ವಿಧಿ ಮತ್ತು ವಿಜ್ಞಾನ | ಕಾವಳ ಕವಿದ ಕಗ್ಗತ್ತಲೆಯಲ್ಲಿ ರೈಲು ಕೆಡವಿದವರಾರು?

Vidhi matthu Vignana

ಕೆಲವೊಮ್ಮೆ ಕೆಲವು ಘಟನೆಗಳು ಸುಮ್ಮನೆ ಘಟಿಸಿಬಿಡುತ್ತವೆ, ಯಾರನ್ನೂ ಕೇಳುವುದಿಲ್ಲ. ಆದರೆ, ನಿಜಕ್ಕೂ ಇವು ಸುಮ್ಮನೆ ಘಟಿಸಿಬಿಡುತ್ತವೆ ಎಂಬುದು ಬಹುಶಃ ತಪ್ಪು ಗ್ರಹಿಕೆ. ಏಕೆಂದರೆ, ಆ ಘಟನೆಯ ಮೂಲದಲ್ಲೆಲ್ಲೋ ಯಾರದೋ ಏನೋ ದೋಷವಿರುತ್ತದೆ; ಮರೆವು, ಆತಂಕ, ಅಹಂಕಾರ, ನಿರ್ಲಕ್ಷ್ಯ, ಬೇಜವಾಬ್ದಾರಿ - ಏನಾದರೊಂದು. ಈ ದುರ್ಘಟನೆಯಲ್ಲಿ ಆಗಿದ್ದೇನು?

ದಟ್ಟ ಕಾವಳ ಮುಚ್ಚಿಕೊಂಡಿದ್ದ ಒಂದು ದಿನ. 220 ಪ್ರಯಾಣಿಕರನ್ನು ಹೊತ್ತು, ಇನ್ನೂ 750 ಮೈಲಿ ಓಡಿ, ಮಯಾಮಿಯನ್ನು ತಲುಪಬೇಕಿದ್ದ ಒಂದು ರೈಲು. ಬೊಯು ಕೆನೊಟ್ ಸೇತುವೆಯನ್ನೇನೋ ಪ್ರವೇಶಿಸಿತು. ಆದರೆ, 497 ಅಡಿ ಉದ್ದದ ಸೇತುವೆಯನ್ನು ಅದು ದಾಟಲೇ ಇಲ್ಲ...

'ಆಮ್ಟ್ರಾಕ್' ಹೆಸರಿನಲ್ಲಿ ಸನ್ಸೆಟ್ ಲಿಮಿಟೆಡ್ ನಡೆಸುವ ಈ ರೈಲುಮಾರ್ಗಕ್ಕೆ ಬಹುದೊಡ್ಡ ಧೀಮಂತ ಮತ್ತು ಶ್ರೀಮಂತ ಪರಂಪರೆಯೇ ಇದೆ. 'ಅಮೆರಿಕ' ಮತ್ತು 'ಟ್ರಾಕ್' ಪದಗಳ ಸಂಕ್ಷಿಪ್ತ ರೂಪವಾಗಿರುವ ಆಮ್ಟ್ರಾಕ್, ಇಂದಿಗೂ ಅಮೆರಿಕದಲ್ಲಿ ಉಳಿದಿರುವ ಏಕೈಕ ಖಂಡಾಂತರ ರೈಲುಮಾರ್ಗ. ಇದರಲ್ಲಿ ಪ್ರಯಾಣ ಮಾಡುವುದು ರೋಮಾಂಚಕ ಮತ್ತು ಚೇತೋಹಾರಿ ಅನುಭವ. ಹಾಗೆಯೇ, ಪ್ರತಿಷ್ಠೆಯ ವಿಷಯ ಸಹ.

ಸೆಪ್ಟೆಂಬರ್ 20, 1993. ಟ್ರಡಿ ಜಸ್ಟಿನ್ ಮತ್ತು ಆಕೆಯ ಗಂಡ ಲ್ಯಾರಿ ಇದೇ ರೈಲಿನಲ್ಲಿ ನ್ಯೂ ಮೆಕ್ಸಿಕೊದಿಂದ ಪ್ಲೊರಿಡಾ ಕಡೆಗೆ ಹೊರಟಿದ್ದರು. ಮಧ್ಯ ವಯಸ್ಸು ಮೀರಿದ್ದ ಈ ದಂಪತಿಗಳಿಗೆ ಇದು ಹೊಸತೇನಲ್ಲ. ಈ ಪ್ರಯಾಣಕ್ಕೆ ಇವರು ತುಂಬಾ ಹಳಬರು. ದಿನಕ್ಕೆ ಮೂರು ಬಾರಿ ಅವರ ಸೀಟಿನಿಂದ ಊಟದ ಡಬ್ಬಕ್ಕೆ ಹೋಗಿಬರುವುದೇ ಒಂದು ಅನೂಹ್ಯ ಅನುಭವ ಎಂಬುದು ಅವರ ಸಂಭ್ರಮದ ಟಿಪ್ಪಣಿ. ಅಂದೂ ಅಷ್ಟೇ, ಊಟ ಮುಗಿಸಿಕೊಂಡು ತಮ್ಮ ಸೀಟಿಗೆ ಹಿಂತಿರುಗಿದರು. ಸುಮಾರು 2.30ರ ಹೊತ್ತಿಗೆ ರೈಲು ನ್ಯೂ ಆರ್ಲೀನ್ಸ್‌ನಲ್ಲಿ ಒಂದು ಒಂದು ಸಣ್ಣ ನಿಲುಗಡೆ ಬಯಸಿತ್ತು. ಅದರ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡಿತ್ತು.

ಆಮ್ಟ್ರಾಕ್ ರೈಲು ಮತ್ತೆ ಹೊರಟಾಗ, ಅದರ ನಿಗದಿತ ಸಮಯಕ್ಕಿಂತ 33 ನಿಮಿಷ ತಡವಾಗಿತ್ತು. ಅಲಬಾಮದ ಮೊಬಿಲ್ ತಲುಪಿದಾಗ ಸೇತುವೆ ದ್ವಾರದ ಎಂಜಿನಿಯರ್ ಇದಕ್ಕಾಗಿಯೇ ಕಾದಿದ್ದರು. ರೈಲನ್ನು ಸೇತುವೆ ಹತ್ತಿಸಿ ಅವರು ಅಲ್ಲಿಂದ ಹೊರಟ ನಂತರ, ಆಮ್ಟ್ರಾಕ್ ಮಯಾಮಿಯನ್ನು ಗುರಿಯಾಗಿಸಿ ತನ್ನ ಗರಿಷ್ಠ ಸಾಮರ್ಥ್ಯದಿಂದ ಗಂಟೆಗೆ 72 ಮೈಲು ವೇಗದಲ್ಲಿ ಮುನ್ನುಗ್ಗುತ್ತಿತ್ತು. ಆದರೆ, ಕಾವಳ ಕವಿದು ಮುಚ್ಚಿದ್ದರಿಂದ ಎಲ್ಲೆಡೆಯೂ ಮಾಸಲು ಪರದೆ ಬಿಟ್ಟಂತಿತ್ತು. ಮಯಾಮಿಗೆ ಇನ್ನೂ 750 ಮೈಲು ದೂರ.

