ವಿಧಿ ಮತ್ತು ವಿಜ್ಞಾನ | ಗಂಡನ ಹತ್ಯೆಯ ಗುಹ್ಯ ಹೆಂಡತಿಯ ಪ್ಯಾಂಟಿನಲ್ಲಿತ್ತೇ?

ಇಂಥದ್ದೊಂದು ಕೊಲೆಯನ್ನೇ ಕಂಡರಿಯದ ಓಕ್ಲಹಾಮ ಜನ ನಿಜಕ್ಕೂ ಗಾಬರಿಗೊಂಡಿದ್ದರು. ಈ ಗಾಬರಿ ಎಲ್ಲರ ಮಾತಲ್ಲಿ ವ್ಯಕ್ತವಾಗುತ್ತಿತ್ತು. ಇದು ಪೊಲೀಸರಿಗೆ ಸವಾಲಿನ ವಿಷಯ. ಅವರು ಏನಾದರೊಂದು ಮಾಡಲೇಬೇಕು. ಕೊಲೆಯಾದವನ ಪತ್ನಿಯನ್ನು ಹಿಂಜರಿಕೆಯಿಂದಲೇ ಮರುವಿಚಾರಣೆಗೆ ಕರೆದು ಕೇಳಿದರು: "ಹೇಳಿ ಮೇಡಂ, ಅಂದು ಏನೇನಾಯಿತು?"

ಅಮೆರಿಕದ 50 ರಾಜ್ಯಗಳ ಪೈಕಿ ಓಕ್ಲಹಾಮ 48ನೇ ರಾಜ್ಯ. ಇದಕ್ಕೆ ಇದೇ ಹೆಸರಿನ ರಾಜಧಾನಿ ಇದೆ. ಇದೊಂದು ಸುಂದರ ನಗರ. ಸ್ಥಳೀಯವಾಗಿ 'ಓಕ್ಲೀಸ್' ಎಂದು ಕರೆಯುವ ಇಲ್ಲಿಯ ಜನ ಶಾಂತಿಪ್ರಿಯರು. ಅಪರಾಧಗಳ ಸಂಖ್ಯೆ ತುಂಬಾ ಕಡಿಮೆ. ಇಲ್ಲಿನ ಸ್ಥಿತಿವಂತರು ನಗರಕ್ಕಿಂತ ಹೊರವಲಯಗಳಲ್ಲಿ ಹೆಚ್ಚು ನೆಲೆಸಿದ್ದಾರೆ. ಅಂತಹ ಸ್ಥಿತಿವಂತರ ಪೈಕಿ ಒಬ್ಬನ ಹೆಸರು ರಾಬರ್ಟ್ ಆ್ಯಂಡ್ರೂ.

ಇವನೊಬ್ಬ ದೆಸೆವಂತ ಪುರುಷ. ಪ್ರಸಿದ್ಧ ಜಾಹೀರಾತು ಕಂಪನಿಯ ಅತ್ಯುನ್ನತ ಉದ್ಯೋಗ, ಬಂಗಲೆ, ಕಾರು, ಉತ್ತಮ ಗಳಿಕೆ, ಒಳ್ಳೆಯ ಗೆಳೆಯರು, ಮಾದರಿ ಕುಟುಂಬ, ಪ್ರೀತಿಸುವ ಹೆಂಡತಿ, ಅಪ್ಪನಿಗಾಗಿ ಹಂಬಲಿಸುವ ಎರಡು ಮಕ್ಕಳು, ಇನ್ನೂ ಆರೋಗ್ಯವಾಗಿರುವ ತಂದೆ-ತಾಯಿ ಇತ್ಯಾದಿ... ಅವನ ಬಳಿ ಎಲ್ಲ ಇದೆ.

ಒಂದು ವಾರಾಂತ್ಯ, ಕ್ರಿಸ್ತನಿಗೆ ಕೃತಜ್ಞತೆ ಸಲ್ಲಿಸಿ, ಮನೆಗೆ ಹಿಂತಿರುಗಿ, ಮಕ್ಕಳು ಮತ್ತು ಅವನ ತಂದೆ-ತಾಯಿಯರ ಜೊತೆ ರಜೆ ಕಳೆಯುವ ಯೋಜನೆ ಹೊಂದಿದ್ದ. ಹೆಂಡತಿ-ಮಕ್ಕಳನ್ನು ಸಿದ್ಧವಾಗಿರಲು ಹೇಳಿದ್ದ. ಹಾಗಾಗಿ, ಕಾರನ್ನು ಮನೆ ಮುಂದೆಯೇ ನಿಲ್ಲಿಸಿ, ಗ್ಯಾರೇಜಿನೊಳಗೆ ಬಂದ. ಕೆಲವೇ ಕ್ಷಣಗಳಲ್ಲಿ ಇವನ ಮೇಲೆ ಗುಂಡಿನ ದಾಳಿ ನಡೆಯಿತು. ಪಕ್ಕದಲ್ಲಿದ್ದ ಹೆಂಡತಿಯ ಭುಜಕ್ಕೂ ಒಂದು ಗುಂಡು ತೂರಿತು. ಇವನು ಸ್ಥಳದಲ್ಲೇ ಹತನಾದ.

ಪೊಲೀಸರು ತನಿಖೆಗೆ ಮುಂದಾದಾಗ, ಮೊದಲಿಗೆ ಕಂಡಿದ್ದು ದುಃಖಾರ್ಥಳಾದ ರಾಬ್‌ನ ಹೆಂಡತಿ ಬ್ರೆಂಡ ಆ್ಯಂಡ್ರೂ. ನಂತರ ಗ್ಯಾರೇಜಿನ ಒಳಗೆ ಅಂಗಾತ ಬಿದ್ದಿದ್ದ ರಾಬ್‌ನ ಹೆಣ. ಬಾಗಿಲು ತೆರೆದಿದ್ದ ಫರ್ನೇಸ್‌. ಗ್ಯಾರೇಜಿನ ತುಂಬ ಚಿಮ್ಮಿ ಚೆಲ್ಲಿರುವ ರಕ್ತ. ಒಂದು 'ಪಾಯಿಂಟ್‌ 22 ಕ್ಯಾಲಿಬರ್‌' ಪಿಸ್ತೂಲಿನ ಗುಂಡು, ಅದು ಬ್ರೆಂಡಳ ತೋಳಲ್ಲಿ ತೂರಿ, ಅಲ್ಲಿಂದ ಹೊರಗೆ ಚಿಮ್ಮಿ, ಎದುರಿದ್ದ ಗೋಡೆಗೆ ಅಪ್ಪಳಿಸಿ ಬಿದ್ದಿದೆ. ಜೊತೆಗೆ, ಇನ್ನೆರಡು '16 ಗೇಜ್‌ ಶಾಟ್‌ ಗನ್'ನ ಗುಂಡಿನ ಕವಚಗಳು ಸಹ ಬಿದ್ದಿವೆ.

ಇಲ್ಲಿ ಒಂದು ಅಂಶ ಸ್ಪಷ್ಟ; ಈ ಪ್ರಕರಣದಲ್ಲಿ ಎರಡು ಆಯುಧ ಬಳಸಲಾಗಿದೆ. ರಾಬನ ಹೆಣಕ್ಕೆ ಎಡಭಾಗದಿಂದ ಒಂದು ಗುಂಡು ತಗುಲಿದೆ, ಬಲಭಾಗದಿಂದ ಮತ್ತೊಂದು. ಇದರ ಅರ್ಥ - ಇಬ್ಬರು ಎರಡು ಕೋನಗಳಿಂದ ಗುಂಡು ಹಾರಿಸಿದ್ದಾರೆ.

Image

ಗ್ಯಾರೇಜಿನ ಒಳಚಿತ್ರಗಳು ಇನ್ನೂ ಅನೇಕ ವಿವರಗಳನ್ನು ಹೇಳುತ್ತಿದ್ದವು. ರಾಬ್‌ ಕೊಲೆಗಾರನನ್ನು ಕಂಡಿದ್ದಾನೆ. ಏಕೆಂದರೆ, ಅವನು ಖಾಲಿ ಟಿನ್ನುಗಳು ತುಂಬಿದ್ದ ಕಸದ ಚೀಲವನ್ನು ಅಡ್ಡ ಹಿಡಿದಿದ್ದಾನೆ. ಗ್ಯಾರೇಜಿನ ತುಂಬಾ ಖಾಲಿ ಟಿನ್ನುಗಳು ಹರಡಿ ಬಿದ್ದಿವೆ. ಅಂದಾಜಿನ ಪ್ರಕಾರ, ಮೊದಲ ಗುಂಡೇಟಿಗೆ ಅವನು ಸತ್ತಿಲ್ಲ. ಬಲಭಾಗದಿಂದ ಹೊಡೆಯಲಾದ ಎರಡನೇ ಗುಂಡಿನಿಂದ ಅವನು ಮೃತನಾಗಿರಬಹುದು.

