ಜತೆಗಿರುವನೇ ಚಂದಿರ? | ಅಂದು ರಾತ್ರಿ ಅಣ್ಣನಿಗೆ ಬಿದ್ದ ಹೊಡೆತವನ್ನು ಯಾವ ತಂದೆಯೂ ಮಗನಿಗೆ ಹೊಡೆದಿರಲಾರ!

ಕಣ್ಮುಚ್ಚಿ ಬಾಲ್ಯವನ್ನೊಮ್ಮೆ ನೆನೆದರೆ, ಸದಾ ಭಯವನ್ನು ಹೊತ್ತುಕೊಂಡಂತಿದ್ದ ಆ ಬುಡ್ಡಿ ದೀಪದ ಬೆಳಕು, ನಡುರಾತ್ರಿಯ ಕತ್ತಲು, ಪೌರುಷ ಮೆರೆಯುತ್ತಿದ್ದ ಅಬ್ಬ, ನೋವು ನುಂಗುತ್ತಿದ್ದ ಅಮ್ಮಿ, ಚಿಗುರಲ್ಲೇ ಬಾಡುತ್ತಿದ್ದ ಸಸಿಗಳಂತಿದ್ದ ನಾವು... ಹೀಗೆ ಹಲವು ಚಿತ್ರಣಗಳೇ ಕಣ್ಣ ಪರದೆಯ ಹಿಂದೆ ಕೆನೆಗುಟ್ಟುತ್ತವೆ. ಇಂತಹ ಘಟನೆಗಳೇ ನನ್ನ ಇಡೀ ಬಾಲ್ಯವನ್ನು ಆವರಿಸಿವೆ!

ನಮ್ಮೂರಿನ ಸೇತುವೆಯ ಕೆಳಗೆ ಹಾರಂಗಿ ಹರಿಯುತ್ತಲೇ ಇದ್ದಳು. ಕೂಡಿಗೆ ಸರ್ಕಲ್‌ನಲ್ಲಿದ್ದ ಸೇತುವೆ ದಾಟಿದರೆ, ನನ್ನನ್ನು ಬಹುವಾಗಿ ಆಕರ್ಷಿಸುತ್ತಿದ್ದದ್ದು ನಮ್ಮೂರಿನ ಸಂತೇಮಾಳ. ಕೊಪ್ಪಲಿನಲ್ಲಿದ್ದಾಗ ಬಹುದೂರ ಎನಿಸುವಂತಿದ್ದ ಸಂತೆಮಾಳ ಈಗ ಚಾಚಿದರೆ ಕೈಗೆ ಎಟುಕುವಂತ್ತಿತ್ತು. ನಮ್ಮೂರಿನಲ್ಲಿ ಜಾತ್ರೆ ಕಟ್ಟುತ್ತಿದ್ದ ಶನಿ ಮಹಾತ್ಮ ದೇವರ ದೇವಸ್ಥಾನ, ನನ್ನ ನೆಚ್ಚಿನ ಫಾರಂ ಶಾಲೆ, ನಮ್ಮೂರಿನ ಸರ್ಕಾರಿ ಆಸ್ಪತ್ರೆ, ಅಮ್ಮಿ ಕೆಲಸ ಮಾಡುತ್ತಿದ್ದ ಟಾಟಾ ಕಾಫಿ ವರ್ಕ್ಸ್, ಜಯಂತಣ್ಣನ ಟೈಲರ್ ಅಂಗಡಿ, ಎಲ್ಲವೂ ಸಂತೆಮಾಳಕ್ಕೆ ಹೊಂದಿಕೊಂಡು ಎಡಬಲದ ತೆಕ್ಕೆಗಳೊಳಗೆ ಗೂಡು ಕಟ್ಟಿಕೊಂಡಂತೆ ಬೆಚ್ಚಗೆ ತಾಕುತ್ತಿದ್ದವು.

