ವಿಧಿ ಮತ್ತು ವಿಜ್ಞಾನ | ಕೊಲೆಯಾದವಳ ಮಗನೊಳಗೇ ಇತ್ತೇ ಕೊಲೆಗಾರನ ಸುಳಿವು?

Vidhi

1988ರ ಜನವರಿ ತಿಂಗಳ ಒಂದು ಬೆಳಗ್ಗೆ ಸ್ಕೌಟ್ ತಂಡವೊಂದು ನದಿ ಕಣಿವೆಯಲ್ಲಿ ಬಿದ್ದಿರುವ ಅಲ್ಯೂಮಿನಿಯಂ ಕ್ಯಾನುಗಳನ್ನು ಸಂಗ್ರಸುತ್ತಿದ್ದಾಗ, ನದಿಯಂಚಿನಲ್ಲಿ ಹಿಮ ಮುಚ್ಚಿದ್ದ ಉಬ್ಬಿದ ಭಾಗವೊಂದು ಅವರ ಗಮನ ಸೆಳೆಯಿತು. ಕುತೂಹಲದಿಂದ ಹತ್ತಿರ ಹೋಗಿ ಪರೀಕ್ಷಿಸಿದಾಗ ಅದು ಮನುಷ್ಯಾಕೃತಿಯನ್ನು ಹೋಲುತ್ತಿತ್ತು. ಹಿಮದಾಚೆಗೆ ಹರಡಿದಂತಿದ್ದ ಕೂದಲು ಕಂಡವು!

ಓಹಿಯೊ ಮಧ್ಯ ಪಶ್ಚಿಮ ಅಮೆರಿಕದ ಒಂದು ರಾಜ್ಯ, ನಗರ ಹಾಗೂ ನದಿಯೊಂದರ ಹೆಸರು ಕೂಡ. ಈ ನಗರ ಮತ್ತು ರಾಜ್ಯಕ್ಕೆ ಈ ಹೆಸರು ಬಂದಿರುವುದೇ ಈ ನದಿಯ ಕಾರಣದಿಂದ. ನದಿಯ ಒಂದು ದಂಡೆಗೆ ಈ ರಾಜ್ಯ ಹಬ್ಬಿದ್ದರೆ, ಅದೇ ನದಿ ದಂಡೆಯಲ್ಲಿ ಓಹಿಯೊ ನಗರ ನೆಲೆಸಿದೆ.

ಎಲ್ಲೆಡೆ ಇರುವಂತೆ ಇಲ್ಲಿಯೂ ಸ್ಕೌಟ್‌ ತಂಡಗಳಿವೆ. ಆಗಾಗ್ಗೆ ಕೆಲವು ತಂಡಗಳು ಸಮಾಜ ಸೇವೆಯಲ್ಲಿ ತೊಡಗುವುದೂ ಉಂಟು. ಅಂಥದ್ದೊಂದು ಓಹಿಯೊ ಗ್ರಾಮಾಂತರದ ಸ್ಕೌಟ್‌ ತಂಡ ನದಿ ಕಣಿವೆಯಲ್ಲಿ ಬಿದ್ದಿರುವ ಅಲ್ಯೂಮಿನಿಯಂ ಕ್ಯಾನುಗಳನ್ನು ಸಂಗ್ರಸುವ ಕಾರ್ಯ ಮಾಡುತ್ತಿತ್ತು. ಅಲ್ಲಿನ ಕಾಡುದಾರಿಗಳ ಇಕ್ಕೆಲಗಳು ಆ ತಂಡದ ಕಾರ್ಯಕ್ಷೇತ್ರಗಳಾಗಿದ್ದವು.

1988ರ ಜನವರಿ ತಿಂಗಳ ಒಂದು ಬೆಳಗ್ಗೆ ಈ ತಂಡ ಕ್ಯಾನುಗಳನ್ನು ಆಯುತ್ತ ರಸ್ತೆಯಲ್ಲಿ ಸಾಗುತ್ತಿದ್ದಾಗ, ಕೆಳಭಾಗದ ನದಿಯ ಅಂಚಿನಲ್ಲಿ ಹಿಮ ಮುಚ್ಚಿದ್ದ ಉಬ್ಬಿದ ಭಾಗವೊಂದು ಅವರ ಗಮನ ಸೆಳೆಯಿತು. ಕುತೂಹಲದಿಂದ ಹತ್ತಿರ ಹೋಗಿ ಪರೀಕ್ಷಿಸಿದಾಗ ಅದು ಮನುಷ್ಯಾಕೃತಿಯನ್ನು ಹೋಲುತ್ತಿತ್ತು. ಹಿಮದಾಚೆಗೆ ಹರಡಿದಂತಿದ್ದ ಕೂದಲು ಕಂಡವು. ಸಂದೇಹದಿಂದ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಹಿಮದ ಗುಪ್ಪೆಯನ್ನು ಸರಿಸಿ ಪರೀಕ್ಷಿಸಿದಾಗ ಅಲ್ಲೊಂದು ಶವ ಬಿದ್ದಿತ್ತು. ಅದು ಪ್ರಾಯದ ಹೆಂಗಸಿನ ಶವವಾಗಿತ್ತು.

ಈಗಾಗಲೇ ಶವದ ಮೇಲೆ ನೀರು ಹರಿದಿದ್ದ ಕಾರಣ ಬೆರಳಚ್ಚು, ರಕ್ತದ ಕಲೆ, ಹತ್ಯೆಗೆ ಬಳಸಿರಬಹುದಾದ ಆಯುಧ ಯಾವೊಂದೂ ಅಲ್ಲಿರಲಿಲ್ಲ. ಇಂಥ ಸಂದಿಗ್ಧದಲ್ಲಿ ಶವವೊಂದನ್ನು ವಶಪಡಿಸಿಕೊಂಡ ಪೊಲೀಸರಿಗೆ ಅವರದೇ ಆದ ಆತಂಕಗಳಿರುತ್ತವೆ.

ಶವಪರಿಕ್ಷೆಯ ವರದಿ ಅವರನ್ನು ತಲುಪುವ ಹೊತ್ತಿಗೆ ಅವರು ಶವದ ಇತ್ಯೋಪರಿಗಳನ್ನು ಕಂಡುಕೊಳ್ಳಬೇಕಿತ್ತು. ಮಾಡಿದ ಪ್ರಯತ್ನಗಳು ಫಲ ನೀಡಿದ್ದವು. ಮೃತಳ ಹೆಸರು ಮಾರ್ಗಿ ಕೋಫೆ, 32 ವರ್ಷ ವಯಸ್ಸಿನ ಈಕೆ ಎರಡು ಮಕ್ಕಳ ಒಂಟಿ ತಾಯಿಯಾಗಿದ್ದಳು. ಹತ್ತು ದಿನಗಳ ಹಿಂದೆ ಇವಳು ನಾಪತ್ತೆಯಾದ ದೂರು ದಾಖಲಾಗಿತ್ತು. ದೇಹ ಸಿಕ್ಕಿದ ಮಾರ್ಗನ್‌ ಪಾರ್ಕ್‌ ಪ್ರದೇಶದ ಒಂದು ಬಾರಿನ ಪಾರ್ಕಿಂಗ್‌ ಲಾಟಿನಲ್ಲಿ ಪೊಲೀಸರು ಇವಳ ಕಾರನ್ನು ಕಂಡರು.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಒಂದು ಗರ್ಭಪಾತದ ಒಳಹೊರಗು; ವೈದ್ಯನೊಬ್ಬನ ವಿಕಾರಗಳ ಕತೆ