ಸುಮಾರು ಮೂರು ಗಂಟೆಯ ಹೊತ್ತಿಗೆ ಆಮ್ಟ್ರಾಕ್ ಬೊಯು ಕಾನೊಟ್ ಸೇತುವೆಯನ್ನು ಹತ್ತಿತು. ಅಷ್ಟೇ… 'ದಿಢಿಲ್… ದಿಢಿಲ್' ಸದ್ದು! ರೈಲಿನ ಮೂರೂ ಎಂಜಿನ್‌ಗಳು ಚೆಲ್ಲಾಪಿಲ್ಲಿಯಾಗಿ ಕೆಳಗಿದ್ದ ನದಿಗೆ ಸಿಡಿದು ಚಿಮ್ಮಿ ಹಾರಿದವು. ಹಿಂದೆಯೇ, ಒಂದಾದ ಮೆಲೊಂದರಂತೆ ನಾಲ್ಕು ಬೋಗಿಗಳು ಮೊಬಿಲ್ ನದಿಯ ಜೌಗಿನೊಳಕ್ಕೆ ಮಗುಚಿಕೊಂಡವು. ಕ್ಷಣಮಾತ್ರದಲ್ಲಿ ಎಂಜಿನ್‌ಗಳಿಂದ ಚಿಮ್ಮಿದ ಡೀಸೆಲ್ ಸುತ್ತಮುತ್ತಲ ಪ್ರದೇಶವನ್ನು ತೈಲಮಯವಾಗಿಸಿತು. ಅದನ್ನು ಹಿಂಬಾಲಿಸಿದ ಬೆಂಕಿಯ ಕೆನ್ನಾಲಿಗೆಗಳು ಇಡೀ ಪ್ರದೇಶವನ್ನು ಅಗ್ನಿಕುಂಡವನ್ನಾಗಿಸಿದವು. ಸುತ್ತಮುತ್ತಲಿಂದಲೂ ಬಿರುಗಾಳಿಯಂತೆ ಮೊರೆಯುತ್ತಿದ್ದ ಮನುಷ್ಯರ ಆಕ್ರಂದನಗಳು ಮುಗಿಲು ಮುಟ್ಟಿ ಅಗಾಧ ಜಲರಾಶಿಯನ್ನು ನಡುಗಿಸಿದವು. ಕ್ಷಣಾರ್ಧದಲ್ಲಿ ಇಡೀ ಪ್ರದೇಶ ಸಾವಿನ ಕೂಪವಾಗಿಹೋಯಿತು.

Image
Alabama train crash 4

ನೀರಿಗೆ ಬಿದ್ದವರು, ಅವಕಾಶ ಸಿಕ್ಕಿದವರು ಈಜಿ ಪಾರಾಗಲು ಯತ್ನಿಸಿದರು. ಕೆಸರಲ್ಲಿ ಬಿದ್ದವರು, ಬೆಂಕಿ ತಗುಲಿದವರು ಜೀವಕ್ಕಾಗಿ ಸೆಣಸಿದರು. "ಇಂಥದ್ದೊಂದು ದುರಂತ ಇಂಥ ಕಡೆ ಸಂಭವಿಸಿದೆ. ಇದನ್ನೆಲ್ಲ ನೋಡುತ್ತಿದ್ದೇವೆ," ಎಂದು ಮೊದಲಿಗೆ ವರದಿ ಮಾಡಿದ್ದು 'ಮೊವಿಲ್ಲ' ಎನ್ನುವ ಟಗ್‌ಬೋಟ್ (ಕರಾವಳಿಯಲ್ಲಿ 'ಎಳೆಯೋಡು' ಎನ್ನುವ ಮಧ್ಯಮ ಗಾತ್ರದ, ಆದರೆ ಅತ್ಯಂತ ಬಲಶಾಲಿಯಾದ ಹಡಗು).

ಇವರು ವರದಿ ಮಾಡುತ್ತ, "ನಮಗೆ ಸ್ಪಷ್ಟವಾಗಿ ಏನೂ ಕಾಣುತ್ತಿಲ್ಲ. ದಟ್ಟ ಕಾವಳ ಕವಿದಿದೆ. ಬೆಂಕಿ ಸಹ ನಮಗೆ ಕಾಣುತ್ತಿಲ್ಲ. ಆದರೆ, ಏನೋ ದುರಂತ ನಡೆದಿದೆ ಎಂದು ಮಾತ್ರ ನಮ್ಮ ರಾಡಾರಿನ ಮೂಲಕ ಗೊತ್ತಾಗುತ್ತಿದೆ. ಪರಿಸ್ಥಿತಿ ತುಂಬಾ ಭಯಾನಕವಾಗಿದೆ," ಎಂದೆಲ್ಲ ಹೇಳಿದರು. ಟ್ರೂಡಿ ಅವಳ ಗಂಡನನ್ನು ಎಳೆದುಕೊಂಡು ದಂಡೆಯತ್ತ ಈಜಲಾರಂಭಿಸಿದಳು. "ಹೋ… ಕಾಪಾಡಿ, ಜೀವ ಹೋಗುತ್ತಿದೆ… ಕಾಪಾಡಿ… ದೇವರೇ… ನಾವು ಬದುಕಲಾರೆವು," ಇತ್ಯಾದಿ ಆಕ್ರಂದನಗಳು ಅವಳನ್ನು ಹಿಂಬಾಲಿಸುತ್ತಿದ್ದವು. ಆ ಹೊತ್ತಿಗೆ ಆಕಸ್ಮಿಕವಾಗಿ ಅಲ್ಲಿಗೆ ಒಂದು ದೋಣಿ ಬಂದಿತು. ಅದರಲ್ಲಿದ್ದ ಸಿಬ್ಬಂದಿ ಕೈಗೆ ಸಿಕ್ಕಿದವರನ್ನು ಎಳೆದು ಹಾಕಿಕೊಂಡರು. ನೀರೊಳಗಿದ್ದ ಬೋಗಿಯೊಂದರಿಂದ ಜೋಡಿಯೊಂದು ತಮ್ಮ ಹತ್ತು ವರ್ಷದ ಅಂಗವಿಕಲ ಮಗುವನ್ನು ಆ ದೋಣಿಯವರ ಕೈಗೆ ಎಸೆಯಿತು. ಆದರೆ, ಅವರಿಗೆ ಹೊರಬರಲಾಗಲಿಲ್ಲ. ಈ ದೋಣಿಯವರು ಒಟ್ಟು 17 ಜನರ ಜೀವ ಕಾಪಾಡಿದರು.

ಸುದ್ದಿ ತಿಳಿದ ಕೂಡಲೇ ತುರ್ತು ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿತು. ರಕ್ಷಣೆ, ಎಣಿಕೆ ಒಟ್ಟೊಟ್ಟಿಗೇ ನಡೆದವು. ರೈಲಿನಲ್ಲಿದ್ದವರ ಸಂಖ್ಯೆ 220. ಹೊರಬಂದಿರುವುದು 173 ಮಾತ್ರ. ಉಳಿದ 47 ಜನರು ಸಿಗುತ್ತಿಲ್ಲ. ಹಾಗಾದರೆ, ಅವರೆಲ್ಲ ಏನಾದರು? ಹೆಣಗಳನ್ನು ಹುಡುಕಲು ಬೆಳಕಾಗಬೇಕು.

ಅಷ್ಟರಲ್ಲಿ ಎಫ್‌ಬಿಐ ಸ್ಥಳಕ್ಕೆ ಧಾವಿಸಿತು. ಅಪಘಾತದಲ್ಲಿ ಭಯೋತ್ಪಾದಕರ ಕೈವಾಡವೇನಾದರೂ ಇದೆಯೇ ಎಂಬ ಗುಮಾನಿ ಅದಕ್ಕಿತ್ತು. ಅದರೊಂದಿಗೆ ಕೋಸ್ಟ್ ಗಾರ್ಡ್ ಮತ್ತು ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ ಸಹ ತನ್ನ ತನಿಖಾ ತಂಡವನ್ನು ಸ್ಥಳಕ್ಕೆ ರವಾನಿಸಿತು. ಮುಂಚೂಣಿ ಎಂಜಿನ್ 45 ಡಿಗ್ರಿ ಕೋನದಲ್ಲಿ ಮುಕ್ಕಾಲು ಭಾಗ ಕೆಸರಿನಲ್ಲಿ ಹೂತುಹೋಗಿತ್ತು. ಇನ್ನೊಂದು ಎಂಜಿನ್ ಅಲ್ಲಿಂದ ಸ್ವಲ್ಪ ದೂರದಲ್ಲಿ ಮಗ್ಗುಲಾಗಿ ಮಲಗಿ ಉದ್ದುದ್ದ ಅರ್ಧ ಹೂತುಹೋಗಿತ್ತು. ಮೂರನೆಯ ಎಂಜಿನ್ ಇನ್ನೊಂದು ಬದಿಗೆ ಮುಂಭಾಗದಲ್ಲಿ ಮಲಗಿತ್ತು. ಉರುಳಿದ ಇತರ ನಾಲ್ಕು ಬೋಗಿಗಳು ಅಜುಬಾಜಿನಲ್ಲಿ ಮುಳುಗಿದ್ದವು. ನೌಕಾ ಸಂರಕ್ಷಣಾ ಪಡೆಯ ಹಡಗುಗಳು ಹೂತಿದ್ದ, ಮುಳುಗಿದ್ದ ಬೋಗಿಗಳನ್ನು ಹೊರತಗೆದವು. ಒಟ್ಟಾರೆ ಇಡೀ ಸರ್ಕಾರಿ ವ್ಯವಸ್ಥೆಗೆ ಆಮ್ಟ್ರಾಕ್ ಇತಿಹಾಸದಲ್ಲಿ ನಡೆದ ಘೋರ ದುರಂತದ ಕಾರಣ ತಿಳಿಯುವ ಕುತೂಹಲವಿತ್ತು.

