆ ನಮ್ ರೂಹೀಶ, ಅದೇ ಆಯಪ್ಪ, ಹೆಣ್ಣಾಗಿ ಹುಟ್ಟಿ ಗಂಡ್ಸಾಗಿ ಬದಲಾದವನು. ಔನು ಒಂದ್ ಕತೆ ಹೇಳ್ತಿದ್ದ. ಔನು ಹುಡ್ಗಿ ಆಗಿದ್ದಾಗ ಅವರ್ ಸಂಗೀತ ಹೇಳಿಕೊಡತ್ತಿದ್ದ ಮೇಶ್ಟ್ರು ಹೇಳಿದ್ರಂತೆ, "ಮುಟ್ಟಾದ್ರೆ ಕ್ಲಾಸಿಗ್ ಬರ್ಬೇಡ," ಅಂತ. ಆದ್ರೆ ಔನು ಹೇಳ್ತಿದ್ದಾ... "ನಂಗೆ ಪೀರಿಯೆಡ್ಸ್ ಶುರು ಆಗಿ ನಿಮಿಶಗಳಲ್ಲಿ ಮೇಶ್ಟ್ರು ಫೋನ್… 'ಸಿದ್ದಿ... ಮಗೂ... ಬರ್ತೀಯ? ನನ್ನ ಮಾರ್ಕೆಟ್ಗೆ ಕರ್ಕೊಂಡು ಹೋಗು... ಸೊಪ್ ತಗೋಬೇಕು...' - ಅವರ ಮಡಿ ಹಾಳ್ಮಾಡ್ಬಾರ್ದೂ ಅಂತ ನಾನೆಶ್ಟು ಯೋಚನೆ ಮಾಡಿದ್ರೇನು, ಅವರು ಅದನ್ನು ಮೀರುವುದೇ ಜೀವನ ಅಂತ ಗೊತ್ತಾಗದೆ, ಪ್ರತೀ ಸರ್ತಿ ಹೀಗೇ ಏನಾದ್ರು ಕೆಲಸ ಹೇಳಿ ಕರಸ್ಕೊಂಡು, ಅವರ ಮಡಿಯನ್ನು ಅವ್ರೇ ಗಾಳಿಗೆ ತೂರಿಬಿಡ್ತಿದ್ರು."

ಈ ಲೇಖನ ಓದಿದ್ದೀರಾ?: ಅಪ್ರಮೇಯ | 'ಅಮ್ಮೋರೆ ನಮ್ಮನೆ ಪರ್ಕೆ ಚೆನ್ನಾಗೇ ಇದೆ - ದೊಡ್ಡಮ್ನೋರು ಹೊಸ್‍ದಾಗೆ ತರ್ಸಿದ್ದು'

AV Eye Hospital ad

ಎನಿವೇ... ಒಂದ್ ಸರಿ ಹೀಗೆ ಅವನಿಗೆ ಪೀರಿಯಡ್‌ನ ಮೊದಲ ದಿನ; ಬಯಂಕರ ಹೊಟ್ಟೆನೋವಲ್ಲಿ ವದ್ದಾಡ್ತಾ ಇದ್ನಂತೆ. ಆಗ ಅವರ ಮೇಶ್ಟ್ರು ಫೋನ್ ಮಾಡಿ, ಅದೆಂತದೋ ಆಚಾರ್ರ ತಂದೆಯವರ ದಿನವಂತೆ - ಇವನಿಗೆ ಅವರನ್ನು ಕರ್ಕೊಂಡು ಹೋಗಕ್ಕೆ ಆಜ್ನೆ ಇಟ್ರು. ಔನೋ ಮೇಶ್ಟ್ರು ಏನಾದ್ರು ಹೇಳಿದ್ರೆ ತಪ್ಪಸ್ತಾನೇ ಇರ್ಲಿಲ್ಲ. ಪೀರಿಯಡ್ಸಿನ ನೋವಿಟ್ಕೊಂಡೇ ಹೋದ್ನಂತೆ. ಔನದ್ಕೊಂಡಿದ್ದು, ಯಾರ್ದೋ ಮನೆಗೆ ಕರ್ಕೊಂಡು ಹೋಗ್ಬರಬೇಕು ಅಂತ. ಆಮೇಲ್ ಗೊತ್ತಾಯ್ತಂತೆ, ಅದ್ಯಾವ್ದೋ ಮಟಕ್ಕೆ ಹೋಗ್ಬೇಕು ಅಂತ. ಇವ್ನು ತನ್ನ ತಾನೇ ಬೈಕೊಂಡ್-ಬೈಕೊಂಡ್, "ಏನ್ ಕರ್ಮಪ್ಪಾ, ಮನೇಲ್ ವರ್ಶಕ್ಕೆ ನಡೆಯೋ ಆರು ತಿತಿನೇ ಎಸ್ಕೇಪ್ ಮಾಡೋ ಮಾಸ್ಟ್ರು ನಾನು; ಇದ್ಯಾವನೋ ಪರಿಚಯವಿಲ್ದ ಮೂದೇವಿ ತಿತಿಗೆ ಹೋಗ್ಬೇಕಂತೆ, ಅದೂ ಊಟಕ್ಕೆ... ನಂಗ್ ಡೈರೆಕ್ಟ್ ಮುಕ್ತಿ ಸಿಕ್ಬಿಡುತ್ತೆ..." ಅಂತ ಯೋಚ್ನೆ ಮಾಡ್ಕೊಂಡು, ಅವರ ಮೇಶ್ಟ್ರನ್ನ ಪಿಕಪ್ ಮಾಡ್ಕೊಂಡು ಆ ಮಟಕ್ಕೆ ಹೋದ್ನಂತೆ.