ಶವಪರಿಕ್ಷೆಯ ವರದಿಯ ಪ್ರಕಾರ, ಅವಳದೇ ಸ್ಕಾರ್ಫಿನಿಂದ ಕುತ್ತಿಗೆ ಬಿಗಿದು ಕೊಲ್ಲಲಾಗಿತ್ತು. ಕಾಣೆಯಾದ ದಿನವೇ ಶವವಾಗಿದ್ದಳು. ಅವಳ ಬಾಲ್ಯದ ಹೆಸರು ಮಾರ್ಗಿ ರೈಮಿ. ಓಹಿಯೊ ನಗರದ ಹೊರವಲಯದಲ್ಲಿದ್ದ ಬಟ್ಲರ್‌ ಎಂಬ ಊರಿನವಳು. ಆರು ಮಕ್ಕಳ ನಡುವೆ ಒಬ್ಬಳಾಗಿ ಬೆಳೆದಿದ್ದಳು. ಬಾಲ್ಯದಲ್ಲಿ ಅಮ್ಮನೊಂದಿಗೆ ಕೂಡಿ ಬೇಸಾಯದ ಕೆಲಸಗಳನ್ನು ಮಾಡುತ್ತಿದ್ದಳು. ಸಾಕುಪ್ರಾಣಿಗಳ ಪಾಲನೆಗೆ ಅಮ್ಮನೊಂದಿಗೆ ಕೈಜೋಡಿಸುತ್ತಿದ್ದಳು. ಮನೆಯಲ್ಲಿ ಪ್ರೀತಿಯುತ ಧಾರ್ಮಿಕ ವಾತಾವರಣವಿತ್ತು.

ವಯಸ್ಸಿಗೆ ಬಂದಾಗ ಈ ಹುಡುಗಿಗೆ ಎಲ್ಲರಲ್ಲಿರುವಂತೆ ಸ್ವತಂತ್ರವಾಗುವ ಭಾವ ತುಂಬಿ ತುಳುಕುತ್ತಿತ್ತು. ಕ್ರಮೇಣ ದಿನದ ಹೆಚ್ಚು ಅವಧಿಯನ್ನು ಅವಳ ಊರಿನಿಂದ 15 ಮೈಲಿ ದೂರದಲ್ಲಿದ್ದ ಮ್ಯಾನ್ಸ್‌ಫೀಲ್ಡ್‌ ಎಂಬ ಪಟ್ಟಣದಲ್ಲಿ ಕಳೆಯುತ್ತಿದ್ದಳು. ಅಲ್ಲಿ ಕೆಲವು ಅಹಿತಕರ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಳು. ಈ ಅವಧಿಯಲ್ಲಿ ಕೆಲವು ಕಾನೂನುಬಾಹಿರ ಚಟವಟಿಕೆಗಳನ್ನು ಸಹ ಮಾಡುತ್ತಿದ್ದಳು. ಅವು ಬಹುಪಾಲು ಬೀದಿ ಅಪರಾಧಗಳಾಗಿದ್ದವು. ಕೆಳ ದರ್ಜೆಯ ವೇಶ್ಯಾವಾಟಿಕೆ, ಅಮಲು ಪದಾರ್ಥಗಳ ಮಾರಾಟ/ ಸೇವನೆ ಸಹ ಇವುಗಳಲ್ಲಿ ಮಿಳಿತವಾಗಿದ್ದವು. ಅದರೂ ಹೇಗೋ ಬಂಧನಕ್ಕೊಳಗಾಗದೆ ಉಳಿದಿದ್ದಳು.

ಯಾವ ಕಾರಣವೋ ಏನೋ ಕಾಲಾನಂತರದಲ್ಲಿ ಬದುಕನ್ನು ಮಾರ್ಪಾಟು ಮಾಡಿಕೊಂಡಳು. ಈ ನಡುವೆ ಅವಳಿಗೆ ಸ್ಟೀವ್‌ ಕೊಫೆ ಎಂಬ ಪ್ರಿಯತಮ ದೊರಕಿದ್ದೂ ಕಾರಣವಿರಬಹುದು. ನಂತರ ಅವನನ್ನೇ ಮದುವೆಯಾದಳು. ಅವರಿಬ್ಬರಿಗೂ ಒಂದು ಹೆಣ್ಣು ಮಗು ಜನಿಸಿತು. ಅದಕ್ಕೆ ಆಂಗಿ ಎಂದು ಹೆಸರಿಟ್ಟಳು. ಆದರೆ ಇದಾದ ಕೆಲವೇ ಸಮಯದಲ್ಲಿ ಇಬ್ಬರೂ ವಿಚ್ಛೇದನ ಪಡೆದರು.

ನಂತರ ತನ್ನನ್ನು ಮತ್ತು ಮಗುವನ್ನು ಸಾಕಿಕೊಳ್ಳುವ ಹೊಣೆ ಅವಳದಾಗಿತ್ತು. ಜೀವನೋಪಾಯಕ್ಕಾಗಿ ಒಂದು ಹೋಟೆಲಿನಲ್ಲಿ‌ ಸರ್ವರ್ ಕೆಲಸಕ್ಕೆ ಸೇರಿಕೊಂಡಳು. ಈ ನಡುವೆ ಅವಳಿಗೆ ಅವಳ ಕುಟುಂಬದ ಬೆಂಬಲವೂ ಇತ್ತು. ಹಾಗಾಗಿ, ಕಾನೂನು ಅನುಷ್ಠಾನ ಕೋರ್ಸನ್ನು ಸೇರಿಕೊಂಡು ಸರ್ಕಾರಿ ನೌಕರಿಯ ಕನಸಿನಲ್ಲಿದ್ದಳು. ಈ ನಡುವೆ ಇನ್ನೊಬ್ಬನೊಂದಿಗೆ ಸಂಬಂಧ ಬೆಳೆಸಿದ್ದಳು. ಈ ಸಂಬಂಧದಲ್ಲಿ ಅವಳಿಗೆ ಇನ್ನೊಂದು ಗಂಡುಮಗುವಾಯಿತು. ಅದಕ್ಕೆ ಬ್ರಾಂಡನ್‌ ಎಂದು ಹೆಸರಿಟ್ಟಳು.

ಇದಿಷ್ಟು ಪೊಲೀಸರಿಗೆ ಸಿಕ್ಕ ಆಕೆಯ ಜೀವನದ ಮಾಹಿತಿ. ಆದರೆ, ಇಲ್ಲಿಂದ ಮುಂದಿನ ಕತೆ ಒಗಟಾಗತೊಡಗಿತು. ಎರಡನೆಯ ಪ್ರಿಯತಮನನ್ನು ತೊರೆದ ಮೇಲೆ ಇವಳು ಏನು ಮಾಡುತ್ತಿದ್ದಳು? ಜೀವನೋಪಾಯಕ್ಕೆ ಇವಳ ಮುಂದಿದ್ದ ದಾರಿಗಳೇನು? ಈ ದಿಕ್ಕಿನಲ್ಲಿ ಯೋಚಿಸತೊಡಗಿದಾಗ ಪೊಲೀಸರಿಗೆ ಒಂದು ಕ್ಷಣ ಗಾಬರಿಯಾಗಿದ್ದಂತೂ ನಿಜ. ಇವಳೇನಾದರೂ ಮತ್ತೆ ಬೀದಿಗಿಳಿದಿದ್ದಳೇ? ಇಲ್ಲಿ ಬೀದಿಗಿಳಿಯುವುದು ಅನ್ನುವುದರ ಅರ್ಥವೇ ಬೇರೆ. ಒಂದು ಪಕ್ಷ ಹಾಗಾಗಿದ್ದಲ್ಲಿ ಇದೊಂದು ಬಿಡಿಸಲಾಗದ ಕಗ್ಗಂಟಾಗಿಬಿಡುತ್ತದೆ ಎಂದು ಪೊಲೀಸರಿಗೆ ಆತಂಕವಿತ್ತು. ಎಷ್ಟೋ ಮಂದಿ ಅಪರಿಚಿತ ಗಿರಾಕಿಗಳೊಂದಿಗೆ ನಿತ್ಯ ವ್ಯವಹರಿಸುವ ಹೆಣ್ಣೊಬ್ಬಳ ಕೊಲೆಯ ನಂತರ ಯಾರನ್ನು ಮತ್ತು ಎಷ್ಟು ಜನರನ್ನು ಸಂದೇಹಿಸಬಹುದು? ಕಾರಣಗಳಂತೂ ಸಾವಿರ ಇರಬಹುದು. ಯಾವುದರ ಬೆನ್ನು ಹತ್ತುವುದು?

