ವಿಧಿ ಮತ್ತು ವಿಜ್ಞಾನ | ಜೀನ್ಸ್‌ ಪ್ಯಾಂಟ್‌ ಹೇಳಿದ ರಹಸ್ಯ ಮತ್ತು ಇಪ್ಪತ್ತು ವರ್ಷಗಳ ಪರದಾಟ

vidhi 8

ಕೊಲೆಯಾದಾಕೆ 'ಕ್ರೂಗರ್‌' ಎನ್ನುವ ದಿನಸಿ ಅಂಗಡಿಯಲ್ಲಿ ಕ್ಯಾಷಿಯರ್‌ ಆಗಿದ್ದಳು. ಅವಳಿಗೊಬ್ಬ ಪ್ರಿಯತಮನಿದ್ದ. ಆ ದಿನ ಮಧ್ಯಾಹ್ನ ಕ್ರೂಗರ್‌ ಬಿಟ್ಟಿದ್ದಳು; 'ಮಿಡ್ಲ್‌ ಟೆನ್ನೀಸಿ ಯುನಿವರ್ಸಿಟಿ'ಯಲ್ಲೊಂದು ಭೇಟಿ ನಿಗದಿಯಾಗಿತ್ತು. ತನಗೆ ಸಿಕ್ಕ ಅಂಕದ ಬಗ್ಗೆ ತಿಳಿದುಕೊಂಡು, ಅಧಿಕಾರಿಗಳನ್ನು ಭೇಟಿ ಮಾಡುವ ಪ್ಲಾನು. ಆದರೆ, ಅವಳು ಯುನಿವರ್ಸಿಟಿ ತಲುಪಲೇ ಇಲ್ಲ!

1984ರ ಮೇ ತಿಂಗಳ ಒಂದು ದಿನ. ಟೆನ್ನೀಸಿ ರೈತನೊಬ್ಬ ತನ್ನ ಹೊಲ ಉಳುತ್ತಿದ್ದ. ಉಳುತ್ತ-ಉಳುತ್ತ ಸಂಜೆಯಾಯಿತು. ಕೊನೆಗೆ ಜಮೀನಿನ ಅಂಚಿನಲ್ಲಿದ್ದ ಕ್ವಾರಿಯ ಭಾಗದ ಉಳುಮೆ ಮುಗಿಸುವ ಅವಸರದಲ್ಲಿದ್ದ. ಆಗ, ಸಾಮಾನ್ಯವಾಗಿ ಕ್ವಾರಿಯಲ್ಲಿ ಕಾಣಬಾರದ ಬಟ್ಟೆಗಳಂತಹ ವಸ್ತುಗಳು ಅವನ ಕಣ್ಣಿಗೆ ಬಿದ್ದವು. ಮೊದಲಿಗೆ ಒಂದು ಜೀನ್ಸ್‌ ಪ್ಯಾಂಟು, ನಂತರ ಇನ್ನೊಂದು ಜೀನ್ಸ್‌ ಪ್ಯಾಂಟು, ಜೊತೆಗೆ ಒಂದು ಕಪ್ಪು ಜರ್ಕಿ. ಕುತೂಹಲದಿಂದ ಹತ್ತಿರ ಬಂದು ನೋಡಿದ. ಅವು ಬರಿಯ ಬಟ್ಟೆಗಳಲ್ಲ, ಆ ಬಟ್ಟೆಗಳನ್ನು ಒಂದು ದೇಹ ಹೊದ್ದಿತ್ತು!

ಬಟ್ಟೆಗಳನ್ನು ಸರಿಸಿ ನೋಡಿದ. ಅದರ ಕೆಳಗೊಂದು ಯುವತಿಯ ದೇಹವಿದೆ, ಕೇವಲ ಬ್ರಾ ತೊಟ್ಟಿದೆ. ಅವಳ ಕುತ್ತಿಗೆಯಲ್ಲಿ ಜರ್ಕಿಯನ್ನು ಹಿಂಬದಿಗೆ ಇಳಿಬಿಟ್ಟು, ತೋಳುಗಳನ್ನು ಕುತ್ತಿಗೆಯ ಸುತ್ತ ಸ್ಟೈಲಿಗೆ ಸುತ್ತಿಕೊಳ್ಳುವ ರೀತಿಯಲ್ಲಿದೆ. ಉಳಿದಂತೆ ನಗ್ನ. ಒಂದು ಜೀನ್ಸ್‌ ತಗೆದರೆ, ಅದರ ಬದಿಗೆ ಇನ್ನೊಂದು ಜೀನ್ಸ್‌ ಪ್ಯಾಂಟು ಇದೆ. ಎಲ್ಲರೂ ತೊಡುವುದು ಒಂದೇ ಪ್ಯಾಂಟು ಅಲ್ಲವೇ? ಅದು ಸರಿ, ಇವೆಲ್ಲ ಇಲ್ಲಿಗೆ ಹೇಗೆ ಬಂದವು? ಇಲ್ಲಿ ಬಿದ್ದಿರುವ ಯುವತಿ ಯಾರು? ಈ ಇನ್ನೊಂದು ಪ್ಯಾಂಟು ಯಾರದು?

ಸಹಜವಾಗಿ ಪೊಲೀಸ್ ತನಿಖೆ ಆರಂಭವಾಯಿತು. ಸಿಕ್ಕ ಮಾಹಿತಿಯ ಪ್ರಕಾರ, ಅವಳ ಹೆಸರು ಲ್ಯೂರ ಸಲ್ಮೋನ್.‌ 18 ವರ್ಷ ವಯಸ್ಸು. ಸ್ಥಳೀಯ ಕಾಲೇಜಿನ ವಿದ್ಯಾರ್ಥಿನಿ. ಶವಪರೀಕ್ಷೆಯ ವರದಿ ಬಂತು. ಯಾವುದೋ ಮೊಂಡು ವಸ್ತುವಿನಿಂದ ಅವಳ ತಲೆಗೆ ಅನೇಕ ಬಾರಿ ಬಲವಾಗಿ ಹೊಡೆದ ಕಾರಣದಿಂದ ತಲೆ ಛಿದ್ರವಾಗಿ, ರಕ್ತಸ್ರಾವದಿಂದ ಅವಳ ಮರಣ ಸಂಭವಿಸಿತ್ತು. ಅಂಥದ್ದೊಂದು ಆಯುಧಕ್ಕಾಗಿ ಹುಡುಕಾಡಿದಾಗ, ಸಮೀಪದಲ್ಲಿಯೇ ಒಂದು ಒರಟು ಕಲ್ಲು ಸಿಕ್ಕಿತು. ಅದರಲ್ಲಿನ್ನೂ ರಕ್ತ ಅಂಟಿಕೊಂಡಿತ್ತು. ಅಂಟಿಕೊಂಡಿರುವ ರಕ್ತದ ಪ್ರಮಾಣ ಶವಪರೀಕ್ಷೆ ವರದಿಯನ್ನು ಸಂಪೂರ್ಣವಾಗಿ ಸಮರ್ಥಿಸುತ್ತಿತ್ತು.

ವೈದ್ಯಕೀಯ ಪರೀಕ್ಷೆಯ ಪ್ರಕಾರ, ಅವಳ ಸಾವಿಗಿಂತ ತುಂಬಾ ಹೊತ್ತಿನ ಮುಂಚೆ ಲೈಂಗಿಕ ಕ್ರಿಯೆ ನಡೆದಿತ್ತು. ಆದರೆ, ಅದು ಒಪ್ಪಿತ ಕ್ರಿಯೆಯಾದಂತಿತ್ತು. ಇದು ಈ ಅಪರಾಧದೊಂದಿಗೆ ಸಂಬಂಧ ಹೊಂದಿದಂತೆ ಕಾಣುತ್ತಿರಲಿಲ್ಲ. ಇವಳಿಗೆ ಯಾರೊಂದಿಗೋ ಪ್ರೇಮ ಸಂಬಂಧವಿದ್ದು, ಅ ಸಂಬಂಧದ ಮೂಲಕ ಈ ಕ್ರಿಯೆ ಸಮ್ಮತಿಯಿಂದಲೇ ನಡೆದಿದ್ದಿರಬೇಕು. ಏಕೆಂದರೆ, ಇಲ್ಲಿ ಬಲಾತ್ಕಾರದ ಯಾವ ಕುರುಹುಗಳೂ ಕಾಣುತ್ತಿರಲಿಲ್ಲ. ಬಹುಶಃ ಇದು ಅವಳ ಸಾವಿಗಿಂತ 24ರಿಂದ 48 ಗಂಟೆಗಳ ಮುಂಚೆ ಸಂಭವಿಸಿರಬಹುದು.

Image
daniel tong photo
ಸಾಂದರ್ಭಿಕ ಚಿತ್ರ

ಅವಳ ದೇಹದ ಬಳಿ ದೊರೆತ ಇನ್ನೊಂದು ಪುರುಷ ಜೀನ್ಸ್‌ ಪ್ಯಾಂಟಿನ ಮೇಲೆ ಕೆಲವು ಬಿಳಿಯ ಕಲೆಗಳಿದ್ದವು. ಆದರೆ, ಅದು ಅವಳ ದೇಹದೊಳಗಿಂದ ಸಂಗ್ರಹಿಸಲಾಗಿದ್ದ ವೀರ್ಯವಾಗಿರಲಿಲ್ಲ. ಇದು ಬೇರೆ ಪುರುಷನದಾಗಿತ್ತು. ಬಹುಶಃ ಕೊಲೆಗಾರನದ್ದೂ ಇರಬಹುದು.