ಅಂತಿಮವಾಗಿ ಸಿಕ್ಕ 47 ಮೃತದೇಹಗಳ ಪೈಕಿ, 42 ಮಂದಿ ಪ್ರಯಾಣಿಕರು ಮತ್ತು ಐದು ಮಂದಿ ಸಿಬ್ಬಂದಿ ಎಂಬುದು ಖಚಿತವಾಯಿತು. ಎಂಜಿನ್‌ಗಳ ತಪಾಸಣೆಯಲ್ಲಿ ರೈಲಿನ 'ಈವೆಂಟ್ ರೆಕಾರ್ಡರ್' ಸಿಕ್ಕಿಬಿಟ್ಟಿತು. ಇದು ವಿಮಾನದಲ್ಲಿರುವ 'ಬ್ಲಾಕ್ ಬಾಕ್ಸ್'ನಂತೆ. ಈ ರೈಲಿನ ಆವರೆಗಿನ ಪ್ರಯಾಣದ ಇತಿಹಾಸ ಇದರಲ್ಲಿ ಅಡಗಿ ಕೂತಿರುತ್ತದೆ. ಅದರ ಪ್ರಕಾರ, ರೈಲು ಗಂಟೆಗೆ 72 ಮೈಲು ವೇಗದಲ್ಲಿ ಸಾಗುತ್ತಿತ್ತು. ಆದರೆ, ಅದು ಬ್ರೇಕ್ ಹಾಕಿದ ಬಗ್ಗೆ ಇಲ್ಲಿ ದಾಖಲೆ ಇಲ್ಲ. ಅಲ್ಲದೆ, ಟ್ರಾಕ್ ಬದಿಗಿರುವ ಹಸಿರು ದೀಪ ಹಾಗೇ ಉರಿಯುತ್ತಿದೆ. ಅದು ಆರಿಲ್ಲ, ಇಲ್ಲವೇ ಕೆಂಪಾಗಿಲ್ಲ. ಹಾಗಾಗಿ, ರೈಲು ಬ್ರೇಕ್ ಹಾಕಿಲ್ಲ, ನಿಲ್ಲುವ ಪ್ರಯತ್ನ ಮಾಡಿಲ್ಲ. ಹಾಗೊಂದು ಪಕ್ಷ ಬ್ರೇಕ್ ಹಾಕಿದ್ದಿದ್ದರೆ, ದೀಪ ಹಸಿರು ಇರುತ್ತಿರಲಿಲ್ಲ, ಬದಲಿಗೆ ಕೆಂಪಾಗಿರುತ್ತಿತ್ತು. ಏಕೆಂದರೆ, ಆ ದೀಪವು ಹಳಿಯಲ್ಲಿ ಹರಿಯುವ ವಿದ್ಯುತ್‌ನೊಂದಿಗೆ ಸಂಪರ್ಕ ಹೊಂದಿರುತ್ತದೆ. ರೈಲು ಬ್ರೇಕ್ ಹಾಕಿದ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಮತ್ತೆ ಅಪಘಾತ ಸಂಭವಿಸಿದ್ದು ಹೇಗೆ?

Image
Alabama train crash 1

ಈ 497 ಅಡಿಗಳ ಸೇತುವೆ ಮೂರು ಭಾಗಗಳಲ್ಲಿತ್ತು. ದಕ್ಷಿಣ ಭಾಗದ 165 ಅಡಿ ಉಕ್ಕಿನ ತ್ರಿಕೋನಗಳಿಂದ ರಚಿತವಾಗಿತ್ತು. ಮಧ್ಯಭಾಗದ 140 ಅಡಿ ಉಕ್ಕಿನ ಕಂಬದ ಮೇಲೆ ಕೂರಿಸಿದ ತೊಲೆಗಳಿಂದಾಗಿತ್ತು. ಇದು ಮೂಲತಃ ತಿರುಗಣೆ ಸೇತುವೆ. ಹಡಗುಗಳು ಈ ಸೇತುವೆಯ ಕೆಳಗಿಂದ ನುಸುಳಿ ಹೋಗಲಾರದಷ್ಟು ದೊಡ್ಡವಿದ್ದಲ್ಲಿ ಎರಡು ಆಧಾರ ಕಂಬಗಳ ನಡುವಿನ ಸೇತುವೆಯ ಭಾಗವನ್ನು ತಿರುಗಿಸಿ ಉದ್ದವಾಗಿ ನಿಲ್ಲಿಸಿ, ಜಾಗವನ್ನು ಪ್ರಯಾಣಕ್ಕೆ ತೆರವು ಮಾಡಬಹುದಿತ್ತು. ಆನಂತರ ಅದನ್ನು ಸುಲಭವಾಗಿ ಯಥಾಸ್ಥಾನಕ್ಕೆ ತಿರುಗಿಸಬಹುದಿತ್ತು. ಉಳಿದ 192 ಅಡಿ ಮರದ ದಿಮ್ಮಿ ಮತ್ತು ತೊಲೆಗಳಿಂದ ಮಾಡಲ್ಪಟ್ಟಿತ್ತು.

ಸದ್ಯ, ಮಧ್ಯಭಾಗದ ಸೇತುವೆ ಸಂಪೂರ್ಣ ನಾಶವಾಗಿತ್ತು. ತಿರುಗಣಿಯ ಅವಕಾಶವಿದ್ದರೂ ಅದನ್ನೆಂದೂ ಇಲ್ಲಿ ಬಳಸಲಾಗಿಲ್ಲ. ಈಗ ತಜ್ಞರಿಗೆ ಹೊಳೆದ ಸಂಶಯವೆಂದರೆ, ಆ ತಿರುಗಣಿಯ ಭಾಗವನ್ನು ಸರಿಯಾಗಿ ಜೋಡಿಸಿಲ್ಲದ ಕಾರಣ ಹಳಿಗಳು ವ್ಯತ್ಯಯವಾಗಿ ರೈಲು ಮಗುಚಿಕೊಂಡಿದೆ ಎಂದು. ಅದರ ಕಂಬಗಳ ಸ್ಥಿತಿಯನ್ನು ತಿಳಿಯಲು ಮುಳುಗು ಪರಿಣಿತರನ್ನು ಕರೆಸಲಾಯಿತು. ಆದರೆ, ಅಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಮತ್ತೊಂದು ಸಂದೇಹ - ಉಕ್ಕಿನ ಭಾಗ ಮತ್ತು ಮರದ ಭಾಗದ ನಡುವಿನ ಜೋಡಣೆಯಲ್ಲಿ ಅಥವಾ ಆ ಮರದಲ್ಲಿ ಏನಾದರೂ ದುರ್ಬಲತೆ ಇತ್ತೇ? ಇಲ್ಲ, ಅಲ್ಲಿನ ಮರ ಸಹ ಸುಭದ್ರವಾಗಿದೆ ಎಂದು, ಮರ ಪರೀಕ್ಷಾ ತಜ್ಞ ಆಲ್ಬರ್ಟ್ ಎಲ್ ಡಿಮೋರೀಸ್ ಖಚಿತವಾಗಿ ಹೇಳಿದ. ಹಾಗಾದರೆ ಸಮಸ್ಯೆ ಎಲ್ಲಿತ್ತು?

