ವಿಧಿ ಮತ್ತು ವಿಜ್ಞಾನ | ಒಂದು ಗರ್ಭಪಾತದ ಒಳಹೊರಗು; ವೈದ್ಯನೊಬ್ಬನ ವಿಕಾರಗಳ ಕತೆ

forensic science stories 10

ಅಮೆರಿಕದ ಓಹಿಯೊ ನಗರದ ಕತೆಯಿದು. ಅವರಿಬ್ಬರಿಗೆ ಮೊದಲ ನೋಟದಲ್ಲೇ ಪ್ರೇಮ ಅಂಕುರಿಸಿತು. ಮೊಂಬತ್ತಿ ಬೆಳಕಿನಲ್ಲಿ ಭೋಜನ ಸವಿಯುತ್ತ ಮದುವೆ ಬಗ್ಗೆ ನಿರ್ಧರಿಸಿದರು. ಸ್ವಲ್ಪ ದಿನಗಳಲ್ಲೇ ಆಕೆ ಗರ್ಭಿಣಿಯಾದಳು. ನಂತರ ಕಾಯಿಲೆಗೆ ತುತ್ತಾದಳು. ಮದುವೆ ನಡೆಯಲಿಲ್ಲ. ಮತ್ತೊಂದೆಡೆ, ಅವಳ ಕಾಯಿಲೆಯ ಮೂಲ ತಿಳಿಯಲೇ ಇಲ್ಲ. ಮುಂದೆ...?

ಆ ಹುಡುಗಿಯ ಹೆಸರು ಮಿಷೆಲ್‌ ಬೆಕರ್‌. ವಯಸ್ಸು 33 ಆಗಿದ್ದರಿಂದ ಜೀವನದಲ್ಲಿ ಮದುವೆಯಾಗಿ ನೆಲೆಯೂರಲು ಬಯಸಿದ್ದಳು. ಅವಳ ಕನಸು ಇನ್ನೇನು ನನಸಾಗುವ ಕಾಲ ಬಂದಿತ್ತು. ವೃತ್ತಿಯಿಂದ ವೈದ್ಯನಾದ, ಆಕರ್ಷಕವಾಗಿದ್ದ ವ್ಯಕ್ತಿಯೊಬ್ಬನನ್ನು ಅವಳ ಗೆಳತಿ ಪರಿಚಯಿಸಿದಳು. ಅವನ ಹೆಸರು  ಡಾ.ಮೇನಾರ್ಡ್‌ ಮಾಂಟ್‌ಜಿಂಗ್‌. ಅಂದಿಗೆ "ನಾನು ಜಗತ್ತಿನ ಅತ್ಯಂತ ಸುಖೀ ಹೆಂಗಸು. ನನಗೆ ಬಹುಜನ ಹುಡುಗಿಯರ ಕನಸಿನ ರಾಜಕುಮಾರ ಸಿಕ್ಕಿದ್ದಾನೆ" ಎಂಬುದು ಅವಳ ಭಾವನೆಯಾಗಿತ್ತು.


ಮಿಷೆಲ್‌ ಆಗ್ನಿಶಾಮಕ ಪಡೆಯಲ್ಲಿದ್ದಳು. ಜೊತೆಗೆ, ಅರೆ ವೈದ್ಯಕೀಯ ಕಾರ್ಯಕರ್ತೆ. ಇವನು ವೈದ್ಯ. ಇಬ್ಬರೂ ವಿಚ್ಛೇದಿತರು. ಡಾ. ಮಾಂಟ್‌ಜಿಂಗ್‌ನಿಗೆ ಮೊದಲ ವಿವಾಹದಿಂದ ಇಬ್ಬರು ಮಕ್ಕಳಿದ್ದರು. ಮಿಷೆಲ್‌ಗೆ ಮಕ್ಕಳಿರಲ್ಲ.

ಮದುವೆಯ ನಿರ್ಧಾರವಾದ ಕೂಡಲೇ ಮಾಂಟ್‌ಜಿಂಗ್‌ ಓಹಿಯೋದ ಹಬ್ಬರ್‌ ಹೈಟ್ಸ್‌ ಎಂಬಲ್ಲಿದ್ದ ಮಿಷೆಲ್‌ಳ ಪುಟ್ಟ ಮನೆಗೆ ವರ್ಗಾವಣೆಯಾದ. ಅಲ್ಲಿ ಇಬ್ಬರೂ ಮಾಂಟ್‌ಜಿಂಗ್‌ನ ಮಕ್ಕಳೊಂದಿಗೆ ವಾರಾಂತ್ಯಗಳನ್ನು ಕಳೆಯತೊಡಗಿದರು. ಈ ನಡುವೆ ಒಂದು ದಿನ ಮಿಷೆಲ್‌ ತನ್ನದೇ ಒಂದು ಸಿಹಿ ಸುದ್ದಿಯನ್ನು ಮಾಂಟ್‌ಜಿಂಗ್‌ಗೆ ಹೇಳಿದಳು; ಅವಳು ಗರ್ಭಿಣಿಯಾಗಿದ್ದಳು. ಅದನ್ನು ಕೇಳಿದಾಗ ಮಾಂಟ್‌ಜಿಂಗ್‌ ಸಂತೋಷದಿಂದ, "ಆಯಿತು..., ಕೀವೆಸ್ಟ್‌ನಲ್ಲಿರುವ ಬೀಚ್‌ನ ಮರಳಿನ ಮೇಲೆ ಇಳಿಸಂಜೆಯಲ್ಲಿ ಬರಿಗಾಲಲ್ಲಿ ಮದುವೆಯಾಗೋಣ," ಎಂದು ಅವನ ಮದುವೆಯ ಕನಸು ಹೇಳಿದ. ಮಿಷೆಲ್‌ ಆಕಾಶದಲ್ಲಿ ತೇಲಿಹೋದಳು.

ಈ ಆನಂದದ ಆಚರಣೆಗೆಂದು ಅವರು ಫ್ಲೋರಿಡಾಗೆ ಹಾರಿದರು. ಅಲ್ಲಿನ ಮೊದಲ ರಾತ್ರಿಯಲ್ಲಿ, "ನನ್ನ ಕುಟುಂಬದವರು ಮದುವೆಗೆ ಬರಲು ಇಚ್ಛಿಸುತ್ತಾರೆ. ಅದಕ್ಕಾಗಿ ಕೆಲವು ದಿನ ಮದುವೆ ಮುಂದೂಡಬೇಕಾಗುತ್ತದೆ,” ಎಂದು ಹೇಳಿದ. ಮೊದಲಿಗೆ ಆಘಾತ ಅನ್ನಿಸಿದರೂ, ಅವನ ಭಾವನೆಗಳಿಗೂ ಗೌರವ ಕೊಡಬೇಕು ಎಂಬ ಭಾವದಲ್ಲಿ ಮಿಷೆಲ್‌ ಒಪ್ಪಿಕೊಂಡಳು.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಕಾವಳ ಕವಿದ ಕಗ್ಗತ್ತಲೆಯಲ್ಲಿ ರೈಲು ಕೆಡವಿದವರಾರು?

ಮರುದಿನ ಇಬ್ಬರೂ ಹೋಟೆಲೊಂದಕ್ಕೆ ಊಟಕ್ಕೆ ಹೋದರು. ಊಟ ಮುಗಿಸಿ ಹಿಂತಿರುಗುವಾಗ ಮಿಷೆಲ್‌ ಹೊಟ್ಟೆಯಲ್ಲಿ ವಿಚಿತ್ರ ನೋವು ಮತ್ತು ನುಲಿತ ಆರಂಭವಾದವು. ತೆಳುವಾಗಿ ರಕ್ತಸ್ರಾವ ಆಗತೊಡಗಿತು. ಅದೃಷ್ಟವಶಾತ್‌ ಆಕೆಯ ಭಾವಿ ಗಂಡನೇ ವೈದ್ಯ; ಪಕ್ಕದಲ್ಲಿಯೇ ಇದ್ದ. ಪರೀಕ್ಷೆ ಮಾಡಿದ. ಚಿಂತಿಸುವ ಅಗತ್ಯ ಇಲ್ಲವೆಂದು ಹೇಳಿದ. ಮರುದಿನ ನೋವಿನ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಯಿತು.

