ಹೊಸಿಲ ಒಳಗೆ-ಹೊರಗೆ | ಹೆಣ್ಣಿಗೂ ಗಂಡಿಗೂ ಇರಬಹುದಾದ ಕಟ್ಟುಪಾಡಿನ ರಗಳೆಗಳು

gender sensitization 6

ಸ್ವಲ್ಪ ಆಳವಾಗಿ ನೋಡಿದರೆ, ಹೆಣ್ಣಿನ ಮೇಲೆ ಹಾಕುವ ಕಟ್ಟುಪಾಡಿನ ಉದ್ದೇಶಕ್ಕೂ ಗಂಡಿನ ಮೇಲೆ ಹಾಕುವ ಕಟ್ಟುಪಾಡಿನ ಉದ್ದೇಶಕ್ಕೂ ಒಂದು ಗಮನಾರ್ಹ ವ್ಯತ್ಯಾಸವಿದೆ. ಹೆಣ್ಣಿನ ಮೇಲೆ ಹಾಕುವ ಕಟ್ಟುಪಾಡುಗಳು ಅವಳಿಗೆ 'ಅಧೀನತೆಯನ್ನು ಒಪ್ಪಿಕೊಳ್ಳುವ' ಪಾಠ ಕಲಿಸಿದರೆ, ಗಂಡಿನ ಮೇಲೆ ಹಾಕುವ ಕಟ್ಟುಪಾಡುಗಳು ಅವನಿಗೆ 'ಅಧಿಕಾರವನ್ನು ಮೆರೆಯುವ' ಪಾಠ ಕಲಿಸುತ್ತವೆ

"ಯಾರೂ ಹೆಣ್ಣಾಗಿ ಹುಟ್ಟುವುದಿಲ್ಲ, ಹೆಣ್ಣಾಗಿ ರೂಪಿತಗೊಳ್ಳುತ್ತಾಳೆ," ಎಂದು ಸ್ತ್ರೀವಾದಿ ಚಿಂತಕಿ ಸಿಮೋನ್ ದಿ ಬುವಾ ಬಹಳ ಹಿಂದೆಯೇ ಹೇಳಿದ್ದಳು. ಇದು ಗಂಡಿನ ಮಟ್ಟಿಗೂ ನಿಜವೇ.

ಹೆಣ್ಣು ಹೀಗೇ ಇರಬೇಕು, ಗಂಡು ಹೀಗೇ ಇರಬೇಕು ಎಂಬ ಎರಡು ಭದ್ರಕೋಟೆಗಳು ಹುಟ್ಟಿನಿಂದಲೇ ನಿರ್ಮಾಣವಾಗುತ್ತವೆ. ಅದರೊಳಗೆ ಆಚೆ-ಈಚೆ ಇರುವ ಯಾವುದಕ್ಕೂ ಅವಕಾಶವೇ ಇಲ್ಲ. ಈ ಯಥಾಸ್ಥಿತಿಯನ್ನು ಉಳಿಸಿಕೊಳ್ಳುವುದಕ್ಕಾಗಿ, ಲಿಂಗತ್ವದ ವ್ಯವಸ್ಥೆಯಲ್ಲಿ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯ ಕಟ್ಟುಪಾಡುಗಳನ್ನು, ಕಡಿವಾಣಗಳನ್ನು ಹೇರಲಾಗುತ್ತದೆ.