ತನಿಖೆದಾರರಿಗೆ ಸಿಕ್ಕ ಮಾಹಿತಿಯ ಪ್ರಕಾರ, ಅವಳು ಕ್ರೂಗರ್‌ ಎನ್ನುವ ದಿನಸಿ ಅಂಗಡಿಯಲ್ಲಿ ಕ್ಯಾಷಿಯರ್‌ ಕೆಲಸ ಮಾಡುತ್ತಿದ್ದಳು. 24ರಿಂದ 48 ಗಂಟೆಗಳ ಹಿಂದೆ ಅವಳು ಅಲ್ಲಿಂದ ಹೊರ ಹೋಗಿದ್ದಳು. ಅವಳಿಗೆ ಒಬ್ಬ ಪ್ರಿಯತಮನಿದ್ದ.

ಅಲ್ಲಿ ಸಿಕ್ಕ ದಾಖಲೆಯಂತೆ ಅವಳು ಮಧ್ಯಾಹ್ನ ಒಂದು ಗಂಟೆಗೆ ಕ್ರೂಗರ್‌ ಬಿಟ್ಟಿದ್ದಳು. ನೀಡಿದ ಕಾರಣದ ಪ್ರಕಾರ, ಅವಳಿಗೆ 'ಮಿಡ್ಲ್‌ ಟೆನ್ನೀಸಿ ಯುನಿವರ್ಸಿಟಿ'ಯಲ್ಲಿ ಒಂದು ಭೇಟಿ ನಿಗದಿಯಾಗಿತ್ತು. ಅಲ್ಲಿ ಅವಳು ತನಗೆ ಬಂದಿರುವ ಅಂಕ ಮತ್ತು ಪಾಸಾಗಿರುವ ದರ್ಜೆಯ ಬಗ್ಗೆ ತಿಳಿದುಕೊಂಡು, ನಂತರ ಕೆಲವು ಅಧಿಕಾರಿಗಳನ್ನು ಭೇಟಿ ಮಾಡುವುದಿತ್ತು. ಆದರೆ, ಅವಳು ಅಲ್ಲಿಗೆ ತಲುಪಲೇ ಇಲ್ಲ.
ಸಹೋದ್ಯೋಗಿಗಳಿಗೆ ನೀಡಿದ್ದ ಮಾಹಿತಿಯಂತೆ, ಅವಳು ಮೊದಲು ಯುನಿವರ್ಸಿಟಿಗೆ ಹೋಗಿ, ಕೆಲಸ ಮುಗಿದ ಮೇಲೆ ಅವಳ ಅಜ್ಜಿಯ ಮನೆಗೆ ಹೋಗುವುದು ಮತ್ತು ಅಲ್ಲಿ ಈಜಾಡುವುದಿತ್ತು.

ಎರಡು ದಿನಗಳ ನಂತರ ಅವಳ ಕಾರನ್ನು ತನಿಖಾಧಿಕಾರಿಗಳು ಅಂಗಡಿಯೊಂದರ ಬಳಿ ಕಂಡರು. ಅದು ಅವಳ ದೇಹ ಸಿಕ್ಕಿದ ಜಾಗದಿಂದ ಅನೇಕ ಮೈಲುಗಳ ದೂರದಲ್ಲಿತ್ತು. ಆ ಕಾರಿನಲ್ಲಿ ಯಾವುದೇ ಬೆರಳಚ್ಚುಗಳು ಸಿಗಲಿಲ್ಲ. ಆದರೆ, ಒಂದು 'ಅನ್ಯ' ಕೂದಲು ಸಿಕ್ಕಿತು. ಹಾಗೆಯೇ ಚಕ್ರಗಳಿಗೆ ಕೆಸರು ಮೆತ್ತಿಕೊಂಡಿತ್ತು. ಕೆಸರನ್ನು ಪರೀಕ್ಷೆಗೊಳಪಡಿಸಿದ ಎಫ್‌ಬಿಐ, ಬಹುಶಃ ಆ ಕೆಸರು ಅಪರಾಧ ನಡೆದ ಸ್ಥಳದ್ದೂ ಆಗಿರಬಹುದು ಎಂದು ಗುಮಾನಿ ವ್ಯಕ್ತಪಡಿಸಿತು. ಆದರೆ, ಅಂದಿನ ಸಮಯದಲ್ಲಿ ಹಾಗೊಂದು ಗುಮಾನಿ ಸಹಜವಾಗಿ ಹುಟ್ಟಬಹುದಿತ್ತೇ ವಿನಾ ಅದನ್ನು ವೈಜ್ಞಾನಿಕವಾಗಿ ರುಜುವಾತುಪಡಿಸುವ ಯಾವ ದಾರಿಗಳೂ ಲಭ್ಯವಿರಲಿಲ್ಲ.

Image
jr korpa photo 2
ಸಾಂದರ್ಭಿಕ ಚಿತ್ರ

ಡಾನ್‌ ಗುಡ್ವಿನ್‌ ಒಬ್ಬ ಪತ್ರಕರ್ತ. ಅವನು ಇಂತಹ ಪರಿಹಾರವಾಗದ ಹಲವು ಕೇಸುಗಳನ್ನು ಕುರಿತು ಬರೆಯುತ್ತಿದ್ದ. ಈ ಹುಡುಗಿಯದು ಇನ್ನೊಂದು ತಾಜಾ ಪ್ರಕರಣ. ಅಲ್ಲದೆ, ಗುಡ್ವಿನ್‌ ಆ ಹತ್ಯೆಯಾದ ಹುಡುಗಿಯ ಉತ್ತಮ ಗೆಳೆಯ ಸಹ. ಅವನಿಗೆ ಅವಳ ಅಮ್ಮನ ಜೊತೆ ವಿಶ್ವಾಸಪೂರ್ವಕ ಸಂಬಂಧವಿತ್ತು. ಇದಕ್ಕೆ ಕೆಲವು ದಿನಗಳ ಮುಂಚೆ ಅವನು ಲ್ಯೂರಾಳನ್ನು ಕೇಳಿದ್ದ, "ಬರುತ್ತೀಯಾ, ಸಿನಿಮಾ ನೋಡಲು ಹೋಗೋಣ...?" ಎಂದು. ಅದಕ್ಕೆ ಅವಳು ಒಪ್ಪಿದ್ದಳು. ಅವಳು, ಅವನು ಮತ್ತು ಅವರಿಬ್ಬರ ಸಾಮಾನ್ಯ ಸ್ನೇಹಿತ ರಾಬರ್ಟ್‌ ರೆಡ್‌ಫೋರ್ಟ್‌ ಜೊತೆಗೂಡಿ 1984ರ ಮೇ 27ರಂದು ಸಿನಿಮಾಕ್ಕೆ ಹೋಗಿದ್ದರು. ಆ ಸಿನಿಮಾದ ಹೆಸರು 'ದಿ ನ್ಯಾಚುರಲ್.'

ಅಂತ್ಯಸಂಸ್ಕಾರದ ಪ್ರಕ್ರಿಯೆಗಳ ನಂತರ ಸ್ವತಃ ಕಂಗಾಲಾಗಿದ್ದ ಗುಡ್ವಿನ್‌, ಅಸಹಾಯಕಳಾಗಿದ್ದ ಲ್ಯೂರಾಳ ತಾಯಿಯ ಎದುರು ನಿಂತು ಹೇಳಿದ, "ಲ್ಯೂರಾಳ ಕೊಲೆಗಾರನನ್ನು ಹುಡುಕಲು ನಾನು ಎಲ್ಲ ಸಹಾಯವನ್ನೂ ಮಾಡುತ್ತೇನೆ." ಅದಕ್ಕೆ ಪ್ರತಿಕ್ರಿಯೆಯಾಗಿ ಆ ವೃದ್ಧ ತಾಯಿ ಹೇಳಿದ್ದೆಂದರೆ, "ಮಗೂ, ದಯವಿಟ್ಟು ನನಗೆ ಸಹಾಯ ಮಾಡು, ನನ್ನ ಮಗುವನ್ನು ಕೊಂದ ರಕ್ಕಸನನ್ನು ನಾನು ನೋಡಲೇಬೇಕು."

ತನಿಖೆದಾರರ ಮುಂದೆ ಒಂದು ಪ್ರಬಲ ಸಾಕ್ಷ್ಯವೇನೋ ಇತ್ತು. ಅವರು ಅದರ ಮಾಲೀಕನನ್ನು ಪತ್ತೆ ಮಾಡಬೇಕಿತ್ತು. ಅದು ಅಷ್ಟು ಸುಲಭದ ಮಾತಂತೂ ಆಗಿರಲಿಲ್ಲ. ಆ ಪ್ಯಾಂಟಿನ ಅಳತೆ ಆ ದೇಶದ ಕನಿಷ್ಟ ಶೇಕಡ 20ರಷ್ಟು ಗಂಡಸರಿಗೆ ಸರಿಹೊಂದುತ್ತಿತ್ತು.

