ವಿಧಿ ಮತ್ತು ವಿಜ್ಞಾನ | ಗುಂಡು ಹಾರಿದ್ದು ಆಕಸ್ಮಿಕವೇ ಅಥವಾ ಅವಳಿಗಾಗಿಯೇ?

Vidhi Vijnana MAY 31

ಅವಳು ಮೊದಲಿಗೆ ಹೇಳಿದ್ದು, "ನನ್ನ ಗಂಡ ಮತ್ತು ನಾಯಿ ಸತ್ತಿದ್ದು ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ," ಎಂದು. ನಂತರ ಹೇಳಿದ್ದು, "ಇಲ್ಲ, ಅವನೇ ಕೊಂದದ್ದು," ಎಂದು. ಆದರೆ, ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಆರೋಪಿ ಪಾಸಾಗುತ್ತಾನೆ, ಪ್ರತ್ಯಕ್ಷದರ್ಶಿ ಆಗಿದ್ದವಳು ಫೇಲಾಗುತ್ತಾಳೆ! ಹಾಗಾದರೆ, ಯಾರ ಮಾತು ನಿಜ? ಮೌಂಟ್‌ ಹುಡ್‌ ಕಾಡಿನಲ್ಲಿ ನಿಜಕ್ಕೂ ನಡೆದದ್ದೇನು?

ಅಮೆರಿಕದ ಒರೆಗಾನ್‌ ರಾಜ್ಯದಲ್ಲೊಂದು ಅತ್ಯಂತ ಜನಪ್ರಿಯ ವನ್ಯ ಪ್ರದೇಶವಿದೆ. ಮೌಂಟ್ ಹುಡ್‌ ರಾಷ್ಟ್ರೀಯ ಉದ್ಯಾನ ಎಂದು ಅದರ ಹೆಸರು. ಸುಮಾರು 4,318 ಚದರ ಕಿಲೋಮೀಟರ್‌ಗಳಲ್ಲಿ ಹರಡಿಕೊಂಡಿರುವ ಈ ಪ್ರದೇಶದಲ್ಲಿ ಕೊಲಂಬಿಯಾ, ಸ್ಯಾಂಟಿಯಾಮ್‌ ಹಾಗೂ ಕ್ಲಾರ್ಕ್‌ಮಾಸ್‌ನಂತಹ ಮೂರು ನದಿಗಳ ಹರಿವಿದೆ. ಮುಗಿಲು ಮೀರುವ ಪರ್ವತಗಳು, ನಿಬಿಡ ಕಾಡುಗಳು, ಝುಳುಗುಟ್ಟುವ ತಾಜಾ ನೀರಿನ ನದಿ, ಹಳ್ಳ, ತೊರೆಗಳು ಇಲ್ಲಿವೆ. ಕಣ್ಣು ಬಿಟ್ಟಲ್ಲಿ ಕಾಡು ಇಲ್ಲವೇ ನೀರು. ಹುಡುಕದಿದ್ದರೂ ಕಾಣುವ ಕಾಡುಪ್ರಾಣಿಗಳು, ಸಮೃದ್ಧ ಮತ್ಸ್ಯರಾಶಿ. ಹಾಗಾಗಿ, ಇದು ದೇಶೀಯ ಮತ್ತು ವಿದೇಶೀಯರ ಪ್ರವಾಸಿ ಸ್ವರ್ಗ. ನೀರಿಗಿಳಿದರೆ ಮೀನು ಬೇಟೆ, ಕಾಡಿಗಿಳಿದರೆ ಮೃಗಬೇಟೆಗಳೂ ಇಲ್ಲಿ ಸಾಧ್ಯ. ಹಾಗಾಗಿಯೇ, ಇದು ಯುವ ಪ್ರೇಮಿ ಅಥವಾ ದಂಪತಿಗಳ ಪ್ರವಾಸಿ ನಂದನ.

ಕ್ಯಾಂಡ್ರ ಮತ್ತು ಜೂಲಿಯೊ ಟೊರ‍್ರೆಸ್‌ ನಿಜಕ್ಕೂ ಯುವ ದಂಪತಿ. ಎಷ್ಟು 'ಯುವ' ಎಂದರೆ, ಭಾರತದಲ್ಲಾಗಿದ್ದರೆ ಅದು ಬಾಲ್ಯವಿವಾಹ ಅನ್ನಿಸಿಕೊಂಡು ಎಲ್ಲರ ಮೇಲೂ ಕೇಸುಗಳಾಗುತ್ತಿದ್ದವು. ಈಗ ಜೂಲಿಯೊಗೆ 21 ವರ್ಷ, ಕ್ಯಾಂಡ್ರಗೆ 16. ಇವರು ಮದುವೆಯಾಗಿ ಒಂದು ವರ್ಷವಾಗಿದೆ. ವಾರ್ಷಿಕೋತ್ಸವದ ಉಮೇದಿನಲ್ಲಿದಾರೆ. ವಾರಾಂತ್ಯದ ಮೋಜಿಗೆ ಅವರು ಆಯ್ಕೆ ಮಾಡಿದ್ದು ಇದೇ ಮೌಂಟ್ ಹುಡ್‌. ಬರುವಾಗ ಇಬ್ಬರೇ ಬರಲಿಲ್ಲ. ಜೊತೆಯಲ್ಲಿ ಕ್ಯಾಂಡ್ರಳ ನಾಯಿಯನ್ನು ಕರೆತಂದಿದ್ದರು. ದೀರ್ಘಕಾಲದಿಂದ ಅವಳ ಜೀವದಂತಿದ್ದ ಜೀವಿ ಅದು. ಹೆಸರು ರಸ್ಟಿ.

ಇವರಿಗೂ ಮೀನು ಹಿಡಿಯುವ/ ಬೇಟೆಯಾಡುವ ಆಸೆ. ಆದರೆ, ಒಂದು ಮೀನೂ ಸಿಗುತ್ತಿಲ್ಲ. ಬೇಸತ್ತು ಸಮೀಪದಲ್ಲಿದ್ದ ಒಬ್ಬ ಮೀನುಗಾರನ ಸಹಾಯ ಕೇಳಿದರು. ಅವನ ಹೆಸರು ಟಾಮ್‌ ಬ್ರೌನ್.‌ ಟಾಮ್‌ ಕ್ಯಾಂಡ್ರಳನ್ನು ವಿಚಿತ್ರವಾಗಿ ನೋಡಿದ. ವಯೋಸಹಜ ದೈಹಿಕ ಲಯದೊಂದಿಗೆ ಆಕರ್ಷಕವಾಗಿದ್ದ ಅವಳು, ಅಂಥ ಅನೇಕರನ್ನು ಕಂಡಿದ್ದಳು. ಹಾಗಾಗಿ ಅದನ್ನು ನಿರ್ಲಕ್ಷಿಸಿದಳು. 

ಅವನು ಮೀನು ಹಿಡಿಯುವುದನ್ನು ಹೇಳಿಕೊಟ್ಟ. "ಈ ಪ್ರದೇಶದಲ್ಲಿ ಮೀನುಗಳು ಕಡಿಮೆ. ಸ್ವಲ್ಪ ದೂರದಲ್ಲಿ ಒಂದು ಜಾಗವಿದೆ. ಅಲ್ಲಿ ಮೀನುಗಳ ನದಿಯೇ ಇದೆ. ಜೊತೆಗೆ ಪ್ರಾಣಿಬೇಟೆಯನ್ನು ಮಾಡಬಹುದು," ಎಂದೂ ಹೇಳಿದ. ಎರಡು ದಿನಗಳ ಶತಪ್ರಯತ್ನದ ನಂತರವೂ ಒಂದೇ ಒಂದು ಮೀನು ಸಿಗದೆ ನಿರಾಶರಾಗಿದ್ದರೂ, ಆಹ್ವಾನವನ್ನು ಒಪ್ಪಲು ಸ್ವಲ್ಪ ಹಿಂಜರಿದರು. ಕೊನೆಗೆ ಒಪ್ಪಿದರು. ನಾಲ್ಕೂ ಜನರ ಪ್ರಯಾಣ ಸಾಗಿತು. ಮೈಲುಗಟ್ಟಲೆ ದೂರ ನಡೆದರು. ಆದರೂ ಆ ಜಾಗ ಸಿಗಲಿಲ್ಲ. ಅಷ್ಟರಲ್ಲಿ ಕತ್ತಲಾಯಿತು. ನಡುವೆ ಕ್ಯಾಂಪ್‌ ಮಾಡುವುದು ಅನಿವಾರ್ಯವಾಯಿತು. 