ಈ ರೈಲು ಅಪಘಾತಕ್ಕೀಡಾಗುವುದಕ್ಕೆ ಕೇವಲ ಹತ್ತು ನಿಮಿಷ ಮುಂಚೆ ಅದೇ ಹಳಿಗಳ ಮೇಲೆ ಸರಕು ಸಾಗಣೆ ರೈಲೊಂದು ಎದುರು ದಿಕ್ಕಿನಿಂದ ಸುರಕ್ಷಿತವಾಗಿ ಹಾದುಹೋಗಿತ್ತು. ಹಾಗಾದರೆ, ಈ ಹತ್ತು ನಿಮಿಷದ ಒಳಗೆ ಏನಾಗಿರಬಹುದು? ಅದು ಸರಕು ರೈಲು ಎಂದು ಸಂಚುಕೋರರು ಅದನ್ನು ಹೋಗಲು ಬಿಟ್ಟರೇ? ಇದು ಪ್ರಯಾಣಿಕರ ರೈಲು ಎಂದು ಕೆಡವಿದರೇ? ತನಿಖೆ ಎಲ್ಲೋ ದಿಕ್ಕು ತಪ್ಪುತ್ತಿರುವಂತೆ ಅನ್ನಿಸುತ್ತಿತ್ತು.

ಭಾರೀ ಪರಿಣಿತರೆಲ್ಲ ಈ ಅಪಘಾತಕ್ಕೆ ಸಂಬಂಧಿಸಿದಂತೆ ಗೊಂದಲಕ್ಕೊಳಗಾದರು. ಅವರು ಈವರೆಗೂ ಒಂದು ರೈಲು ಅಪಘಾತಕ್ಕೆ ಸಂಬಂಧಿಸಿ ಏನೆಲ್ಲವನ್ನು ಪರಿಗಣಿಸಬೇಕೋ, ಪರೀಕ್ಷಿಸಬೇಕೋ ಅದೆಲ್ಲವನ್ನೂ ಮಾಡಿದ್ದರು. ಆದರೆ, ಅಲ್ಲೆಲ್ಲೂ ದೋಷಗಳು ಕಾಣುತ್ತಿಲ್ಲ. ಎಲ್ಲ ನಿಚ್ಚಳವಾಗಿ ಕಾಣುತ್ತಿದೆ. ಮತ್ತೆ ತಪ್ಪಾಗಿರುವುದು ಎಲ್ಲಿ? ಏಕೋ ಏನೋ ನುಜ್ಜುಗುಜ್ಜಾಗಿರುವ ತಿರುಗಣಿ ಸೇತುವೆಯನ್ನು ಹೊತ್ತಿದ್ದ ಮೂರು ದೈತ್ಯಾಕಾರದ ಕಾಂಕ್ರೀಟ್ ಕಂಬಗಳ ಮೇಲೆ ಅವರ ಗಮನ ಹೋಗಿರಲಿಲ್ಲ. ಯಾರಿಗೂ ಅವುಗಳ ಮೇಲೆ ಸಂದೇಹ ಹುಟ್ಟಲೂ ಸಾಧ್ಯವಿರಲಿಲ್ಲ ಬಿಡಿ! ಅವು ಅಷ್ಟು ಬಲಿಷ್ಠವಾಗಿದ್ದವು. ಒಂದು ವೇಳೆ ಏನಾದರೂ ಹೇರಾಫೇರಿ ನಡೆದಿದ್ದಲ್ಲಿ, ಈಗ ನಿಂತಿರುವಂತೆ ಸದೃಢವಾಗಿ ನಿಂತಿರಲು ಸಾಧ್ಯವಿರಲಿಲ್ಲ.

ನಂತರದಲ್ಲಿ ಕೆಲವು ತಜ್ಞರಿಗೆ ಆ ಕಂಬಗಳ ಮೇಲೆ ಅನುಮಾನ ಹುಟ್ಟಿತು. ಪರೀಕ್ಷೆಗೆ ಮುಂದಾದರು. ಹಾನಿ ಆಗುವುದಿದ್ದರೆ ಸೇತುವೆಯ ಆ ಕೊನೆ ಅಥವಾ ಈ ಕೊನೆಯಲ್ಲಿರುವ ಕಂಬಗಳಿಂದ ಸಂಭವಿಸಬೇಕು. ಸಮಗ್ರ ಪರೀಕ್ಷೆ ನಡೆಯಿತು. ಇಲ್ಲ, ಯಾವ ದೋಷಗಳೂ ಇಲ್ಲ! ಮತ್ತೆ? ನಡುವಿನ ಕಂಬ? ಪರಿಣಿತರಿಗೆ ನಗಬೇಕೋ ಅಳಬೇಕೋ ಅರ್ಥವಾಗಲಿಲ್ಲ. ಅವರ ಪರಿಣಿತಿಯ ಪ್ರಮಾಣವನ್ನು ಮತ್ತೊಮ್ಮೆ ಪರೀಕ್ಷಿಸಿಕೊಳ್ಳಬೇಕು ಅನ್ನಿಸಿದ್ದಂತೂ ನಿಜ. ಹೌದು, ಆ ಕಂಬದ ಮೇಲೆ ಹಳಿಗಳನ್ನು ಜೋಡಿಸಲು ಕೂರಿಸಿದ್ದ ಉಕ್ಕಿನ ಪ್ಲೇಟುಗಳು 48 ಇಂಚುಗಳಷ್ಟು ಪಕ್ಕಕ್ಕೆ ಸರಿದಿವೆ. ('ನಮ್ಮ ಮೆಟ್ರೋ'ದ ಕಂಬ ಮತ್ತು ಅದರ ಮೇಲಿನ ರೈಲುಮಾರ್ಗದ ನಡುವೆ ನೀವು ಈ ಮಾದರಿಯ ಜೋಡಣೆಯನ್ನು ಗಮನಿಸಬಹುದು)

ಇದು ನಂಬಲಸಾಧ್ಯವಾದ ಸಂಗತಿ. ಹಾಗೆ ಪ್ಲೇಟುಗಳು 48 ಇಂಚು ಸರಿಯಬೇಕೆಂದರೆ ಆ ಪ್ಲೇಟುಗಳನ್ನು ಹಿಡಿದಿಟ್ಟಿದ್ದ ಉಕ್ಕಿನ ಬೋಲ್ಟುಗಳಲ್ಲಿ ದೋಷವಿರಬೇಕು. ಅವುಗಳನ್ನೂ ಕೂಲಂಕಶವಾಗಿ ಪರೀಕ್ಷಿಸಲಾಯಿತು. ಸ್ವಲ್ಪ ತುಕ್ಕು ಹಿಡಿದಿದೆ, ಸರಿ. ಆದರೆ ದುರ್ಬಲವಾಗಿಲ್ಲ. ಅವುಗಳ ಜೋಡಣೆಯಲ್ಲಿ ಎಲ್ಲಾದರೂ ತಪ್ಪಾಗಿತ್ತೇ? ಅದನ್ನು ಕಂಡುಕೊಳ್ಳಲು ಈ ಕಂಬದ ಮೇಲೆ ಮಲಗಿದ್ದ ಹಳಿಗಳ ಜೋಡಣೆಯನ್ನು ಪರೀಕ್ಷಿಸಬೇಕು. ಆದರೆ, ಅದು ಈಗ ಇರುವುದು ನದಿಯ ತಳದಲ್ಲಿ! ಆದರೂ ಕೈಬಿಡುವ ಪ್ರಶ್ನೆಯೇ ಇಲ್ಲ - ಸನ್ಸೆಟ್ ಲಿಮಿಟೆಡ್ ಅವನ್ನು ಹೊರಗೆತ್ತಿಸಿತು.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಜೀನ್ಸ್‌ ಪ್ಯಾಂಟ್‌ ಹೇಳಿದ ರಹಸ್ಯ ಮತ್ತು ಇಪ್ಪತ್ತು ವರ್ಷಗಳ ಪರದಾಟ