"ಲಿಂಗತ್ವ ವ್ಯವಸ್ಥೆ ಹೆಣ್ಣಿನ ಮೇಲೆ ಎಂತೆಂತಹ ಕಡಿವಾಣಗಳನ್ನು ಹಾಕುತ್ತದೆ?" - ತರಬೇತಿ ಪ್ರಕ್ರಿಯೆಯಲ್ಲಿ ಲಿಂಗತ್ವ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡ ಮೇಲೆ, ಈ ಪ್ರಶ್ನೆಯ ಜೊತೆಗೆ ಚರ್ಚೆ ಪ್ರಾರಂಭವಾಗುತ್ತದೆ. ಸಹಭಾಗಿಗಳು ಯಾವುದೇ ಲಿಂಗದವರು ಇರಲಿ, ಇದಕ್ಕೆ ಪಟಪಟನೆ ಉತ್ತರ ಬರುತ್ತದೆ. "ಅವರು ಆರಾಮವಾಗಿ ಹೊರಗೆ ತಿರುಗಾಡುವ ಹಾಗೆ ಇಲ್ಲ, ಕತ್ತಲೆ ಆಗುವ ಮೊದಲೇ ಮನೆ ಸೇರಿಕೊಳ್ಳಬೇಕು, ಶಿಕ್ಷಣ ಮುಂದುವರಿಸದಿದ್ದರೂ ಪರವಾಗಿಲ್ಲ, ಜೋರಾಗಿ ನಗುವ ಹಾಗೆ ಇಲ್ಲ, ಮದುವೆ ಆಗಲೇಬೇಕು, ಮದುವೆಯಾದ ಮೇಲೆ ತವರುಮನೆ ಬಿಟ್ಟು ಗಂಡನ ಮನೆಗೆ ಹೋಗಬೇಕು, ಅವರಿಗೆ ಅವರದ್ದೇ ಮನೆ ಅಂತ ಇರುವುದಿಲ್ಲ, ಶೀಲ ಕಾಪಾಡಿಕೊಳ್ಳಬೇಕು, ಮನೆಗೆಲಸ ಮಕ್ಕಳ ಲಾಲನೆ-ಪಾಲನೆಯೇ ಅವರ ಬಹು ದೊಡ್ಡ ಜವಾಬ್ದಾರಿ..." ಪಟ್ಟಿ ಬೆಳೆಯುತ್ತ ಹೋಗುತ್ತದೆ.

Image
gender sensitization 1

ಮುಂದೆ, "ಲಿಂಗತ್ವ ವ್ಯವಸ್ಥೆ ಗಂಡಿನ ಮೇಲೆ ಎಂತೆಂತಹ ಕಡಿವಾಣಗಳನ್ನು ಹಾಕುತ್ತದೆ?" ಎಂಬ ಪ್ರಶ್ನೆ ಕೇಳಿದಾಗ ಸಹಭಾಗಿಗಳು ಒಂದು ಕ್ಷಣ ಮೌನವಾಗಿಬಿಡುತ್ತಾರೆ. ಬಹುಶಃ ನೂರಕ್ಕೆ 90ರಷ್ಟು ಸಂದರ್ಭದಲ್ಲಿ ಪ್ರಶ್ನೆಗೆ ತಕ್ಷಣ ಉತ್ತರ ಬರುವುದಿಲ್ಲ. "ಅವರು ಗಂಡಸರು, ಸ್ವತಂತ್ರರು, ಯಜಮಾನಿಕೆ ಮಾಡುವವರು, ಅವರಿಗೆ ಬೇಕಾದ ಹಾಗೆ ಇರುತ್ತಾರೆ, ಅವರಿಗೆ ಬೇಕಾದ್ದನ್ನು ಮಾಡುತ್ತಾರೆ, ಅವರ ಮೇಲೆ ಕಟ್ಟುಪಾಡು ಹೇಗೆ ಇರಲು ಸಾಧ್ಯ.?” ಅನ್ನುವ ಗುಮಾನಿಗಳು ಬರುತ್ತವೆ. ಕೆಲವೊಮ್ಮೆ ಯಾರೋ ಕೆಲವರಿಗೆ, 'ಗಂಡಸರ ಮೇಲೆ ಕೂಡ ಅವರು ಹೀಗೇ ಇರಬೇಕು ಅನ್ನುವ ಕಟ್ಟುಪಾಡು ಇದೆ' ಎಂಬ ಚಿಂತನೆ ಒಳಗೆ ಅಡಗಿರುತ್ತದೆ. ನಿಧಾನವಾಗಿ ಗಂಡಸರ ಮೇಲೆ ಇರುವ ಕಡಿವಾಣಗಳ ಪಟ್ಟಿ ಶುರುವಾಗುತ್ತದೆ. ಸಹಭಾಗಿಗಳೂ ನಾನೂ ಜೊತೆಜೊತೆಗೇ ಇವನ್ನು ಗುರುತಿಸುತ್ತ ಹೋಗುತ್ತೇವೆ. ಒಂದಷ್ಟು ಉದಾಹರಣೆಗಳೂ ಸೇರಿಕೊಳ್ಳುತ್ತವೆ.