Image
ಸಾಂದರ್ಭಿಕ ಚಿತ್ರ

ಇದಾದ ಮೂರು ದಿನಗಳ ನಂತರ (ಇದು ಮೊದಲ ಆವೃತ್ತಿಯ ಕತೆ) ಕ್ಯಾಂಡ್ರ ಸ್ಥಳಿಯ ಪೊಲೀಸ್‌ ಠಾಣೆಗೆ ಬಂದು, ಅಧಿಕಾರಿಯನ್ನು ಭೇಟಿಯಾಗಿ ಹೇಳಿಕೆ ನೀಡಿದಳು. ನಂತರ ಅಮ್ಮನಿಗೆ ಕರೆ ಮಾಡಿ, ಭಯಾನಕ ಸುದ್ದಿಯೊಂದನ್ನು ಹೇಳಿದಳು. “ಅಮ್ಮಾ… ದುರಂತ ನಡೆದುಹೋಗಿದೆ. ನಾವು ಶಿಕಾರಿ ಹುಡುಕಿಕೊಂಡು ಹೋಗಿದ್ದೆವು. ಹೋಗುತ್ತ ಕತ್ತಲಾಯಿತು. ಒಂದೆಡೆ ಕ್ಯಾಂಪ್‌ ಮಾಡಿದೆವು. ಬೆಳಗ್ಗೆ ಎದ್ದಾಗ ಜಿಂಕೆಯೊಂದು ಕಂಡಿತು. "ಈ ಮೊದಲ ಬೇಟೆಯನ್ನು ನೀನೇ ಮಾಡು," ಎಂದು ಜೂಲಿಯೊ ಟಾಮ್‌ನ ಕೈಗೆ ಬಂದೂಕ ಕೊಟ್ಟ. ಅದು ಹಠಾತ್ತಾಗಿ ಸಿಡಿಯಿತು. ನೇರವಾಗಿ ಜೂಲಿಯೊಗೆ ಬಡಿಯಿತು. ಅವನು ಸ್ಥಳದಲ್ಲೇ ಸತ್ತುಹೋದ. ಕೂಡಲೇ ರಸ್ಟಿ ಅವನ ಮೇಲೆ ದಾಳಿ ಮಾಡಿತು. ಜೀವರಕ್ಷಣೆಗಾಗಿ ಅವನು ಗುಂಡು ಹೊಡೆದ. ರಸ್ಟಿ ಸಹ ಅಲ್ಲೇ ಸತ್ತುಹೋಯಿತು...”

"ಇಷ್ಟೆಲ್ಲ ಆದ ಮೇಲೆ ಟಾಮ್‌ ನನ್ನನ್ನು ಕೇಳಿದ, 'ಆಗುವುದು ಆಗಿಹೋಗಿದೆ. ನೀನು ನನ್ನೊಂದಿಗೆ ಬರುತ್ತೀಯೋ ಅಥವಾ ನಿನ್ನೂರಿಗೆ ಹಿಂತಿರುಗುತ್ತೀಯೋ?' ಆದರೆ, ನಾನು ಅವನೊಂದಿಗೇ ಬರುವುದಾಗಿ ಹೇಳಿದೆ. ಏಕೆಂದರೆ, ನನಗೆ ಅಲ್ಲಿಂದ ಹೊರಹೋಗುವ ದಾರಿಯೇ ಗೊತ್ತಿರಲಿಲ್ಲ. ನನಗೆ ವಾಹನ ಚಾಲನೆಯೂ ಬರುತ್ತಿರಲಿಲ್ಲ. ನಿನಗೇ ಗೊತ್ತಿರುವಂತೆ ನನ್ನ ಬಳಿ ಅದಕ್ಕೆ ಪರವಾನಗಿಯೂ ಇರಲಿಲ್ಲ. ಆಘಾತದಿಂದಾಗಿ ದಿಕ್ಕು ಕಾಣದಾಗಿದ್ದೆ. ಎರಡು ದಿನವಾದ ಮೇಲೆ ಅವನೇ ಇನ್ಯಾವುದೋ ನಿರ್ಧಾರಕ್ಕೆ ಬಂದವನಂತೆ, 'ಇದನ್ನು ಪೊಲೀಸರಿಗೆ ಹೇಳೋಣ, ಆದರೆ ನಾನು ಹೇಳಿಕೊಟ್ಟಂತೆ ಮಾತ್ರ ಹೇಳು' ಎಂದ. ಅದು ಸರಿ ಅನ್ನಿಸುತ್ತಿತ್ತು, ನಾನು ಹಾಗೇ ಮಾಡಿದೆ," ಎಂಬುದು ಕ್ಯಾಂಡ್ರಳ ಮಾತಾಗಿತ್ತು.

ಈ ಹೇಳಿಕೆ ಪೊಲೀಸರಲ್ಲಿ ದಾಖಲಾದ ನಂತರ ಟಾಮ್‌ ಸಹಕರಿಸಲು ಮುಂದಾದ. ಮೃತ ಶರೀರಗಳನ್ನು ತೋರಿಸಿದ, ಬಂದೂಕವನ್ನು ಹುಡುಕಿಕೊಟ್ಟ. ನಂತರ ಪೊಲೀಸರು ಇವನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದರು. ಅಂತೂ ಇಡೀ ದುರ್ಘಟನೆ ಕೇವಲ ಒಂದು ಆಕಸ್ಮಿಕ ಎಂದು ಪೊಲೀಸರು ದಾಖಲಿಸಿದರು. ಟಾಮ್‌ ಬಿಕ್ಕಟ್ಟಿನಿಂದ ಪಾರಾದ. 

ಇದೊಂದು ಆಕಸ್ಮಿಕ ಘಟನೆ, ಸ್ವತಃ ಮೃತನ ಪತ್ನಿ ಕ್ಯಾಂಡ್ರಳೇ ಅದೊಂದು ಆಕಸ್ಮಿಕ ಸಿಡಿತ ಎಂದು ತನಿಖೆದಾರರ ಮುಂದೆ ಹೇಳಿರುವಾಗ ಯಾರಾದರೂ ಅನವಶ್ಯವಾಗಿ ಇದರ ಬಗ್ಗೆ ತಕರಾರೆತ್ತಲು ಹೇಗೆ ಸಾಧ್ಯ? ಹಾಗಾಗಿ, ಇದೊಂದು ಸಹಜ ಸಂಭವನೀಯ ಘಟನೆಗಳ ಪಟ್ಟಿಗೆ ಸೇರಿಹೋಯಿತು. ಆದರೆ, ಕ್ಯಾಂಡ್ರಳ ಅಮ್ಮನಿಗೆ ಇದೇಕೋ ಸರಿ ಅನಿಸುತ್ತಿರಲಿಲ್ಲ. ಜೂಲಿಯೊ ಮತ್ತು ರಸ್ಟಿಯನ್ನು ಮಗಳು ಎಷ್ಟು ಪ್ರೀತಿಸುತ್ತಿದ್ದಳು ಎಂದು ಅವಳಿಗೆ ಗೊತ್ತಿತ್ತು. ಈಗ ಟೇಪ್‌ ಚಾಲೂ ಮಾಡಿದಂಥ ಮಗಳ ಹೇಳಿಕೆಗಳ ಬಗ್ಗೆ ಅವಳಿಗೆ ಸಂದೇಹವಿತ್ತು. ಇದಾದ ಮೇಲೆ ಅನೇಕ ದಿನಗಳು ಕಳೆದವು. ಆಘಾತದಿಂದ ಜಜ್ಜರಿತಳಾಗಿದ್ದ ಮಗಳು ತಾಯಿಯ ಮನೆಗೆ ಬಂದಳು. ಇಲ್ಲಿಂದ ಕತೆಯ ದಿಕ್ಕೇ ಬದಲಾಗಿಹೋಯಿತು.

