ವರ್ತಮಾನ | ದ್ವೇಷದ ನಂಜು ಬಿತ್ತಿ ಉತ್ತಮ ಸಮಾಜ ರೂಪಿಸಿದ ನಿದರ್ಶನ ಎಲ್ಲಾದರೂ ಉಂಟೇ?

ಸರ್ಕಾರದ ನೀತಿ ನಿಲುವುಗಳಲ್ಲೇ ತಾರತಮ್ಯ ಧೋರಣೆ ತುಂಬಿರುವ ಹೊತ್ತಿನಲ್ಲಿ, ಖಾಸಗಿ ವಲಯದಲ್ಲೂ ಚಾಲ್ತಿಯಲ್ಲಿರುವ ಹೊರಗಿಡುವಿಕೆಯ ಕಾರ್ಯಸೂಚಿಗೆ ತಡೆ ಒಡ್ಡುವವರು ಯಾರು? ತಮ್ಮ ತಪ್ಪಿರದಿದ್ದರೂ ಧರ್ಮದ ಕಾರಣಕ್ಕಾಗಿ ಅವಕಾಶ ವಂಚಿತರಾಗುವ ಯುವ ಮನಸ್ಸುಗಳಲ್ಲಿ ಈ ಸಮಾಜದ ಕುರಿತು ಎಂತಹ ಅಭಿಪ್ರಾಯ ಮೂಡಬಹುದು?

ತಯಾರಿಕಾ ಕ್ಷೇತ್ರದಲ್ಲಿ ಗುಣಮಟ್ಟದ ಉತ್ಪಾದನೆಗೆ ಹೆಸರುವಾಸಿಯಾದ ಬಹುರಾಷ್ಟ್ರೀಯ ಕಂಪನಿಯ ಸಂದರ್ಶನ ಎದುರಿಸಿದ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿ, "ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆಲ್ಲ ನಾನು ಸರಿಯಾದ ಉತ್ತರವನ್ನೇ ನೀಡಿದ್ದೆ. ಆದರೂ ನನ್ನನ್ನು ಆಯ್ಕೆ ಮಾಡಿಲ್ಲ. ನನಗಿಂತಲೂ ಕಡಿಮೆ ಸರಿ ಉತ್ತರ ನೀಡಿದವರನ್ನೆಲ್ಲ ಆರಿಸಿಕೊಂಡರು. ಅವರು ನನಗೆ ಉದ್ಯೋಗ ನೀಡದಿರಲು ನನ್ನ ಧರ್ಮವೂ ಕಾರಣವಿರಬಹುದು ಅನ್ನುವ ಅನುಮಾನ ನನಗಿದೆ ಸರ್..." ಎಂದು ವಿಷಾದ ವ್ಯಕ್ತಪಡಿಸಿದ್ದ.

ಕೆಲಸ ಸಿಗದ ಬೇಜಾರಿನಲ್ಲಿ ವಿದ್ಯಾರ್ಥಿ ಹೀಗೆ ಹೇಳುತ್ತಿರಬಹುದು ಎಂದು ಭಾವಿಸಿದ - ಅವನನ್ನು ಆ ಉದ್ಯೋಗಕ್ಕೆ ಶಿಫಾರಸು ಮಾಡಿ ಕಳಿಸಿದ್ದ ಅಧ್ಯಾಪಕರು, "ಹಾಗೆಲ್ಲ ಏನಿರಲ್ಲ, ಬೇಜಾರು ಮಾಡ್ಕೋಬೇಡ. ಮುಂದೆ ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಪ್ರಯತ್ನಿಸು," ಎಂದು ಸಂತೈಸಿದ್ದರು. ಅದೇ ಕಂಪನಿಗೆ ಮತ್ತಷ್ಟು ಎಂಜಿನಿಯರ್‌ಗಳ ಅಗತ್ಯವಿದೆ ಎಂದು ಆ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ತಿಳಿಸಿದಾಗ, "ನಿಮ್ಮಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಧರ್ಮವನ್ನೂ ಮಾನದಂಡವಾಗಿ ಪರಿಗಣಿಸುತ್ತೀರಾ?" ಎಂದು ಆ ಅಧ್ಯಾಪಕರು ವಿಚಾರಿಸಿದರು. ಅದಕ್ಕೆ "ಹೌದು..." ಎನ್ನುವ ಉತ್ತರ ಬಂತು. "ಮುಸ್ಲಿಮರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದು ಎನ್ನುವುದು ನಮ್ಮ ಕಂಪನಿಯ ನಿಯಮ. ಹೀಗಾಗಿ, ಮುಸ್ಲಿಂ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡರೂ ಅವರನ್ನು ಆಯ್ಕೆಗೆ ಪರಿಗಣಿಸುತ್ತಿಲ್ಲ," ಎಂದು ತಿಳಿಸಿದರು.