  1. ಗಂಡುಮಕ್ಕಳಿಗೆ ಮನಸ್ಸಿಗೆ ತುಂಬಾ ನೋವಾಗಿದ್ದರೂ, ಅಳಬೇಕು ಅನಿಸಿದರೂ ಎಲ್ಲರ ಎದುರು ಅಳುವುದಕ್ಕೆ ಆಗುವುದಿಲ್ಲ, ಭಾವನೆಗಳನ್ನು ಹತ್ತಿಕ್ಕಿಕೊಳ್ಳಲು ಕಲಿಯಲೇಬೇಕಾಗುತ್ತದೆ. ಅಳುವುದು ಅವಮಾನಕರ ಅಂತ ಕಲಿಸಲಾಗಿದೆ – ಅದಕ್ಕಾಗಿ ನೋವು ಶಮನ ಮಾಡಲು ಇನ್ನೇನೋ ದಾರಿಗಳನ್ನು ಹುಡುಕಬೇಕಾಗುತ್ತದೆ.  
  2. ತಾಯಿ, ತಂದೆಯರನ್ನು ಸಾಕುವ, ಮನೆಯಲ್ಲಿ ಹೆಣ್ಣುಮಕ್ಕಳು ಇದ್ದರೆ ಅವರ ಮದುವೆ ಮಾಡಿಸುವ ಜವಾಬ್ದಾರಿ ಗಂಡಿನ ಮೇಲೆಯೇ ಬೀಳುತ್ತದೆ. ಮನೆಯ ಹೆಣ್ಣುಮಗಳು ಮಗನಿಗಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದರೂ, ಅಮ್ಮ-ಅಪ್ಪಂದಿರು ಮಗಳ ಜೊತೆಗೆ ಇರುವುದಿಲ್ಲ.
  3. ಮನೆಗೆಲಸದಲ್ಲಿ ಹೆಂಡತಿಗೆ ಸಹಾಯ ಮಾಡಬೇಕು ಎಂಬ ಬಯಕೆ ಇದ್ದರೂ, ಇತರರು 'ಹೆಂಡತಿಯ ಗುಲಾಮ' ಅನ್ನಬಹುದು ಅಥವಾ 'ಗಂಡನ ಕೈಲಿ ಕೆಲಸ ಮಾಡಿಸಿಕೊಳ್ಳುತ್ತಾಳೆ' ಅಂತ ಹೆಂಡತಿಯನ್ನೇ ದೂರಬಹುದು ಎಂಬ ಭಯ ಕಾಡುತ್ತಿರುತ್ತದೆ.
  4. ಹೆಂಡತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಗಂಡಸೇ ಅಲ್ಲ ಅನ್ನುವ ಮಾತಿದೆ. ಪರಿಣಾಮವಾಗಿ, ತನಗಿಂತ ಹೆಚ್ಚು ಓದಿರುವ, ಹೆಚ್ಚು ಸಂಪಾದನೆ ಮಾಡುವ ಹುಡುಗಿಯನ್ನು ಮದುವೆಯಾಗಲು ಆತಂಕವಾಗುತ್ತದೆ. ಗಂಡ ಯಾವಾಗಲೂ ಹೆಂಡತಿಗಿಂತ ಹೆಚ್ಚಿರಬೇಕು ಅಂತ ತಲೆಯಲ್ಲಿ ತುಂಬಲಾಗಿದೆ. ಅಪ್ಪಿತಪ್ಪಿ ತನಗಿಂತ ಹೆಚ್ಚು ಓದಿದ, ಸಂಪಾದನೆ ಮಾಡುವ ಹುಡುಗಿಯನ್ನು ಮದುವೆಯಾದರೆ ಒಂದಷ್ಟು ಮಂದಿ ಕೀಳರಿಮೆ ಅನುಭವಿಸುತ್ತಾರೆ. ಅವಳ ಸಂಪಾದನೆಯ ಎಲ್ಲ ಲಾಭವನ್ನು ಅನುಭವಿಸುತ್ತಲೇ, ಹೆಚ್ಚು ದಬ್ಬಾಳಿಕೆ ಮಾಡುತ್ತಾರೆ.
  5. ಮದುವೆಯಾಗಿ 5-6 ವರುಷಗಳಾದರೂ ಮಕ್ಕಳಾಗಿಲ್ಲದೆ ಇದ್ದಾಗ, ತಪಾಸಣೆಗೆ ಹೆಂಡತಿಯನ್ನು ಕಳುಹಿಸುತ್ತಾರೆ, ತಾನು ಹೋಗಲು ಅನೇಕರು ಹಿಂಜರಿಯುತ್ತಾರೆ. ಮಕ್ಕಳಾಗದಿರಲು ತಾನು ಕಾರಣ ಅನ್ನುವುದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ಅದು ಅವರ ಗಂಡಸುತನಕ್ಕೆ ಅವಮಾನ ಅನಿಸಿಬಿಡುತ್ತದೆ.
  6. ನಿಜವಾಗಿ ಭಯ ಆಗುತ್ತಿದ್ದರೂ, ನಾಚಿಕೆ ಆಗುತ್ತಿದ್ದರೂ ಹೇಳಿಕೊಳ್ಳಲಾರದೆ ಸಂಕಟಪಡುತ್ತಾರೆ. ತಮಗೆ ಭಯ, ನಾಚಿಕೆ ಆಗುತ್ತಿದೆ ಅನ್ನುವುದಕ್ಕೇ ಭಯ ಆಗುತ್ತದೆ. 'ಇವನೆಂತಹ ಗಂಡಸು' ಅನಿಸಿಕೊಳ್ಳಬೇಕಾಗುತ್ತದಲ್ಲ, ಅದಕ್ಕೆ.

