ಅಪ್ರಮೇಯ | 'ಅಮ್ಮೋರೆ ನಮ್ಮನೆ ಪರ್ಕೆ ಚೆನ್ನಾಗೇ ಇದೆ - ದೊಡ್ಡಮ್ನೋರು ಹೊಸ್‍ದಾಗೆ ತರ್ಸಿದ್ದು'

Music

ಮೈನಾನ ಇಸ್ಕೂಲಿಗೆ ಸೇರಿಸಬೇಕು; ಇಬ್ಬರಿಗೂ ಸಮಯ ಇಲ್ಲ, ದುಡ್ಡೂ ಇಲ್ಲ. ಅವಳಿಗೆ ಏಳು ವರ್ಸ ಈಗ. ನಂಜಿ ಕೆಲಸಕ್ಕೆ ಹೋಗೋರ ಮನೆಯವರೆಲ್ಲಾ ಬುದ್ವಾದ ಹೇಳ್ತಿರ್ತಾರೆ - "ಮಗೀನಾ ಸ್ಕೂಲಿಗ್ ಹಾಕು, ನಿನ್ ತರ ಮನೆ ಕೆಲ್ಸ ಮಾಡ್ಕೊಂಡಿರಕಾಯ್ತದಾ?" ಅಂತ. ಹೇಳ್ತಾರೆ... ಆದ್ರೆ, ಯಾರೂ ಸ್ಕೂಲಿಗೆ ಸೇರ್ಸಕ್ಕೆ ಸಮಯಾನೂ ಕೊಡಲ್ಲ, ಸಹಾಯನೂ ಮಾಡಲ್ಲ

ನಮ್ ಮನೆ ಪರ್ಕೆ ತುಂಬಾ ಚೆನ್ನಾಗಿದೆ
“ಅಮ್ಮ ಉಸ್ಕೂಲ್ಗೆ ಕಳ್ಸು... ಅಲ್ಲಿ ಸೈಯ್ಯದ್, ಕೆಂಚ”

Eedina App

“ಏನ್ ಮಗ ನೀನು ಉಸ್ಕೂಲು ಅಂತೀಯ, ಇಸ್ಕೂಲಲ್ವ?” ಅಂದ್ಲು ನಂಜಮ್ಮ, ಮಗಳ ಕೈ ಹಿಡಿದು ಕೆಲಸದ ಮನೆಯಿಂದ ಮನೆಗೆ ತೆರಳುವಾಗ. ಆ ಚಿಕ್ದು ಅವ್ವನ ಕೈ ಹಿಡಿದು ಕುಣೀತಾ ನಡೀತಿದ್ಲು. ಅವರೈನಿಗೆ ಮೈನ ಅಂದ್ರೆ ಜೀವ. ನಂಜಿ ಮತ್ತು ಸಿದ್ದ... ಇಬ್ರು ಪ್ರೀತ್ಸಿ ಮದ್ವೆ ಮಾಡ್ಕೊಂಡು ಪಟ್ಣಕ್ಕೆ ಬಂದ್ರು. ಅವನು ಕಟ್ಟಡ ನಿರ್ಮಾಣದಲ್ಲಿ ಮೇಸ್ತ್ರಿ ಆಗಿ ಕೆಲ್ಸ ಮಾಡ್ತಾನೆ. ನಂಜಿ ದಿನಕ್ಕೆ ಆರು ಮನೆ ಕೆಲ್ಸ ಮಡ್ತಳೆ. ಅದ್ರಲ್ಲಿ ಒಬ್ಬರ ಮನೆಯಲ್ಲಿ ಎರಡು ಸರಿ ಕೆಲ್ಸ ಮಾಡ್ತಾಳೆ. ರಾತ್ರಿ ಅವರು ತಿಂದ ಮೇಲೆ ಪಾತ್ರೆಯೆಲ್ಲಾ ತೊಳೆದು ಮನೆ ಕ್ಲೀನ್ ಮಾಡಿ, ಅವರು ಕೊಟ್ಟ ಮಿಕ್ಕ ಊಟ ತಗೊಂಡು ಬರ್ತಾಳೆ.