ಬಹುರಾಷ್ಟ್ರೀಯ ಕಂಪನಿಯೊಂದು ಉದ್ಯೋಗಿಗಳ ಆಯ್ಕೆ ವೇಳೆ ಧರ್ಮವನ್ನೂ ಮಾನದಂಡವಾಗಿ ಪರಿಗಣಿಸಬಹುದು ಎಂದು ಭಾವಿಸಿರದಿದ್ದ ಅಧ್ಯಾಪಕರು, ಇದೀಗ ಆ ಸಂಸ್ಥೆಯಲ್ಲಿನ ಉದ್ಯೋಗ ಸಂದರ್ಶನಕ್ಕೆ ಒಂದು ಧರ್ಮದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರನ್ನು ಮಾತ್ರ ಕಳಿಸಿಕೊಡುತ್ತಿದ್ದಾರೆ.

Image

‘ಅನ್ಯ'ರನ್ನು ಗುರುತಿಸಿ, ಅವರ ಕುರಿತು ಅಪನಂಬಿಕೆ ಮೂಡಿಸುವ ಕಾರ್ಯತಂತ್ರ ರೂಪಿಸಿ, ಒಂದು ಸಮುದಾಯವನ್ನು ವ್ಯವಸ್ಥಿತವಾಗಿ ಹೊರಗಿನವರಾಗಿ ನೋಡುವ ಮತ್ತು ಸಾಧ್ಯವಿರುವಲ್ಲಿ ಹೊರಗಿಡುವ ಕಾರ್ಯಸೂಚಿ ಚಾಲ್ತಿಯಲ್ಲಿರುವುದು ಕೇವಲ ರಾಜಕೀಯದಲ್ಲಷ್ಟೇ ಅಲ್ಲ ಎಂಬುದಕ್ಕೆ ಇಂತಹ ನಿದರ್ಶನಗಳು ಕನ್ನಡಿ ಹಿಡಿಯಲಿವೆ.

ಎರಡು ವರ್ಷದ ಹಿಂದೆ ಎಂಜಿನಿಯರಿಂಗ್ ಪದವಿಯ ಮೊದಲ ಎರಡು ಸೆಮಿಸ್ಟರ್‌ಗಳಲ್ಲಿ ಉತ್ತಮ ಫಲಿತಾಂಶ ಪಡೆದಿದ್ದ ವಿದ್ಯಾರ್ಥಿಯೊಬ್ಬ ಮೂರನೇ ಸೆಮಿಸ್ಟರ್‌ನಲ್ಲಿ ಆರು ವಿಷಯಗಳ ಪೈಕಿ ನಾಲ್ಕರಲ್ಲಿ ಫೇಲ್ ಆಗಿದ್ದ. ಆತನನ್ನು ಕರೆದು, "ಯಾಕೋ... ಏನಾಯ್ತೋ ನಿನಗೆ?" ಅಂತ ವಿಚಾರಿಸಿದೆ. ಸಾಮಾನ್ಯವಾಗಿ ಚೆನ್ನಾಗಿ ಓದುವ ವಿದ್ಯಾರ್ಥಿಗಳು ಹೀಗೆ ಇದ್ದಕ್ಕಿದ್ದಂತೆ ಫೇಲ್ ಆಗಲು ಕಾರಣವಾಗುವ - ಓದಿನಲ್ಲಿ ನಿರಾಸಕ್ತಿ ಮೂಡುವುದು ಅಥವಾ ಆರೋಗ್ಯ ಸಮಸ್ಯೆಯ ಪೈಕಿ ಯಾವುದೋ ಒಂದು ಅಂಶ ಕಾರಣವಾಗಿರಬಹುದು ಎಂದೇ ಭಾವಿಸಿದ್ದೆ. ಆದರೆ, ಆತ ತಾನು ಫೇಲ್ ಆಗಲು ರಾಜಕೀಯ ವಿದ್ಯಮಾನಗಳು ಕಾರಣ ಎಂದ. ಇಂತಹದೊಂದು ಉತ್ತರದ ನಿರೀಕ್ಷೆಯಲ್ಲಿರದ ನನಗೆ ಅಚ್ಚರಿಯಾಗಿತ್ತು. ನನ್ನೊಳಗೆ ಮೂಡಿದ ‘ಏಕೆ ಹೀಗೆ ಹೇಳ್ತಿದ್ದಾನೆ?' ಎಂಬ ಪ್ರಶ್ನೆಗೆ ಅವನ ಹೆಸರಿನ ಮೂಲಕವೇ ತಿಳಿದುಕೊಳ್ಳಬಹುದಾಗಿದ್ದ ಧರ್ಮವೇ ಉತ್ತರ ಹೇಳುತ್ತಿತ್ತು.