-ಇಂತಹ ಹತ್ತು ಹಲವು ಅಂಶಗಳು ಕಾಣತೊಡಗುತ್ತವೆ. ನನಗೆ ವಿಶೇಷ ಒಳನೋಟ ಕೊಟ್ಟ ಒಂದು ಅನುಭವವನ್ನು, ಸಹಭಾಗಿಗಳೊಂದಿಗೆ, ಈ ಹೊತ್ತಿನಲ್ಲಿ ಹೆಚ್ಚಾಗಿ ಹೇಳಿಕೊಳ್ಳುತ್ತೇನೆ... ರಾತ್ರಿ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾದರೆ ಪಕ್ಕದಲ್ಲಿ ಗಂಡಸರು ಸಿಗದೆ ಇರಲಿ (ಆಗ ಸ್ಲೀಪರ್ ಬಸ್ ಇರಲಿಲ್ಲ. ಸೀಟರ್ ಮಾತ್ರ ಇರುತ್ತಿತ್ತು) ಎಂದು ಆಶಿಸುತ್ತಿದ್ದೆ. ಅದೊಂದು ದಿನ ನನ್ನ ಪುರುಷ ಸ್ನೇಹಿತರೊಬ್ಬರು ಹೀಗೇ ಹೇಳುತ್ತಿದ್ದರು: "ಇವತ್ತು ರಾತ್ರಿ ಬೆಂಗಳೂರಿಗೆ ಹೋಗಬೇಕಾಗಿದೆ. ಪಕ್ಕದ ಸೀಟಲ್ಲಿ ಹೆಣ್ಣುಮಕ್ಕಳು ಸಿಗದೆ ಇರಲಪ್ಪಾ..." ನನಗೆ ಆಶ್ಚರ್ಯವಾಗಿತ್ತು. ಆಮೇಲೆ ಅರ್ಥವಾಯಿತು. ಅಪ್ಪಿ-ತಪ್ಪಿ ಕೈ-ಕಾಲು ತಾಗಿದರೂ ತಪ್ಪು ತಿಳಿದುಕೊಳ್ಳುವ ಸಾಧ್ಯತೆ ಇದೆ, ಆರಾಮವಾಗಿ ಮಲಗುವ ಹಾಗೆ ಇಲ್ಲ ಅನ್ನುವುದು ಅವರ ತಲೆಬಿಸಿ. ಅಂದರೆ, ಒಬ್ಬ ಗಂಡು ಆಗಿರುವುದಕ್ಕೆ ಇಂತಹ ಒಂದು ಆರೋಪದ ಸಾಧ್ಯತೆ ಇದೆ ಮತ್ತು ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅನ್ನುವುದು ಕೂಡ ಒಂದು ಹೊರೆಯೇ ತಾನೇ?

