ಮೊಗೆದಷ್ಟೂ ಮಾತು | ಯಾವುದೇ ಸಿನಿಮಾ ಜಗತ್ತಿನಲ್ಲಿ ಹುಡುಕಿದರೂ ನಿಮಗೊಬ್ಬಳು 'ಯೂನಿಟ್ ಹುಡುಗಿ' ಸಿಗಲಾರಳು!

Trupthi Abhikar 1

ಒಮ್ಮೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ, ನಿರ್ದೇಶಕರೊಬ್ಬರಿಂದ ಕೆಲಸಕ್ಕೆ ಕರೆ ಬಂದಿತ್ತು.  ಚಿತ್ರದ ಕತೆಯನ್ನು ಚರ್ಚಿಸಲು 'ಕಾಫೀ ಡೇ'ನಲ್ಲಿ ಭೇಟಿಯಾಗಿದ್ದೆ. ಮಾತನಾಡಿದಷ್ಟೂ ಸಮಯ ಚಿತ್ರರಂಗದಲ್ಲಿನ ಬದ್ಧತೆ, ಹೊರಾಂಗಣ ಚಿತ್ರೀಕರಣಕ್ಕೆ ಹೋದಾಗ ಅವರೊಂದಿಗೆ ಕೊಠಡಿಯಲ್ಲಿ ಜೊತೆಗಿರಬೇಕೆಂಬುದನ್ನು ಹೇಳಿದರೇ ವಿನಾ ಕತೆಯ ಬಗ್ಗೆ ಒಂದೂ ಮಾತಿಲ್ಲ!

ಸಿನಿಮಾ ರಂಗದಲ್ಲಿ ಮೊದಲಿಗಿಂತ ಹೆಚ್ಚು ಮಂದಿ ಹೆಣ್ಣುಮಕ್ಕಳು ಕಾಣಿಸಿಕೊಂಡ ತಕ್ಷಣ ಲಿಂಗ ತಾರತಮ್ಯ ಮುಗಿದ ಅಧ್ಯಾಯವೇನೂ ಅಲ್ಲ. ಹಲವು ಮಂದಿ ಸ್ತ್ರೀಯರು ತಂತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದರೂ ಅಸ್ತಿತ್ವಕ್ಕಾಗಿ ನಾನಾ ಬಗೆಯ ಹೋರಾಟ ಈಗಲೂ ಅನಿವಾರ್ಯ. ಸಂಕಲನ, ಛಾಯಾಗ್ರಹಣ, ನಿರ್ವಹಣೆ, ನೃತ್ಯ ಸಂಯೋಜನೆ, ಕಲಾ ನಿರ್ದೇಶನ ಮೊದಲಾದ ವಿಭಾಗಳಲ್ಲಿ ಸ್ತ್ರೀಯರಿದ್ದರೂ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ನಾವು ದೈಹಿಕವಾಗಿ ಶಕ್ತರಲ್ಲವೆಂಬ ಕಾರಣಕ್ಕೆ ಸುರಕ್ಷಿತ ವಿಭಾಗವನ್ನು ಆಯ್ದುಕೊಳ್ಳುತ್ತಿದ್ದೇವೆಯೇ? ಈ ಪ್ರಶ್ನೆ ಏಕೆಂದರೆ, ಪ್ರಪಂಚದ ಯಾವುದೇ ಸಿನಿಮಾ ಜಗತ್ತಿನಲ್ಲಿ ಹುಡುಕಿದರೂ ನಿಮಗೊಬ್ಬಳು 'ಟ್ರಾಕ್ ಆಪರೇಟರ್ ಸ್ಪಾಟ್ ಗರ್ಲ್' (ಯೂನಿಟ್ ಹುಡುಗಿ) ಸಿಗಲಾರಳು. ಕಡಿಮೆ ಸಂಭಾವನೆ, ನಿರ್ದಿಷ್ಟ ಸಮಯವಿಲ್ಲದ ಕೆಲಸ, ಗೊತ್ತಿದ್ದೂ ಗೊತ್ತಿಲ್ಲದಂತೆ ಸಹಿಸಿಕೊಳ್ಳಬೇಕಾದ ಲೈಂಗಿಕ ಕಿರುಕುಳಗಳು, ಸಣ್ಣ ಬಜೆಟ್‍ನ ಚಿತ್ರಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ... ಹೀಗೆ, ಕಾರಣಗಳು ಹಲವು. ಎಲ್ಲವನ್ನೂ ಮೀರಿ ಈ ಕ್ಷೇತ್ರದಲ್ಲಿ ಸಾಧಿಸಿದ್ದಾದರೆ, ವರ್ಷಕ್ಕೊಮ್ಮೆ ಬರುವ ಮಹಿಳಾ ದಿನಾಚರಣೆಯಂದು ಪುರಸ್ಕಾರ. ಮತ್ತೆ ಹೆಣ್ಣುಮಕ್ಕಳು ನೆನಪಾಗಲು ಮುಂದಿನ ಮಹಿಳಾ ದಿನಾಚರಣೆವರೆಗೆ ಕಾಯಬೇಕು. ಈ ನಡುವಿನ ಕಾಲದುದ್ದಕ್ಕೂ ಮತ್ತದೇ ಹೋರಾಟ.