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಪ್ರೀತಿ, ಸಹನೆ ನಮ್ಮ ಆರ್ಥಿಕತೆಯ ಬುನಾದಿ ಆಗದಿದ್ದರೆ ಮುಂದಿನ ಹಾದಿ ಕಠಿಣ

ಕಳೆದ ಕೆಲ ವರ್ಷಗಳಲ್ಲಿ ನಮ್ಮ ನಡುವೆ ಎದ್ದುನಿಂತಿರುವ ಧಾರ್ಮಿಕ ವೈಷಮ್ಯದ ಗೋಡೆಗಳು ಓದುವ ವಿದ್ಯಾರ್ಥಿಗಳನ್ನೂ ಹೇಗೆಲ್ಲ ಬಾಧಿಸತೊಡಗಿವೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿ ಗೋಚರಿಸಿತು. "ಇನ್ನು ಮುಂದೆ ಇಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮೊದಲಿನ ಹಾಗೆ ಓದು. ಕೆಲ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ," ಎಂದು ಸಂತೈಸಲು ಮುಂದಾದ ನನ್ನ ಮಾತಿಗೆ ತಡೆ ಒಡ್ಡಿದ ಆ ಹುಡುಗ, "ಸರ್, ಕಾಲೇಜಿನಲ್ಲಿ ನನ್ನೊಂದಿಗೆ ಆತ್ಮೀಯವಾಗಿಯೇ ಇರುವ ಸ್ನೇಹಿತರ ವಾಟ್ಸಾಪ್-ಫೇಸ್ಬುಕ್ ಪ್ರೊಫೈಲ್ ನೋಡಿದ್ರೆ ನನಗೆ ತುಂಬಾ ಬೇಜಾರಾಗುತ್ತೆ. ಅವರೆಲ್ಲ ನಮ್ಮ ಧರ್ಮದವರ ಮೇಲೆ ಅದೆಷ್ಟು ದ್ವೇಷ ಕಾರುತ್ತಾರೆ ಮತ್ತು ಬೆನ್ನ ಹಿಂದೆ ಹೇಗೆಲ್ಲ ಮಾತಾಡ್ತಾರೆ ಅನ್ನೋದು ನಿಮಗೂ ಗೊತ್ತಿದೆ. ಇಂಥದ್ದನ್ನೆಲ್ಲ ಸಹಿಸಿಕೊಂಡು ನನ್ನ ಪಾಡಿಗೆ ನಾನಿರಲು ಸಾಧ್ಯವಾಗುತ್ತಲೇ ಇಲ್ಲ," ಎಂದು ಅಳಲು ತೋಡಿಕೊಂಡ.