ಪೊಲೀಸರ ಕೆಲವು ಪ್ರಯತ್ನಗಳು ಫಲ ನೀಡಿದ್ದವು. ಕೊಲೆಯಾದ ಹಿಂದಿನ ರಾತ್ರಿ ಅವಳು ಒಂದು ನೈಟ್‌ಕ್ಲಬ್‌ನಲ್ಲಿ ನೃತ್ಯ ಮಾಡುತ್ತಿದ್ದಳು ಎಂಬ ಮಾಹಿತಿ ಸಿಕ್ಕಿತು. ಅದರ ಬೆನ್ನತ್ತಿದ ಪೊಲೀಸರು ಬರಿಗೈಲಿ ಹಿಂತಿರುಗಿದರು. ಅಲ್ಲಿ ಆಕೆ ಒಬ್ಬ ಹುಡುಗನ ಜೊತೆ ನೃತ್ಯ ಮಾಡುತ್ತಿದ್ದುದು ನಿಜ. ಆದರೆ, ಅವನು ಯಾರೆಂದು ಯಾರೂ ಗುರುತು ಹಿಡಿಯಲಿಲ್ಲ. ಪೊಲೀಸರಿಂದಲೂ ಅವನ ಪತ್ತೆ ಮಾಡಲಾಗಲಿಲ್ಲ. ನಿಜಕ್ಕೂ ಅವನು ಯಾರು? ವಿಡಿಯೋದಲ್ಲಿ ಮುಖವೇ ಕಾಣದ ವ್ಯಕ್ತಿಯೊಬ್ಬನನ್ನು ಕಂಡುಹಿಡಿಯುವುದಾದರೂ ಹೇಗೆ?

Image
jakayla toney photo
ಸಾಂದರ್ಭಿಕ ಚಿತ್ರ

ಆದರೆ, ಪೊಲೀಸರಿಗೆ ಇನ್ನೊಬ್ಬ ಯುವಕನ ಮೇಲೆ ಬಲವಾದ ಗುಮಾನಿ ಇತ್ತು. ಅವನು ಲ್ಯೂರಾಳ ಹೈಸ್ಕೂಲಿನ ಗೆಳೆಯ ಕಾಯಲ್‌ ಗಿಲ್ಲಿ. ಇವನ ಹಿನ್ನೆಲೆಯನ್ನು ಹುಡುಕಿದಾಗ ಸಿಕ್ಕ ಮಾಹಿತಿ ಎಲ್ಲವೂ ಹತ್ಯೆಯ ಪರಿಸರಕ್ಕೆ ಸೂಕ್ತವಾಗಿ ಹೊಂದುತ್ತಿದ್ದವು. ಅವನು ಮಹಾ ಅಸೂಯಾಪರನಾಗಿದ್ದ. ವಿಚಾರಣೆಯ ಹೊತ್ತಿನಲ್ಲಿ ಆಪಾದನೆಯನ್ನು ನಿರಾಕರಿಸುತ್ತ, ತನ್ನ 'ಪ್ರತ್ಯೇಕತೆ' ಪ್ರತಿಪಾದಿಸಿದ. ಅವನ ಹೇಳಿಕೆ ಪ್ರಕಾರ, ಆ ಕೊಲೆಯ ದಿನ ಅವನು ಅಲ್ಲಿಂದ ಬಹು ದೂರದಲ್ಲಿದ್ದ. ಇದಕ್ಕೆ ಅವನ ಮಲತಂದೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ. ಆಕಸ್ಮಿಕ ಕಂಡಿದ್ದ ಕಿರುಬೆಳಕೂ ರಪ್ಪನೆ ಆರಿಹೋಯಿತು.

ಇದಾದ ಕೆಲವು ದಿನಗಳ ನಂತರ ಇಲ್ಲಿಂದ 40 ಮೈಲು ದೂರದಲ್ಲಿದ್ದ ಟೆನ್ನೀಸಿಯ ನ್ಯಾಶ್‌ವಿಲ್ಲೆ ಎಂಬ ಊರಿಂದ ಯುವತಿಯೊಬ್ಬಳು ಕರೆ ಮಾಡಿದಳು. “ನಿಮ್ಮ‌ ಪೊಲೀಸ್ ವ್ಯಾಪ್ತಿಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಯಿತು. ಆ ಅತ್ಯಾಚಾರದ ಹೊತ್ತಲ್ಲಿ, 'ನೀನು ಈಗ ಸಹಕರಿಸಿ, ನಂತರ ಬಾಯಿ ಮುಚ್ಚಿಕೊಂಡು ಇರದಿದ್ದಲ್ಲಿ ನಿನಗೂ ಲ್ಯೂರಾಳಿಗಾದ ಗತಿಯನ್ನೇ ಕಾಣಿಸುತ್ತೇನೆ' ಎಂದು ಹೇಳಿದ. ಅವನ ಹೆಸರು ಜಾನ್‌ ಟೇಲರ್...” ಎಂದು ಮಾಹಿತಿ ನೀಡಿದಳು.

ಆದರೆ, ಟೇಲರ್‌ನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ, ಅವನು ಅತ್ಯಾಚಾರದ ಅಪಾದನೆಯನ್ನು ನಿರಾಕರಿಸಿದ್ದಲ್ಲದೆ, “ಅಂಥದ್ದೊಂದು ಅತ್ಯಾಚಾರವೇ ನಡೆಯದಿರುವಾಗ ಇನ್ನು ಲ್ಯೂರಾಳ ಮಾತು ಎಲ್ಲಿಂದ ಬರುತ್ತದೆ?” ಅಂದ. ಕರೆ ಮಾಡಿದ್ದ ಆ ಯುವತಿ ವೈದ್ಯಕೀಯ ಪರೀಕ್ಷೆಗೆ ಸಿಕ್ಕಲಿಲ್ಲ.

ಆಪಾದನೆ ಗಂಭೀರವಾಗಿತ್ತು. ಅಲ್ಲಿಗೇ ಬಿಡುವಂತಿರಲಿಲ್ಲ. ಅವನ ಹಿನ್ನೆಲೆಯ ತನಿಖೆ ಆಯಿತು. ಅವನು ಲ್ಯೂರಾ ಓದುತ್ತಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ. ಅವಳು ಯಾವ ಹೆಲ್ತ್‌ ಕ್ಲಬ್‌ನ ಸದಸ್ಯಳಾಗಿದ್ದಳೋ ಇವನೂ ಅಲ್ಲಿಯೇ ಸದಸ್ಯನಾಗಿದ್ದ. ಲ್ಯೂರಾ ಪಾಲ್ಗೊಂಡಿದ್ದ ಭ್ರಾತೃತ್ವ ಕೂಟದಲ್ಲಿ ಇವನೂ ಭಾಗವಹಿಸಿದ್ದ. ಮುಖ್ಯವಾಗಿ, ಲ್ಯೂರಾಳ ಕೊಲೆಯಾದ ದಿನ ಇವನು ಯುನಿವರ್ಸಿಟಿ ಹತ್ತಿರದಲ್ಲೇ ಇದ್ದ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಗೆಳತಿಯರು ಮತ್ತು ಸಂಬಂಧ ಹೊಂದಿದ್ದ ಹೆಂಗಸರ ಜೊತೆ ತುಂಬಾ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದ. ಸಂದೇಹ ಹುಟ್ಟಲು ಇದಕ್ಕಿಂತ ಹೆಚ್ಚಿನ ಕಲ್ಯಾಣಗುಣಗಳು ಇನ್ನೇನು ಬೇಕು?

Image
sincerely media photo
ಸಾಂದರ್ಭಿಕ ಚಿತ್ರ

ಮುಂದುವರಿದ ತನಿಖೆಯಲ್ಲಿ, ಲ್ಯೂರಾಳ ಕಾರಿನಲ್ಲಿ ದೊರೆತಿದ್ದ ಕೂದಲನ್ನು ಟೇಲರ್‌ನ ಕೂದಲಿನ ಮಾದರಿಯೊಂದಿಗೆ ಎಫ್‌ಬಿಐ ಲ್ಯಾಬೋರೇಟರಿಗೆ ಕಳುಹಿಸಲಾಯಿತು. ಪರೀಕ್ಷೆಯ ಫಲಿತಾಂಶ ಅಡ್ದಗೋಡೆಯ ಮೇಲೆ ದೀಪ ಇಟ್ಟಂತಿತ್ತು; ಎರಡೂ ಕೂದಲುಗಳ ನಡುವೆ ಸಾಮ್ಯತೆ ಇದೆ, ಆದರೆ ಖಚಿತವಾಗಿ ಅವನದೇ ಎಂದು ಹೇಳಲಾಗದು.