ಇದೆಲ್ಲ ಸರಿ, ಆಗುವುದೆಲ್ಲ ಆಗಿಹೋಗಿದೆ. ಆದರೆ, ಇದು ಆಗಿದ್ದಾದರೂ ಹೇಗೆ? ಯಾರು, ಏಕೆ, ಯಾವ ಉದ್ದೇಶದಿಂದ ರಾಬರ್ಟನನ್ನು ಹತ್ಯೆ ಮಾಡಿದ್ದಾರೆ. ದರೋಡೆ, ಲೂಟಿ ಉದ್ದೇಶ  ಅಲ್ಲ, ಅಂಥದ್ದೇನೂ ನಡೆದಿಲ್ಲ. ಅವನ ಹೆಂಡತಿ ಮೇಲೆ ಕಣ್ಣಿಟ್ಟವರೂ ಅಲ್ಲ. ಅವಳಿಗೂ ಗುಂಡು ಹೊಡೆದಿದ್ದಾರೆ. ಮತ್ತೆ ಯಾವ ಕಾರಣದಿಂದ ಈ ಸಂತೃಪ್ತ ಸಜ್ಜನನನ್ನು ಹೀಗೆ ಕೊಂದರು? ಪತ್ತೆ ಮಾಡಲು ಬೆರಳಚ್ಚುಗಳಿಲ್ಲ. ಆಯುಧಗಳಿಲ್ಲ. ಗುಂಡುಗಳಿವೆ. ಬಂದೂಕು ಸಿಕ್ಕಿದಲ್ಲಿ ಮಾತ್ರ ಗುಂಡುಗಳಿಗೆ ಮಹತ್ವ.

ವಿವಿಧ ತಜ್ಞರೊಂದಿಗೆ ಸಮಾಲೋಚಿಸಿ, ವಿವಿಧ ಆಯಾಮಗಳಿಂದ ಯೋಚಿಸಿದ ಪೊಲೀಸರಿಗೆ  ಸಂದೇಹಿಸಬಹುದಾದ ಒಂದೇ ಒಂದು ಜೀವಿ ಕಾಣಲಿಲ್ಲ. ಸಾಮಾನ್ಯವಾಗಿಯೇ ಯಾರಲ್ಲಾದರೂ ನಿರಾಶೆ ಹುಟ್ಟುವ ಹೊತ್ತು ಅದು. ಆದರೆ, ಆ ಕ್ಷಣ ಪೊಲೀಸರಿಗೆ ಒಂದು ಸತ್ಯದ ಅರಿವಾಗುತ್ತದೆ - “ಈ ತಾಂತ್ರಿಕ ಅಂಶಗಳನ್ನೆಲ್ಲ ಬದಿಗಿಟ್ಟು, 'ಸಾಮಾನ್ಯ ಜ್ಞಾನ' ಬಳಸಬೇಕು.”

ಈ ತಾಂತ್ರಿಕ ಜ್ಞಾನದ ಮೂಲಕ ವೈಯಕ್ತಿಕ ದ್ವೇಷ, ವೃತ್ತಿ ದ್ವೇಷಗಳನ್ನೆಲ್ಲ ಈಗಾಗಲೇ ಪರಿಶೀಲಿಸಿ ಆಗಿದೆ; ಆದರೆ ಒಂದೇ ಒಂದು ಕುರುಹಿಲ್ಲ. ಪ್ರೇಮ, ಕಾಮ, ಹೊರಸಂಬಂಧಗಳ ಬಗ್ಗೆ ಹುಡುಕಲಾಗಿದೆ, ಆದರೆ ಒಂದೇ ಒಂದು ಸುಳಿವಿಲ್ಲ. ಮತ್ತೆ…? ಇವನ ಸಾವಿನಿಂದ ಯಾರಿಗೆ ಹೆಚ್ಚು/ ಅತಿ ಹೆಚ್ಚು/ ಗರಿಷ್ಠ ಉಪಯೋಗವಾಗುವ ಅಥವಾ ಲಾಭವಾಗುವ ಸಾಧ್ಯತೆ ಇದೆ? ಯಾರಿಗೆ?

ಈ ಬಗ್ಗೆಯೂ ಅಧಿಕೃತ ಪ್ರಾಥಮಿಕ ತನಿಖೆ ಮಾಡಲಾಗಿದೆ. ಇಲ್ಲ, ಅಲ್ಲೆಲ್ಲೂ ಅಂಥದ್ದೇನೂ ಸಂದೇಹಾಸ್ಪದವಾದ್ದು ಇಲ್ಲ. ಅವನ ಆಸ್ತಿ ಮತ್ತು ಜೀವವಿಮೆ ಮೊದಲಿನಂತೆಯೇ ಅವನ ಹೆಸರಿನಲ್ಲಿದೆ. ಅಲ್ಲಿಗೆ ಮುಗಿಯಿತಲ್ಲ... ಮುಂದೆ? ಹಾಗಾದರೆ, ಸಾಮಾನ್ಯ ಜ್ಞಾನದ ಬಳಕೆ ಎಂದರೆ ಇಷ್ಟೇನೇ? ಅದು ಒಂದು ಕಡೆ ಬಂದು ನಿಂತುಹೋಗುತ್ತದೆಯೇ?

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಕಾವಳ ಕವಿದ ಕಗ್ಗತ್ತಲೆಯಲ್ಲಿ ರೈಲು ಕೆಡವಿದವರಾರು?

ಸತ್ತವನ, ಅದರಲ್ಲೂ ಕೊಲೆಯಾದವನ ಬಗ್ಗೆ ನೀವು ಅಧಿಕೃತವಾಗಿ ಯಾರನ್ನು ಏನನ್ನು ಕೇಳಿದರೂ, ಅವರು ಹೇಳುವುದು ವಿವಾದರಹಿತವಾದ ಮತ್ತು ಎಲ್ಲರಿಗೂ ಗೊತ್ತಿರುವ ಸಂಗತಿಗಳನ್ನೇ! ಹಾಗಾದರೆ ಸತ್ಯದ ಕತೆ ಏನು? ಅದೆಲ್ಲಿ ಅಡಗಿಕೊಂಡಿರುತ್ತದೆ? ಈಗ ಪೊಲೀಸರು ಈ ದಿಕ್ಕಿನಲ್ಲಿ ಕಾರ್ಯಾಚರಣೆಗಿಳಿದರು. ಇವನ ಸಾವಿನಿಂದ ಯಾರಿಗೆ ಗರಿಷ್ಠ ಲಾಭವಾಗುವ ಸಾಧ್ಯತೆ ಇದೆ? ಆ ಸಾಧ್ಯತೆ ಇರುವ ಒಂದೇ ಜೀವಿ ಎಂದರೆ ಅವನ ಹೆಂಡತಿ.

ಈವರೆಗಿನ ಅನಿಸಿಕೆಗಳ ಪ್ರಕಾರ, ಅವನ ಹೆಂಡತಿ ಎನ್ನುವ ಬ್ರೆಂಡ್ ಹೆಸರಿನ ಹೆಣ್ಣು ಸತ್ಚಾರಿತ್ರ್ಯದ ಸಜ್ಜನಳು. ಗಂಡ, ಮನೆ, ಮಕ್ಕಳಿಗಾಗಿ ಬದುಕನ್ನು ಮುಡುಪಿಟ್ಟವಳು. ಅವಳನ್ನು ಅನುಮಾನಿಸುವುದುಂಟೇ? ಪೊಲೀಸರ ಸಾಮಾನ್ಯ ಪ್ರಜ್ಞೆ ಹೇಳಿದ್ದೆಂದರೆ, ಅನುಮಾನಿಸುವುದು ಬೇಡ - ಘಟನಾಕ್ರಮವನ್ನು ಮರು ಪರಿಶೀಲಿಸೋಣ. ಅಲ್ಲಿ ಸುಳಿವುಗಳೇನಾದರೂ ಸಿಗುವ ಸಾಧ್ಯತೆ ಇದೆ.

