ಕೂಡಲ ಸಂಗಮದ ದಿನಗಳು | ನಮ್ಮೂರಿಗೆ ಲಾಡಪ್ಪನ ಹೋಟೆಲ್ಲೇ ಸ್ಟಾರ್ ಹೋಟೆಲ್ಲು

ಲಾಡಪ್ಪ ತಯಾರಿಸುವ ಪುರೆ ಚಟ್ನಿ, ಮಿರ್ಚಿ ಬಜ್ಜಿ, ಮಂಡಳ ವಗ್ಗರಣೆ, ಕಾಂದಾ ಬಜಿ, ಚುರುಮುರಿ ಚುಡಾ ಬಲು ರುಚಿಕರ. ನಮ್ಮ ಕೂಡಲ ಸಂಗಮದ ಸುತ್ತಲಿನ ಎಲ್ಲ ಹಳ್ಳಿಗರಿಗೂ ಲಾಡಪ್ಪನ ಕೈರುಚಿ ಗೊತ್ತು. ಇವನಾರವ ಇವನಾರವ ಎಂದೆನಿಸದೆ, ಇವನಮ್ಮವ ಇವನಮ್ಮವ ಎಂದೆನಿಸುವ ಬಸವಣ್ಣನವರ ನುಡಿಗೆ ತಕ್ಕ ನಿದರ್ಶನ ನಮ್ಮ ಲಾಡಪ್ಪನ ಅಂಗಡಿ

ಲಾಡಪ್ಪನೆಂದರೆ ಲಾಡ್‍ಸಾಬ್. ಕೂಡಲಸಂಗಮದಲ್ಲಿ ಲಾಡಪ್ಪ ಗೊತ್ತಿರದವರೇ ಇಲ್ಲ. ಊರಿನವರೆಲ್ಲರ ಪ್ರೀತಿ ಆತನನ್ನ ಲಾಡಪ್ಪನನ್ನಾಗಿಸಿತ್ತು. ಶೆಟ್ಟರ ಮನೆ, ಸ್ವಾಮಿಗಳ ಕಿರಾಣಿ ಅಂಗಡಿ ದಾಟಿದರೆ ನಾಲ್ಕೈದು ಟೈಲರ್ ಅಂಗಡಿಗಳು. ಅವುಗಳ ಮುಂದೆ ದೊಡ್ಡ ಅಗಸಿಕಟ್ಟೆ. ಊರಿನ ಬಹುತೇಕ ಹಿರಿಯರ, ವಯಸ್ಕರ ಠಿಕಾನೆ ಅಲ್ಲಿಯೇ. ಜಗತ್ತಿನಿಂದ ಹಿಡಿದು ಊರಿನ ಎಲ್ಲ ಮನೆಗಳ ಸುದ್ದಿಗಳ ಪೆಟ್ಟಿಗೆ ಆ ಕಟ್ಟೆ. ಹಿರಿಯರ ವಿಶ್ವಾಸ ಬೆಳೆಸಲು ಕೆಲವು ವಯಸ್ಕರು ಮಸಾಲೆ ಸೇರಿಸಿ ಒಂದಿಷ್ಟು ಘಟನೆಗಳನ್ನು ಹೇಳುವುದೂ ಉಂಟು. ಅಗಸಿಬಾಗಿಲು ದಾಟಿದರೆ ಹತ್ತಾರು ಹೆಜ್ಜೆಗಳಲ್ಲಿ ಲಾಡಪ್ಪನ ಅಂಗಡಿ. ಆಸೀನರಾದವರು ಬಹುತೇಕರು ಲಾಡಪ್ಪನ ಚಹಾ, ಪೂರಿ, ಸುಸಲಾ ಚುರುಮರಿ ಸವಿಯದೆ ಮನೆಗೆ ತೆರಳುವುದಿಲ್ಲ.