ಇಂದು ಆ ಕೂದಲುಗಳನ್ನು ಮೈಟೋಕಾಂಡ್ರಿಯಲ್‌ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದಲ್ಲಿ ಫಲಿತಾಂಶ ಖಚಿತವಾಗಿರುತ್ತಿತ್ತು. ಅಂದಿಗೆ ಈ ಪರೀಕ್ಷಾ ವಿಧಾನದ ಕಲ್ಪನೆಯೇ ಇರಲಿಲ್ಲ. ಅಲ್ಲಿಗೆ ಒಂದು ದಾರಿ ಮುಚ್ಚಿದಂತಾಯಿತು. ಇನ್ನು ಉಳಿದಿರುವುದು, ಶವದ ಬಳಿ ಸಿಕ್ಕಿದ ಜೀನ್ಸ್‌ ಪ್ಯಾಂಟು. ಈ ಪ್ಯಾಂಟಿನ ಸೊಂಟದ ಸುತ್ತಳತೆ 30, ಕಾಲುಗಳ ಉದ್ದ 36. ಇದು ಟೇಲರನ ಪ್ಯಾಂಟ್‌ ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಇದನ್ನು ತೊಟ್ಟರೆ ಅವನು ಬೆದರುಬೊಂಬೆಯಂತೆ ಕಾಣುತ್ತಾನೆ.

ಅಂತಿಮವಾಗಿ ಮತ್ತೆ ನಿರಾಶೆ. ಕೂದಲಿನ ಅರೆಬರೆ ಫಲಿತಾಂಶವನ್ನು ಒಪ್ಪಲಾಗದು. ಕೊಲೆಯಂಥ ಆಪಾದನೆ ಹೊರಿಸಿ ಬಂಧಿಸಲು ಇನ್ನೊಂದೇನಾದರೂ ಕೂಡುಸಾಕ್ಷಿ ಬೇಕು. ಇಲ್ಲಿ ಸಿಕ್ಕಿದ್ದ ಕಲ್ಲಿನ ಮೇಲೆ ಬೆರಳಚ್ಚುಗಳಿಲ್ಲ. ಗುಂಡು-ಬಂದೂಕಗಳ ಬಳಕೆಯೂ ಇಲ್ಲ. ತಕ್ಷಣಕ್ಕೆ ಪೊಲೀಸರು ನಿರಾಶರಾದರು ಹೌದು, ಆದರೆ ಹತಾಶರಾಗಲಿಲ್ಲ.

ಇವನನ್ನು ಹೊರತುಪಡಿಸಿಯೂ ಪೊಲೀಸರಿಗೆ ಇನ್ನೂ ಅನೇಕರ ಮೇಲೆ ಗುಮಾನಿಗಳಿದ್ದವು. ಒಬ್ಬರಾದ ಮೇಲೆ ಒಬ್ಬರಂತೆ ಎಲ್ಲರನ್ನೂ ಪರೀಕ್ಷಿಸಿದರು. ಉಹೂಂ…! ಅಲ್ಲ, ಅವರ್ಯಾರೂ ಅಲ್ಲ. ಮತ್ತೆ? ಇದು ಹೀಗೆಯೇ ಉಳಿದುಹೋಗುವ ಕೊಲೆಯಷ್ಟೇ. ಸಾಕ್ಷ್ಯಾಧಾರಗಳಿಲ್ಲದೆ ಮುಚ್ಚಿಹೋಗಲಿರುವ ಹತ್ಯಾ ಪ್ರಕರಣ... ಪಾಪದ ಹುಡುಗಿ. ಪೊಲೀಸರು ನಿಜಕ್ಕೂ ಚಿಂತಿತರಾದರು. ಹೀಗೇ ಚಿಂತಿಸುತ್ತ-ಚಿಂತಿಸುತ್ತ 16 ವರ್ಷ ಕಳೆದುಹೋದವು. ಲ್ಯೂರಾ ಮರೆತುಹೋದಳು.

Image
toa heftiba photo
ಸಾಂದರ್ಭಿಕ ಚಿತ್ರ

ಆದರೆ, ಲ್ಯೂರಾಳ ತಾಯಿಗೆ ಭಾಷೆ ಕೊಟ್ಟಿದ್ದ ಪತ್ರಕರ್ತ ಡಾನ್‌ ಗುಡ್ವಿನ್‌ ಇದ್ದ. ಈಗ ಆತ ಸಾರ್ಜೆಂಟ್‌ ಡಾನ್‌ ಗುಡ್ವಿನ್‌, ಪೊಲೀಸ್‌ ಇಲಾಖೆಯ ಪತ್ತೇದಾರಿ ವಿಭಾಗದಲ್ಲಿ ಕೆಲಸ. ಅನೇಕ ವರ್ಷಗಳ ನಂತರ ಇದೀಗ ತಾನೇ ಕೋಲ್ಡ್‌ ಕೇಸುಗಳ ವಿಭಾಗಕ್ಕೆ ಬಂದಿದ್ದಾನೆ. ಅವನ ಮೊದಲ ಆದ್ಯತೆ ಏನಾಗಿರಬಹುದು ಯೋಚಿಸಿ?

ಮರೆತುಹೋಗಿದ್ದ ಲ್ಯೂರಾ ಮತ್ತೆ ಜೀವತಳೆಯಲಾಗದಿದ್ದರೂ ಅವಳನ್ನು ಕೊನೆಗಾಣಿಸಿದ್ದ ಕೇಸಿಗೆ ಮತ್ತೆ ಜೀವ ಬಂದಿತು. ಗುಡ್ವಿನ್‌ ಮತ್ತು ಅವನ ಹಿರಿಯ ಅಧಿಕಾರಿ ಬಿಲ್‌ ಶಾರ್ಪ್‌ ಮಾಡಿದ ಮೊದಲ ಕೆಲಸವೆಂದರೆ, ಈವರೆಗೂ ರಕ್ಷಿಸಿಡಲಾಗಿದ್ದ ಸಾಕ್ಷಿಗಳನ್ನು ಮತ್ತೆ ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದು. ಈ ಒಂದೂವರೆ ದಶಕಗಳ ನಡುವೆ ವಿಜ್ಞಾನ ರಂಗದಲ್ಲಿ ಏನೆಲ್ಲ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಎಂಬುದು ಆ ಇಬ್ಬರಿಗೂ ಗೊತ್ತಿತ್ತು. ಈ ಬಾರಿ ಏನಾದರೊಂದು ಖಚಿತ ಫಲಿತಾಂಶದ ನಿರೀಕ್ಷೆ ಇತ್ತು.

ಪ್ರಯೋಗಾಲಯದ ಫಲಿತಾಂಶಗಳ ವರದಿಗಾಗಿ ಕಾಯುತ್ತಿದ್ದ ಗುಡ್ವಿನ್‌ ತಂಡಕ್ಕೆ ಆಕಸ್ಮಿಕವಾಗಿ ಒಂದು ಗಾಳಿ ಸುದ್ದಿ ತಲುಪಿತು. ಲ್ಯೂರಾಳ ಹತ್ಯೆಯಾದ 16 ವರ್ಷಗಳ ನಂತರ 2000ನೇ ಇಸವಿಯಲ್ಲಿ, ಓಕ್ಲಾಂಡಿನ ಹೈಸ್ಕೂಲ್‌ ವಿದ್ಯಾರ್ಥಿಗಳ ನಡುವೆ ಲ್ಯೂರಾಳ ಕೊಲೆಯ ಸಂಗತಿ ಚರ್ಚೆಗೆ ಬಂದಾಗ, ಅಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಮಾತುಮಾತಿನ ನಡುವೆ, "ನನ್ನ ತಂದೆ ಅವಳನ್ನು ಕೊಂದು ಕ್ವಾರಿಯೊಂದರಲ್ಲಿ ಬಿಸಾಕಿದ್ದನಂತೆ," ಎಂದು ಹೇಳಿದ್ದಳು. ಅವಳ ತಂದೆಯ ಹೆಸರು ಡೇವಿಡ್‌ ಪ್ಯಾಟರ್‌ಸನ್.‌ ಇವನ ಬಗ್ಗೆ ಪೊಲೀಸರಲ್ಲಿ ಮಾಹಿತಿ ಇದ್ದು, ಅತಿರೇಕದ ನಡವಳಿಕೆಗಳಿಗಾಗಿ ಇವನ ವಿರುದ್ಧ ದೂರುಗಳಿದ್ದವು. ಆದರೆ, ಆ ಅವಧಿಯಲ್ಲಿ ಅವನು ಸ್ವತಃ ಗುಂಡು ಹಾರಿಸಿಕೊಂಡು ಸತ್ತುಹೋದನೆಂಬ ಸುದ್ದಿಯೊಂದು ಚಾಲ್ತಿಯಲ್ಲಿತ್ತು.

ಮಗಳ ಹೇಳಿಕೆಯ ಮೂಲಕ ಮತ್ತೆ ಚಾಲ್ತಿಗೆ ಬಂದ ಅವನ ಹೆಸರನ್ನು ಈಗ ಹಾಗೆ ನಿರ್ಲಕ್ಷಿಸುವಂತಿರಲಿಲ್ಲ. ಹಾಗಾಗಿ, ತನಿಖಾಧಿಕಾರಿಗಳು ಸ್ವಯಂ ನಿರ್ಧಾರದ ಮೂಲಕ ಅವಳ ಡಿಎನ್‌ಎ ಪರೀಕ್ಷೆಗೆ ರಕ್ತದ ಮಾದರಿಯನ್ನು ನೀಡುವಂತೆ ಕೋರಿದರು. ಸಂಗ್ರಹಿಸಲಾದ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಯಿತು. ಬಂದ ಫಲಿತಾಂಶ ಈ ವಂಶದ ಯಾವ ಗಂಡಸೂ ಆ ಕೊಲೆಯಾದ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿತ್ತು.

