ಊರೆ ದ್ಯಾವ್ರು | ಬಡವನ ಸಾವು ಕೂಡಾ ಘನತೆಯಿಂದ ಕೂಡಿರಬೇಕು

graveyard

ದಲಿತ ಕುಟುಂಬದಲ್ಲಿ ಸಾವಾಗಿ ಅಂತ್ಯಕ್ರಿಯೆಗೆ ಜಾಗವಿಲ್ಲದೆ ಪರದಾಡಿ, ಹೊಳೆ ದಂಡೆಗೆ ಅಂತ್ಯಕ್ರಿಯೆಗೆ ಹೋದಾಗ ಅಲ್ಲಿಯೂ ಜಾಗ ನೀಡದೆ ಕಳಿಸಿದ್ದು ತಿಳಿದು, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದೆವು. ವಿಪರ್ಯಾಸವೆಂದರೆ ದಲಿತರಿಗಾಗಿ ಮೀಸಲಿಟ್ಟ ಜಾಗವನ್ನು ಆ ಊರಿನ ದಲಿತ ನಾಯಕನೇ ಒತ್ತುವರಿ ಮಾಡಿ ಬೇಲಿ ಹಾಕಿಕೊಂಡಿದ್ದು

ಬಡವನ ಸಾವು ಕೂಡಾ ಘನತೆಯಿಂದ ಕೂಡಿರಬೇಕು ಅನ್ನೋದು ಅಂದಿನ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ಎಚ್ ಕೆ ಪಾಟೀಲ್‌ ಅವರ ಹಂಬಲವಾಗಿತ್ತು. ಸತ್ತ ವ್ಯಕ್ತಿಗಳ ಅಂತ್ಯಕ್ರಿಯೆಗೆ ಗ್ರಾಮೀಣ ಪ್ರದೇಶದ ಜನ ಇಂದಿಗೂ ಸಂಕಷ್ಟ ಎದುರಿಸುತ್ತಿದ್ದಾರೆ. ಸ್ಮಶಾನಗಳಿಗೆ ಕಾಯಕಲ್ಪ ಕಲ್ಪಿಸುವ ಸರ್ಕಾರದ ಯೋಜನೆಗೆ ಪ್ರಾರಂಭದಲ್ಲೇ ನಾನಾ ಅಡೆತಡೆಗಳು ಎದುರಾಗಿವೆ. ಬಹುಮುಖ್ಯವಾಗಿ ಒತ್ತುವರಿ ಸಮಸ್ಯೆ ಮತ್ತು ಸಾರ್ವಜನಿಕರ ನಿರಾಸಕ್ತಿ.

ಸ್ಮಶಾನ ಎಂದರೆ ಸಾಕು ಅದೊಂದು ಪಾಳು ಕೊಂಪೆ, ಸುಲಭಕ್ಕೆ ತ್ಯಾಜ್ಯ ಬಿಸಾಡುವ ಜಾಗ ಎಂದೇ ಕುಖ್ಯಾತಿ. ಇಂತಿಪ್ಪ ಸ್ಮಶಾನಗಳಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆ ಪ್ರಯತ್ನಿಸಿದಾಗ, ಬೇಡದ ಸಮಸ್ಯೆಗಳಿಗೆ ತಲೆಯೊಡ್ಡಲು ಅಧಿಕಾರಿಗಳು ಹಿಂಜರಿದರು. ಒತ್ತುವರಿಗಳನ್ನು ತೆರವುಗೊಳಿಸುವುದು ಸುಲಭದ ಮಾತಲ್ಲ. ಅಷ್ಟಕ್ಕೂ, ಅಂತಹ ಸಮಯದಲ್ಲಿ ಅಧಿಕಾರಿಗಳ ನೆರವಿಗೆ ಜನಪ್ರತಿನಿಧಿಗಳು ನಿಲ್ಲುವುದು ದೂರದ ಮಾತಾಗಿತ್ತು. ಹಾಗಾಗಿ ಅಧಿಕಾರಿಗಳು ಹಿಂದೇಟು ಹಾಕಿದ್ದೇ ಹೆಚ್ಚು.

ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಭೂಮಿಯುಳ್ಳವರಿಗೆ ಅಂತ್ಯಕ್ರಿಯೆ ಸಮಸ್ಯೆಯಾಗಿರಲಿಲ್ಲ, ಜಮೀನಿಲ್ಲದ ಕಡು ಬಡವರಿಗೆ ಇದು ಅತ್ಯಂತ ಯಾತನಾಮಯ ಸಂದರ್ಭವಾಗುತ್ತಿತ್ತು. ಒಂದು ಕಡೆ ಸಾವಿನ ನೋವು, ಇನ್ನೊಂದೆಡೆ ಗೌರವಯುತವಾಗಿ ಕಳಿಸಿಕೊಡಲು ಸಾಧ್ಯವಾಗದ್ದು. ಕಳೆದ ಎರಡು ವರ್ಷದ ಹಿಂದೆ ನಡೆದ ಇಂತಹ ಒಂದು ಅಮಾನವೀಯ ಘಟನೆಗೆ ನಾನೂ ಸಾಕ್ಷಿಯಾಗಿದ್ದೇನೆ.