ಅಗಸಿಕಟ್ಟೆ ಒಂದು ರೀತಿಯ ರೈಲಿನಂತೆ; ಜನ ಸೇರುವುದು ಹೋಗುವುದು ಮಾಮೂಲಿ. ಪೂರ್ತಿ ಖಾಲಿಯಾಗುವುದು ಮಾತ್ರ ರಾತ್ರಿ ಎಂಟು ಗಂಟೆಗೆ. ಓಣಿಯಲ್ಲಿ ಯಾರೂ ಸಿಗದೇಹೋದರೆ ಅಗಸಿಕಟ್ಟೆಯ ಬಳಿ ಇಲ್ಲವೆ ಲಾಡಪ್ಪನ ಚಹಾದಂಗಡಿ ಬಳಿ ಸಿಗುವುದಂತೂ ಗ್ಯಾರಂಟಿ.

Image
ಕೂಡಲ ಸಂಗಮ

ಇಪ್ಪತ್ತು ಮೀಟರ್ ಉದ್ದದ ಅಂಗಡಿ. ಸುತ್ತ ಗೋಡೆಗಳಿಲ್ಲ. ಗೋಡೆಯಂಥ ತಟ್ಟಿಗಳನ್ನು ಕಟ್ಟಲಾಗಿದೆ. ಕುಳಿತುಕೊಳ್ಳಲು ಕಲ್ಲಿನ ಉದ್ದ ಬೆಂಚುಗಳು. ಒಂದೇ ಸಾರಿ ಆರೇಳು ಜನ ಆರಾಮಾಗಿ ಕೂಡಬಹುದು. ಪ್ರತಿ ಕಲ್ಲಿನ ಟೇಬಲ್‍ಗಳ ಮೇಲೆ ಮಾಸಿದ ಸ್ಟೀಲಿನ ಜಗ್ಗುಗಳಲ್ಲಿ ತುಂಬಿಟ್ಟಿರುವ ನೀರು. ಗಿರಾಕಿಗಳು ನೇರ ಅಂಗಡಿಯಲ್ಲಿ ಬಂದವರೇ ಜಗ್ಗನ್ನೆತ್ತಿ ಘಟಘಟ ನೀರು ಕುಡಿಯುತ್ತಾರೆ. "ಏ...! ಒಳಗ ಹೋಗಿ ಕುಡಿಯೋ ಪಾ," ಎಂಬ ಲಾಡಪ್ಪನ ಮಾತಿಗೆ, "ನಾ ಚಾ ಕುಡಿತಿನಳ ಬರೀ ನೀರು ಕುಡಿದ ಹೋಗಲ್ಲ..." ಎಂಬ ಪ್ರತ್ಯುತ್ತರ ಮಾಮೂಲಿ.

ಲಾಡಪ್ಪ ಮಿತ ಭಾಷಿ. ತಯಾರಿಸುವ ಎಲ್ಲ ತಿಂಡಿಯಲ್ಲೂ ವಿಶೇಷವಾದ ರುಚಿಯಿಂದ ಲಾಡ್‌ಸಾಬ್ ನಮ್ಮೂರಿನ ಎಲ್ಲರಿಗೂ ಪ್ರೀತಿಯ ಲಾಡಪ್ಪನಾಗಿದ್ದ. ಪುಟ್ಟದೊಂದು ಹೋಟೆಲಿನಿಂದ ಬದುಕು ಕಟ್ಟಿಕೊಂಡಿದ್ದ ಲಾಡಪ್ಪನದು ಶ್ರಮಿಕ ಕುಟುಂಬ. ನಾನು ಮತ್ತು ನನ್ನೋರಿಗೆಯ ಗೆಳೆಯರಿಗೆ ಲಾಡಪ್ಪನ ಹೋಟೆಲ್ ಅಂದರೆ ತುಂಬಾ ಇಷ್ಟ. ಆತ ತಯಾರಿಸುವ ಪುರೆ ಚಟ್ನಿ, ಮಿರ್ಚಿ ಬಜ್ಜಿ, ಚುರುಮುರಿ ಸೂಸಲಾ (ಮಂಡಳ ವಗ್ಗರಣೆ), ಕಾಂದಾ ಬಜಿ (ಈರುಳ್ಳಿ ಬಜ್ಜಿ) ಚುರುಮುರಿ ಚುಡಾ ಬಲು ರುಚಿಕರ. ಕೂಡಲಸಂಗಮದ ಸುತ್ತಲಿನ ಎಲ್ಲ ಹಳ್ಳಿಗರಿಗೂ ಲಾಡಪ್ಪನ ಕೈರುಚಿ ಗೊತ್ತು. ಇವನಾರವ ಇವನಾರವ ಎಂದೆನಿಸದೆ ಇವನಮ್ಮವ ಎಂದೆನಿಸುವ ಬಸವಣ್ಣನವರ ನುಡಿಗೆ ತಕ್ಕ ನಿದರ್ಶನ ಲಾಡಪ್ಪನ ಅಂಗಡಿ.