Image
jr korpa photo 3
ಸಾಂದರ್ಭಿಕ ಚಿತ್ರ

ವಿಜ್ಞಾನ-ತಂತ್ರಜ್ಞಾನಗಳಲ್ಲಿ ಆಗಿದ್ದ ಮಹತ್ತರ ಬದಲಾವಣೆಗಳನ್ನು ಸದುಪಯೋಗಪಡಿಕೊಂಡ ತನಿಖಾ ದಳ, ಈ ಹಿಂದೆ ಪ್ರಮುಖ ಆರೋಪಿ ಎಂದು ಅಂದಾಜಿಸಲಾಗಿದ್ದ ಜಾನ್‌ ಟೇಲರ್‌ನ ಡಿಎನ್‌ಎ ಪರೀಕ್ಷೆ ಮಾಡಿತು. ಇಲ್ಲ… ಅವನದೂ ಹೊಂದಾಣಿಕೆ ಆಗಲಿಲ್ಲ.

ಆದರೆ, ಇಲ್ಲಿ ಎಲ್ಲರಿಗೂ ಇನ್ನೊಂದು ವಿಚಿತ್ರ ಸಂದೇಹ ಕಾಡುತ್ತಿತ್ತು. ಸ್ವತಃ ಈ ಮೊಕದ್ದಮೆಯ ತನಿಖೆದಾರನಾದ ಗುಡ್ವಿನ್‌, ಕೊಲೆಯಾದ ಹುಡುಗಿಯ ಹತ್ತಿರದ ಸ್ನೇಹಿತ ಮತ್ತು ಕೊಲೆಗೆ ನಾಲ್ಕು ದಿನ ಮುಂಚೆ ಅವರು ಹೊರಗೆ ಹೋಗಿದ್ದರು, ಸಿನಿಮಾ ನೋಡಿದ್ದರು, ಜೊತೆಗಿದ್ದರು. ಹೀಗಿದ್ದಾಗ, ಅವನೇ ಏಕಾಗಿರಬಾರದು? ಹೌದಲ್ಲ...?

ಆ ಕೂಡಲೇ ಗುಡ್ವಿನ್ ತನ್ನ ಹೇಳಿಕೆ ನೀಡಿ, "ನನ್ನ ಅವಳ ನಡುವೆ ಅಂತಹ ಯಾವ ಸಂಬಂಧಗಳೂ ಇರಲಿಲ್ಲ. ಅದು ಕೇವಲ ಔಪಚಾರಿಕ ಸಂಬಂಧ,” ಎಂದು ತನ್ನ ರಕ್ತವನ್ನು ಪರೀಕ್ಷೆಗೆ ನೀಡಿದ. ಬಂದ ಪರೀಕ್ಷಾ ಫಲಿತಾಂಶ 'ಅವನಲ್ಲ' ಎಂದು ಹೇಳಿತು. ಹಾಗಾದರೆ ಮತ್ಯಾರು?

ತಲೆ ಚಿಟ್ಟುಹಿಡಿದಂತಾದ ಗುಡ್ವಿನ್‌ ಮತ್ತು ಶಾರ್ಪ್‌, ಇನ್ನೊಮ್ಮೆ ಕೇಸಿನ ಒರಿಜಿನಲ್‌ ಫೈಲಿನ ಅಧ್ಯಯನಕ್ಕಿಳಿದರು. ಮತ್ತೆ-ಮತ್ತೆ ಅದನ್ನು ಗಮನಿಸುತ್ತಿದ್ದ ಅವರಿಗೆ, ಅಲ್ಲಿ ಅನೇಕ ಸಂಗತಿಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಗುಮಾನಿ ಹುಟ್ಟಿತು. ಮುಖ್ಯವಾಗಿ, ಈ ಹಿಂದೆ ಸಂದೇಹಿತನೆಂದು ವಿಚಾರಣೆಗೆ ಒಳಪಡಿಸಲಾಗಿದ್ದ ಕಾಯಲ್‌ ಗಿಲ್ಲಿ.

Image
johann walter photo
ಸಾಂದರ್ಭಿಕ ಚಿತ್ರ

ಕಾಯಲ್ ಬಗ್ಗೆ ಈಗಾಗಲೇ ಕೆಲವು ಸಂಗತಿಗಳನ್ನು ಹೇಳಲಾಗಿದೆ; ಆದರೆ, ಕಂಡುಕೊಳ್ಳಬೇಕಾದ ಇನ್ನೂ ಅನೇಕ ಸಂಗತಿಗಳಿವೆ ಎಂದು ತನಿಖೆದಾರರಿಗೆ ಮನವರಿಕೆ ಆಯಿತು. ಇವನು ಲ್ಯೂರಾಳ ಹೈಸ್ಕೂಲಿನ ಗೆಳೆಯ. ಅವಳಿಗಿಂತ ಒಂದು ವರ್ಷ ಚಿಕ್ಕವನು. ಗೆಳತಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ. ಅನೇಕ ಬಾರಿ ಲ್ಯೂರಾಳ ಮೇಲೆಯೂ ದೈಹಿಕ ಆಕ್ರಮಣ ಮಾಡಿದ್ದ. ಶಾಲೆಯಲ್ಲಿದ್ದ ಆ ಅವಧಿಯಲ್ಲಿ ಅನೇಕ ಬಾರಿ ಅವಳ ಜುಟ್ಟು ಹಿಡಿದು ಕಾರು, ಬೀರು ಟೇಬಲ್‌ಗಳಿಗೆ ಘಟ್ಟಿಸಿದ್ದ ಮಾಹಿತಿ ಸಿಕ್ಕಿತು. ಈ ಎಲ್ಲಕ್ಕಿಂತ ಮುಖ್ಯವಾಗಿ ಈ ಸಂದೇಹ ಬಲವಾಗಲು ಕಾರಣವಾಗಿದ್ದು - "ನಾನು ಘಟನೆ ನಡೆದ ಸ್ಥಳದಿಂದ ದೂರದಲ್ಲಿದ್ದೆ. ಅದಕ್ಕೆ ನನ್ನ ಮಲತಂದೆಯೇ ಸಾಕ್ಷಿ," ಎಂದು ಆತ ಹೇಳಿದ್ದ ಹೇಳಿಕೆಗೂ ಮತ್ತು ಅದೇ 'ದೂರದ' ಕುರಿತಾಗಿ ಒಬ್ಬ ಹೆಂಗಸು ನೀಡಿದ್ದ ಹೇಳಿಕೆಗೂ ಇದ್ದ ಸಂಬಂಧ!

ಆ ಹೆಂಗಸು, "ಅವನು ಲ್ಯೂರಾಳ ಕಾರನ್ನು ಓಡಿಸಿಕೊಂಡು ಹೋಗಿದ್ದನ್ನು ಕಂಡಿದ್ದೇನೆ. ಆ ಕಾರು ಕ್ವಾರಿಯತ್ತ ಹೋಯಿತು. ಕಾರನ್ನು ಓಡಿಸುತ್ತಿದ್ದ ಅವನು ನನ್ನನ್ನು ನೋಡಿದ ರೀತಿ ವಿಚಿತ್ರವಾಗಿತ್ತು. ಈಗಲೂ ಅವನನ್ನು, ಆ ಕಾರನ್ನು ನಾನು ಗುರುತಿಸಬಲ್ಲೆ,” ಎಂದೂ ಹೇಳಿಕೊಂಡಿದ್ದಳು. ಈಗ ಮತ್ತೆ ಅವಳನ್ನು ಸಂಪರ್ಕಿಸಿ, ಸಂದೇಹಿತರ ಮತ್ತು ಕಾರುಗಳ ಅನೇಕ ಫೋಟೊಗಳನ್ನು ಪ್ರದರ್ಶಿಸಲಾಯಿತು. ಅವಳು ಎಲ್ಲದರ ನಡುವೆ ಖಚಿತವಾಗಿ ಕಾಯಲ್‌ ಗಿಲ್ಲಿ ಮತ್ತು ಲ್ಯೂರಾಳ ಕಾರನ್ನು ಗುರುತಿಸಿದಳು.

