ಕರುಣೆಯ ಕೃಷಿ | ಬರ್ಟೋಲ್ಟ್ ಬ್ರೆಕ್ಟ್ ಕವಿತೆ 'ಓದು ಬಲ್ಲ ಕಾರ್ಮಿಕನ ಪ್ರಶ್ನೆಗಳು'

Bertolt Brecht Poem

ಏಳು ಬಾಗಿಲುಗಳ ಥೀಬ್ ಶಹರ ಯಾರು ಕಟ್ಟಿದರು?

ಪುಸ್ತಕದಲ್ಲಿ ನಿಮಗೆ ರಾಜರುಗಳ ಹೆಸರು ಸಿಗುತ್ತದೆ.

ಕಲ್ಲು ಹೊತ್ತು ಹಾಕಿದವರು ರಾಜರುಗಳೇನು?

ಬೇಬಿಲೋನ್ ನಗರ ಹಲವು ಸಲ ಧ್ವಂಸವಾಯ್ತು.

ಅಷ್ಟೊಂದು ಬಾರಿ ಪುನರ್ನಿರ್ಮಾಣ ಮಾಡಿದ್ದು ಯಾರು?

ಹೊನ್ನ ಹೊಳಪಿನ ಲೀಮಾ ಶಹರದ ಯಾವ ಮನೆಗಳಲ್ಲಿ ಕಟ್ಟಡದ ಕಾರ್ಮಿಕರು ಉಳಿದಿದ್ದರು?

ಚೀನಾದ ಮಹಾಗೋಡೆ ಕಟ್ಟಿ ಮುಗಿದ ಸಂಜೆ

ಗಾರೆಯವರೆಲ್ಲ ಎಲ್ಲಿ ಕಾಣೆಯಾದರು?

ರೋಮ್ ಮಹಾನಗರದ ತುಂಬಾ ವಿಜಯ ಕಮಾನುಗಳು; ಯಾರು ಕಟ್ಟಿದರು?

ಸೀಸರ್ ಅಧಿಪತಿಗಳು ಗೆದ್ದದ್ದು ಯಾರ ಮೇಲೆ?

ಹಾಡುಗಳು ಸ್ತುತಿಸುವ ಬೈಜಂಟೈನ್ ಶಹರದ ಜನರಿಗಾಗಿ

ಅರಮನೆಗಳು ಮಾತ್ರವಿದ್ದವೇನು?

ಅಟ್ಲಾಂಟಿಸ್ ಪುರಾಣದಲ್ಲಿ ಸಹ

ಸಾಗರ ನಗರವ ನುಂಗಿದ ರಾತ್ರಿ

ಮುಳುಗುತ್ತಿದ್ದವರು ತಮ್ಮ ಗುಲಾಮರ ಕೂಗಿ ಕರೆಯುತ್ತಿದ್ದರು.

 

ಯುವ ಸಿಕಂದರ ಭಾರತದ ಮೇಲೆ ಜಯ ಸಾಧಿಸಿದ.

ಒಬ್ಬನೇ ಇದ್ದನೇನು?

ಸೀಸರ್ ಅಧಿಪತಿ ಗಾಲ್ ದೇಶವ ಸೋಲಿಸಿದ.

ಅವನ ಜೊತೆ ಒಬ್ಬ ಅಡಿಗೆಯಾಳು ಸಹ ಇರಲಿಲ್ಲವೇನು?

ಸ್ಪೇನಿನ ಫಿಲಿಪ್ ತನ್ನ ಆರ್ಮಡಾ ನೀರು ಪಾಲಾದಾಗ ಅತ್ತನಂತೆ.

ಅವನು ಏಕಾಕಿ ಅತ್ತನೇನು?

ಎರಡನೆಯ ಫ್ರೆಡ್ರಿಕ್ ಏಳು ವರ್ಷಗಳ ಯುದ್ಧ ಗೆದ್ದ; ಇನ್ಯಾರು ಗೆದ್ದರು?

 

ಪ್ರತಿ ಪುಟದಲ್ಲಿಯೂ ವಿಜಯ

ಜಯಶಾಲಿಯಾದವರ ಔತಣ ಯಾರು ತಯಾರಿಸಿದ್ದು?