ಅಸಂಖ್ಯಾತ ಅನುಮಾನಗಳು, ಅಪಾರ ಕುತೂಹಲದೊಂದಿಗೆ ತನಿಖಾ ತಂಡಗಳು ಅದರ ಪರೀಕ್ಷೆಗಿಳಿದವು. ಹೌದು, ಹಳಿಯನ್ನು ಕಾಂಕ್ರೀಟ್ ಕಂಬದ ಮೇಲೆ ಉಕ್ಕಿನ ಪ್ಲೇಟನ್ನು ಕೂರಿಸಲು ಬಳಸಿದ್ದ ಬೋಲ್ಟುಗಳು ವಕ್ರವಾಗಿವೆ. ಸರಿ... ಆದರೆ, ಅದರಿಂದ ಹಳಿಗಳು 48 ಇಂಚು ಬದಿಗೆ ಸರಿಯಲಾರವು. ಮತ್ತೆ? ಪ್ಲೇಟಿಗೂ ಹಳಿಗಳಿಗೂ ಕೂಡಿಸಿ ಹೊಡೆದಿದ್ದ ರಿವಿಟ್ಟುಗಳು ಮೇಲೆದ್ದು ಮುರಿದು ಕೂತಿವೆ. ಇನ್ನು, ಹಳಿ ಎಂದಿನಂತೆ ಮಲಗಿರುವುದು ಹೇಗೆ ಸಾಧ್ಯ? ಹಾಗಾಗಿ ಇಡೀ ಹಳಿ ಸಡಿಲವಾಗಿ ಮೇಲೆದ್ದು ಕಾಯುತ್ತಿತ್ತೇ ಆಮ್ಟ್ರಾಕ್ ಬರುವಿಗಾಗಿ? ರೈಲಿನ ಎಂಜಿನ್ ರೊಯ್ಯನೆ ನುಗ್ಗಿದ ರಭಸಕ್ಕೆ ಕಂಬದ ಮೇಲಿದ್ದ ರಿವಿಟ್ಟುಗಳು ಮತ್ತು ಮೇಲೆದ್ದ ಮುಂದಿನ ಹಳಿ, ಎಂಜಿನ್ನಿನ ಮೇಲೆ ಆಳವಾಗಿ ಉಜ್ಜಿದೆ. ಎಂಜಿನ್ ದೇಹದ ಮೇಲೆ ಮೂಡಿದ್ದ ಆ ಗುರುತು ನಿಖರವಾಗಿ ಹೊಂದಾಣಿಕೆ ಆಗುತ್ತಿದೆ.

ಅದೆಲ್ಲ ಸರಿ... ಇದು ಆಗಿದ್ದಾದರೂ ಹೇಗೆ? ಮನುಷ್ಯ ಮಾತ್ರರಿಂದ ಇದು ಅಸಾಧ್ಯ. ಯಾವುದೇ ಸ್ಫೋಟಕಗಳನ್ನು ಬಳಸಿಲ್ಲ. ಅಂದರೆ, ಮೊದಲು ಏನಾದರೂ ಆಗಿದ್ದಲ್ಲಿ ಅದು ಉಕ್ಕಿನ ಪ್ಲೇಟು, ಹಳಿ, ಬೋಲ್ಟು ಅಥವಾ ರಿವಿಟ್ಟುಗಳಿಗಲ್ಲ - ಕಾಂಕ್ರೀಟ್ ಕಂಬಕ್ಕೆ. ಆದರೆ, ಆ ದೈತ್ಯನನ್ನು ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಹಾನಿ ಮಾಡಲು ಹೇಗೆ ಸಾಧ್ಯ? ಮೊದಲ ಪರೀಕ್ಷೆಯಲ್ಲಿ, ಅಪಘಾತದ ಅವಧಿಯಲ್ಲಿ ಬಿದ್ದ ಹೊಡೆತದಿಂದ ಆ ಕಂಬದ ಮೇಲಿನ ಚಕ್ಕೆ ಸಿಡಿದಿದೆ ಎಂದು ಭಾವಿಸಿದ್ದ ಭಾಗವನ್ನು ಮರುಪರೀಕ್ಷಿಸಲಾಯಿತು. ಅದು ಹಾಗಾಗಿರಲಿಲ್ಲ. ಖಚಿತವಾಗಿ ಆ ಕಂಬಕ್ಕೆ ಯಾವುದೋ ಬಲಶಾಲಿ ವಸ್ತು ಅತ್ಯಂತ ಬಲವಾಗಿ ಘಟ್ಟಿಸಿದೆ. ಇದು ತಜ್ಞರ ಊಹೆ. ಆದರೆ, ಅದು ತಾನೇ ಹೇಗೆ ಸಾಧ್ಯ? ಕೇವಲ ಹತ್ತು ನಿಮಿಷಗಳ ಅಂತರದಲ್ಲಿ ಅಂತಹ ಒಂದು ವಸ್ತು ಬಂದು, ಅಪ್ಪಳಿಸಿ, ಅಂತರ್ಧಾನವಾಯಿತೇ? ಭೂತ ಚೇಷ್ಟೆ ಅಲ್ಲ ತಾನೇ? ಯಾರಿಗೆ ಗೊತ್ತು! ಇಂಥ ಬೃಹತ್ ಜಲಾವರಣಗಳಲ್ಲಿ ಪ್ರೇತ ಹಡಗುಗಳು ಸಂಚರಿಸುತ್ತವೆಯಂತೆ - ಊಹಾಪೋಹ.

ಈಗ ಪರಿಣಿತರ ಕೈಗೆ ಅಪಘಾತದ ಮೂಲ ಎಳೆಯೊಂದು ಸಿಕ್ಕಿತ್ತು. ಆದರೆ, ಆ ಕುರಿತ ಯಾವುದೇ ತೀರ್ಮಾನಕ್ಕೆ ಬರಲು ಬೇರೆ ಸಾಕ್ಷ್ಯಾಧಾರಗಳ ಅಗತ್ಯವಿತ್ತು - ಅದರಲ್ಲೂ ಕಣ್ಸಾಕ್ಷಿಗಳು. ಹುಡುಕಾಟ ಆರಂಭವಾಯಿತು. ಅಂದು ಅಪಘಾತದ ಅವಧಿಯಲ್ಲಿ ರಕ್ಷಣೆಗೆ ಬಂದಿದ್ದ ಜನರು ಇವರ ಗುರಿಯಾಗಿದ್ದರು. ಕೋಸ್ಟ್ ಗಾರ್ಡ್ ತನಿಖೆದಾರರು ಲಭ್ಯವಿದ್ದವರನ್ನು ವಿಚಾರಿಸಿದರು. ಆದರೆ, ಇವರ ಮುಖ್ಯಸ್ಥ ರಿಚರ್ಡ್ ಇ ವೆಲ್ಸ್ ದೃಷ್ಟಿ ಅಪಘಾತವನ್ನು ಮೊದಲು ವರದಿ ಮಾಡಿದ 'ಮೊವಿಲ್ಲ ಟಗ್ಬೊಟ್'ನ ಪ್ರಧಾನ ನಾವಿಕನ ಮೇಲಿತ್ತು.

ಆ ದಿನ ಮೊವಿಲ್ಲ ಎಂದಿನಂತೆ ಮೊಬಿಲ್ ನದಿಯಲ್ಲಿ ತನ್ನ ದೈನಂದಿನ ಸರಕು ಸಾಗಣೆಯಲ್ಲಿ ತೊಡಗಿತ್ತು. ಈ ಬಾರಿ ಅದು ಸಾವಿರಾರು ಟನ್ ಕಲ್ಲಿದ್ದಲು ಮತ್ತು ಎರಕದ ಕಬ್ಬಿಣವನ್ನು ಸಾಗಿಸುತ್ತಿತ್ತು. ಮುಂದಕ್ಕೆ ಸರಕು ತುಂಬಿದ ಆರು ದೊಡ್ಡ ದೋಣಿಗಳನ್ನು ಜೋಡಿಸಿಕೊಂಡಿತ್ತು. ಹೀಗಾಗಿ, ನಾವಿಕ ಈ ಸರಣಿ ದೋಣಿಗಳ ಮುಂಚೂಣಿಯಿಂದ 400 ಅಡಿಗಳ ಹಿಂದಿದ್ದ.