ನಂತರದ ತನಿಖೆಯಲ್ಲಿ, ಅವನು ಲ್ಯೂರಾಳೊಂದಿಗೆ ಅತ್ಯಂತ ಹಿಂಸಾತ್ಮಕವಾಗಿ ವರ್ತಿಸಿದ್ದಲ್ಲದೆ, ಒಮ್ಮೆ ಅವಳ ಮುಂದಿನ ಎರಡು ಹಲ್ಲುಗಳು ಉದುರಿಹೋಗುವಂತೆ ಗುದ್ದಿದ್ದ ಎಂಬುದೂ ತಿಳಿಯಿತು. ಇದೆಲ್ಲ ಸರಿ... ಆದರೆ ಅಂದು ಅವನು ಆ ಜಾಗದಲ್ಲಿದ್ದ ಮತ್ತು ಅವನೇ ಅವಳನ್ನು ಕೊಂದಿದ್ದಾನೆ ಎಂದು ರುಜುವಾತು ಮಾಡುವುದು ಹೇಗೆ? ಅವನು ಕೊಲೆಯಾದ ಜಾಗದಲ್ಲಿದ್ದ ಎಂಬುದಕ್ಕೆ ಸಾಕ್ಷಿ ಬೇಕಲ್ಲ? ಅದೊಂದು ದೊರೆಯುವುದಾದರೆ ಆ ಹೆಂಗಸಿನ ಹೇಳಿಕೆ ಅದಕ್ಕೆ ಪೂರಕವಾದ ಗಟ್ಟಿ ಸಾಕ್ಷಿಯಾಗುತ್ತದೆ. ಇಲ್ಲವಾದರೆ ಇಲ್ಲ.

ಕಾಲದೊಂದಿಗೆ ವಿಜ್ಞಾನವೂ ಜೊತೆ ನೀಡುವುದಾದರೆ, ಅನೇಕ ಸಂಕೀರ್ಣ ಚಿತ್ರಗಳನ್ನು ತೊಳೆದು ನಿಜರೂಪ ಕಾಣುವಂತೆ ಮಾಡಬಹುದು. ಈಗಲೂ ಅಂಥದ್ದೊಂದು ಸಾಧ್ಯತೆ ತನಿಖೆದಾರರ ಮುಂದಿತ್ತು. ಇಡೀ ಪ್ರಕರಣದಲ್ಲಿ ಮತ್ತೆ-ಮತ್ತೆ ಭೂತದಂತೆ ಪ್ರಕಟವಾಗಿ ಎಲ್ಲರ ತಲೆ ತಿನ್ನುತ್ತಿದ್ದ ಜೀನ್ಸ್‌ ಪ್ಯಾಂಟು ಈಗ ನಾಯಕತ್ವ ವಹಿಸುವ ಮಟ್ಟಕ್ಕೇರಿತ್ತು. ವಿಜ್ಞಾನ ಅದರ 'ಭೂತ'ವನ್ನು ಬಿಡಿಸುವ ಸಾಮರ್ಥ್ಯ ಗಳಿಸಿಕೊಂಡಿತ್ತು.

Image
ali fekri pmy photo
ಸಾಂದರ್ಭಿಕ ಚಿತ್ರ

ಅದನ್ನು ಮತ್ತೆ ಪರಿಶೀಲಿಸಲಾಗಿ, ಅದು ಆರು ಅಡಿ ಎರಡು ಇಂಚಿನದಾಗಿತ್ತು. ವಿಚಿತ್ರವೆಂದರೆ, ಅದು ಕಾಯಲ್ ಅಳತೆಗೆ ಸರಿಯಾಗಿತ್ತು. ಅವನ ಅಳತೆಯದೇನೋ ಸರಿ. ಅವನದೇ ಎಂದು ಹೇಗೆ ಹೇಳುವುದು? ಅಂದಿಗೆ ಅದಕ್ಕೂ ಪರಿಹಾರವಿತ್ತು. ಟ್ರೊಮ್ಯಾಟಿಕ್‌ ಬ್ರೈನ್‌ ಇಂಜುರಿ ಪ್ರಯೋಗಾಲಯದ ಸೇವೆ ಲಭ್ಯವಿತ್ತು. ಪ್ಯಾಂಟನ್ನು ಅಲ್ಲಿಗೆ ಕಳುಹಿಸಲಾಯಿತು. ಅಲ್ಲಿನ ಅಪರಾಧಗಳ ಮರುಸೃಷ್ಟಿ ತಜ್ಞ ಜೆರ‍್ರಿ ಫಿಂಡ್ಲೆ ಅದನ್ನು ಸೂಕ್ಷ್ಮದರ್ಶಕದ ಪರೀಕ್ಷೆಗೆ ಒಳಪಡಿಸಿದ. ಅವನ ನುರಿತ ಕಣ್ಣುಗಳಿಗೆ 16 ವರ್ಷಗಳ ಹಿಂದೆ ಪ್ಯಾಂಟಿನ ಮೇಲೆ ಸಿಡಿದಿದ್ದ ರಕ್ತದ ಕಲೆಗಳು ಕಂಡವು. ಒಂದು ಇಂಚಿನ 1/32 ಭಾಗ ಗಾತ್ರವಿದ್ದ ಅವುಗಳು ಹೇಗೆ ಸಿಡಿದಿರಬಹುದು ಎಂಬುದನ್ನೂ ವಿವರಿಸಿದ.

ಜೆರ‍್ರಿ ಪ್ರಕಾರ, ಅಷ್ಟು ಸಣ್ಣ ಗಾತ್ರದ ಹನಿಗಳು ಸಿಡಿಯಬೇಕಾದರೆ ಅದು ಯಾವುದೋ ಮೊಂಡು ವಸ್ತುವಿನಿಂದ ಬಿದ್ದ ಹೊಡೆತದ ಕಾರಣದಿಂದ ಮಾತ್ರ ಸಾಧ್ಯ. ಉದಾಹರಣೆಗೆ, ಬೇಸ್‌ ಬಾಲ್‌ ಬ್ಯಾಟು, ಒರಟಾದ ಕಲ್ಲು ಅಥವಾ ಅಂಥದ್ದೇ ಯಾವುದಾದರೂ ವಸ್ತು. ಅಲ್ಲದೆ, ಈ ರಕ್ತದ ಕಲೆಗಳು ಮಂಡಿಯ ಮೇಲೆ ಮಾತ್ರ ಸಿಡಿದಿವೆ. ಅಂದರೆ, ಈ ಪ್ಯಾಂಟು ಧರಿಸಿದ್ದವನು ರಕ್ತ ಸಿಡಿಯುವಾಗ ಮಂಡಿಯೂರಿದ ಭಂಗಿಯಲ್ಲಿ ಕುಳಿತಿದ್ದ ಎಂದು ಅರ್ಥ.

ಸರಿ, ಆದರೆ ಆ ರಕ್ತ ಯಾರದ್ದು? ಅದೇ ಈಗ ಬಗೆಹರಿಯಬೇಕಾದ ಪ್ರಶ್ನೆ. ಅದರಿಂದ ಸಂಗ್ರಹಿಸಿದ ಮಾದರಿಗಳು ಡಿಎನ್‌ಎ ಪ್ರಯೋಗಾಲಯವನ್ನು ತಲುಪಿದವು. ಫಲಿತಾಂಶವೂ ಅಷ್ಟೇ ವೇಗವಾಗಿ ಹೊರಬಂತು. ರಕ್ತ ಲ್ಯೂರಾಳದ್ದೇ. ಹಾಗಾದರೆ ಕೊಂದವರು ಯಾರು?

ಸದ್ಯಕ್ಕೆ ಪೊಲೀಸರ ಮುಂದಿದ್ದ ಏಕೈಕ ಶಂಕಿತ ಒಬ್ಬನೇ - ಕಾಯಲ್‌ ಗಿಲ್ಲಿ. ಹುಡುಕಾಟ ಆರಂಭವಾಯಿತು. ಅಂತಿಮವಾಗಿ, ಫ್ಲೋರಿಡಾದ ಡೌನ್‌ಟೌನಿನಲ್ಲಿ ಸಿಕ್ಕಿದ. ಮನಾಟಿ ಕೌಂಟಿಯ ಲೋಕೋಪಯೋಗಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇಲ್ಲಿಗಾಗಲೇ ಎರಡು ವಿಚ್ಛೇದನಗಳನ್ನು ಮಾಡಿಕೊಂಡಿದ್ದ. ಅತಿರೇಕದ ನಡೆ-ನುಡಿ, ಲೈಂಗಿಕ ಅಪರಾಧಗಳು, ಕಳ್ಳತನಕ್ಕೆ ಪ್ರಯತ್ನ ಹಾಗೂ ಬಂಧನಕ್ಕೆ ವಿರೋಧ ಇತ್ಯಾದಿ ಪ್ರಕರಣಗಳಲ್ಲಿ ಅನೇಕ ಬಾರಿ ಪೊಲೀಸರ ಆತಿಥ್ಯಕ್ಕೆ ಒಳಗಾಗಿದ್ದ.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಗುಂಡು ಹಾರಿದ್ದು ಆಕಸ್ಮಿಕವೇ ಅಥವಾ ಅವಳಿಗಾಗಿಯೇ?