Image
ಸಾಂದರ್ಭಿಕ ಚಿತ್ರ

ಅಪ್ಪ, ಅಮ್ಮನನ್ನು ಕುರಿತು, “ನನ್ನ ಬಗ್ಗೆ ಅಸಹ್ಯ ಪಡಬೇಡಿ. ನಾನೇನೂ ತಪ್ಪು ಮಾಡಿಲ್ಲ. ಅಲ್ಲಿ ಏನಾಯಿತೆಂದು ನನಗೆ ಇನ್ನೂ ಹೊಳೆಯುತ್ತಿಲ್ಲ. ಅವನು ಜೂಲಿಯಾನ ಮೇಲೆ ಗುಂಡು ಹಾರಿಸಿದ್ದನ್ನು ನಾನು ನೋಡಲಿಲ್ಲ,” ಎಂದಳು. “ಅಯ್ಯೋ ಹುಚ್ಚೀ… ನಮಗೆ ನಿನ್ನ ಮೇಲೆ ಯಾವ ಸಂದೇಹಗಳೂ ಇಲ್ಲ. ಅದರೆ, ನೀನು ಹೇಳಿದಂತೆ ಆಗಲು ಸಾಧ್ಯವೇ ಇಲ್ಲ. ಅವನು ನಿನ್ನ ಗಂಡ ಮತ್ತು ನಿನ್ನ ನಾಯಿಯನ್ನು ಕೊಂದಿದ್ದಾನೆ,” ಎಂದು ಅಮ್ಮ ಹೇಳಿದಳು. ಅವಳ ವಾತ್ಸಲ್ಯಮಯ ನಡೆಯಿಂದ ಸ್ಯಾಂಡ್ರ ಚೇತರಿಸಿಕೊಳ್ಳತೊಡಗಿದಳು. ಈ ನಡುವೆ ತಾಯಿಯ ಸಂದೇಹಗಳಿಗೆ ಸ್ಪಂದಿಸುತ್ತ ಕೆಲ ದಿನಗಳ ನಂತರ ಆ ಘಟನೆಯ ಇನ್ನೊಂದು ಆವೃತ್ತಿಯನ್ನು ಹೇಳಿದಳು.

"ನಾನು ಬಿಡಾರದ ಮುಂದೆ ತಿಂಡಿ ಮಾಡುತ್ತಿದ್ದೆ. ಜೂಲಿಯ ಮತ್ತು ಟಾಮ್‌ ಕಾಡೊಳಕ್ಕೆ ಹೋಗಿದ್ದರು. ಹಠಾತ್ತಾಗಿ ಗುಂಡಿನ ಶಬ್ದ ಕೇಳಿಸಿತು. ನಾನು ಎದ್ದು ಶಬ್ದ ಬಂದತ್ತ ಓಡಿದೆ. ರಸ್ಟಿ ನನ್ನನ್ನು ಹಿಂಬಾಲಿಸುತ್ತಿತ್ತು. ಅಷ್ಟರಲ್ಲಿ ಬಂದೂಕು ಹಿಡಿದಿದ್ದ ಟಾಮ್‌ ನಮ್ಮೆದುರಿಗೆ ನಿಂತ. ದೊಡ್ಡ ವಿಕಟ ನಗು ಅವನ ಮುಖದಲ್ಲಿತ್ತು. ನಮಗೆ ಅಡ್ಡ ನಿಂತವನೇ, ರಸ್ಟಿಗೆ ಗುಂಡು ಹೊಡೆದ. ಅದು ವಿಲವಿಲ ಒದ್ದಾಡುತ್ತಿತ್ತು. ನಾನು ಆಕ್ರೋಶದಿಂದ, 'ನನ್ನ ನಾಯಿಯನ್ನು ಏಕೆ ಕೊಂದೆ?' ಎಂದು ಕೇಳಿದೆ. ಅದಕ್ಕವನು, 'ನಾಯಿ ಮಾತ್ರ ಅಲ್ಲ, ನಿನ್ನ ಗಂಡನನ್ನೂ ಕೊಂದಿದ್ದೇನೆ' ಎಂದು ಹೇಳಿದ...”

"ಅವನ ಬಂದೂಕು ನನ್ನ ಕಡೆಗಿತ್ತು. ನನ್ನ ಎರಡೂ ಆಸರೆಗಳನ್ನು ಕಳೆದುಕೊಂಡ ನನಗೆ, ನನ್ನನ್ನೂ ಕೊಲ್ಲುತ್ತಾನೆ ಎಂಬ ಸಂದೇಹ ಶುರುವಾಯಿತು. ಮುಂದೇನೆಂದು ತೋಚಲಿಲ್ಲ. ಗರಬಡಿದಂತೆ ನಿಂತೆ. ನಿಜಕ್ಕೂ ನನಗೆ ಗರ ಬಡಿದಿತ್ತು ಅನಿಸುತ್ತದೆ. ಹದಿನಾರು ವರ್ಷದ ಹುಡುಗಿ ಇನ್ನೇನು ಮಾಡಬಹುದು ಹೇಳು? ಅವನು ನನ್ನನ್ನು ಪರ್ವತದ ಮೇಲಕ್ಕೆ ಕರೆದುಕೊಂಡು ಹೋದ. ಅವನು ಕರೆದಲ್ಲಿಗೆ ಸುಮ್ಮನೆ ಹೋದೆ. ದಟ್ಟ ಕಾಡಿನ ನಡುವೆ ನಾಲ್ಕಾರು ಗಂಟೆ ನಡೆದ ಮೇಲೆ, ಒಂದು ಹಳ್ಳದ ದಂಡೆಯಲ್ಲಿ ಬಿಡಾರ ಮಾಡಿದ. ಅನಂತರ ನನ್ನ ಮೇಲೆ ಮತ್ತೆ-ಮತ್ತೆ ಅತ್ಯಾಚಾರ ಮಾಡಿದ. ಇದು ಅನೇಕ ದಿನ ನಡೆಯಿತು. ನಾನು ನನ್ನ ಜೀವ ಉಳಿಸುವಂತೆ ದೇವರನ್ನು ಪ್ರಾರ್ಥಿಸುತ್ತಿದ್ದೆ. ಅದು ದೇವರಿಗೆ ತಲುಪಿತು ಅನಿಸುತ್ತದೆ..."

“ಒಂದು ದಿನ ಅವನು ನನ್ನ ಬಳಿಗೆ ಬಂದ. ಅವನು ಅಳುತ್ತಿದ್ದ. 'ನಾನು ಬೇಕೆಂದು ನಿನ್ನ ಗಂಡನನ್ನು ಕೊಲ್ಲಲಿಲ್ಲ, ಅದು ಆಕಸ್ಮಿಕ. ನಿನ್ನ ನಾಯಿ ನನ್ನನ್ನು ಕೊಲ್ಲಲು ಬಂತು, ನನ್ನ ಜೀವ ಉಳಿಸಿಕೊಳ್ಳಲು ನಾನು ಅದರ ಮೇಲೆ ಗುಂಡು ಹಾರಿಸಿದೆ. ನನ್ನನ್ನು ಕ್ಷಮಿಸು. ನಿನ್ನನ್ನು ಹಾಗೆಯೇ ಕಳುಹಿಸಿದರೆ ನೀನು ನನ್ನ ಮೇಲೆ ದೂರು ಹೇಳುತ್ತೀಯ ಎಂದು ಹೆದರಿ ನಿನ್ನನ್ನು ಇಲ್ಲಿಗೆ ಕರೆತಂದೆ. ನನಗೆ ಮತ್ತೆ ಜೈಲಿಗೆ ಹೋಗಲು ಭಯವಾಗುತ್ತದೆ. ನನ್ನನ್ನು ಕ್ಷಮಿಸು. ಇದೊಂದು ಆಕಸ್ಮಿಕ ಮಾತ್ರ. ಹಾಗೆಂದು ಎಲ್ಲರಿಗೂ ಹೇಳು' ಎಂದು ಹೇಳಿದ. ಇದನ್ನು ಮತ್ತೆ-ಮತ್ತೆ ಹೇಳುತ್ತಿದ್ದ, ಪ್ರತೀ ಸಾರಿ ಅತ್ಯಾಚಾರ ಮಾಡುವಾಗಲೂ ಹೇಳುತ್ತಿದ್ದ. ನಾನು ಒಪ್ಪಿದೆ...”