ನಾವಾಗ ನಮ್ಮೂರಿನ ಸಂತೆಮಾಳದ ಎದುರಿಗೇ ಇದ್ದ ಮಣ್ಣಪ್ಪಣ್ಣ ಎಂಬುವವರ ಒಂದು ಹಳೆಯ ವಠಾರವೊಂದಕ್ಕೆ ಬಾಡಿಗೆಗೆ ಬಂದಿದ್ದೆವು. ಆ ವಠಾರ ಬಹುದಿನಗಳಿಂದ ತನ್ನ ಬಣ್ಣ, ರೂಪ ಎರಡನ್ನು ಕಳೆದುಕೊಂಡು ಪಾಳು ಬಿದ್ದಂತಹ ಸ್ಥಿತಿಯಲ್ಲಿತ್ತು. ಓನರ್ ಆರು ತಿಂಗಳಿಗೋ, ವರ್ಷಕ್ಕೋ ಭೇಟಿ ಕೊಡುತ್ತಿದ್ದ ಆ ವಠಾರದ ಮನೆಗಳಿಗೆ ಬಾಡಿಗೆಗೆ ಹೋಗುವುದನ್ನು ಜನರು ಆಗಲೇ ನಿಲ್ಲಿಸಿದ್ದರು. ಆ ಶಿಥಿಲಗೊಂಡ ಮನೆಗಳು ನಿಗೂಢವಾಗಿದ್ದವು. ವಠಾರದ ಪಕ್ಕದ ಕಿರಿದಾಗಿದ್ದ ಓಣಿಯಲ್ಲೇ ನಡೆದು ಹೋದರೆ, ವಠಾರದ ಹಿಂದೆ ಒಂದು ಸ್ಟೋರ್ ರೂಂನಂತಹ ಪುಟ್ಟ ಕೋಣೆ ಇತ್ತು. ಆವತ್ತಿಗೆ ಅದೇ ನಮ್ಮ ಮನೆ. ಗೋಡೆಯ ಬದಿಗೆ ಸ್ಲಾಬ್‌ವೊಂದನ್ನು ಇಟ್ಟು, ಅದರ ಮೇಲೆ ಮೂರು ಕಲ್ಲುಗಳನ್ನು ಒಲೆಯಂತೆ ಜೋಡಿಸಿದ್ದರು. ನನಗೆ ಸಂಭ್ರಮವೋ ಸಂಭ್ರಮ. ಇಷ್ಟು ದಿನ ಕುಳಿತು ಅಡುಗೆ ಮಾಡುತ್ತಿದ್ದ ನಾವು ಈಗ ನಿಂತು ಅಡುಗೆ ಮಾಡಬಹುದಿತ್ತು. ಈಗ ಅಮ್ಮಿ ಸೌದೆಗಾಗಿ ಅವರಿವರ ಬೇಲಿ ಹೊಕ್ಕು ಮೈ-ಕೈ ಪರಚಿಕೊಂಡು ಪರದಾಡಬೇಕಿರಲಿಲ್ಲ. ಅಬ್ಬ ಅಲ್ಲೇ ಹತ್ತಿರದ ಫ್ಲೈವುಡ್ ಫ್ಯಾಕ್ಟರಿಯಿಂದ ಒಲೆ ಉರಿಸಲು ಬೇಕಾದ ಕಟ್ಟಿಗೆಯನ್ನು ತಂದು ಹಾಕುತ್ತಿದ್ದನು. ಒಂದು ರೀತಿ ಹಳ್ಳಿಯಿಂದ ನಗರಕ್ಕೆ ಬಂದಂತಹ ಅನುಭವವದು. ಆದರೆ, ನಾವಿದ್ದ ರೂಮಿನ ಬಾಗಿಲ ಬಳಿಯೇ ಇದ್ದ ಒಂದು ಕಕ್ಕಸು ಕೋಣೆಯನ್ನು ಯಾರಾದರೂ ಬಳಸಿದ ಕೂಡಲೇ ಅದರಿಂದ ಸಹಿಸಲಸಾಧ್ಯವಾದ ದುರ್ನಾತ ಹೊರ ಹೊಮ್ಮುತ್ತಿತ್ತು. ಇದು ಎಷ್ಟೋ ಬಾರಿ ನಮ್ಮ ಊಟದ ಸುಖವನ್ನೇ ಕಿತ್ತುಕೊಂಡಿತ್ತು.