ವಿಚಾರಣೆ ಅರಂಭವಾಯಿತು. ಲ್ಯೂರಾಳ ಹತ್ಯೆಯ ಆಪಾದನೆಯನ್ನು ನಿರಾಕರಿಸಿದ. ಸುತ್ತುಬಳಸು ತಂತ್ರದಲ್ಲಿ ಮಾತನಾಡುತ್ತಿದ್ದ ಪೊಲೀಸರ ಮಾತಿನ ನಡುವೆ ಎಲ್ಲೋ ಯಾಮಾರಿದ ಅವನು, "ಜೀನ್ಸ್‌ ಪ್ಯಾಂಟು ನನ್ನದೇ ಇರಬಹುದು," ಎಂದು ಹೇಳಿದ. ನಂತರದಲ್ಲಿ ಪೊಲೀಸರು ಅವರ ನಿಜವಾದ ವರಸೆಯನ್ನು ಪ್ರಯೋಗಿಸಿ, ಅದರ ಮೇಲಿದ್ದ ರಕ್ತದ ಕಲೆಗಳು ಯಾರವು ಎಂದಾಗ ತಬ್ಬಿಬ್ಬಾದ. ತಜ್ಞರ ವರದಿಗಳನ್ನು ಮುಂದಿಟ್ಟು, "ರಕ್ತ ಲ್ಯೂರಾಳದು, ಪ್ಯಾಂಟು ನಿನ್ನದು. ಈಗೇನು ಹೇಳುತ್ತೀಯ?" ಎಂದಾಗ, "ನನಗೆ ವಕೀಲರ ನೆರವು ಬೇಕು," ಎಂದು ಕೋರಿದ. ಅಲ್ಲಿಗೆ ವಿಚಾರಣೆಯನ್ನು ನಿಲ್ಲಿಸಬೇಕಾಯಿತು.

ಇಷ್ಟೆಲ್ಲ ವಿವರಗಳನ್ನು ಮಂಡಿಸಿದ ಮೇಲೆ ನ್ಯಾಯಾಲಯ ಅವನ ಎಂಜಲಿನ ಮಾದರಿಯನ್ನು ಪಡೆದು, ಪರೀಕ್ಷೆಗೆ ಕಳುಹಿಸಲು ಸಮ್ಮತಿಸಿತು. ಜೊತೆಗೆ, ಆ ಪ್ಯಾಂಟಿನ ಮೇಲೆ ಅಂಟಿದ್ದ ಮತ್ತು ಲ್ಯೂರಾ ದೇಹದ ಮೇಲೆ ಚೆಲ್ಲಿದಂತಿದ್ದ ವೀರ್ಯದ ಮಾದರಿಗಳನ್ನು ಸಂಗ್ರಹಿಸಲಾಗಿತ್ತಲ್ಲ, ಆ ಮಾದರಿಗಳನ್ನೂ ಕಾಯಲ್‌ ಗಿಲ್ಲಿಯ ಎಂಜಲಿನ ಡಿಎನ್‌ಎ ಮಾದರಿಯೊಂದಿಗೆ ಹೋಲಿಸಿ ಪರೀಕ್ಷಿಸಲಾಯಿತು. ಹೌದು, ಈ ಎರಡೂ ಹೊಂದುತ್ತಿವೆ! ವಿಜ್ಞಾನಿಗಳಿಗೂ ಅಚ್ಚರಿ ಮತ್ತು ಅನುಮಾನ. ಮತ್ತೆ-ಮತ್ತೆ ವಿಶ್ಲೇಷಿಸಿ ಖಚಿತಪಡಿಸಿಕೊಳ್ಳಲಾಯಿತು. ಹೌದು, ಆ ವೀರ್ಯ ಇದೇ ಕಾಯಲ್‌ ಗಿಲ್ಲಿಯದು! 16 ವರ್ಷಗಳ ಚದುರಂಗದಾಟದಲ್ಲಿ ವಿಜ್ಞಾನದ ಈ ಕೊನೆಯ ನಡೆ ಕಾನೂನಿಗೇ ನ್ಯಾಯ ಒದಗಿಸಿ ಘನತೆಯಿಂದ ಬೀಗಿತ್ತು. ಆದರೆ, ನ್ಯಾಯಾಲಯದಲ್ಲಿ ವಿಚಾರಣೆ ಇನ್ನೂ ಬಾಕಿ ಇತ್ತು.

ಈ ನಡುವೆ, ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಸ್ಪಷ್ಟತೆ ಬೇಕಿತ್ತು. ಅವನು ಅವಳನ್ನು ಕೊಂದಿದ್ದು ಏಕೆ ಮತ್ತು ಹೇಗೆ? ಅವನ ಬಂಧನದ ನಂತರ ಒಬ್ಬೊಬ್ಬರಾಗಿ ಹೊರಬಂದ, ಲ್ಯೂರಾಳನ್ನು ಬಲ್ಲ ಜನರು ನೀಡಿದ ಮಾಹಿತಿಗಳನ್ನು ಜೋಡಿಸಿ ಒಂದು ಎಳೆಯನ್ನು ಹೊಸೆಯುವುದಾದರೆ…

ಕಾಯಲ್‌ ಗಿಲ್ಲಿ ಎಂಬ ಹೈಸ್ಕೂಲಿನ ವಿದ್ಯಾರ್ಥಿ ಮೂಲತಃ ಒಬ್ಬ ಮನೋರೋಗಿ. ಅದರ ಅರಿವಿಲ್ಲದ ಲ್ಯೂರಾ, ಅವನನ್ನು ಪ್ರೀತಿಸಿದ್ದಾಳೆ. ಅರಿವಿಲ್ಲ ಎಂದರೆ ಇಲ್ಲಿ ಸರಿಹೊಂದದೆ ಹೋಗಬಹುದು. ಏಕೆಂದರೆ, ಅವಳೊಂದಿಗೆ ಅವನು ನಿತ್ಯ ವರ್ತಿಸುತ್ತಿದ್ದ ರೀತಿಯಲ್ಲಿ ಅದು ಅವಳ ಅರಿವಿಗೆ ಬಂದಿತ್ತು. ಅದನ್ನು ಅವಳ ತಾಯಿಯೂ ಸೇರಿದಂತೆ ಅನೇಕ ಗೆಳೆಯ/ಗೆಳತಿಯರೊಂದಿಗೆ ಹಂಚಿಕೊಂಡಿದ್ದಳು ಕೂಡ. ಅನೇಕರು ಅವನ ಸಂಬಂಧ ತೊರೆಯುವಂತೆ ಇವಳಿಗೆ ಹೇಳಿದ್ದರು. ಕಾಲಾಂತರದಲ್ಲಿ ಇವಳಿಗೂ ಜ್ಞಾನೋದಯವಾಯಿತು. ಅವನಿಗಿಂತ ಹಿರಿಯಳಾದ ಇವಳು ಕಾಲೇಜು ಸೇರಿದಳು. ಅಲ್ಲಿ ಅವಳಿಗೆ ಬೇರೆ ಮಿತ್ರವೃಂದ ದೊರೆಯಿತು. ಹಾಗೆಯೇ, ಬೇರೆ ಹುಡುಗನೊಂದಿಗೆ ಡೇಟಿಂಗ್‌ ಆರಂಭಿಸಿದ್ದಳು. ಈ ಕಿರಾತಕನ ದೌರ್ಜನ್ಯದಿಂದ ಮುಕ್ತಿ ಸಿಕ್ಕ ಆರಾಮ ಇದ್ದಳು.

Image
jr korpa photo
ಸಾಂದರ್ಭಿಕ ಚಿತ್ರ

ಆದರೆ ಎಲ್ಲವೂ ಆಕೆ ಅಂದುಕೊಂಡಂತೆ ಆಗಲಿಲ್ಲ. ಕಾಯಲ್ ಆಗಾಗ್ಗೆ ಬಂದು ಇವಳಿಗೆ ಹಿಂಸೆ ಕೊಡುತ್ತಿದ್ದ. ಬೇರೆಯವರ ಸ್ನೇಹ ಮಾಡದಂತೆ ತಾಕೀತು ಮಾಡುತ್ತಿದ್ದ. ಅವಳ ಬಾಯ್‌ಫ್ರೆಂಡ್‌ ಬಗ್ಗೆ ಮಾತಾಡುವಾಗ ದ್ವೇಷ ಕಾರುತ್ತ ಕನಲಿಹೋಗುತ್ತಿದ್ದ. ಅವನನ್ನು ದೂರ ಮಾಡಿದಂತೆಲ್ಲ ಮತ್ತೆ-ಮತ್ತೆ ಅವನೇ ಬಂದು ಅವಳನ್ನು ಹತ್ತಿರದಿಂದ ಹಿಂಸಿಸುತ್ತಿದ್ದ ರೀತಿಗೆ ಅವಳು ಭೀತಳಾಗಿದ್ದಳು. ಅದರಿಂದ ಪಾರಾಗುವ ಪ್ರಯತ್ನದಲ್ಲಿ ಅವಳು ತನ್ನ ಹೊಸ ಪ್ರಿಯತಮನೊಂದಿಗೆ ಹೆಚ್ಚೆಚ್ಚು ಕೂಡುತ್ತಿದ್ದಳು. ಇದನ್ನು ಗಮನಿಸುತ್ತಲೇ ಇದ್ದ ಈ ಮನೋರೋಗಿ ಹೆಚ್ಚೆಚ್ಚು ಕೆರಳುತ್ತಲೇ ಇದ್ದ.