ಅಪಘಾತಕ್ಕೆ ಮೂರು ಗಂಟೆಗಳ ಮುಂಚೆ ಇದರ ನಾವಿಕ ವಿಲ್ಲೆ ಓಡಮ್, ಕೋಸ್ಟ್ ಗಾರ್ಡ್ ಕೇಂದ್ರವನ್ನು ಸಂಪರ್ಕಿಸಿ, “ಮೊಬಿಲ್ ನದಿಯ ತುಂಬಾ ಕಾವಳ ಮುಚ್ಚಿಕೊಂಡಿದೆ. ಏನೊಂದೂ ಕಾಣಿಸುತ್ತಿಲ್ಲ,” ಎಂದು ಹೇಳಿದ್ದ. ಇದಾದ ನಂತರ ಅಪಘಾತಕ್ಕೆ ಅರ್ಧ ಗಂಟೆ ಮುಂಚಿತವಾಗಿ ಮತ್ತೆ ಸಂಪರ್ಕಿಸಿ, "ನಾನೊಂದು ತಿರುವಿನಲ್ಲಿ ನನ್ನ ಟಗ್ಬೋಟನ್ನು ತಿರುಗಿಸುತ್ತಿದ್ದೇನೆ. ಆದರೆ, ನನ್ನ ರಾಡಾರ್‌ನಲ್ಲಿ, ಸಮೀಪದಲ್ಲಿಯೇ ಇನ್ನೊಂದು ಟಗ್ಬೋಟನ್ನು ಕಾಣುತ್ತಿದ್ದೇನೆ. ಮುಂದಿನ ನೋಟ ಸ್ಪಷ್ಟವಾಗುವವರೆಗೆ ಅದರ ಹಿಂದೆಯೇ ಸಾಗುತ್ತೇನೆ," ಎಂದು ಮಾತನಾಡಿದ್ದ.

Image
Alabama train crash 2

ಇದಾದ ಸ್ವಲ್ಪ ಹೊತ್ತಿನ ನಂತರ ಸಂಪರ್ಕಿಸಿ, "ನನ್ನ ಬೋಟು ನೆಲ ಹತ್ತಿದೆ," ಎಂದಿದ್ದ. ಇದಾದ ಕೆಲವೇ ಕ್ಷಣಗಳಲ್ಲಿ ಮೊವಿಲ್ಲದಿಂದ ಕರೆ ಮಾಡಿದ ಕ್ಯಾಪ್ಟನ್ ಆಂಡ್ರೂ ಸ್ಟಾಬ್ಲರ್, "ಶಿಫ್ಟ್ ಬದಲಾಗಿದೆ, ಈಗ ಟಗ್ಬೋಟಿನ ಹೊಣೆ ನನ್ನದು. ನನಗೆ ತುರ್ತಾಗಿ ಸಹಾಯ ಬೇಕಿದೆ," ಎನ್ನುತ್ತ, "ನನಗೆ ನನ್ನ ಟಗ್ಬೋಟನ್ನು ನೀರಿನೊಳಕ್ಕೆ ಎಳೆಯಲು ಸಹಾಯ ಬೇಕು. ಹತ್ತಿರದಲ್ಲಿ ಬೇರೆ ಯಾವುದಾದರೂ ಹಡಗಿದ್ದರೆ ಮಾಹಿತಿ ನೀಡಿ,” ಎಂದು ಕೇಳಿದ. ಇದಾದ ನಂತರ 2.50ಕ್ಕೆ, "ನಾನೊಂದು ಅಪಘಾತದ ಶಬ್ದವನ್ನು ಕೇಳಿದೆ. ಈ ಕಾವಳದ ನಡುವೆಯೂ ಬೆಂಕಿ ಜ್ವಾಲೆಗಳನ್ನು ಕಾಣುತ್ತಿದ್ದೇನೆ. ಭಾಗಶಃ ಅದು ನದಿಗಳ ಕೂಡು ಪ್ರದೇಶ ಇರಬಹುದು. ನನಗೆ ಏನೊಂದೂ ಹೊಳೆಯುತ್ತಿಲ್ಲ,” ಎಂದಿದ್ದ.

ಈಗ ಈ ಮಾತುಗಳು ಮತ್ತು ಸಂದರ್ಭವನ್ನು ಮತ್ತೆ ನೆನಪಿಸಿಕೊಂಡು ಅವಲೋಕಿಸಿದಾಗ ಅನೇಕ ಸಂದೇಹಗಳು ಎದ್ದು ನಿಂತವು. ಬಹಳ ಮುಖ್ಯವಾಗಿ, ಇಷ್ಟು ಹೊತ್ತು ಮಾತನಾಡಿದ ಟಗ್ಬೋಟಿನ ನಾವಿಕರ ಮಾತುಗಳು ಸತ್ಯವೇ ಆಗಿದ್ದಲ್ಲಿ, ಅಂದರೆ, ಇವರ ಟಗ್ಬೋಟ್ ಮೊಬಿಲ್ ನದಿಯಲ್ಲಿಯೇ ಇದ್ದಲ್ಲಿ, ಅಲ್ಲಿಂದ ಆರು ಮೈಲಿಗಳ ದೂರದಲ್ಲಿದ್ದ ಬೊಯು ಕೆನೊಟ್ (ಮೊಬಿಲ್‌ನ ಉಪನದಿ) ನದಿಯ ಮೇಲೆ ಸಂಭವಿಸಿದ ಅಪಘಾತದ ಸದ್ದು ಕೇಳಿಸಿದ್ದು ಹೇಗೆ ಮತ್ತು ಆ ಕಾವಳ ತುಂಬಿದ್ದ ಕಗ್ಗತ್ತಲಲ್ಲಿ ಅಷ್ಟು ದೂರದಿಂದ ಬೆಂಕಿ ಕಾಣಿಸಿದ್ದು ಹೇಗೆ?

ಒಂದರ್ಥದಲ್ಲಿ ಇದು ಅಸಾಧ್ಯ ಕಲ್ಪನೆ. ಹಾಗೊಂದು ಪಕ್ಷ ಇದು ನಿಜವೇ ಆಗಿದ್ದಲ್ಲಿ, ಆ ಟಗ್ಬೋಟ್ ಮೊಬಿಲ್ ನದಿಯಲ್ಲಿ ಇರಲಿಲ್ಲ. ಬದಲಿಗೆ ಅದು ಎರಡೂ ನದಿಗಳು ಕೂಡುವ ಜಾಗದಲ್ಲಿ ದಾರಿ ತಪ್ಪಿ ಬೊಯು ಕೆನೊಟ್ ನದಿಯಲ್ಲಿ ಮುಂದೆ ಹೋಗಿರಬೇಕು. ಕಾವಳದ ಕತ್ತಲಿನಲ್ಲಿ ಆ ಸಣ್ಣ ತಿರುವನ್ನು  ಮೊಬಿಲ್ ನದಿಯಲ್ಲಿನ ಒಂದು ತಿರುವು ಎಂದು ಭಾವಿಸಿರಬೇಕು... ತನಿಖೆದಾರರ ತಲೆ ಗೊಬ್ಬರದ ಗುಂಡಿಯಾಯಿತು. ಹೇಗೆ ಯೋಚಿಸಿದರೂ ಈ ಎರಡೂ ಘಟನೆಗಳನ್ನು ಜೋಡಿಸಿ ಅಪಘಾತದ ಮೂಲ ಎಳೆಯನ್ನು ಹೊಸೆಯಲಾಗುತ್ತಿಲ್ಲ.

ಯಾವುದಕ್ಕೂ ಒಂದು ಬಾರಿ ಮೊವಿಲ್ಲ ಕ್ಯಾಬಿನ್‌ನ ಭೌತಿಕ ತಪಾಸಣೆ ಮಾಡಿದರೆ ಹೇಗೆ ಅನ್ನಿಸಿತು. ಕ್ಯಾಬಿನ್ ಆ ವರ್ಗದ ಎಲ್ಲ ಹಡಗುಗಳಂತೆಯೇ ಇತ್ತಾದರೂ, ಎಲ್ಲ ಹಡಗುಗಳಲ್ಲಿ ಕಡ್ಡಾಯವಾಗಿ ಇರಲೇಬೇಕಾದ ಕೆಲವು ಪರಿಕರಗಳ ಕೊರತೆ ಎದ್ದು ಕಾಣುತ್ತಿತ್ತು. ಅದು ಅಂತಿಂಥ ಕೊರತೆ ಅಲ್ಲ; ಅದರ ನಾವಿಕನ ಕ್ಯಾಬಿನ್‌ನಲ್ಲಿ ಭೂಪಟ ಬಿಟ್ಟುಬಿಡಿ, ಒಂದು ದಿಕ್ಸೂಚಿ ಸಹ ಇರಲಿಲ್ಲ! ರಾಡಾರ್ ಇದೆ; ಆದರೆ, ಅದರ ಪ್ರಧಾನ ನಾವಿಕ ವಿಲ್ಲಿ ಓಡಮ್‌ಗಾಗಲೀ ಅಥವ ಆಂಡ್ರೂ ಸ್ಟಾಬ್ಲರ್ಗ್‌ಗಾಗಲೀ ಅದನ್ನು ಬಳಸಲು ಬರುವುದಿಲ್ಲ!