ಮೈನಾಗೆ ಈ ಮನೆಗೆ ಹೋಗೋದು ಅಂದ್ರೆ ತುಂಬಾ ಮಜ. ಆ ಮನೇಲಿ ಯಾವಾಗಲೂ ಯಾರಾದ್ರು ಮನುಶ್ಯರು ಅತ್ವಾ ಪೆಟ್ಟಿ, ಅತ್ವಾ ಟಿವಿ ಅವ್ ಅವ್ ಅವ್ ಅವ್ ವ್ಯಾಅಅಅಅ ಅಂತ ಹಾಡ್ತಾ ಇರ್ತಾರೆ. ಅದನ್ ಕೇಳಕ್ಕೆ ಮೈನಾಗೆ ತುಂಬಾ ಕಾಮಿಡಿ. ಮನೇಗ್ ಬಂದು ಅದೇ ತರ ಅವ್ಳೂ ಬಾಯಿ ದೊಡ್ಡದಾಗಿ ಸೊಟ್ಟಕ್ಕೆ ಇಟ್ಕೊಂಡು ಕೂಗ್ತಿರ್ತಾಳೆ. ಮೈನಾ ಎಲ್ಲರ್ ಕಣ್ ತಪ್ಸಿ ಆ ಮನೇಲಿ ಆವಮ್ಮ ಹಾಡೋದು, ಬಾರ್ಸೋದು ಎಲ್ಲಾ ನೋಡೀ ನೋಡಿ ಅದೇ ತರ ತಲೆ ರಬಸದಿಂದ ಅಲ್ಲಾಡ್ಸೀ ಅಲ್ಲಾಡ್ಸಿ ಹಾಡ್ತಾ ಇರ್ತಾಳೆ. ಆವಮ್ಮನ ತರನೇ ಹಾಡು ಶುರು ಮಾಡಕ್ಕೆ ಮುಂಚೆ ಅದೆಲ್ಲೆಲ್ಲೋ ಮುಟ್ಟೀ ಮುಟ್ಟೀ ನಮಸ್ಕಾರ ಮಾಡಿ ಓ ಓ ಅಂತ ಅಲ್ಲಿ ಇಲ್ಲಿ ತಲೆ ಮಾಡಿ ಅದೇ ತರ ಹಾಡ್ತಾಳೆ.

AV Eye Hospital ad

ನಂಜಿ ಅವರಿವರ ಮನೆಯಿಂದ ಮಿಕ್ಕಿದ್ ಊಟನ ತಂದು ಬಿಸಿ ಮಾಡಿ ಗಂಜಿ ಬೇಯ್ಸಿ, ಎಲ್ರೂ ತಿಂತಿದ್ರು. ಮೈನಾಗೆ ದೊಡ್ ಮೂಗು. ನಂಜಿ ಕೆಲಸ ಮಾಡುವವರ ಮನೆಗಳಿಂದ ತರುವ ಊಟದ ಡಬ್ಬ ತೆಗೆದ ತಕ್ಶಣ ಇವರ ಮನೆದು, ಅವರ ಮನೇದು ಅಂತ ತಟ್ ಅಂತ ಹೇಳ್ತಾಳೆ. ಈ ಹಾಡೋರ್ ಮನೆಯಿಂದ ತರೋ ಊಟದ್ ಬಗ್ಗೆ ಮೈನಾ ಯಾವಾಗ್ಲೂ ಹೇಳ್ತಾಳೆ, “ಅವ್ವಾ ಇವ್ರೂಟದಲ್ ಏನಿಲ್ಲ, ಯಾವಾಗ್ಲೂ ಬೇಳೆ ಸಾರು, ವಾಸ್ನೆನೇ, ಅವ್ರ ಅವ್ ಅವ್ ಅವ್ ಅವ್ ತರ,” ಅಂತ ಕೆಟ್ಟದಾಗಿ ಮುಕ ಮಾಡ್ತಾಳೆ. ಆವಾಗ ಮನೆಯವರೆಲ್ಲಾ ಸೇರಿ ಜೋರಾಗಿ ನಗ್ತಾರೆ.