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ಆಗ ಒಂದು ಪದ್ಯವನ್ನೂ ಬಾಯಿಪಾಠ ಮಾಡದಿದ್ದವ ಈಗ ಪ್ರಸಂಗ ಪುಸ್ತಕ ನೋಡದೆ ಭಾಗವತಿಕೆ ಮಾಡುತ್ತಿದ್ದ!

ಇದೆಲ್ಲ 20-25 ವರ್ಷಗಳ ಹಿಂದಿನ ಮಾತು. ಲಾಡಪ್ಪನ ಅಂಗಡಿಯ ವೇಳಾಪಟ್ಟಿ ತುಂಬಾ ಆಸಕ್ತಿಕರ. ಸೂರ್ಯೋದಯ ಆಗುತ್ತಿದ್ದಂತೆಯೇ ತಯಾರಾಗುವ ಬಿಸಿ-ಬಿಸಿ ಇಡ್ಲಿ ಸಾಂಬಾರ್, ಕೊಬ್ಬರಿ ಚಟ್ನಿ ಒಂದೆರಡು ಗಂಟೆಯಲ್ಲಿ ಖಾಲಿಯಾಗುತ್ತಿತ್ತು. ಬಹುತೇಕ ಜನರಿಗೆ ಪೂರಿ ಮತ್ತು ಚಟ್ನಿ ತುಂಬಾ ಇಷ್ಟ. ಅದರ ಸ್ವಾದ ಎಲ್ಲರಿಗಿಂತ ಲಾಡಪ್ಪನ ಚಹಾದಂಗಡಿಯನ್ನು ವಿಭಿನ್ನವಾಗಿಸಿತ್ತು. ಆ ಚಟ್ನಿಯೊಂದಿಗೆ ಸ್ವಲ್ಪ ಸಕ್ಕರೆ ಹಾಕಿ ಪೂರಿಗಳನ್ನು ತಿಂದರೆ ಸ್ವರ್ಗಕ್ಕೆ ಮೂರೇ ಗೇಣು. ಇನ್ನು ಕೆಲವರು ಒಂದೆರಡು ಪುರಿಗಳನ್ನು ಚಹಾದಲ್ಲಿ ಅದ್ದಿ ಚಪ್ಪರಿಸುವರು. ನಮಗಂತೂ ಪೂರಿ ಫೇವರೆಟ್. ಕೆಲವೊಮ್ಮೆ ಶನಿವಾರ ಶಾಲೆಗೆ ಹೋಗಬೇಕಾದರೂ ಬುತ್ತಿ ಡಬ್ಬಿಯಲ್ಲಿ ಪುರಿ ಪಾರ್ಸೆಲ್ ಆಗುತ್ತಿತ್ತು.

