ವಿಧಿ ಮತ್ತು ವಿಜ್ಞಾನ | ಅತ್ಯಾಚಾರಗಳ ಕಾಲುದಾರಿಯಲ್ಲಿ ಡಿಎನ್ಎ ತಿರುವು

VIDHI VIJNANA 4

ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ 'ವಿಧಿವಿಜ್ಞಾನ' ಎಂಬ ವಿಭಾಗ ತನ್ನ ಸಾಮರ್ಥ್ಯ ಮತ್ತು ದಕ್ಷತೆಯನ್ನು ಆಧರಿಸಿ ನಿಜ ಅಪರಾಧಿಯನ್ನು ಜಾಲದೊಳಕ್ಕೆ ಎಳೆದ ಅತ್ಯಂತ ಮಹತ್ವದ ಪ್ರಕರಣವಿದು. ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳುವುದಾದರೆ, ತಾನಾಗಿ ತಪ್ಪೊಪ್ಪಿಕೊಂಡಿದ್ದ ನಿರಪರಾಧಿಯೊಬ್ಬನನ್ನು ನೇಣಿನ ಕುಣಿಕೆಯಿಂದ ಪಾರು ಮಾಡಿದ ಸ್ವಾರಸ್ಯಕರ ಕತೆ ಇದು

ಇಂಗ್ಲೆಂಡ್‌ನ ಲೈಸೆಸ್ಟರ್ಶೈರ್ ಪ್ರದೇಶದ ನಾರ್ಬೊರೊಗ್‌ ಗ್ರಾಮ. ಆರು ಸಾವಿರದ ಆಜುಬಾಜು ಜನಸಂಖ್ಯೆ. ಅಪರಾಧಗಳ ಸಂಖ್ಯೆ ಸೊನ್ನೆ. ಇಲ್ಲಿಯ ನಿವಾಸಿಗಳು ಕೊಲೆ, ಅತ್ಯಾಚಾರಗಳನ್ನು ಕಂಡವರಲ್ಲ. ಆದರೆ...

1983ರ ನವೆಂಬರ್‌ 22 - ನಾರ್ಬೊರೊಗ್‌ ಜನರಿಗೆ ಸಾಮಾನ್ಯ ದಿನವಾಗಿರಲಿಲ್ಲ. ಊರಿನ ಎಲ್ಲ ಹೆಣ್ಣುಮಕ್ಕಳಂತೆ ಶಾಲೆಯನ್ನು, ಗೆಳತಿಯರನ್ನು ಇಷ್ಟಪಡುವ 15 ವರ್ಷ ವಯಸ್ಸಿನ ಲಿಂಡಮ್ಯಾನ್ ಎಂಬ ಸಾಮಾನ್ಯ ಹುಡುಗಿ ಹಠಾತ್ತಾಗಿ ಕಣ್ಮರೆಯಾದಳು. ನವೆಂಬರ್‌ ತಿಂಗಳ ಗಡಗಡಿಸುವ ಚಳಿಯ ಆ ದಿನ ಒಂದು ಮೈಲು ದೂರದಲ್ಲಿದ್ದ ಗೆಳತಿಯ ಮನೆಗೆಂದು ಹೋದವಳು ತಡರಾತ್ರಿಯಾದರೂ ಹಿಂತಿರುಗಲಿಲ್ಲ. ಆತಂಕಿತರಾದ ತಂದೆ-ತಾಯಿ ಪೊಲೀಸರಿಗೆ ಕರೆ ಮಾಡಿದರು.

ಬೆಳಗಿನ ಜಾವ, ಅಷ್ಟೇನೂ ಜನ ಬಳಕೆ ಇಲ್ಲದ ಕುರುಚಲು ಪೊದೆಗಳಿದ್ದ ಕಾಲುದಾರಿಯ ಪಕ್ಕದಲ್ಲಿ ಆಕೆಯ ಅರೆಬೆತ್ತಲೆ ದೇಹ ಪತ್ತೆಯಾಯಿತು. ಉಡುಪಿಲ್ಲದ ದೇಹದ ಕೆಳಾರ್ಧ ಭಾಗ ಏನೇನು ನಡೆದಿದೆ ಎಂದು ಹೇಳುತ್ತಿತ್ತು. ಆದರೆ, ದೇಹದ ಮೇಲೆ ಯಾವುದೇ ಹೊಡೆತ/ ಗಾಯದ ಗುರುತುಗಳಿರಲಿಲ್ಲ. ಬಹುಶಃ ಅತ್ಯಾಚಾರಕ್ಕೆ ಮೊದಲೇ ಹತ್ಯೆ ಸಂಭವಿಸಿರಬೇಕು. ಅವಳು ಕುತ್ತಿಗೆಗೆ ಸುತ್ತಿಕೊಂಡಿದ್ದ ಸ್ಕಾರ್ಫ್‌ನಿಂದಲೇ ಕತ್ತನ್ನು ಬಿಗಿಯಲಾಗಿತ್ತು.

ಊರಿನ ಇತಿಹಾಸದಲ್ಲೇ ನಡೆಯದ ಎರಡು ಅಪರಾಧಗಳು ಒಟ್ಟೊಟ್ಟಿಗೇ ನಡೆದುಹೋಗಿದ್ದವು; ಅತ್ಯಾಚಾರ ಮತ್ತು ಕೊಲೆ. ಜನ ಹೌಹಾರಿದರು. ಶವಪರೀಕ್ಷೆ ಸಹ ಹೆಚ್ಚಿನ ಹಿಂಸೆ ನಡೆದಿಲ್ಲ ಎಂದಿತು. ಅಪರಾಧದ ಪ್ರಧಾನ ಪುರಾವೆಯಾದ ವೀರ್ಯವನ್ನು ಸಂಗ್ರಹಿಸಲಾಯಿತು. ಪತ್ತೇದಾರ ಡೇವಿಡ್‌ ಬೇಕರ್‌ನಿಗೆ ಈ ಪ್ರಕರಣದ ತನಿಖೆಯ ಹೊಣೆ ನೀಡಲಾಯಿತು. ಅವನು ಸ್ಥಳ ಪರೀಕ್ಷೆಯ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಶವ ಪರೀಕ್ಷೆಯ ವರದಿಗಾಗಿ ನಿರೀಕ್ಷಿಸಿದ. ಶವ ಪರೀಕ್ಷೆಯಲ್ಲಿ ಸಂಗ್ರಹಿಸಲಾಗಿದ್ದ ವೀರ್ಯದ ಮಾದರಿಯನ್ನು ಪರೀಕ್ಷೆ ಮಾಡಿದಾಗ ಬಂದ ಫಲಿತಾಂಶ ಎಂದರೆ, ಅದು, 'ಎ' ನಮೂನೆ ರಕ್ತವಾಗಿತ್ತು ಮತ್ತು 'ಪಿಟಿ ಎಂ-1' ಪ್ಲಸ್‌ ಎನ್ಸೈಮ್‌ ಪ್ರೊಫೈಲ್ (ಅದರ ರಕ್ತ ಹೆಪ್ಪುಗಟ್ಟುವ ಅವಧಿ) ಆಗಿತ್ತು. ಆದರೆ, ಇದು ಇಂಗ್ಲೆಂಡಿನ ಶೇ.10ರಷ್ಟು ವಯಸ್ಕ ಪುರುಷರನ್ನು ಪ್ರತಿನಿಧಿಸುತ್ತಿತ್ತು. ಈ ವರದಿಯನ್ನು ನೋಡಿ ಬೇಕರ್‌ ಚಿಂತಾಕ್ರಾಂತನಾದ. ಇಡೀ ದೇಶದ ಶೇಕಡ 10ರಷ್ಟು ಪುರುಷರ ವೀರ್ಯವನ್ನು ಪರೀಕ್ಷಿಸಲಾದೀತೇ?