ಈ ಹೊಸ ಆವೃತ್ತಿಯ ಕತೆ ತಮ್ಮೆದುರು ಬಂದಾಗ ಪೊಲೀಸರು ವಿಚಲಿತರಾದರು. ತನಿಖೆ ಮೊದಲಿಟ್ಟುಕೊಂಡರು. ಮತ್ತೆ ಟಾಮ್‌ನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದರು. ಅವನು ಮತ್ತೆ ಪಾಸಾದ. ನಂತರ ಸ್ಯಾಂಡ್ರಳನ್ನು ಅದೇ ಪರೀಕ್ಷೆಗೆ ಒಳಪಡಿಸಿದರು. ಅವಳು ಮತ್ತೆ ಫೇಲಾದಳು.

Image
ಸಾಂದರ್ಭಿಕ ಚಿತ್ರ

ಅವಳ ತಾಯಿ ಈ ಬಗ್ಗೆ ಹೇಳುತ್ತ, “ಈ ಸುಳ್ಳು ಪರೀಕ್ಷೆಯ ಪ್ರಕ್ರಿಯೆಯಲ್ಲಿ ಸತ್ಯ-ಸುಳ್ಳುಗಳನ್ನು ಹುಡುಕಲಾಗುವುದಿಲ್ಲ. ಅದು ಭಾವನೆಗಳ ಏರಿಳಿತಗಳನ್ನು ಆಧರಿಸಿ ವ್ಯಾಖ್ಯಾನಿಸುತ್ತದೆ. ಇದಕ್ಕೆ ಮೊದಲೇ ಸಿದ್ಧವಾಗಿ ಬಂದಿದ್ದವರು ಪಾಸಾಗುತ್ತಾರೆ. ಭಾವಗೊಂದಲದಲ್ಲಿ ಸಿಕ್ಕಿಬಿದ್ದವರು ಫೇಲಾಗುತ್ತಾರೆ. ಹಾಗಾಗಿ ನನ್ನ ಮಗಳು ಇದರಲ್ಲಿ ಫೇಲಾಗಿರುವುದೇ ಸರಿ. ಏಕೆಂದರೆ, ಅವಳು ಸತ್ಯದ ಪರವಾಗಿದ್ದಾಳೆ,” ಎಂದಳು. 

ಈಗ ಫೋರೆನ್ಸಿಕ್‌ ಮನೋವಿಜ್ಞಾನಿಯ ಸರದಿ. ಅವನು, ಸ್ಯಾಂಡ್ರಳ ತಾಯಿಯ ಹೇಳಿಕೆಯನ್ನು ಸಮರ್ಥಿಸುತ್ತ ಹೇಳಿದ: "ಹೌದು, ಆ ತಾಯಿ ಹೇಳಿದ್ದು ಸರಿ ಮತ್ತು ನೂರು ಪಾಲು ಸತ್ಯ.” “ಅಷ್ಟೇ ಅಲ್ಲ, ಈ ಸುಳ್ಳು ಪರೀಕ್ಷೆಯ ಪ್ರಕ್ರಿಯೆಯ ಫಲಿತಾಂಶವನ್ನು ನ್ಯಾಯಾಲಯ ಸಾಕ್ಷಿಯಾಗಿ ಪರಿಗಣಿಸುವುದಿಲ್ಲ,” ಎಂದು ಸಹಾಯಕ ಅಟಾರ್ನಿ ರಾಬರ್ಟ್‌ ಹೆಮಿಲ್ಟನ್ ಸ್ಪಷ್ಟನೆ ನೀಡಿದ. “ಅವಳು ಅದರಲ್ಲಿ ಫೇಲ್‌ ಆಗಿರುವುದೇ ಅವಳ ಪ್ರಾಮಾಣಿಕತೆಯ ಶಕ್ತಿ ಸಹ,” ಎಂದೂ ಸೇರಿಸಿದ. ಈಗ ಒಟ್ಟಾರೆ ಸ್ಥಿತಿ ನಿಧಾನವಾಗಿ ಬದಲಾಗುತ್ತಿತ್ತು. ಸತ್ಯಾನ್ವೇಷಣೆಯ ಚೆಂಡು ಎಲ್ಲ ನಿಯಂತ್ರಣಗಳನ್ನೂ ಮೀರಿ ಪೊಲೀಸರ ಅಂಗಳಕ್ಕೆ ಚಿಮ್ಮಲ್ಪಟ್ಟಿತ್ತು. ಮುಂದಿನ ನಡೆ ಅವರದ್ದೇ ಆಗಬೇಕು.

ಇಲ್ಲಿ ಈ ಪೊಲೀಸರ ನಡೆ-ನುಡಿಗಳಲ್ಲಿ ದೇಶ-ಕೋಶಗಳ, ಸತ್ಯ-ಸುಳ್ಳುಗಳ ಮಾತಿಲ್ಲ. ಹಲವು ಶವಗಳ ಮೇಲೆ ರೇಶಿಮೆಯ ಚಾದರ ಹೊದಿಸಿ, ತಿಪ್ಪೆ ಸಾರಿಸಿ, ರಂಗೋಲಿ ಇಟ್ಟು ಅಲಂಕಾರ ಮಾಡಿ, ಎಲ್ಲ ಸುಂದರ, ಸರಳ ಎಂದು ತೋರಿಸುವುದು ಅವರಿಗೆ ಗೊತ್ತು. ಹೆಣ ಠಾಣೆಯ ಬಾಗಿಲಿಗೆ ಬಂದಾಗ ತಮ್ಮ ನಿಜವಾದ ತಾಕತ್ತನ್ನು ತೋರಿಸುವುದನ್ನೂ ಅವರು ಬಲ್ಲರು! ಕೇಳುವ ಕತೆಗಳನ್ನೆಲ್ಲ ಕೇಳಿ ಆಗಿತ್ತು. ಉಳಿದಿರುವುದು ಭೌತಿಕ ಸಾಕ್ಷಿಗಳ ಪರೀಕ್ಷೆ. ಅವು ಆಗಬೇಕು. ಆದರೆ, ಅವಕ್ಕೆ ಮರುಜೀವ ಕೊಡಬೇಕು. ಹೇಗೆ?

ಇಲ್ಲಿ ಒಬ್ಬ ಮನುಷ್ಯ, ಇನ್ನೊಂದು ಶುನಕದ ಕೊಲೆಯಾಗಿದೆ. ಸರಿ... ಅಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದ, ಸರಿ... ಅಲ್ಲೊಬ್ಬಳು ಹದಿನಾರರ ಪ್ರಾಯದ ಹುಡುಗಿಯಿದ್ದಳು, ಸರಿ... ಇಲ್ಲಿದ್ದ ಇನ್ನೊಬ್ಬ, ಈ ಹದಿನಾರರ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಎಂಬ ದೂರಿದೆ, ಸರಿ... ʼಇನ್ನೊಬ್ಬʼ ಹೇಳುತ್ತಿದ್ದಾನೆ ಗುಂಡು ಆಕಸ್ಮಿಕವಾಗಿ ಸಿಡಿಯಿತು ಎಂದು, ಸರಿ... ಈ ನಡುವೆ, ದಾಳಿ ಮಾಡಿದ ನಾಯಿಯ ಮೇಲೆ, ನನ್ನ ಜೀವ ರಕ್ಷಣೆಗಾಗಿ ಅನಿವಾರ್ಯ ಗುಂಡು ಹಾರಿಸಿದೆ ಎನ್ನುತ್ತಿದ್ದಾನೆ, ಸರಿ... ಆದರೆ ʼಇನ್ನೊಬ್ಬʼ ಹಾರಿಸಿದ ಗುಂಡುಗಳ ಕೋನ ಯಾವುದು? ನೀನು ಹೇಳಿರುವಂತೆ, ನಾಯಿಯ ತಲೆಗೆ ನೇರವಾಗಿ ಗುಂಡು ತಗುಲಿರಬೇಕು. ಮೊದಲಿಗೆ ಮನುಷ್ಯನತ್ತ ಆಕಸ್ಮಿಕ ಹಾರಿರುವ ಗುಂಡು ಅವನ ಕೆಳ ಕುತ್ತಿಗೆಯಲ್ಲಿ ಸರಳರೇಖೆಯಲ್ಲಿ ಹಾದುಹೋಗಿರಬೇಕು. ಇದು ಸಿಡಿ ಆಯುಧಗಳು ಕೆಲಸ ಮಾಡುವ ಖಚಿತ ಪ್ರಕ್ರಿಯೆಯನ್ನು ಆಧರಿಸಿದ ಬ್ಯಾಲೆಸ್ಟಿಕ್‌ ವಿಜ್ಞಾನದ ನಿಯಮ. ಹೌದೇ? ಹೀಗೆಯೇ ಆಗಿದೆಯೇ? ಅಂಡಿಗೆ ಚೇಳು ಕುಟುಕಿದಾಗ ಯಾವುದೇ ಮನುಷ್ಯ ಚೇಳಿನ ಮೂಲವನ್ನು ಹುಡುಕುವ ರೀತಿ ಇದು.