ಇಂತಹ ಧರ್ಮ ದ್ವೇಷದ ಸ್ಟೇಟಸ್ಸು, ಫಾರ್ವರ್ಡ್‍ಗಳಲ್ಲಿ ಮುಳುಗಿರುವ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಮೂಹದ ನಡುವೆಯೇ ನಾನೂ ಇರುವುದರಿಂದ, ಇದೆಲ್ಲ ಸದ್ಯಕ್ಕಂತೂ ಬದಲಾಗುವ ಯಾವುದೇ ಭರವಸೆ ಇರದಿದ್ದರೂ, ಕೋಮುವಾದದ ನಂಜು ಬಿತ್ತುವವರ ನಡುವೆಯೂ ಮಾನವೀಯತೆ ಉಳಿಸಿಕೊಂಡಿರುವ ಜನರ ಉದಾಹರಣೆ ನೀಡಿ, ಎಲ್ಲವೂ ಸರಿಹೋಗಲಿದೆ ಎನ್ನುವ ಆಶಾಭಾವ ಹೊಂದುವಂತೆ ಸಲಹೆ ನೀಡಿದೆ.

Image
ಸಾಂದರ್ಭಿಕ ಚಿತ್ರ

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ 303 ಸಂಸದರ ಪೈಕಿ ಒಬ್ಬರೂ ಮುಸ್ಲಿಮರಿಲ್ಲದಿರುವುದು ಈಗಾಗಲೇ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಈ ಮೂಲಕ ಆ ಪಕ್ಷ ಯಾವ ಸಂದೇಶ ರವಾನಿಸಲು ಹೊರಟಿದೆ ಎಂಬುದು ಕೂಡ ಸ್ಪಷ್ಟವಾಗಿದೆ. ಆದರೆ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೂಡ ಹೀಗೆ ನಿರ್ದಿಷ್ಟ ಧರ್ಮದವರನ್ನು ಹೊರಗಿಡುವ ತಾರತಮ್ಯದ ಧೋರಣೆ ಜಾರಿಯಲ್ಲಿರುವುದು ನಮ್ಮನ್ನು ಚಿಂತೆಗೆ ಈಡುಮಾಡಬೇಕಲ್ಲವೇ? ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೆ ತರುವ ಅಗತ್ಯವಿದೆ ಎಂಬ ಕೂಗು ಎದ್ದಾಗ, "ಅಲ್ಲೇನಿದ್ದರೂ ಪ್ರತಿಭೆಗೆ ಮನ್ನಣೆ ನೀಡಲಾಗುತ್ತಿದೆ," ಎಂಬ ಸಿದ್ಧ ಉತ್ತರ ನೀಡುವವರು, ಅದನ್ನು ಪುಷ್ಟೀಕರಿಸುವ ಪುರಾವೆ ಒದಗಿಸಲು ಸಿದ್ಧರಿದ್ದಾರೆಯೇ? ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಸಾವಿರಾರು ಉದ್ಯೋಗಿಗಳಿರುವ ಖಾಸಗಿ ಸಂಸ್ಥೆಗಳಲ್ಲಿ ನಿರ್ದಿಷ್ಟ ಜಾತಿ, ಧರ್ಮಕ್ಕೆ ಸೇರಿದವರನ್ನು ಬಹಿಷ್ಕರಿಸುವ ಧೋರಣೆ ಅಸ್ತಿತ್ವದಲ್ಲಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿಲ್ಲವೇ? ಜಾತಿ, ಧರ್ಮ ಮತ್ತು ಲಿಂಗದ ಆಧಾರದಲ್ಲಿ ತಾರತಮ್ಯ ಎಸಗದೆ, ಎಲ್ಲರಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಇಚ್ಛಾಶಕ್ತಿ ಇರುವ ಸಂಸ್ಥೆಗಳು, ತಮ್ಮಲ್ಲಿ ಕೆಲಸ ಮಾಡುತ್ತಿರುವ ನೌಕರರ ಸಾಮಾಜಿಕ ಹಿನ್ನೆಲೆಯ ಕುರಿತು ಅಂಕಿ-ಅಂಶಗಳನ್ನು ಒದಗಿಸಲು ಮುಂದಾಗಬಾರದೇಕೆ? ಭಿನ್ನ ಹಿನ್ನೆಲೆಯ ಜನರು ಒಂದುಗೂಡಿ ಕೆಲಸ ನಿರ್ವಹಿಸುವ ಸೌಹಾರ್ದಯುತ ವಾತಾವರಣ ನಿರ್ಮಿಸುವುದು ಕೂಡ ಬಹುರಾಷ್ಟ್ರೀಯ ಕಂಪನಿಗಳ ಆದ್ಯತೆಯಾಗಬೇಕಲ್ಲವೇ? ತಮ್ಮ ಉದ್ಯಮದ ಹಿತವನ್ನು ಗಣನೆಗೆ ತೆಗೆದುಕೊಂಡು ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುವ ಉದ್ದಿಮೆ ಸಂಸ್ಥೆಗಳಿಗೆ, ಆಯಾ ನೆಲದ ವೈವಿಧ್ಯತೆಯನ್ನು ಗೌರವಿಸಿ, ಅದಕ್ಕನುಗುಣವಾಗಿ ನಡೆದುಕೊಳ್ಳುವುದು ಕೂಡ ಸಾಧ್ಯವಾಗಬೇಕಲ್ಲವೇ?