Image
VIDHI VIJNANA 1
ಸಾಂದರ್ಭಿಕ ಚಿತ್ರ

ಹೀಗಾಗಿ, ಈ ವೀರ್ಯದ ಸಮಸ್ಯೆಯನ್ನು ಪೊಲೀಸರು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳಬೇಕಿತ್ತು. ಅವರ ತಲೆಯಲ್ಲಿ ಒಂದು ಸಂಗತಿ ಸುತ್ತಿ-ಸುತ್ತಿ ಬರುತ್ತಲೇ ಇತ್ತು. ಅದೆಂದರೆ, ಲಿಂಡಾಳ ಶವ ಸಿಕ್ಕಿದ ಜಾಗದಿಂದ ಕೇವಲ ನೂರು ಗಜ ದೂರದಲ್ಲಿ ಸ್ಥಳೀಯ ಮನೋರೋಗಿಗಳ ಆಸ್ಪತ್ರೆ ಇತ್ತು. “ಈ ಊರಿನಲ್ಲಿ ಬಹುಶಃ ತಲೆ ನೆಟ್ಟಗಿರುವವರು ಯಾರೂ ಇಂಥ ಕ್ರೌರ್ಯವನ್ನು ಎಸಗಲಾರರು. ಯಾರೋ ತಲೆ ಸಮ ಇಲ್ಲದವರೇ ಇದನ್ನು ಮಾಡಿರಬೇಕು,” ಎಂಬ ಗುಮಾನಿ ಅವರದಾಗಿತ್ತು. ಇಂಥದ್ದೊಂದು ಆಯಾಮವನ್ನು ಗುರಿಯಾಗಿಟ್ಟುಕೊಂಡು ನಡೆಸಿದ ತನಿಖೆಯಲ್ಲಿ ಗಮನಾರ್ಹವಾದ ಫಲಿತಾಂಶವೇನೂ ಬರಲಿಲ್ಲ. ಆದರೆ, ಆ ಸಂದೇಹ ಜೀವಂತವಾಗಿಯೇ ಇತ್ತು. ಈ ಹಿನ್ನೆಲೆಯಲ್ಲಿ, ಲಿಂಡಾಳ ಹತ್ಯೆಯಾದ ಸಂಜೆ ಅವಳ ಚಲನವಲನಗಳ ಬಗ್ಗೆ, ವ್ಯಕ್ತಿಗಳ ಅಸಹಜ ಘಟನೆ/ ನಡವಳಿಕೆಗಳ ಬಗ್ಗೆ ಊರಿನ ಸಾವಿರಾರು ಜನರನ್ನು ಪ್ರಶ್ನಿಸಲಾಯಿತು. ಸಿಕ್ಕಿದ ಪ್ರತೀ ಎಳೆಯನ್ನೂ ಬೆನ್ನತ್ತಿದ ತನಿಖಾ ತಂಡ ಬರಿಗೈಯಲ್ಲಿ ಹಿಂತಿರುಗುವುದನ್ನು ಜನ ಗಮನಿಸುತ್ತಿದ್ದರು. ಈ ಘಟನೆಯ ಮೂಲ ನಿಗೂಢವಾದಂತೆಲ್ಲ ಜನರಲ್ಲಿ, ಅದರಲ್ಲೂ ವಯಸ್ಕ ಹೆಣ್ಣುಮಕ್ಕಳನ್ನು ಹೊಂದಿರುವ ಪೋಷಕರಲ್ಲಿ ಆತಂಕ ಉಲ್ಭಣಿಸುತ್ತಿತ್ತು.

ಈ ನಡುವೆ, ಲಿಂಡಾಳ ಶವಸಂಸ್ಕಾರದಲ್ಲಿ ಇಡೀ ಊರಿನ ಜನ ಸೇರಿದ್ದರು. ಪೊಲೀಸರು ದೂರದಿಂದ ಆ ಪ್ರಕ್ರಿಯೆಯ ಮೇಲೆ ಕಣ್ಗಾವಲು ಇರಿಸಿದ್ದರು ಮತ್ತು ವಿಡಿಯೊ ದಾಖಲೆ ಮಾಡಿದರು. ಯಾವುದೇ ವ್ಯಕ್ತಿಯ ನಡೆ-ನುಡಿಗಳ ಮೂಲಕ ಅಪರಾಧದ ಸುಳಿವುಗಳೇನಾದರೂ ಸಿಕ್ಕಬಹುದೇ ಎಂದು ಕಾಯ್ದರು. ಹೇಳಿಕೊಳ್ಳುವಂಥದ್ದೇನೂ ಕಾಣಲಿಲ್ಲ. ಆನಂತರ ಪೊಲೀಸರು ಲಿಂಡಾಳ ವಿವರ, ಚಿತ್ರಗಳಿರುವ ಪೋಸ್ಟರ್‌ಗಳನ್ನು ಪ್ರದೇಶದ ತುಂಬಾ ಅಂಟಿಸಿ, ಹಂಚಿ ಪ್ರಚಾರ ಮಾಡಿದರು.