ಆದರೂ ಗಾಬರಿ ಮತ್ತು ನೋವಿನಲ್ಲಿದ್ದ ಮಿಷೆಲ್‌, ಜಾನ್‌ ಎಂ ಶೇಯ್‌ ಎಂಬ ತಜ್ಞ ವೈದ್ಯನಲ್ಲಿಗೆ ಹೋಗಿ ಪರೀಕ್ಷಿಸಿದಳು. ಅವಳಿಗೆ ಗರ್ಭಪಾತದ ಭಯವಿತ್ತು. ವೈದ್ಯನಿಗೆ ಅವಳ ವಯಸ್ಸಿನ ಬಗ್ಗೆ ಆತಂಕವಿತ್ತು. ಹಾಗಾಗಿ, ಸಂಬಂಧಿಸಿದ ಎಲ್ಲ ಪರೀಕ್ಷೆಗಳನ್ನೂ ಮಾಡಿದ. ಆದರೆ, ಯಾವ ಸಮಸ್ಯೆಗಳೂ ಅವನಿಗೆ ಗೋಚರವಾಗಲಿಲ್ಲ.

ಇದಾದ ಕೆಲವು ದಿನಗಳಲ್ಲಿ ಮಾಂಟ್‌ಜಿಂಗ್, 3,20,000 ಡಾಲರ್‌ಗಳಿಗೆ ಒಂದು ಹೊಸ ಮನೆಯನ್ನು ಖರೀದಿಸಿದ. "ನಮ್ಮ ಮುಂದಿನ ಮಗು ಈ ಹೊಸ ಮನೆಯಲ್ಲಿ ಹುಟ್ಟಿ, ಬೆಳೆಯಬೇಕು," ಎಂದು ಮಿಷೆಲ್‌ಳಿಗೆ ಹೇಳಿದ. ಹೊಸ ಮನೆ, ಅತೀವ ಕಾಳಜಿ, ಅನೂಹ್ಯ ಪ್ರೇಮ ಸಲ್ಲಾಪಗಳು… ಓಹ್, ಮಾಂಟ್‌ಜಿಂಗ್! ಮಿಷೆಲ್‌ಳಿಗೆ ಸ್ವರ್ಗ ಮೂರೇ ಗೇಣು ಸಮೀಪದಲ್ಲಿ ಇದ್ದಂಥ ಭಾವ.

ಆದರೆ, ಮಿಷೆಲ್‌ಳ ನೋವು–ನುಲಿವುಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು. ನೋವು ಬಂದಾಗ ತುಂಬಾ ನರಳುತ್ತಿದ್ದಳು. ಪ್ರತಿ ಬಾರಿಯೂ ಭಯ-ಆತಂಕಗಳಿಂದ ಕುಸಿದುಹೋಗುತ್ತಿದ್ದಳು. ಅವಳ ಭಾವೀ ಪತಿ ವೈದ್ಯ ಮತ್ತು ಆಕೆಯ ವಿಶೇಷ ವೈದ್ಯ ಜಾನ್‌ ಇಬ್ಬರೂ ಅವಳ ನೋವಿನ ಮೂಲವನ್ನು ಪತ್ತೆ ಮಾಡಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ಆದರೆ ಅದಾಗಲಿಲ್ಲ.

Image
Jr Korpa Photo

ಬದುಕಿನಲ್ಲಿನ ಸಣ್ಣ-ಪುಟ್ಟ ಬದಲಾವಣೆಗಳು ಮನುಷ್ಯನ ಭಾವನೆಗಳಲ್ಲಿ ತೀವ್ರ ವ್ಯತ್ಯಾಸಗಳನ್ನು ಸೃಷ್ಟಿ ಮಾಡುತ್ತವೆ. ಹಾಗಾಗಿ, ಈ ನೋವಿನ ನಡುವೆಯೂ ಈ ಇಬ್ಬರೂ ಮದುವೆಯಾಗುವ ಬಗ್ಗೆ ಚಿಂತಿಸತೊಡಗಿದರು. ಮಾಂಟ್‌ಜಿಂಗ್ "ಇದಕ್ಕೆ ಸಿದ್ಧನಿದ್ದೇನೆ" ಎಂದು ಹೇಳಿದ. ದಿನಾಂಕ ನಿರ್ಧರಿಸುವ ಸಮಯ ಬಂದಾಗ ಮತ್ತೆ ಹಿಂದೇಟು ಹಾಕಿದ. "ನನ್ನ ಹಳೆಯ ಗೆಳತಿಯ ನೆನಪಿನಿಂದ ನಾನಿನ್ನೂ ಹೊರಬರಲಾಗಿಲ್ಲ. ನನಗೆ ಅವಳನ್ನು ಮರೆಯಲು ಇನ್ನೂ ಸ್ವಲ್ಪ ಸಮಯ ಬೇಕು,” ಎಂದು ಹೇಳಿದ. ಅವರಿಬ್ಬರದೂ ಅತ್ಯಂತ ವಿಷಮ ಸಂಬಂಧವಾಗಿತ್ತು ಎಂದು ಅವನೇ ಹೇಳಿದ್ದ. ಅವಳ ದುಷ್ಟತನದ ಬಗ್ಗೆ ಮಿಷೆಲ್‌ ಜನರ ಬಾಯಿಂದಲೂ ಕೇಳಿದ್ದಳು. ಆದರೂ ಇವನು ಏಕೆ ಇನ್ನೂ ಅವಳ ನೆನಪಿನಲ್ಲಿದ್ದಾನೆ ಎಂಬುದು ಅವಳಿಗೆ ಅರ್ಥವಾಗಲಿಲ್ಲ.

2020ರ ಜುಲೈ 4. ಬೆಳಗ್ಗೆ ಮಿಷೆಲ್‌ ಮನೆಯಲ್ಲಿಯೇ ಉಳಿಯಲು ನಿರ್ಧರಿಸಿದ್ದಳು. ಇಬ್ಬರಿಗೂ ಅದ್ಭುತವಾದ ಮೊದಲರ್ಧದ ದಿನವಾಗಿತ್ತು. ಖುಷಿಖುಷಿಯಾಗಿ ಬೆಳಗನ್ನು ಕಳೆದರು. ಮಧ್ಯಾಹ್ನದ ನಂತರ ಮಾಂಟ್‌ಜಿಂಗ್, "ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗುತ್ತಿದ್ದೇನೆ. ಇಲ್ಲಿಂದ ಒಂದು ಗಂಟೆ ಪ್ರಯಾಣವಿರುವ ಜಾಗ," ಎಂದು ಹೇಳಿ ಒಂದಷ್ಟು ಬಟ್ಟೆಗಳನ್ನು ತಗೆದುಕೊಂಡು ಹೊರಟ.