ತಮ್ಮ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವುದನ್ನು ಮನಗಂಡಿರುವ ಕೆಲ ಬಹುರಾಷ್ಟ್ರೀಯ ಕಂಪನಿಗಳು, ಕಳೆದ ಕೆಲ ವರ್ಷಗಳಿಂದ ಮಹಿಳಾ ಅಭ್ಯರ್ಥಿಗಳನ್ನು ಆದ್ಯತೆಯ ಮೇರೆಗೆ ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗುತ್ತಿವೆ. ಇದರ ಮುಂದುವರಿದ ಭಾಗವಾಗಿ, ತಮ್ಮ ಮಾನವ ಸಂಪನ್ಮೂಲ ಜಾತಿ-ಧರ್ಮಾಧಾರಿತ ವೈವಿಧ್ಯತೆಯನ್ನು ಒಳಗೊಂಡಿದೆಯೇ ಎಂದು ಪರಿಶೀಲಿಸಲು ಮುಂದಾಗಬೇಕಲ್ಲವೇ? ಒಂದು ವೇಳೆ ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಸೇರಿದವರನ್ನು ಒಳಗೊಳ್ಳಲು ಸಾಧ್ಯವಾಗಿರದಿದ್ದರೆ, ಏಕೆಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೇ?

ಈ ಲೇಖನ ಓದಿದ್ದೀರಾ?: ಅರ್ಥ ಪಥ | ಢಾಕಾದ ಖಾದರ್ ಮಿಯಾ ಮತ್ತು ದೆಹಲಿಯ ಹಿಂದು ವ್ಯಾಪಾರಿ

ಕೋಮುದ್ವೇಷದಿಂದ ಜರುಗುವ ಗಲಭೆಗಳಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಲೆಕ್ಕ ನಮಗೆ ಸಿಗಬಹುದಾದರೂ, ಅದು ಎಷ್ಟು ಮಂದಿಯನ್ನು ಮಾನಸಿಕ ಯಾತನೆಗೆ ದೂಡಿದೆ ಎಂಬ ಲೆಕ್ಕಾಚಾರದ ಕುರಿತು ಆಳುವವರಿಗೆ ಮತ್ತು ನಮಗೆ ಅಷ್ಟೇನು ಕಾಳಜಿ ಇದ್ದಂತಿಲ್ಲ. ರಾಜಕೀಯ ಲಾಭಕ್ಕಾಗಿ ಪಕ್ಷವೊಂದು ಬಿತ್ತುತ್ತ ಹೋಗುತ್ತಿರುವ ಧಾರ್ಮಿಕ ಅಸಹಿಷ್ಣತೆಯ ನಂಜು ಸೃಷ್ಟಿಸುತ್ತಿರುವ ಬಿಕ್ಕಟ್ಟು ಕೇವಲ ಕೋಮು ದಳ್ಳುರಿಗಳಲ್ಲಷ್ಟೇ ಹೊರಹೊಮ್ಮುತ್ತಿಲ್ಲ. ನಮ್ಮ ದೈನಂದಿನ ಬದುಕಿಗೂ ಅದು ವ್ಯಾಪಿಸಿದೆ. ಸಾಮರಸ್ಯವನ್ನು ಬಲಿ ಕೊಟ್ಟಾದರೂ ಸರಿ, ಸಾಮ್ರಾಜ್ಯ ವಿಸ್ತರಣೆಯನ್ನು ಮುಂದುವರಿಸಿಯೇ ತೀರುತ್ತೇವೆ ಎಂಬ ತೀರಾ ಅಪಾಯಕಾರಿಯಾದ ಧೋರಣೆ ಹೊಂದಿರುವ ರಾಜಕೀಯ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳುವ ಸ್ಥಿತಿಯಲ್ಲಂತೂ ಇಲ್ಲ. ಆದರೆ, ಜನಸಾಮಾನ್ಯರಾದ ನಾವು ಆಳುವವರ ಆದ್ಯತೆ ಯಾವುದಾಗಿರಬೇಕು ಎಂಬುದನ್ನು ನಿರ್ದೇಶಿಸದೆ, ಅವರು ಬಿತ್ತುತ್ತಿರುವ ದ್ವೇಷದ ನಂಜು ಹರಡಲು ನೆರವಾಗುವುದರಲ್ಲೇ ಸಾರ್ಥಕತೆ ಕಂಡುಕೊಳ್ಳಲು ಮುಂದಾದರೆ, ಸಮಾಜದ ಅಧಃಪತನದ ಹೊಣೆಯನ್ನು ನಾವೇ ಹೊರಬೇಕಾಗುವುದು.