ಈ ಲೇಖನ ಓದಿದ್ದೀರಾ? : ವಿಧಿ ಮತ್ತು ವಿಜ್ಞಾನ | ಅತ್ಯಾಚಾರಗಳ ಕಾಲುದಾರಿಯಲ್ಲಿ ಡಿಎನ್ಎ ತಿರುವು

ಎದುರಿನ ಗುರಿ ಮತ್ತು ಗಾಳಿಯಲ್ಲಿ ಹಾರಿರುವ ಗುಂಡಿನ ನಡುವೆ ಒಂದು ಕೋನ ಏರ್ಪಟ್ಟಿರುತ್ತದೆ, ಏರ್ಪಟ್ಟಿರಲೇಬೇಕು. ಅದು ಭೌತಶಾಸ್ತ್ರದ ನಿಯಮ. ಹಾರಿದ ಗುಂಡು ಯಾವ ಕೋನದಲ್ಲಿ ಕುತ್ತಿಗೆಯನ್ನು ಹೊಕ್ಕಿದೆ? ಅದು ಮರಣಾಂತಿಕವೇ ಎಂಬುದು ಜೀವಶಾಸ್ತ್ರೀಯ ನಿಯಮ. ಈ ಎರಡೂ ಸರಿಯಾದ ಅವಧಿಯಲ್ಲಿ, ಸರಿಯಾದ ಕೋನದಲ್ಲಿ ಸಂಭವಿಸಿದ್ದರೆ ಮಾತ್ರ ಸಾವು ಸಾಧ್ಯ. ಇದಕ್ಕೆ ವೈಜ್ಞಾನಿಕವಾಗಿ 'ಟ್ರಜೆಕ್ಟರಿʼ ಎನ್ನುತ್ತಾರೆ.

ಹಾಗಾದರೆ ಇಲ್ಲಿ ಏನಾಗಿದೆ? 'ಇನ್ನೊಬ್ಬʼ ಹೇಳಿದ ರೀತಿಯಲ್ಲಿಯೇ ಗುಂಡು ಸಿಡಿದಿದೆಯೇ? ಪರೀಕ್ಷಿಸಲು ಇಲ್ಲಿ ನಾಯಿಯ ಶವ ಪರೀಕ್ಷೆಯ ವರದಿ ಬೇಕು. ಆದರೆ, ಇಲ್ಲಿ ಅದನ್ನು ಮಾಡಲಾಗಿಲ್ಲ. ಆ ಶುನಕವನ್ನು ಪ್ರಾಣಿಗಳ ಸಾಮೂಹಿಕ ಸಮಾಧಿ ಸ್ಥಳದಲ್ಲಿ ಸಂಸ್ಕಾರ ಮಾಡಲಾಗಿದೆ. ದೇಹ ಹುಡುಕುವುದು ಸಾಧ್ಯವಿಲ್ಲ. ಉಳಿದಿರುವುದು ಮನುಷ್ಯ ದೇಹದ ಮಾದರಿ.

ಈ ಮಾದರಿಯನ್ನು ಆಧರಿಸಿ ಬ್ಯಾಲೆಸ್ಟಿಕ್‌ ವಿಜ್ಞಾನದ ನಿಯಮಗಳನ್ನು ಅನ್ವಯಿಸುವುದಾದರೆ, ವಿಧಿ ವಿಜ್ಞಾನ ತನ್ನ ಸಾಮರ್ಥ್ಯವನ್ನು ತೋರಬಲ್ಲದು. ಅದು ಸಿದ್ಧತೆಯಲ್ಲಿ ತೊಡಗಿತು. ಆದರೆ, ಇಲ್ಲಿನ ಪ್ರಧಾನ ಬಿಕ್ಕಟ್ಟೆಂದರೆ, ಸ್ಯಾಂಡ್ರ ಹೇಳಿಕೆಗಳ ಅಸ್ತವ್ಯಸ್ತತೆ ಮತ್ತು ಮತ್ತೆ-ಮತ್ತೆ ಅವು ಕೇಂದ್ರದಿಂದ ಪಲ್ಲಟಗೊಳ್ಳುತ್ತಿರುವುದು. ನಿಜಕ್ಕೂ ಅವಳು ಹೇಳುತ್ತಿರುವ ಅಂಶಗಳಲ್ಲಿ ನಿಜ ಇದೆ ಅನ್ನುವುದಾದರೆ, ಅಷ್ಟೊಂದು ಗೊಂದಲಗಳು ಏಕಿವೆ ಮತ್ತು ಸುಳ್ಳು ಪರೀಕ್ಷೆಯಲ್ಲಿ ಅವಳು ವಿಫಲಳಾಗುತ್ತಿರುವುದು ಏಕೆ? ಇದಕ್ಕೆ ಕಾರಣ ಕಂಡುಕೊಳ್ಳದ ಹೊರತು ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗದು.

ಇದಕ್ಕಾಗಿ ಪೊಲೀಸ್ ಇಲಾಖೆಯು, ಖ್ಯಾತ ಫೊರೆನ್ಸಿಕ್‌ ಮನೋವಿಜ್ಞಾನಿ ಡಾ.ಜೋಸೆಫ್‌ ಟ್ರೆಲೇವನ್‌ ಅವರ ಮೊರೆಹೋಯಿತು. ಅನುಭವಿಯಾಗಿದ್ದ ಜೋಸೆಫ್‌ಗೆ ಯಾವುದೇ ವ್ಯಕ್ತಿ ಎಂತಹ ಸಂದರ್ಭಗಳಲ್ಲಿ ಹೀಗೆ ವರ್ತಿಸುತ್ತಾನೆ ಎಂಬುದರ ಅರಿವಿತ್ತು. ಕೊರಿಯನ್‌ ಯುದ್ಧದಲ್ಲಿ ಸೆರೆಯಾದ ಸೈನಿಕರು ಏಕೆ ಅನೇಕ ದಿನಗಳ ಬಂಧನದ ನಂತರ ತಮ್ಮ ದೇಶದ ವಿರುದ್ಧವೇ ಹೇಳಿಕೆ ನೀಡಿದರು ಎಂಬುದನ್ನು ಉದಾಹರಿಸಿದ. ಆ ಬಂಧಿತರನ್ನು ಮೊದಲಿಗೆ ಏಕಾಂತಕ್ಕೆ ತಳ್ಳಲಾಯಿತು. ನಂತರ ಅವರೊಂದಿಗೆ ಅತ್ಯಂತ ಕ್ರೂರವಾಗಿ ವರ್ತಿಸಲಾಯಿತು. ನಂತರ ಅವರಿಗೆ ತಾನೇತಾನಾಗಿ ಜೀವಭಯ ಹುಟ್ಟುವಂತೆ ಮಾಡಲಾಯಿತು. ಈ ನಡುವೆ ಕೊರಿಯಾ ಹೇಗೆ ತಪ್ಪು ಮಾಡುತ್ತಿದೆ ಎಂದು ಹೇಳಲಾಗುತ್ತಿತ್ತು. ಇದೆಲ್ಲ ಸತತವಾಗಿ ದೀರ್ಘಕಾಲ ನಡೆಯಿತು. ಮಾನಸಿಕವಾಗಿ ಬಿರುಕು ಬಿಟ್ಟ ಕೆಲವರನ್ನು ಪ್ರತ್ಯೇಕಿಸಿ, ಅವರಿಗೆ, 'ನಮ್ಮದೊಂದು ಸಣ್ಣ ಮಾತನ್ನು ಕೇಳಿದರೆ ನೀವು ಸ್ವತಂತ್ರರಾಗಬಹುದು' ಎಂಬ ಪ್ರಲೋಭನೆ ಒಡ್ಡಲಾಯಿತು. ಅದನ್ನು ಆಯ್ದುಕೊಂಡ ಕೆಲವರು, ತಮ್ಮ ದೇಶದ ವಿರುದ್ಧವೇ ಹೇಳಿಕೆ ನೀಡಿದರು.