ಔನು ಅವತ್ತು ಹಾಕ್ಕೊಂಡಿದ್ ಬಟ್ಟೆ - ಒಂದ್ ಪ್ಯಾಂಟ್ ಮತ್ತೆ ಅದರ ಮೇಲೆ ಹೆಂಗಸರ ಟಾಪ್. ಶರ್ಟೂ ಹಾಕ್ಬಿಟ್ರೆ ಇನ್ ಕೇಳ್ಳೇಬೇಡಿ, ಔನ ಮೇಶ್ಟ್ರು ಓಡ್ಸಿಬಿಡ್ತಾರೆ. ಈ ವೇಶ ಸಾಲ್ದು ಅಂತ ಅದರ್ ಮೇಲೆ ಒಂದು ದುಪಟ್ಟ ಹಾಕ್ಕೊಂಡು, ಗಾಡಿ ಹಾರ್ಸಕೊಂಡು ಮೇಶ್ಟ್ರನ್ನ ಹಿಂದೆ ಕೂರಿಸ್ಕೊಂಡು ಸ್ವಲ್ಪ ಸ್ಲೋ ಆಗಿ ಹೋಗಕ್ಕೆ ಶುರು ಮಾಡಿದ್ನಂತೆ. ಆ ಮೇಶ್ಟ್ರು ಎಂತಾ ಮನ್ಶ ಅಂದ್ರೆ, ಇವ್ನಿಗೆ ಹೇಳಿದ್ರಂತೆ, "ಏಯ್ ಸಿದ್ದಿ, ಏನ್ ಬಸ್ವನ್ ಹುಳು ಹೋದಂಗೆ ಸ್ಲೋ ಆಗಿ ಹೋಗ್ತೀಯ? ಒಡ್ಸೋಡ್ಸು... ಬ್ರಾಮಣ್ರ ತಿತಿ ಊಟ ಚೆನ್ನಾಗಿರುತ್ತೆ, ಬೇಗ ಹೋಗಿ ತಿನ್ನೋಣ..." ಇವ್ನಿಗೆ ಒಂದ್ ಕಡೆ ನೋವು, ಇನ್ನೊಂದ್ ಕಡೆ ಆ ತಿತಿ ಊಟದ್ ವಿಶ್ಯ ಕೇಳಿ ವಾಕರಿಕೆ. ಪೀರಿಯೆಡ್‌ನ ಮೊದಲನೆ ದಿನ ಬೇರೆ, ಔನಿಗೆ ಆಗಾಗ ಪ್ಯಾಡ್ ಚೇಂಜ್ ಮಾಡಿಲ್ಲಾಂದ್ರೆ ತುಂಬಾ ವದ್ದಾಡ್ತಾನೆ.