"ಮೀಸಲಾತಿಯಿಂದ ಪ್ರತಿಭೆಗೆ ಮನ್ನಣೆ ದೊರೆಯುತ್ತಿಲ್ಲ, ಹಿಂದೇನೋ ಜಾತಿ ತಾರತಮ್ಯವಿತ್ತು. ಈಗ ಎಲ್ಲ ಕ್ಷೇತ್ರಗಳಲ್ಲೂ ಎಲ್ಲರಿಗೂ ಸಮಾನ ಅವಕಾಶಗಳು ಲಭ್ಯ ಇವೆ. ಮೀಸಲಾತಿಯನ್ನು ಇಂದಿಗೂ ಏಕೆ ಮುಂದುವರಿಸಬೇಕು?" ಎಂದು ಪ್ರಶ್ನಿಸುವವರು ಆತ್ಮಾವಲೋಕನ ಮಾಡಿಕೊಳ್ಳಲು ‘ಪ್ರಾತಿನಿಧ್ಯ ವಂಚಿತರು ಯಾರು?' ಎಂಬ ಪ್ರಶ್ನೆಗೆ ಉತ್ತರ ಅರಸುವ ಪ್ರಯತ್ನ ಮಾಡಬೇಕಿದೆ. ತಾವು ಓದುತ್ತಿರುವ, ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಜಾತಿ, ಧರ್ಮ ಮತ್ತು ಲಿಂಗದವರಿಗೂ ಪ್ರಾತಿನಿಧ್ಯ ದೊರೆತಿದೆಯೇ ಎಂಬುದನ್ನು ತೆರೆದ ಮನಸ್ಸಿನಿಂದ ಒಮ್ಮೆ ಪರಿಶೀಲಿಸಿದರೆ ಬಹುಶಃ ವಾಸ್ತವಾಂಶ ಮನದಟ್ಟಾಗಬಹುದು. ಖಾಸಗಿ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಪ್ರಾತಿನಿಧ್ಯ ದೊರೆತಿದೆ ಎಂಬುದನ್ನು ಪರಿಶೀಲಿಸುವ ಗೋಜಿಗೆ ಸರ್ಕಾರ ಹೋಗಬಾರದೆ? ಇಂತಹದೊಂದು ಪರಿಶೀಲನೆಯ ಗೈರುಹಾಜರಿಯಲ್ಲಿ ವಾಸ್ತವಾಂಶ ಅರಿಯುವುದಾದರೂ ಹೇಗೆ? ತಮ್ಮ ಮೇಲೆ ಸಾಮಾಜಿಕ ಹೊಣೆಗಾರಿಕೆ ಇದೆ ಎಂದು ಭಾವಿಸುವ ಮತ್ತು ಬಿಂಬಿಸಿಕೊಳ್ಳುವ ಖಾಸಗಿ ಸಂಸ್ಥೆಗಳು, ತಮ್ಮ ಸಂಸ್ಥೆಯ ಮಾನವ ಸಂಪನ್ಮೂಲ ಹೇಗೆ ಒಟ್ಟಾರೆ ಸಮಾಜವನ್ನು ಪ್ರತಿನಿಧಿಸಲಿದೆ ಎಂಬುದನ್ನೂ ತೆರೆದಿಡಲಿ.

