ಗ್ರಾಹಕಾಯಣ | ಔಷಧಿ ಕಂಪನಿಗಳಿಂದ ಕಾಣಿಕೆ ಸ್ವೀಕರಿಸುವ ವೈದ್ಯರಿಗೆ ಕಾದಿದೆ ಶಿಕ್ಷೆ

Doctors

ಔಷಧಿ ಕಂಪನಿಗಳು ವೈದ್ಯರಿಗೆ ನೀಡುವ ಉಚಿತ ಕೊಡುಗೆಯ ಪರಿಣಾಮ ನೇರವಾಗಿ ಔಷಧಿಯ ಬೆಲೆಯ ಮೇಲೆ ಆಗಿ, ರೋಗಿಗಳಿಗೆ ಹೊರೆಯಾಗುವುದು ಸಹಜ. ಇದನ್ನು ತಡೆಯುವ ಬ್ರಹ್ಮಾಸ್ತ್ರ ಹೊರಬಿದ್ದಿದ್ದು, ಯಾವುದೇ ಉಚಿತ ಕೊಡುಗೆ ಸ್ವೀಕರಿಸುವ ಸರ್ಕಾರಿ ವೈದ್ಯರನ್ನು ಭ್ರಷ್ಟಾಚಾರ ಅಧಿನಿಯಮ-1988ರ ಅಡಿಯಲ್ಲೂ ಶಿಕ್ಷೆಗೆ ಗುರಿಪಡಿಸಬಹುದಾಗಿದೆ

ಔಷಧಿ ಕಂಪನಿಗಳು ತಾವು ತಯಾರಿಸುವ ಉತ್ಪಾದನೆಗಳ ವಹಿವಾಟನ್ನು ಮತ್ತು ಲಾಭವನ್ನು ಹೆಚ್ಚಿಸುವ ಉದ್ದೇಶದಿಂದ ವೈದ್ಯರ ಮನವೊಲಿಸಲು ಉಚಿತ ಕೊಡುಗೆ ನೀಡುವುದು ನಿರಂತರವಾಗಿ ನಡೆದುಬಂದಿದೆ. ಒಂದು ಕಾಲದಲ್ಲಿ ನೋಟ್ ಪ್ಯಾಡ್, ಪೆನ್, ಹೂಕುಂಡ, ಕ್ಯಾಲೆಂಡರ್ ಇತ್ಯಾದಿ ಸಣ್ಣಪುಟ್ಟ ವಸ್ತುಗಳಿಗೆ ಸೀಮಿತವಾಗಿದ್ದ ಈ ಕೊಡುಗೆಗಳು ಕ್ರಮೇಣ ಎಲ್‌ಸಿಡಿ ಟಿವಿ, ರೆಫ್ರಿಜಿರೇಟರ್, ಲ್ಯಾಪ್‌ಟಾಪ್‌ಗೆ ಬಡ್ತಿ ಪಡೆಯಿತು. ಔಷಧಿ ಮಾರುಕಟ್ಟೆ ಸಂಕೀರ್ಣಗೊಂಡು ಸ್ಪರ್ಧೆ ಹೆಚ್ಚಾದ ಹಿನ್ನೆಲೆಯಲ್ಲಿ ವೈದ್ಯರಿಗೆ ನೀಡುವ ಉಚಿತ ಕೊಡುಗೆಗಳ ಮೌಲ್ಯ ಮತ್ತು ಮಾದರಿಯನ್ನು ಬದಲಿಸುವುದು ಅನಿವಾರ್ಯವಾಯಿತು. ಪ್ರತಿಷ್ಠಿತ ಹೋಟೆಲ್ ಅಥವಾ ರೆಸಾರ್ಟ್‌ಗಳಲ್ಲಿ ಸೆಮಿನಾರ್, ಶಿಬಿರ, ವರ್ಕ್‌ಶಾಪ್ ಇತ್ಯಾದಿ ಆಯೋಜಿಸುವುದು, ತರಬೇತಿ ಹೆಸರಿನಲ್ಲಿ ವೈದ್ಯರನ್ನು ವಿದೇಶಗಳಿಗೆ ಕಳುಹಿಸುವುದು ಮತ್ತು ಅವರಿಗೆ ಕಂಪನಿಯ ಷೇರು ನೀಡುವ ಮಟ್ಟಕ್ಕೆ ಬೆಳೆದಿದೆ.