Image
danny lines Photo

ಎರಡು ಮಕ್ಕಳನ್ನು ಕಟ್ಟಿಕೊಂಡು ಬದುಕಲು ತುಂಬಾ ಪ್ರಯಾಸಪಡುತ್ತಿದ್ದ ಇವಳಿಗೆ, ಬೀದಿ ಕಾಯಕ ಇವಳ ಅಗತ್ಯಗಳನ್ನು ಪೂರೈಸಲಾಗದೆ ಹೋಗಿ, ಮತ್ತೆ ಡ್ರಗ್‌ ದಂಧೆಗೇನಾದರೂ ಇಳಿದಿದ್ದಳೇ? ಪೊಲೀಸರಲ್ಲಿ ಹುಟ್ಟಿದ ಈ ಗುಮಾನಿಗೆ ಅವಳ ಸಮೀಪವರ್ತಿಗಳು, “ಹಾಗೇನಿಲ್ಲ, ಈಗವಳು ಅವಳ ಓದು ಮತ್ತು ಮಕ್ಕಳ ಬಗ್ಗೆ ಆಸಕ್ತಳಾಗಿದ್ದಳು. ಹಿಂದಿನ ಅವಳೆಲ್ಲ ತಪ್ಪುಗಳಿಂದ ಹೊರಬಂದಿದ್ದಳು. ಅವಳು ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದಳು,” ಎಂದು ಹೇಳಿದರು.

ಈ ನಡುವೆ ಸಿಕ್ಕ ಮಾಹಿತಿ ಎಂದರೆ, ಅವಳು ತನ್ನ ಭೂತವನ್ನು ಮರೆಯಲು, ಉತ್ತಮ ಬದುಕು ಮತ್ತು ಭವಿಷ್ಯಕ್ಕಾಗಿ ಧರ್ಮವನ್ನು ಬದಲಿಸಿ, ಕ್ರಿಶ್ಚಿಯನ್ ಧರ್ಮ ಸೇರಲು ಬಯಸಿದ್ದಳು ಎಂಬುದು. ಇದು ತನಿಖೆದಾರರ ಸಮಸ್ಯೆಯನ್ನು ಮತ್ತೂ ಹೆಚ್ಚಿಸಿತ್ತು. ತೀರಾ ಭಿನ್ನವಾದ ಇವಳ ಹಿನ್ನೆಲೆ ಒಂದು ಕಡೆಯಾದರೆ, ಈ ಧರ್ಮ ಬದಲಿಸುವ ನಿರ್ಧಾರ ಇನ್ನೊಂದು ಕಡೆಗಿತ್ತು. ಇಲ್ಲಿ ಏನು ಬೇಕಾದರೂ ಸಂಭವಿಸುವ ಸಾಧ್ಯತೆ ಇತ್ತು. ಇಂಥ ಪರಿಸ್ಥಿತಿಯಲ್ಲಿ ತನಿಖೆ ಆರಂಭಿಸುವುದು ಎಲ್ಲಿಂದ?

ಮುಂದುವರಿದ ಮಾಹಿತಿ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದ ತನಿಖೆದಾರರಿಗೆ ಸಿಗುತ್ತಿದ್ದ ಮಾಹಿತಿಗಳೆಲ್ಲ ಅವರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸುವಂತವೇ ಆಗಿದ್ದವು. ಈ ಬಾರಿ ಸಿಕ್ಕ ಮಾಹಿತಿಯ ಪ್ರಕಾರ, ಅವಳು ವಿಚ್ಛೇದನದ ನಂತರ ಬೇರೆ-ಬೇರೆ ಪುರುಷರೊಂದಿಗೆ ನಿರಂತರವಾಗಿ ಡೇಟಿಂಗ್‌ ಮಾಡುತ್ತಿದ್ದಳು. ಇವಳೊಂದಿಗೆ ನಿರಂತರ ಡೇಟಿಂಗ್‌ ಪಟ್ಟಿಯಲ್ಲಿದ್ದವರ ಹೆಸರುಗಳಲ್ಲಿ ಎರಡು ವಿಶೇಷ ಹೆಸರುಗಳಿದ್ದವು. ಈ ಇಬ್ಬರೂ ಮ್ಯಾನ್ಸ್‌ಫೀಲ್ಡ್‌ ಪ್ರಾಂತ್ಯದ ಮುಖ್ಯ ಪೊಲೀಸ್‌ ಅಧಿಕಾರಿಗಳು, ಇಬ್ಬರೂ ವಿವಾಹಿತರು. ಇವರಲ್ಲಿ ಒಬ್ಬ ರಾಬರ್ಟ್‌ ಲೆಮನ್‌, ಅನುಭವಿ ಅಧಿಕಾರಿ. ಈತನನ್ನು ವಿಚಾರಿಸಲಾಗಿ, "ಅವೆಲ್ಲ ಇಲ್ಲಿಗೆ ಒಂದೂವರೆ ವರ್ಷದ ಹಿಂದಿನ ಮಾತುಗಳು. ಅಂದಿನಿಂದ ನನಗೆ ಅವಳೊಂದಿಗೆ ಯಾವುದೇ ಸಂಪರ್ಕವಿಲ್ಲ," ಎಂದು ಖಡಾಖಂಡಿತವಾಗಿ ಹೇಳಿದ. ಇನ್ನೊಬ್ಬ ಅಧಿಕಾರಿ ಲೆಫ್ಟಿನೆಂಟ್‌ ಚಾರ್ಲ್ಸ್‌ ಓಸ್ವಾಲ್ಟ್.‌ ಹೆಂಡತಿಯೊಂದಿಗೆ ಪ್ರೀತಿಯಿಂದ ಇರುವವನು ಎಂಬುದು ಇವನ ಹಿನ್ನೆಲೆ. ಆದರೆ, ಸ್ವಲ್ಪ ಸ್ಫರ್ಧಾ ಮನೋಭಾವದ ಕಿರಿಕ್‌ ಮನುಷ್ಯ ಎಂಬುದು ಇವನನ್ನು ಬಲ್ಲವರ ಟಿಪ್ಪಣಿ. ಇವನನ್ನು ವಿಚಾರಿಸಿದಾಗ, "ಇಲ್ಲ, ಅಂದು ನಾನು ಡ್ರಗ್‌ ಮಾಫಿಯಾಗೆ ಸಂಬಂಧಿಸಿದ ತನಿಖೆಯ ಮೇಲಿದ್ದೆ,” ಎಂದು ಹೇಳಿ, ಅವನ ಅಧಿಕೃತ ಪೊಲೀಸ್‌ ವರದಿಯನ್ನು ತೋರಿಸಿದ. ಇಲ್ಲಿಗೆ ಪೊಲೀಸರ ಮುಂದಿದ್ದ ಎಲ್ಲ ಸಾಧ್ಯತೆಗಳೂ ಮುಗಿದ್ದಿದ್ದವು.

"ನಾವೇನು ಮಾಡುವುದು ಹೇಳಿ...? ಬೆರಳಚ್ಚುಗಳಿಲ್ಲ, ಆಯುಧವಿಲ್ಲ, ವೀರ್ಯವಿಲ್ಲ, ರಕ್ತವಿಲ್ಲ, ಯಾರ ಕಡೆಗಾದರೂ ಬೆರಳು ಮಾಡಬಲ್ಲ ಒಂದೇ ಒಂದು ಕುರುಹಿಲ್ಲ. ಹೀಗಾಗಿ ನಾವು ಸೂಚನೆ ರಹಿತರಾಗಿ ದಿಕ್ಕುಗೆಟ್ಟಿದ್ದೇವೆ," ಎಂದು ತನಿಖಾಧಿಕಾರಿ ಆಂಟೋನಿ ತಂಬಾನ್ಸ್ಕೋ ಹೇಳಿದ. ಅಲ್ಲಿಗೆ ಪ್ರಕರಣ ನಿಧಾನವಾಗಿ ಶೀತಪೆಟ್ಟಿಗೆ ಸೇರಲು ಅರಂಭಿಸಿತು. ಇನ್ನೇನು ಅದು ಬಾಗಿಲು ಮುಚ್ಚಬೇಕು ಎನ್ನುವಷ್ಟರಲ್ಲಿ ಇಲಾಖೆಯ ಪತ್ತೇದಾರ ಡೇವಿಡ್‌ ಮೆಸ್ಮೋರ್‌ ಅದನ್ನು ತಡೆದ.