ಈ ಲೇಖನ ಓದಿದ್ದೀರಾ?: ದಾರಿಯಲ್ಲಿ ಸಿಕ್ಕ ಕತೆ - 3 | ಮಿಲನದ ನಂತರ ಗಂಡನ್ನು ಕೊಲ್ಲುವ ಹೆಣ್ಣು ಜೇಡ ಮತ್ತು ಪನ್ನಾ ಕಾಡಿನ 'ಮಂದಣ್ಣ' ಲಖನ್

ಮುಖ್ಯರಸ್ತೆಯ ಬದಿಗೆ ಮುಖಮಾಡಿದ್ದ ಒಂದೆರಡು ತಾರಸಿ ಮನೆಗಳಲ್ಲಿ ಕೆಲವರು ಬಾಡಿಗೆಗಿದ್ದರು. ಅದು ಬಿಟ್ಟರೆ, ನಾವಿದ್ದ  ಓಣಿಯ ತಿರುವಿನ ಒಂದು ಮನೆಯಲ್ಲಿ ಒಬ್ಬ ಅಜ್ಜಿ ವಾಸವಾಗಿದ್ದರು. ಆ ವಠಾರದಂತೆಯೇ ಆ ಅಜ್ಜಿ ಕೂಡ ಸದಾ ನಿಗೂಢವೆನ್ನಿಸುತ್ತಿದ್ದರು ನನಗೆ. ಆ ದೊಡ್ಡ ಕತ್ತಲು ಕೋಣೆಯಲ್ಲಿ ಒಬ್ಬಳೇ ಇರುತ್ತಿದ್ದರು. ದುಡಿಮೆಗೆ ಹೋಗಿರುತ್ತಿದ್ದ ಆಕೆಯ ಮಗ ಹಿಂತಿರುಗಿ ಬರುತ್ತಿದ್ದದ್ದು ಕತ್ತಲು ಕಳೆದ ಮೇಲೆಯೇ ಎಂದು ಆ ಅಜ್ಜಿಯೇ ನನಗೆ ಹೇಳುತ್ತಿದ್ದರು. ಆದರೆ, ಒಮ್ಮೆಯೂ ನಾನಾಕೆಯ ಮಗನನ್ನು ನೋಡಿದ ನೆನಪಾಗುತ್ತಿಲ್ಲ. ನೋಡಲು ಕುಳ್ಳಗೆ, ಬೆಳ್ಳಗಿದ್ದ ಆ ಅಜ್ಜಿ, ಕೂದಲನ್ನು ತುರುಬು ಕಟ್ಟಿ, ಚೆಂದಗೆ ಸೀರೆ ಉಟ್ಟಿರುತ್ತಿದ್ದಳು. ಆದರೆ, ಅವಳ ಉಬ್ಬಿದ ಹಲ್ಲುಗಳು ಮಾತ್ರ ನನಗೆ ಎಲ್ಲಿಲ್ಲದ ಭಯ ತರಿಸುತ್ತಿದ್ದವು. ಅವಳ ಮನೆಯಲ್ಲೊಂದು ಕಾರ ರುಬ್ಬುವ ಕಲ್ಲಿತ್ತು. ಅಮ್ಮಿ ಸಂಜೆ ಕೆಲಸ ಮುಗಿಸಿ ಬಂದವಳೇ ಒಣಮೆಣಸು, ಕೊತ್ತಂಬರಿ ಕಾಳುಗಳನ್ನು ಹುರಿದು ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಕಾಯಿ, ಟೊಮೆಟೊ ಸೇರಿಸಿ ಒಂದು ಬಟ್ಟಲಿಗೆ ಹಾಕಿ, ಒಂದು ಚೊಂಬು ನೀರಿನ ಜೊತೆ ಅದನ್ನು ರುಬ್ಬಿ ತರಲು ಆ ಅಜ್ಜಿಯ ಮನೆಗೆ ಕಳಿಸುತ್ತಿದ್ದಳು. ನನಗೆ ಒಬ್ಬಳೇ ಹೋಗಲು ಬಲು ಭಯವೆನಿಸುತ್ತಿತ್ತು. ಹೇಗೋ ಬಾಗಿಲು ತಟ್ಟಿ ಒಳಹೋಗಿ ಒಳಕಲ್ಲನ್ನು ಒರೆಸಿ, ತೊಳೆದು ಕಾರ ರುಬ್ಬಲು ತೊಡಗಿದರೆ, ಅಜ್ಜಿ ಬಂದು ಪಕ್ಕದಲ್ಲಿಯೇ ಕೂತು, "ನಂಗೆ ಸ್ವಲ್ಪ ಸಾರು ಕೊಡು ಆಯ್ತಾ...?" ಅನ್ನುತ್ತಿದ್ದಳು. ಊಟದ ಹೊತ್ತಿಗೆ ಅಮ್ಮಿ ಅವಳಿಗೆ ಒಂದು ಬಟ್ಟಲು ಸಾರು ಕೊಡುತ್ತಿದ್ದಳು.