ಸಹ ನಿರ್ದೇಶನಕ್ಕಲ್ಲದೆ, ಹೊರ ರಾಜ್ಯದಿಂದ ಬಂದ ನಟಿಯರಿಗೆ ಅನುವಾದಕಿಯಾಗಿ ಅಥವಾ ಸೆಟ್‍ನಲ್ಲಿ ನಟಿಯರಿಗೆ ಜೊತೆಗಾರಳಾಗಿ ಇರುವ ಕೆಲಸಕ್ಕೂ ಕರೆ ಬಂದಿದೆ ನನಗೆ. ಇಷ್ಟವಿಲ್ಲದಿದ್ದರೂ, ಸೆಟ್‌ನಲ್ಲಿ ಕಲಿಯುವ ಅವಕಾಶದ ಕಾರಣಕ್ಕೆ ಒಪ್ಪಿಕೊಂಡರೂ, ಸಂಭಾವನೆ ವಿಷಯಕ್ಕೆ ಬಂದಾಗ ಮತ್ತೆ ಚೌಕಾಸಿ ಮ್ಯಾನೇಜರ್‌ಗಳ ಸಿದ್ಧ ಉತ್ತರ: "ಮೇಡಂ ಏನೂ ಕೆಲ್ಸ ಇಲ್ಲ. ಆರಾಮದ ಕೆಲ್ಸ... ಹಿರೋಯಿನ್ ಜೊತೆಗಿದ್ದು ಅವ್ರಿಗೆ ಸೆಟ್‍ನಲ್ಲಿ ಕಂಫರ್ಟ್ ಫೀಲ್ ಮಾಡಿಸೋದಷ್ಟೇ. ಯಾಕಂದ್ರೆ, ಅವ್ರ ಜೊತೆಗೆ ಮಮ್ಮಿ ಬರ್ತಾ ಇಲ್ಲ. ನೋಡಿ, ನೀವು ಕೇಳುವಷ್ಟು ಪೇಮೆಂಟ್‍ಗೆ ಬಜೆಟ್ ಇಲ್ಲ. ಕಡಿಮೆ ಮಾಡಿಕೊಳ್ಳಿ...” ಆಗೆಲ್ಲ ಆ ಮ್ಯಾನೇಜರ್‌ನನ್ನು ನಾನು ಕೇಳೋದಿದೆ: "ಕೆಲಸದ ಸ್ಥಳಗಳಲ್ಲಿ ಸೆಕ್ಯೂರ್ ಫೀಲ್ ಮಾಡಿಸೋ ಜವಾಬ್ದಾರಿ ಚಿತ್ರತಂಡದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯದಲ್ಲವೇ? ಹಾಗಾದರೆ, ನಿಮ್ಮ ತಂಡದ ಮೇಲೆ ಅವರಿಗೆ ನಂಬಿಕೆಯಿಲ್ಲ ಎಂದಾಯಿತಲ್ಲ? ಅಷ್ಟು ಆರಾಮದ ಕೆಲ್ಸ ಅಂದ್ರೆ, ಸೀರೆ ಉಟ್ಟು ನೀವೇ ಹಿರೋಯಿನ್‍ಗೆ ಟೆಂಪರರಿ ಮಮ್ಮಿ ಆಗ್ಬೋದಲ್ಲ? ಯೋಚನೆ ಮಾಡಿ, ಮ್ಯಾನೇಜರ್ ಕೆಲಸದ ಸಂಭಾವನೆ ಜೊತೆಗೆ, ನಾಯಕ ನಟಿಯ ಮಮ್ಮಿಯ ಪೇಮೆಂಟ್ ಕೂಡ ನಿಮಗೇ ಸಿಗುತ್ತೆ...”