ಔಷಧಿ ತಯಾರಕರು ಮತ್ತು ವಿತರಕರು ನೀಡುವ ಉಚಿತ ಕೊಡುಗೆಯನ್ನು ವೈದ್ಯರು ಒಪ್ಪಿಕೊಳ್ಳುವುದು ಕಾನೂನುಬಾಹಿರ ಮಾತ್ರವಲ್ಲ, ಅವರೇ ಮಾಡಿಕೊಂಡಿರುವ ನೀತಿಸಂಹಿತೆಯ ಉಲ್ಲಂಘನೆಯೂ ಹೌದು. ಭಾರತೀಯ ವೈದ್ಯಕೀಯ ಪರಿಷತ್ತು 2002ರಲ್ಲಿ ರೂಪಿಸಿರುವ ನೀತಿಸಂಹಿತೆಯ ಪ್ರಕಾರ, ಐದು ಸಾವಿರ ರೂಪಾಯಿಗೆ ಮೇಲ್ಪಟ್ಟ ಮೌಲ್ಯದ ಯಾವುದೇ ಕೊಡುಗೆಯನ್ನು ಉಚಿತವಾಗಿ ಪಡೆಯುವಂತಿಲ್ಲ.

ನೀತಿಸಂಹಿತೆಯು ವೈದ್ಯರು ಒಪ್ಪಿಕೊಳ್ಳಬಾರದ ಉಚಿತ ಕೊಡುಗೆಗಳನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಿದೆ. ಮೊದಲನೆಯದು, ಔಷಧ ಕಂಪನಿ, ಮಾರಾಟಗಾರರು ಅಥವಾ ಔಷಧಿ ಕಂಪನಿಯ ಪ್ರತಿನಿಧಿಗಳಿಂದ ವೈದ್ಯರು ಉಚಿತ ಕೊಡುಗೆಯನ್ನು ಸ್ವೀಕರಿಸುವಂತಿಲ್ಲ. ಎರಡನೆಯದು, ಪ್ರಯಾಣ ವೆಚ್ಚಕ್ಕೆ ಸಂಬಂಧಿಸಿದ್ದು. ವೈದ್ಯರು ದೇಶದ ಒಳಗೆ ಅಥವಾ ಹೊರಗೆ ಪ್ರಯಾಣ ಮಾಡುವುದಕ್ಕೆ ಔಷಧಿ ಕಂಪನಿ ನೀಡುವ ಉಚಿತ ಟಿಕೆಟ್ ಒಪ್ಪಿಕೊಳ್ಳುವಂತಿಲ್ಲ. ಇದು ವೈದ್ಯರಿಗೆ ಮಾತ್ರವಲ್ಲ, ಅವರ ಕುಟುಂಬದ ಸದಸ್ಯರಿಗೆ ಸಹ ಅನ್ವಯಿಸುತ್ತದೆ. ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಸೆಮಿನಾರ್, ವರ್ಕಶಾಪ್ ಇತ್ಯಾದಿ ಕಾರ್ಯಕ್ರಮಗಳಲ್ಲಿ ವೈದ್ಯರು ಔಷಧ ಕಂಪನಿಗಳ ಖರ್ಚಿನಲ್ಲಿ ಭಾಗವಹಿಸುವಂತಿಲ್ಲ. ಮೂರನೆಯದಾಗಿ, ವೈದ್ಯರಾಗಲೀ ಅಥವಾ ಅವರ ಕುಟುಂಬದ ಸದಸ್ಯರಾಗಲೀ, ಯಾವುದೇ ಸಂದರ್ಭದಲ್ಲೂ ಔಷಧಿ ಕಂಪನಿಯ ಖರ್ಚಿನಲ್ಲಿ ಹೋಟೆಲ್/ ರೆರ್ಸಾರ್ಟ್‌ನಲ್ಲಿ ತಂಗುವಂತಿಲ್ಲ. ಕಡೆಯದಾಗಿ, ಔಷಧಿ ಕಂಪನಿಗಳು ನೀಡುವ ಹಣ ಅಥವಾ ಇನ್ಯಾವುದೇ ಆರ್ಥಿಕ ಸೌಲಭ್ಯವನ್ನು ಪಡೆಯುವಂತಿಲ್ಲ. ವೈದ್ಯಕೀಯ ವಿಷಯದಲ್ಲಿ ಅಧ್ಯಯನ ಮಾಡುವುದಕ್ಕೆ ಆರ್ಥಿಕ ಸಹಾಯ ಪಡೆಯುವ ಅವಕಾಶವಿದ್ದರೂ, ಅದನ್ನು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯ ಮೂಲಕ, ನಿಯಮದ ಅನುಸಾರ ಪಡೆಯಬಹುದು.