ಒಮ್ಮೆ ಪೇಪರ್ ವ್ಯಾಪಾರಕ್ಕೆಂದು ಮೈಸೂರಿಗೆ ಹೋಗಿದ್ದ ಅಬ್ಬ ಬರುವಾಗ ದಿನಣ್ಣನಿಗೆ ಒಂದು ಗೋಲ್ಡ್ ಚೈನ್ ವಾಚ್ ತಂದುಕೊಟ್ಟಿದ್ದನು. ದಿನಣ್ಣ ಆಗ ಸೋಮವಾರಪೇಟೆಯ ಸರ್ಕಾರಿ ಹಾಸ್ಟೆಲಿನಲ್ಲಿ ಹೈಸ್ಕೂಲ್ ಓದುತ್ತಿದ್ದ. ಅವನು ಹಾಸ್ಟೆಲಿಗೆ ಹೋದ ಮೇಲೆ ನಾನು ಬಹುವಾಗಿ ಒಂಟಿತನ ಅನುಭವಿಸಿದೆ.

ಇಬ್ಬರೂ ಒಟ್ಟಿಗೆ ಉಣ್ಣುತ್ತಿದ್ದ ತಟ್ಟೆ ನನಗೆ ಅನ್ಯ ಎಂಬಂತೆ ಭಾಸವಾಗತೊಡಗಿತು. ಬಿಗಿದಪ್ಪಿ ಮಲಗುತ್ತಿದ್ದ ಕಂಬಳಿಯೊಳಗೆ ಒಂದು ರೀತಿಯ ಅನಾಥ ಭಾವ ಮನೆ ಮಾಡಿತ್ತು. ಅಂದು ದಿನಣ್ಣ ಬಹುದಿನಗಳ ನಂತರ, ಗಣೇಶನ ಹಬ್ಬಕ್ಕೆಂದು ಕೊಟ್ಟಿದ್ದ ರಜೆಯಲ್ಲಿ ಮನೆಗೆ ಬಂದಿದ್ದ. ಕರ್ರಗೆ ಓತಿಕ್ಯಾತನಂತೆ ಸಣ್ಣಗಿದ್ದ ದಿನಣ್ಣನನ್ನು ಅಬ್ಬ ಒಮ್ಮೊಮ್ಮೆ ಪ್ರೀತಿ ಉಕ್ಕಿ ಬಂದಾಗ 'ಕಾಲಾ' ಎಂದೇ ಕರೆಯುತ್ತಿದ್ದನು. ಹಾಸ್ಟೆಲಿನ ವಾತಾವರಣಕ್ಕೆ ಹೊಂದಿಕೊಂಡ ದಿನಣ್ಣ, ಬೆಳ್ಳಗೆ ಗುಂಡಗೆ ಅಂದವಾಗಿ ಬದಲಾಗಿದ್ದ. ಎಲ್ಲರೊಂದಿಗೂ ಬೇಗನೆ ಬೆರೆಯುತ್ತಿದ್ದ ಅವನಿಗೆ ಸ್ನೇಹಿತರು ಬಹಳ. ಪ್ರತೀ ವರ್ಷ ಕೂಡಿಗೆ ಸರ್ಕಲ್ಲಿನಲ್ಲಿದ್ದ ಪೆಂಡಾಲೊಂದರಲ್ಲಿ ಇವನು ಮತ್ತು ಇವನ ಗೆಳೆಯರೆಲ್ಲ ಸೇರಿ ಗಣೇಶನನ್ನು ಕೂರಿಸುತ್ತಿದ್ದರು.