ಇಂಥದ್ದೊಂದು ಕೊಲೆಯ ಮಾದರಿಯನ್ನೇ ಕಂಡರಿಯದ ಓಕ್ಲಹಾಮದ ಜನತೆ ನಿಜಕ್ಕೂ ಗಾಬರಿಗೊಂಡಿದ್ದರು. ಈ ಗಾಬರಿ ಎಲ್ಲರ ಮಾತು, ಸಂದರ್ಭಗಳಲ್ಲಿ ವ್ಯಕ್ತವಾಗುತ್ತಿತ್ತು. ಇದು ಪೊಲೀಸರಿಗೆ ಸವಾಲಿನ ವಿಷಯ. ಅವರು ಏನಾದರೊಂದು ಮಾಡಲೇಬೇಕು. ಆ ಸದ್ಗೃಹಿಣಿಯನ್ನು ಪೊಲೀಸರು ಹಿಂಜರಿಕೆಯಿಂದಲೇ ಮರುವಿಚಾರಣೆಗೆ ಕರೆದರು. "ಹೇಳಿ ಮೇಡಂ, ಅಂದು ಏನೇನಾಯಿತು?"

ಬ್ರಿಂಡಾಳ ಹೇಳಿಕೆ: "ನಾನು ಅಂದೇ ಹೇಳಿದೆನಲ್ಲ...! ಮನೆಯ ಮುಂದೆ ಕಾರು ನಿಲ್ಲಿಸಿ, ರಾಬರ್ಟ್‌ ಒಳಗೆ ಬಂದ. ನಮ್ಮ ಫರ್ನೇಸ್‌ ಬೆಳಗಿನಿಂದ ನಂದಿಹೋಗಿತ್ತು. ಅದಕ್ಕೆ ಬೆಂಕಿ ಕೊಡಲು ಹೇಳಿದೆ. ಅವನು ಅದರತ್ತ ಹೋದ. ಹಿಂದೆಯೇ ಬಾಗಿಲಿನ ಬಳಿ ಇಬ್ಬರು ಮುಸುಕುಧಾರಿಗಳು ಬಂದರು, ಬಂದವರೇ ರಾಬರ್ಟ್‌ನತ್ತ ಗುಂಡು ಹಾರಿಸಿದರು. ನಂತರ ನನಗೂ ಗುಂಡು ಹೊಡೆದರು. ರಾಬರ್ಟ್‌ನಂತೆ ನಾನೂ ಉರುಳಿಬಿದ್ದೆ. ಅವರು ಓಡಿಹೋದರು. ಅಷ್ಟೇ..."

ಪೊಲೀಸರು ಇನ್ನೂ ಕೆಲವು ಸಾಂಕೇತಿಕ ಪ್ರಶ್ನೆಗಳ ಮೂಲಕ ಹೇಳಿಕೆಯ ಪ್ರಯೋಗವನ್ನು ಮುಗಿಸಿದರು.

Image

ಈಗ ಇಲ್ಲಿ ಸಮಸ್ಯೆಗಳ ಮಹಾ ಹೊಂಡವೇ ಸೃಷ್ಟಿಯಾಗಿತ್ತು. ಈವರೆಗೂ ಇದ್ದ ಗ್ಯಾಪುಗಳು ಈಗಿನ ಈ ವಿಚಾರಣೆಯ ನಂತರ ತುಂಬಿಕೊಳ್ಳಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ, ಇಲ್ಲ! ಸಣ್ಣಪುಟ್ಟದಾಗಿದ್ದ ಗ್ಯಾಪುಗಳು ಈಗ ಕಂದರದ ಆಕಾರ ಪಡೆದವು. ಏಕೆಂದರೆ, ಈಗಾಗಲೇ ಅವರ ಗುಪ್ತಚಾರ ವಿಭಾಗ ಸಂಗ್ರಹಿಸಿರುವ ಮಾಹಿತಿಗೂ, ಈಕೆ ಹೇಳುತ್ತಿರುವ ಮಾತುಗಳಿಗೂ ಅನೇಕ ಕಡೆ ತಾಳೆ ಅಗುತ್ತಿಲ್ಲ.

ಈಗಾಗಲೇ ಪೊಲೀಸರು ದಾಖಲಿಸಿಕೊಂಡಿರುವ ಗುಂಡು ಹಾರಿದ ಕೋನಗಳು, ಗುಂಡು ಹಾರಿದ ಜಾಗ ಹಾಗೂ ತಲುಪಿದ ಜಾಗದ ನಡುವಿನ ಅಂತರ ಸುತಾರಾಂ ತಪ್ಪು. ಇದು ಬರೀ ತಪ್ಪಲ್ಲ, ನೂರಕ್ಕೆ ನೂರು ಅಸಾಧ್ಯ! ಹಾಗಾದರೆ, ನಿಜಕ್ಕೂ ಗುಂಡುಗಳು ಹಾರಿರುವುದಾದದರೂ ಹೇಗೆ? ಬಾಗಿಲಲ್ಲಿ ಇಬ್ಬರಿದ್ದ ಪಕ್ಷದಲ್ಲೂ ಆ ಕೋನಗಳಿಂದ ಗುಂಡುಗಳು ಗಮ್ಯ ತಲುಪಲು ಸಾಧ್ಯವಿಲ್ಲ.

ಅಲ್ಲದೆ, ಆಕೆಗೆ ಬಿದ್ದಿರುವ ಪಿಸ್ತೂಲಿನ ಗುಂಡು... ಆಕೆ ಹೇಳುವಂತೆ ಅದು 20 ಅಡಿ ದೂರದಿಂದ ಸಿಡಿದಿದೆ. ಆದರೆ, ಇಂತಹ ಎಷ್ಟೋ ಗುಂಡೇಟುಗಳನ್ನು ಕಂಡಿರುವ ಪೊಲೀಸರ ಪ್ರಕಾರ, ಮೇಲ್ನೋಟಕ್ಕೇ ಅದು ಸಾಧ್ಯವಿರಲಿಲ್ಲ! ಅಷ್ಟು ದೂರದಿಂದ ಗುಂಡು ಸಿಡಿದಿದ್ದಲ್ಲಿ, ಗುಂಡು ಬಿದ್ದ ಜಾಗದ ಸುತ್ತ ಹಾಗೆ ದಪ್ಪನೆಯ ಕಪ್ಪು ಉಂಗುರ ಸೃಷ್ಟಿಯಾಗಲು ಸಾಧ್ಯವಿಲ್ಲ ಮತ್ತು ಆ ಜಾಗ ಅಷ್ಟು ದಪ್ಪ ಊದಿಕೊಳ್ಳುವುದೂ ಸಾಧ್ಯವಿಲ್ಲ. ಹಾಗಾದರೆ ಏನಾಗಿರಬಹುದು?

ಬಹುಶಃ ಇಲ್ಲಿ ಇಡೀ ಘಟನೆಯ ಕೀಲಿಕೈ ಅಡಗಿದೆ ಎಂದು ತನಿಖಾಧಿಕಾರಿ ರೋಲೆಂಡ್‌ ಗ್ಯಾರೆಟ್ನಿಗೆ  ಅನಿಸುತ್ತಿತ್ತು. ಏಕೆಂದರೆ, ಇವನ ಗಮನಕ್ಕೆ ಬಂದಂತೆ ಇದೇ ರಾಬರ್ಟ್‌ ಒಂದು ತಿಂಗಳ ಹಿಂದೆ ತನ್ನ ಕಚೇರಿ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಕರೆ ಮಾಡಿ, “ಯಾರೋ ನನ್ನ ಕಾರಿನ ಬ್ರೇಕ್‌ ಆಯಿಲ್‌ ಪೈಪನ್ನು ಕತ್ತರಿಸಿದ್ದಾರೆ,” ಎಂದು  ದೂರು ನೀಡಿದ್ದ. ಏನಾಯಿತು ಎಂದು ಕೇಳಿದ್ದಕ್ಕೆ, “ಕಾರಿನ ಕೆಳಗೆ ಆಯಿಲ್‌ ಹರಿದಿರುವುದು ನನ್ನ ಗಮನಕ್ಕೆ ಬಂತು. ಅದರ ಬಗ್ಗೆ ಯೋಚಿಸುವ ಮೊದಲೇ ನನಗೊಂದು ಕರೆ ಬಂತು - 'ನಿಮ್ಮ ಹೆಂಡತಿಗೆ ಅಪಘಾತಕ್ಕೀಡಾಗಿದ್ದಾಳೆ, 30 ಮೈಲಿ ದೂರದ ಆಸ್ಪತ್ರೆಗೆ ಅವಳನ್ನು ದಾಖಲಿಸಲಾಗಿದೆ, ಕೂಡಲೇ ಬನ್ನಿ.' ನನಗೆ ಸಂದೇಹ ಬಂದು ಆಸ್ಪತ್ರೆಗೆ ಕರೆ ಮಾಡಿದೆ. ಅಲ್ಲಿ ಅಂತಹ ಏನೂ ಆಗಿರಲಿಲ್ಲ. ಇದು ನನ್ನ ಕೊಲೆಯ ಪ್ರಯತ್ನ ಎಂದು ನನ್ನ ಸಂದೇಹ,” ಎಂದು ಹೇಳಿದ್ದ.