ಅಯ್ಯೋ, ಔನಂತೂ ಪೀರಿಯಡ್ಸ್ ಸಮಯದಲ್ಲಿ ಹೆಂಗಿರ್ತಾನೆ ಅಂದ್ರೆ, ಕರೆಂಟು ಹೊಡ್ದ ಕಾಗೆ ಆಗಿರ್ತಾನೆ. ಔನೇಳ್ತಾನೆ... "ಅಲ್ಲೆಲ್ಲೋ ರಕ್ತ ಸುರಿಯಕ್ಕೆ ಇಡೀ ದೇಹನ ಯಾಕಿಂಗ್ ಸಾಯ್ಸುತ್ತೆ ಗೊತ್ತಿಲ್ಲ. ಈ ಹಾಳ್ ಗಂಡಸ್ರಗೂ ಪಿರಿಯಡ್ಸ್ ಬಂದಿದ್ರೆ ತುಂಬಾ ಚೆನ್ನಾಗಿರ್ತಿತ್ತು..." ಔನು ಈ ವಿಶ್ಯದಲ್ಲಿ, ಮಕ್ಳುಟ್ಸೋದ್ರಲ್ಲಿ ಎಲ್ಲಾ ತೀರಾ ಅಸಹನೆ ತೋರಿಸ್ತಿದ್ದ. ಎನಿವೇ, ಆ ಮಟದ ಹತ್ರ ಹೋಗಿ ಗಾಡಿ ನಿಲ್ಸಿದ. ಮೇಶ್ಟ್ರು ಗಾಡಿಯಿಂದ ಚೆನ್ನಾಗೇ ಇಳಿತಿದ್ರಂತೆ. ಅವರಿಗೆ ಆಗ 87 ವಯಸ್ಸು. ಅಲ್ಲಿ ಯಾರೋ ಆ ತಿತಿ ಮನೆಯವ್ರ ಸಂಬಂದಿಕ್ರಂತೆ, ಹಿಡ್ಕೊಳಕ್ಕೆ ಬಂದ್ರಂತೆ, ಆ ಮುದುಕ ಕೂಕ್ಕೊಂಡು, "ನಂಗಾಗುತ್ತೆ, ನೀವೇನೂ ಕೈಕೊಟ್ಟು ಸಹಾಯ ಮಾಡ್ಬೇಡಿ," ಹೇಳಿದ್ರಂತೆ. ಇವ್ನು ಗಾಡಿ ಪಾರ್ಕ್ ಮಾಡಿ ಅವ್ರ ಜೊತೆ ಕೈ ಹಿಡಿದೇ ನಡ್ಕೊಂಡು ಹೋದ್ನಂತೆ. ಔನ್ ಹೇಳ್ತಿದ್ದ... "ಆ ಮುದುಕ ಆ ವಯಸ್ಸಿನಲ್ಲೂ ಹಿಂಗೆ ಬ್ಯಾಕ್ ಸ್ಟ್ರೇಟಾಗಿ ಇಟ್ಕೊಂಡು ಕುಟುಕುಟೂಂತ ನಡ್ಕೊಂಡ್ ಒಡಾಡ್ತಿದ್ರು."

ಮತ್ತೊಬ್ಬ: "ಅಲ್ಲಾಣ್ಣಾ... ಹುಡ್ಗಾನೋ ಹುಡ್ಗಿನೋ ಗೊತ್ತಾಗ್ತ ಇಲ್ಲ, ಆ ಮುದ್ಕನ್ನ 'ಮೇಶ್ಟ್ರು ಮೇಶ್ಟ್ರು..." ಅಂತಾನೆ ಔರ್ಯಾರು?"

ಸೋನಣ್ಣ (ರೂಹೀಶನ ದೋಸ್ತ,): "ಅಯ್ಯೋ ಮರ್ತೆ. ಈ ರೂಹೀಶ ನನ್ ದೋಸ್ತ. ಹುಟ್ಟುವಾಗ ಹೆಣ್ಣಾಗಿದ್ದ. 47ನೇ ವಯಸ್ಸಿನಲ್ಲೀಗ ಆಪ್ರೇಸನ್ ಮಾಡ್ಕೊಂಡು ಹುಡ್ಗ ಆಗಿದ್ದಾದನೆ. ಔನು ಈ ಹಿಜ್ರಗಳು, ದಂದ ಮಾಡೋರು, ಔನ್ತರನೇ ಹೆಣ್ಣಾಗಿ ಹುಟ್ಟಿ ಗಂಡ್ಸಾದರ ಜೊತೆ ಕೆಲ್ಸ ಮಾಡ್ತಾನೆ. ಔನು ಮೊದಲು ಹೆಣ್ಣಾಗಿದ್ದಾಗ ದೊಡ್ ಸಂಗೀತ, ಅಂದ್ರೆ, ಸಾಸ್ತರೀಯ ಸಂಗೀತ ಹಾಡ್ತಿದ್ದ. ಈಗ್ಲೂ ಹಾಡ್ತಾನೆ. ಆ ಸಂಗೀತ ಔನಿಗೆ ಹೇಳ್ಕೊಟ್ಟಿದ್ದ ಮೊದಲ ಗುರು ಈ ಮುದುಕ. ಈಯಪ್ಪ 90 ವರ್ಶ ಬದ್ಕಿದ್ರಂತೆ, ಆಗ್ಲೂ ಹಾಡ್ತಿದ್ರಂತೆ..."