ಅಂದು ಹಾಸ್ಟೆಲ್ನಿಂದ ಬಂದವನು ಹಿಗ್ಗಿನಿಂದ ತನ್ನ ಗೆಳೆಯರನ್ನು ಹುಡುಕಿಕೊಂಡು ಹೊರಟೇಬಿಟ್ಟ. ಬಹುದಿನದ ನಂತರ ಬಂದವನು ಅಮ್ಮಿಗೂ ಮುಖ ತೋರಿಸಲಿಲ್ಲ. ಸಂಜೆ ದುಡಿಮೆ ಮುಗಿಸಿ ಬಂದವಳಿಗೆ ದಿನಣ್ಣ ಬಂದಿರುವ ವಿಷಯವನ್ನು ನಾನೇ ತಿಳಿಸಿದೆ. ಅಬ್ಬ ರಾತ್ರಿ ಮನೆಗೆ ಬರುವ ಹೊತ್ತಿಗಾದರೂ ಬರುವನೆಂದುಕೊಂಡು ಅಮ್ಮಿ ಸುಮ್ಮನಾದಳು; ಕೊನೆಗೆ, ಊಟದ ಸಮಯ ಮೀರಿದರೂ ಬಾರದಿದ್ದ ದಿನಣ್ಣನ ದಾರಿ ಕಾದು ಸೋತಳು ಪ್ರತೀ ದಿನ ಅಬ್ಬ ಸಂಜೆ ಮನೆಗೆ ಬಂದಾಗ ನಾವು ಮನೆಯಲ್ಲಿರಬೇಕಿತ್ತು. ಇದು ಅಬ್ಬನ ನಿಯಮ. ಹಾಗಾಗಿ, ನಾವು ಒಮ್ಮೊಮ್ಮೆ ಟಿ.ವಿ ನೋಡಲು ಅಕ್ಕಪಕ್ಕದ ಮನೆಗಳಿಗೆ ಹೋಗಿದ್ದರೂ, ಅಬ್ಬ ಬರುವ ಸೂಚನೆಯನ್ನು ಗ್ರಹಿಸಿ ಸಮಯಕ್ಕೆ ಸರಿಯಾಗಿ ಮನೆ ಸೇರಿಕೊಳ್ಳುತ್ತಿದ್ದೆವು. ಅಂದು ದಿನಣ್ಣ ಮನೆಗೆ ಬರಲೇ ಇಲ್ಲ. ಅಬ್ಬ ಕೆಲಸ ಮುಗಿಸಿ ಮನೆಗೆ ಬಂದ. ಊಟಕ್ಕೆ ಕೂತಾಗ ದಿನಣ್ಣ ಹಾಸ್ಟೆಲಿನಿಂದ ಬಂದ ಸುದ್ದಿಯನ್ನು ಅಮ್ಮಿ ಹೇಳಿದಳು. ಅಬ್ಬ ಸ್ವಲ್ಪ ವಿಚಲಿತನಾದಂತೆ ಅನ್ನಿಸಿದರೂ ಆ ವಿಷಯದ ಬಗ್ಗೆ ಹೆಚ್ಚೇನೂ ಮಾತನಾಡದೆ ಊಟ ಮುಗಿಸಿ ಮಲಗಿದ. ಆದರೆ, ನಿದ್ದೆ ಮಾಡಿದಂತೆ ಅನ್ನಿಸಲಿಲ್ಲ.

ಈ ಲೇಖನ ಓದಿದ್ದೀರಾ?: 'ಒಳ್ಳೆಯ ಬರಹಗಾರರು' ಅಂದರೆ ಯಾರು? ಅವರು 'ಕೆಟ್ಟ ಬರಹಗಾರರು' ಅನ್ನಿಸಿಕೊಳ್ಳುವುದು ಯಾವಾಗ?

ಮಧ್ಯರಾತ್ರಿ ಆಗಿತ್ತು. ಅಬ್ಬ ಎತ್ತರಿಸಿದ ಧ್ವನಿಯಲ್ಲಿ ಗಾಢ ನಿದ್ರೆಯಲ್ಲಿದ್ದ ಅಮ್ಮಿಯನ್ನು ಎಬ್ಬಿಸುತ್ತಿದ್ದ. "ಏಳೇ ಮೇಲೆ... ನಿನ್ ಮಗ ಎಲ್ಲೇ...?" ಎನ್ನುತ್ತ, ಕೆಟ್ಟ ಬೈಗುಳಗಳ ಮಳೆ ಸುರಿಸತೊಡಗಿದ. ನಾನು ಬೆಚ್ಚಿ ಎದ್ದು, ಕಣ್ಣು ಹೊಸಕುತ್ತ ಹಾಸಿಗೆಯ ಮೇಲೆ ಕುಳಿತೆ.