'ಸೂಸಲ' ಎಂದು ಕರೆಯಲ್ಪಡುವ ಮಂಡಾಳ ಒಗ್ಗರಣೆ ತಿಂಡಿ ಮಾಡುವುದರಲ್ಲಿ ಲಾಡಪ್ಪನದು ಎತ್ತಿದ ಕೈ. ಆತ ಮಾಡಿದ ಪುಟ್ಟಿಗಟ್ಟಲೆ ಸೂಸಲ ಮತ್ತು ಮಿರ್ಚಿ ಬಜಿ ಖಾಲಿಯಾಗುವುದು ಗೊತ್ತೇ ಆಗುವುದಿಲ್ಲ. ಊರಿನ ಬಹುತೇಕ ಜನರ ಬದುಕಿನ ಭಾಗವಾಗಿರುವ ಲಾಡಪ್ಪನ ಅಂಗಡಿ ಊರು ಬಿಟ್ಟು ಬೇರೆಡೆ ನೆಲೆಸಿದವರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿರುತ್ತದೆ.

ನೌಕರಸ್ಥರಿಂದ ಹಿಡಿದು ಊರಿನ ಎಲ್ಲ ಹಿರಿಯರಿಗೂ ಲಾಡಪ್ಪನ ತಿಂಡಿಗಳೆಂದರೆ ಪ್ರಿಯ. ಆತನ ಹೆಂಡತಿಯು ಎಲ್ಲ ಕೆಲಸಗಳಿಗೂ ಜೊತೆ ನಿಲ್ಲುತ್ತಾಳೆ. ಮಕ್ಕಳು ಕೂಡ ಶಾಲೆ ಮುಗಿದ ಕೂಡಲೇ ತಂದೆ-ತಾಯಿಗೆ ಕೈಜೋಡಿಸುತ್ತಾರೆ. ಲಾಡಪ್ಪನ ಹೆಂಡತಿ ಹಿಟ್ಟನ್ನು ಉಂಡೆ ಮಾಡಿಕೊಟ್ಟರೆ, ಲಾಡಪ್ಪ ಬಿಸಿ ಎಣ್ಣೆಯಲ್ಲಿ ಪೂರಿ ಬಿಡುತ್ತಾನೆ. ಮಕ್ಕಳಿದ್ದರೆ ಗಿರಾಕಿಗಳಿಗೆ ನೀರು ಚಹಾ ಕೊಡುತ್ತಾರೆ. ಹೀಗೆ, ಇರುವ ಮೂರ್ನಾಲ್ಕು ಜನರು ಅಂಗಡಿಯನ್ನು ಸಂಭಾಳಿಸುತ್ತಾರೆ. ಕೆಲಸಕ್ಕೆ ಬೇರೆ ಯಾರೂ ಆಳುಗಳಿಲ್ಲ. ಅವರೇ ಆಳು ಅವರೇ ಅರಸರು! ಲಾಡಪ್ಪನ ಹೋಟೆಲ್ ಅಂದರೆ ನಮ್ಮೂರಿನ ಸ್ಟಾರ್ ಹೋಟೆಲ್ ಇದ್ದಂತೆ - ಆಡಂಬರದಲ್ಲಿ ಅಲ್ಲ, ರುಚಿಕರ ತಿಂಡಿಗಳಲ್ಲಿ.