Image
2022ರ ಪಶ್ಚಿಮ ಬಂಗಾಳ ಗಲಭೆ

ಸ್ವವಿವೇಚನೆಯಿಂದ ಎಲ್ಲ ಹಿನ್ನೆಲೆಯವರಿಗೂ ಅವಕಾಶ ಕಲ್ಪಿಸುವ ಮನೋಭಾವ ಖಾಸಗಿ ಉದ್ಯಮ ವಲಯದಲ್ಲಿ ಮೈಗೂಡದೆ ಇದ್ದಾಗ ಸರ್ಕಾರ ಮಧ್ಯಪ್ರವೇಶ ಮಾಡಬಾರದೇ? ರಾಜಕೀಯ ಲಾಭವನ್ನಷ್ಟೇ ಪರಿಗಣನೆಗೆ ತೆಗೆದುಕೊಂಡು ಧರ್ಮದ ಆಧಾರದಲ್ಲಿ ಜನರನ್ನು ಒಡೆಯಲು ಇನ್ನಿಲ್ಲದ ಉತ್ಸಾಹ ತೋರುತ್ತಿರುವ ಆಳುವವರು - ಸ್ವತಃ ತಾವು ಪಾಲಿಸುತ್ತಿರುವ ಅನ್ಯರನ್ನು ಗುರುತಿಸಿ ಹೊರಗಿಡುವ ನೀತಿಯನ್ನೇ ಬಹುರಾಷ್ಟ್ರೀಯ ಸಂಸ್ಥೆಗಳು ಪಾಲಿಸಲು ಮುಂದಾದರೆ, ಅಂತಹ ಸಂಸ್ಥೆಗಳಿಗೆ ವಿಶೇಷ ಮನ್ನಣೆ ನೀಡಿದರೂ ಅಚ್ಚರಿಪಡುವಂತಿಲ್ಲ.

ಸರ್ಕಾರದ ನೀತಿ ನಿಲುವುಗಳಲ್ಲೇ ತಾರತಮ್ಯ ಧೋರಣೆ ಎದ್ದುಕಾಣುತ್ತಿರುವ ಹೊತ್ತಿನಲ್ಲಿ, ಖಾಸಗಿ ವಲಯದಲ್ಲೂ ಚಾಲ್ತಿಯಲ್ಲಿರುವ ಹೊರಗಿಡುವಿಕೆಯ ಕಾರ್ಯಸೂಚಿಗೆ ತಡೆಯೊಡ್ಡುವವರು ಯಾರು? ತಮ್ಮದೇನೂ ತಪ್ಪಿರದಿದ್ದರೂ ಧರ್ಮದ ಕಾರಣಕ್ಕಾಗಿ ಅವಕಾಶವಂಚಿತರಾಗುವ ಯುವ ಮನಸ್ಸುಗಳಲ್ಲಿ ಈ ಸಮಾಜದ ಕುರಿತು ಎಂತಹ ಅಭಿಪ್ರಾಯ ಮೂಡಬಹುದು? ದ್ವೇಷದ ನಂಜು ಬಿತ್ತಿ ಉತ್ತಮ ಸಮಾಜ ರೂಪಿಸಿದ ನಿದರ್ಶನ ಎಲ್ಲಾದರೂ ಉಂಟೇ? ಆದರೂ ನಾವ್ಯಾಕೆ ದ್ವೇಷ ಬಿತ್ತುವವರ ಆರಾಧನೆಯಲ್ಲಿ ಮುಳುಗಿದ್ದೇವೆ?

ಮುಖ್ಯ ಚಿತ್ರ - ಸಾಂದರ್ಭಿಕ
ನಿಮಗೆ ಏನು ಅನ್ನಿಸ್ತು?
2 ವೋಟ್