Image

ಅಷ್ಟರಲ್ಲಿ ರಾಬರ್ಟನ ನೆರೆಮನೆಯವರಿಂದ ಕರೆ ಬಂದಿತು. “ಸ್ವಾಮಿ ನಮ್ಮ ಮನೆಯಲ್ಲಿ ಯಾರೋ ನುಗ್ಗಿದ್ದಾರೆ, ಪರಿಸ್ಥಿತಿ ವಿಚಿತ್ರವಾಗಿದೆ,” ಎಂದು ಹೇಳಿದರು. ಪೊಲೀಸರು ಅಲ್ಲಿಗೆ ಹೋದಾಗ  ಯಾರೋ ಮನೆಯ ಒಳಹೊಕ್ಕಿದ್ದರು. ಮನೆಯ ಅನೇಕ ಸಾಮಾನುಗಳು ಅಸ್ತವ್ಯಸ್ತವಾಗಿದ್ದವು. ಅವರ ಹೇಳಿಕೆಯಂತೆ, ಕೆಳ ಕೋಣೆಯಲ್ಲಿದ್ದ ಬಚ್ಚಲಿನ ಬಾಗಿಲನ್ನು ತೆರೆದಾಗ, ಅವರೆಂದೂ ಇಡದೇ ಇದ್ದ ಚಪ್ಪಲಿ ಸ್ಟಾಂಡ್‌ ಅಲ್ಲಿತ್ತು! ಸಂದೇಹ ಬಂದು ಮನೆಯನ್ನೆಲ್ಲ ಹುಡುಕಿದಾಗ, ಒಂದು ಮಲಗುವ ಮನೆಯಲ್ಲಿ ಸ್ಟನ್‌ ಗನ್ನಿನ ಕವಚ ಬಿದ್ದಿತ್ತು. ಅಲ್ಲಿದ್ದ ಅಟ್ಟವನ್ನು ಪರಿಶೀಲಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಅಲ್ಲಿ ಪಾಯಿಂಟ್‌ 22 ಕ್ಯಾಲಿಬರ್‌ ಪಿಸ್ತೂಲಿನ ಬಳಕೆಯಾಗದ ಒಂದಷ್ಟು ಗುಂಡುಗಳು ಬಿದ್ದಿದ್ದವು. ಅವು ಉದ್ದೇಶಪೂರ್ವಕವಾಗಿ ಇಟ್ಟಂತೆ ಕ್ರಮವಾಗಿ ಇರಲಿಲ್ಲ. ಯಾರದೋ ಜೇಬಿನಿಂದ ಉದುರಿದಂತೆ ಬಿದ್ದಿದ್ದವು. ಅಟ್ಟದ ಮೇಲಿನ ಸ್ಥಿತಿಯನ್ನು ಗಮನಿಸಿದರೆ, ಅದರ ಮೇಲೆ ಬಹುಶಃ ಯಾರೋ ತೆವಳಿದಂತೆ ಕಾಣುತ್ತಿತ್ತು. ಇಲ್ಲಿನ ಒಟ್ಟಾರೆ ಪರಿಸ್ಥಿತಿ ಸಂದೇಹಾಸ್ಪದವಾಗಿತ್ತು.

ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾದರು. ಗುಂಡಿನ ಕವಚ ಮತ್ತು ಗುಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದರು. ಮನೆಯನ್ನೆಲ್ಲ ಮತ್ತೊಮ್ಮೆ ಪರೀಕ್ಷಿಸಿದಾಗ ನುಸುಳುಕೋರನ ಇಡೀ ಚಲನೆಯನ್ನು ಅಂದಾಜು ಮಾಡಬಹುದಿತ್ತು. ಹೇಗೋ ಮನೆಗೊಳಗೆ ಬಂದವನು/ಳು ಮೊದಲು ಕೆಳಮನೆಯ ಸಣ್ಣ ಕೊಟಡಿ ಹೊಕ್ಕು, ಅವಿತುಕೊಳ್ಳಲು ಪ್ರಯತ್ನಿಸಿದ್ದಾರೆ. ಅಲ್ಲಿ ಹೆಚ್ಚು ಹೊತ್ತು ಇರಲಾಗದೆ, ಅಲ್ಲಿದ್ದ ಅಟ್ಟ ಹತ್ತಿ, ಅದರ ಮೇಲಿದ್ದ ಸಣ್ಣ ಜಾಗದ ಮೂಲಕ ಮೇಲಿನ ಮಹಡಿಗೆ ನುಸುಳಿದ್ದಾರೆ. ಮೇಲಿನ ಮಲಗುವ ಕೋಣೆಯಲ್ಲಿದ್ದ ಮಂಚದ ಕೆಳಗೆ ಅವಿತುಕೊಂಡಿದ್ದಾರೆ. ಆಗ ಈ ನಡುವೆ ಸಿಡಿದಿದ್ದ ಮೂರನೆಯ ಗುಂಡಿನ ಕವಚ ಇಲ್ಲಿ ಬಿದ್ದಿದೆ. ಇಷ್ಟೆಲ್ಲ ಆದರೂ ಮನೆಯ ಒಳಹೋಗಲು ಬಲ ಪ್ರಯೋಗಿಸಿಲ್ಲ. ಹೀಗಾಗಬೇಕಾದರೆ, ಒಂದೋ ಇವರು ವೃತ್ತಿಪರ ಖದೀಮರಿರಬೇಕು, ಇಲ್ಲವೇ ಅವರ ಬಳಿ ಕೀಲಿಕೈ ಇರಬೇಕು?

ಈ ಸುದ್ದಿ ನಗರದಲ್ಲಿ ಪ್ರಚಾರವಾಗುತ್ತಿದ್ದಂತೆ ಒಂದೊಂದಾಗಿ ಮಾಹಿತಿಗಳು ಪೊಲೀಸರತ್ತ ಧಾವಿಸಲು ಆರಂಭಿಸಿದವು. ಗುಪ್ತಚರರು ಸಹ ಈ ಬಾರಿ ಮೂರನೇ ದರ್ಜೆಯ ಚಿಕಿತ್ಸೆಗಳ ಮೂಲಕ ಅವನ ಮತ್ತು ಬ್ರೆಂಡಾಳ ಸಮೀಪವರ್ತಿಗಳ ಬಾಯಿ ಬಿಡಿಸಲಾರಂಭಿಸಿದರು.