ತಡರಾತ್ರಿ ಮನೆಯಲ್ಲಿ ಮಿಷೆಲ್‌ ಒಬ್ಬಳೇ ರೇಡಿಯೊ ಕೇಳುತ್ತ ಕುಳಿತಿದ್ದಳು. ಸ್ಟೇಶನ್‌ ಬದಲಿಸಿದಾಗ, 'ಕ್ಯೂ 92' ಸ್ಟೇಷನ್‌ನಲ್ಲಿ ಕೋರಿಕೆಯ ಹಾಡುಗಳು ಪ್ರಸಾರವಾಗುತ್ತಿದ್ದವು. ಯಾವುದೋ ಒಬ್ಬ ಕೋರಿಕೆದಾರನ ಮಾತಿಗೆ ಪ್ರತಿಕ್ರಿಯಿಸುತ್ತ ರೇಡಿಯೊ ಜಾಕಿ ಹೇಳಿದ: "ಇದು ಹಬ್ಬರ್‌ ಹೈಟ್ಸ್‌ನಿಂದ ಬಂದಿರುವ ಕೋರಿಕೆ... ಹೇಳಿ ನಿಮಗೆ ಯಾವ ಹಾಡು ಬೇಕು?" ಅತ್ತಲಿಂದ ಪುರುಷ ಧ್ವನಿ - "ಪ್ರಿಸನರ್ಸ್‌ ಆಫ್‌ ಲೈಫ್..." ಮಿಷೆಲ್‌ ಕುತೂಹಲದಿಂದ ರೇಡಿಯೊಗೆ ಕಿವಿಯಾನಿಸಿ ಕುಳಿತಳು. ಆ ಧ್ವನಿ ಅವಳಿಗೆ ಪರಿಚಿತವಾಗಿತ್ತು. ಯಾರಿದು...? ಅಷ್ಟರಲ್ಲಿ ರೇಡಿಯೊ ಜಾಕಿ ಕೇಳಿದ: "ಒಳ್ಳೆಯದು, ಯಾರಿದು?" ಅತ್ತಲಿಂದ ಧ್ವನಿ, "ನಾನು ಡಾ. ಮಾಂಟ್‌ಜಿಂಗ್." ರೇಡಿಯೊ ಜಾಕಿ: "ಇದನ್ನು ಯಾರಿಗಾದರೂ ಅರ್ಪಣೆ ಮಾಡಬಯಸುತ್ತೀರಾ?" ಮಾಂಟ್‌ಜಿಂಗ್: ………… (ಹೆಸರು ಹೇಳಿದ).

ಮಿಷೆಲ್‌ ಕೂಡಲೇ ನೆರೆಮನೆಯವರ ಸಹಾಯ ಪಡೆದು, ನೇರವಾಗಿ ಮಾಂಟ್‌ಜಿಂಗ್‌ನ ಹಳೆಯ ಪ್ರಿಯತಮೆ ಟಾಮಿ ಇರ್ವಿನ್ ಮನೆಗೆ ಹೋದಳು. ಮಾಂಟ್‌ಜಿಂಗ್ ಅಲ್ಲಿದ್ದ. ಯುದ್ಧವೋ, ಜಟಾಪಟಿಯೋ ನಡೆಯುವುದು ಶತಃಸಿದ್ಧ. ಅದೆಲ್ಲ ಆಗುವಾಗ ಮಿಷೆಲ್‌ಗೆ ಅರಿವಾಗಿದ್ದೆಂದರೆ, ಮಾಂಟ್‌ಜಿಂಗ್ ಈವರೆಗೂ ಆಕೆ ಗರ್ಭಿಣಿಯಾಗಿದ್ದಾಳೆ ಎಂಬುದಿರಲಿ, ಆತ ಮಿಷೆಲ್‌ ಜೊತೆ ಇದ್ದಾನೆ ಎಂದು ಸಹ ಟಾಮಿ ಇರ್ವಿನ್‌ಗೆ ಹೇಳಿರಲಿಲ್ಲ. ಬದಲಿಗೆ, ಗೆಳೆಯರೊಂದಿಗೆ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದ. ಈ ವಿಪರೀತದ ಪರಿಸ್ಥಿತಿಯಲ್ಲಿ ಮಿಷೆಲ್‌ಗೆ ಹೊಳೆದ ಒಂದೇ ದಾರಿ ಎಂದರೆ, ಅವನ ಸಾಮಾನುಗಳನ್ನು ಬೀದಿಗೆಸೆದು, ಅವನನ್ನು ಮನೆಯಿಂದ ಹೊರಗೆ ಹಾಕುವುದು; ಅದೂ ಆಗಿಹೋಯಿತು.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಜೀನ್ಸ್‌ ಪ್ಯಾಂಟ್‌ ಹೇಳಿದ ರಹಸ್ಯ ಮತ್ತು ಇಪ್ಪತ್ತು ವರ್ಷಗಳ ಪರದಾಟ

ಇತ್ತ ಇವಳು ಗರ್ಭಿಣಿ. ಇನ್ನೂ ಮದುವೆಯಾಗಿಲ್ಲ. ಅತ್ತ ಅವನು ನಂಬಿಕೆಗೆ ಅರ್ಹನಲ್ಲ. ಮಿಷೆಲ್‌ ಏಕಾಂಗಿಯಾದಳು. ಕಾಲ ಸರಿಯುತ್ತಿತ್ತು. ಇವಳು ಮರೆವಿನ ಮೊರೆಹೋಗಲು ಯತ್ನಿಸುತ್ತಿದ್ದಳು. ಒಂದು ದಿನ ಮಾಂಟ್‌ಜಿಂಗನ ಕರೆ ಬಂತು; ಕ್ಷಮೆ ಕೇಳಿದ. "ನನ್ನ ನಿರ್ಧಾರದಲ್ಲಿ ಎಲ್ಲೋ ತಪ್ಪುಗಳಾಗಿವೆ. ಕೊನೆಯ ಬಾರಿಗೆ ಒಮ್ಮೆ ಮಾತನಾಡಿ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ," ಎಂದ. ಅವನ ಮಾತುಗಳು ಇವಳಿಗೆ 'ಪ್ರಾಮಾಣಿಕ' ಅನ್ನಿಸಿದವು. ಮಿಷೆಲ್‌ ಮೃದುವಾದಳು. ಅವನು ಅಹ್ವಾನಿಸಿದ ಪಿಕ್‌ನಿಕ್‌ಗೆ ಹೋದಳು.

ಅವನು ಪದೇಪದೆ ಕ್ಷಮೆ ಕೇಳಿದ. "ನನಗೆಲ್ಲೋ ಮಂಕು ಕವಿದಿತ್ತು. ನೈಜ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಾಗದೆ ಹೋದೆ," ಇತ್ಯಾದಿ… ಇತ್ಯಾದಿ ಹೇಳಿದ. ಮಿಷೆಲ್‌ಳಲ್ಲಿ ಪ್ರೀತಿ ಮತ್ತೆ ಕಾಣಿಸಿಕೊಂಡಿತು. ಪಿಕ್‌ನಿಕ್‌ ಅನ್ನು ಆಸ್ವಾದಿಸಲಾರಂಭಿಸಿದಳು. ಆದರೆ, ಸ್ವಲ್ಪ ಹೊತ್ತಿನಲ್ಲಿಯೇ ಮತ್ತೆ ಅವಳ ಆರೋಗ್ಯ ಕೈಕೊಡಲಾರಂಭಿಸಿತು. ಮತ್ತೆ ಅದೇ ನೋವು, ಅದೇ ನುಲಿತ! ಈ ಬಾರಿ ಅವಳು ಹೈರಾಣಾಗಿಹೋದಳು. ಮೊದಲು ಕಾಣಿಸಿಕೊಂಡ ವಾಂತಿಯೊಂದಿಗೆ ಭೇದಿಯೂ ಕೂಡಿಕೊಂಡಿತು. ಪ್ರತಿ ಐದು ನಿಮಿಷಕ್ಕೊಮ್ಮೆ ಶೌಚಾಲಯಕ್ಕೆ ಓಡುವುದು ಅನಿವಾರ್ಯವಾಯಿತು. ಜೊತೆಗೆ ರಕ್ತಸ್ರಾವವೂ ಆರಂಭವಾಗಿ, ಬರುಬರುತ್ತ ಹೆಚ್ಚುತ್ತ ಹೋಯಿತು. ಅಂತಿಮವಾಗಿ, ಮಿಷೆಲ್‌ ಅಸ್ವಸ್ಥಳಾದಳು.