Image
ಸಾಂದರ್ಭಿಕ ಚಿತ್ರ

ಹಾಗೆಯೇ, ಇಂಥ ಸಂಗತಿಗಳಲ್ಲಿ ಮಾದರಿಯಂತಾಗಿರುವ 'ಸ್ಟಾಕ್‌ಹೋಮ್‌ ಸಿಂಡ್ರೋಮ್‌' ಹಿನ್ನೆಲೆ ಸಹ ಅದೇ. ತಮ್ಮನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು, ಜೀವಭಯ ಹುಟ್ಟಿಸಿದ್ದ ಲೂಟಿಕೋರರ ಪರವಾಗಿ ಅಲ್ಲಿ ಸೆರೆಯಾಗಿದ್ದ ಬಹುತೇಕರು ಹೇಳಿಕೆ ನೀಡಿದ್ದರು. ಇಲ್ಲೂ ಆಗಿರುವುದು ಅದೇ. ಅವಳ ಗಂಡನನ್ನು ಕೊಂದ ನಂತರ ಕೊಲೆಗಾರ, ಅವಳ ಕಣ್ಣೆದುರಿಗೇ ಹಠಾತ್ತಾಗಿ ಅವಳ ನಾಯಿಯನ್ನು ಕೊಂದದ್ದು ಅವನೆಂತಹ ಕ್ರೂರಿ ಮತ್ತು ಯಾವಾಗ ಏನು ಬೇಕಾದರೂ ಮಾಡಬಲ್ಲ ಎಂಬುದರ ಸ್ಪಷ್ಟ ಪ್ರದರ್ಶನ. ಆ ನಂತರ ಅವಳ ಮೇಲೆ ಹಿಡಿತ ಸಾಧಿಸಿದ್ದಾನೆ. ಅವಳನ್ನು ದೈಹಿಕವಾಗಿ ಹಿಂಸಿಸಿದ್ದಾನೆ, ಲೈಂಗಿಕ ಶೋಷಣೆ ಮಾಡಿದ್ದಾನೆ. ಈ ಎಲ್ಲ ಸಂದರ್ಭಗಳಲ್ಲಿ ಅವಳು ಕೇವಲ ಅಸಹಾಯಕಳಾಗಿದ್ದಳು. ಜೀವಭಯ ಮತ್ತು ಅತ್ಯಾಚಾರಗಳಿಂದ ಬಿಡುಗಡೆಯಾದರೆ ಸಾಕೆಂಬ ಭಾವದ ಹೊರತು ಅವಳಲ್ಲಿ ಇನ್ನೊಂದಕ್ಕೆ ಅವಕಾಶವಿಲ್ಲದಂತೆ ಮುರಿದುಹೋಗಿದ್ದಳು. ಇಂತಹ ಎಲ್ಲ ಮಾದರಿಗಳಲ್ಲಿರುವಂತೆ ಇಲ್ಲಿಯೂ ನಾಲ್ಕು ಅಂಶಗಳಿವೆ.

ಒಂದು: ಪರ್ವತಗಳಿಂದ ಆವೃತ್ತವಾದ ಆ ಕಾಡು ಪ್ರದೇಶ ಅವಳಲ್ಲಿ ಏಕಾಂಗಿತನವನ್ನು ಹುಟ್ಟಿಸಿದೆ.
ಎರಡು: ಅದೊಂದು ಆಕಸ್ಮಿಕ ಘಟನೆ ಎಂದು ಬ್ರೌನ್‌ ಮತ್ತೆ-ಮತ್ತೆ ಹೇಳುತ್ತಿದ್ದುದು ಅವಳನ್ನು ಪ್ರಭಾವಿಸಿದೆ.
ಮೂರು: ಇದಕ್ಕೆ ಬಹುಮಾನ - ನಿರಂತರ ಅತ್ಯಾಚಾರ ಮತ್ತು ಪ್ರಾಣಭೀತಿಯಿಂದ ಬಿಡುಗಡೆ.
ನಾಲ್ಕು: ಆವಳ ಗಂಡನ ಹತ್ಯೆಗೆ ಅವಳೇ ಹೊಣೆ ಎಂಬ ನೈತಿಕ ಬಿಕ್ಕಟ್ಟಿನಿಂದ ಮುಕ್ತಿ.

ಈ ಎಲ್ಲದರಿಂದಾಗಿ ಅವಳು ಸುಮ್ಮನೆ ಬ್ರೌನ್ ಹೇಳಿದ ಕತೆಯನ್ನು ಹೇಳಿಲ್ಲ, ಅದನ್ನು ಸತ್ಯವೆಂದು ನಂಬಿದ್ದಾಳೆ. ಅವಳೇ ಹೇಳುವಂತೆ, "ಆ ಇಬ್ಬರೂ ಸತ್ತ ಮೇಲೆ ನಾನು ಪೂರ್ತಿ ಒಬ್ಬಂಟಿ. ಆದರೆ ನನ್ನೊಂದಿಗೆ ನನ್ನವರ ಕೊಲೆಗಾರನಿದ್ದಾನೆ. ಅಲ್ಲ ಅಲ್ಲ, ನಾನು ಆ ಕೊಲೆಗಾರನೊಂದಿಗಿದ್ದೇನೆ. ಆಗ ಅವನನ್ನು ನಾನು ಕೊಲೆಗಾರ ಅಂದುಕೊಂಡರೆ ಅಲ್ಲಿಯೇ ಸತ್ತುಹೋಗುತ್ತೇನೆ. ಈಗ ಇವನೂ ನನ್ನನ್ನು ತೊರೆದುಹೋದರೆ ಇನ್ಯಾರೋ ನನ್ನನ್ನು ಅಪಹರಿಸಬಹುದು, ಅತ್ಯಾಚಾರ ಮಾಡಬಹುದು. ಅವರು ಒಬ್ಬರೇ ಇರಬೇಕೆಂದಿಲ್ಲ. ಒಂದು ಗುಂಪೂ ಆಗಿರಬಹುದು. ಇಂಥ ಹೊತ್ತಿನಲ್ಲಿ ಅವನನ್ನು ನಂಬದೆ ನನಗೆ ಇನ್ನಾವ ದಾರಿಯೂ ಇರಲಿಲ್ಲ..."