ಅದೊಂದು ದುರ್ದಿನ. ಲ್ಯೂರಾ ತನ್ನ ಪ್ರಿಯತಮನೊಂದಿಗೆ ಡೇಟಿಂಗ್‌ ಮೇಲೆ ಹೋದಳು. ಅಲ್ಲೊಂದು ನೈಟ್‌ ಕ್ಲಬ್ಬಿನಲ್ಲಿ ಇಬ್ಬರೂ ತಮ್ಮ ಪ್ರೇಮ ವ್ಯವಹಾರಗಳನ್ನು ಮುಗಿಸಿದ ನಂತರ, ನೃತ್ಯ ಮಾಡುವುದರಲ್ಲಿ ತಲ್ಲೀನರಾದರು. ಆದರೆ, ಕಾಯಲ್ ಇವರನ್ನು ಹಿಂಬಾಲಿಸುತ್ತಿದ್ದ ಎಂಬುದು ಗೊತ್ತಿರಲಿಲ್ಲ.

ಹೇಗೋ ಏಕಾಂತ ಸಾಧಿಸಿದ ಕಾಯಲ್, ಕ್ಲಬ್ಬಿನಲ್ಲಿಯೇ ಅವಳನ್ನು ಭೇಟಿಯಾಗಿದ್ದಾನೆ. ಅವಳನ್ನು ಪುಸಲಾಯಿಸಿ ಅವಳದೇ ಕಾರಿನಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮಾತುಕತೆ ವಾಗ್ವಾದಕ್ಕೆ ತಿರುಗಿದೆ. ವಾಗ್ವಾದ ದೈಹಿಕ ಆಕ್ರಮಣಕ್ಕೆ ಎಡೆಮಾಡಿದೆ. ಅವಳನ್ನು ಬೆತ್ತಲೆಗೊಳಿಸಿದ್ದಾನೆ. ಪ್ರತಿಭಟಿಸುತ್ತಲೇ ಇದ್ದ ಆಕೆಯ ಮೇಲೆ ಇವನಿಗೆ ಇನ್ನಿಲ್ಲದ ಅಸಹನೆ ಹುಟ್ಟಿದೆ. ಅಲ್ಲೇ ಕೈಗೆ ಸಿಕ್ಕಿದ ಕಲ್ಲಿನಿಂದ ಅವಳ ತಲೆಗೆ ಘಟ್ಟಿಸಿದ್ದಾನೆ. ಅವಳ ನಿರಾಕರಣೆಗೆ ವಿಹ್ವಲನಾಗಿದ್ದ ಅವನ ಒಳಗಿನ ಕಿರಾತಕ ಶಾಂತನಾಗುವವರೆಗೂ ಮಂಡಿಯೂರಿ ಘಟ್ಟಿಸುತ್ತಲೇ ಹೋಗಿದ್ದಾನೆ. ಅವಳ ಜೀವ ಹೊಗಿತ್ತೋ ಇಲ್ಲವೋ, ಆದರೆ ಕಾಮಾತುರತೆ ಅವನಿಗೆ ಏನು ಹೇಳಿಕೊಟ್ಟಿತೋ... ಮುಂದಿನದು ನಿಮ್ಮ ಕಲ್ಪನೆ. ಆದರೆ, ಅವನ ಪ್ಯಾಂಟು, ಅವಳ ಮೈಮೇಲೆ ಚಿಮ್ಮಿದ್ದ ವೀರ್ಯ ಇನ್ನೆಲ್ಲಿಂದ ಬರಲು ಸಾಧ್ಯ?
ಅವಳನ್ನು ಅಲ್ಲಿಯೇ ಬಿಟ್ಟು ಹೊರಡುವಾಗ, ರಕ್ತ/ವೀರ್ಯ ಸಿಕ್ತವಾಗಿದ್ದ ಪ್ಯಾಂಟು ಅವನನ್ನು ಎಚ್ಚರಿಸಿವೆ. ಅದನ್ನು ಅಲ್ಲಿಯೇ ಬಿಚ್ಚಿ ಅವಳ ಮೇಲೆಸೆದು ಅವಳ ಕಾರಿನಲ್ಲಿಯೇ ಅಲ್ಲಿಂದ ಪರಾರಿಯಾಗಿದ್ದಾನೆ. ಆಗಲೇ ಅವನು ಒಬ್ಬ ಹೆಂಗಸಿನ ಕಣ್ಣಿಗೆ ಬಿದ್ದಿರುವುದು. ಇದು ಒಂದು ಸಂಭಾವ್ಯ ಎಳೆ. ವಿಚಾರಣೆ ಇನ್ನೂ ಬಾಕಿ ಇದೆ.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಕೊನೆಗಾದರೂ ಸಿಕ್ಕಿದನೇ ಆ ಅಲೆಮಾರಿ ಹಂತಕ?

2006ರ ಸೆಪ್ಟೆಂಬರ್. ಲ್ಯೂರಾಳ ಕೊಲೆ ಆಪಾದನೆಗಾಗಿ ಕಾಯಲ್ ವಿಚಾರಣೆ ಆರಂಭವಾಗುತ್ತದೆ. ಆರೋಪಿ ಪರ ವಕೀಲರು ತನ್ನ ಕಕ್ಷಿದಾರನನ್ನು ಸಮರ್ಥಿಸುತ್ತ, ಅವಳ ದೇಹದಲ್ಲಿ ಸಿಕ್ಕಿದ್ದ ಇನ್ನೊಬ್ಬರ ವೀರ್ಯದ ಮಾದರಿಯನ್ನು ಮುಂದಿಟ್ಟು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಆದರೆ, ಈವರೆಗೆ ಹೇಳಿದ್ದ ಕತೆಯ ಎಳೆಯನ್ನು ಕೇಳಿದ ನ್ಯಾಯಾಲಯ, ಆ ವೀರ್ಯ ಮಾದರಿಯನ್ನು ಬದಿಗೆ ಸರಿಸಿ ತೀರ್ಪು ನೀಡುತ್ತದೆ.

ಕಾಯಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಪೆರೋಲ್‌ ಸಿಗುವುದಾದರೆ ಅದು 2042ರ ನಂತರ ಎಂದು ಹೇಳುತ್ತದೆ. ಲ್ಯೂರಾಳ ತಾಯಿಗೆ ಸಂಗತಿ ತಿಳಿಸಲು ಬಂದಿದ್ದ ಗುಡ್ವಿನ್‌, "ನನಗಾಗ 82 ವರ್ಷ ವಯಸ್ಸು. ಆದರೆ, ನಾನಾಗಲೀ, ನನ್ನ ಸಹೋದ್ಯೋಗಿ ಬಿಲ್‌ ಶಾರ್ಪ್ ಆಗಲೀ ಬದುಕಿದ್ದಲ್ಲಿ ಅವನ ಪೆರೋಲ್‌ ವಿರುದ್ಧವೂ ಹೋರಾಡುತ್ತೇವೆ," ಎಂದು ಹೇಳುತ್ತಾನೆ.

ಉಪಸಂಹಾರ

ಇಂಥದ್ದೊಂದು ಕತೆ ಹಾಗೆ ನಡೆದು ಹೀಗೆ ಅಂತ್ಯ ಕಾಣುತ್ತದೆ. ಇಲ್ಲಿ 20 ವರ್ಷಗಳ ಸುದೀರ್ಘ ನಿರೀಕ್ಷೆಯ ನಂತರ ಸೋತವರಾರು, ಗೆದ್ದವರಾರು ಎಂದು ನಿರ್ಧರಿಸಲಾಗದಷ್ಟು ಸಮಾಧಾನ, ಕಸಿವಿಸಿಗಳು ಮುತ್ತಿಕೊಂಡಿವೆ. ಲ್ಯೂರಳ ಸಾವು ಏನನ್ನು ಆಧರಿಸಿತ್ತು? ಅದು ಲ್ಯೂರಾಳನ್ನೇ ಏಕೆ ಬಲಿ ತೆಗೆದುಕೊಂಡಿತು? ಇಂಥ ಮನೋರೋಗಿಗಳು ಎಲ್ಲಿಂದ ಹುಟ್ಟುತ್ತಾರೆ? ಆರೋಪ ರುಜುವಾತಾಗಲು ಅಷ್ಟು ಸಮಯ ಏಕೆ ಬೇಕಿತ್ತು? ತಪ್ಪು ಯಾರದ್ದು? ಹೀಗೆ ಕಾಲ, ಕಾರ್ಯಕಾರಣ ಸಂಬಂಧಗಳು ನಮ್ಮ ಮೂಗಿನ ನೇರಕ್ಕೆ, ನಮಗೆ ಇಷ್ಟವಾಗುವ ಮಾತುಗಳನ್ನು ಹೇಳದೇ ಹೋದಲ್ಲಿ ಹುಟ್ಟುವ ಇಂಥ ಜಿಜ್ಞಾಸೆಗೆ ಉತ್ತರಿಸುವವರಾದರೂ ಯಾರು?

(ವಿವಿಧ ಮೂಲಗಳಿಂದ)
ನಿಮಗೆ ಏನು ಅನ್ನಿಸ್ತು?
5 ವೋಟ್