ಕೂಡಲೇ ಅವಳು ಅವಳ ಭರವಸೆಯ ವೈದ್ಯರಲ್ಲಿಗೆ ಓಡಿದಳು. ಅವರೂ ಮಾಡಬಹುದಾದ ಎಲ್ಲ ಪರೀಕ್ಷೆಗಳನ್ನು ಮಾಡಿದರು. ಕೊನೆಗೆ, ಭ್ರೂಣದ ಅರೋಗ್ಯ ತಿಳಿಯಲು ಅಲ್ಟ್ರಾಸೌಂಡ್‌ ಪರೀಕ್ಷೆಯನ್ನೂ ಮಾಡಿದರು. "ಗಾಬರಿಯಾಗುವಂಥದ್ದು ಏನೂ ಇಲ್ಲ. ಎಲ್ಲವೂ ನಾರ್ಮಲ್‌ ಆಗಿದೆ," ಎಂದು ಹೇಳಿದರು. ಮಿಷೆಲ್‌ ಸಮಾಧಾನಗೊಂಡಳು. ಇವೆಲ್ಲವೂ ತನ್ನ ಮಾನಸಿಕ ಒತ್ತಡದ ಕಾರಣ ಆಗುತ್ತಿವೆ ಎಂದು ಸಮಾಧಾನ ಮಾಡಿಕೊಂಡಳು. ಈಗ ಮಾಂಟ್‌ಜಿಂಗ್ ಕೂಡ ಅವಳೊಂದಿಗಿದ್ದ. ಬದುಕು ಅವಳ ಹಿಡಿತಕ್ಕೆ ಸಿಗುತ್ತಿತ್ತು. ಇದೇ ಸಂದರ್ಭದಲ್ಲಿ ಮತ್ತೆ ಮದುವೆಯ ಮಾತುಕತೆ ಗರಿಗೆದರಿತು.

ಮಾತುಕತೆಗಳು ಒಂದು ಹಂತಕ್ಕೆ ಬರುವ ಹೊತ್ತಿಗೆ ಮಿಷೆಲ್‌ ಮತ್ತೆ ಅಸ್ವಸ್ಥಳಾದಳು. ಮತ್ತೆ ಅವಳನ್ನು ಪರೀಕ್ಷಿಸಿದ ಅವಳ ವೈದ್ಯ, “ಈವರೆಗೂ ಇದೆಲ್ಲ ನಿನ್ನೊಳಗಿದ್ದ ಆತಂಕದಿಂದ ಆಗುತ್ತಿದ್ದವು. ಈಗ ಭಾವಿ ಪತಿ ಹಿಂತಿರುಗಿರುವುದರಿಂದ ಆದ ಅತಿಯಾದ ಸಂತೋಷಕ್ಕೆ ಇದು ಸಂಭವಿಸುತ್ತಿದೆ. ಗಾಬರಿಯಾಗುವ ಅಗತ್ಯ ಇಲ್ಲ,” ಎಂದು ಹೇಳಿದ.

Image
Johann Walter Bantz Photo

ಈ ಮಿಷೆಲ್‌ಗೆ ಒಬ್ಬ ಅವಳಿ ಸೋದರಿ ಇದ್ದಳು. ಅವಳ ಹೆಸರು ಮಿಲಿಂಡ. ಅವಳು ಸೋದರಿಯ ಪರಿಸ್ಥಿತಿಯನ್ನು ತುಂಬಾ ಅಸಕ್ತಿಯಿಂದ ಗಮನಿಸುತ್ತಿದ್ದಳು. ಒಮ್ಮೆ ಹೀಗೇ ಮಾತನಾಡುತ್ತ, "ನೀನು ಅವನ ಜೊತೆ ಹೋಗಿ ಬಂದಾಗಲೆಲ್ಲ ನಿನಗೆ ಹೀಗಾಗುತ್ತದೆ, ಅಲ್ಲವೇ?” ಎಂದಳು. ಯೋಚಿಸಿದ ಮಿಷೆಲ್‌ ಹೌಹಾರಿದಳು. ನೆನಪುಗಳನ್ನು ಮತ್ತೆ ನೆನಪಿಸಿಕೊಂಡು ನೋಡಿದಳು; ಹೌದು, ಫ್ಲೋರಿಡಾದಲ್ಲಿ ಅವನು ಬಾರ್‌ನಿಂದ ತಂದುಕೊಟ್ಟ ಡ್ರಿಂಕ್ ತಗೆದುಕೊಂಡ ನಂತರ ಹೀಗಾಗಿತ್ತು! ಅವನು ಪಿಕ್‌ನಿಕ್‌ನಲ್ಲಿ ಡ್ರಿಂಕ್‌ ಕೊಟ್ಟ ನಂತರ ಹೀಗಾಗಿತ್ತು! ಹಾಗಾದರೆ...?

ಮಿಷೆಲ್‌ ಎಂಬ ಹೆಣ್ಣಿನಲ್ಲಿ ಒಂದು ಹೊಸ ಅನುಮಾನ ಮೊಳೆತಿತ್ತು. ಆದರೆ, ಅದನ್ನು ಪರೀಕ್ಷಿಸುವುದು ಹೇಗೆ? ಖಚಿತಪಡಿಸಿಕೊಳ್ಳುವುದು ಹೇಗೆ? ಅವನ ಪ್ರತಿ ನಡವಳಿಕೆಯ ಮೇಲೆ ಅವಳಿಗೆ ಸಂದೇಹ ಹುಟ್ಟಲಾರಂಭಿಸಿತು. ಅವಳ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಕೆಲವು ಸಂದರ್ಭಗಳನ್ನು ವಿಡಿಯೊ ರೆಕಾರ್ಡ್‌ ಮಾಡುವ ಬಗ್ಗೆ ಯೋಚಿಸಿದಳು. ಈ ನಡುವೆ ಒಂದು ದಿನ ಅವನು, "ಮಕ್ಕಳಿಗೆ ಕೆಲವು ದಿನಗಳ ರಜೆ ಇದೆ, ಅವರನ್ನು ಫ್ಲೋರಿಡಾಗೆ ಕರೆದುಕೊಂಡು ಹೋಗಿಬರುತ್ತೇನೆ,” ಎಂದು ಹೇಳಿದ. ಮಿಷೆಲ್‌ಗೆ ನಂಬಿಕೆ ಬರಲಿಲ್ಲ. ಆದರೂ ಅವನು ಹೋದ. ಅವನು ಹೋದ ಕೆಲ ಹೊತ್ತಿನ ನಂತರ ಮಿಷೆಲ್‌ ಮಾಂಟ್‌ಜಿಂಗನ ಮಾಜಿ ಪ್ರಿಯತಮೆಯ ಮನೆಗೆ ಹೋದಳು. ಅವನ ಕಾರು ಅಲ್ಲಿಯೇ ಇತ್ತು. ಮರೆಮಾಚಿ, ತೆರೆದಿದ್ದ ಕಿಟಕಿಯತ್ತ ಹೋದಳು. ಅವರಿಬ್ಬರೂ ಇವಳ ಬಸುರಿನ ಬಗ್ಗೆ ಮಾತನಾಡುತ್ತಿದ್ದರು. ಮಾಂಟ್‌ಜಿಂಗನ ಪ್ರಿಯತಮೆ ಕೇಳಿದಳು, "ಆ ಮಗುವಿನ ಕತೆ ಏನು? ಅದನ್ನೇನು ಮಾಡುವುದು?" ಅದಕ್ಕೆ ಮಾಂಟ್‌ಜಿಂಗ್, "ನೀನೇನೂ ಯೋಚಿಸಬೇಡ. ಅದು ಹುಟ್ಟುವುದಿಲ್ಲ..." ಎಂದ. ಮಿಷೆಲ್‌ ಕುಸಿದುಹೋದಳು.