Smile

ನಂಜಿ ಬಾನುವಾರನೂ ಬಿಡುವಿಲ್ಲದೇ ಕೆಲಸ ಮಾಡುತ್ತಾಳೆ. ಯಾರೂ ಅವಳಿಗೆ ರಜ ಕೊಡಲ್ಲ. ಒಂದು ದಿವ್ಸ ಮನೇಲಿದ್ದು ತನ್ನ ಗಂಡ ಮಗಳ ಜೊತೆ ಸಮಯ ಕೊಡಕ್ಕಾಗಲ್ಲ. ಮೈನಾನ ಇಸ್ಕೂಲಿಗೆ ಸೇರಿಸಬೇಕು ಇಬ್ಬರಿಗೂ ಸಮಯ ಇಲ್ಲ ದುಡ್ಡೂ ಇಲ್ಲ. ಅವಳಿಗೆ ಏಳು ವರ್ಸ ಈಗ. ಏನ್ ಮಾಡೋದು. ಅದ್ಕೆ ನಂಜಿ ಹಿಂದೆ ಸುತ್ತಾ ಇರ್ತಾಳೆ. ನಂಜಿ ಕೆಲಸಕ್ಕೆ ಹೋಗೋರ ಮನೆಯವರೆಲ್ಲಾ ಬದ್ವಾದ ಹೇಳ್ತಿರ್ತಾರೆ. ಮಗೀನಾ ಸ್ಕೂಲಿಗ್ ಹಾಕು, ನಿನ್ ತರ ಮನೆ ಕೆಲ್ಸ ಮಾಡ್ಕೊಂಡಿರಕಾಯ್ತದಾ ಅಂತ. ಹೇಳ್ತಾರೆ ಆದ್ರೆ, ಯಾರೂ ಸ್ಕೂಲಿಗೆ ಸೇರ್ಸಕ್ಕೆ ಸಮಯಾನೂ ಕೊಡಲ್ಲ ಸಹಾಯನೂ ಮಾಡಲ್ಲ. ಇನ್ನೂ ಮೈನ ಅವರ ಮನೆಗೆ ಹೋದಾಗ್ಲೆಲ್ಲಾ ಸಣ್ಣಾ ಪುಟ್ಟಾ ಕೆಲ್ಸ ಕೊಡ್ತಾರೆ.

ಆ ಹಾಡಿನ್ ಮನೆಯೋರು ಬ್ರಾಮ್ರು. ನಂಜಿಗೆ ಅವರ್ ಮನೇಲಿ ಸೊಲ್ಪ ನೋಡಿಮಾಡಿ ಕೆಲ್ಸ ಮಾಡ್ಬೇಕು. ಇದನ್ ಮುಟ್ಟಿ ಅದನ್ ಮುಟ್ಟ ಎಲ್ಲಾ ಮಾಡ್ಬಾರ್ದು. ಅವ್ರು ಹೇಗ್ ಹೇಳ್ತಾರೋ ಹಾಗೇ ಮಾಡ್ಬೇಕು. ಅದ್ರಲ್ಲೂ ಅವ್ರು ಬಾರ್ಸೊ ಎನೋ ಒಂದು ಇದೆ. ಅದನ್ನ ನಂಜಿ ಕ್ಲೀನೂ ಮಾಡ್ಬೇಕು ಆದ್ರೆ, ನಂಜಿ ಜೊತೆ ಜೋತ್ಕೊಂಡಿರೋ ಮೈನ ಆ ಬಾರ್ಸೋದನ್ನ ಮುಟ್ಬಾರ್ದು. ಆವಮ್ಮ ಅದನ್ನ ಬಾರ್ಸಕೊಂಡು ಆ ಆ ಆ ಆ ಓ ಓ ಓ ಅಂತ ಹಾಡುತ್ತೆ. ನಂಜಿ ಯಾವಾಗ್ಲೂ ಈ ಮನೆಗೆ ಬಂದ್ರೆ ಮೈನ ಮೇಲೆ ಒಂದು ಕಣ್ಣಿಟ್ಟಿರ್ಬೇಕು, ಇಲ್ಲಾಂದ್ರೆ ಅವ್ಳು ಓಡೋಗಿ ಆ ಬಾರ್ಸೊದನ್ನ ಮುಟ್ಟಕ್ಕೋಗೋತಾಳೆ. ಆ ಮನೇವ್ರು ತುಂಬಾ ಮಡಿ ಮೈಲ್ಗೆ, ಅಲ್ದೇ ಆ ಬಾರ್ಸೋದು ಏನೋ ಸರ್ಸೋತಿ ಅಂತೆ. ಇವ್ಳು ಮುಟ್ಟಿದ್ರೆ ಮೈಲ್ಗೆ ಅಗೋದ್ಲದೆ ಹಾಳಾಗುತ್ತಂತೆ. ಈ ಹೆಸ್ರಲ್ಲಿ ನಂಜಿ ಮೈನಾಗೆ ಸುಮಾರು ಸರ್ತಿ ಬಾರ್ಸಿದ್ದಾಳೆ.