ಅಂತಿಮವಾಗಿ ಸಿಕ್ಕಿದ ಚಿತ್ರ ಎಂದರೆ, ಬ್ರೆಂಡಾಳಿಗೆ ವಿವಾಹಬಾಹಿರವಾದ ಅನೇಕ ಸಂಬಂಧಗಳಿದ್ದವು. ಅವುಗಳಲ್ಲಿ ಬ್ರೆಂಡಾ ಹಾಜರಾಗುತ್ತಿದ್ದ ಚರ್ಚಿನ 'ಭಾನುವಾರದ ತರಗತಿ'ಗಳಿಗೆ ಪ್ರವಚನ ನೀಡುತ್ತಿದ್ದ ಜೇಮ್ಸ್‌ ಪವಾಟ್‌ ಜೊತೆಗಿದ್ದ ಸಂಬಂಧ ಗಾಢವಾಗಿತ್ತು. ಇವನೊಂದಿಗೆ ಮಕ್ಕಳನ್ನೂ ಕರೆದುಕೊಂಡು ಅವಳು ಡೌನ್‌ ಟೆಕ್ಸಾಸಿಗೆ ಪ್ರವಾಸ ಹೋಗಿದ್ದಳು. ಇದೊಂದು ವಿಚಿತ್ರ ಘಟನೆ. ಇದಕ್ಕೆ ಅವಳ ಗಂಡನೇ ಅನುಮತಿ ನೀಡಿದ್ದನಂತೆ. ಆದರೆ, ಇದನ್ನು ಸ್ವತಃ ಬ್ರೆಂಡಾಳ ಗೆಳತಿ ಗೇಲಿ ಮಾಡಿದಳು. “ಯಾವನಾದರೂ ಗಂಡ ಅಪರಿಚಿತ ಗಂಡಸಿನ ಜೊತೆ ತನ್ನ ಹೆಂಡತಿ, ಮಕ್ಕಳನ್ನು ಪ್ರವಾಸಕ್ಕೆ ಹೋಗಲು ಅನುಮತಿ ನೀಡುತ್ತಾನೆಯೇ? ನೀಡಿದ್ದರೆ, ಅವನೊಬ್ಬ ಮಹಾನ್ ವ್ಯಕ್ತಿ! ಇಲ್ಲವೇ ಇವಳೊಬ್ಬ ಮಹಾನ್‌ ಬ್ಲಾಕ್‌ಮೇಲರ್‌ ಆಗಿರಬೇಕು,” ಅಂದಳು.

Image

ಇಲ್ಲಿಂದ ಮುಂದಕ್ಕೆ ಪೊಲೀಸರ ಮುಂದಿನ ಚಿತ್ರ ನಿಚ್ಚಳವಾಗುತ್ತ ಹೋಯಿತು. ಬ್ರೆಂಡಾಳ ಖಾಸಾ ಗೆಳತಿಯರು ಅವರಿಗೆ ತಿಳಿದಿರುವ ಮಾಹಿತಿ ನೀಡಿದರು. ಅವರು ನೀಡಿದ ಮಾಹಿಗಳನ್ನೆಲ್ಲ ಒಂದು ಸೂತ್ರದಲ್ಲಿ ಹೆಣೆಯುವುದಾದರೆ, ಬ್ರೆಂಡಾಳಿಗೆ ವಿವಾಹಪೂರ್ವದಿಂದಲೂ ಅನೇಕ ಸಂಬಂಧಗಳಿದ್ದವು. ಕೆಲವು ವಿವಾಹದ ನಂತರವೂ ಮುಂದುವರಿದಿದ್ದವು. ವಿವಾಹ ಜೀವನ ಸಹ ಬರೀ ತಕಾರರುಗಳಿಂದ ಕೂಡಿತ್ತು. ಅನೇಕ ಸಾರಿ ಬೇರೆಯಾಗಿ ಮತ್ತೆ ಒಂದಾಗಿದ್ದರು.

ಅದರಲ್ಲಿ ಹೊಸದಾಗಿ ಕೆಲವು ವರ್ಷಗಳಿಂದ ಕೂಡಿಕೊಂಡ ಸಂಬಂಧ ಜೇಮ್ಸ್‌ ಪವಾಟ್‌ ಜೊತೆಗಿನದು. ಇವನೊಂದಿಗೆ ಬ್ರೆಂಡಾಳಿಗೆ ದೈನಂದಿನ ಸಂಬಂಧವಿತ್ತು. ಅದು ಮಕ್ಕಳ ಮುಂದೆಯೂ ನಡೆಯುತ್ತಿತ್ತು. ಈ ಸಲಿಗೆಯ ಮೇಲೆಯೇ ಅವನೊಂದಿಗೆ ಮಕ್ಕಳನ್ನೂ ಕರೆದುಕೊಂಡು ಅವಳು ಪ್ರವಾಸ ಹೋಗಿದ್ದಳು. ಬಂದ ನಂತರ ಇದರ ಬಗ್ಗೆ ಮನೆಯಲ್ಲಿ ರದ್ಧಾಂತವಾಯಿತು. ಅವನ ಸಹವಾಸ ತೊರೆಯುವಂತೆ ಅವಳ ಗಂಡ ಹೇಳಿದ. ಅದಕ್ಕೆ ಪ್ರತಿಯಾಗಿ ಅವಳು ಅವನಿಗೇ ವಿಚ್ಛೇದನ ಕೊಡುವುದಾಗಿ ಹೇಳಿದಳು.

ಇಷ್ಟು ಕತೆಗೆ ಈವರೆಗೂ ಹಲವು ಸಾಕ್ಷಿಗಳು ಸಿಕ್ಕಿದ್ದವು. ಆದರೆ, ಅವೆಲ್ಲ ಸಾಂದರ್ಭಿಕ ಸಾಕ್ಷ್ಯಗಳೇ ವಿನಾ ಕೊಲೆಯ ಸಾಕ್ಷ್ಯಗಳಲ್ಲ. ಆದರೆ, ಮುಂದಿನ ಕತೆ ಏನಾಯಿತು? ಖಚಿತವಾದ ಉದ್ದೇಶಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ತನಿಖೆ ಮುಂದುವರಿಯಿತು. ಅವಳು ವಿಚ್ಛೇದನದ ಬೆದರಿಕೆ ಹಾಕಿದ ಮೇಲೆ ಅವನು ಸುಮ್ಮನಾದನೇ? ಹಾಗೊಂದು ಪಕ್ಷ ಸುಮ್ಮನಾಗಿದ್ದರೆ ಅವನ ಕೊಲೆ ಏಕಾಗುತ್ತಿತ್ತು! ಇದರ ರಹಸ್ಯ ಕೊಲೆ ಮತ್ತು ವಿಚ್ಛೇದನದ ಬೆದರಿಕೆಯ ನಡುವೆ ಇದ್ದಂತಿತ್ತು. ಈ ನಡುವೆ ಏನಾಗಿರಬಹುದು?

ಈ ನಡುವೆ, ನೆರೆಮನೆಯಲ್ಲಿ ಸಿಕ್ಕಿದ ಗುಂಡುಗಳು ಮತ್ತು ಕವಚಗಳ ಪರಿಕ್ಷೆಗೆ ಕಳುಹಿಸಿದ್ದ ವಿಧಿ ವಿಜ್ಞಾನ ಪರೀಕ್ಷೆಯ ವರದಿ ಬಂದಿತ್ತು. ಅದರ ಪ್ರಕಾರ, ರಾಬರ್ಟ್‌ ಗ್ಯಾರೇಜಿನಲ್ಲಿ ದೊರೆತಿದ್ದ ಮತ್ತು ನೆರೆಮನೆಯಲ್ಲಿ ಸಿಕ್ಕಿದ ಶಾಟ್‌ ಗನ್ನಿನ ಕವಚಗಳು ಅನುಮಾನಕ್ಕೆಡೆ ಇಲ್ಲದಂತೆ ಒಂದೇ ಆಗಿದ್ದವು. ಉಳಿದ 22 ಕ್ಯಾಲಿಬರ್ ಗುಂಡುಗಳು ಬ್ರೆಂಡಾಳ ತೋಳು ಹೊಕ್ಕಿದ್ದ ಗುಂಡುಗಳೇ ಆಗಿದ್ದವು.

Image

ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ತನಿಖೆದಾರರು ಮತ್ತೆ ಜೀವವಿಮೆಯ ಕಚೇರಿ ಹೊಕ್ಕರು. ಮೊದಲ ವಿಚಾರಣೆಯಲ್ಲಿ ರಾಬರ್ಟನ ಜೀವವಿಮೆಯಲ್ಲಿ ಯಾವ ದೋಷಗಳೂ ಇಲ್ಲ ಎಂದಿದ್ದ ವಿಮಾ ಕಚೇರಿಯ ಜನ, ಪೊಲೀಸರು ತಮ್ಮ ವರಸೆಯನ್ನು ಬಳಸಿದಾಗ, "ಇಲ್ಲಿಗೆ ತಿಂಗಳುಗಳ ಹಿಂದೆ‌ ರಾಬರ್ಟ್ ವಿಮೆಯ ನಾಮಿನಿಯನ್ನು ಬದಲಿಸಿ, ತನ್ನ ತಮ್ಮನನ್ನು ನೇಮಿಸಿದ್ದರು. ಮಕ್ಕಳು ಇನ್ನೂ ಮೈನರ್‌ ಆಗಿರುವ ಕಾರಣ ಅವುಗಳ ಹೊಣೆಯನ್ನು ಅವನಿಗೆ ವಹಿಸಿ, ಪೋಷಕನನ್ನಾಗಿ ನೇಮಿಸಿದ್ದರು. ಆದರೆ, ಅದಾದ ಕೆಲವೇ ದಿನಗಳಲ್ಲಿ ಅದನ್ನು ರದ್ದು ಮಾಡಿ ಮತ್ತೆ ಯಥಾಸ್ಥಿತಿ ಅವರ ಹೆಂಡತಿಯನ್ನೇ ನಾಮಿನಿ ಮಾಡಿದ್ದರು,” ಎಂದು ಹೇಳಿದರು.