ನನ್ನ ಹಿಂದೆ ಏನೋ ಸಂಚು ನಡೆಯುತ್ತಿದೆ ಎಂಬುದು ಅವಳಿಗೆ ಖಚಿತವಾಯಿತು. ನೇರವಾಗಿ ಪೊಲೀಸರಲ್ಲಿಗೆ ಹೋಗಿ ನಡೆದದ್ದನ್ನು ಹೇಳಿದಳು, ಜೊತೆಗೆ ತನ್ನ ಸಂದೇಹವನ್ನು ಕೂಡ. ಪೊಲಿಸರಿಗೆ ಇದು ಸ್ವಲ್ಪ ಕಲ್ಪಿತ ಅನಿಸಿತು. "ಇಂಥವು ನಮಗೆ ಹೊಸತೇನೂ ಅಲ್ಲ. ತುಂಬಾ ಬರುತ್ತಿರುತ್ತವೆ. ಆದರೆ, ಅವ್ಯಾವೂ ನಿಜವಾಗಿರುವುದಿಲ್ಲ. ಯಾರೋ ಒಬ್ಬ ಇಂಥದ್ದನ್ನು ಮಾಡುತ್ತಾನೆಂದು ಕಲ್ಪಿಸುವುದೂ ನನ್ನಿಂದಾಗದು. ನನ್ನ 25 ವರ್ಷಗಳ ಸರ್ವೀಸಿನಲ್ಲಿ ಇಂಥದ್ದು ಕಂಡಿಲ್ಲ. ಆದರೂ ನಾವು ಅವನನ್ನು ಸಂಪರ್ಕಿಸುತ್ತಿದ್ದೇವೆ," ಎಂದು ಅಲ್ಲಿನ ಪೊಲೀಸ್‌ ಅಧಿಕಾರಿ ಜೆ಼ಪ್ರಿ ಕೋಲ್ವಿನ್ ಹೇಳಿದ.‌ ಈ ಪೊಲೀಸ್‌ ಆಧಿಕಾರಿ ಮಿಷೆಲ್‌ಳನ್ನು ಸುಳ್ಳು ಪರೀಕ್ಷೆಗೆ ಒಳಪಡಿಸಲು ಇಚ್ಛಿಸಿದ್ದ. ಆದರೆ, ಗರ್ಭಿಣಿಯನ್ನು ಈ ಪರೀಕ್ಷೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ ಸುಮ್ಮನಾದ.

ಅಲ್ಲಿನ ಇನ್ನೊಬ್ಬ ಹಿರಿಯ ಪೊಲೀಸ್ ಮತ್ತು ಪತ್ತೇದಾರ ಸಾರ್ಜೆಂಟ್‌ ರಿಚರ್ಡ್ ಮೇ ಅವಳಿಗೆ ಹೇಳಿದ್ದೆಂದರೆ, “ಡಾ. ಮಾಂಟ್‌ಜಿಂಗನ ವೃತ್ತಿ ಸ್ಥಾನದ ಕಾರಣದಿಂದ ಪ್ರಬಲವಾದ ಭೌತಿಕ ಕಾರಣಗಳಿಲ್ಲದೆ ಇಂತಹ ವಿಷಯಗಳಲ್ಲಿ ಅವನನ್ನು ವಿಚಾರಣೆಗೆ ಒಳಪಡಿಸಲಾಗದು." ಆದರೆ, ಅದಾಗದಿದ್ದಾಗ ಅವಳೇ ಇದರ ತನಿಖೆಗೆ ಮುಂದಾದಳು. ಅವಳ ಗೆಳತಿಯ ಜೊತೆಗೂಡಿ ಅಡುಗೆ ಮನೆ ಶೆಲ್ಫ್‌ ಪ್ರದೇಶ ಕಾಣುವಂತೆ ಒಂದು ಕ್ಯಾಮೆರಾವನ್ನು ಹೂವಿನ ಕುಂಡದ ಹಿಂದೆ ಅಡಗಿಸಿಟ್ಟರು.
ಅಂದು ರಾತ್ರಿಯೂಟಕ್ಕೆ ಬರುವಂತೆ ಮಾಂಟ್‌ಜಿಂಗನನ್ನು ಆಹ್ವಾನಿಸಿದಳು. ಅವನು ಅಡುಗೆಮನೆಗೆ ಬಂದಾಗ, "ನಾನು ಗ್ರಿಲ್‌ ಚಿಕನ್‌ ಮಾಡಲು ಹೋಗುತ್ತೇನೆ. ನೀನು ನನ್ನ ಡ್ರಿಂಕ್ ರೆಡಿ ಮಾಡು," ಎಂದು ಹೇಳಿ ಹೊರಗೆ ಹೋದಳು. ಅವನು ಡ್ರಿಂಕ್‌ ರೆಡಿ ಮಾಡಿಕೊಂಡು ಹಾಲ್‌ನಲ್ಲಿ ಕಾಯುತ್ತಿದ್ದ. ಒಳಗೆ ಬಂದ ಮಿಷೆಲ್‌, ಹಾಗೆಯೇ ಅಡುಗೆಮನೆಗೆ ಹೋಗಿ ಕ್ಯಾಮೆರಾ ದಾಖಲೆಯನ್ನು ನೋಡಿಕೊಂಡು ಹೊರಬಂದಳು. ಅವನು ಕೊಟ್ಟ ಡ್ರಿಂಕನ್ನು ಹಾಗೇ ಕೈಯಲ್ಲಿ ಹಿಡಿದು, ಶೌಚಾಲಯದ ನೆಪ ಹೇಳಿ ಹೋದಳು. ಅಲ್ಲಿ ಮೊದಲೇ ಸಿದ್ಧವಾಗಿಟ್ಟಿದ್ದ ಒಂದು ಪ್ಲಾಸ್ಟಿಕ್‌ ಬಾಟಲಿಗೆ ಅವನು ಕೊಟ್ಟಿದ್ದ ದ್ರವವನ್ನು ಸುರಿದಳು.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಅತ್ಯಾಚಾರಗಳ ಕಾಲುದಾರಿಯಲ್ಲಿ ಡಿಎನ್ಎ ತಿರುವು