ಸಿಬ್ಬಂದಿಯನ್ನು ವಿಚಾರಣೆ ಮಾಡಿದಾಗ, ಹುಸಿ ನಗುತ್ತ ಕೇಳಿದ್ದೆಂದರೆ, "ಹಡಗಿನಲ್ಲಿ ಅವೆಲ್ಲ ಏಕೆ ಬೇಕು? ಒಳ್ಳೆಯ ನಾವಿಕ ಎಂದರೆ ಎರಡೂ ದಂಡೆಗಳನ್ನು ಸಮಾನ ಅಂತರದಲ್ಲಿ ಬಿಟ್ಟುಕೊಂಡು ನದಿಯ ಮಧ್ಯದಲ್ಲಿ ಹಡಗು ಓಡಿಸುವವನು ಮಾತ್ರ!” ಸ್ವತಃ ವಿಲ್ಲಿ ಓಡಮ್‌ಗೆ ರಾಡಾರ್ ಉಪಕರಣ ಆನ್ ಮಾಡಲಿಕ್ಕೇ ಬರುತ್ತಿರಲಿಲ್ಲ. ಅದನ್ನು ಆನ್ ಮಾಡಿ, ಅದರಲ್ಲಿ ಕಾಣುವ ಚಿತ್ರವನ್ನು ತೋರಿಸಿ, "ಇದು ಏನನ್ನು ಹೇಳುತ್ತದೆ?" ಎಂದು ಕೇಳಿದ್ದಕ್ಕೆ ಅವನು ತಿಳಿಯದೆಂದು ತಲೆ ಒದರಿದ. ಮತ್ತೆ ಹೌಹಾರುವ ಸರದಿ ತನಿಖಾ ತಂಡದ್ದು.

Image
Alabama train crash 3

ಈ ವೇಳೆ, ತನಿಖೆದಾರರಿಗೆ ಹಠಾತ್ತಾಗಿ ಏನೋ ಹೊಳೆದಂತಾಯಿತು. ಕೂಡಲೇ ಅವರು ಮತ್ತೆ ಮೂಲೆ ಮುಕ್ಕಾಗಿದ್ದ ಕಾಂಕ್ರೀಟ್ ಕಂಬದ ಬಳಿಗೆ ಹೋದರು. ಅವರ ತಲೆಯಲ್ಲಿ ಹುಟ್ಟಿದ್ದ ಸಂದೇಹದ ಮೂಲಕ ಅದನ್ನು ಪರಿಶೀಲಿಸಿದಾಗ ಅವರ ಊಹೆ ಸರಿ ಅನ್ನಿಸಿತು. ಕಂಬದಲ್ಲಿ ಮೂಡಿರುವ ಗುರುತು ಅರ್ಧ ಇರಬೇಕು, ಇನ್ನರ್ಧ ಭಾಗ ಅದರ ಮೇಲಿದ್ದ ಕಬ್ಬಿಣದ ತೊಲೆಯಲ್ಲಿರಬೇಕು ಅನ್ನಿಸಿತು. ನೀರಲ್ಲಿ ಮುಳುಗಿಹೋಗಿದ್ದ ಅದನ್ನು ಹೊರತಗೆಯಲಾಯಿತು. ಹೌದು, ನೂರಕ್ಕೆ ನೂರು ಅದೇ; 'T' ಗುರುತಿನ ಮೇಲ್ಭಾಗ ಅಲ್ಲಿತ್ತು. ಆದರೆ ಇವರು ಊಹಿಸಿದಂತೆಯೇ ಆಗಿರುವುದಾದಲ್ಲಿ, ಇದರ ಕುರುಹುಗಳು ಟಗ್ಬೋಟಿನಲ್ಲಿಯೂ ಇರಬೇಕಾಗಿತ್ತು.

ಕೂಡಲೇ ಕಾರ್ಯಾಚರಣೆಗಿಳಿದ ಇಲಾಖೆಯ ಸಿಬ್ಬಂದಿಗೆ, ಟಗ್ಬೋಟಿನ ಎಡಭಾಗದಲ್ಲಿ, ಸ್ಪಷ್ಟವಾಗಿ ಕಂಡಿತ್ತು. ಮುಂದುವರಿದ ಹುಡುಕಾಟದಲ್ಲಿ ಒಂದಷ್ಟು ಸಿಮೆಂಟಿನ ದಪ್ಪ-ದಪ್ಪ ಚಕ್ಕೆಗಳು ಸಿಕ್ಕವು. ಇವುಗಳೊಂದಿಗೆ, ಹಾನಿಗೊಳಗಾದ ಕಂಬದಿಂದ ತೆಳ್ಳನೆಯ ಚಕ್ಕೆಗಳನ್ನು ಕೊಯ್ದು ಎಫ್‌ಬಿಐ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಪ್ರತಿ ಕಾಂಕ್ರೀಟ್ ಮಿಶ್ರಣಕ್ಕೂ ಅದರದ್ದೇ ಆದ ಗುಣಲಕ್ಷಣಗಳಿರುತ್ತವೆ. ಪ್ರತೀ ಬಾರಿಯೂ ಜಲ್ಲಿ, ಸಿಮೆಂಟು, ನೀರಿನ ಮಿಶ್ರಣ ಒಂದು ಪ್ರತ್ಯೇಕ ಲಕ್ಷಣವನ್ನು ಪಡೆದುಕೊಂಡಿರುತ್ತದೆ. ಜೊತೆಗೆ, ಅದರಲ್ಲಿ ಬಳಸಲಾಗಿರುವ ಜಲ್ಲಿಕಲ್ಲಿನ ಲಕ್ಷಣಗಳು ಇಲ್ಲಿ ನಿರ್ಣಾಯಕ. ಎಫ್‌ಬಿಐ ಪ್ರಯೋಗಾಲಯದ ಕಾಂಕ್ರೀಟ್ ತಜ್ಞರ ಸೂಕ್ಷ್ಮ ಪರೀಕ್ಷೆಗಳು ಹೇಳಿದ್ದೆಂದರೆ, "ತೆಳುವಾಗಿ ಕತ್ತರಿಸಿದ್ದ ಕಾಂಕ್ರೀಟಿನ ಪದರ ಮತ್ತು ಮುದ್ದಯಂತೆಹ ಚಕ್ಕೆಗಳು ಒಂದೇ ಮೂಲದಿಂದ ಬಂದವು!”

ನಂತರದ ಹಂತ - ತಮ್ಮ ಮುಂದಿದ್ದ ಸಾಕ್ಷ್ಯಗಳನ್ನು ಜೋಡಿಸಿ ಘಟನೆಯನ್ನು ಮರುಸೃಷ್ಟಿಸುವುದು. ಅಂದು ಮೊವಿಲ್ಲ ಟಗ್ಬೋಟ್ ವಿಲ್ಲಿ ಓಡಮ್ ನಾವಿಕತ್ವದಲ್ಲಿ ಸಾಗುತ್ತಿದೆ. ಕವಿದ ಕಾವಳದ ನಡುವೆ ಏನೇನೂ ಕಾಣದ ಸ್ಥಿತಿಯಲ್ಲಿ ಮೊಬಿಲ್ ನದಿಯಲ್ಲಿ ಸಾಗಬೇಕಿದ್ದ ಹಡಗು, ಎರಡು ನದಿಗಳು ಕೂಡುವ ಜಾಗದಲ್ಲಿ ಬೊಯು ಕೆನೊಟ್ ನದಿಯತ್ತ ಸಾಗಿದೆ. ಅಲ್ಲಿ ಇದೊಂದು ತಿರುವು ಎಂದುಕೊಂಡು ಮುಂದೆ ಸಾಗುವಾಗ, ರೈಲ್ವೆ ಸೇತುವೆ ಕಂಡಿದೆ. ಈ ದಾರಿ ತಪ್ಪಿದ್ದ ನಾವಿಕ ಅದನ್ನು ಇನ್ನೊಂದು ಟಗ್ಬೋಟ್ ಎಂದು ಭಾವಿಸಿದ್ದಾನೆ.