"ಎಂಥಾ ಬುದ್ಧಿ ಕಲಿಸಿದ್ದೀಯೇ ನಿನ್ನ ಮಗನಿಗೆ..." ಎನ್ನುತ್ತ ಅಮ್ಮಿಯ ಕಪಾಳದ ಮೇಲೆ ಬಾರಿಸತೊಡಗಿದ. "ಹೋಗು, ನಿನ್ ಮಗನ್ನ ಕರ್ಕೊಂಡ್ಬಾ..." ಎನ್ನುತ್ತ ಅಮ್ಮಿಯನ್ನು ಎಳೆದು ಆ ನಡುರಾತ್ರಿಯಲ್ಲಿಯೇ ಮನೆಯಿಂದ ಹೊರಹಾಕಿದ. "ಇಷ್ಟ್ ಒತ್ತಲ್ಲಿ ಎಲ್ಲಿ ಅಂತ ಉಡುಕ್ಲಿ...? ಬೆಳಗ್ಗೆ ಅವನೇ ಬತ್ತಾನೆ ಸುಮ್ನಿರಿ..." ಎಂದು ಪರಿಪರಿಯಾಗಿ ಬೇಡಿಕೊಂಡರೂ, ಅಮ್ಮಿಯ ಮಾತಿಗೆ ಲಕ್ಷ್ಯ ಕೊಡದೆ, "ನಡೀ... ಎಲ್ಲವ್ನೇ ಹುಡ್ಕು..." ಎನ್ನುತ್ತ, ಎಡೆಬಿಡದೆ ಹೊಡೆಯುತ್ತ, ನಿಗೂಢವಾಗಿ ಹರಿಯುತ್ತಿದ್ದ ಹಾರಂಗಿ ಹೊಳೆಯ ಸೇತುವೆಯನ್ನು ದಾಟಿ, ಸರ್ಕಲ್ಲಿನಲ್ಲಿದ್ದ ಗಣಪತಿ ಪೆಂಡಾಲ್ ಕಡೆಗೆ ಎಳೆದೊಯ್ದನು. ನಾನು ದಾರಿಯುದ್ದಕ್ಕೂ ನಿದ್ದೆಗಣ್ಣುಗಳನ್ನು ಉಜ್ಜಿ-ಉಜ್ಜಿ ಎಚ್ಚರಿಸುತ್ತ ಅವರ ಹಿಂದೆಯೇ ಓಡತೊಡಗಿದೆ.

ಈಗ ದೂರ ನಿಂತು ನೋಡುವಾಗ ಅನಿಶ್ಚಿತವಾಗಿ ದಾಳಿಯಿಡುತ್ತಿದ್ದ ಇಂತಹ ಘಟನೆಗಳು ನನ್ನ ಇಡೀ ಬಾಲ್ಯವನ್ನು ಆವರಿಸಿವೆ. ಕಣ್ಮುಚ್ಚಿ ಆ ಬಾಲ್ಯವನ್ನೊಮ್ಮೆ ನೆನೆದರೆ, ಸದಾ ಭಯವನ್ನು ಹೊತ್ತುಕೊಂಡಂತಿದ್ದ ಆ ಬುಡ್ಡಿ ದೀಪದ ಬೆಳಕು, ನಡುರಾತ್ರಿಯ ಕತ್ತಲು, ಪೌರುಷ ಮೆರೆಯುತ್ತಿದ್ದ ಅಬ್ಬ, ನೋವು ನುಂಗುತ್ತಿದ್ದ ಅಮ್ಮಿ, ಚಿಗುರಲ್ಲೇ ಬಾಡುತ್ತಿದ್ದ ಸಸಿಗಳಂತಿದ್ದ ನಾವು... ಹೀಗೆ ಹಲವು ಚಿತ್ರಣಗಳೇ ಕಣ್ಣ ಪರದೆಯ ಹಿಂದೆ ಕೆನೆಗುಟ್ಟುತ್ತವೆ.