Image
Trupthi Abhikar 2

ಸಿನಿಮಾ ನಿರ್ಮಿಸುವ ಮಂದಿಗೆ, ಪ್ರತೀ ದಿನ ತಮ್ಮ ಜೊತೆಗೇ ಚಿತ್ರತಂಡದಲ್ಲಿ ಕೆಲಸ ಮಾಡುವ ಮಹಿಳಾ ತಂತ್ರಜ್ಞರಿಗೆ ಸುರಕ್ಷಿತ, ಗೌರವಯುತ ವಾತಾವರಣ ಕಲ್ಪಿಸುವ ಗಂಭೀರ ಆಲೋಚನೆಯೇ ಬಾರದಿರುವುದು ವಿಪರ್ಯಾಸ. ಒಂದೋ, ಎರಡೋ ಸಿನಿಮಾಗಳಲ್ಲಿ ಕೆಲಸ ಮಾಡಿ ಹುಡುಗಿಯರು ಸಹಾಯಕರ ಕೆಲಸ ಬಿಟ್ಟು ಹೋಗಲು ಮತ್ತೇನು ಕಾರಣವಿದ್ದೀತು ಹೇಳಿ? ಅವಶ್ಯಕತೆ ಇದ್ದಾಗ ಸಹಾಯಕರು ಬೇಕು, ಆದರೆ ಸಮಸ್ಯೆಗೆ ಪರಿಹಾರವಿಲ್ಲ. ಹಿರೋಯಿನ್‍ಗಳ ಜೊತೆ ಸೆಟ್‍ಗೆ ಬರುವ ಎಷ್ಟೋ ತಂದೆ-ತಾಯಂದಿರನ್ನು ನೋಡಿದ್ದೇನೆ; ಆದರೆ, ಹೀರೋಗಳ ಜೊತೆ ಬಂದ ತಂದೆ-ತಾಯಿಯನ್ನು ನಾನಂತೂ ನೋಡಿಲ್ಲ. ಯೋಚಿಸಬೇಕಾದ ವಿಷಯವಲ್ಲವೇ ಇದು?

ಒಮ್ಮೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ, ನಿರ್ದೇಶಕರೊಬ್ಬರಿಂದ ಕೆಲಸಕ್ಕೆ ಕರೆ ಬಂದಿತ್ತು.  ಚಿತ್ರದ ಕತೆಯನ್ನು ಚರ್ಚಿಸಲು 'ಕಾಫೀ ಡೇ'ನಲ್ಲಿ ಭೇಟಿಯಾಗಿದ್ದೆ. ಮಾತನಾಡಿದಷ್ಟೂ ಸಮಯ ಚಿತ್ರರಂಗದಲ್ಲಿನ ಬದ್ಧತೆಗಳು, ಹೊರಾಂಗಣ ಚಿತ್ರೀಕರಣಕ್ಕೆ ಹೋದಾಗ ಅವರೊಂದಿಗೆ ಕೊಠಡಿಯಲ್ಲಿ ಜೊತೆಗಿರಬೇಕೆಂಬುದನ್ನು ವಿವರಿಸಿದರೇ ವಿನಾ ಕತೆಯ ಬಗ್ಗೆ ಒಂದೇ ಒಂದು ಮಾತಿಲ್ಲ! ರಾತ್ರಿ ಮೊಬೈಲ್‍ಗೆ ಸಂದೇಶ ಕಳುಹಿಸಿದ್ದರು, "ನಿಮ್ಮ ಚಾರ್ಜ್ ಎಷ್ಟು?” ನನ್ನಿಂದ ಉತ್ತರ ಹೋಗಿದ್ದು ಹೀಗೆ: "ಯೂ ಕಾಂಟ್ ಅಫೋರ್ಡ್ ಮೀ ಸರ್. ನಿಮ್ಮ ಚಿತ್ರಕ್ಕೆ ಶುಭವಾಗಲಿ." ಇತ್ತೀಚೆಗೆ ಯಾವುದೋ ವೇದಿಕೆಯಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ್ದ ವೀಡಿಯೊ ಕಳುಹಿಸಿದ್ದರು. ಲೈಕ್ ಕಳುಹಿಸಿ ಸುಮ್ಮನಾದೆ. ಒಂದೆರಡು ಕೆಟ್ಟ ಅನುಭವವಾಗಿದೆ ಎಂದಾಕ್ಷಣ ಎಲ್ಲರೂ ಕೆಟ್ಟವರಲ್ಲ. ನನ್ನ ಸಿನಿಮಾ ಪಯಣದಲ್ಲಿ ಪ್ರೋತ್ಸಾಹಿಸಿ, ಕಲಿಸಿ, ಬೆಂಬಲಿಸಿದವರ ಸಂಖ್ಯೆ ದೊಡ್ಡದು. ಅದಕ್ಕಾಗಿ ಸದಾ ಋಣಿ ನಾನು.