ಪ್ರತಿ ಹತ್ತು ವರ್ಷಕ್ಕೊಬ್ಬ ಮಹಾನ್ ನಾಯಕ

ಖರ್ಚು ತುಂಬಿದ್ದು ಯಾರು?

 

ಎಷ್ಟೊಂದು ವರದಿಗಳು!

ಎಷ್ಟೊಂದು ಪ್ರಶ್ನೆಗಳು!

* * * * *

“Every beautiful poem is an act of resistance” - Mahmoud Darwish

Image
Bertolt Brecht 2

ಸುದ್ದಿಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ವರುಷವಿಡೀ ಹುಯಿಲು - ಒಮ್ಮೆ ಟಿಪ್ಪು, ಇನ್ನೊಮ್ಮೆ ನೆಹರು; ಒಂದು ದಿನ ಔರಂಗಜೇಬ್, ಇನ್ನೊಂದು ದಿನ ಶಿವಾಜಿ. ಯಾವುದೋ ಅರಮನೆ, ಯಾವುದೋ ಮಂದಿರ, ಯಾವುದೋ ಅಣೆಕಟ್ಟೆಯ ಕುರಿತು ಹತ್ತು-ಹದಿನೆಂಟು ಪ್ರಮೇಯಗಳು, ತಂಟೆ-ತಕರಾರುಗಳು. ಈ ಎಲ್ಲ ಕೊನೆಯಿಲ್ಲದ ವಾದ-ವಾಗ್ವಾದಗಳು ಇತಿಹಾಸದ ಹೆಸರಿನಲ್ಲಿ. ಅವುಗಳಿಗೆ ಯಾಕೆ ಕೊನೆಯಿಲ್ಲ? ಯಾಕೆಂದರೆ, ಈ ಬಗೆಯ ವಿವಾದಗಳಿಂದಾಗಿ, ಇತಿಹಾಸವೆಂದರೆ ಆಳುವ ವರ್ಗದ ಚರಿತ್ರೆಯೆಂಬ ಕಲ್ಪನೆಯನ್ನು ಚಾಲ್ತಿಯಲ್ಲಿರಿಸುವುದು ಸಾಧ್ಯವಾಗುತ್ತದೆ. ಜಗತ್ತಿನ ಪ್ರತಿಯೊಂದು ಪ್ರದೇಶದಲ್ಲಿಯೂ, ಸಮಾಜದಲ್ಲಿಯೂ ದುಡಿತವೇ ಬದುಕಿನ ಮೂಲಾಧಾರವಾಗಿ ಬಂದಿದೆ. ಆದರೆ, ಈ ಎಲ್ಲ ಸಮಾಜಗಳೂ ದುಡಿಯುವವರ ಚರಿತ್ರೆಯನ್ನೇ ಮರೆತಿರುತ್ತವೆ, ವಿಸ್ಮೃತಿಗೆ ಅಟ್ಟಲಾಗಿರುತ್ತದೆ.

ಪ್ರತಿ ಸಮಾಜದ ಸಾಂಸ್ಕೃತಿಕ ಸ್ಮೃತಿಯಲ್ಲಿಯೂ ಆಳುವ ವರ್ಗದ ನೆನಪನ್ನು ಮಾತ್ರ ಸ್ಥಾಯಿಯಾಗಿಸುವ ಪ್ರಯತ್ನವು, ಸಮಾಜವನ್ನು ಕಟ್ಟಿ ಬೆಳೆಸುವ ಕಾಯಕದಲ್ಲಿ ತೊಡಗಿಕೊಂಡವರನ್ನು ಮರೆಮಾಚಿಸುವ ಪ್ರಯತ್ನವೇ ಆಗಿರುತ್ತದೆ. ಪುರಾಣಗಳು, ಮಹಾಕಾವ್ಯಗಳು ಸಹ ಈ ಪ್ರಯತ್ನದ ಭಾಗವಾಗಿ ದೊರಕುವುದು ಕೂಡ ಸಾಮಾನ್ಯವೇ. ಕಲೆ-ಸಾಹಿತ್ಯಗಳಲ್ಲಿ ಪ್ರಾಸಂಗಿಕವಾಗಿ, ಸಾಂಕೇತಿಕವಾಗಿ, ಒಳಸುಳಿವಾಗಿ ಮಾತ್ರ ಕಾಯಕಜೀವಿಗಳ ಕತೆ ಬರುವುದನ್ನು ಕಾಣುತ್ತೇವೆ. ಹಾಗೆ ನೋಡಿದರೆ, ಕಾಯಕಜೀವಿಗಳೇ ಕೇಂದ್ರವಾದ ಸಾಹಿತ್ಯದಲ್ಲಿ ವಚನ ಸಾಹಿತ್ಯಕ್ಕೇ ಐತಿಹಾಸಿಕವಾಗಿ ಪ್ರಥಮ ಸ್ಥಾನ.