Image
ಸಾಂದರ್ಭಿಕ ಚಿತ್ರ

ನೀತಿಸಂಹಿತೆಯನ್ನು ಉಲ್ಲಂಘಿಸಿದ ವೈದ್ಯರ ಸದಸ್ಯತ್ವವನ್ನು ಮೂರು ತಿಂಗಳಿಂದ ಒಂದು ವರ್ಷದವರೆಗೆ ರದ್ದುಗೊಳಿಸಬಹುದಾಗಿದೆ. ಈ ಅವಧಿಯಲ್ಲಿ ವೈದ್ಯರು ವೈದ್ಯಕೀಯ ವೃತ್ತಿ ನಡೆಸುವಂತಿಲ್ಲ. ಆದರೆ, ಈ ರೀತಿ ರದ್ದುಗೊಳಿಸಿದ ಪ್ರಸಂಗ ವಿರಳ. ತಪ್ಪಿತಸ್ಥ ವೈದ್ಯರ ಪರವಾನಗಿ ರದ್ದಾಗಿದ್ದರೂ, ಆ ವಿಷಯ ಸಾರ್ವಜನಿಕರಿಗೆ ತಿಳಿಯವುದು ಅಪರೂಪ. ಹೀಗಾಗಿ, ಔಷಧಿ ಕಂಪನಿಗಳು ಮತ್ತು ವೈದ್ಯರ ನಡುವಿನ ಈ ಕಾನೂನುಬಾಹಿರ ವ್ಯವಹಾರ ನಡೆಯುತ್ತಲೇ ಇದೆ. 

ಔಷಧಿ ಕಂಪನಿಗಳ ಪ್ರಭಾವ ತಡೆಗಟ್ಟಲು ನೀತಿಸಂಹಿತೆ ವಿಫಲವಾಗಿದೆ ಎಂಬುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸದೀಯ ಸ್ಥಾಯಿ ಸಮಿತಿ ತನ್ನ 45ನೇ ವರದಿಯಲ್ಲಿ ಒಪ್ಪಿಕೊಂಡಿದೆ. ಔಷಧಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ವೈದ್ಯಕೀಯ ಪರಿಷತ್ತಿಗೆ ಅಧಿಕಾರವಿಲ್ಲದ ಕಾರಣ ಕೇಂದ್ರ ಸರ್ಕಾರವು ಭಾರತೀಯ ಔಷಧಿ ನಿಯಂತ್ರಕರು ಮತ್ತು ಆದಾಯ ತೆರಿಗೆ ಇಲಾಖೆಯು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿತ್ತು. ವೈದ್ಯಕೀಯ ಪರಿಷತ್ತಿನ ನಿಯಮವನ್ನು ಉಲ್ಲಂಘಿಸುವ ಔಷಧಿ ಕಂಪನಿಗಳ ಪರವಾನಗಿ ರದ್ದುಗೊಳಿಸುವುದು ಮತ್ತು ವೈದ್ಯರಿಗೆ ನೀಡುವ ಕೊಡುಗೆಯ ಮೊತ್ತಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬಾರದೆಂದು ಸಹ ಸಮಿತಿ ಸರ್ಕಾರಕ್ಕೆ ಸೂಚಿಸಿತ್ತು. ಈಗ ಆದಾಯ ತೆರಿಗೆ ಇಲಾಖೆ ಮತ್ತು ಸುಪ್ರೀಂ ಕೋರ್ಟ್ ಈ ಶಿಫಾರಸುಗಳಿಗೆ ಕಾನೂನಿನ ರೂಪ ನೀಡಿದೆ.

