ವರ್ತಮಾನ | ಹಾಸನಾಂಬೆ ಮತ್ತು ಭಕ್ತರ ನಡುವೆ ಜಿಲ್ಲಾಡಳಿತ ಮಧ್ಯವರ್ತಿಯಂತೆ ವರ್ತಿಸುವುದು ಸರಿಯೇ?

ಪ್ರತೀ ವರ್ಷ ಹಾಸನಾಂಬ ದೇಗುಲ ತೆರೆದಾಗಲೂ ಜಿಲ್ಲಾಡಳಿತವು, "ಈ ಬಾರಿ ಕೂಡ ದೀಪ ಹಾಗೆಯೇ ಉರಿಯುತ್ತಿತ್ತು, ಅನ್ನ ಹಳಸಿರಲಿಲ್ಲ, ಹೂವು ಬಾಡಿರಲಿಲ್ಲ," ಎಂದು ಬಣ್ಣ ಕಟ್ಟುವುದು ಸಹಜವಾಗಿಬಿಟ್ಟಿದೆ. 2018ರಲ್ಲಿ ಸ್ವತಃ ದೇಗುಲದ ಅರ್ಚಕರೇ ಇದನ್ನು ಅಲ್ಲಗಳೆದು, ವಾಸ್ತವಾಂಶ ಏನೆಂದು ತಿಳಿಸಿದ್ದರು. ಈ ವಿಷಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಯಾರದು?

ದೇವರ ಎದುರು ಎಲ್ಲರೂ ಸಮಾನರಲ್ಲವೇ? ತನ್ನ ದರ್ಶನ ಪಡೆಯಲೆಂದು ಬರುವ ಭಕ್ತರನ್ನು ವಿಐಪಿ, ವಿವಿಐಪಿ, ಸಾಮಾನ್ಯ, ಉಳ್ಳವರು, ಇಲ್ಲದವರು ಅಂತೆಲ್ಲ ವಿಂಗಡಿಸಿ ಎಂದು ದೇವರು ಆಡಳಿತ ವ್ಯವಸ್ಥೆಗೆ ಸೂಚನೆ ನೀಡಿರಲು ಸಾಧ್ಯವೇ? ಇಲ್ಲವೆಂದಾದರೆ, ದೇವರ ಬಳಿ ತಮ್ಮ ಇಷ್ಟ-ಕಷ್ಟಗಳನ್ನು ಹೇಳಿಕೊಳ್ಳಲು ಬರುವ ಭಕ್ತರನ್ನು ಹೀಗೆ ವಿಂಗಡಿಸಿ ತಾರತಮ್ಯ ಎಸಗುವುದು ಸರಿಯೇ? ಇದು ಆಡಳಿತ ವ್ಯವಸ್ಥೆ ದೇವರಿಗೆ ತೋರುವ ಅಗೌರವವಲ್ಲವೇ? ಇದರಿಂದ ಸಾಮಾನ್ಯ ಭಕ್ತರ ಭಾವನೆಗಳಿಗೆ ಘಾಸಿ ಆಗುವುದಿಲ್ಲವೇ?