ಪರಿಣಾಮವಾಗಿ, ಸಾರ್ವಜನಿಕರಿಂದ ಅನೇಕ ಕರೆಗಳು ಬಂದವು. ಅವುಗಳ ಬೆನ್ನು ಹತ್ತಿ ತನಿಖೆಯನ್ನೂ ಮಾಡಲಾಯಿತು. ಎಲ್ಲವೂ ಬಹುಪಾಲು ಊಹೆಗಳಾಗಿದ್ದವು. ಅಲ್ಲದೆ, ಯಾವುದೇ ಕಣ್ಸಾಕ್ಷಿ ಇಲ್ಲದ, ಪ್ರಬಲ ಹೊರಸಾಕ್ಷಿಗಳಿಲ್ಲದ ಪ್ರಕರಣ ದಿನದಿಂದ ದಿನಕ್ಕೆ ಮುಂದೂಡಲ್ಪಟ್ಟಿತು. ವಾರಗಳು, ತಿಂಗಳುಗಳು ಗತಿಸುತ್ತ ಹೋದವು. ಪ್ರಕರಣ ಜನರ ಮನಸ್ಸಿನಿಂದ ಮಾಸದಿರಲಿ ಎಂದು ಪೊಲೀಸರು ಆಗಾಗ್ಗೆ ಪೋಸ್ಟರುಗಳನ್ನು ಹಂಚಿ ನೆನಪನ್ನು ಜಾಗೃತವಾಗಿಡಲು ಪ್ರಯತ್ನಿಸಿದರು. ಇವರೊಂದಿಗೆ ಊರ ಜನ ಮತ್ತು ಲಿಂಡಾಳ ಪೋಷಕರು ಹೆಗಲು ನೀಡಿದರು. ಆದರೂ, ಏನೂ ಆಗಲಿಲ್ಲ. ಹೀಗೆಯೇ ಮೂರು ವರ್ಷ ಗತಿಸಿದವು. ಲಿಂಡಾ ಜನರ ಮನೋಮಂಡಲದಿಂದ ನಿಧಾನವಾಗಿ ನಿರ್ಗಮಿಸಲಾರಂಭಿಸಿದಳು.

ಹೀಗೆ, ಅಪರಾಧವೊಂದು ನಡೆದು, ಸುಳಿವುಗಳ ಕೊರತೆಯಿಂದಾಗಿ ಅದು ಶೀತಪೆಟ್ಟಿಗೆ ಸೇರಿದಾಗ/ಸೇರುತ್ತಿದ್ದಾಗ ಹಠಾತ್ತಾಗಿ ಇನ್ನೊಂದು ಅಂತಹದೇ ಘಟನೆ ನಡೆದು, ಹಳೆಯ ನೆನಪುಗಳನ್ನು ಮತ್ತೆ ಹಸಿರಾಗಿಸುವುದುಂಟು. ಮರೆತೇಹೋಗಿದ್ದ ಅನೇಕ ಪ್ರಕರಣಗಳು ಮತ್ತೆ ಮುಂಚೂಣಿಗೆ ಬರುವ ಇಂತಹ ಪರಂಪರೆ ಹೊಸದೇನೂ ಅಲ್ಲ. ಇಂಥ ಆಕಸ್ಮಿಕ ಸಂಭವಗಳೇ ಅನೇಕ ಪ್ರಕರಣಗಳನ್ನು ಬಗೆಹರಿಸಿವೆ ಎಂಬುದು ಚಾರಿತ್ರಿಕ ಸತ್ಯ. ವಾಸ್ತವದಲ್ಲಿ ಪೊಲೀಸರಿಗೂ ಇಂಥ ಸಂಭವನೀಯತೆಗಳ ಮೇಲೆ ಅಪಾರ ಭರವಸೆ.

Image
VIDHI VIJNANA 2
ಸಾಂದರ್ಭಿಕ ಚಿತ್ರ

1986ರ ಜುಲೈ 31. ನಾರ್ಬೊರೊಗ್‌ನಲ್ಲಿ ಸಹ ಇಂಥದ್ದೇ ದುರಂತವೊಂದು ಸಂಭವಿಸಿತು. ಸುದ್ದಿ ಪತ್ರಿಕೆಗಳನ್ನು ಮಾರುವ ಆಂಗಡಿಯೊಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಡಾನ್‌ ಆಷ್‌ವರ್ತ್ ಎಂಬ 15 ವರ್ಷದ ಹುಡುಗಿ ನಿತ್ಯ ರಾತ್ರಿ 9.3೦ಕ್ಕೆ ಮನೆಗೆ ಬರುತ್ತಿದ್ದಳು. ಅಂದು ಆ ಅವಧಿ ಮೀರಿದರೂ ಅವಳು ಹಿಂತಿರುಗಲಿಲ್ಲ. ಗಾಬರಿಗೊಂಡ ಪೋಷಕರು ಪೊಲೀಸರನ್ನು ಸಂಪರ್ಕಿಸಿದರು. ಪೊಲೀಸರು ಸಾರ್ವಜನಿಕರನ್ನು ಸಂಪರ್ಕಿಸಿದರು. ಎಲ್ಲರೂ ಕೂಡಿ ಹುಡುಕಾಟಕ್ಕಿಳಿದರು. ಈ ನಡುವೆ ದೊರೆತ ಮಾಹಿತಿಯಂತೆ, ಆಕೆ ಮನೆಗೆ ಹಿಂತಿರುಗುವಾಗ ಮುಖ್ಯರಸ್ತೆಯ ಬದಲು‌, ಸ್ಥಳೀಯರು ʻಟೆನ್‌ಪೌಂಡ್‌ ಲೈನ್ʼ ಎಂದು ಕರೆಯುವ ಕಾಲುದಾರಿಯಲ್ಲಿ ಹೋಗಿದ್ದಳು. ಬೆಳಕು ಹರಿದ ಮೇಲೂ ಹುಡುಕಾಟ ಮುಂದುವರಿಯಿತು. ಎಲ್ಲರ ಮನಸ್ಸಿನಲ್ಲಿ ಲಿಂಡಾಮ್ಯಾನ್ ನೆನಪು ಕಾಡುತ್ತಿತ್ತು. ಹಾಗಾಗಿರದಿರಲಿ ಎಂದು ಹಾರೈಸುತ್ತಲೇ ಹುಡುಕಾಟ ಮುಂದುವರಿಸಿದ್ದರು. ಇಲ್ಲ… ಎಲ್ಲಿಯೂ ಅವಳ ಸುಳಿವಿಲ್ಲ!