ಈ ಲೇಖನ ಓದಿದ್ದೀರಾ?: ಅಪ್ರಮೇಯ | ಹೌದು... ನಾನು ನನ್ನಿಷ್ಟದಂತೆ ಬದುಕುತ್ತ ಒಳ್ಳೆಯ ನರಕದಲ್ಲಿದ್ದೇನೆ!

ಮತ್ತೊಬ್ಬ: "ಮುಂದ್ವರ್ಸಣ್ಣ..."

ಇಬ್ರೂ ಒಳಗ್ ಹೋದ್ರಂತೆ. ಅವ್ರನ್ನು ಕಂಡ್ಕೂಡ್ಲೇ ಆ ತಿತಿ ಮಾಡ್ಸೋ ಮನೇವ್ರು ಆ ಮುದುಕನ್ನ ಮತ್ತೆ ಇವ್ನನ್ನ ನೇರ ಊಟದೆಲೆಗಳ ಮುಂದೆ ಕೂರ್ಸಿದ್ರಂತೆ. ಇವ್ನೋ ಮೊದ್ಲೇ ತಾನು ಹೆಣ್ಣಲ್ಲ, ಗಂಡ್ಸು ಅಂತ ಹೇಳ್ತಿದ್ದವ, ಸೀದಾ ಹೋಗಿ ಔನ ಗುರು ಪಕ್ಕ ಕೂತ್ನಂತೆ. ಸೊಲ್ಪೊತ್ತಾದ ನಂತರ ಯಾವನೋ ಜುಟ್ಟಿರೋನು ಮೈಬಿಟ್ಕೊಂಡು ಕಚ್ಚೆ ಪಂಚೆ ಹಾಕ್ಕೊಂಡು ಬಂದು ಇವ್ನ ಮೇಲೆ ಗದರಿದ್ನಂತೆ, "ಏಯ್, ಯಾರ್ನೀನು? ಊಟ ಹಾಕ್ತಾರೆ ಅಂದ್ರೆ ಎಲ್ ಬೇಕಾದ್ರೂ ಬಂದ್ ಕೂತ್ಬಿಡ್ತೀರಲ್ಲ..." ಆಗ ಇವ್ನ ಮೇಶ್ಟ್ರು ಹೇಳಿದ್ರಂತೆ - ಔನು ಅವರ ಜೊತೆ ಬಂದೌನು ಅಂತ. ಆಗ ಔನ್ನ ಆ ಕೊನೇ ಎಲೆ ಮುಂದೆ ಕೂರಕ್ಕೇಳಿದ್ರಂತೆ. ಔನು ಇದೆಲ್ಲಾ ನೋಡಿ ವಾಕರ್ಕೆ ತಡ್ಕೊಳಕ್ಕಾಗ್ದೇ ಬಾತ್ರೂಂ ಹುಡುಕ್ಕೊಂಡ್ ಓಡೋದ. ಆಮೇಲೆ ಬಂದು, ಆ ಕೊನೆ ಎಲೆ ಹತ್ರ ಕೂತು ಊಟಕ್ಕ ಶುರು ಮಾಡಕ್ಕೆ ಎಲೆಗೆ ಕೈ ಹಾಕಿದ್ನಂತೆ. ತಕ್ಶಣ ಅದೆಲ್ಲಿಂದ್ಲೋ ಒಂದ್ ಕೂಗ್ ಬಂತಂತೆ: "ಯಾವ್ ಅಬ್ರಾಮಣ್ರಪ್ಪಾ ತೀರತಕ್ ಮುಂಚೆ ಊಟ ಮಾಡೋವ್ರು?" ನಮ್ ಹುಡ್ಗ ತನಗಲ್ಲ ಅಂತ ಕಿವೀಗೇ ಹಾಕ್ಕೊಳದೆ ತಿನ್ನಕ್ ಶುರು ಮಾಡಿದ್ನಂತೆ. ಅದನ್ ನೋಡಿ ಬಡ್ಸೋರು, ಆ ಕೊನೆ ಎಲೆಗೆ ಹೆಚ್ಚೇನೂ ಹಾಕ್ತಾನೇ ಇರ್ಲಿಲ್ವಂತೆ.