Image
ಲಾಡ್‌ಸಾಬ್‌ ಅಂಗಡಿಗೆ ಇತ್ತೀಚೆಗೆ ಹೋದಾಗ ಸವಿದ ಕಾಂದಾ ಬಜಿ

ಊರಿನ ಯಾವುದೇ ಗಿರಾಕಿ ಬಂದರೂ ಲಾಡಪ್ಪನನ್ನು, "ಹೇ ಮಾಮ..." "ಕಾಕಾ..." "ದೊಡ್ಡಪ್ಪ..." ಎಂದು ಮಾತನಾಡಿಸುವಷ್ಟು ಆಪ್ತತೆ ಆ ಹೋಟೆಲಿನಲ್ಲಿತ್ತು. ಹೆಸರು ಲಾಡ್‍ ಸಾಬ ಆದರೂ ಜಾತಿ-ಧರ್ಮ ಮೀರಿದ ನಡೆ-ನುಡಿ ಆತನದಾಗಿತ್ತು. ಅಚ್ಚ ಕನ್ನಡದ ಮಾತು. ತುಸು ಮುಂಗೋಪಿ. ಉದ್ರಿ ಕೇಳುವ ಮಾತೇ ಇಲ್ಲ. ಸಿಟ್ಟು ಬಂದರೆ ನೇರಮಾತು: "ಏ ಮಾರಾಯ... ರಗಳಿ ಹಚ್ಚಬೇಡ... ಬೇಕಂದ್ರ ತಿನ್ನು ಇಲ್ಲಂದ್ರ ಎದ್ದು ಹೋಗು," ಎಂದು ಹೇಳುವ ಮುಲಾಜಿಲ್ಲದ ಮಾತು. ಊರ ಊಸಾಬರಿಗಂತೂ ಹೋಗುವವನಲ್ಲ.

ನನ್ನ ಹೆತ್ತವರ ಕಷ್ಟಕಾರ್ಪಣ್ಯವನ್ನು ತುಂಬಾ ಹತ್ತಿರದಿಂದ ಕಂಡಿದ್ದ ಲಾಡಪ್ಪನ ಕುಟುಂಬಕ್ಕೆ ನನ್ನ ಮೇಲೆ ವಿಶೇಷ ಅಕ್ಕರೆ. ನಾನು ಕನ್ನಡ ಶಾಲೆಯ ಮಾಸ್ತರಾದಾಗ, "ಮುನ್ನ, ನಿಮ್ಮ ತಂದಿ-ತಾಯಿ ತುಂಬಾ ಕಷ್ಟಪಟ್ಟಾರ. ಈಗ ನಸೀಬ ತೆರೀತು. ಛಲೋತನಂಗ ನೋಡ್ಕೊಂಡು ಹೋಗು," ಎಂದು ಹೇಳಿದ ಮಾತು ಈಗಲೂ ಕಿವಿಯಲ್ಲಿ ರಿಂಗಣಿಸುತ್ತಿದೆ.

ಹೋಟೆಲಿಗೆ ಸದಾ ನನ್ನೊಂದಿಗೆ ಜೊತೆ ಇರುತ್ತಿದ್ದವರೆಂದರೆ ಜಾಹಂಗೀರಾ ಮತ್ತು ಬಂದ್ಯಾ. ಬಂದ್ಯಾ ಇನ್ನಿಲ್ಲ; ಆತ ಲಾಡಪ್ಪನ ಅಂಗಡಿಯಲ್ಲಿ ಬಂದರೆ ಬರೀ ತುಂಟಾಟ. ಲಾಡಪ್ಪನ ಹೆಂಡತಿ ಪ್ರೀತಿಯಿಂದ ಬಯ್ಯುವುದು ಮಾಮೂಲಿ. ಹೀಗೆ, ಲಾಡಪ್ಪನ ಅಂಗಡಿ ಬಾಲ್ಯದ ನೆನಪಿನ ಬುತ್ತಿ ಗಂಟನ್ನು ಬಿಡುವಿಲ್ಲದಂತೆ ಬಿಚ್ಚುತ್ತದೆ.

ಹತ್ತಾರು ವರ್ಷಗಳ ನಂತರ ಮತ್ತೆ ಊರಿಗೆ ಕಾಲಿಟ್ಟಾಗ, ಲಾಡಪ್ಪನ ಚಹಾ ಅಂಗಡಿಗೆ ಭೇಟಿ ಕೊಟ್ಟೆ. ಬಿಸಿ-ಬಿಸಿ ಗುಂಡು ಬಜೆಯನ್ನು ಸವಿದೆ. ಲಾಡಪ್ಪನ ಅಡುಗೆಯ ಅದೇ ರುಚಿ, ಅದೇ ಸ್ವಾದ... ಆದರೆ ಲಾಡಪ್ಪ ಮಾತ್ರ ಇರಲಿಲ್ಲ.

ನಿಮಗೆ ಏನು ಅನ್ನಿಸ್ತು?
11 ವೋಟ್