ಅವಳು ಕ್ಯಾಮೆರಾದಲ್ಲಿ ಕಂಡಿದ್ದಂತೆ, ಅದರ ತಳದಲ್ಲಿ ಬಿಳಿಯ ಗಸಿ ಹಾಗೆಯೇ ಇತ್ತು. ಮೊದಲೇ ಇಟ್ಟಿದ್ದ ಇನ್ನೊಂದು ಟಿನ್‌ನಿಂದ ಹೊಸ ಡ್ರಿಂಕ್‌ ಸುರಿದುಕೊಂಡು ಮತ್ತೆ ಹಾಲ್‌ಗೆ ಬಂದಳು. ಅವನೊಂದಿಗೆ ಕುಳಿತು ರಾತ್ರಿಯೂಟ ಮುಗಿಸಿದಳು. ಊಟ ಮಾಡುವುದು ಕಷ್ಟವಾಗುತ್ತಿತ್ತು. ಅದಷ್ಟು ಬೇಗ ಆ ಸ್ಯಾಂಪಲ್‌ ಅನ್ನು ಪೊಲೀಸರಿಗೆ ತಲುಪಿಸುವ ಒತ್ತಡ ಒಂದು ಕಡೆಯಾದರೆ, ಇನ್ನೊಂದೆಡೆ ಒಂದೇ ಸಮನೆ ರಿಂಗಣಿಸುತ್ತಿದ್ದ ಅವಳ ಟೆಲಿಫೋನ್.‌ ಕರೆ ಮಾಡುತ್ತಿದ್ದವಳು ಮಾಂಟ್‌ಜಿಂಗನ ಹಳೆಯ ಪ್ರೇಯಸಿ ಟಾಮಿ ಇರ್ವಿನ್.‌ ಅವನ ಜೊತೆ ಮಾತನಾಡಬೇಕೆಂದು ಒತ್ತಾಯಿಸುತ್ತಿದ್ದಳು. ಅವನು ಇಲ್ಲಿಂದ ತೆರಳಿದ ನಂತರ ಮತ್ತೊಂದು ಕರೆ ಬಂದಿತು. ಅತ್ತಲಿಂದ ಮಾಂಟ್‌ಜಿಂಗ್‌ ಮಾತನಾಡುತ್ತಿದ್ದ. "ಇರ್ವಿನ್ ನಿನ್ನ ಮೇಲೆ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಏಕೆ ಎಂದು ನಿನಗೆ ಗೊತ್ತೇ?" ಎಂದು ಕೇಳಿದ. ಇವಳು, "ಇಲ್ಲ, ಹೇಳು," ಅಂದಳು. "ಈಗ ಅವಳು ನನ್ನ ಹೆಂಡತಿ, ಕಳೆದ ವಾರ ನಾನು ಅವಳನ್ನು ಮದುವೆಯಾದೆ," ಎಂದು ಹೇಳಿದ. ಈಗ ಮಿಷೆಲ್‌ಳ ಮನಃಸ್ಥಿತಿಯನ್ನು ಯಾರಾದರೂ ಊಹಿಸಬಹುದೇ?

ಮಿಷೆಲ್‌ ತಂದುಕೊಟ್ಟ ಡ್ರಿಂಕ್‌ ಸ್ಯಾಂಪಲ್‌ ಅನ್ನು ಪೊಲೀಸರು ಕೂಡಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿದರು. ಇದನ್ನು ಸ್ವೀಕರಿಸಿದ ವಿಧಿವಿಜ್ಞಾನ ತಜ್ಞ ಮೈಕ್ ವಾಟೆನ್‌, "ಇವರೇನು ನನ್ನೊಂದಿಗೆ ತಮಾಷೆ ಮಾಡುತಿದ್ದಾರೇನು? ನಾವು ಏನನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳುತ್ತಿಲ್ಲ. ನಮಗೂ ಅದರ ಅಂದಾಜಿಲ್ಲ. ಅಲ್ಲದೆ, ಇದು ನೋಂದಣಿ ಆಗಿರುವ ಫೊರೆನ್ಸಿಕ್‌ ಪ್ರಕರಣವೂ ಅಲ್ಲ. ಇದನ್ನು ಎಲ್ಲಿಂದ ಆರಂಭಿಸಬೇಕೆಂದು ಸಹ ಹೊಳೆಯುತ್ತಿಲ್ಲ. ಇಂಥ ಮಿಶ್ರಣಗಳು ನೂರಾರಿರುತ್ತವೆ. ನಾವೇನು ಮಾಡಬಹುದು ತಿಳಿಯುತ್ತಿಲ್ಲ," ಎಂದು ಹೇಳಿದ.

ಸಮಸ್ಯೆಯ ಮೂಲದ ಕುರಿತ ಸಂದೇಹ ಬಗೆಹರಿಸಿಕೊಳ್ಳಲು ಪೊಲೀಸರು ಸ್ಥಳೀಯ ಔಷಧಿಕಾರನನ್ನು ಕರೆಸಿದರು. ಸ್ತ್ರೀಯರ ಭ್ರೂಣಕ್ಕೆ ಹಾನಿ ಮಾಡಬಹುದಾದ ಔಷಧಗಳ ಹೆಸರುಗಳನ್ನು ಹೇಳುವಂತೆ ಕೇಳಿದರು. ಅವನು ಕೆಲವು ಹೆಸರುಗಳನ್ನು ಹೇಳಿ, "ಇವುಗಳಲ್ಲಿ ನೀವು ಹೇಳುತ್ತಿರುವ ಲಕ್ಷಣಗಳಿಗೆ ಹೊಂದಾಣಿಕೆ ಆಗುವ ಔಷಧ ಎಂದರೆ, ಅದು 'ಸೈಟೊಟೆಕ್," ಎಂದು ಹೇಳಿದ.

ಕೂಡಲೇ ಮಿಷೆಲ್‌ ಕೊಟ್ಟ ಮಾದರಿಯನ್ನು ಕ್ರೊಮೋಟೊಗ್ರಾಫ್‌ ಮತ್ತು ಸ್ಪೆಕ್ಟೋಮೀಟರ್‌ಗಳಿಗೆ ಉಣಿಸಲಾಯಿತು. ಕ್ರೊಮೋಟೊಗ್ರಾಫ್‌ ಅದರಲ್ಲಿರುವ ಧಾತುಗಳನ್ನು ಬೇರ್ಪಡಿಸಿದರೆ, ಸ್ಪೆಕ್ಟೋಮೀಟರ್‌ ಅವನ್ನು ವಿಶ್ಲೇಷಿಸುತ್ತದೆ. ಮೈಕ್‌ ವಾಟೆನ್‌ ಔಷಧ ಕಂಪನಿಯಿಂದ ತರಿಸಿದ್ದ 'ಸೈಟೊಟೆಕ್' ಅನ್ನು ಕೊಕೋ ಕೋಲದಲ್ಲಿದ್ದ 'ಸೈಟೊಟೆಕ್' ಜೊತೆ ಹೊಂದಿಸಿ ನೋಡಿದ. ಅವು ಸ್ಪಷ್ಟವಾಗಿ ಹೊಂದಾಣಿಕೆ ಆದವು. ಈ ಔಷಧವನ್ನು ನೋವು ಕಾಣಿಸಿಕೊಂಡ ಮೇಲೆ, ಹೆರಿಗೆಯ ಅವಧಿಯಲ್ಲಿ, ಸಂಕೋಚನವನ್ನು ಹೆಚ್ಚು ಮಾಡಲು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಗರ್ಭಿಣಿಗೆ ನೀಡಲಾಗುತ್ತದೆ.

Image
Flavie Martin Photo

ಆದರೆ ಪೊಲೀಸರಿಗೆ ಇಲ್ಲೊಂದು ಸಮಸ್ಯೆ ಇತ್ತು. ಈ 'ಸೈಟೊಟೆಕ್' ಅನ್ನು ಮಾಂಟ್‌ಜಿಂಗನೇ ಆ ಡ್ರಿಂಕ್‌ನಲ್ಲಿ ಬೆರೆಸಿದ್ದಾನೆ ಎಂದು ಋಜುವಾತು ಮಾಡುವುದು ಹೇಗೆ? ಮಿಷೆಲ್‌ ಮಾಡಿರುವ ವಿಡಿಯೊವನ್ನು ಸಾಕ್ಷಿಯೆಂದು ಪರಿಗಣಿಸಲಾಗದು. ಒಂದು ಪಕ್ಷ ಆಪಾದಿತನ ಪರ ವಕೀಲ "ಇದನ್ನೆಲ್ಲ ಸ್ವತಃ ಮಿಷೆಲ್‌ ಮಾಡಿ, ಮಾಂಟ್‌ಜಿಂಗನ ಮೇಲೆ ಅಪಾದನೆ ಬರುವಂತೆ ಏಕೆ ಮಾಡಿರಬಾರದು?” ಎಂದುಬಿಟ್ಟರೆ ಕೇಸು ನಿಲ್ಲುವುದಿಲ್ಲ. ಹಾಗಾಗಿ, ಪೊಲೀಸರೇ ಇನ್ನೊಮ್ಮೆ ಅವರದೇ ಉಸ್ತುವಾರಿಯಲ್ಲಿ ರೆಕಾರ್ಡ್‌ ಮಾಡಲು ನಿರ್ಧರಿಸಿದರು.