ಈ ಲೇಖನ ಓದಿದ್ದೀರಾ?: ಗ್ರಾಹಕಾಯಣ | ಜಿಲ್ಲಾಧಿಕಾರಿಗಳ ಹೆಗಲಿಗೆ ಗ್ರಾಹಕ ಸಂರಕ್ಷಣೆಯ ಅಧಿಕೃತ ಜವಾಬ್ದಾರಿ

ಔಷಧಿ ಕಂಪನಿಯೊಂದು ತನ್ನ ಜಿನ್ಕೋವಿಟ್ (Zincovit) ಎಂಬ ಆರೋಗ್ಯ ವರ್ಧಕದ ಬಗ್ಗೆ ಜಾಗೃತಿ ಉಂಟುಮಾಡಲು ಸಭೆ, ಶಿಬಿರ ಇತ್ಯಾದಿ ಆಯೋಜಿಸಲು ತಗಲುವ ವೆಚ್ಚ, ಚಿನ್ನದ ನಾಣ್ಯಗಳು, ಎಲ್‌ಸಿಡಿ ಟಿವಿ, ರೆಫ್ರಿಜಿರೇಟರ್, ಲ್ಯಾಪ್‌ಟಾಪ್ ಇತ್ಯಾದಿಯನ್ನು ವೈದ್ಯರಿಗೆ ಹಂಚಲು ಸುಮಾರು ಐದು ಕೋಟಿ ರೂಪಾಯಿ ಖರ್ಚು ಮಾಡಿತ್ತು. ಈ ಮೊತ್ತವನ್ನು ‘ವ್ಯವಹಾರಿಕ ವೆಚ್ಚ’ ಎಂದು ಒಟ್ಟು ವೆಚ್ಚದಲ್ಲಿ ಸೇರಿಸಿ, ಅದರ ಮೇಲೆ ಆದಾಯ ತೆರಿಗೆ ವಿನಾಯಿತಿಯನ್ನು ಕೋರಿತ್ತು. ಆದರೆ, ಕೇಂದ್ರ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಔಷಧಿ ಕಂಪನಿಗಳು ನೀಡುವ ಉಚಿತ ಕೊಡುಗೆಗಳ ವೆಚ್ಚವು ಆದಾಯ ತೆರಿಗೆ ವಿನಾಯಿತಿಗೆ ಅರ್ಹವಲ್ಲ ಎಂದು ತಿಳಿಸಿತ್ತು. ಅದರ ಪ್ರಕಾರ, ಆದಾಯ ತೆರೆಗೆ ಆಯುಕ್ತರು ಈ ಮೊತ್ತಕ್ಕೆ ತೆರಿಗೆ ನೀಡಬೇಕೆಂದು ಆದೇಶಿಸಿದರು. ವೈದ್ಯಕೀಯ ಪರಿಷತ್ತಿನ ನೀತಿಸಂಹಿತೆ ಮತ್ತು ನಿಯಮ ಔಷಧಿ ಕಂಪನಿಗಳಿಗೆ ಅನ್ವಯಿಸುವುದಿಲ್ಲ ಎಂಬುದು ಔಷಧಿ ಕಂಪನಿಯ ವಾದವಾಗಿತ್ತು. 