Eedina App

ವಿಜ್ಞಾನದ ಮೂಲಭೂತ ನಿಯಮಗಳಿಗೆ ವಿರುದ್ಧವಾದ ವಿದ್ಯಮಾನಗಳು ಇಲ್ಲಿ ಜರುಗುತ್ತವೆ ಎಂಬ ನಂಬಿಕೆಯನ್ನು ಜನಮಾನಸದಲ್ಲಿ ಬಿತ್ತಿ, ಅದರ ಪೂರ್ವಾಪರ ಪರೀಕ್ಷಿಸುವ ಇಚ್ಛೆಯನ್ನು ವೈಜ್ಞಾನಿಕ ಮನೋಭಾವ ಹೊಂದಿರುವ ಜನ ವ್ಯಕ್ತಪಡಿಸಿದರೆ, ಆಡಳಿತ ವ್ಯವಸ್ಥೆಯು "ಇದು ಭಕ್ತರ ನಂಬಿಕೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರ," ಎನ್ನುವ ಸಬೂಬಿನ ಮೊರೆಹೋಗುತ್ತದೆ. ‘ಪವಾಡ' ಜರುಗುತ್ತಿದೆ ಎಂದು ಪ್ರತಿ ಬಾರಿಯೂ ಘೋಷಿಸಲು ಉತ್ಸಾಹ ತೋರುವ ಆಡಳಿತ ವ್ಯವಸ್ಥೆ, ಭಕ್ತರಲ್ಲಿ ಭೇದ-ಭಾವ ಮಾಡುವುದು ಕೂಡ ಅವರ ಭಾವನೆಗಳ ಜೊತೆ ಚೆಲ್ಲಾಟ ಆಡಿದಂತೆ ಎಂದು ಭಾವಿಸಿ, ದೇವರ ಮೂರ್ತಿಯ ದರ್ಶನಕ್ಕೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲೂ ಮುತುವರ್ಜಿ ತೋರಬೇಕಲ್ಲವೇ? 

ಈ ಲೇಖನ ಓದಿದ್ದೀರಾ?: ನುಡಿಚಿತ್ರ | ತೇಜಸ್ವಿ ಮತ್ತು ಕರ್ನಾಟಕದ ಹುಡುಗ-ಹುಡುಗಿಯರು

AV Eye Hospital ad

ವರ್ಷಕ್ಕೊಮ್ಮೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಮಾತ್ರ ಬಾಗಿಲು ತೆರೆಯುವ ಹಾಸನದ ಹಾಸನಾಂಬ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ವೇಳೆ ಜಿಲ್ಲಾಡಳಿತ ನಡೆದುಕೊಳ್ಳುವ ರೀತಿಯನ್ನು ಗಮನಿಸುವವರಲ್ಲಿ ಈ ಪ್ರಶ್ನೆಗಳು ಮೂಡುವುದು ಸಹಜ. ಈ ದೇವಸ್ಥಾನಕ್ಕೆ ಭೇಟಿ ನೀಡಲು ರಾಜಕಾರಣಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಮುಗಿಬೀಳುವುದು ಕಳೆದ ಕೆಲವು ವರ್ಷಗಳಿಂದ ತೀರಾ ಸಹಜ ಸಂಗತಿಯಾಗಿದೆ. ಕಿಲೋಮೀಟರುಗಳುದ್ದದ ಸರತಿಸಾಲಿನಲ್ಲಿ ದಿನವಿಡೀ ನಿಂತು ದೇವಸ್ಥಾನಕ್ಕೆ ಪ್ರವೇಶ ಪಡೆಯುವ ಸವಾಲಿಗೆ ಮೈ-ಮನಸ್ಸು ಒಡ್ಡಲು ಸಿದ್ಧರಿಲ್ಲದ ಪ್ರಭಾವಿಗಳು ಮತ್ತು ಪ್ರಭಾವಿಗಳ ಸಂಪರ್ಕ ಹೊಂದಲು ಸಾಧ್ಯವಿರುವವರು, ವಿವಿಐಪಿ ಪಾಸು ಅಥವಾ ಅವರಿವರಿಂದ ಹೇಳಿಸಿ ತ್ವರಿತಗತಿಯಲ್ಲಿ ದೇವಸ್ಥಾನಕ್ಕೆ ಪ್ರವೇಶ ಪಡೆಯಲು ಮುಂದಾಗುತ್ತಾರೆ. ರಾಜಕಾರಣಿಗಳು ಮತ್ತಿತರೆ ಅತಿಗಣ್ಯ ವ್ಯಕ್ತಿಗಳು ಬಂದಾಗ ಸಾಮಾನ್ಯ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತದೆ. ಅದುವರೆಗೂ ತಾಳ್ಮೆಯಿಂದ ಕಾಯುತ್ತ ನಿಂತ ಭಕ್ತರು ಸಹನೆ ಕಳೆದುಕೊಂಡು, ಇಡೀ ಪ್ರಕ್ರಿಯೆಯ ಹೊಣೆ ಹೊತ್ತ ಜಿಲ್ಲಾಡಳಿತದ ವಿರುದ್ಧ ತಮ್ಮ ಆಕ್ರೋಶ ಹೊರಹಾಕುವುದೂ ಇದೆ. ಇದಲ್ಲದೆ, ಒಂದು ಸಾವಿರ ಮತ್ತು ಮುನ್ನೂರು ರೂಪಾಯಿ ಪಾವತಿಸಿದವರಿಗೆ ಶೀಘ್ರ ದರ್ಶನಕ್ಕೆ ಅವಕಾಶ ಮಾಡಿಕೊಡುವ ವ್ಯವಸ್ಥೆಯೂ ಇದೆ.