Image
grave yard

ಒಮ್ಮೆ ಬಡ ದಲಿತ ಕುಟುಂಬದಲ್ಲಿ ಸಾವಾಗಿ ಅಂತ್ಯಕ್ರಿಯೆಗೆ ಜಾಗವಿಲ್ಲದೆ ಪರದಾಡುತ್ತಿದ್ದು, ಯಾವುದೋ ಹೊಳೆಯ ದಂಡೆಗೆ ಅಂತ್ಯಕ್ರಿಯೆಗೆ ಹೋದಾಗ, ಅಲ್ಲಿಯೂ ಜನ ಜಾಗ ನೀಡದೆ ಕಳಿಸಿದ್ದು ನಮಗೆ ತಿಳಿದುಬಂತು. ನಮ್ಮ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದೆವು. ವಿಪರ್ಯಾಸ ಏನೆಂದರೆ, ದಲಿತರಿಗಾಗಿ ಮೀಸಲಿಟ್ಟ ಜಾಗವನ್ನು ಆ ಊರಿನ ದಲಿತ ನಾಯಕನೇ ಒತ್ತುವರಿ ಮಾಡಿ ಬೇಲಿ ಹಾಕಿಕೊಂಡಿದ್ದು.

ಆ ಬಡ ಕುಟುಂಬ ಹೆಣದೊಂದಿಗೆ ಸ್ಮಶಾನದ ಬಾಗಿಲಲ್ಲಿ ಕುಳಿತಿದ್ದರು. ನಾವು ಅಧಿಕಾರಿಗಳು ಅದೆಷ್ಟೇ ಸರ್ಕಸ್ ಮಾಡಿದರೂ ಆ ನಾಯಕನನ್ನು ಬಗ್ಗಿಸಲು ಸಾಧ್ಯವಾಗಲಿಲ್ಲ. ಆಗ ನಮಗೆ ಹೊಳೆದಿದ್ದು ಆ ಊರಿನ ಜನರನ್ನು ಒಗ್ಗೂಡಿಸುವುದು. ಅಲ್ಲಿನ ಬಡ ಜನರಿಗೆ, ಸ್ಮಶಾನ ಆ ಊರಿನ ಆಸ್ತಿಯೆಂದೂ, ಅದರ ಪ್ರಾಮುಖ್ಯತೆ ಮತ್ತು ಹಕ್ಕುಗಳ ಬಗ್ಗೆ ತಿಳಿಸಿಕೊಡಲಾಯಿತು. ಮುಂದೆ ನಡೆದಿದ್ದೆಲ್ಲ ಮ್ಯಾಜಿಕ್. ಯಾರಿಗೂ ಬಗ್ಗದ ನಾಯಕ ಜನರ ಆಕ್ರೋಶದ ಮುಂದೆ ಮೆತ್ತಗಾದ. ಅಂತೂ-ಇಂತೂ ಮಧ್ಯರಾತ್ರಿ ಅಂತ್ಯಕ್ರಿಯೆ ನಡೆಯಿತು. ಮಾರನೇ ದಿನ ಜನರೇ ನಿಂತು ಸ್ಮಶಾನ ಒತ್ತುವರಿ ತೆರವಿಗೆ ಅಧಿಕಾರಿಗಳೊಂದಿಗೆ ಕೈ ಜೋಡಿಸಿದರು. ಇದು ನನ್ನ ವೃತ್ತಿ ಜೀವನದಲ್ಲಿ ಹಲವು ಪಾಠಗಳನ್ನು ಕಲಿಸಿದ ಘಟನೆ.