ಆ ದಾಖಲೆಗಳನ್ನು ವಶಪಡಿಸಿಕೊಂಡ ಪೊಲೀಸರು, ಅವನ್ನು ಓಕ್ಲಹಾಮಾದ ಪ್ರಸಿದ್ಧ ಕೈಬರಹ ತಜ್ಞ ಡೇವಿಡ್‌ ಪ್ಯಾರಟ್‌ ಅವರಲ್ಲಿಗೆ ರವಾನಿಸಿದರು. ಒಂದೂವರೆ ದಶಕಗಳ ರಾಬರ್ಟನ ಎಲ್ಲ ಬೆರಳಚ್ಚು ಮಾದರಿಗಳನ್ನು ಸಂಗ್ರಹಿಸಿಕೊಳ್ಳಲಾಯಿತು, ಅವು ನೂರಕ್ಕಿಂತ ಹೆಚ್ಚಿದ್ದವು. ಅವುಗಳನ್ನು ಕಾಲಾನುಕ್ರಮಲ್ಲಿ ಜೋಡಿಸಿ, ವ್ಯತ್ಯಾಸಗಳನ್ನು ಗುರುತಿಸುತ್ತ ಹೋದರು. ಖಂಡಿತವಾಗಿಯೂ ಎಲ್ಲರ ಸಹಿಗಳಲ್ಲಾಗುವಂತೆ ಅವನ ಸಹಿಗಳಲ್ಲಿಯೂ ವ್ಯತ್ಯಾಸಗಳಾಗಿದ್ದವು. ಆದರೆ, ಕಳೆದ ಎರಡು-ಎರಡೂವರೆ ವರ್ಷಗಳಿಂದ ಅವನ ಸಹಿಯ ಕೊನೆಯಲ್ಲಿ ಇಕ್ತೂಸ್‌ (ಗ್ರೀಕ್‌ನಲ್ಲಿ ಇದ್ದ ಕ್ರಿಶ್ಚಿಯಾನಿಟಿಯ ಪುರಾತನ ಸಂಕೇತ) ಎಂಬ ಮೀನಿನ ಚಿತ್ರವನ್ನು ಸೇರಿಸಿಕೊಂಡಿದ್ದ. ಅದು ಸುಲಭಕ್ಕೆ ಸಾಮಾನ್ಯರ ಗ್ರಹಿಕೆಗೆ ದಕ್ಕುತ್ತಿರಲಿಲ್ಲ.

ಅವನು ತಮ್ಮನ ಹೆಸರಿಗೆ ಪಾಲಿಸಿಯನ್ನು ವರ್ಗಾಯಿಸಿದ್ದ ದಾಖಲೆಗಳಲ್ಲಿ ಆ ಮೀನಿನ ಚಿತ್ರವಿತ್ತು. ಆದರೆ, ಮತ್ತೆ ಬ್ರೆಂಡಾಳನ್ನು ನಾಮಿನಿ ಮಾಡಿದ ದಾಖಲೆಯಲ್ಲಿ ಆ ಮೀನು ಮಾಯವಾಗಿತ್ತು. ನೂರಾರು ಬಾರಿ ಪರೀಕ್ಷಿಸಿದ ಡೇವಿಡ್‌ ಖಚಿತವಾಗಿ ಹೇಳಿದ: “ಕೊನೆಯ ದಾಖಲೆಗಳು ಫೋರ್ಜರಿ ಮಾಡಲ್ಪಟ್ಟಿವೆ.”

ಇಲ್ಲಿಗೆ ಪೊಲೀಸರಿಗೆ ಇನ್ನೂ ಒಂದು ವಿಷಯ ಖಚಿತವಾಗಬೇಕಿತ್ತು. ಈ ಕೊಲೆಯಲ್ಲಿ ಬ್ರೆಂಡಾಳ ಮತ್ತು ಅವಳ ಪ್ರಿಯಕರನ ಕೈವಾಡವಿದೆ ಎಂಬುದು ಸರಿ. ಆದರೆ, ಇಲ್ಲಿ ಕೊಲೆಯನ್ನು ನೇರವಾಗಿ ಬ್ರೆಂಡಾಳೇ ಮಾಡಿದ್ದಾಳೋ ಅಥವಾ ಅವಳ ಪ್ರಿಯಕರನೋ ಅಥವಾ ಇಬ್ಬರೂ ಕೂಡಿಯೇ ಮಾಡಿದ್ದರೋ ಎಂಬುದು. ಕೊಲೆಯಾದ ಕ್ಷಣದಲ್ಲಿ ಅವಳು ತೊಟ್ಟಿದ್ದ ಉಡುಪುಗಳು ಪೊಲೀಸರ ಸುಪರ್ದಿನಲ್ಲಿದ್ದವು. ಅವುಗಳನ್ನು ವಿಧಿ ವಿಜ್ಞಾನ ವಿಭಾಗಕ್ಕೆ ಹೋದವು.

Image

ಅಲ್ಲಿಂದ ಬಂದ ವರದಿಯ ಪ್ರಕಾರ, ಅವಳ ಪ್ಯಾಂಟಿನ ಮೇಲೆ ಮೊಳಕಾಲಿನಿಂದ ಮೇಲ್ಭಾಗದಲ್ಲಿದ್ದ ಬಹುತೇಕ ರಕ್ತದ ಕಲೆಗಳು ಅವಳವೇ ಆಗಿದ್ದವು. ಅವಳ ತೋಳಿನಿಂದ ಸೋರಿದ ರಕ್ತ ಆದಾಗಿರಬಹುದು. ಆದರೆ ಅದು ಸೋರಿದ ರಕ್ತವಾಗಿತ್ತು. ಮೊಳಕಾಲಿನಿಂದ ಕೆಳಗೆ ಸಹ ರಕ್ತದ ಕಲೆಗಳಿದ್ದವು. ಆದರೆ ಅವು ಸಿಡಿದ ರಕ್ತದ ಕಲೆಗಳಾಗಿದ್ದವು. ಸಿಡಿದ ರಭಸಕ್ಕೆ ಅವು ನೂಲಿನ ಆಳದವರೆಗೂ ಹೊಕ್ಕಿದ್ದವು. ಅದು ರಾಬರ್ಟನ ರಕ್ತವಾಗಿತ್ತು.

ಆದರೆ, ಹಾಗೆ ಇವಳ ಪ್ಯಾಂಟಿನ ಮೇಲೆ ರಕ್ತ ಸಿಡಿದಿದೆ ಎಂದ ಮಾತ್ರಕ್ಕೆ ಇವಳು ಕೊಂದಿದ್ಧಾಳೆ ಎಂದಲ್ಲ! ಯಾರೋ ಹಾರಿಸಿದ ಗುಂಡಿನಿಂದ ಸಹ ಇವಳ ಮೇಲೆ ರಕ್ತ ಸಿಡಿದಿರಬಹುದಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟದ ಕೆಲಸವಾಗಿತ್ತು. ಆದರೆ, ವಿಧಿ ವಿಜ್ಞಾನ ಪ್ರಯತ್ನಿಸಿದರೆ ಅದು ಕಷ್ಟವೇನಲ್ಲ. ಆಗಿದ್ದು ಹಾಗೇ, ವಿವಿಧ ಒತ್ತಡ ಮತ್ತು ದೂರಗಳಿಂದ ರಕ್ತವನ್ನು ಚಿಮ್ಮಿಸಿ ಹಲವಾರು ಪ್ರಯೋಗಗಳನ್ನು ಮಾಡಲಾಯಿತು. ಅಂತಿಮವಾಗಿ, ನಾಲ್ಕು ಅಡಿ ದೂರದ ಚಿಮ್ಮುವ ವಿನ್ಯಾಸವೊಂದು ಯಥಾವತ್ತಾಗಿ ಅವಳ ಪ್ಯಾಂಟಿನ ಮೇಲಿನ ಸಿಡಿತಕ್ಕೆ ಖಚಿತವಾಗಿ ಹೊಂದಾಣಿಕೆ ಆಯಿತು.