ಈ ಲೇಖನ ಓದಿದ್ದೀರಾ?: ಅಪ್ರಮೇಯ | ʼಮಾಯೀ, ಮೇರ ಗರ್ವಾಲ ದಿಕತ್ ನಾಹಿ, ಮಾಯಿ ಕುಚು ಕರ್ʼ

ಆವತ್ತು ನಂಜಿಗೆ ತುಂಬಾ ಸುಸ್ತು... ಯಾಕೋ ಮ್ಯಕೈ ತುಂಬಾ ನೋವು. ಹಾಗೇ ಪಾತ್ರೆ ತೊಳೀತ ಮಗಳು ಮೈನಾಗೆ ಮನೆ ಗುಡ್ಸಕ್ಕೆ ಹೇಳಿದ್ಲು. ಮೈನಾ ಚಿಕ್ದಾದ್ರೂ ಕೆಲಸ ಎಲ್ಲಾ ಮಾಡ್ತಿದ್ಲು. ಮೈನ ಮನೆ ಗುಡುಸ್ತಾ ಗುಡುಸ್ತಾ ಆವಮ್ಮನ ಹಾಡಿನ ರೂಮಿಗೆ ಹೋಗಿ ಗುಡ್ಸಕ್ಕೆ ಶುರು ಮಾಡಿದ್ಲು. ಅವಲ್ಪಾಡಿಗೆ ಅವ್ಳು ಆವಮ್ಮ ಹಾಡೋಂಗೆ ಹಾಡ್ತಾ ಗುಡುಸ್ತಿದಲು. ಅದ್ಯೆಲ್ಲದ್ಲೊ ಆವಮ್ಮ ಬರ್ತಾನೇ ಕೂಗಾಡ್ಕೊಂಡ್ ಬಂದ್ಲು. ಮೈನ ಹೆದ್ರಕೊಂಡು ತನ್ ಕೈಲಿದ್ದ ಪರ್ಕೆನ ಕೆಳಗೆ ಬೀಳ್ಸಿದ್ಲು. ಆ ಪರ್ಕೆ ಬಿದ್ದಿದ್ದು ಆ ಬರ್ಸೋದರ ಹತ್ರ ಅಂದ್ರೆ ಆ ಸರಸೋತಿ ಹತ್ರ. ಅದನ್ನ ನೋಡಿ ಆವಮ್ಮಂಗೆ ಸಿಟ್ಟು ನೆತ್ತಿಗೇರ್ತು. ಅವ್ರ ಆ ದೇವಸ್ತಾನದ ತರದ ದೈವೀಕ ಸಂಗೀತದ ಸ್ತಳದಲ್ಲಿ ಯಾವಳೋ ಒಬ್ಳು ಪರ್ಕೆ ಅದೂ ಪರ್ಕೆನ ತಮ್ಮ ವಾದ್ಯದ ಹತ್ರ ಬೀಳ್ಸಿದಾಳೆ.