ಈ ಲೇಖನ ಓದಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಹೇಳಿ, ಈ ಕತೆಯಲ್ಲಿ ಹೆಣ್ಣು ಕಪ್ಪೆ ಯಾವುದು ಮತ್ತು ಗಂಡು ಕಪ್ಪೆ ಯಾವುದು?

ಇಷ್ಟೆಲ್ಲ ವಿಚಾರಗಳನ್ನು ಮಾತಾಡುವ ಹೊತ್ತಿಗೆ, ಸಹಭಾಗಿಗಳಿಗೆ ಗಂಡುಮಕ್ಕಳ ಪರಿಸ್ಥಿತಿ ಅರ್ಥವಾಗುತ್ತದೆ. ಅವರ ವರ್ತನೆಗಳು ಯಾಕೆ ಹಾಗೆ ಇವೆ ಎಂಬುದು ಹೊಳೆಯುತ್ತದೆ. ಗಂಡು ಮಕ್ಕಳಿಗಂತೂ ಲಿಂಗತ್ವ ತರಬೇತಿಯಲ್ಲಿ ಸದಾ ವಿಲನ್ ಅನಿಸಿಕೊಳ್ಳುವ ಆತಂಕ ಇರುತ್ತದೆ. ತಮ್ಮ ಪರವಾಗಿ ಸಮರ್ಥನೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಇರುತ್ತಾರೆ. ಈ ಮಾತುಕತೆ ನಡೆದ ಮೇಲೆ ಸ್ವಲ್ಪ ನಿರಾಳವಾಗುತ್ತಾರೆ. ಮುಕ್ತ ಮನಸ್ಸಿನಿಂದ ತರಬೇತಿಯಲ್ಲಿ ಭಾಗವಹಿಸಲು ಸಿದ್ಧರಾಗುತ್ತಾರೆ.
ಸರಿ, ಲಿಂಗತ್ವ ಅನ್ನುವುದು ಹೆಣ್ಣು-ಗಂಡು ಇಬ್ಬರ ಮೇಲೂ ಒಂದಷ್ಟು ಕಟ್ಟುಪಾಡುಗಳನ್ನು ಹೇರುತ್ತದೆ ಅನ್ನುವ ವಿಚಾರ ಇಷ್ಟರಲ್ಲಿ ಸ್ಪಷ್ಟವಾಗುತ್ತದೆ. ಅಂತೆಯೇ ಹೆಣ್ಣು-ಗಂಡಿನ ಬಗ್ಗೆ ಇಂತಹ ಗಟ್ಟಿಯಾದ ಪರಿಕಲ್ಪನೆ ಇರುವ ಕಾರಣಕ್ಕೇ ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಸಹಜವಾಗಿ ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ ಎಂಬುದೂ ಗಮನಕ್ಕೆ ಬರುತ್ತದೆ.