ಮಾಲಂಗಿ ಗ್ರಾಮ ಪಂಚಾಯತಿಯಲ್ಲಿ ಸ್ಮಶಾನ ಅಭಿವೃದ್ಧಿಗಾಗಿ ವಿಸ್ತೃತ ವರದಿ ತಯಾರಿಸಿ, ಆಡಳಿತ ಮಂಡಳಿಯ ಅನುಮೋದನೆ ಪಡೆಯಲಾಯಿತು. ಸುಮಾರು ನಾಲ್ಕು ಸ್ಮಶಾನಗಳನ್ನು ತುರ್ತಾಗಿ ಅಭಿವೃದ್ಧಿ ಪಡಿಸಲೇಬೇಕಾಗಿತ್ತು. ಯಾವ ಸ್ಮಶಾನಕ್ಕೂ ಹೋಗಲು ದಾರಿಯೇ ಇರಲಿಲ್ಲ. ಅಲ್ಲಿ ಸ್ಮಶಾನ ಇರುವ ಸಣ್ಣ ಕುರುಹೂ ಕೂಡ ಇರಲಿಲ್ಲ. ಆಗೆಲ್ಲ, ಸಮುದಾಯಕ್ಕೆ ಒಂದು ಸ್ಮಶಾನ ಇರುತ್ತಿದ್ದವು. ನಾಯಕ ಜನಾಂಗದವರಿಗೆ ಸೂಕ್ತ ಸ್ಥಳಾವಕಾಶವಿಲ್ಲದೇ ಪರದಾಡುತ್ತಿದ್ದರು. ಈ ನಡುವೆಯೇ ಒಂದು ವಿಲಕ್ಷಣ ಸಂಗತಿ ನಡೆಯಿತು.

ಈ ಲೇಖನ ಓದಿದ್ದೀರಾ?: ಜತೆಗಿರುವನೇ ಚಂದಿರ? | ಇವತ್ತಿಗೂ ಕಾಡುತ್ತದೆ ಅಂದು ಗಣಿತ ಕ್ಲಾಸಿನಲ್ಲಿ ಕಳೆದುಹೋದ ಕಿವಿಯೋಲೆ

ಮೊದಲಿಗೆ ನಾಯಕ ಜನಾಂಗಕ್ಕೆ ಮೀಸಲಿಟ್ಟಿದ್ದ ಸ್ಮಶಾನ ಅಭಿವೃದ್ಧಿಪಡಿಸಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಹೀಗಾಗಿ, ಆ ಗ್ರಾಮಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಸ್ಥಳ ನೋಡಲು ಹೊರಟಾಗ, ಅಲ್ಲಿನ ಜನರು ನನಗೆ ಅಲ್ಲಿ ಹೋಗಬಾರದೆಂದು, ಹೋದವರಿಗೆ ಈಗಾಗಲೇ ಕೆಟ್ಟದ್ದಾಗಿದೆ ಎಂದು ಹೇಳುತ್ತಿದ್ದರು. ನನ್ನ ಜೊತೆ ಬರಲು ಸಿಬ್ಬಂದಿ ಮತ್ತು ಆ ಊರಿನ ಹಿರಿಯರು ಹಿಂದೇಟು ಹಾಕಿದರು. ಮೊದಮೊದಲು ನಾನು ತಮಾಷೆಯಾಗಿ ತೆಗೆದುಕೊಂಡಾಗ, ಹುಕಿ ಬಂದ ಜನ ಅಲ್ಲಿನ ದೆವ್ವಗಳ ಬಗ್ಗೆ ತರಹೇವಾರಿ ಬಣ್ಣದ ಕಥೆಗಳನ್ನ ಹೇಳಿದರು.

ಕೊನೆಗೆ, ವಿಪರೀತಕ್ಕೆ ತಂದು ನಿಲ್ಲಿಸಿ, ಅಲ್ಲಿಗೆ ಹೋಗಲೇಕೂಡದೆಂದು ಫರ್ಮಾನು ಹೊರಡಿಸಿದರು. ನಾನು ಈಗಾಗಲೇ ನಮ್ಮ ಮೇಲಾಧಿಕಾರಿಗಳಿಗೆ ಈ ಸ್ಮಶಾನ ಅಭಿವೃದ್ಧಿಪಡಿಸುತ್ತೇವೆ ಎಂದು ಮಾಹಿತಿ ನೀಡಿ, ಆದಷ್ಟು ಶೀಘ್ರದಲ್ಲಿ ಕೆಲಸ ಮುಗಿಸುವ ಮಾತು ನೀಡಿದ್ದರಿಂದ ಸಬೂಬು ಹೇಳುವಂತಿರಲಿಲ್ಲ. ನಾಳೆ ಒಂದಷ್ಟು ಧೈರ್ಯವಂತರೊಂದಿಗೆ ಹೋಗಿ ಜಾಗ ನೋಡಿಯೇ ಬಿಡೋಣ, ಕಾಮಗಾರಿ ಪ್ರಾರಂಭಿಸೋಣ ಎಂದು ಸಂಬಂಧ ಪಟ್ಟವರೊಂದಿಗೆ ಮಾತನಾಡಿದ್ದೆ.