ಆವಮ್ಮ ಕೂಗಿದ್ಲು “ಏ ನಂಜಿ, ನಂಜೀ... ನಂಜೀ ನಿನ್ ಮಗ್ಳು ನೋಡು ನನ್ ವೀಣೆ ಮೇಲೆ ಪರ್ಕೆ ಬೀಳ್ಸಿದಾಳೆ. ಏನ್ ಅನಾಚಾರ ಇದು,” ನಂಜಿ ಹೆದ್ರುಕೊಂಡ್ ಓಡ್ ಬಂದು ಮೈನಾನ ಎಳೆದು ಅ ರೂಮಿಂದ ಆಚೆ ಹಾಕಿದ್ಲು. ಮೈನಾಗೆ ಏನೂ ಗೊತ್ತಾಗದೇ ಗೋಂದಲದಲ್ಲಿದ್ಲು. ತಾನೇನು ಮಾಡಿದ್ಲು, ಆವಮ್ಮ ಯಾಕೆ ಕೂಗಾಡಿದ್ಲು ಅಂತನೇ ಗೊತ್ತಾಗಿಲ್ಲ. ಅವಳು ಮಾಮೂಲಾಗಿ ಪರ್ಕೆಲಿ ಗುಡುಸ್ತಿದಲು ಅಶ್ಟೆ. ಆ ರೂಮಿಂದಾಚೆ ನಿಂತ ಮೈನ ಕೇಳಿಸ್ಕೊಂಡಿದ್ದು ಆವಮ್ಮ ಜೋರಾಗಿ ಬಡ್ಕೊತಿದ್ಲು “ವೀಣೆ ಅಂದ್ರೆ ಏನನ್ಕೊಡಿದ್ದೀಯ ನೀನು. ನಿಂತರವ್ರಿಗೆ ಆಚಾರ ಇಲ್ಲ, ವಿಚಾರ ಇಲ್ಲ, ಸಂಗೀತ ಸಾಹಿತ್ಯದ್ ಗಂದ ಇಲ್ಲ, ಕಲ್ಚರೇ ಇಲ್ದಿರೋ ಜನ, ಇಶ್ಟಕ್ಕ್ ಬಿಟ್ಕೊಂಡಿದ್ದೇ ದೊಡ್ದು, ಅದ್ರಲ್ಲಿ ವೀಣೆ ಮೇಲೆ ಪರ್ಕೆ ಬೀಳಸ್ತೀರ!"