ಇಲ್ಲಿ ಒಂದು ಸೂಕ್ಷ್ಮ ವಿಚಾರವನ್ನು ಗುರುತಿಸಬೇಕಾಗುತ್ತದೆ. ಸ್ವಲ್ಪ ಆಳವಾಗಿ ನೋಡಿದರೆ, ಹೆಣ್ಣಿನ ಮೇಲೆ ಹಾಕುವ ಕಟ್ಟುಪಾಡಿನ ಉದ್ದೇಶಕ್ಕೂ ಗಂಡಿನ ಮೇಲೆ ಹಾಕುವ ಕಟ್ಟುಪಾಡಿನ ಉದ್ದೇಶಕ್ಕೂ ಒಂದು ಗಮನಾರ್ಹವಾದ ವ್ಯತ್ಯಾಸವಿದೆ. ಹೆಣ್ಣಿನ ಮೇಲೆ ಹಾಕುವ ಕಟ್ಟುಪಾಡುಗಳು ಅವಳಿಗೆ 'ಅಧೀನತೆಯನ್ನು ಒಪ್ಪಿಕೊಳ್ಳುವ' ಪಾಠ ಕಲಿಸಿದರೆ, ಗಂಡಿನ ಮೇಲೆ ಹಾಕುವ ಕಟ್ಟುಪಾಡುಗಳು ಅವನಿಗೆ 'ಅಧಿಕಾರವನ್ನು ಮೆರೆಯುವ' ಪಾಠ ಕಲಿಸುತ್ತವೆ.

Image
gender sensitization 4

ಪರಿಣಾಮವಾಗಿ, ಹೆಣ್ಣು ತಗ್ಗಿ-ಬಗ್ಗಿ ಬದುಕುವುದನ್ನು ರೂಢಿಸಿಕೊಂಡರೆ, ಗಂಡು ಯಜಮಾನಿಕೆಯ ಸುಖದಲ್ಲಿ ಮೈಮರೆಯುತ್ತಾನೆ. ಒಟ್ಟಿನಲ್ಲಿ, ಈ ಮೂಲಕ ಪಿತೃಪ್ರಧಾನ ವ್ಯವಸ್ಥೆ ತನ್ನ ಆಶಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಎಂತಹ ಅಚ್ಚುಕಟ್ಟಾದ ಕಾರ್ಯತಂತ್ರದ ವಿನ್ಯಾಸ ನೋಡಿ ಇದು!

ಏನೇ ಇರಲಿ, ಕಟ್ಟುಪಾಡುಗಳ ಸ್ವರೂಪ, ಉದ್ದೇಶಗಳು ಬೇರೆ-ಬೇರೆ ಇದ್ದರೂ, ಅದರ ಪರಿಣಾಮಗಳು ಬೇರೆ-ಬೇರೆ ಇದ್ದರೂ, ಒಂದು ಅಂಶವಂತೂ ಸತ್ಯ. ಕಟ್ಟುಪಾಡುಗಳು ಕಟ್ಟುಪಾಡುಗಳೇ. ಈ ಜಾಲದಿಂದ ಹೊರಬಂದು ಸಹಜವಾಗಿ ಇರುವುದಕ್ಕೆ ಸಾಧ್ಯವಾದರೆ, ಅದು ಹೆಣ್ಣು-ಗಂಡು ಎಲ್ಲರಿಗೂ ಒಂದು ಬಿಡುಗಡೆಯ, ನಿರಾಳತೆಯ ಅನುಭವ ಕೊಡುವುದರಲ್ಲಿ ಸಂಶಯವಿಲ್ಲ.

ನಿಮಗೆ ಏನು ಅನ್ನಿಸ್ತು?
6 ವೋಟ್