ಕಾಣೆಯಾದ ಮೇಲೆ ಎರಡನೇ ಹಗಲು, ಎಲ್ಲರೂ ಆತಂಕದಲ್ಲಿದ್ದರು. ಅಷ್ಟು ಹೊತ್ತಿಗೆ ಅವಳು ಪತ್ತೆಯಾದ ಸುದ್ದಿ ಹರಡಿತು. ಜೀವಂತವಾಗಿ ಅಲ್ಲ, ಶವವಾಗಿ. ಒಂದು ಪೊದೆಯ ನಡುವೆ ಬೆತ್ತಲೆಯಾಗಿ ದೇಹ ಪತ್ತೆಯಾಗಿತ್ತು. ಆ ಜಾಗ, ಮೂರು ವರ್ಷದ ಹಿಂದೆ ಲಿಂಡಾ ಬಿದ್ದಿದ್ದ ಸ್ಥಳದಿಂದ ಕೇವಲ ಒಂದು ಮೈಲು ದೂರದಲ್ಲಿತ್ತು. ಈ ದೇಹದ ಸ್ಥಿತಿ ಬಹುಪಾಲು ಹಿಂದಿನ ಪ್ರಕರಣದಂತೆಯೇ ಇತ್ತು. ಲೈಂಗಿಕ ಅತ್ಯಾಚಾರ, ದೈಹಿಕ ಹಿಂಸೆಗಳು ಹೊರನೋಟಕ್ಕೆ ನಿಜ ಅನ್ನಿಸುತ್ತಿದ್ದವು. ಶವ ಪರೀಕ್ಷೆ ಇದನ್ನು ದೃಢಪಡಿಸಿತು. ಆದರೆ, ಈಕೆ ಲಿಂಡಾಳಷ್ಟು ಸಲೀಸಾಗಿ ಬಲಿಯಾದಂತಿರಲಿಲ್ಲ. ಅತ್ಯಾಚಾರಿಯೊಂದಿಗೆ ಹೋರಾಟ ಮಾಡಿದ್ದಳು. ಆ ಹೋರಾಟದ ಗುರುತುಗಳು ಅವಳ ದೇಹ ಮತ್ತು ಗುಪ್ತಾಂಗಗಳ ಮೇಲೆ ದಾಖಲಾಗಿದ್ದವು. ಕೊಲೆಗಾರನ ಪ್ರತಿದಾಳಿ ಹಿಂಸಾತ್ಮಕವಾಗಿತ್ತು ಎಂಬುದರಲ್ಲಿ ಸಂದೇಹವೇ ಇರಲಿಲ್ಲ. ಅಂತಿಮವಾಗಿ ಕುತ್ತಿಗೆ ಬಿಗಿದು ಕೊಲ್ಲಲಾಗಿತ್ತು.

ಇಲ್ಲಿನ ಸಾಮ್ಯತೆಗಳನ್ನು ನೋಡಿದರೆ ಯಾರಿಗಾದರೂ ಅಚ್ಚರಿಯಾಗುತ್ತಿತ್ತು. ಈ ಇಬ್ಬರೂ ಹೆಣ್ಣುಮಕ್ಕಳು ಒಂದೇ ಸಾಮಾಜಿಕ ಸ್ಥಿತಿ, ಹಿನ್ನೆಲೆಯವರು. ಕೊಲೆಯಾದಾಗ ಇಬ್ಬರಿಗೂ ಒಂದೇ ವಯಸ್ಸು. ಈ ಇಬ್ಬರೂ ಓದುತ್ತಿದ್ದ ಶಾಲೆ ಒಂದೇ. ಎರಡೂ ದೇಹಗಳು ಸಿಕ್ಕಿರುವ ಪ್ರದೇಶ ಸಹ ಒಂದೇ. ಮುಖ್ಯವಾಗಿ, ಇಬ್ಬರೂ ಕಾಲುದಾರಿಯಲ್ಲಿ ಒಂಟಿಯಾಗಿ ನಡೆದು ಬರುವಾಗಲೇ ದುರಂತಕ್ಕೀಡಾಗಿದ್ದರು.

ಇಡೀ ಊರು ಮತ್ತೆ ಭೀತಿಯಲ್ಲಿ ಮುಳುಗಿಹೋಯಿತು. ಪ್ರಾಯದ ಹೆಣ್ಣುಮಕ್ಕಳ ಮೇಲೆ ಇನ್ನಿಲ್ಲದ ಷರತ್ತುಗಳು ವಿಧಿಸಲ್ಪಟ್ಟವು. ಎಲ್ಲಿ ಹೋಗಬೇಕು, ಎಲ್ಲಿಂದ ಬರಬೇಕು, ಯಾರೊಂದಿಗೆ ಕೂರಬೇಕು, ಯಾರೊಂದಿಗೆ ಮನೆ ತಲುಪಬೇಕು, ಎಷ್ಟು ಹೊತ್ತಿಗೆ ಮನೆಯಲ್ಲಿರಲೇಬೇಕು ಎಂಬ ನಿಯಮಗಳ ಜೊತೆಗೆ, ಯಾರೂ ಒಂಟಿಯಾಗಿ ಓಡಾಡಬಾರದು, ಸದಾ ಗುಂಪಿನಲ್ಲಿರಬೇಕು ಎಂಬ ಸೂಚನೆಗಳೂ ಸೇರಿಕೊಂಡವು. ಪೊಲೀಸರ ಮೇಲಿನ ಒತ್ತಡ ಹೇಳತೀರದಾಗಿತ್ತು. ತನಿಖೆ ತೀವ್ರಗೊಂಡಿತು. ಸಂದೇಹಾಸ್ಪದವಾದ ಯಾವುದನ್ನೂ ಬಿಡಲಿಲ್ಲ. ಈ ಹುಡುಕಾಟದಲ್ಲಿ ಕೇಳಿಬಂದ ಒಂದು ಹೇಳಿಕೆ ಪ್ರಕಾರ, ಅಂದು ಆಷ್‌ವರ್ತ್ ಹೋಗುತ್ತಿದ್ದ ದಾರಿಯಲ್ಲಿ ಒಬ್ಬ ಯುವಕನನ್ನು ಒಬ್ಬರು ಕಂಡ ಮಾಹಿತಿ ಸಿಕ್ಕಿತು. ಪೂರ್ಣ ವಿಚಾರಣೆಯ ನಂತರ, ಅವನು ಅಲ್ಲಿಗೆ ಸಮೀಪದಲ್ಲಿದ್ದ ಮಾನಸಿಕ ರೋಗಿಗಳ ಆಸ್ಪತ್ರೆಯ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ರಿಚರ್ಡ್‌ ಬಕ್‌ಲ್ಯಾಂಡ್ ಎಂದಾಯಿತು.

Image
VIDHI VIJNANA 3
ಸಾಂದರ್ಭಿಕ ಚಿತ್ರ

ಕೂಡಲೇ ಅವನನ್ನು ವಶಕ್ಕೆ ತಗೆದುಕೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಅವನಂತೂ, ಆಷ್‌ವರ್ತ್ ಕೊಲೆಯ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ. ಅಂದು ಮಧ್ಯಾಹ್ನದಿಂದ ಅವನು ಆ ಪ್ರದೇಶದಲ್ಲಿ ಓಡಾಡುತ್ತಿದ್ದುದಕ್ಕೆ ಸಮಂಜಸವಾದ ಕಾರಣ ಕೊಡುವುದು ಅವನಿಂದಾಗಲಿಲ್ಲ. ಇವನ ಗುಣ, ಸ್ವಭಾವಗಳ ಬಗ್ಗೆ ತಿಳಿದುಬಂದದ್ದು ಎಂದರೆ; ಹೆಣ್ಣುಮಕ್ಕಳನ್ನು ಕಂಡರೆ ಹೆದರುತ್ತಾನೆ, ಮಾತನಾಡಿಸಲು ಹಿಂಜರಿಯುತ್ತಾನೆ, ಆದರೆ ಕದ್ದುಮುಚ್ಚಿ ನೋಡುತ್ತಾನೆ ಮತ್ತು ಹಿಂಬಾಲಿಸುತ್ತಾನೆ ಇತ್ಯಾದಿ. ಇದನ್ನೆಲ್ಲ ಕಂಡು ಕೇಳಿದ ಪೊಲೀಸರು, ಇವನೇ ಕೊಲೆಗಾರ ಎಂಬ ತೀರ್ಮಾನಕ್ಕೆ ಬಂದರು. ಅವನಿಗೆ ತಪ್ಪೊಪ್ಪಿಗೆ ಹೇಳಿಕೆ ಕೊಡಲು ಹೇಳಿದರು. 15 ಗಂಟೆಗಳ ಸತತ ವಿಚಾರಣೆಯ ನಂತರ ಬಕ್‌ಲ್ಯಾಂಡ್, ಆಷ್‌ವರ್ತ್ ಸಾವಿನ ಸಂಬಂಧ ತಪ್ಪೊಪ್ಪಿಗೆ ಹೇಳಿಕೆ ನೀಡಿದ. ಆದರೆ, ಲಿಂಡಾಳನ್ನು ತಾನು ಕೊಂದಿಲ್ಲ ಎಂದ.