Veena Player
ಹುಸೇನ್‌ ಕಲಾಕೃತಿ

ಮೈನಾಗೆ ಭಯ ಏನ್ ಆಗಿಲ್ಲ. ಆದ್ರೆ, ನಂಜಿ ಒಳಗೆ ಆವಮ್ಮ ಕೂಗಾಡೋದನ್ನ ಕೇಳಿ ಕೈಕಾಲು ನಡಗ್ತಿತ್ತು. ಅವ್ಳಿಗೆ ಅದೆಲ್ಲಿತ್ತೋ ಮೈ ನೋವು, ಅಳು ಎಲ್ಲಾ ಒಂದೇ ಸಮ ಒತ್ತರಿಸಿ ಬಂದು ಕುಕ್ಕುರಗಾಲಲ್ಲಿ ಕುಸಿದು ಅವಮ್ಮನ ಕಾಲಿಗೆ ಬಿದ್ದ ಅಳ್ತಿದ್ಲು, “ತಪ್ಪಾಗೋಯ್ತು ಕ್ಸಮಿಸ್ಬುಡಿ ಅಮ್ಮೋರೆ,” ಅಂತ ಜೋರಾಗಿ ಅಳಕ್ಕೆ ಶುರು ಮಾಡಿದ್ಲು. ಆವಮ್ಮ ಇನ್ನೂ ಕೂಗ್ತಾನೇ ಇದ್ಲು. “ಈ ವೀಣೆಯಾರ್ದು ಅಂದ್ಕೊಂಡಿದ್ದೀಯ! ಇದು ಶಾಸ್ತ್ರಿಗಳ ವೀಣೆ. ಅವರು ದೈವೀಕ ಸಂ... ಬೂತರು, ಅವರ ಹತ್ರ ಬಯ ಬಕ್ತಿಯಿಂದ ಕಲ್ತು ಅವರಿಂದ ಪಡೆದಿರೋದು. ನಿಂಗೇನ್ ಗೊತ್ತಾಗುತ್ತೆ ಕಸ ಮುಸ್ರೆ ತೊಳಿಯೋಳು. ನಿನ್ ಮಗ್ಳನ್ನ ಹದ್‍ಬಸ್ತಲ್ಲಿಡ್ಬೇಕು. ನಿಮಗೆ ಶೋಬೇರ್ತನ ಆದ್ರೆ ಕೆಲಸಕ್ಕೆ ಬರ್ಬೇಡ. ನಾನ್ ಬೇರೆ ಯಾರ್ನಾದ್ರು ಇಟ್ಕೊತೀನಿ,” ಅಶ್ಟಕ್ಕೆ ಸುಮ್ಮನಾಗದೇ ಹಿಂದೆ ಬ್ಯಾಗ್ರೌಂಡ್ ಮ್ಯೂಸಿಕ್ ತರ ನಂಜಿ ಅಳ್ತಾ ಇದ್ದಾಗ ಆವಮ್ಮ “ಸಂಗೀತ ಅಂದ್ರೆ ಏನ್ ಅನ್ಕೊಂಡಿದ್ದೀಯ? ಅದು ಪವಿತ್ರವಾದದ್ದು, ಅದು ನಮ್ಮಂತ ಜನಕ್ಕೆ ಬಂದಿರೋ ವರ. ನಿಮ್ಮಂತೋರಿಗೆ ಸಂಗೀತದ ಗಂದ ಗಾಳಿನೂ ಇಲ್ಲ, ಸಂಸ್ಕೃತಿನೂ ಇಲ್ಲ. ನಿಮ್ಮಂತವ್ರನ್ನ ಮನೇಲಿ ಬಿಟ್ಕೊಳ್ಳೋದೇ ತಪ್ಪು. ಎಲ್ಲಾ ಬಿಟ್ಟು ಪರ್ಕೆ ಬೀಳಸ್ತಾಳೆ, ಪರ್ಕೆ ಅಂದ್ರೆ ಏನು?”

ಇಶ್ಟವರ್ಗೂ ಆಚೆ ನಿಂತ್ ಎಲ್ಲಾ ಮಾತನ್ನೂ ಕೇಳ್ತಿದ್ದ ಮೈನ “ಅಮ್ಮೋರೆ ನಮ್ಮನೆ ಪರ್ಕೆ ಚೆನ್ನಾಗೇ ಇದೆ. ಹೊಸ್ದು ಮೊನ್ಮೊನ್ನೆನೇ ದೊಡ್ಡಮ್ನೋರು ಹೊಸ್‍ದಾಗೆ ತರ್ಸಿದ್ದು. ನಾನೇನು ನೀವ್ ಬಾರ್ಸೊದರ್ ಮೇಲೆ ಬೀಳ್ಸಿಲ್ಲ, ನಾನಿಲ್ಲಿ ದೂರನೇ ಇದ್ದೆ. ಅಮ್ಮೋರೆ ಈ ನಮ್ ಪರ್ಕೆ ಹೊಸಾದು ನೀವ್ ಬರ್ಸೋದ್ರ ಮೇಲೆ ಬೀಳೋ ದೂಳನ್ನ ತೆಗೆಯುತ್ತೆ." ಆವಮ್ಮ ಒಂದ್ ಕಡೆ ನಂಜಿ ಒಂದ್ಕಡೆ ಬೆಪ್ಪಾದ್ರು.

'ಎಲ್ಲರ ಕನ್ನಡ' ಎಂದು ಹೇಳಿಕೊಳ್ಳಲಾಗುವ, ಮಹಾಪ್ರಾಣ ಬಳಕೆ ಇಲ್ಲದ ಆಡುಮಾತಿನ ಬರಹ ರೂಪವಿದು
ನಿಮಗೆ ಏನು ಅನ್ನಿಸ್ತು?
0 ವೋಟ್
eedina app