ಅಮ್ಮಿ ಗಣಪತಿ ಪೆಂಡಾಲ್ ತಲುಪಿ, "ದೀನೂ... ಅಪ್ಪಾ ದೀನೂ..." ಎಂದು ಆ ಕತ್ತಲ ಕಿವಿಯಲ್ಲಿ ಕೂಗುತ್ತಿದ್ದ ಅವಳ ದನಿಯಲ್ಲಿನ ಆರ್ತತೆ ನನ್ನನ್ನೀಗಲೂ ನೋಯಿಸುತ್ತದೆ. ಎಷ್ಟು ಕೂಗಿದರು ಅತ್ತಲಿಂದ ಉತ್ತರ ಬಾರದಿದ್ದಾಗ, ಎದುರಿಗೆ ಇದ್ದ ಅಮೀರಣ್ಣನ ಮಗ ಬಾಬು ದಿನಣ್ಣನ ಆಪ್ತ ಸ್ನೇಹಿತ ಅನ್ನುವುದನ್ನು ನೆನಪಿಸಿಕೊಂಡು ಅವರ ಮನೆಯ ಕಡೆಗೆ ಓಡಿದಳು. ಆ ಮನೆಯ ಬಾಗಿಲು ಬಡಿದು ಅವರನ್ನೆಲ್ಲ ಎಬ್ಬಿಸಿ ವಿಚಾರಿಸಿದಳು. ಅಲ್ಲಿಯೂ ಇಲ್ಲವೆಂದು ತಿಳಿದು, ರಸ್ತೆ ಬದಿಯಲ್ಲಿದ್ದ ಮೋರಿ ಕಟ್ಟೆಯ ಮೇಲೆ ಹತಾಶಳಾಗಿ ತಲೆಯ ಮೇಲೆ ಕೈ ಹೊತ್ತು ಕುಳಿತುಬಿಟ್ಟಳು. ಇಡೀ ಊರು ನಿರ್ಜನವಾಗಿ, ಅಲ್ಲಲ್ಲೇ ಉರಿಯುತ್ತಿದ್ದ ಬೀದಿದೀಪಗಳು ಚೂರು ಚೂರೇ ಬೆಳಕನ್ನು ನಮ್ಮೆಡೆಗೆ ಎರಕ ಹೊಯ್ದಂತೆ ಆ ರಾತ್ರಿ ಮಬ್ಬು ಮಬ್ಬಾಗಿತ್ತು. ಹಗಲಲ್ಲಿ ಲವಲವಿಕೆಯಿಂದಿರುತ್ತಿದ್ದ ಪುಟ್ಟ್ರಾಜಣ್ಣನ ಸೋಡಾ ಅಂಗಡಿ, ಶರೀಫಣ್ಣನ ಫಂಕ್ಚರ್ ಶಾಪ್, ಅಬ್ದುಲ್ಲಣ್ಣನ ದಿನಸಿ ಅಂಗಡಿ, ಶಿವಣ್ಣನ  ಹೆಂಡದಂಗಡಿ ಎಲ್ಲವೂ ಮೋರೆ ಮುಚ್ಚಿಕೊಂಡು ಸ್ತಬ್ಧವಾಗಿದ್ದವು.