ಒಂದೇ ರೀತಿಯ ಕೊಲೆಗಳಂತಿದ್ದ ಎರಡರಲ್ಲಿ ಒಂದು ಕೊಲೆ ನಾನು ಮಾಡಿದ್ದೇನೆ, ಇನ್ನೊಂದು ನನಗೆ ಗೊತ್ತಿಲ್ಲ ಎಂದರೆ ನಂಬಲು, ಒಪ್ಪಲು ಪೊಲೀಸರೇನು ಮೂರ್ಖರೇ? ಈಗಾಗಲೇ ಸಂಗ್ರಹಿಸಲಾಗಿದ್ದ ವೀರ್ಯದೊಂದಿಗೆ ಇವನ ಈಗಿನ ರಕ್ತದ ಮಾದರಿಯನ್ನು ಸಂಗ್ರಹಿಸಿ, ಇಲ್ಲಿಂದ ಕೇವಲ ಹತ್ತು ಮೈಲುಗಳ ದೂರದಲ್ಲಿದ್ದ ಲಿನ್ಸೆಸ್ಟರ್‌ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಯಿತು. ಅಲ್ಲಿ ಅಲೆಕ್‌ ಜೆಫ್ರಿ ಎಂಬ ಒಬ್ಬ ತಳಿವಿಜ್ಞಾನಿ ಇದ್ದರು. ತಮ್ಮನ್ನು ತಲುಪಿದ ವೀರ್ಯದ ಮಾದರಿಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಯೋಗಕ್ಕೊಳಪಡಿಸಿದ ಜೆಫ್ರಿ, ಎಲ್ಲ ಸಂದೇಹಗಳನ್ನು ಬಗೆಹರಿಸಲು ಸ್ವಲ್ಪ ಸಮಯ ತಗೆದುಕೊಂಡರು. ಅಲ್ಲದೆ, ಅವರ ಫಲಿತಾಂಶವನ್ನು ಬೇರೆ ತಜ್ಞರ ಅಭಿಪ್ರಾಯಕ್ಕೆ ಕಳುಹಿಸಿ, ಅವರ ಸಹಮತವನ್ನೂ ಪಡೆದರು.

ಅಂತಿಮವಾಗಿ ಅವರು ಕೊಟ್ಟ ವರದಿಯನ್ನು ಓದಿದ ಪೊಲೀಸರು ಹೌಹಾರಿದರು. ಏಕೆಂದರೆ, ಯಾವ ಇಬ್ಬರು ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆ ನಡೆದಿವೆಯೋ ಅವು ಒಬ್ಬನೇ ವ್ಯಕ್ತಿಯಿಂದ ಸಂಭವಿಸಿವೆ, ನಿಜ. ಆದರೆ, ಆ ವ್ಯಕ್ತಿ ಪೊಲೀಸರು ಕಳುಹಿಸಿದ್ದ ರಕ್ತ ಮತ್ತು ವೀರ್ಯ ಮಾದರಿಗಳ ವ್ಯಕ್ತಿ ಅಲ್ಲ! ಅಂದರೆ, ಈಗಾಗಲೇ ಪೊಲೀಸರು ವಶದಲ್ಲಿಟ್ಟುಕೊಂಡಿರುವ ರಿಚರ್ಡ್‌ ಬಕ್‌ಲ್ಯಾಂಡ್ ಅಲ್ಲ ಅಂತಾಯಿತು. ಹಾಗಾದರೆ ಈಗ? ಅರೆ… ಅವನಾಗಿಯೇ ತಪ್ಪೊಪ್ಪಿಗೆ ನೀಡಿದ್ದಾನೆ! ಅವನೇ ಅಪರಾಧಿ ಎಂದು ಈಗಾಗಲೇ ಸಾಕ್ಷ್ಯಾಧಾರಗಳ ಸಹಿತ ಡಂಗುರ ಹೊಡೆದಾಗಿದೆ. ಅವನನ್ನು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲೂ ಇಡಲಾಗಿದೆ. ಈಗ ಪೊಲೀಸರ ಗತಿ?

ಬಂಧಿಸಿದ ನಾಲ್ಕು ತಿಂಗಳ ನಂತರ ಬಕ್‌ಲ್ಯಾಂಡ್ ಬಿಡುಗಡೆ ಮಾಡಲಾಯಿತು. ಆದರೆ, ಇಲ್ಲಿನ ನಿಗೂಢ ಪ್ರಶ್ನೆ ಎಂದರೆ, ಬಕ್‌ಲ್ಯಾಂಡ್ ತಪ್ಪೊಪ್ಪಿಕೊಂಡಿದ್ದು ಏಕೆ? ಇದನ್ನು ಕೇಳಿದ್ದಕ್ಕೆ ಅವನ ಪ್ರತಿಕ್ರಿಯೆ ಇದು: "ಮೊದಲಿಗೆ ಶವವನ್ನು ಕಂಡವನು ನಾನೇ. ಅದನ್ನು ಪೊಲೀಸರಿಗೆ ಹೇಳುವಾಗ, ಶವ ಬಿದ್ದಿರುವ ರೀತಿ, ಕೊಂದಿರಬಹುದಾದ ರೀತಿ, ಅತ್ಯಾಚಾರ ಆಗಿರಬಹುದಾದ ರೀತಿ, ಉಡುಪು–ಒಳ ಉಡುಪುಗಳ ವಿನ್ಯಾಸ, ಬಣ್ಣ ಇತ್ಯಾದಿಗಳನ್ನು ವಿವರವಾಗಿ ವರ್ಣಿಸಿ ಹೇಳಿದೆ. ಅದಕ್ಕೇ ಅವರಿಗೆ ನನ್ನ ಮೇಲೆ ಸಂದೇಹ ಹುಟ್ಟಿದೆ. ಆನಂತರ ಅವರು ನನ್ನ ಮೇಲೆ ಒತ್ತಡ ಹೇರುತ್ತ ಹೋದರು. ಮೊದಲೇ ನಾನು ಹುಚ್ಚಾಸ್ಪತ್ರೆಯಲ್ಲಿದ್ದೆ. ವಿಧಿ ಇಲ್ಲದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದೆ."