ಪ್ರೀತಂ ಗೌಡ ಮತ್ತು ಎಲ್ ನಾಗೇಂದ್ರ

ಈ ಬಾರಿ ದೇವರ ದರ್ಶನಕ್ಕೆ ಅವಕಾಶ ಸಿಗಲಿಲ್ಲವೆಂಬ ಕಾರಣಕ್ಕೆ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ ಅವರು, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ಹಾಸನಾಂಬ ದೇವಸ್ಥಾನಕ್ಕೆ ತಮ್ಮ ಕುಟುಂಬದೊಂದಿಗೆ ಬಂದಿದ್ದ ಅವರು, ತಾನು ಶಾಸಕನೆಂದು ಪೊಲೀಸರಿಗೆ ತಿಳಿಸಿದಾಗ, "ಹಾಗಾದರೆ ನೀವೊಬ್ಬರು ಮಾತ್ರ ಬನ್ನಿ," ಎನ್ನುವ ಸೂಚನೆ ಸಿಕ್ಕಿದೆ. ಇದರಿಂದ ಆಕ್ರೋಶಗೊಂಡ ಅವರು, "ತಮ್ಮ ಪಕ್ಷದ ಶಾಸಕರನ್ನೇ ಈ ಮಟ್ಟಕ್ಕೆ ನಡೆಸಿಕೊಂಡಿದ್ದಾರೆ, ಫೋನ್ ತೆಗೆಯೋ ಸೌಜನ್ಯವೂ ಇಲ್ಲ," ಅಂತೆಲ್ಲ ಆಕ್ರೋಶ ಹೊರಹಾಕಿದರು. ಸ್ವಲ್ಪ ಹೊತ್ತು ಕಾಯುವ ಸಂದರ್ಭ ಎದುರಾದದ್ದಕ್ಕೆ ಶಾಸಕರಿಗೆ ಈ ಪರಿ ಸಿಟ್ಟು ಬರುವುದಾದರೆ, ಗಂಟೆಗಟ್ಟಲೆ, ಕೆಲವೊಮ್ಮೆ ದಿನವಿಡೀ ಕಾಯುವ ಸಾಮಾನ್ಯ ಭಕ್ತರಿಗೆ ಏನು ಅನ್ನಿಸಬಹುದು ಎಂದು ಜನಪ್ರತಿನಿಧಿಗಳು ಎಂದಾದರೂ ಯೋಚಿಸುವರೇ?