ಈ ಸಂದೇಹ ಬಂದ ಕೂಡಲೇ, ಈ ಮೊದಲೇ ಇದ್ದ ಇನ್ನೊಂದು ಸಂದೇಹಕ್ಕೆ ರೆಕ್ಕೆಪುಕ್ಕಗಳು ಹುಟ್ಟಿಕೊಂಡವು. ಬ್ರೆಂಡಾಳಿಗೆ ಬಿದ್ದಿದ್ದ ಗುಂಡಿನ ಚಿತ್ರಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದಾಗ ಸಿಕ್ಕ ಉತ್ತರದಿಂದ ಪೊಲೀಸರ ಗುಮಾನಿ ವಾಸ್ತವವಾಗಿತ್ತು. ಆ ಗುಂಡು ಗರಿಷ್ಠ 3-4 ಅಡಿಗಳ ಅಂತರದಿಂದ ಸಿಡಿದದ್ದಾಗಿತ್ತು. ಹಾಗಾದರೆ, ಇಲ್ಲಿ ಏನು ನಡೆದಿರಬಹುದು? ತನಿಖಾಧಿಕಾರಿಗಳಿಗೆ ಒಂದು ಸ್ಪಷ್ಟ ಚಿತ್ರವೇನೋ ಸಿಕ್ಕಿತ್ತು. ಆದರೆ, ಅದನ್ನು ಖಚಿತಪಡಿಸಿಕೊಳ್ಳಲು ಅಂತಿಮವಾಗಿ ಕೆಲವು ಪ್ರಶ್ನೆಗಳಿಗೆ ಉತ್ತರಗಳು ಬೇಕಿದ್ದವು.

ಕೊಲೆಗೆ ಬಳಸಿರುವ ಆಯುಧಗಳು ಎಲ್ಲಿವೆ? ಅವುಗಳ ಒಡೆಯರು ಯಾರು? ನೆರೆಮನೆಯಲ್ಲಿ ಅಡಗಿದ್ದ ವ್ಯಕ್ತಿ ಸ್ವತಃ ಬ್ರೆಂಡಾಳ ಪ್ರಿಯತಮನೇ?

ಯಾವುದೇ ಕಿಟಕಿ, ಬಾಗಿಲುಗಳನ್ನು ಮುರಿಯದೆ ಬ್ರೆಂಡಾಳ ನೆರೆಮನೆಯ ಒಳಹೋಗಲು ಇಬ್ಬರಿಗೆ ಮಾತ್ರ ಸಾಧ್ಯ ಇತ್ತು. ಒಂದು; ಸ್ವತಃ ಬ್ರೆಂಡಾ, ಎರಡು; ಅವಳ ಪ್ರಿಯತಮ. ಅವಳದೇ ಹೇಳಿಕೆ ಪ್ರಕಾರ, ಆ ಮನೆಯ ಕೀಲಿಕೈ ಆಕೆಯ ಬಳಿಯೇ ಇತ್ತು. ಆದರೆ ಅವಳು ಹೋಗಿಲ್ಲ, ಪೊಲೀಸರು ಸ್ಥಳಕ್ಕೆ ಬಂದಾಗ ಅವಳು ಅಲ್ಲಿಯೇ ಇದ್ದಳು. ಹಾಗಾದರೆ, ಅವಳ ಪ್ರಿಯತಮನೇ ಆಗಿರಬೇಕು ಎಂಬುದರಲ್ಲಿ ಸಂದೇಹವೇ ಇಲ್ಲ. ಒಂದು ತಂಡ ಅವನು ಪ್ರವೇಶಿಸಿದ್ದ ಜಾಗದಿಂದ ಆತ ಅವಿತಿದ್ದ ಓಡಾಡಿದ್ದ ಜಾಗಗಳಲ್ಲಿ ಲ್ಯುಮಿನಾಲನ್ನು ಸಿಂಪಡಿಸಿತು. ಎಲ್ಲೂ ಅವನ ಕೈ, ಕಾಲು, ಬೆರಳಚ್ಚುಗಳಿಲ್ಲ. ಆದರೆ, ಅವನು ಮಂಚ ಕೆಳಗೆ ಅವಿತಿದ್ದಿರಬಹುದು ಎಂಬ ಗುಮಾನಿ ಇದ್ದ ಕಡೆ ಸಿಂಪಡಿಸಿದಾಗ ಸ್ಪಷ್ಟವಾದ ಕೈಗುರುತುಗಳು ಕಂಡವು. ಬಹುಶಃ ಅಲ್ಲಿಗೆ ಬಂದು ತಲುಪಿದ ನಂತರ ಅವನು ಕೈಗವುಸುಗಳನ್ನು ತೆಗೆದಿರಬೇಕು.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಕೊಲೆಯಾದವಳ ಮಗನೊಳಗೇ ಇತ್ತೇ ಕೊಲೆಗಾರನ ಸುಳಿವು?

ಇನ್ನೊಂದು ತಂಡ ಇಡೀ ನಗರದ ಪಿಸ್ತೂಲು ಮಾರಾಟಗಾರರ ಬೆನ್ನು ಹತ್ತಿತು. ಕಳೆದ 2-3 ತಿಂಗಳಿನಲ್ಲಿ ಪಾಯಿಂಟ್‌ 22 ಕ್ಯಾಲಿಬರ್‌ ಪಿಸ್ತೂಲು ಮತ್ತು ಶಾಟ್‌ ಗನ್ನುಗಳ ಖರೀದಿದಾರ ಹೆಸರು, ವಿಳಾಸಗಳನ್ನು ಪರಿಶೀಲಿಸಲಾಯಿತು. ಅದರಲ್ಲೊಂದು ಹೆಸರು ಅವರ ಗಮನ ಸೆಳೆಯಿತು, ಅದು ಜೇಮ್ಸ್‌ ಪವಾಟ್‌. ಇವನು ಒಂದು ತಿಂಗಳ ಹಿಂದೆ ತನ್ನ ಕ್ರೆಡಿಟ್‌ ಕಾರ್ಡ್‌ ಬಳಸಿ ಅದನ್ನು ಖರೀದಿಸಿದ್ದ. ಅಷ್ಟು ಹೊತ್ತಿಗೆ ಬಂದ ವಿಧಿ ವಿಜ್ಞಾನದ ವರದಿ ಕೂಡ, ಮಂಚದ ಕೆಳಗಿದ್ದ ಕೈಯಚ್ಚು ಸಹ ಅದು ಜೇಮ್ಸ್‌ ಪವಾಟನದೇ ಎಂದು ಖಚಿತಪಡಿಸಿತು. ಅವನನ್ನು ಬಂಧಿಸಿ ವಿಚಾರಣೆ ಮಾಡಲಾಗಿ, ತನಗೂ ಕೊಲೆಗೂ ಸಂಬಂಧವಿಲ್ಲ ಎಂದು ಹೇಳಿದ.