ಕೇಸಿನ ಹಿಂದೆ ಬಿದ್ದಿದ್ದ ಮೆಸ್ಮೋರ್‌, ಕೋಫೆಯ ಕೊನೆಯ ಜೀವಂತ ಕ್ಷಣಗಳ ಹುಡುಕಾಟದಲ್ಲಿದ್ದಾಗ ಅವನಿಗೆ ಸಿಕ್ಕಿದ ಮಾಹಿತಿ ಪ್ರಕಾರ, ಅವಳು ಜೀವಂತವಾಗಿ ಕೊನೆಗೆ ಕಂಡಿದ್ದು ರಾತ್ರಿ ಒಂದು ಕೆಫೆಯಲ್ಲಿ. ಇಲ್ಲಿ ಇವಳು ಒಂದು ಪ್ರತ್ಯೇಕ ಟೇಬಲ್‌ನಲ್ಲಿ ಕುಳಿತು ತನ್ನ ಪಠ್ಯಗಳನ್ನು ನೋಡುತ್ತ ಊಟ ಮಾಡುತ್ತಿದ್ದಳು ಮತ್ತಿತರೆ ಮಾಹಿತಿಗಳು ಸಿಕ್ಕವು. ಇವನ್ನು ಆಧರಿಸಿ ಆ ಕೆಫೆಯ ಮಾಲೀಕನನ್ನು ಕೇಳಿದಾಗ ಅವನು ಅದನ್ನು ದೃಢಪಡಿಸಿದ. ಆದರೆ ಬೇರೆ ಮಾಹಿತಿಗಳನ್ನು ನೀಡಲಿಲ್ಲ. ಆಗ ಪತ್ತೇದಾರ, "ಲೆಫ್ಟಿನೆಂಟ್‌ ಓಸ್ವಾಲ್ಟ್ ಆಗ ಅವಳ ಜೊತೆಗಿದ್ದರೇ?” ಎಂದು ಪ್ರಶ್ನಿಸಿದ. ಅದಕ್ಕೆ ಉತ್ತರಿಸುತ್ತ, "ಇದ್ದರು, ಅದರೆ ಅವಳ ಜೊತೆಯಲ್ಲಿ ಬಂದಿರಲಿಲ್ಲ ಮತ್ತು ಕೂತಿರಲಿಲ್ಲ. ಆದರೆ ಇಬ್ಬರೂ ಒಬ್ಬರಿಗೊಬ್ಬರು ವಿಶ್‌ ಮಾಡಿದರು. ನಂತರ ಇಬ್ಬರೂ ಹಾಯ್‌… ಹಾಯ್‌… ಮಾಡಿದರು," ಎಂದು ಹೋಟೆಲ್‌ ಮಾಲೀಕ ಹೇಳಿದ. ನಂತರ ಕೆಲವು ಸಂಗತಿಗಳು ಅವನಿಂದ ಹೊರಬಂದವು.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಕಾವಳ ಕವಿದ ಕಗ್ಗತ್ತಲೆಯಲ್ಲಿ ರೈಲು ಕೆಡವಿದವರಾರು?

ಈ ವಿಷಯವನ್ನು ಓಸ್ವಾಲ್ಟ್ ಬಳಿ ಪ್ರಸ್ತಾಪಿಸಿದಾಗ ಅವನು ಅದಕ್ಕೆ ಉತ್ತರಿಸಲು ನಿರಾಕರಿಸಿದ. ಮಾರ್ಗಿಯ ಮಕ್ಕಳ ಹೊಣೆ ಹೊತ್ತಿದ್ದ ಅವಳ ಅಪ್ಪ-ಅಮ್ಮಂದಿರ ನೋವು ಅನೂಹ್ಯವಾಗಿತ್ತು. ನಿತ್ಯ ಅವಳ ಭಾವಚಿತ್ರದ ಮುಂದೆ ರೋಧಿಸುವುದನ್ನು ಕಂಡ ಯಾರಿಗಾದರೂ ಕರುಳು ಕಿತ್ತು ಬರುತ್ತಿತ್ತು. ಅದು ತನಿಖಾ ತಂಡದ ಗಮನಕ್ಕೂ ಬಂದಿತ್ತು. ಆದರೆ, ಮಾರ್ಗಿಯ ಕೊಲೆಯ ರಹಸ್ಯ ಅವಳ ಮಗನಲ್ಲೇ ಹುದುಗಿದೆ ಎಂಬುದನ್ನು ಮಾತ್ರ ಆ ಕ್ಷಣಕ್ಕೆ ಅವರು ಊಹಿಸದಾದರು.

ಈ ಎಲ್ಲ ಹಿನ್ನೆಲೆಯಲ್ಲಿ ತನಿಖಾ ತಂಡ ನಾನಾ ಆಯಾಮಗಳಿಂದ ಕೊಲೆಯ ಮೂಲ ತಲುಪಲು ಪ್ರಯತ್ನಿಸಿತು. ಒಮ್ಮೆ ಓಸ್ವಾಲ್ಟನ ಸ್ಟೇ಼ಷನ್ನಿನಲ್ಲಿದ್ದ ಇನ್ನೊಬ್ಬ ಅಧಿಕಾರಿ ಲೆಪ್ಟಿನೆಂಟ್‌ ಜಾನ್‌ ವೆಂಡ್ಲಿಂಗ್‌ ಈ ತನಿಖಾ ತಂಡ ಜೊತೆ ಮಾತನಾಡುತ್ತ, ಮಾರ್ಗಿ ಕೊಲೆಯಾದ ದಿನದ ಒಂದು ಸಂಶಯಾಸ್ಪದ ಘಟನೆಯನ್ನು ಹೇಳಿದ. "ಅಂದು ರಾತ್ರಿ ಓಸ್ವಾಲ್ಟ್‌ ಸ್ಟೇಷನ್ನಿನಿಂದ ಸ್ವಲ್ಪ ದೂರದಲ್ಲಿ ಮಾರ್ಗಿಗೆ ಅಂಟಿದಂತೆ ನಿಂತಿದ್ದ, ಆಗ ಸಿವಿಲ್ ಉಡುಗೆಯಲ್ಲಿದ್ದ. ಆ ಸಂದರ್ಭಕ್ಕೆ ಸರಿಹೊಂದದ ಒಂದು ದಪ್ಪನೆಯ ಜರ್ಕಿನ್‌ ತೊಟ್ಟಿದ್ದ. ನಾನು ಅದನ್ನು ಕಂಡರೂ ಏನೂ ಮಾಡಲಾರದವನಾಗಿದ್ದೆ. ಹಾಗಾಗಿ, ಕಾಣದವನಂತೆ ಹಿಂದಿನ ಬಾಗಿಲಿನಿಂದ ಸ್ಟೇಶನ್‌ ಒಳಗೆ ಹೋದೆ,” ಎಂದು ಹೇಳಿದ.