ಈ ಲೇಖನ ಓದಿದ್ದೀರಾ?: ಅಡಗುದಾಣದಲ್ಲಿರುವ ಇರಾನ್ ಮಹಿಳಾ ಪ್ರತಿಭಟನಾಕಾರರೊಬ್ಬರ ಸಂದರ್ಶನ

ಅಷ್ಟರಲ್ಲಿ ಅಬ್ಬ ಅಮ್ಮಿಯ ಬಳಿ ಬಂದು, ಅರ್ಧಂಬರ್ಧ ಕಟ್ಟಿ ನಿಲ್ಲಿಸಿದ್ದ ಗಣಪತಿ ಪೆಂಡಾಲಿನ ಪಕ್ಕದಲ್ಲಿದ್ದ ಒಂದು ಕೋಣೆಯ ಕಡೆ ಕೈ ತೋರಿಸಿ, "ಅಲ್ ಮಲ್ಗವ್ನೆ... ಹೋಗ್ ಕರ್ಕೊಂಡ್ಬಾ," ಎಂದನು. ಅಮ್ಮಿ ಹೋಗಿ, "ದೀನೂ... ಏಳಪ್ಪಾ... ನಿನ್ನ ಇನ್ನು ಬುಡ್ತಾನಾ?" ಎನ್ನುತ್ತ, ಗಾಡ ನಿದ್ರೆಯಲ್ಲಿದ್ದವನನ್ನು ಅಲುಗಾಡಿಸಿದಳು. ಏಳೆಂಟು ಹುಡುಗರ ನಡುವಿನಲ್ಲಿ ಮಲಗಿದ್ದ ದಿನಣ್ಣ, ಅಮ್ಮಿಯ ದನಿಯನ್ನು ಕೇಳುತ್ತಲೇ ಮಿಡುಕಿ ಎದ್ದು ಗಾಬರಿಯಿಂದ ಕಣ್ಣು ಹೊಸಕುತ್ತ ಆ ಕೋಣೆಯಿಂದ ಹೊರಬಂದ. "ಗಣಪತಿ ಕಲೆಕ್ಷನ್‌ಗೆ ಹೋಗಿದ್ವಿ... ಬಂದಿದ್ದು ಲೇಟಾಯ್ತು... ಅದಕ್ಕೆ ಇಲ್ಲೇ ಮಲ್ಕೊಂಡೆ," ಅನ್ನುತ್ತ ಹೊರಬಂದವನೇ, ಎದುರಿಗೆ ದೈತ್ಯನಂತೆ ಕಣ್ಣು ಕೆಕ್ಕರಿಸಿಕೊಂಡು ನಿಂತಿದ್ದ ಅಬ್ಬನನ್ನು ಕಂಡು ನಡುಗತೊಡಗಿದ. ಅಂದು ರಾತ್ರಿ ದಿನಣ್ಣನಿಗೆ ಬಿದ್ದ ಹೊಡೆತವನ್ನು ಯಾವ ತಂದೆಯೂ ತಾನು ಹೆತ್ತ ಮಗನಿಗೆ ಹೊಡೆದಿರಲಾರ! ತಾನು ಮೆಟ್ಟಿದ್ದ ನೀಲಿ ಬಾರಿನ ಹವಾಯಿ ಚಪ್ಪಲಿಯನ್ನು ಬಿಚ್ಚಿಕೊಂಡು ಮನೆ ಮುಟ್ಟುವ ತನಕ ಹೊಡೆದ ವ್ಯಕ್ತಿ ಹೇಗೆ ತಂದೆಯಾದಾನು ಎಂದು ಆ ಎಳೆ ಮನಸ್ಸು ಕೆದಕಿ-ಕೆದಕಿ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಲೇ ಇತ್ತು. ಇಂದಿಗೂ ಉತ್ತರ ಸಿಗದ ಆ ಪ್ರಶ್ನೆ ಮನದ ಮೂಲೆಯಲ್ಲಿ ಹಾಗೆಯೇ ಇದೆ. ಅಂದು ನನ್ನ ಪ್ರೀತಿಯ ಅಣ್ಣನನ್ನು ಘಾಸಿಗೊಳಿಸಿದ್ದ ಅಬ್ಬನ ಮೇಲೆ ಹುಟ್ಟಿಕೊಂಡ ಕೆಂಡದಂತಹ ಕೋಪವನ್ನು ಹಲ್ಲುಗಳ ನಡುವೆ ಸಿಕ್ಕಿಸಿ ನುಚ್ಚುನೂರು ಮಾಡಿದ್ದೆ.  ಒಂದೊಂದು ಏಟನ್ನೂ ತಾಳಲಾರದೆ ಚೀರುತ್ತಿದ್ದ ದಿನಣ್ಣನ ದನಿ ಕತ್ತಲ ಮೌನವನ್ನೇ ಸೀಳುತ್ತಿತ್ತು. ರಾತ್ರಿಯಿಡೀ ನಿದ್ದೆಯಿಲ್ಲದೆ, ಬೆಳಗನ್ನು ತಡವುತ್ತಲೇ ಎದ್ದ ದಿನಣ್ಣ, ಅಬ್ಬ ತಂದುಕೊಟ್ಟಿದ್ದ ಗೋಲ್ಡ್ ಚೈನ್ ವಾಚನ್ನು ಬಿಚ್ಚಿ ಮನೆಯ ಕಟ್ಟೆಯ ಮೇಲಿಟ್ಟು, ಊದಿದ್ದ ಮುಖವನ್ನು ಹೊತ್ತು ತಿರುತಿರುಗಿ ನೋಡುತ್ತ ಹಾಸ್ಟೆಲ್‌ಗೆ ಹೊರಟುಹೋದ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

ಕಲಾಕೃತಿಗಳ ಕೃಪೆ: Unsplash ಜಾಲತಾಣ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app