ಔನ್ಗೂ ಅದೇ ಬೇಕಾಗಿತ್ತು, ಸದ್ಯ ಅಲ್ಲಿಂದ ಬಂದ್ರೆ ಸಾಕು ಅಂತ ಚುಚ್ಚೋ ಹೊಟ್ಟೆನೋವನ್ನು ತಡ್ಕೊಳಕ್ಕಾಗ್ದೆ ಹಾಗೇ ಸೈಲೆಂಟ್ ಆಗಿ ಸೊಟ್ ಕಾಲಿಟ್ಕೊಂಡು ತಿನ್ತಿದ್ನಂತೆ. ಇದರ ಪರಿವೇ ಇಲ್ದೆ ಅವರ ಮೇಶ್ಟ್ರು ತಿಂತಿದ್ರಂತೆ. ಆಗ ಸಡನ್ನಾಗಿ ಆ ಮೇಶ್ಟ್ರ ಪಕ್ಕ ಕೂತಿದ್ದ ಒಬ್ಬ ಮನುಶ್ಯ, ಮನುಶ್ಯ ಅಂತ ಹೇಳಕ್ಕಾಗಲ್ಲ... ಅವ್ನು ತಿಂತಿದ್ ನೋಡಿ ರೂಹಿಶಂಗೆ ಬಯಂಕರ ನಗು - ಆದ್ರೆ ಜೋರಾಗ್ ನಗಕ್ಕಾಗಲಲ್ಲ! ಆ ಮನ್ಸ ಎಲೆಯಲ್ಲಿರೋ ಅನ್ನದ್ ಒಂದು ಬಾಲ್ ಮಾಡಿ, ಒಳ್ಳೆ ಸ್ಪಿನ್ನರ್ಸ್ ತರ ಬಾಯಿಗೆ ಬೌಲಿಂಗ್ ಮಾಡ್ಕೊಂಡು ಕಚಾಕ್ ಅಂತ ಬಾಯಲ್ಲಿ ಕ್ಯಾಚ್ ಹಿಡ್ಕೊತಿದ್ನಂತೆ. ಆ ಅವ್ನು ಮದ್ಯ ಮೇಶ್ಟ್ರಿಗೆ ಏನೋ ಹೇಳೋ ತರ ಬಗ್ಗಿದ್ನಂತೆ - ಆಗೊಂದು ಜೋರ್ ಸೌಂಡು. ಎಲ್ರೂ ತಿರ್ಗಿ ನೋಡ್ದಾಗ ಆ ಮನ್ಸ ಹಾಡಕ್ಕೆ ಸುರು ಮಾಡಿದ್ನಂತೆ - ಅದೂ ಮೊಸರು ಹಾಕೋ ಮುಂಚೆ... "ಬಾರವೇ ನಿನಗೆ ಬಾರತೀ ರಮಣಾ..." ಅಂತ. ಪಕ್ಕ ಕೂತಿದ್ದ ಮೇಶ್ಟ್ರು ಕಕ್ಕಾಬಿಕ್ಕಿ ಆಗಿ, ಏನೂ ಮಾಡಕ್ಕಾಗ್ದೆ ಸುಮ್ನೆ ಕೂತ್ರಂತೆ.

ಬಾರತಕ್ಕೆ ಬಾರ ಆದೌನು ಹಾಡಿ ಮುಗಿಸಿ ಮೊಸರನ್ನ ತಿಂದು ಏಳೋಶ್ಟೊತ್ಗೆ ಇವ್ರಿಬ್ರು ಎಸ್ಕೇಪ್. ರೂಹೀಶ ಯಾವಾಗ್ಲೂ ಹೇಳ್ತಿರ್ತಾನೆ - "ಬ್ರಾಮಣ್ರ ಮನೆ ಊಟ ಅಂದ್ರೆ ಔನ್ಗೆ ಆ ಭಾರತದ ಬಾರನೇ ನೆನಪಾಗುತ್ತಾಂತೆ..."

*'ಎಲ್ಲರ ಕನ್ನಡ' ಎಂದು ಹೇಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
1 ವೋಟ್
eedina app