ಇಲ್ಲಿಂದ, "ಕೊಲೆಯಾದ ರಾತ್ರಿ ನಾನು ಡ್ಯೂಟಿಯ ಮೇಲಿದ್ದೆ,” ಎಂದು ಓಸ್ವಾಲ್ಟ್ ನೀಡಿದ್ದ ಹೇಳಿಕೆಯ ಮೇಲೆ ತನಿಖಾ ತಂಡಕ್ಕೆ ಸಹಜವಾಗಿಯೇ ಸಂದೇಹ ಹುಟ್ಟಿಕೊಂಡಿತ್ತು. ಆದರೆ, ಈ ಸಂದೇಹದ ಆಧಾರದ ಮೇಲೆ ತನ್ನದೇ ಇಲಾಖೆಯ ಮೇಲಾಧಿಕಾರಿಯನ್ನು ವಿಚಾರಣೆಗೆ ಒಳಪಡಿಸುವುದಾಗಲೀ, ಬಂಧಿಸುವುದಾಗಲೀ ಅಸಾಧ್ಯವಾದ ಕೆಲಸವಾಗಿತ್ತು. ಆದರೆ, ತನಿಖಾಧಿಕಾರಿಗಳ ಮುಂದೆ ಇನ್ನೂ ಒಂದು ನಿರೀಕ್ಷೆ ಇತ್ತು. ವಿಧಿವಿಜ್ಞಾನ ಪರೀಕ್ಷೆಗೆ ಹೋಗಿದ್ದ ಮಾರ್ಗಿಯ ಚಳಿ ನಿರೋಧಕ ಕಾಲುಚೀಲಗಳು, ಒಳಉಡುಪುಗಳು, ಮೇಲಂಗಿ, ಅದರ ಮೇಲೆ ತೊಟ್ಟಿದ್ದ ದಪ್ಪ ಕೋಟಿನಂತಹ ಉಡುಪುಗಳ ವರದಿ ಇನ್ನೂ ಬರಬೇಕಿತ್ತು. ಅದು ಬಾರದ ಹೊರತು ನಿರ್ಣಯಕ್ಕೆ ಬರುವುದು ಕಷ್ಟವಾಗಿತ್ತು.

ಸುಮಾರು ದಿನ ನೀರಿನಲ್ಲಿ ನೆನೆದಿದ್ದ ಆ ಉಡುಪುಗಳೆಲ್ಲ ಪೂರ್ತಿಯಾಗಿ ಒಣಗಿಸಿದ ನಂತರ ಅವುಗಳ ಮೇಲೆ ಯಾವುದಾದರೂ ಅನ್ಯ ವಸ್ತು ಅಂಟಿಕೊಂಡಿದ್ದ ಪಕ್ಷದಲ್ಲಿ ಅವಾಗಿಯೇ ಕೆಳಗಿನ ಹಾಳೆಯ ಮೇಲೆ ಬೀಳುತ್ತವೆ. ನಂತರ ಬಟ್ಟೆಗಳನ್ನು ಅದೇ ಸ್ಥಿತಿಯಲ್ಲಿ ಬಾಚಣಿಗೆಯಂತಹ ವಸ್ತುವಿನಿಂದ ಬಾಚಿದಾಗ ಇನ್ನಾವುದಾದರೂ ವಸ್ತುಗಳು, ದಾರ, ನೂಲು, ಕೂದಲುಗಳಿದ್ದಲ್ಲಿ ಉದುರಿಬೀಳುತ್ತವೆ.

ಅವಳ ಬಟ್ಟೆಗಳನ್ನು ಈ ಚಿಕಿತ್ಸಾ ಕ್ರಮಕ್ಕೆ ಒಳಪಡಿಸಿದಾಗ ಒಂದಷ್ಟು ಕೂದಲ ತುಂಡುಗಳು ಮತ್ತು ಕೆಲವು ನೂಲಿನ ಎಳೆಗಳು ಉದುರಿದವು. ಎರಡೂ ಕೆಂಪು ಬಣ್ಣದವಾಗಿದ್ದವು. ಇಂಚಿನ ನಾಲ್ಕನೇ ಒಂದು ಭಾಗವಿದ್ದ ಇವು ಕೂದಲಿನ ಗಾತ್ರ ಇದ್ದವು. ಕೂದಲುಗಳಲ್ಲಿ ಅಂತಹ ವ್ಯತ್ಯಾಸಗಳು ಕಾಣಲಿಲ್ಲ. ಬರಿಗಣ್ಣಿನ ನೋಟಕ್ಕೆ 'ಸೇಮ್‌ ಟು ಸೇಮ್‌' ಎನ್ನುವಂತಿದ್ದ ಆ ನೂಲಿನ ಎಳೆಗಳು ಸೂಕ್ಷ್ಮದರ್ಶಕದ ಅಡಿಗೆ ಹೋಗುತ್ತಿದ್ದಂತೆಯೇ ತಮ್ಮ ನಿಜ ರೂಪ ಬಿಚ್ಚಿದವು. ಅವಳ ಕೋಟು ಮತ್ತು ಕಾಲುಚೀಲಗಳಿಗೆ ಅಂಟಿದ್ದ ನೂಲುಗಳು ವಾಸ್ತವದಲ್ಲಿ ತ್ರಿಕೋನಾಕಾದಲ್ಲಿದ್ದವು. ಅವುಗಳ ಒಂದು ಮಗ್ಗುಲಿನಲ್ಲಿ ಗಾಢ ಕೆಂಪು ಗೆರೆಯೊಂದು ನೂಲಿನ ಉದ್ದಕ್ಕೂ ಹರಿದಿತ್ತು. ಇಂತಹ ನೂಲಿನಿಂದ ಮಾಡಿದ ನೆಲಹಾಸುಗಳನ್ನು ಸಾಮಾನ್ಯವಾಗಿ ಹೆಚ್ಚು ಜನರ ಓಡಾಟ, ತುಳಿದಾಟಗಳಿರುವ ಜಾಗಗಳಲ್ಲಿ ಹಾಸಲು ಬಳಸುತ್ತಾರೆ. ಉದಾಹರಣೆಗೆ, ಹೋಟೆಲಿನ ಪ್ರವೇಶದ್ವಾರ, ಕಾರುಗಳ ನೆಲಭಾಗ ಇಂಥ ಕಡೆ - ಕೊಳಕನ್ನು ಮಾರೆಮಾಚಿ ಸ್ವಚ್ಚವಾಗಿ ಕಾಣುವಂತೆ ಮಾಡಬೇಕಾದ ಜಾಗಗಳಲ್ಲಿ. ಅದು ಸರಿ, ಇವು ಬಂದಿರುವುದಾದರೂ ಎಲ್ಲಿಂದ? ಈ ಮಾರ್ಗಿ ಎನ್ನುವ ಹೆಂಗಸು ಅಂದು ಯಾವ್ಯಾವ ಜಾಗಗಳಲ್ಲಿ ಓಡಾಡಿರಬಹುದು? ಅಂಥ ಯಾವ-ಯಾವ ಜಾಗದಲ್ಲಿ ಇಂಥ ಕಾರ್ಪೆಟ್‌ ಹಾಕಿರಬಹುದು?

Image

ಆದರೆ, ವಿಧಿವಿಜ್ಞಾನ ತಜ್ಞ ಟೋನಿ ಟಾಂಬಾಸ್ಕೋ ಅಲ್ಲಿಗೇ ಸುಮ್ಮನಾಗಲಿಲ್ಲ. ಮಾರ್ಗಿಯ ಕೊನೆಯ ದಿನದ ಓಡಾಟಗಳ ಬಗ್ಗೆ ಪೊಲೀಸರು ಮಾಡಿದ್ದ ದಾಖಲೆಗಳನ್ನು ಆಧರಿಸಿ, ಅವಳು ಎಲ್ಲೆಲ್ಲಿ ಓಡಾಡಿದ್ದಳೋ ಆ ಎಲ್ಲ ಸ್ಥಳಗಳಲ್ಲಿದ್ದ ಕಾರ್ಪೆಟ್‌ಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ. ಅವನಿಗೆ ಸಂದೇಹ ಇದ್ದದ್ದು ಮಾರ್ಗಿಯ ಅಪ್ಪನ ಮನೆಯ ಕಾರ್ಪೆಟ್‌ ಮೇಲೆ.

ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ಇಂಥದ್ದೇ ಕಾರ್ಪೆಟ್‌ ಹಾಸಿರುತ್ತಾರೆ. ಮಾರ್ಗಿಯ ತವರುಮನೆಯಲ್ಲೂ ಇಂಥದ್ದೇ ಇತ್ತು. ಟಾಂಬಾಸ್ಕೋ ಅಲ್ಲಿಂದಲೂ ಮಾದರಿ ಸಂಗ್ರಹಿಸಿದ. ಸೂಕ್ಷ್ಮ ದರ್ಶಕದಡಿಯಲ್ಲಿ ಎರಡನ್ನೂ ಪರೀಕ್ಷಿಸಿದ. ಇಲ್ಲ... ಹೊಂದಲಿಲ್ಲ.

ಟಾಂಬಾಸ್ಕೋ ನಿರಾಶನಾದ, ಜೊತೆಜೊತೆಗೇ ಉತ್ಸಾಹಿ ಸಹ. ಹಾಗಾದರೆ ಇದು ಎಲ್ಲಿಯದು? ಇನ್ನೊಂದು ಸಂದೇಹ ಬಾಕಿ ಉಳಿದಿರುವುದು ಓಸ್ವಾಲ್ಟನ ಪೊಲೀಸ್‌ ವಾಹನ! ಆದರೆ, ಅತಿ ಹೆಚ್ಚು ಬಳಕೆಯ ಕಾರಣ ಪೊಲೀಸ್‌ ವಾಹನಗಳಿಗೆ ಸಾಮಾನ್ಯವಾಗಿ ರಬ್ಬರ್‌ ನೆಲಹಾಸುಗಳನ್ನು ಬಳಸಲಾಗುತ್ತದೆ.

ಪೊಲೀಸ್ ದಾಖಲೆಗಳ ಪ್ರಕಾರ, ಮಾರ್ಗಿ ಕೊಲೆಯಾದ ದಿನ ಓಸ್ವಾಲ್ಟ್ ಆ ಪ್ರದೇಶದ 'ವಾಚ್‌ ಕಮ್ಯಾಂಡರ್' ಆಗಿದ್ದ. ಈ ವಾಚ್‌ ಕಮ್ಯಾಂಡರ್‌ಗಳ ವಾಹನಗಳು ಇತರೆ ಪೊಲೀಸ್‌ ವಾಹನಗಳಿಗಿಂತ ಭಿನ್ನವಾಗಿರುತ್ತವೆ. ನಿರ್ದಿಷ್ಟವಾಗಿ ಓಸ್ವಾಲ್ಟ್ ಅಂದು ಬಳಸಿದ್ದ ಕಾರಿನ ವಿಷಯಕ್ಕೆ ಬರುವುದಾದರೆ, ಅದು ವಿಶೇಷವಾದ ಕಾರು. ಇದನ್ನು ನೌಕಾಪಡೆಯ ಹರಾಜಿನಲ್ಲಿ ಕೊಳ್ಳಲಾಗಿತ್ತು. ಉನ್ನತ ದರ್ಜೆಯ ಅಧಿಕಾರಿಗಳಿಗೆ ಕೊಡುವ ಕಾರು.

ಟಾಂಬಾಸ್ಕೋ ಹೇಗೋ ಮಾಡಿ ಆ ಕೆಂಪು ಬಣ್ಣದ ಕಾರಿನಿಂದ ಕೆಲವು ಎಳೆಗಳನ್ನು ಸಂಗ್ರಹಿಸಿದ. ಅವೂ ಮಾರ್ಗಿಯ ತವರುಮನೆಯ ಕಾರ್ಪೆಟ್‌ ಎಳೆಗಳಂತೆಯೇ ಇದ್ದವು. ಆದರೆ, ಅವನ್ನು ಟಾಂಬಾಸ್ಕೋ ಸೂಕ್ಷ್ಮದರ್ಶಕದ ಅಡಿಯಲ್ಲಿ ಇಟ್ಟಾಗ ಅವು ಹೇಳಿದ ಕತೆಯೇ ಬೇರೆ. ಅವು ನಿಖರವಾಗಿ ಹೊಂದುತ್ತಿದ್ದವು! ಅವುಗಳ ತ್ರಿಕೋನದ ಗಾತ್ರ, ಬಣ್ಣ, ಎಲ್ಲಕ್ಕಿಂತ ಮಿಗಿಲಾಗಿ ಒಂದು ಮುಖದಲ್ಲಿ ಎಳೆಯುದ್ದಕ್ಕೂ ಹರಿದಿದ್ದ ಕಡುಗೆಂಪು ಗೆರೆ. ಅಂತಿಮವಾಗಿ ಎರಡೂ ಎಳೆಗಳು  ರಸಾಯನಿಕ ತಜ್ಞನಲ್ಲಿಗೆ ಹೋದವು. ಅವನು ತನ್ನ ವರದಿಯಲ್ಲಿ ಎರಡೂ ಮಾದರಿಗಳನ್ನು ಒಂದೇ ರಸಾಯನಿಕ ಮಿಶ್ರಣದಿಂದ ಸಂಸ್ಕರಿಸಲಾಗಿದೆ ಎಂದು ಹೇಳಿದ.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಜೀನ್ಸ್‌ ಪ್ಯಾಂಟ್‌ ಹೇಳಿದ ರಹಸ್ಯ ಮತ್ತು ಇಪ್ಪತ್ತು ವರ್ಷಗಳ ಪರದಾಟ

ಸರಿ, ಮುಂದೆ? ಒಂದು ನೂಲಿನ ತುಂಡು ಹೊಂದಾಣಿಕೆ ಆಗಿದೆ, ಅಷ್ಟೇ. ಅದೇನು ಬೆರಳಚ್ಚಾಗಲೀ, ಡಿಎನ್‌ಎ ಆಗಲೀ ಅಲ್ಲ. ಅಂತಹ ಕಾರ್ಪೆಟ್‌ ಜಗತ್ತಿನಲ್ಲಿ ಇದೊಂದೇ ಇಲ್ಲ. ಇನ್ನೆಷ್ಟು ಸಾವಿರ ಕಾರುಗಳಲ್ಲಿ ಇವೆಯೋ? ಈ ಆಧಾರದ ಮೇಲೆ ಗುರುತರವಾದ ಏನನ್ನಾದರೂ ಮಾಡುವ ಧೈರ್ಯ ಯಾರಿಗೆ ತಾನೇ ಬಂದೀತು? ಇದೊಂದು ಸಾಂದರ್ಭಿಕ ಪುರಾವೆ. ಈ ಪುರಾವೆಗಳನ್ನೆಲ್ಲ ಕಣ್ಣಾರೆ ನೋಡುತ್ತಿರುವ ತನಿಖೆದಾರರಿಗೆ ಅನ್ನಿಸುತ್ತಿದೆ ಅವನೇ ಎಂದು. ಆದರೆ, ಅವನನ್ನು ಮುಟ್ಟಲು ಇನ್ನೂ ಪ್ರಬಲ ಸಾಕ್ಷ್ಯಗಳು ಬೇಕು.

ಎಲ್ಲಕ್ಕಿಂತ ಮುಖ್ಯ - ಕೊಲೆಯ ಉದ್ದೇಶ. ಅವನೇ ಕೊಂದಿರಲಿ, ಇನ್ನೊಬ್ಬನಿರಲಿ, ಕೊಲೆಗೊಂದು ಕಾರಣ ಇರುತ್ತದೆ. ಸಾಮಾನ್ಯವಾಗಿ ಪ್ರಬಲ ಕಾರಣ. ಇಲ್ಲಿ ಓಸ್ವಾಲ್ಟ್‌ಗೆ ಅವಳೊಂದಿಗೆ ಒಪ್ಪಿತ ಲೈಂಗಿಕ ಸಂಬಂಧವಿತ್ತು, ಸರಿ. ಬಲಾತ್ಕಾರ ನಡೆದಿಲ್ಲ, ಸರಿ. ಮತ್ತೆ ಇನ್ಯಾವ ಉದ್ದೇಶಕ್ಕಾಗಿ ಮಾರ್ಗಿಯನ್ನು ಕೊಂದಿರಬಹುದು? ಉತ್ತರ: ಶೂನ್ಯ.