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಕೊನೆಗಾದರೂ ಸಿಕ್ಕಿದನೇ ಆ ಅಲೆಮಾರಿ ಹಂತಕ?

ವಿಧಿವಿಜ್ಞಾನದ ಕಾರಣದಿಂದ ಒಬ್ಬ ನಿರಪರಾಧಿ ನಿಷ್ಕಳಂಕನಾಗಿ ಹೊರಬಂದ ಜಗತ್ತಿನ ಮೊಟ್ಟಮೊದಲ ಘಟನೆ ಬಹುಶಃ ಇದಾಗಿತ್ತು. ಇವನೇನೋ ಹೊರಬಂದ. ಅದರೆ, ಇಲ್ಲಿ ಇನ್ನೂ ಎಷ್ಟೊಂದು ಪ್ರಶ್ನೆಗಳಿವೆ! ಆ ಹುಡುಗಿಯರನ್ನು ಕೊಂದವರು ಯಾರು? ಅವರಿಬ್ಬರಲ್ಲಿ ದೊರೆತಿರುವ ಆ ನಿಗೂಢ ವೀರ್ಯ ಯಾರದ್ದು? ಅವರು ಈ ಊರಿನವರೋ? ಹೊರಗಿನವರೋ? ಅವರು ಎಲ್ಲಿದ್ದಾರೆ? ಸಿಗುವುದು ಯಾವಾಗ? ಪೊಲೀಸರ ಮುಂದಿರುವ ತಂತ್ರಗಳೇನು?

ತಲೆ ಕೊಡವಿನಿಂತ ಪೊಲೀಸರ ಮುಂದೆ ಹೆಚ್ಚು ದಾರಿಗಳಿರಲಿಲ್ಲ. ಆದರೆ, ಇರುವ ದಾರಿಯನ್ನು ಚಾಲ್ತಿಗೆ ತರುವುದು ಅಷ್ಟು ಸುಲಭವೂ ಆಗಿರಲಿಲ್ಲ. ತನಿಖೆದಾರ ಡೇವಿಡ್‌ ಬೇಕರ್ ದಿಟ್ಟ ನಿರ್ಧಾರ ಮಾಡಿ, ಡಿಎನ್‌ಎ ಶಿಕಾರಿಗೆ ಮುಂದಾದ. ಆ ಊರಿನ ಮತ್ತು ಅದರ ವ್ತಾಪ್ತಿಯಲ್ಲಿ ವಾಸಿಸುತ್ತಿರುವ‌ 13ರಿಂದ 33 ವರ್ಷದೊಳಗಿನ (ಹೀಗೆಂದು ವಿಧಿವಿಜ್ಞಾನ ತಜ್ಞ ಅಲೆಕ್‌ ಜೆಫ್ರಿ ಖಚಿತವಾಗಿ ಹೇಳಿದ್ದ) ಎಲ್ಲ ಪುರುಷರಿಗೂ ಸೂಚನೆಯೊಂದನ್ನು ಕಳುಹಿಸಿದ: “ಕೆಳಗೆ ತಿಳಿಸಿರುವ ದಿನಾಂಕಗಳಂದು ನೀವು ಸ್ವಯಂಸ್ಫೂರ್ತಿಯಿಂದ ಆಗಮಿಸಿ, ನಿಮ್ಮ ರಕ್ತ ಮತ್ತು ಎಂಜಲಿನ ಮಾದರಿಗಳನ್ನು ನೀಡಿ ಸಹಕರಿಸಬೇಕು.”

ಸಹಜವಾಗಿಯೇ ಇದಕ್ಕೆ ಅನೇಕ ತಕರಾರುಗಳೆದ್ದವು. ಕೆಲವರು ಪ್ರತಿಭಟಿಸಿದರು. ಒಳಗೊಳಗೇ ಆತಂಕಪಟ್ಟರು. "ಒಂದು ಪಕ್ಷ ನಾನು ಕೊಡದಿದ್ದಲ್ಲಿ, ನಾನೇ ಅತ್ಯಾಚಾರಿ ಎಂದು ಜನ ಭಾವಿಸುವ ಸಾಧ್ಯತೆ ಇದೆ," ಎಂದು ಊಹಿಸಿಯೇ ತಲ್ಲಣಿಸಿದರು. ಅಂತೂ, ಬೇಕರ್ ಕೊಟ್ಟ ದಿನಾಂಕಗಳಂದು ಎಲ್ಲರೂ ಬಂದರು. ತಮ್ಮ ಗುರುತು ಪತ್ರಗಳನ್ನು ಕೊಟ್ಟು, ರಕ್ತ- ಎಂಜಲಿನ ಮಾದರಿಯನ್ನೂ ನೀಡಿದರು. ಎಲ್ಲ ಸೇರಿ ಐದು ಸಾವಿರ ಮಾದರಿಗಳಿದ್ದವು.

ಪೊಲೀಸರ ಲೆಕ್ಕಾಚಾರದ ಪ್ರಕಾರ, ಈ ಸ್ವಯಂ ಸ್ಫೂರ್ತಿಯಿಂದ ಬಂದವರು ಮುಖ್ಯವೇ ಆಗಿರಲಿಲ್ಲ. ತಪ್ಪಿನ ಭೀತಿ ಇಲ್ಲದವರು ಬಂದೇ ಬರುತ್ತಾರೆ. ಹಾಗಾಗಿ, ಅವರು ಬಾರದಿರುವವರು ಇದ್ದಾರೆಯೇ ಎಂದು ಹುಡುಕುವ ಅವಸರದಲ್ಲಿದ್ದರು. ಆದರೆ, ಅವರಿಗೆ ನಿರಾಸೆ ಆಗುವಂತೆ ಎಲ್ಲರೂ ಬಂದಿದ್ದರು! ಹಾಗಾದರೆ ಎಲ್ಲರೂ ನಿರಪರಾಧಿಗಳೇ? ಅನಿವಾರ್ಯವಾಗಿ ಎಲ್ಲವನ್ನೂ ಮೂಲ ಮಾದರಿಗಳೊಂದಿಗಿನ ತೌಲನಿಕ ಪರೀಕ್ಷೆಗಾಗಿ ಕಳುಹಿಸಲಾಯಿತು. ಇಲ್ಲ... ಯಾವುದೂ ಹೊಂದಾಣಿಕೆ ಆಗುತ್ತಿಲ್ಲ. ಈ ಐದು ಸಾವಿರ ಜನರಲ್ಲಿ ಯಾರೊಬ್ಬರೂ ಅಲ್ಲ! ಪೊಲೀಸರಿಗೆ ಸೋಲೊಪ್ಪಿಕೊಳ್ಳುವ ಅನಿವಾರ್ಯತೆ. ಇವೆಲ್ಲ ಆಗುವ ಹೊತ್ತಿಗೆ, ಆಷ್‌ವರ್ತ್ ಇಲ್ಲವಾಗಿ ಒಂದು ವರ್ಷ ಕಳೆದುಹೋಗಿತ್ತು. ಪ್ರಭುತ್ವದ ಎಲ್ಲ ಪ್ರಯೋಗಗಳೂ, ಪ್ರಯತ್ನಗಳೂ ಹಿನ್ನಡೆ ಕಂಡಿದ್ದವು.‌ ಮುಂದಿನ ದಾರಿ ಕತ್ತಲೆಯದಾಗಿತ್ತು. ಅಷ್ಟೊತ್ತಿಗೆ ಒಂದು ಮಹತ್ವದ ಘಟನೆ ನಡೆಯಿತು.