Image
Trupthi Abhikar 3

ಕೆಲವೊಂದು ಚಿತ್ರಗಳು ಸ್ಕ್ರಿಪ್ಟ್ ಹಂತದಲ್ಲಿರುವಾಗ ಕತೆಯನ್ನು ಚರ್ಚಿಸಲು ನಿರ್ಮಾಪಕರು ಯಾವುದಾದರೊಂದು ಲಾಡ್ಜ್‌ನಲ್ಲಿ ರೂಮ್ ಹಾಕಿಕೊಡುವುದು ಎಷ್ಟೋ ವರ್ಷಗಳಿಂದ ನಡೆದುಬಂದಿರುವ ಕ್ರಮ. ಎಲ್ಲವೂ ಫೈನಲ್ ಆದ ನಂತರ ಆಫೀಸ್ ಮಾಡಲಾಗುತ್ತದೆ. ಪುರುಷರಷ್ಟು ಸಲೀಸಾಗಿ ಸ್ತ್ರೀಯರಿಗೆ ಲಾಡ್ಜ್‌ಗೆ ಹೋಗಿ ಕತೆ ಚರ್ಚಿಸಲು ಸಾಧ್ಯವಾಗದು. ಅಲ್ಲಿಂದ ಹೊರಬರುವಾಗ ಸಮಾಜ ನಮ್ಮನ್ನು ನೋಡುವ ಮುಜುಗರದಿಂದ ತಪ್ಪಿಸಿಕೊಳ್ಳುವುದೇ ಯಾತನೆ. ತಮಿಳು, ಮಲಯಾಳಂ ಚಿತ್ರತಂಡಗಳ ಜೊತೆ ಕೆಲಸ ಮಾಡುವಾಗೆಲ್ಲ, ಅವರನ್ನು 'ಕಾಫೀ ಡೇ'ಗೆ ಕರೆಯುವುದೇ ಇಂತಹ ಮುಜುಗರಗಳಿಂದ ತಪ್ಪಿಸಿಕೊಳ್ಳಲು. ಹೊರರಾಜ್ಯಗಳ ಎಷ್ಟೋ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಸುರಕ್ಷತೆ, ಸಮಾಜ ಅಂತೆಲ್ಲ ಯೋಚಿಸಿ ನಿರಾಕರಿಸಿದಾಗೆಲ್ಲ ಹೀಗೆ ಯೋಚಿಸಿದ್ದಿದೆ; ಹೆಣ್ಣು ಅನ್ನುವ ಕಾರಣಕ್ಕೆ ನನ್ನ ಅವಕಾಶಗಳನ್ನು ಕಿತ್ತುಕೊಳ್ಳುವ ಹಾಗಿದ್ದರೆ ನಾ ಲಿಂಗ ಬದಲಾವಣೆ ಆಪರೇಷನ್‍ಗೆ ರೆಡಿ. ಆಗಲಾದರೂ ಜನರ ದೃಷ್ಟಿಕೋನ ಬದಲಾದೀತೇ?