ಆದಾಯ ತೆರಿಗೆ ಇಲಾಖೆಯನ್ನು ಪ್ರತಿನಿಧಿಸಿದ ವಕೀಲರು, "ಔಷಧಿ ಕಂಪನಿಗಳು ವೈದ್ಯರಿಗೆ ಉಚಿತ ಕೊಡುಗೆ ನೀಡಿದ್ದಕ್ಕೆ ಕಂಪನಿಯನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲದಿದ್ದರೂ, ಆ ಮೊತ್ತ ‘ಕಾನೂನುಬಾಹಿರ’ವಾಗಿದ್ದು, ಅದಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿಗೆ ಅರ್ಹವಲ್ಲ," ಎಂದು ವಾದ ಮಂಡನೆ ಮಾಡಿದರು. "ಔಷಧ ಕಂಪನಿಗಳು ವೈದ್ಯರಿಗೆ ನೀಡುವ ಉಚಿತ ಕೊಡುಗೆ ಇತ್ಯಾದಿ ನೇರವಾಗಿ ಔಷಧಿಯ ಬೆಲೆಯ ಮೇಲೆ ಪ್ರಭಾವ ಬೀರುವುದು ಹೆಚ್ಚಿ, ರೋಗಿಗಳು ಔಷಧಿಗೆ ಹೆಚ್ಚು ಹಣ ನೀಡಬೇಕಾಗುತ್ತದೆ. ಔಷಧಿ ಕಂಪನಿಗಳು ನೀಡುವ ಯಾವುದೇ ಉಚಿತ ಕೊಡುಗೆ ಅಥವಾ ಸೌಲಭ್ಯವನ್ನು ಸ್ವೀಕರಿಸುವ ಸರ್ಕಾರಿ ವೈದ್ಯರನ್ನು ವೈದ್ಯಕೀಯ ಪರಷತ್ತಿನ ನೀತಿಸಂಹಿತೆ ಮಾತ್ರವಲ್ಲ, ಭ್ರಷ್ಟಾಚಾರ (ಪ್ರತಿಬಂಧಕ) ಅಧಿನಿಯಮ-1988ರ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬಹುದಾಗಿದೆ," ಎಂದರು.

Image
ಸುಪ್ರೀಂ ಕೋರ್ಟ್

ರೋಗಿಯ ದೃಷ್ಟಿಯಲ್ಲಿ ವೈದ್ಯರು ನೀಡುವ ಪ್ರಿಸ್ಕ್ರಿಪ್ಷನ್ (ಸಲಹೆ) ಅಂತಿಮ. ಅದರಲ್ಲಿ ಸೂಚಿಸಿರುವ ಔಷಧಿಯ ಬಗ್ಗೆ ರೋಗಿಗಳು ಸಂಪೂರ್ಣ ವಿಶ್ವಾಸ ಹೊಂದಿದ್ದು, ಅದು ಎಷ್ಟೇ ದುಬಾರಿ ಬೆಲೆಯದಾಗಲೀ - ಅನ್ಯಮಾರ್ಗವಿಲ್ಲದೆ ಖರೀದಿಸುತ್ತಾರೆ ಮತ್ತು ಸೇವಿಸುತ್ತಾರೆ. ಔಷಧ ಕಂಪನಿಗಳು ನೀಡುವ ಉಚಿತ ಕೊಡುಗೆಗಳು ವಾಸ್ತವವಾಗಿ ‘ಉಚಿತ’ವಲ್ಲ. ಅದರ ಮೊತ್ತವನ್ನು ಔಷಧಿಯ ಬೆಲೆಗೆ ಸೇರಿಸಲಾಗುತ್ತದೆ. "ಮಾರುಕಟ್ಟೆಯಲ್ಲಿ ಉತ್ತಮ ಮಟ್ಟದ ಗುಣವಾಚಕ (ಜೆನೆರಿಕ್) ಔಷಧಿಗಳು ಲಭ್ಯವಿದ್ದರೂ, ವೈದ್ಯರು ಔಷಧಿ ಕಂಪನಿಯಿಂದ ಪಡೆದಿರುವ ಉಚಿತ ಕೊಡುಗೆ ಮತ್ತು ಸೌಲಭ್ಯಗಳ ಪ್ರಭಾವಕ್ಕೆ ಒಳಗಾಗಿ, ಹೆಚ್ಚಿನ ಬೆಲೆಯ ಬ್ರಾಂಡೆಡ್ ಔಷಧಿಗಳನ್ನು ಸೇವಿಸುವಂತೆ ಸಲಹೆ ಕೊಡುತ್ತಾರೆ. ಹೀಗಾಗಿ, ರೋಗಿಗಳು ಅನವಶ್ಯವಾಗಿ ಹೆಚ್ಚಿನ ಬೆಲೆ ನೀಡಬೇಕಾಗಿದೆ," ಎಂದು ನ್ಯಾಯಾಲಯ ತನ್ನ ಟಿಪ್ಪಣಿಯಲ್ಲಿ ಹೇಳಿದೆ. ಜೊತೆಗೆ, ನ್ಯಾಯಾಲಯವು ಅಮೆರಿಕದಲ್ಲಿರುವ ಕಾನೂನುಗಳನ್ನೂ ಉಲ್ಲೇಖಿಸಿದೆ.