Image
VIDHI VIJNANA 5
ಸಾಂದರ್ಭಿಕ ಚಿತ್ರ

ಊರ ಹೊರವಲಯಲ್ಲಿದ್ದ ಬೇಕರಿಯದು. ಒಂದಷ್ಟು ನೌಕರರಿದ್ದರು. ಅವರೆಲ್ಲರೂ ವಾರಾಂತ್ಯದ ಒಂದು ದಿನ ಮೋಜು-ಮಸ್ತಿಗಾಗಿ ಊರೊಳಗಿನ ಒಂದು ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಮಾತು-ಮಾತಿನ ನಡುವೆ ಮಸ್ತಿ ವಾಸ್ತವದತ್ತ ತಿರುಗಿ, ಮಾತು ಡಿಎನ್‌ಎ ಶಿಕಾರಿಯತ್ತ ಹೊರಳಿತ್ತು. ಆ ಹೊತ್ತಿನಲ್ಲಿ ಅಲ್ಲಿದ್ದ ಕೆಲ್ಲಿ ಎಂಬ ವ್ಯಕ್ತಿ, “ನಾನು ಕೊಲಿನ್‌ ಪಿಚ್‌ಪೋರ್ಕ್‌ ಎಂಬುವವನಿಗಾಗಿ ರಕ್ತ-ಎಂಜಲು ಸ್ಯಾಂಪಲ್‌ ನೀಡಿದೆ,” ಎಂದು ಇನ್ನೊಬ್ಬನಿಗೆ ಗುಟ್ಟು ಹೇಳುವವನಂತೆ ಜೋರಾಗಿ ಹೇಳುತ್ತಿದ್ದ. ಈ ಮಾತುಗಳು ಅದೇ ಗುಂಪಿನಲ್ಲಿದ್ದ ಯುವತಿಯೊಬ್ಬಳ ಕಿವಿಯೊಳಕ್ಕೂ ಹೊಕ್ಕವು.

ಆಕೆ ಕಿವಿಯೊಳಗೆ ಕಾದ ಸೀಸವನ್ನು ಸುರಿದಂತೆ ಚಡಪಡಿಸಿದಳು. ಕೂಡಲೇ ಪೊಲೀಸರಿಗೆ ಕರೆ ಮಾಡಿ, ಕೇಳಿಸಿಕೊಂಡಿದ್ದನ್ನು ಅವರ ಕಿವಿಗೆ ಸುರಿದು ಪ್ರಶಾಂತಿಯ ನಿಟ್ಟುಸಿರಿಟ್ಟಳು. ತಮ್ಮೆಲ್ಲ ಪ್ರಯೋಗಗಳು ವಿಫಲವಾದ ಚಿಂತೆಯಲ್ಲಿದ್ದ ಪೊಲೀಸರು ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದರು. ಕೆಲ್ಲಿಯನ್ನು ಕರೆದುಕೊಂಡು ಬಂದು ಕೇಳುವ ವಿಧಾನದಲ್ಲಿ ಕೇಳಿದಾಗ ನಿಧಾನವಾಗಿ ಬಾಯಿಬಿಟ್ಟ. "ಹೌದು... ನಾನು ಕೊಲಿನ್‌ ಪಿಚ್‌ಪೋರ್ಕ್ ಎಂಬುವವನಿಗಾಗಿ ನನ್ನ ಜೈವಿಕ ಮಾದರಿಗಳನ್ನು ನೀಡಿದ್ದು ನಿಜ."

ಈಗ ಪೊಲೀಸರ ಮುಂದಿದ್ದ ಶಿಕಾರಿ ಕೊಲಿನ್‌ ಪಿಚ್‌ಪೋರ್ಕ್‌. ಇವನೊಬ್ಬ ಬೇಕರಿಯ ಪ್ರಧಾನ ನೌಕರ. ಮದುವೆಯಾಗಿದೆ. ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಈ ಹಿಂದೆ, ಸಾರ್ವಜನಿಕ ಅಸಭ್ಯ ವರ್ತನೆಗಾಗಿ ಶಿಕ್ಷೆ ಅನುಭವಿಸಿದ ಹಿನ್ನೆಲೆ ಇತ್ತು.

ಡಿಎನ್‌ಎ ಸಂಗ್ರಹ ಪ್ರಕರಣದ ವೇಳೆ ಆಗಿದ್ದದ್ದು ಇಷ್ಟು... ಪೊಲೀಸರು ಡಿಎನ್‌ಎ ಶಿಕಾರಿಗಿಳಿದಾಗ ಈತನಿಗೆ ಭೀತಿ ಶುರುವಾಗುತ್ತದೆ. ಊರಿನ ಗಡಿಯಾಚೆ ಇರುವ ಗೆಳೆಯನನ್ನು ಸಂಪರ್ಕಿಸಿ, ಇವನು ಹೇಳಿದಂತೆ ಮಾಡಲು ಒಪ್ಪಿಸುತ್ತಾನೆ. ಇವನ ಹೆಸರು ಮತ್ತು ಭಾವಚಿತ್ರವಿರುವ ಗುರುತಿನ ಚೀಟಿಯಲ್ಲಿ, ಅದೇ ಅಳತೆಯ ಕೆಲ್ಲಿಯ ಪಾಸ್‌ಪೋರ್ಟ್‌ ಫೊಟೋ ಕತ್ತರಿಸಿ, ಇವನ ಮುಖ ಕತ್ತರಿಸಿದ ಜಾಗದಲ್ಲಿ ಅಂಟಿಸಿ, ಈ ಗುರುತಿನ ಚೀಟಿ ತೋರಿಸಿ ಅವನ ಸ್ಯಾಂಪಲ್‌ ನೀಡುವಂತೆ ಮಾಡುತ್ತಾನೆ. ಅಂದರೆ, ಗುರುತು ಇವನದು, ರಕ್ತ-ಎಂಜಲು ಮಾದರಿ ಅವನವು. ಅಂದರೆ, ಕೆಲ್ಲಿ ಬಚಾವ್‌, ಪಿಚ್‌ಪೋರ್ಕ್‌ ಸೇಫ್; ಇದು ತಂತ್ರದ ಒಟ್ಟಾರೆ ಸಾರ.