ಎಷ್ಟೋ ವರ್ಷಗಳ ಸತತ ಪರಿಶ್ರಮ, ಪ್ರತಿಭೆಯಿಂದ ನಮ್ಮನ್ನು ನಾವು ಸಾಬೀತು ಮಾಡಿಕೊಂಡು ಉನ್ನತ ಸ್ಥಾನಕ್ಕೆ ತಲುಪಿದರೂ, ಪುರುಷ ಪ್ರಾಬಲ್ಯವಿರುವ ಸ್ಥಳಗಳಲ್ಲಿ ಕೆಲಸ ಮಾಡುವಾಗ, ಅವರ ಅಹಂಗೆ ಘಾಸಿ ಆಗದಂತೆ ಎಚ್ಚರ ವಹಿಸಬೇಕಾಗುತ್ತದಲ್ಲ? ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಸಹಾಯಕ ಹುಡುಗರು ನಿರ್ದೇಶಕರಿಂದ, “ಅಮ್ಮ... ಅಕ್ಕ..." ಇತ್ಯಾದಿ ಬೈಗುಳ ಕೇಳಿಸಿಕೊಂಡರೂ ಸುಮ್ಮನಿರುವುದಿದೆ. ಆದರೆ, ಅದೇ ಹುಡುಗರು ನಿರ್ದೇಶಕಿಯರಿಂದ ಸಣ್ಣ ಗದರುವಿಕೆಯನ್ನೂ ಸಹಿಸಿಕೊಳ್ಳಲಾರರು! ಈ ಕಾರಣಕ್ಕೆ ಮನಸ್ತಾಪಗಳನ್ನೂ ಎದುರಿಸಿದ್ದೇನೆ. ಇದೇ ಕಾರಣಕ್ಕೆ ಅವರಿರವರ ಬಳಿ ನಮ್ಮ ಬಗ್ಗೆ ಅವಹೇಳನದ ಮಾತುಗಳು ಸರಾಗ ಹರಿದಾಡಿವೆ.

ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | ಹವಾಮಾನ ಬದಲಾವಣೆ - ಬಾಗಿದ ಹೆಣ್ಣಿನ ಬೆನ್ನಿಗೆ ಬೀಸುವ ಬಡಿಗೆ

ಕೆಲವು ಸಿನಿಮಾ ಶೂಟಿಂಗ್‍ ವೇಳೆ, ಅಶ್ಲೀಲ ಮಾತುಗಳನ್ನಾಡುತ್ತ ನಮ್ಮನ್ನು ಮುಜುಗರಕ್ಕೆ ದೂಡುವವರನ್ನು ಕಂಡಿದ್ದೇನೆ. ಆದರೆ, ಸಿನಿಮಾ ನಾ ಇಷ್ಟಪಟ್ಟು ಆರಿಸಿಕೊಂಡ ಕ್ಷೇತ್ರವಾದ್ದರಿಂದ, ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಹೋರಾಡುವುದಷ್ಟೇ ನನಗಿದ್ದ ಆಯ್ಕೆ. ಅವಮಾನಗಳನ್ನು ಶಕ್ತಿಯಾಗಿ ಬದಲಾಯಿಸಿಕೊಂಡೆ. ರೂಪದಲ್ಲಿ ಹೆಣ್ಣು - ಹೃದಯದಲ್ಲಿ ಕಲ್ಲಾಗುತ್ತ ಹೋದೆ. ವಿಕೃತ ಮನಸ್ಥಿತಿಯ ಕೀಳು ಮಾತುಗಳಿಗೆ ಈಗಂತೂ ಸಂಪೂರ್ಣ ಕಿವುಡಳಾಗಿದ್ದೇನೆ. ನನ್ನ ಬದುಕಿನ ಮೊದಲ ಆದ್ಯತೆ ಸಿನಿಮಾ ಮಾತ್ರ. ನೆಗೆಟಿವ್ ವ್ಯಕ್ತಿಗಳಿಗೆ, ಚಿಂತನೆಗಳಿಗೆ ಖಂಡಿತ ಜಾಗವಿಲ್ಲ.

ನಿಮಗೆ ಏನು ಅನ್ನಿಸ್ತು?
6 ವೋಟ್