ಅಮೆರಿಕದ ‘ಅಫರ್ಡಬಲ್ ಕೇರ್ ಅಧಿನಿಯಮ-2010'ರ ಪ್ರಕಾರ, ಔಷಧಿ ಕಂಪನಿಗಳು ವೈದ್ಯರಿಗೆ ಮಾತ್ರವಲ್ಲ, ಇತರೆ ಅಧ್ಯಯನ ಸಂಸ್ಥೆಗಳು ಮತ್ತು ಸಂಘ-ಸಂಸ್ಥೆಗಳಿಗೆ ನೀಡುವ ಮೊತ್ತದ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕಾದ ಕಾರಣ, ಖರ್ಚು-ವೆಚ್ಚದ ವಿಷಯದಲ್ಲಿ ಪಾರದರ್ಶಕತೆ ಇದೆ.

ಜೊತೆಗೆ, ಜೆನೆರಿಕ್ ಔಷಧಿಗಳ ಬಗ್ಗೆಯೂ ನ್ಯಾಯಾಲಯ ಗಮನ ಹರಿಸಿದೆ. ಅಮೆರಿಕದ ಆರೋಗ್ಯ ಇಲಾಖೆ 2018ರಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ, ವೈದ್ಯರು ಜೆನೆರಿಕ್ ಔಷಧಗಳನ್ನು ಸಲಹೆ ಮಾಡಿದ್ದರೆ ರೋಗಿಗಳಿಗೆ ಸುಮಾರು 600 ದಶಲಕ್ಷ ಡಾಲರ್ ಉಳಿತಾಯವಾಗುತ್ತಿತ್ತು ಎಂದು ಅಂದಾಜು ಮಾಡಿದೆ. ವೈದ್ಯರು ಉಚಿತ ಕೊಡುಗೆ ಮತ್ತು ಇತರೆ ಸೌಲಭ್ಯಗಳನ್ನು ಒಪ್ಪಿಕೊಳ್ಳುವುದು ಹೇಗೆ ಕಾನೂನುಬಾಹಿರವೋ ಅದೇ ರೀತಿ ಅದನ್ನು ನೀಡುವುದು ಸಹ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಿದೆ. ಒಟ್ಟಾರೆ, ಔಷಧಿ ಕಂಪನಿ ಮತ್ತು ವೈದ್ಯರ ನಡುವಿನ ನಡುವಿನ ಅನುಚಿತ ವ್ಯವಹಾರಕ್ಕೆ ಸುಪ್ರೀಂ ಕೋರ್ಟ್ ಕಡಿವಾಣ ಹಾಕಿದೆ. ಔಷಧಿ ಕಂಪನಿಗಳು ತಮ್ಮ ಸರಕುಗಳ ಮಾರಾಟವನ್ನು ಹೆಚ್ಚಿಸಿಕೊಳ್ಳಲು ವೈದ್ಯರಿಗೆ ನೀಡುವ ಉಚಿತ ಕೊಡುಗೆ ಮತ್ತು ಸೌಲಭ್ಯಗಳನ್ನು ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಪ್ರಶ್ನಿಸಬೇಕಾಗುತ್ತದೆ. ಕಾರಣ - ಉಚಿತ ಕೊಡುಗೆಗಳಿಗೆ ತೆರಿಗೆಗೆ ವಿನಾಯಿತಿ ನೀಡಿದರೆ, ಅದರಿಂದ ಪೋಲಾಗುವುದು ಸಾರ್ವಜನಿಕರ ಹಣವೇ.

ನಿಮಗೆ ಏನು ಅನ್ನಿಸ್ತು?
1 ವೋಟ್