"ದೂರುದಾರಳೇ ಕ್ಯಾಮೆರದಲ್ಲಿ ಸೆರೆಹಿಡಿದು, ಅವಳೇ ಮಾದರಿ ಸಂಗ್ರಹಿಸಿ ನಮಗೆ ಕೊಟ್ಟಿದ್ದನ್ನು ನಾವು ನಮ್ಮ ಕಡೆಯಿಂದ ಪರೀಕ್ಷಿಸದೆ ನ್ಯಾಯಾಲಯಕ್ಕೆ ಹೋದಲ್ಲಿ, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳುವುದು ಗ್ಯಾರಂಟಿಯಾಗಿತ್ತು. ಆದ್ದರಿಂದ ನಾವೇ ಪರೀಕ್ಷೆ ಮಾಡಿ ಖಚಿತಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ," ಎಂದು ಪೊಲೀಸ್‌ ಅಧಿಕಾರಿ ಹೇಳಿದರು. ಅಗ್ನಿಶಾಮಕನೊಬ್ಬ ಮಗುವನ್ನು ರಕ್ಷಿಸುತ್ತಿರುವ ಗೊಂಬೆಯೊಂದರಲ್ಲಿ ಕಣ್ಗಾವಲು ಕ್ಯಾಮೆರಾ ಜೋಡಿಸಿ ಅಡುಗೆಮನೆಯಲ್ಲಿ ಇಟ್ಟರು.
ಇದಾದ ಕೆಲವು ದಿವಸಗಳ ನಂತರ ಪೂರ್ವಯೋಜಿತ ಕಾರ್ಯಕ್ರಮದಂತೆ, ಮಿಷೆಲ್ ಮಾಂಟ್‌ಜಿಂಗನನ್ನು ರಾತ್ರಿಯೂಟಕ್ಕೆ ಆಹ್ವಾನಿಸಿದಳು. ಪಕ್ಕದ ಗ್ಯಾರೇಜಿನಲ್ಲಿ ಪೊಲೀಸ್‌ ಅಧಿಕಾರಿ ಕೋಲ್ವಿನ್‌ ಮತ್ತು ಸಾರ್ಜೆಂಟ್‌ ಮೇ ಅವಿತು ಕೂತರು. ಮುಂದಿದ್ದ ಕಂಪ್ಯೂಟರ್‌ ಪರದೆಯ ಮೇಲೆ ಅವರ ಕಣ್ಣುಗಳು ಕೀಲಿಸಿದ್ದವು.

ಮಾಂಟ್‌ಜಿಂಗ್‌ ಅವಳ ಮನೆಗೆ ಬಂದ. ಯಥಾರೀತಿ ಅವನನ್ನು ಡ್ರಿಂಕ್‌ ತಯಾರಿಸಲು ಹೇಳಿ ಮಿಷೆಲ್ ಗ್ರಿಲ್‌ ಚಿಕನ್ ತಯಾರಿಸಲು ಹೋದಳು.‌ ಪೊಲೀಸರಿಗೆ ಕ್ಷಣಗಳು ದಿನಗಳಂತಾಗಿದ್ದವು. ಕುತೂಹಲದಿಂದ ಪರದೆ ನೋಡುತ್ತಿದ್ದರು. ಮಾಂಟ್‌ಜಿಂಗ್‌ ಅಡುಗೆಮನೆಯಲ್ಲಿ ಕೋಕ್‌ ಬಾಟಲನ್ನು ತೆರೆದ. ಅದನ್ನು ಎರಡು ಲೋಟಗಳಿಗೆ ಬಗ್ಗಿಸಿದ. ಆನಂತರ ಅವನ ಜೇಬಿಗೆ ಕೈ ಹಾಕಿದ. ಅಲ್ಲಿಂದ ಚಿಕ್ಕ ಶೀಷೆಯೊಂದನ್ನು ತಗೆದ. ಅದರಲ್ಲಿದ್ದ ಬಿಳಿಯ ಪುಡಿಯಂತಹ ವಸ್ತುವನ್ನು ಒಂದು ಲೋಟದೊಳಕ್ಕೆ ಸುರಿದ.

ಈಗ ಪೊಲೀಸರ ಸರದಿ. ತಕ್ಷಣ ಕಾರ್ಯಪ್ರವೃತ್ತರಾದರು. ಮನೆಯ ಒಳಗೆ ನುಗ್ಗಿದರು. ಮಾಂಟ್‌ಜಿಂಗನ ಜೊತೆಗೆ ಆ ಲೋಟ ಮತ್ತು ಚಿಕ್ಕ ಶೀಷೆಯನ್ನು ವಶಕ್ಕೆ ಪಡೆದರು. ಅವನಿಗೆ ಕ್ಯಾಮೆರಾ ತೋರಿಸಿ, "ನೀನು ಮಾಡಿದ್ದೆಲ್ಲ ಇದರಲ್ಲಿ ದಾಖಲಾಗಿದೆ,” ಎಂದು ಖಚಿತಪಡಿಸಿದರು.
ಇದಾದ ನಂತರ ಅವನ ಕಾರನ್ನು ಪರೀಕ್ಷಿಸಲಾಯಿತು. ಅಲ್ಲಿಯೂ 'ಸೈಟೊಟೆಕ್' ದಾಸ್ತಾನು ಸಿಕ್ಕಿತು. ಈಗ ನಾಲ್ಕೂ ಮಾದರಿಗಳನ್ನು ಮತ್ತೆ ಪರೀಕ್ಷಿಸಲಾಯಿತು. ನಾಲ್ಕೂ ಮಾದರಿಗಳು ಹೋಲಿಕೆಯಾದವು. ಮಾಂಟ್‌ಜಿಂಗನನ್ನು ಪ್ರಶ್ನಿಸಲಾಯಿತು. "ಆ ಭ್ರೂಣವನ್ನು ತೆಗೆದುಹಾಕುವುದು ನನ್ನ ಉದ್ದೇಶವಾಗಿತ್ತು. ಅದು ಒಂದು ಸಣ್ಣ ತಪ್ಪಿನಿಂದಾದದ್ದು. ಅದರ ಹೊಣೆ ನನಗೆ ಬೇಕಿರಲಿಲ್ಲ. ಮುಂದೆಯೂ ಅದು ನನಗೆ ತೊಂದರೆ ತರುತ್ತಿತ್ತು," ಎಂದು ಹೇಳಿದ.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಕೊನೆಗಾದರೂ ಸಿಕ್ಕಿದನೇ ಆ ಅಲೆಮಾರಿ ಹಂತಕ?