ಈ ಹಿನ್ನೆಲೆಯಲ್ಲಿ, ಕಾಯಕ ಜೀವಿಗಳ ಇತಿಹಾಸವನ್ನು ಹೆಕ್ಕಿ ರೂಪಿಸುವ ಕೆಲಸ ಸುಲಭದ್ದಲ್ಲ. ಅದಕ್ಕಾಗಿ ಹೊಸದೇ ಆದ ಇತಿಹಾಸ ಸೃಜನೆಯ ಪರಿಕರಗಳನ್ನು ರೂಪಿಸಿಕೊಳ್ಳಬೇಕಾಗಿ ಬಂತು. ಭಾರತದಲ್ಲಿಯೂ ಕಾಯಕ ಜೀವಿಗಳ ಇತಿಹಾಸ ಬರವಣಿಗೆ ತುಂಬ ಇತ್ತೀಚಿನದು. ಆಧುನಿಕ ಸಾಹಿತ್ಯ ಜನಸಾಮಾನ್ಯರ ದನಿಯಾಗಿ ಹೊಮ್ಮಿದರೂ ಸಾಹಿತ್ಯ ಕಾಯಕ ಕೇಂದ್ರಿತವಾಯಿತು ಎನ್ನುವಂತಿಲ್ಲ. ಯಾವುದೇ ರೀತಿಯ ಬರವಣಿಗೆ, ಕಥನ, ಕಾವ್ಯ, ಕಲೆ, ಆಳುವ ವರ್ಗದ ದೃಷ್ಟಿಕೋನಕ್ಕೆ ಪರ್ಯಾಯವಾದ ಲೋಕದೃಷ್ಟಿಯನ್ನು ಒದಗಿಸದಿದ್ದರೆ, ಅದನ್ನು 'ಕಾಯಕ ಕೇಂದ್ರಿತ' ಅನ್ನಲಾಗದು. ಯಾಕೆಂದರೆ, ಮಧ್ಯಮ ವರ್ಗವಾಗಲೀ, ದುಡಿಯುವ ವರ್ಗವಾಗಲೀ ಅಥವಾ ಯಾವುದೇ ರೀತಿಯ ಶೋಷಿತ ವರ್ಗವಾಗಲೀ, ಕೆಲವೊಮ್ಮೆ ಆಳುವ ವರ್ಗ ಹರಿಯಬಿಟ್ಟ ವಿಚಾರಗಳ ಅಧೀನಕ್ಕೆ ಒಳಪಟ್ಟು ವಿಚಾರಗಳನ್ನು ಅಭಿವ್ಯಕ್ತಿಸಬಹುದು.

ಸಾಹಿತ್ಯವನ್ನು ದುಡಿವ ಜನರ ದನಿಯಾಗಿಸಿದ ಸ್ಮರಣೀಯ ಸಾಹಿತಿಗಳಲ್ಲಿ ಜರ್ಮನ್ ಕವಿ, ನಾಟಕಕಾರ, ಚಿಂತಕ ಬರ್ಟೋಲ್ಟ್ ಬ್ರೆಕ್ಟ್ ಪ್ರಮುಖರು. ಮನರಂಜನೆಯ ವ್ಯಾಖ್ಯೆಯನ್ನೇ ಬದಲಿಸಿದ ಮಹಾ ಲೇಖಕ. ನಾಟಕವನ್ನು ವಿಚಾರಗಳ ಸಂವಹನಕ್ಕಾಗಿ ಬಳಸುವ ಬದಲು, ಓದುಗ/ವೀಕ್ಷಕರಲ್ಲಿ ಸ್ವಪ್ರಜ್ಞೆ ಜಾಗೃತವಾಗುವಂತೆ ಮಾಡುವುದಕ್ಕೆ ಒತ್ತು ಕೊಟ್ಟವರು. ತಮ್ಮ ಕವನಗಳಲ್ಲಿಯೂ ದುಡಿವವರ ದನಿಯಾದರು. ಅಂತಹ ಕವನಗಳಲ್ಲಿ 'ಓದು ಬಲ್ಲ ಕಾರ್ಮಿಕನ ಪ್ರಶ್ನೆಗಳು' ಒಂದು ಹೆಸರಾಂತ ಕವನ.