ಈ ಮೊದಲು ಸಂಭಾಷಣೆಯಲ್ಲಿ ಹೇಳಿದಂತೆ, ಅದನ್ನು ಅವನು ರಾಡಾರಿನಲ್ಲಿ ಕಂಡಿಲ್ಲ. ಬದಲಿಗೆ, ನೇರವಾಗಿಯೇ ಕಂಡಿದ್ದಾನೆ. ಅದರಿಂದ ಅಂತರ ಕಾಯ್ದುಕೊಂಡು ಅದರ ಜೊತೆಯಲ್ಲಿಯೇ ಮುಂದುವರಿಯುವ ಉದ್ದೇಶದಿಂದ ತನ್ನ ಹಡಗನ್ನು ಬಲಕ್ಕೆ ತಿರುಗಿಸಿದ್ದಾನೆ. ಆಗ ಈ ಟಗ್ಬೋಟಿನ ನಡುಭಾಗ ಸೇತುವೆಯ ಕಂಬಕ್ಕೆ ಅಪ್ಪಳಿಸಿದೆ. ಆ ರಭಸಕ್ಕೆ ಕಂಬದ ಮೇಲಿದ್ದ ಉಕ್ಕಿನ ತೊಲೆ ಸರಕ್ಕನೆ ಪಕ್ಕಕ್ಕೆ ಸರಿದಿದೆ ಮತ್ತು ಅದಕ್ಕಂಟಿದ್ದ ಹಳಿಗಳು ತಿರುಚಿಕೊಂಡಿವೆ, ಆದರೆ ಮುರಿದಿಲ್ಲ. (ಮುರಿದಿದ್ದರೆ ವಿದ್ಯುತ್ ಸಂಪರ್ಕ ಕಡಿದು, ಹಸಿರು ದೀಪ ಆರಿ, ಕೆಂಪು ದೀಪ ಮೂಡುತ್ತಿತ್ತು.) ಆಗ ಹಡಗು ಓಡಿಸುತ್ತಿದ್ದ ಇನ್ನೊಬ್ಬ ನಾವಿಕ ಅವನ ಹಡಗು ನೆಲ ಹತ್ತಿದೆ ಎಂದು ಭಾವಿಸಿದ್ದಾನೆ ಮತ್ತು ಸಹಾಯ ಕೇಳಿದ್ದಾನೆ. ಆದರೆ, ಮುಂದೆ ಚಲಿಸುತ್ತಲೇ ಇದ್ದ ತನ್ನ ಹಡಗನ್ನು ಹಾಗೆಯೇ ಮುಂದುವರಿಸಿದ್ದಾನೆ. ಅಷ್ಟು ಹೊತ್ತಿಗೆ ಆಮ್ಟ್ರಾಕ್ ಅಲ್ಲಿಗೆ ಬಂದಿದೆ. ದುರಂತ ಸಂಭವಿಸಿದೆ. ಇವನು ಅದನ್ನು ಸ್ವಂತ ಕಣ್ಣುಗಳಿಂದಲೇ ನೋಡಿದ್ದಾನೆ. ಈ ಹಿಂದೆ ಹೇಳಿದಂತೆ ವರದಿ ಮಾಡಿದ್ದಾನೆ.

ಈ ಲೇಖನ ಓದಿದ್ದೀರಾ?: ವಿಧಿ ಮತ್ತು ವಿಜ್ಞಾನ | ಗುಂಡು ಹಾರಿದ್ದು ಆಕಸ್ಮಿಕವೇ ಅಥವಾ ಅವಳಿಗಾಗಿಯೇ?

ಇದೆಲ್ಲವೂ ಆಮ್ಟ್ರಾಕ್ ಈ ಉಕ್ಕಿನ ಸೇತುವೆಯನ್ನು ತಲುಪುವುದಕ್ಕೆ ಕೇವಲ ಎರಡು ನಿಮಿಷ ಮುಂಚೆ ಸಂಭವಿಸಿದೆ. ಇಲ್ಲಿ ನಡೆದಿರುವ ಯಾವುದೂ ಆ ನಾವಿಕರ ಗಮನಕ್ಕೆ ಬಂದೇ ಇಲ್ಲ. ಕಂಬಕ್ಕೆ ಡಿಕ್ಕಿ ಹೊಡೆದಿದ್ದಾಗಲೀ, ಕಂಬ ಮುರಿದ್ದಾಗಲೀ, ಹಳಿಗಳು ನುಲಿಚಿಕೊಂಡಿದ್ದಾಗಲೀ, ಹಾಗೆ ನುಲುಚಿಕೊಂಡ ಹಳಿಗಳು ತಮ್ಮ ಮೇಲೆ ರೈಲನ್ನು ಎಳೆದುಕೊಳ್ಳಲಾಗದೆ ಬದಿಗೆ ಎಸೆದದ್ದನ್ನಾಗಲೀ ಅವರು ಗಮನಿಸಿಯೇ ಇಲ್ಲ!

ಇದೆಲ್ಲ ಮುಗಿಯುವ ಹೊತ್ತಿಗೆ ವರ್ಷ ಕಳೆದುಹೋಗಿತ್ತು. ಬದುಕುಳಿದವರು ಮತ್ತು ಮೃತರ ಸಂಬಂಧಿಗಳು ಅಪಘಾತದ ಸ್ಥಳದಲ್ಲಿ ಒಟ್ಟಿಗೆ ಸೇರಿ, ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಈ ಘಟನೆಯ ನಂತರ, ಇಡೀ ಅಮೆರಿಕದಲ್ಲಿ ಪ್ರತಿ ಬೋಟಿಗೂ ನಕ್ಷೆ, ದಿಕ್ಸೂಚಿ ಹಾಗೂ ರಾಡಾರ್‌ಗಳನ್ನು ಕಡ್ಡಾಯ ಮಾಡಲಾಯಿತು. ಹಾಗೆಯೇ, ಪ್ರತಿ ನಾವಿಕನಿಗೂ ಇವನ್ನು ಅರ್ಥ ಮಾಡಿಸುವ ತರಬೇತಿಯನ್ನು ಸಹ ನೀಡಲಾಯಿತು. ವಿಲ್ಲಿ ಓಡಮ್‌ಗೆ ಶಿಕ್ಷೆಯೇನೂ ಆಗಲಿಲ್ಲ. ಆದರೆ, ಅಲ್ಲಿಂದ ಮುಂದೆ ಅವನೆಂದೂ ಹಡಗು ಓಡಿಸಲಿಲ್ಲ.

ಉಪಸಂಹಾರ

ನಿಜವಾಗಿಯೂ ಇದು ಅಪಘಾತವೇ? ಈ ರೈಲು ಆಕಸ್ಮಿಕ 33 ನಿಮಿಷ ತಡಮಾಡದೆ ಹೋಗಿದ್ದಲ್ಲಿ ಆ 47 ಮಂದಿ ಬದುಕುಳಿಯುತ್ತಿದ್ದರಲ್ಲವೇ? ಹಾಗಾದರೆ ತಪ್ಪು ಯಾರದ್ದು? ಆಮ್ಟ್ರಾಕಿನ ರೈಲು ಚಾಲಕರದ್ದೇ? ಹಾಗಾದರೆ, ಎ.ಸಿ. ಸರಿ ಮಾಡಿಸಿದ್ದು ತಪ್ಪೇ? ಅವರೇನೋ ತಡವಾಗಿ ಬಂದರು, ಆದರೆ ಟಗ್ಬೋಟ್ ಕಂಬಕ್ಕೆ ತಗುಲಿದ್ದು ತಪ್ಪಲ್ಲವೇ? ಅದು ಹೇಗೆ? ಅವರು ಅದನ್ನು ಕಂಡೇ ಇಲ್ಲವಲ್ಲ! ಇನ್ನು ಕಾವಳ? ಇದರದ್ದು ತಪ್ಪೇ? ಅದು ಹೇಗೆ ಸಾಧ್ಯ? ಅದು ನೈಸರ್ಗಿಕ ಪ್ರಕ್ರಿಯೆ! ಮತ್ತೆ?

(ವಿವಿಧ ಮೂಲಗಳಿಂದ)
ನಿಮಗೆ ಏನು ಅನ್ನಿಸ್ತು?
1 ವೋಟ್