Image
VIDHI VIJNANA 6
ಸಾಂದರ್ಭಿಕ ಚಿತ್ರ

ಕೂಡಲೇ ಪಿಚ್‌ಪೋರ್ಕ್‌ನ ಸರ್ವ ಮಾದರಿಗಳನ್ನೂ ಸಂಗ್ರಹಿಸಿ, ಅಲೆಕ್‌ ಜೆಫ್ರಿಯ ಸನ್ನಿಧಾನಕ್ಕೆ ರವಾನಿಸಲಾಗುತ್ತದೆ. ಹಲವು ಅಂತಿಮ ಪರೀಕ್ಷೆ, ಮರುಪರೀಕ್ಷೆಗಳ ನಂತರ ಜೆಫ್ರಿ ಹೇಳುತ್ತಾನೆ: "ಎರಡೂ ಪ್ರಕರಣದಲ್ಲಿ ದೊರೆತ ವೀರ್ಯ ಪಿಚ್‌ಪೋರ್ಕ್‌ನದ್ದೇ."

ಆದರೆ, ಇಲ್ಲೊಂದು ಅನಿರೀಕ್ಷಿತ ತಿರುವು ಎದುರಾಗುವ ಸಂಭವ ಸೃಷ್ಟಿಯಾಗುತ್ತದೆ. ಸಮಾಜದಲ್ಲಿ ಪಿಚ್‌ಪೋರ್ಕ್‌ನಿಗೆ ಗೌರವಯುತ ಹೆಸರಿತ್ತು. ಆದರ್ಶ ಕುಟುಂಬದೊಂದಿಗೆ ಬದುಕುತ್ತಿರುವ ಮರ್ಯಾದಾ ಪುರುಷೋತ್ತಮನಾಗಿದ್ದ. ಇಂಥವನನ್ನು, ಕೇವಲ ಪ್ರಯೋಗಾಲಯದ ಫಲಿತಾಂಶ ಆಧರಿಸಿ ಅತ್ಯಾಚಾರಿ, ಕೊಲೆಗಾರ, ಮನೋರೋಗಿ ಎಂದೆಲ್ಲ ಹೇಳಲಾದೀತೇ? ಈ ಬಗ್ಗೆ ಊರಿನ ಘನತೆವೆತ್ತ ತಲೆಗಳು ತಕರಾರೆತ್ತಿದರೆ, ಆ ಪುಟ್ಟ ಊರಿನ ಪೊಲೀಸರ ಕತೆ ಏನು?

ಹಾಗಾಗಲಿಲ್ಲ. ಅಲೆಕ್‌ ಜೆಫ್ರಿ ಹೇಳಿದ ವೈಜ್ಞಾನಿಕ ಸಂಗತಿಗಳ ಮೇಲೆ ಅಲ್ಲಿದ್ದ ಎಲ್ಲರಿಗೂ ನಂಬಿಕೆ ಹುಟ್ಟಿದಂತಿತ್ತು. ಹಾಗಾಗಿ, ನ್ಯಾಯಾಲಯದಲ್ಲಿಯೇ ತೀರ್ಮಾನವಾಗಲಿ ಎಂದು ಸಿದ್ಧರಾದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ, ಶಬ್ದರಹಿತವಾಗಿ ಕುಳಿತ್ತಿತ್ತು. ಅಲ್ಲಿ ಮಂಡಿಸಲಾಗಿದ್ದ ವಿಧಿವಿಜ್ಞಾನದ ಸಾಕ್ಷ್ಯಗಳನ್ನು ಯಾವ ನ್ಯಾಯಾಲಯವೂ ನಿರಾಕರಿಸಲು ಸಾಧ್ಯವಿರಲಿಲ್ಲ. ಅಂತಿಮವಾಗಿ, ಅತ್ಯಾಚಾರಿ ಕೊಲೆಗಾರನಿಗೆ 1988ರ ಜನವರಿ 22ರಂದು ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಯಿತು. ಸಹಾಯ ಮಾಡಿದ್ದ ಕೆಲ್ಲಿಗೆ 18 ತಿಂಗಳ ಜೈಲು ಶಿಕ್ಷೆಯಾಯಿತು. ಜಗತ್ತಿನಲ್ಲಿ ಡಿಎನ್‌ಎ ಫಲಿತಾಂಶಗಳನ್ನು ಆಧರಿಸಿ ನೀಡಲಾದ ಮೊತ್ತಮೊದಲ ಶಿಕ್ಷೆ ಇದು ಎಂದು ಹೇಳಲಾಗುತ್ತದೆ.

ಉಪಸಂಹಾರ

ಪಿಚ್‌ಪೋರ್ಕ್‌ನಂತಹ 'ಮಾನವಂತರು' ನಮ್ಮ ನಡುವೆ ಇಲ್ಲ ಅಂದುಕೊಳ್ಳುವುದಾದರೆ ನಿಮ್ಮಿಷ್ಟ. ಈ ದುರಂತವನ್ನು ತಪ್ಪು ಸಮಯದಲ್ಲಿ, ತಪ್ಪು ವ್ಯಕ್ತಿ, ತಪ್ಪು ಸ್ಥಳದಲ್ಲಿದ್ದ ಪರಿಣಾಮ ಎಂದು ವ್ಯಾಖ್ಯಾನಿಸುವವರೂ ಇದ್ದಾರೆ. 'ವಿಧಿ' ಎನ್ನುವವರೂ ಇದ್ದಾರೆ. ಇರಲಿ ಬಿಡಿ, ತತ್ವಗಳು ಬೇಡ. ಆದರೆ, ಇಂಗ್ಲೆಂಡಿನ ಮತ್ತು ಜಗತ್ತಿನ ವಿಧಿವಿಜ್ಞಾನ ವಿಭಾಗದ ಉನ್ನತೀಕರಣಕ್ಕೆ ಅಲೆಕ್‌ ಜೆಫ್ರಿಯ ಕೊಡುಗೆ ಪರಿಗಣಿಸಿ, ನೈಟ್‌ಹುಡ್‌ ಪ್ರಶಸ್ತಿ ನೀಡುವ ಮೂಲಕ ಎರಡನೇ ಎಲಿಜಬೆತ್‌ ರಾಣಿ ಅವನನ್ನು ಗೌರವಿಸಿದ್ದಂತೂ ಮೈಲುಗಲ್ಲು.

(ವಿವಿಧ ಮೂಲಗಳಿಂದ)
ನಿಮಗೆ ಏನು ಅನ್ನಿಸ್ತು?
6 ವೋಟ್