ಈ ಕವಿತೆ ಓದಿದ್ದೀರಾ?: ಕರುಣೆಯ ಕೃಷಿ | ನಿಯಿ ಒಸುಂಡರೆ ಕವಿತೆ 'ನನಗೇಕೆ ಉಸಾಬರಿ?'

ಇಲ್ಲಿಯೂ ನಾವು ಕೇಳಬೇಕಾದ ಪ್ರಶ್ನೆ ಇದೆ: ಬ್ರೆಕ್ಟ್ ತನ್ನ ಈ ಕವನದಲ್ಲಿ ದುಡಿಯುವ ವರ್ಗದ ಪರವಾಗಿ ಪ್ರಶ್ನೆ ಕೇಳುತ್ತಿದ್ದರೂ, ಮಹಿಳೆಯರ ದುಡಿತವನ್ನು ಒಳಗೊಳ್ಳುವ ಯಾವುದೇ ಸಾಲನ್ನು ಬರೆದಿಲ್ಲ. ದುಡಿಯುವವರೆಲ್ಲರೂ ಒಂದೇ ವರ್ಗವೆಂಬ ಅರಿವು ಸಾಮಾನ್ಯವಾಗಿದ್ದ ಕಾಲ ಅದು. ಮುಂದೆ ಈ 'ವರ್ಗ’ ಎನ್ನುವ ಹೆಸರುಪಟ್ಟಿಯ ಕುರಿತಾಗಿಯೇ ಚಿಂತನೆ ಹೆಚ್ಚು ನಡೆದಿದೆ. ಹಾಗಾಗಿಯೇ, ದುಡಿಯುವ ವರ್ಗದ ಇತಿಹಾಸ ರಚನೆಯ ಸಂದರ್ಭದಲ್ಲಿ ಕೂಡ ಬಿಟ್ಟುಹೋಗುವ ಜನಸಮುದಾಯಗಳು ತಮ್ಮ ಧ್ವನಿ ಎತ್ತರಿಸಿದ್ದಾರೆ. ಉದಾಹರಣೆಗೆ, ವರ್ಣಭಾವ, ಲಿಂಗಭಾವಗಳು, ಜಾತೀಯತೆ ಇತ್ಯಾದಿ ಭಿನ್ನತೆಗಳು ದುಡಿವ ವರ್ಗದಲ್ಲಿಯೂ ಜನರ ನಡುವಿನ ಬೇರ್ಪಡಿಕೆಯ ಅಡಿಗಳಾಗಿ ಕೆಲಸ ಮಾಡುತ್ತಿರುತ್ತವೆ.

ಮನಾಲಿ ಚಕ್ರವರ್ತಿ ಎನ್ನುವ ಕವಿ, ಬ್ರೆಕ್ಟ್‌ನ ಈ ಕವನಕ್ಕೆ ಪೂರಕ ಪ್ರಶ್ನೆಗಳನ್ನು ಕೇಳುವ 'ಓದು ಬಲ್ಲ ಕಾರ್ಮಿಕನ ಹೆಂಡತಿಯ ಪ್ರಶ್ನೆಗಳು' (Silent Questions from the Wife of a Worker Who Reads) ಎನ್ನುವ ಪ್ರತಿ-ಕವನವನ್ನು ಬರೆದಿದ್ದು, ಅದರಲ್ಲಿ, ಮಹಿಳೆಯರು ಹೇಗೆ ಕಾರ್ಮಿಕರ ಕಾಯಕವನ್ನು ಕೂಡ ಸಾಧ್ಯವಾಗಿಸುವ ಶಕ್ತಿಯಾಗಿ ದುಡಿದ ವರ್ಗವಾಗುತ್ತದೆ ಎನ್ನುವುದನ್ನು ಒತ್ತಿ ಹೇಳುತ್ತಾರೆ.

ನಿಮಗೆ ಏನು ಅನ್ನಿಸ್ತು?
5 ವೋಟ್