ಸಿಕ್ಕಿದ ಸಾಕ್ಷ್ಯಾಧಾರಗಳನ್ನು ಆಧರಿಸಿ, ಅವರಿಬ್ಬರೂ ಸೇರಿ ಹೇಗೆ ಕೊಲೆ ಮಾಡಿದ್ದಾರೆ ಎಂಬ ಚಿತ್ರವನ್ನು ಪೊಲೀಸರು ಬಿಡಿಸಿಟ್ಟರು. "ಮೊದಲಿಗೆ ರಾಬರ್ಟ್ ಬದಲಿಸಿದ್ದ ನಾಮಿನಿಯನ್ನು ಇಬ್ಬರೂ ಸೇರಿ ಫೋರ್ಜರಿಯ ಮೂಲಕ ಮತ್ತೆ ಬದಲಿಸಿದ್ದೀರಿ. ನಂತರ ಕೊಲೆಗೆ ಸಂಚು ರೂಪಿಸಿದ್ದೀರಿ. ಕಾರಿನ ಬ್ರೇಕ್ ಪೈಪ್‌ ಕತ್ತರಿಸಿ ಮಾಡಲಾದ ಅಪಘಾತದ ಕರೆ ಕೊಲೆಯ ಮೊದಲ ಪ್ರಯತ್ನವಾಗಿತ್ತು. ಅದು ಫಲಿಸದೆಹೋದಾಗ, ನೇರ ದಾಳಿಯ ಯೋಜನೆ ರೂಪಿಸಿದ್ದೀರಿ. ರಾಬರ್ಟ್‌ ಕಾರು ನಿಲ್ಲಿಸಿ ಒಳಗೆ ಬರುತ್ತಿದ್ದಂತೆ, ಒಬ್ಬಳೇ ನಿಂತಿದ್ದ ಬ್ರೆಂಡಾಳನ್ನು ನೋಡಿ ಅವನಿಗೆ ಆಶ್ಚರ್ಯ ಮತ್ತು ಭಯ ಒಟ್ಟಿಗೇ ಉಂಟಾಗಿವೆ. ಆಗ ಅವಳು ಫರ್ನೇಸಿಗೆ ಬೆಂಕಿ ಕೊಡುವಂತೆ ಹೇಳಿದ್ದಾಳೆ. ಅವನು ಫರ್ನೇಸಿನೊಳಗೆ ಬೆಂಕಿ ಹೊತ್ತಿಸಲು ಕೂರುತ್ತಿದ್ದಂತೆ ಗ್ಯಾರೇಜಿನೊಳಗಿದ್ದ ಬ್ರೆಂಡಾಳ ವ್ಯಾನಿನ ಮರೆಯಲ್ಲಿ ಅಡಗಿದ್ದ ನೀನು ಗನ್ ಗುರಿ ಇಟ್ಟಿದ್ದೀಯ. ಮೊದಲೇ ಸಂದೇಹ ಹೊಂದಿದ್ದ ಅವನು ಅತ್ತ ನೋಡಿದ್ದಾನೆ. ನಿನ್ನನ್ನು ಕಂಡದ್ದೇ ತಡ ಪಕ್ಕದಲ್ಲಿ ಬಿದ್ದಿದ್ದ ಖಾಲಿ ಡಬ್ಬಗಳ ಚೀಲವನ್ನು ಅವನು ಅಡ್ಡ ಹಿಡಿದಿದ್ದಾನೆ. ಮೊದಲ ಗುಂಡು ಗುರಿ ತಪ್ಪಿ ಭುಜದ ಮೂಲಕ ಹರಿದಿದೆ. ತಕ್ಷಣ ಅವನು ಎದ್ದು ಬ್ರೆಂಡಾಳತ್ತ ಓಡಿದ್ದಾನೆ. ಅಷ್ಟರಲ್ಲಿ ನೀನು ಗನ್ನನ್ನು ಬ್ರೆಂಡಾಳತ್ತ ಎಸೆದಿದ್ದೀಯ. ಗನ್ನನ್ನು ಹಿಡಿದುಕೊಂಡ ಬ್ರೆಂಡಾ ತನ್ನ ಬಳಿಗೆ ಬಂದಿದ್ದ ಗಂಡನಿಗೆ ಕೇವಲ ನಾಲ್ಕು ಅಡಿಗಳ ಅಂತರದಿಂದ ಫೈರ್‌ ಮಾಡಿದ್ದಾಳೆ. ಅವನು ತಕ್ಷಣ ಕುಸಿದು ಬಿದ್ದಿದ್ದಾನೆ. ಅವನು ಮೃತನಾಗಿರುವುದನ್ನು ಖಚಿತಪಡಿಸಿಕೊಂಡು, ನೀನು ಅವನ ಬಳಿ ಇದ್ದ ಇನ್ನೊಂದು ಪಿಸ್ತೂಲಿನಿಂದ ರಾಬರ್ಟನ ಹೆಣದ ಬಳಿಯೇ ನಿಂತು ಅವಳ ತೋಳಿಗೆ ಹೆಚ್ಚು ಹಾನಿಯಾಗದ ಜಾಗ ನೋಡಿ, ಕೇವಲ ನಾಲ್ಕು ಅಡಿ ಅಂತರದಿಂದ ಗುಂಡು ಹಾರಿಸಿದ್ದೀಯ..."

Image

ಈ ಮರುನಿರ್ಮಿತ ಘಟನಾವಳಿಗಳನ್ನು ಕೇಳಿದ ಪವಾಟ ಬಿಳಿಚಿಕೊಂಡುಬಿಟ್ಟಿದ್ದ. ಕೂಡಲೇ ಬ್ರೆಂಡಾಳನ್ನು ಬಂಧಿಸಲಾಯಿತು. ಇಬ್ಬರ ಮೇಲೂ ಮೊದಲ ಡಿಗ್ರಿ ಕೊಲೆಗಳ ಮೊಕದ್ದಮೆ ಹೂಡಲಾಯಿತು. ಮೊದಲಿಗೆ ಪವಾಟನ ವಿಚಾರಣೆ ಮುಗಿಯಿತು. ಅವನಿಗೆ ಮರಣ ದಂಡನೆ ವಿಧಿಸಲಾಯಿತು. ಅನೇಕ ನೆಪಗಳ ಮೂಲಕ ಶಿಕ್ಷೆಯಿಂದ ವಿನಾಯತಿ ಪಡೆಯಲು ಬ್ರೆಂಡಾ ಭಾರೀ ಸರ್ಕಸ್ಸುಗಳನ್ನು ಮಾಡಿದ ಕಾರಣ ಅವಳ ವಿಚಾರಣೆ ಸ್ವಲ್ಪ ತಡವಾಯಿತು. ಪ್ರಿಯತಮನ ಮೇಲೆ ಪ್ರಲೋಭನೆ, ಚಿತಾವಣೆಯ ಅಪಾದನೆಗಳನ್ನು ಮಾಡಿಯೂ ಪ್ರಯತ್ನಿಸಿದಳು. ಆದರೆ, ಅವನ್ನೆಲ್ಲ ನಿರಾಕರಿಸಿದ ಅವಳ ಪ್ರಿಯತಮ, “ಹತ್ಯೆಯ ಇಡೀ ಯೋಜನೆಯನ್ನು ರೂಪಿಸಿದ್ದೇ ಅವಳು,” ಎಂದ. ಶಿಕ್ಷೆ ಗ್ಯಾರಂಟಿಯಾಯಿತು. ಆದರೆ, ಜೀವಾವಧಿ ಶಿಕ್ಷೆಯನ್ನು ನಿರೀಕ್ಷಿಸಲಾಗಿತ್ತು. ದೀರ್ಘ ವಿಚಾರಣೆಯ ಅವಧಿಯಲ್ಲಿ ಇವಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದ ನ್ಯಾಯಾಲಯ, ಇವಳಿಗೂ ಮರಣ ದಂಡನೆಯನ್ನು ವಿಧಿಸಿತು.

ಉಪಸಂಹಾರ

ಇಲ್ಲಿ ಹೇಳುವಂಥದ್ದು ಹೆಚ್ಚಿಲ್ಲ. ರಾಬರ್ಟನನ್ನು ಸಜ್ಜನ ಎಂದರೆ, ಅವನೇಕೆ ಅಷ್ಟು ಸಜ್ಜನ ಆಗಬೇಕಿತ್ತು ಎಂದು ಕೆಲವರು ಕೇಳುತ್ತಾರೆ. ಹೆಂಡತಿಗೆ ಗಂಡ ಇಷ್ಟವಿಲ್ಲ ಎಂದರೆ ಬಿಟ್ಟುಹೋಗಬೇಕಿತ್ತು ಎಂದರೆ, ಅವನೇನು ಹಿಂಸೆ ಕೊಡುತ್ತಿದ್ದನೋ ಎಂದು ಕೆಲವರು ಕೇಳುತ್ತಾರೆ. ತೀರ್ಪು ಸ್ವಲ್ಪ ಕಠಿಣವಾಯಿತೇನೋ ಎಂದರೆ, ಅಂಥ ದುಡ್ಡಿನ ಮನೋರೋಗ ಹತ್ತಿದ್ದ ಆ ಹೆಂಗಸಿಗೆ ಇನ್ನೇನು ಪೂಜೆ ಮಾಡಬೇಕಿತ್ತೇ ಎಂದು ಕೇಳುವವರೂ ಉಂಟು. ಹಾಗಾಗಿ, ಕೇಳುವುದೇನಿದ್ದರೂ ನಮ್ಮೊಳಗನ್ನೇ ನಾವು ಕೇಳಿಕೊಳ್ಳಬೇಕು - ಈ ಸಾವು ನ್ಯಾಯವೇ?

ನಿಮಗೆ ಏನು ಅನ್ನಿಸ್ತು?
2 ವೋಟ್