Image
grave yard 2

ಮನೆಗೆ ಬಂದ ನಂತರ ವಿಪರೀತ ಜ್ವರ, ಬಿಡದೇ ಮೂರು ದಿನ ಕಾಡಿ ಹೈರಾಣಾಗಿಸಿತ್ತು. ಇತ್ತ ನನ್ನೊಂದಿಗೆ ಬಂದವರು ಬೈಕ್‌ನಿಂದ ಬಿದ್ದು ಗಾಯ ಮಾಡಿಕೊಂಡಿದ್ದರು. ಶುರುವಾಯ್ತು ನೋಡಿ, ಎಲ್ಲ ದಿಕ್ಕುಗಳಿಂದಲೂ ಉಪದೇಶಗಳು ಹರಿದು ಬರತೊಡಗಿದವು. ಒಂದೆರಡು ತಿಂಗಳು ಸುಮ್ಮನಿದ್ದು, ಇರೋ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಯುದ್ಧೋಪಾದಿಯಲ್ಲಿ ಕೆಲಸ ಆರಂಭಿಸಿದೆವು. ವಾರ ಒಪ್ಪತ್ತಿನಲ್ಲಿ ಜಂಗಲ್ ಸ್ವಚ್ಚಗೊಳಿಸಿ ಸುಂದರ ಗೇಟಿನ, ತಂತಿ ಬೇಲಿ ಬಿಗಿಸಿಕೊಂಡ ಒಂದು ಸ್ಮಶಾನ ಸಿದ್ಧವಾಯಿತು.

ಸ್ಮಶಾನಕ್ಕೊಂದು ಮೆಂಟ್ಲಿಗ್ ರಸ್ತೆ ನಿರ್ಮಿಸಿ, ಪಕ್ಕದಲ್ಲೇ ಒಂದು ಬೋರವೆಲ್ ಕೊರೆಯಿಸಿ, ಅಂತಿಮ ವಿಧಿ ವಿಧಾನಗಳು ಸುಸೂತ್ರವಾಗಿ ನಡೆಯಲು ಬೇಕಾದ ಕನಿಷ್ಠ ಸೌಲಭ್ಯಗಳನ್ನು ಒದಗಿಸಲಾಯಿತು. ನಾಯಕ ಜನಾಂಗದವರಿಗೆ ಸಿಕ್ಕ ಅಚಾನಕ್ ಅದೃಷ್ಟ ಕಂಡು ಬೇರೆ ಜನಾಂಗದವರೂ ಅವರ ಸಮುದಾಯಗಳ ಸ್ಮಶಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ದುಂಬಾಲು ಬೀಳತೊಡಗಿದರು. ಜನರೇ ತಂತಾನೆ ಬದಲಾಗತೊಡಗಿದರು. ಸ್ಮಶಾನಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲತೊಡಗಿದರು.

ಈ ನಡುವೆ ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ನಮ್ಮೊಂದಿಗೆ ನಿಂತರು. ಇದು ನಮ್ಮ ಯೋಚನೆಗಳಿಗೆ ಬಲ ತುಂಬಿತ್ತು. ಈ ನಡುವೆ ಸರ್ಕಾರದಿಂದಲೂ ಒತ್ತುವರಿ ತೆರವಿಗೆ ನಿರ್ದಿಷ್ಠ ನೀತಿ, ನಿಯಮಗಳನ್ನು ರೂಪಿಸಿ ಇನ್ನಷ್ಟು ಬಿಗಿ ನಿಯಮ ಮಾಡಲಾಯಿತು. ನಾವು ಸ್ಮಶಾನಗಳಿಗೆ ಹೊಸ ರೂಪ ನೀಡಲು ಹುರುಪಿನಿಂದ ದುಡಿಯತೊಡಗಿದೆವು. ಸ್ಮಶಾನಗಳಿಗೆ ತಡೆಗೋಡೆ, ಕುಡಿಯುವ ನೀರು, ನೆರಳು, ವಿಶ್ರಾಂತಿ ಸ್ಥಳ, ಪೂಜೆ ಪುನಸ್ಕಾರಕ್ಕೆ ಪ್ರತ್ಯೇಕ ಸ್ಥಳ, ಹೆಣ ಸುಡಲು ಪ್ರತ್ಯೇಕ ಸ್ಥಳ ಹೀಗೆ, ಹಲವು ಸೌಲಭ್ಯಗಳನ್ನು ನೀಡಿದೆವು. ಈ ರೀತಿ ಊರಿಗೊಂದು ಸುಂದರ ಸ್ಮಶಾನ ಸೃಷ್ಟಿಯಾದವು.

ನಿಮಗೆ ಏನು ಅನ್ನಿಸ್ತು?
1 ವೋಟ್