ದೇವರಿಗೆ ತನ್ನ ದರ್ಶನಕ್ಕೆ ಭಕ್ತರು ಹೇಗೆ ಬರುತ್ತಾರೆ ಎನ್ನುವುದು ತಿಳಿಯುವುದಿಲ್ಲವೇ? ಸರತಿ-ಸಾಲಿನಲ್ಲಿ ನಿಂತು, ಶ್ರಮವಹಿಸಿ ಬರುವ ಭಕ್ತರು ಮತ್ತು ಪ್ರಭಾವ ಬಳಸಿ ನೇರವಾಗಿ ನುಗ್ಗುವ ಭಕ್ತರು ಇಬ್ಬರನ್ನೂ ದೇವರು ಸಮಾನವಾಗಿ ಕಾಣುವುದೇ?

ಈ ಲೇಖನ ಓದಿದ್ದೀರಾ?: ಗಾಯ ಗಾರುಡಿ | ದೊಡ್ಡಬಳ್ಳಾಪುರದ ಟೌನ್‍ಹಾಲ್‌ನಲ್ಲಿ ಮೇಧಾ ಪಾಟ್ಕರ್ ಎಬ್ಬಿಸಿದ 'ಲಗಾನ್' ಹಾಡಿನ ಹವಾ

"ದೇವಸ್ಥಾನದ ಬಾಗಿಲು ಮುಚ್ಚುವಾಗ ದೇವರ ಬಳಿ ಇಡುವ ನೈವೇದ್ಯದ ಅನ್ನ ವರ್ಷ ಕಳೆದರೂ ಹಳಸಿರುವುದಿಲ್ಲ, ದೇವರ ಮೂರ್ತಿಗಳ ಅಲಂಕಾರಕ್ಕೆ ಮುಡಿಸುವ ಹೂವು ವರ್ಷ ಕಳೆದರೂ ಬಾಡಿರುವುದಿಲ್ಲ ಹಾಗೂ ಹಚ್ಚಿದ ದೀಪ ಆರಿರುವುದಿಲ್ಲ," ಎಂಬ ವಿಶೇಷತೆಯನ್ನು ಈ ದೇವರು, ದೇವಸ್ಥಾನದೊಂದಿಗೆ ತಳುಕು ಹಾಕಲಾಗಿದೆ. ಪ್ರತೀ ವರ್ಷ ದೇವಸ್ಥಾನ ತೆರೆದಾಗಲೂ ಜಿಲ್ಲಾಡಳಿತ, "ಈ ಬಾರಿ ಕೂಡ ದೀಪ ಹಾಗೆಯೇ ಉರಿಯುತ್ತಿತ್ತು, ಅನ್ನ ಹಳಸಿರಲಿಲ್ಲ, ಹೂವು ಬಾಡಿರಲಿಲ್ಲ," ಎಂದು ಹೇಳುವುದು ಕೂಡ ಹಿಂದಿನಿಂದಲೂ ನಡೆದುಕೊಂಡೇ ಬಂದಿದೆ. 2018ರಲ್ಲಿ ಇಂತಹ ಅವೈಜ್ಞಾನಿಕ ವಿದ್ಯಮಾನಗಳು ಜರುಗಲು ಹೇಗೆ ಸಾಧ್ಯವೆಂದು ಪರೀಕ್ಷಿಸಲು ತಮಗೆ ಅವಕಾಶ ಕಲ್ಪಿಸಿಕೊಡಿ ಎನ್ನುವ ಬೇಡಿಕೆಯನ್ನು ಭಾರತ ಜ್ಞಾನ-ವಿಜ್ಞಾನ ಸಮಿತಿಯನ್ನೂ ಒಳಗೊಂಡಂತೆ ಹಾಸನದ ಕೆಲ ಪ್ರಜ್ಞಾವಂತರು ಜಿಲ್ಲಾಡಳಿತದ ಮುಂದಿಟ್ಟಿದ್ದರು. ಈ ವೇಳೆ ಅರ್ಚಕರೊಬ್ಬರು, "ಅಂತಹ ಯಾವುದೇ ಪವಾಡವೂ ಇಲ್ಲಿ ಜರುಗುತ್ತಿಲ್ಲ. ದೇವಸ್ಥಾನ ತೆರೆಯುವ ಮುನ್ನ ನಾವೇ ದೀಪ ಹಚ್ಚಿಡುತ್ತೇವೆ, ಹೊಸದಾಗಿ ಹೂವಿನ ಅಲಂಕಾರ ಮಾಡುತ್ತೇವೆ, ದೇವಸ್ಥಾನದ ಬಾಗಿಲು ಮುಚ್ಚುವ ಸಂದರ್ಭದಲ್ಲಿ ನೈವೇದ್ಯದ ಅನ್ನ ಇಟ್ಟಿರುವುದೇ ಇಲ್ಲ," ಎಂದು ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಕೆಲ ಧಾರ್ಮಿಕ ಸಂಘಟನೆಗಳು, "ಪವಾಡ ರಹಸ್ಯ ಬಯಲು ಮಾಡಲು ಹೊರಟಿರುವವರಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದರೆ, ಅದರಿಂದ ದೇವರಿಗೆ ಅಪಚಾರವಾಗುತ್ತದೆ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತದೆ," ಎಂದು ವಿರೋಧ ವ್ಯಕ್ತಪಡಿಸಿದ್ದವು.