ವೈದ್ಯಲೋಕ ನಾಚಿಕೆಯಿಂದ ತಲೆತಗ್ಗಿಸಬೇಕಾದ ಈ ಪ್ರಕರಣ ಸಂಬಂಧ ಮಗುವಿನ ಕೊಲೆಯ ಪ್ರಯತ್ನಕ್ಕಾಗಿ ಅವನ ಮೇಲೆ ಮೊಕದ್ದಮೆ ಹೂಡಲಾಯಿತು. ಇದರಿಂದ ನಾಚಿಕೆಯಿಂದ ಮುದುಡಿಹೋದ ಡಾ.ಜಾನ್‌, ಅಷ್ಟು ಬಾರಿ ಅವಳನ್ನು ನಾನು ಪರೀಕ್ಷಿಸಿದರೂ ನನಗೆ  'ಸೈಟೊಟೆಕ್'ನ ಕುರುಹು ಕಾಣಲಿಲ್ಲ. ಏಕೆಂದರೆ, ಅಷ್ಟೆಲ್ಲ 'ಸೈಟೊಟೆಕ್' ಪ್ರಯೋಗದ ನಂತರವೂ ಅವಳ ಗರ್ಭದಲ್ಲಿದ್ದ ಮಗು ಆತ್ಯಂತ ಆರೋಗ್ಯಪೂರ್ಣವಾಗಿತ್ತು," ಎಂದು ಹೇಳಿದ. ಈ ನಡುವೆ, ವಿಚಾರಣೆಗೆ ಕಾಲ ನಿಗದಿ ಮಾಡಿ ಮಾಂಟ್‌ಜಿಂಗನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ವಿಚಾರಣೆ ಶುರುವಾಗುವುದಕ್ಕೆ ಮುಂಚೆಯೇ, ಅಂದರೆ ಏಳನೇ ತಿಂಗಳಿನಲ್ಲಿ ಮಿಷೆಲ್‌ಗೆ ಹೆರಿಗೆಯಾಯಿತು. ಆದರೆ ಅದು ಮಗು ಉಸಿರು ನಿಲ್ಲಿಸಿತ್ತು. ಅದಕ್ಕೆ 'ಮೆಕ್ಯಾಲ' ಎಂದು ಹೆಸರಿಟ್ಟಳು ಮಿಷೆಲ್‌. ಅವಳ ಕುಟುಂಬದ ಎಲ್ಲರ ಕಣ್ಣೀರಿನ ನಡುವೆ ಅದನ್ನು ಸಂಸ್ಕಾರ ಮಾಡಲಾಯಿತು. ಈ ನಡುವೆ, ಪ್ರಕರಣದ ತನಿಖಾಧಿಕಾರಿ ಮಿಷೆಲ್‌ಳ ಪ್ಲಾಸೆಂಟಾವನ್ನು ಪರೀಕ್ಷೆಗೆ ಕಳುಹಿಸಿದ. ಆದರೆ, ಅಲ್ಲಿಂದ ಬಂದ ವರದಿ ಅಚ್ಚರಿದಾಯಕವಾಗಿತ್ತು; 'ಸೈಟೊಟೆಕ್'ನ ಕುರುಹುಗಳಿರಲಿಲ್ಲ. ಆ ತನಿಖಾಧಿಕಾರಿ ಅದನ್ನೇ ಹೇಳಿದ ಮತ್ತು ಲಿಖಿತವಾಗಿಯೂ ನೀಡಿದ: "ಅವನಿಗೂ ಈ ಮಗು ಬೇಕಿರಲಿಲ್ಲ. ಮದುವೆಯ ಕನಸೇ ಮುರಿದುಬಿದ್ದ ಮೇಲೆ ಮಿಷಲ್‌ಗೆ ಕೂಡ ಈ ಮಗುವನ್ನು ಇಟ್ಟುಕೊಂಡು ಹೆಣಗುವುದು ಬೇಡ ಅನ್ನಿಸಿರಬೇಕು, ಪರಿಣಾಮವಾಗಿ ಮಗು ಹೀಗಾಗಿರಬೇಕು."

ಮಾಂಟ್‌ಜಿಂಗನಿಗೆ ಶಿಕ್ಷೆ ಆಗಬೇಕೆಂದು ಮಿಷೆಲ್ ಮತ್ತು ಕುಟುಂಬ ಬಯಸಿತ್ತು. ಆದರೆ, ವಿಚಾರಣೆ ಎಲ್ಲರ ನಿರೀಕ್ಷೆ ಮೀರಿ ಜಟಿಲವಾಗುತ್ತಿತ್ತು ಮತ್ತು ತಡವಾಗುತ್ತಿತ್ತು. ಇದು ಮಿಷೆಲ್‌ ಮತ್ತು ಕುಟುಂಬದ ಮೇಲೆ ತೀವ್ರ ಒತ್ತಡ ಉಂಟುಮಾಡಿತ್ತು. ಇದನ್ನು ಗಮನಿಸಿದ ಪ್ರಾಸಿಕ್ಯೂಟರ್‌, ಮಿಷೆಲ್ ಅನುಮೋದನೆಯೊಂದಿಗೆ ಒಂದು ಒಪ್ಪಂದಕ್ಕೆ ಬಂದರು. ಇದರ ಪ್ರಕಾರ ನಡೆದ ವಿಚಾರಣೆಯಲ್ಲಿ, ಆಹಾರದ ಕಲಬೆರಕೆ ಮತ್ತು ಕೆಟ್ಟ ನಡವಳಿಕೆಗಳನ್ನು ಮಾತ್ರ ಪರಿಗಣಿಸಲಾಯಿತು. ಇದಕ್ಕಾಗಿ ಮಾಂಟ್‌ಜಿಂಗನಿಗೆ ಐದು ವರ್ಷ ಜೈಲು ಶಿಕ್ಷೆ ಆಯಿತು. ಆದರೆ, ಅವನ ವೈದ್ಯಕೀಯ ಪರವಾನಗಿಯನ್ನು ಶಾಶ್ವತವಾಗಿ ವಜಾ ಮಾಡಲಾಯಿತು. ಅಮೆರಿಕದ ಯಾವುದೇ ಸ್ಥಳದಲ್ಲಿ ಅವನು ವೈದ್ಯನಾಗಿ ವೃತ್ತಿ ಮಾಡುವುದನ್ನು ನಿಷೇಧಿಸಲಾಯಿತು. ಜೊತೆಗೆ, 'ಸೈಟೊಟೆಕ್' ಔಷಧ ಚೀಟಿಯನ್ನು ಭರ್ತಿ ಮಾಡಿದ್ದಕ್ಕಾಗಿ ಟಾಮಿ ಇರ್ವಿನ್‌ಗೆ ಎಚ್ಚರಿಕೆ ನೀಡಲಾಯಿತು.

ಉಪಸಂಹಾರ

ವಿಧಿ ವಿಜ್ಞಾನ ತಜ್ಞ ಮೈಕ್‌ ವಾಟೆನನ ಶ್ರಮ ಇಲ್ಲದೆಹೋಗಿದ್ದರೆ ಇದೂ ಸಾಧ್ಯವಿರಲಿಲ್ಲ ಎಂಬುದು ಎಲ್ಲರ ಮಾತಾಗಿತ್ತು. ಆದರೆ, ಮಿಷೆಲ್‌ ಎಲ್ಲ ಕಳೆದುಕೊಂಡಿದ್ದಳು. ಅವಳು ಮಾಡಿದ್ದ ತಪ್ಪು ಏನೆಂದು ಅವಳಿಗಾಗಲೀ, ಅವಳ ಕುಟುಂಬಕ್ಕಾಗಲೀ ಅಥವಾ ಅವಳ ಸುತ್ತ ಇದ್ದ, ಈ ಎಲ್ಲ ದೃಶ್ಯಾವಳಿಗಳನ್ನು ಕಣ್ಣಾರೆ ನೋಡುತ್ತಿದ್ದ ಜನಕ್ಕಾಗಲೀ ಅರಿವಾಗಿರಲಿಲ್ಲ. ಕೆಲವರು ಚೂರೋ ಪಾರೋ ಸಹಾನುಭೂತಿ ತೋರಿಸಿದ್ದು ಬಿಟ್ಟರೆ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆ ವೈದ್ಯನಿಗೆ ಶಿಕ್ಷೆಯಾಗಿದ್ದು ಸಂಗತಿಯಲ್ಲ. ಮಿಷೆಲಳ ಯಾವ ತಪ್ಪಿಗೆ ಅವಳಿಗೆ ಈ ಶಿಕ್ಷೆಯಾಗಿತ್ತು? ಈ ಪ್ರಶ್ನೆ ನಿಮ್ಮನ್ನೂ ಕಾಡಿದ್ದರೆ ಹೇಳಿ.

ನಿಮಗೆ ಏನು ಅನ್ನಿಸ್ತು?
2 ವೋಟ್