ಇವೆಲ್ಲ ನಡೆಯುವ ಹೊತ್ತಿನಲ್ಲಿ ತನಿಖಾಧಿಕಾರಿಗಳ ಗಮನ ಮಾರ್ಗಿಯ ವಿವಾಹೇತರ ಸಂಬಂಧದಿಂದ ಹುಟ್ಟಿದ ಎರಡನೇ ಮಗ ಬ್ರಾಂಡನ್‌ ಕಡೆಗೆ ಹೋಯಿತು. ಅಮೆರಿಕದ 'ಸಾಮಾಜಿಕ ಸೇವೆಗಳು' ವಿಭಾಗವು ಅಲ್ಲಿನ ಕಾನೂನಿನ ಪ್ರಕಾರ ತಂದೆಯ ಹೆಸರನ್ನು ಮಗುವಿನ ಜನ್ಮದಾಖಲೆಯಲ್ಲಿ ಸೇರಿಸಬೇಕು. ಅವರು ಕೇಳಿದರು. ಆದರೆ ಇವಳು, "ಮಗುವಿನ ತಂದೆಯನ್ನು ನಾನು ಗುರುತಿಸಲಾರೆ. ಇದು ಬಲಾತ್ಕಾರದ ಬಸಿರು,” ಎಂದು ಬಸಿರು ದಾಖಲಾತಿ ಸಮಯದಲ್ಲಿಯೇ ಹೇಳಿದ್ದಳು. ಆದರೆ, ಇವಳು ಮತ್ತೆ ಕಾಲೇಜಿಗೆ ಸೇರಿದಾಗ ಮಕ್ಕಳ ನಿರ್ವಹಣೆಗೆ ಸರ್ಕಾರದ ಸಹಾಯಧನ ಪಡೆದಿದ್ದಳೇ, ಇಲ್ಲವೇ?

ಹಾಗೆ, ಒಂದು ಹೆಣ್ಣು ಒಂಟಿ ತಾಯಿಯಾಗಿದ್ದು, ಶಿಕ್ಷಣವನ್ನು ಮುಂದುವರಿಸಲು ಬಯಸಿದಲ್ಲಿ ಇರುವ ಮಕ್ಕಳ ಪೋಷಣೆಗೆ ಸರ್ಕಾರದ ಸಹಾಯಧನ ಪಡೆಯಬಹುದು. ಆದರೆ, ಅಲ್ಲಿ ಮಕ್ಕಳ ತಂದೆಯ ಹೆಸರನ್ನು ನಮೂದಿಸುವುದು ಕಡ್ಡಾಯ. ಒಂದು ಪಕ್ಷ ಮಾರ್ಗಿ ಹೇಳಿದಂತೆ ಅದು ಬಲಾತ್ಕಾರದಿಂದಾದ ಮಗುವಾಗಿದ್ದಲ್ಲಿ, ಬಲಾತ್ಕಾರದ ದಾಖಲೆಗಳು ಇರಬೇಕು. ಅಂದರೆ, ಕನಿಷ್ಠಪಕ್ಷ ಅದು ಆ ಪ್ರದೇಶದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವ ಪ್ರತಿ ಇರಬೇಕು. ಇವಳು ಯಾವುದನ್ನು ಕೊಟ್ಟಿದ್ದಾಳೆ?

ತನಿಖೆ ಆರಂಭಿಸಿದ ಆಧಿಕಾರಿಗಳಿಗೆ ವೇದ್ಯವಾದ ಸಂಗತಿ ಎಂದರೆ; ಇವಳು ಸಹಾಯಧನಕ್ಕೆ ಅರ್ಜಿ ಹಾಕಿದಾಗ ನಡೆದ ಸಮಾಲೋಚನೆಯಲ್ಲಿ ಸಂಬಂಧಿಸಿದ ಅಧಿಕಾರಿ ಅವಳ ದಾಖಲೆರಹಿತ ಸುಳ್ಳನ್ನು ನಿರಾಕರಿಸುತ್ತ, "ನಿಜ ಹೇಳು; ಆ ಮಗುವಿನ ತಂದೆ ಯಾರು?" ಎಂದು ಕೇಳಿದಾಗ ಅವಳು, "ಚಕ್‌ ಓಸ್ವಾಲ್ಟ್,” ಎಂದು ದಾಖಲಿಸಿದ್ದಳು.

Image

ಇದು ತನಿಖೆದಾರ ಅಧಿಕಾರಿಗಳಿಗೆ ಅಗ್ನಿಪರೀಕ್ಷೆಯ ಹೊತ್ತು. ಏಕೆಂದರೆ, ಈ ಚಕ್‌ ಓಸ್ವಾಲ್ಟ್ ಬೇರಾರೂ ಅಲ್ಲ - ಲೆಫ್ಟಿನೆಂಟ್‌ ಚಾರ್ಲ್ಸ್‌ ಓಸ್ವಾಲ್ಟ್. ಇದು ಅವನ ನಿಕ್‌ ನೇಮ್. ಇವನಿಗೆ ಮದುವೆಯಾಗಿದೆ, ಮಕ್ಕಳಿದ್ದಾರೆ. ಇವನ ಮನೆಮಂದಿಗೆ ಹೊರ ಸಂಬಂಧದಲ್ಲಿ ಇವನಿಗೆ ಇನ್ನೊಂದು ಮಗು ಹುಟ್ಟಿದೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಇಂದಲ್ಲ ನಾಳೆ ತಿಳಿದೇ ತೀರುತ್ತದೆ. ಏಕೆಂದರೆ, ಮಾರ್ಗಿ ಮಗುವಿನ ನಿರ್ವಹಣಾ ವೆಚ್ಚಕ್ಕಾಗಿ ಇವನ ಮುಂದೆ ಬೇಡಿಕೆ ಇಟ್ಟಿದ್ದಾಳೆ.

ಮುಂದೆ? ಅವನನ್ನು ಪಿತೃತ್ವ ನಿರೂಪಣೆಗಾಗಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಯಿತು; ಜೊತೆಗೆ ಬ್ರಾಂಡನ್‌ನನ್ನು ಕೂಡ. ಹೌದು, ಬ್ರಾಂಡನ್‌ ಓಸ್ವಾಲ್ಟನ ಮಗ. ಅದೇನೋ ಸರಿ, ಆದರೆ ಇದು ಒಪ್ಪಿತ ಸಂಬಂಧದ ಕೂಸೇ ಅಥವಾ ಬಲಾತ್ಕಾರದ ಶಿಶುವೇ? ಇರಲಿ ಬಿಡಿ, ಆಮೇಲೆ ಮಾತಾಡೋಣ.

ಓಸ್ವಾಲ್ಟ್ ಮೇಲೆ ಮೊಕದ್ದಮೆ ಹೂಡಲಾಯಿತು. ಪಿತೃತ್ವದ ಮೊಕದ್ದಮೆ ಅಲ್ಲ, ಕೊಲೆ ಮೊಕದ್ದಮೆ. ವಿಚಾರಣೆ ಆರಂಭವಾದಾಗ ಓಸ್ವಾಲ್ಟ್ ಧಿಮಾಕಿನಲ್ಲಿಯೇ ಇದ್ದ. ಈ ಕೊಲೆಯನ್ನು ರುಜುವಾತು ಮಾಡುವುದು ಅಷ್ಟು ಸುಲಭ ಅಲ್ಲ ಎಂದು ಸ್ವತಃ ಪೊಲೀಸ್‌ ಅಧಿಕಾರಿಯಾಗಿದ್ದ ಅವನಿಗೆ ತಿಳಿದಿತ್ತು. ಪಿತೃತ್ವ ಋಜುವಾತಾದ ಮಾತ್ರಕ್ಕೆ ಕೊಲೆಯೂ ಋಜುವಾತಾಗುತ್ತದೆ ಎಂದೇನಿಲ್ಲ.