ತನ್ನ ಶಕ್ತಿ-ಸಾಮರ್ಥ್ಯಗಳನ್ನು ಪವಾಡಗಳ ಮೂಲಕ ಸಾಬೀತು ಮಾಡಿ ತೋರಿಸಬೇಕಾದ ಅನಿವಾರ್ಯತೆ ದೇವರುಗಳಿಗೆ ಎದುರಾಗುತ್ತಿದೆಯೇ? ‘ಪವಾಡ' ಜರುಗುತ್ತದೆ ಎಂದು ಸುದ್ದಿಯಾಗುವ ದೇವಸ್ಥಾನಗಳೆಡೆಗೆ ಹರಿಯತೊಡಗುವ ಭಕ್ತಸಾಗರವನ್ನು ಗಮನಿಸುವ ಯಾರಿಗೇ ಆದರೂ ಹೀಗೆ ಅನಿಸುವುದು ಸಹಜ ತಾನೇ? ಕೇರಳದ ಶಬರಿಮಲೈ ದೇವಸ್ಥಾನದ ಬಳಿ ಮಕರ ಸಂಕ್ರಮಣದ ವೇಳೆ ಕಾಣುವ ಜ್ಯೋತಿಯ ಹಿಂದಿರುವುದು ಮನುಷ್ಯರ ಕೈವಾಡವೇ ಹೊರತು, ದೇವರ ಪವಾಡವಲ್ಲ ಎಂಬುದು ಬಹಿರಂಗವಾದಾಗಲೂ ಸಾಕಷ್ಟು ಚರ್ಚೆ ನಡೆದಿತ್ತು. ಕೆಲ ದೇವಸ್ಥಾನಗಳೊಂದಿಗೆ ತಳುಕು ಹಾಕಿಕೊಳ್ಳುವ ಪವಾಡಗಳ ಹಿಂದಿರುವ ರಹಸ್ಯ ಬಯಲು ಮಾಡುವುದು ಸರ್ಕಾರದ ಆದ್ಯತೆಯಾಗಬೇಕೋ ಅಥವಾ ವಾಸ್ತವ ಬಹಿರಂಗಪಡಿಸದೆ ಪವಾಡಗಳ ಹೆಸರಿನಲ್ಲಿ ದೇವಸ್ಥಾನಕ್ಕೆ ಭಕ್ತರನ್ನು ಕರೆತರುವುದು ಮುಖ್ಯವಾಗಬೇಕೋ? ಭಕ್ತರ ವಲಯದಲ್ಲಿ ಚಾಲ್ತಿಯಲ್ಲಿರುವ ಪವಾಡಗಳ ಸತ್ಯಾಸತ್ಯತೆ ಪರಿಶೀಲಿಸಲು ಸರ್ಕಾರ ಮುಂದಾಗುವುದರಿಂದ ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎನ್ನುವುದಾದರೆ, ಕನಿಷ್ಠಪಕ್ಷ ಇಂತಹ ಪವಾಡಗಳ ಕುರಿತು ತಟಸ್ಥ ಧೋರಣೆಯನ್ನಾದರೂ ತಳೆಯಬೇಕಲ್ಲವೇ? ಅದರ ಬದಲಿಗೆ ಪವಾಡ ಜರುಗುತ್ತಿದೆ ಎಂದು ಘೋಷಿಸುವ ಜವಾಬ್ದಾರಿ ಹೊರುವ ಅಗತ್ಯವಿದೆಯೇ? ಕೆಲ ದಿನಗಳ ಮಟ್ಟಿಗೆ ಆಡಳಿತ ವ್ಯವಸ್ಥೆಯ ಸಂಪನ್ಮೂಲಗಳೆಲ್ಲವೂ ದೇವಸ್ಥಾನವೊಂದರ ನಿರ್ವಹಣೆಗಾಗಿ ಮೀಸಲಾಗುವುದು ಸೂಕ್ತವೇ? ಸರ್ಕಾರ ಪವಾಡಗಳಿಂದ ಅಂತರ ಕಾಯ್ದುಕೊಳ್ಳಬೇಕೆಂದು ನಿರೀಕ್ಷಿಸುವುದರಿಂದ ಕೂಡ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆಯೇ?