ಇನ್ನು, ಸುಳ್ಳು ಪತ್ತೆ ಪರೀಕ್ಷೆ. ಮನುಷ್ಯ ತನಗೆ ತಾನೇ ಅನೇಕ ಬಾರಿ ಸುಳ್ಳುಗಳನ್ನು ಹೇಳಿಕೊಳ್ಳುತ್ತಾನೆ ಮತ್ತು ಸಾವು-ಬದುಕಿನ ಪ್ರಶ್ನೆ ಬಂದಾಗ ದೊಡ್ಡ ಸುಳ್ಳುಗಳನ್ನು ಹೇಳುತ್ತಾನೆ. ಸಮಯ, ಸಂದರ್ಭಗಳನ್ನು ಆಧರಿಸಿ ಮನುಷ್ಯನ ದೃಷ್ಟಿಕೋನಗಳೂ ಪಥ ಬದಲಿಸುತ್ತವೆ. ಘಟಿಸಿರುವುದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂದು ಸ್ವತಃ ಗೊತ್ತಿಲ್ಲದ ಒಬ್ಬರನ್ನು ಸುಳ್ಳು ಪತ್ತೆ ಯಂತ್ರ ಹೇಗೆ ಅರ್ಥ ಮಾಡಿಕೊಳ್ಳಬಲ್ಲದು? ಅದೇನು ಭವಿಷ್ಯವನ್ನೋ, ಭೂತವನ್ನೋ ಹೇಳುವ ಅಥವಾ ಕಂಡುಹಿಡಿಯುವ ಉಪಕರಣವಲ್ಲ. ಪರೀಕ್ಷೆಗೆ ಒಳಗಾಗುವವರಿಗೇ ಗೊತ್ತಿಲ್ಲದ ಮಾಹಿತಿಯನ್ನು ಅದು ನೀಡಲು ಸಾಧ್ಯವಿಲ್ಲ. ಆದ್ದರಿಂದಲೇ ಇದನ್ನು ನ್ಯಾಯಾಲಯಗಳು ಒಪ್ಪುವುದಿಲ್ಲ. ಹೀಗಾಗಿಯೇ, ಪರೀಕ್ಷೆಯಲ್ಲಿ ಕೊಲೆಗಾರ ಪಾಸಾಗಿದ್ದು ಮತ್ತು ಶೋಷಿತೆ ವಿಫಲವಾಗಿದ್ದು. ಆದರೆ, ಎರಡೂ ಅಸಂಬದ್ಧ.

Image
Vidhi Vijnana MAY 31 2
ಸಾಂದರ್ಭಿಕ ಚಿತ್ರ

ಈ ಅಂಶಗಳೊಂದಿಗೆ ಜೋಸೆಫ್‌ ಅಟಾರ್ನಿಯೊಂದಿಗೆ ಮಾಡಿದ ಚರ್ಚೆ ಫಲ ನೀಡಿತು. “ಇದನ್ನು ನಾನು ನ್ಯಾಯಾಲಯದಲ್ಲಿ ಸಮರ್ಥಿಸಬಲ್ಲೆ, ಸರಿ. ಆದರೆ, ಜೂಲಿಯೊನ ಕೊಲೆ ಆಗಿದೆ, ಅದನ್ನು ಬ್ರೌನ್‌ ಮಾಡಿದ್ದಾನೆ ಎಂದು ನಿರೂಪಿಸುವುದು ಹೇಗೆ?” ಎಂದರು ಅಟಾರ್ನಿ. ಇದಕ್ಕೆ ವಿಧಿ ವಿಜ್ಞಾನಿಗಳು, ಸಿಡಿ ಆಯುಧಗಳ ಪರಿಣಿತರು, ಟ್ರಜೆಕ್ಟರಿ ತಜ್ಞರು ಸಿದ್ಧವಾಗಿ, ಈಗಾಗಲೇ ಪ್ರಯೋಗ ನಡೆಸುತ್ತಿದ್ದರು. 

ಗುಂಡು ಹಾರಿಸಲಿರುವ ಬಂದೂಕ ಭಾರೀ ತೂಕದ್ದಾಗಿದ್ದಲ್ಲಿ, ಯಾರೇ ಅದನ್ನು ಹಿಡಿದು ಗುಂಡು ಹಾರಿಸಿದರೂ ಸರಿ, ಅದನ್ನು ಸರಳರೇಖೆಯ ಕೋನದಲ್ಲಿ ಹಿಡಿಯಲು ಸಾಧ್ಯವಿಲ್ಲ. ಅದು ಕನಿಷ್ಠ ಮಟ್ಟದಲ್ಲಿ ಮೇಲ್ಮುಖ ಕೋನದಲ್ಲಿರುತ್ತದೆ. ಅಲ್ಲದೆ, ಜೂಲಿಯೊನಿಗೆ ಗುಂಡು ಹೊಕ್ಕಿರುವ ಜಾಗದಲ್ಲಿ ಗನ್‌ ಪೌಡರ್‌ನ ಕುರುಹುಗಳು ಸಿಕ್ಕಿಲ್ಲ. ಗನ್‌ ಪೌಡರ್‌ನ ಕುರುಹುಗಳು ಇರಬೇಕೆಂದರೆ ನಿರ್ದಿಷ್ಟ ದೂರದಿಂದ ಹಾರಿಸಿರಬೇಕು. ಆ ದೂರ ಎಷ್ಟು? ಆದರೆ, ಆ ನಿರ್ದಿಷ್ಟ ದೂರ ಗನ್‌ನಿಂದ ಗನ್‌ಗೆ ಬದಲಾಗುತ್ತದೆ.

ಹಾಗಾದರೆ, ಈ ಎ-22 ಕ್ಯಾಲಿಬರ್‌ 99 ಸೇವೇಜ್‌ ಮಾಡೆಲಿನ ಬಂದೂಕಕ್ಕೆ ಆ ದೂರ ಎಷ್ಟಿರಬೇಕು? ಇದನ್ನು ಒರೆಗಾನ್‌ ಕೇಂದ್ರ ಪೊಲೀಸ್‌ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ಹಲವು ಪ್ರಯೋಗಗಳ ನಂತರ ದೊರೆತ ಫಲಿತವೆಂದರೆ, ಈ ನಿರ್ದಿಷ್ಟ ಬಂದೂಕಿನ ತುದಿಯಿಂದ ಅದು ಅಪ್ಪಳಿಸುವ ಗುರಿಯ ದೂರ ಕನಿಷ್ಟ ಮೂರು ಅಡಿ ಮತ್ತು ಬಂದೂಕಿನ ಉದ್ದ ಮೂರು ಅಡಿ. ಹಾಗಿದ್ದಲ್ಲಿ ಅವನು ಹೇಳಿದಂತೆ ಅಥವಾ ಸ್ಯಾಂಡ್ರ ಹೇಳಿದ ಮೊದಲ ಅವೃತ್ತಿಯ ಕತೆಯಂತೆ ಬಂದೂಕ ಕೈ ಬದಲಿಸಿಕೊಳ್ಳುವಾಗ ಸಿಡಿದಿದ್ದಲ್ಲ. ಹಾಗೊಂದು ಪಕ್ಷ ಸಿಡಿದಿದೆ ಎಂದು ಭಾವಿಸುವುದಾದರೂ, ಗುಂಡು ಈಗ ಯಾವ ಕೋನದಿಂದ ಒಳಹೊಕ್ಕಿದೆಯೋ ಮತ್ತು ಯಾವ ಕೋನದಿಂದ ಹೊರಹೋಗಿದೆಯೋ ಆ ಕೋನ ಮೂಡುವುದು ಸಾಧ್ಯವಿಲ್ಲ. 

ಈ ವಿಧಿವಿಜ್ಞಾನದ ಸಾಕ್ಷ್ಯವನ್ನು ಆಧರಿಸಿ ಬ್ರೌನ್‌ನನ್ನು ಬಂಧಿಸಲಾಯಿತು. ಪ್ರಯೋಗದ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಜೋಡಿಸಲಾಯಿತು. ಆದರೂ, ಪೊಲೀಸರಿಗೆ, ಅಟಾರ್ನಿಗಳಿಗೆ ಹಾಗೂ ವಿಧಿವಿಜ್ಞಾನಿಗಳಿಗೆ ಇದನ್ನು ನ್ಯಾಯಾಲಯದ ಮುಂದೆ ರುಜುವಾತುಪಡಿಸಲು ಕಷ್ಟವಾಗಬಹುದು ಎಂಬ ಆತಂಕವಿತ್ತು.