ಆದರೆ, ವಿಚಾರಣೆಯ ಹೊತ್ತಿನಲ್ಲಿ ಸರ್ಕಾರಿ ವಕೀಲರು ಚಾರ್ಲೆನ್ಸ್‌ ಸಾಯರ್‌ ಎಂಬ ಮಹಿಳೆಯನ್ನು ಸಾಕ್ಷಿ ಹೇಳಲು ಕಟಕಟೆಗೆ ಕರೆದರು. ಓಸ್ವಾಲ್ಟ್ ತತ್ತರಿಸಿದ. ಇವಳು ಅವನ ಇನ್ನೊಬ್ಬ ಪ್ರಿಯತಮೆ. ಈ ಹಿಂದೆ ವೇಶ್ಯಾವಾಟಿಕೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಇವಳನ್ನು ಮಾಹಿತಿದಾರಳಾಗಿ ಬಳಸಿಕೊಂಡಿದ್ದ. ಹಾಗೆಯೇ ಅವಳೊಂದಿಗೆ ಸಂಬಂಧ ಬೆಳೆಸಿದ್ದ. ಮಾರ್ಗಿಯ ಸಂಪೂರ್ಣ ವಿವರಗಳು ಅವಳಿಗೆ ಗೊತ್ತಿದ್ದವು.

ಅವಳು ಸಾಕ್ಷ್ಯ ಹೇಳಿದಂತೆ, "ಓಸ್ವಾಲ್ಟ್ ಹೋಟೆಲಿನಿಂದ ಮಾರ್ಗಿಯೊಂದಿಗೆ ಹೊರಬಂದವನು ಕಾರಿನಲ್ಲಿ ಅವಳನ್ನು ಕೂರಿಸಿಕೊಂಡು ಠಾಣೆಯತ್ತ ಬಂದಿದ್ದಾನೆ. ಅಲ್ಲಿ ಮಗುವಿನ ನಿರ್ವಹಣಾ ವೆಚ್ಚಕ್ಕಾಗಿ ಸಂಧಾನ ನಡೆದಿದೆ. ಅವನು 3,000 ಡಾಲರ್‌ ಚಿಲ್ಲರೆ ಮೊತ್ತವನ್ನು ಕೊಡಲು ಹೋಗಿದ್ದಾನೆ, ಅವಳ ಒಪ್ಪಿಲ್ಲ. ಅವಳು ತನ್ನ ಮಗನ ತಂದೆಯ ವಿವರಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾಳೆ. ಮಾತು ಕಾವೇರಿದೆ. ಕೊನೆಗೆ ಅವನು, ಮಾರ್ಗಿಯನ್ನು 'ಬಿಚ್' ಎಂದಿದ್ದಾನೆ.‌ ಸಿಟ್ಟಿಗೆದ್ದ ಅವಳು ಅವನ ಕೆನ್ನೆಗೆ ಬಾರಿಸಿದ್ದಾಳೆ. ಇವನಿಗೆ ಸಿಟ್ಟೇರಿದೆ. ಅವಳು ಕುತ್ತಿಗೆಗೆ ಸುತ್ತಿಕೊಂಡಿದ್ದ ಸ್ಕಾರ್ಫಿನಿಂದ ಅವಳ ಕುತ್ತಿಗೆ ಬಿಗಿದಿದ್ದಾನೆ. ಅವಳು ಸಾಯುವರೆಗೂ ಇವನು ಹಿಡಿತ ಸಡಿಲಿಸಿಲ್ಲ. ಸತ್ತ ನಂತರ ಗಾಬರಿಯಲ್ಲಿ ಅವಳ ಶವವನ್ನು ಅವನ ಕಾರಿನ ಹಿಂದಿನ ಸೀಟಿನಲ್ಲಿ ಹಾಕಿಕೊಂಡು ಹೋಗಿ, ನದಿ ಕೊರಕಲಿನಲ್ಲಿ ಎಸೆದಿದ್ದಾನೆ. "ಇದನ್ನೆಲ್ಲ ನನಗೆ ಹೇಳಿದ್ದು ಇವನೇ,” ಎಂದು ಓಸ್ವಾಲ್ಟ್ ಕಡೆಗೆ ಬೆರಳು ಮಾಡಿದಳು.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಗುಂಡು ಹಾರಿದ್ದು ಆಕಸ್ಮಿಕವೇ ಅಥವಾ ಅವಳಿಗಾಗಿಯೇ?

ಸಾಂದರ್ಭಿಕ ಸಾಕ್ಷ್ಯಗಳು ಇವಳ ಹೇಳಿಕೆಗೆ ಸರಿಯಾಗಿ ಹೊಂದುತಿದ್ದವು. ಆದರೆ, ಪ್ರತಿವಾದಿ ಅವನ ಬಿಡುಗಡೆಗೆ ತುಂಬಾ ಪ್ರಯತ್ನಿಸಿದ. ಅವನ ಪೊಲೀಸ್‌ ಡೈರಿಯನ್ನು ಸಾಕ್ಷಿಯಾಗಿ ಮಂಡಿಸಿದ. ಅದು ಕೊಲೆ ಮಾಡಿದ ನಂತರ ಬಂದ ಒಂದು ಫೋನ್‌ ಕರೆಯನ್ನು ಆಧರಿಸಿ ಮಾಡಿದ ಒಕ್ಕಣೆ ಎಂದು ವಾದಿ ವಕೀಲ ರುಜುವಾತು ಮಾಡಿದ.

ಅಂತಿಮವಾಗಿ ನ್ಯಾಯಾಧೀಶರು ಓಸ್ವಾಲ್ಟನಿಗೆ ಗರಿಷ್ಠ 25 ವರ್ಷಗಳ ಶಿಕ್ಷೆ ವಿಧಿಸಿದರು. ಆದರೂ ಓಸ್ವಾಲ್ಟ್ ತನ್ನ ತಪ್ಪನ್ನು ಕೊನೆಯವರೆಗೂ ಒಪ್ಪಿಕೊಳ್ಳಲೇ ಇಲ್ಲ.

ಉಪಸಂಹಾರ

ಅವಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಸಿಕ್ಕಿದ್ದರೆ, ಹರೆಯದ ತುಡಿತಗಳನ್ನು ಅವಳು ಸರಿಯಾದ ದಾರಿಯಲ್ಲಿ ತಿರುಗಿಸಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಆದರೆ ತಪ್ಪುಗಳಂತೂ ಆಗಿದ್ದವು. ಮನುಷ್ಯ ಮಾತ್ರರು ತಪ್ಪುಗಳನ್ನು ಮಾಡುವುದು ಸಹಜ. ತಿದ್ದುಪಡಿಗೆ ಪ್ರಯತ್ನಿಸುವುದೂ ಸಹಜ. ಜೀವಿಸುವ ತುಡಿತ, ಬದುಕಬೇಕೆಂಬ ಹಂಬಲ, ತಾಯ್ತನದ ವ್ಯಾಮೋಹ ಒಬ್ಬ ಮಹಿಳೆಯನ್ನು ಯಾವ ಅತಿಗೆ ಬೇಕಾದರೂ ಕೊಂಡೊಯ್ಯಬಲ್ಲದು. ಅವಳು ಪರಿಸ್ಥಿತಿಯ ಬಂಧಿಯಾಗಿ ಮಾಡಿದ್ದೂ ಅದನ್ನೇ! ಒಂದರ್ಥದಲ್ಲಿ ಇದು ಕ್ಷಮಾರ್ಹ. ಆದರೆ, ಇದೇ 'ಪರಿಸ್ಥಿತಿಯ ಬಂಧಿ' ಕ್ಷಮೆಯನ್ನು ಓಸ್ವಾಲ್ಟನಿಗೆ ಕೊಡಬಹುದೇ? ನೀವು ಕೊಡುವುದಾದರೆ ಅಭ್ಯಂತರವಿಲ್ಲ.

ನಿಮಗೆ ಏನು ಅನ್ನಿಸ್ತು?
3 ವೋಟ್