ಈ ಲೇಖನ ಓದಿದ್ದೀರಾ?: ಈಚೆ ದಡದಿಂದ | ಸಾಗರ ತಾಲೂಕಿನ ಉರುಳುಗಲ್ಲಿನ ಮಂದಿಗೆ ಆಸ್ಪತ್ರೆಗೆ ಹೋಗಲು ದಡಿಗೆಯೇ ಗತಿ!

2018ರಲ್ಲಿ ಹಾಸನಾಂಬ ದೇಗುಲದ ಅರ್ಚಕರೇ ಹೇಳಿದ್ದ ವಾಸ್ತವಾಂಶವನ್ನು ಜನರಿಗೆ ತಿಳಿಸುವ ಉತ್ಸಾಹ ಆಡಳಿತ ವ್ಯವಸ್ಥೆ ಮತ್ತು ಮಾಧ್ಯಮಗಳಿಗೆ ಇರುವ ಹಾಗೆ ತೋರುತ್ತಿಲ್ಲ. ಹೀಗಾಗಿ, ಪವಾಡ ಜರುಗುತ್ತಿದೆ ಎಂದು ಬಿಂಬಿಸುವುದು ಮುಂದುವರಿದೇ ಇದೆ. ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ದೇವರು ಮತ್ತು ಭಕ್ತರ ನಡುವಿನ ಸಂಬಂಧವನ್ನು ಸರಳಗೊಳಿಸುವ ಬದಲಿಗೆ, ಪವಾಡವನ್ನು ಊರುಗೋಲಾಗಿಸಿಕೊಂಡು ಅದನ್ನು ಮತ್ತಷ್ಟು ಸಂಕೀರ್ಣಗೊಳಿಸಿ, ಆಡಳಿತ ವ್ಯವಸ್ಥೆಯು ದೇವರು ಮತ್ತು ಭಕ್ತರ ನಡುವಿನ ಮಧ್ಯವರ್ತಿಯಂತೆ ನಡೆದುಕೊಳ್ಳುವುದು ಸಮಂಜಸವೇ? ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಜವಾಬ್ದಾರಿ ಆಡಳಿತದ ಹೊಣೆ ಹೊತ್ತವರ ಮೇಲಿಲ್ಲವೇ?

ನಿಮಗೆ ಏನು ಅನ್ನಿಸ್ತು?
7 ವೋಟ್
eedina app