ಅವನೇನಾದರೂ ನಿರಪರಾಧಿ ಎಂದು ಬಿಡುಗಡೆಗೊಂಡಲ್ಲಿ ಸ್ಯಾಂಡ್ರಳಿಂದ ಹಿಡಿದು ಅಟಾರ್ನಿಗಳವರೆಗೆ ಎಲ್ಲರಿಗೂ ಜೀವಭಯವಿತ್ತು. ಇದನ್ನು ಸ್ಯಾಂಡ್ರ ವ್ಯಕ್ತಪಡಿಸಿದ್ದಳು ಸಹ. "ಆಕಸ್ಮಿಕವಾಗಿ ಅವನಿಗೆ ಏಳು ವರ್ಷಗಳ ಪೆರೋಲ್‌ ಸಹಿತ ಶಿಕ್ಷೆಯಾದಲ್ಲಿ ಮೊದಲ ಅವಕಾಶದಲ್ಲಿಯೇ ಅವನು ನನ್ನನ್ನು, ಮನೆಯವರನ್ನು ಮುಗಿಸುವುದು ಗ್ಯಾರಂಟಿ,” ಎಂದು ಹೇಳಿದ್ದಳು. ವಿಚಾರಣೆ ಇನ್ನೂ ಆರಂಭಿಕ ಹಂತದಲ್ಲಿತ್ತು.

Image
ಸಾಂದರ್ಭಿಕ ಚಿತ್ರ

ಈ ನಡುವೆ, ಬ್ರೌನ್‌ ಇದ್ದ ಜೈಲಿನ ಅಧಿಕಾರಿಗಳು ತುರ್ತಾಗಿ ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರು. ಅವರು ಕೊಟ್ಟ ಮಾಹಿತಿಯ ಬೆನ್ನು ಹತ್ತಿದ ತನಿಖೆದಾರರಿಗೆ ದೆಸೆ ಖುಲಾಯಿಸಿದಂತೆ ಅನ್ನಿಸಿತು. ಜೈಲಿನ ಕೊಠಡಿಯಲ್ಲಿದ್ದ ಸಹಕೈದಿಯೊಂದಿಗೆ ಬ್ರೌನ್‌ ಕೆಲವು ಸಂಗತಿಗಳನ್ನು ಹೇಳಿದ್ದ. "ಆ ಕೊಲೆಗಳನ್ನು ಮಾಡಿರುವುದು ನಾನೇ. ಆದರೆ, ನಾನು ಸುಳ್ಳು ಪರೀಕ್ಷೆಯಲ್ಲಿ ಪಾಸಾಗಿದ್ದೇನೆ. ನ್ಯಾಯಾಧೀಶರ ಮುಂದೆ ಇದೇ ಆತ್ಮವಿಶ್ವಾಸದಿಂದ ಹೇಳಿಕೆ ನೀಡಿದರೆ ನಾನು ಬಚಾವ್.‌ ಆದರೆ, ಅಟಾರ್ನಿಗಳ ಮರುಪ್ರಶ್ನೆಯ ಹೊತ್ತಿನಲ್ಲಿ ನಾನೇನಾದರೂ ಭಾವನಾತ್ಮಕವಾಗಿ ಕುಸಿದಲ್ಲಿ ಅವರು ನನಗೆ ಶಿಕ್ಷೆ ಕೊಡಿಸುವುದು ಸಾಧ್ಯ. ನಾನು ಹಾಗಾಗಲಾರೆ. ಖಂಡಿತ ಗೆಲ್ಲುತ್ತೇನೆ. ಆನಂತರ ನೋಡು… ಮೊದಲಿಗೆ ಅವಳು, ಆನಂತರ ಈ ಅಟಾರ್ನಿಗಳು... ಯಾರನ್ನೂ ಬಿಡುವುದಿಲ್ಲ,” ಎಂದಿದ್ದ.

ಈ ಮೂಲಕ ಅವನು ಪ್ರಾಸಿಕ್ಯೂಷನ್‌ನ ಅನೇಕ ಆತಂಕಗಳನ್ನು ನಿವಾರಿಸಿದ್ದ. ಅಂತಿಮವಾಗಿ ಆ ದಿನವೂ ಬಂದಿತು. ವಿಚಾರಣೆಯ ಕೊನೆಯ ಹಂತದಲ್ಲಿ ಅಟಾರ್ನಿ, ಅವನ ಕೈಗೆ ಅದೇ ಬಂದೂಕವನ್ನು ಕೊಟ್ಟು, "ನೀನು ಹೇಳುತ್ತಿರುವಂತೆ ಆಕಸ್ಮಿಕ ಹೇಗೆ ಸಂಭವಿಸಿತು ತೋರಿಸು...” ಎಂದರು. ಅವನು ತೋರಿಸಿದ. ನ್ಯಾಯಾಧೀಶರು ಗಮನಿಸುತ್ತಿದ್ದರು. ಅವರ ಮುಂದೆ ವೈಜ್ಞಾನಿಕವಾಗಿ ಮಾಡಲಾಗಿರುವ ಅದೇ ಬಂದೂಕದ ಪರೀಕ್ಷೆಯ ಅಧಿಕೃತ ವರದಿಗಳು ಬಿದ್ದಿದ್ದವು. ಎಲ್ಲವೂ ತಜ್ಞರಿಂದ ದೃಢೀಕರಿಸಲ್ಪಟ್ಟಿದ್ದವು. ಅವು ಇವನ ಆಕಸ್ಮಿಕದ ಕತೆಯನ್ನು ಅಣಕಿಸುತ್ತಿದ್ದವು. ನ್ಯಾಯಾಧೀಶರು ತೀರ್ಪನ್ನು ಕಾದಿರಿಸಿ ಮುಂದೂಡಿದರು. ಇದೇನೂ ಅರಿವಿಲ್ಲದ ಬ್ರೌನ್‌ ಮಾತ್ರ ಗೆದ್ದ ಭಾವದಲ್ಲಿ ಬೀಗುತ್ತಿದ್ದ.

ಮರುದಿನ ತೀರ್ಪು ಹೊರಬಂತು. ಬ್ರೌನ್‌ಗೆ ಮೊದಲ ಡಿಗ್ರಿ ಕೊಲೆಗಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದಾದ ನಂತರ ಸಹಾಯಕ ಅಟಾರ್ನಿ ರಾಬರ್ಟ್‌ ಹೆಮಿಲ್ಟನ್‌ಗೆ ನಿವೃತ್ತಿಯಾಗಿದೆ. ಆದರೆ, ಅವರು ಬ್ರೌನನ ಪೆರೋಲ್‌ ಅರ್ಜಿ ಬಂದಾಗಲೆಲ್ಲ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ. ಅವನ ಪೆರೋಲ್‌ ಅರ್ಜಿಯ ವಿರುದ್ಧ ವಾದ ಮಂಡಿಸುತ್ತಾರೆ. ಈವರೆಗೂ ಅವನಿಗೆ ಪೆರೋಲ್‌ ಸಿಕ್ಕಿಲ್ಲ.

ಸ್ಯಾಂಡ್ರಳಿಗೆ ಮತ್ತೆ ವಿವಾಹವಾಗಿದೆ. ಗಂಡ, ಮಕ್ಕಳೊಂದಿಗಿದ್ದಾಳೆ. ಆದರೆ, ಅವಳಿನ್ನೂ ಆತಂಕದಿಂದ ಹೊರಬಂದಂತಿಲ್ಲ.

ಉಪಸಂಹಾರ

ಜಗತ್ತಿನಲ್ಲಿ ಕೊಟ್ಯಾಂತರ ದಂಪತಿಗಳಿದ್ದಾರೆ. ಬಹುತೇಕರು ಪ್ರವಾಸಗಳಿಗೂ ಹೋಗುತ್ತಾರೆ. ಎಲ್ಲರಿಗೂ ಹೀಗಾಗಿಲ್ಲ. ಆದರೆ, ಈ ದಂಪತಿಗಳೊಂದಿಗೆ ಇದು ಹೇಗಾಯಿತು? ಎಲ್ಲಿ ಲೋಪವಾಯಿತು? ಯಾರ ಕಡೆಯಿಂದ ಆಯಿತು? ಇಲ್ಲಿ ಸ್ಯಾಂಡ್ರಾಳ ತಪ್ಪೇನಾದರೂ ಇತ್ತೇ? ಅಥವಾ ಅವಳ ಗಂಡನದು? ಗೊತ್ತಿಲ್ಲ... ಹೊಳೆದರೆ ಹಂಚಿಕೊಳ್ಳಿ.

(ವಿವಿಧ ಮೂಲಗಳಿಂದ)
ನಿಮಗೆ ಏನು ಅನ್ನಿಸ್ತು?
2 ವೋಟ್